ಹಿಂದಣ ಹೆಜ್ಜೆ / ಮುತ್ತುಲಕ್ಷ್ಮಿ- ಹತ್ತುಹಲವು ಸಾಧನೆಗಳ ದಿಟ್ಟಮಹಿಳೆ

ವೈದ್ಯಕೀಯ ರಂಗ, ಹೆಣ್ಣುಮಕ್ಕಳ ಶಿಕ್ಷಣ, ದೇವದಾಸಿ ಪದ್ಧತಿ ನಿರ್ಮೂಲನೆ, ಮಹಿಳಾ ಆರೋಗ್ಯ, ರಾಜಕೀಯ ಹಕ್ಕುಗಳ ಹೋರಾಟ – ಹೀಗೆ ಅನೇಕ ಕ್ಷೇತ್ರಗಳಲ್ಲಿ ಅವಿಶ್ರಾಂತವಾಗಿ ದುಡಿದ ಈ ಸಾಮಾಜಿಕ ಚಿಂತಕಿಯ ಶ್ರಮ, ಅಂದಿನ ಹಿನ್ನೆಲೆಯಲ್ಲಿ ಅತ್ಯಂತ ವಿಸ್ಮಯದ ಸಾಧನೆಯಾಗಿ ಗೌರವ ಪಡೆಯುತ್ತದೆ.

ಭಾರತೀಯ ಮಹಿಳಾ ಚಳವಳಿಯ ಇತಿಹಾಸದಲ್ಲಿ ಡಾ. ಮುತ್ತುಲಕ್ಷ್ಮಿ ರೆಡ್ಡಿ ಎಂಬ ಹೆಸರು ಮುತ್ತಿನಂತಹ ಅಕ್ಷರಗಳಲ್ಲಿ ಎದ್ದು ಕಾಣುತ್ತದೆ. ಮೊನ್ನೆ ಅವರ 133 ನೇ ಜನ್ಮದಿನಕ್ಕೆ ಗೂಗಲ್ ಡೂಡಲ್ ಅವರಿಗೆ ಸೂಕ್ತ ನಮನ ಸಲ್ಲಿಸಿತು. ಮಹಿಳೆಗೂ ಮರ್ಯಾದೆ ಇದೆ, ಅದನ್ನು ಕಾಪಾಡುವುದು ಸಮಾಜದ ಕರ್ತವ್ಯ ಎಂಬ ದಿಟ್ಟ ಸಂದೇಶವನ್ನು ಸಾರಿದ ಅವರು ನಮ್ಮ ದೇಶದ ಸಮಾಜ ಸುಧಾರಣಾ ಚಳವಳಿಯಲ್ಲಿ ಹಲವು ಪ್ರಥಮಗಳ ಸಾಧಕಿಯಾಗಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ. “ಮಹಿಳೆಯರ ಹಿತಾಸಕ್ತಿಗಳನ್ನು ಮಹಿಳೆಯರು ಮಾತ್ರ ರಕ್ಷಿಸಬಲ್ಲರು” ಎಂದು ನಂಬಿದ್ದ ಆ ಧೈರ್ಯವಂತೆ ಅನೇಕ ಹೋರಾಟಗಳನ್ನು ರೂಪಿಸಿದ ಸಾಮಾಜಿಕ- ರಾಜಕೀಯ ಚಿಂತಕಿ.

ಮುತ್ತುಲಕ್ಷ್ಮಿ (30 ಜುಲೈ 1886 – 22 ಜುಲೈ 1968) ಮದ್ರಾಸ್ ಮೆಡಿಕಲ್ ಕಾಲೇಜಿನಿಂದ 1912ರಲ್ಲಿ ವೈದ್ಯಕೀಯ ಪದವಿ ಪಡೆದಾಗ ಭಾರತದಲ್ಲಿ ಮಹಿಳೆಯೊಬ್ಬಳು ವೈದ್ಯಕೀಯ ಶಿಕ್ಷಣ ಪಡೆಯುವುದು ಕನಸಿನ ಮಾತೇ ಆಗಿತ್ತು. ಹುಡುಗಿ ಶಾಲೆ ಮುಗಿಸಿ, ಕಾಲೇಜಿಗೆ ಪ್ರವೇಶ ಪಡೆಯಲು ನೆರವಾದದ್ದು ಅಂದಿನ ತಮಿಳುನಾಡಿನ ಪುದುಕೋಟೈ ಸಂಸ್ಥಾನದ ರಾಜ ಮಾರ್ತಾಂಡ ಭೈರವ ತೊಂಡಮಾನ್. ಮುಂದೆ ಹುಡುಗರೇ ತುಂಬಿದ್ದ ವೈದ್ಯಕೀಯ ಕಾಲೇಜು ಸೇರಿದ ಮೊದಲ ಹುಡುಗಿಯಾಗಿ ಅವರು ತಮ್ಮ ಪ್ರತಿಭೆಯಿಂದ ಗಮನ ಸೆಳೆದರು. ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಮಹಿಳಾ ಹೌಸ್ ಸರ್ಜನ್ ಆದರು. ಮುಂದೆ 1927ರಲ್ಲಿ ಮದ್ರಾಸ್ ಲೆಜಿಸ್ಲೇಟಿವ್ ಕೌನ್ಸಿಲ್‍ಗೆ ನೇಮಕಗೊಂಡ ಅವರು ಭಾರತದ ಪ್ರಪ್ರಥಮ ಶಾಸಕಿಯಾದರು. ಅಲ್ಲಿ ಪ್ರಥಮ ಉಪಾಧ್ಯಕ್ಷೆಯಾಗಿಯೂ ಚುನಾಯಿತರಾದರು. ಹೀಗೆ ಅವರ ಜೀವನ ಅನೇಕ ಪ್ರಥಮಗಳ ಕಥನವೇ ಆಗಿದೆ.

ಮಹಿಳಾ ಸಮಾನತೆಗೆ ಹೋರಾಡಿದ ಡಾ. ಮುತ್ತುಲಕ್ಷ್ಮಿ, ಮಹಿಳೆಯರಿಗಾಗಿ ಆಸ್ಪತ್ರೆಗಳನ್ನು, ಅನಾಥ ಮಹಿಳೆಯರಿಗೆ ಆಶ್ರಯತಾಣಗಳನ್ನು ಆರಂಭಿಸಿದರು. ಹೆಣ್ಣುಮಕ್ಕಳನ್ನು ವೇಶ್ಯಾವೃತ್ತಿಗೆ ದೂಡುವುದರ ಮತ್ತು ದೇವದಾಸಿ ಪದ್ಧತಿಯ ವಿರುದ್ಧ ಅವರು ನಡೆಸಿದ ಹೋರಾಟ ಚಾರಿತ್ರಿಕವಾದದ್ದು. “ಆತ್ಮಗೌರವ ಇರುವ ಯಾವ ಪ್ರಜ್ಞಾವಂತ ಮಹಿಳೆಯೂ ನಮ್ಮನ್ನು ಕೆಳಮಟ್ಟಕ್ಕೆ ತಳ್ಳಿರುವ ಈ ರೀತಿಯ ಏಕಪಕ್ಷೀಯ ಕಾನೂನುಗಳನ್ನು ಸಹಿಸಬಾರದು” ಎಂದು ಹೇಳುತ್ತಿದ್ದ ಅವರು ಅಂಥ ಕಾನೂನುಗಳನ್ನು ಬದಲಿಸಲು ಶ್ರಮಿಸಿದರು.

ದೇವಾಲಯಗಳಿಗೆ ಮಹಿಳೆಯರನ್ನು ಮೀಸಲಿಡುವ ದೇವದಾಸಿ ಪದ್ಧತಿಯ ವಿರುದ್ಧ ಡಾ. ಮುತ್ತುಲಕ್ಷ್ಮಿ ಅವರ ಹೋರಾಟ ಅಪ್ರತಿಮವಾದದ್ದು. ಅವರ ತಂದೆ ನಾರಾಯಣಸ್ವಾಮಿ ಅಯ್ಯರ್, ಅಂದಿನ ತಮಿಳುನಾಡಿನ ಸಣ್ಣಪಟ್ಟಣವಾದ ಪುದುಕೋಟ್ಟೈನಲ್ಲಿ ಮಹಾರಾಜ ಕಾಲೇಜಿನ ಪ್ರಿನ್ಸಿಪಾಲರಾಗಿದ್ದವರು. ದೇವದಾಸಿ ಕುಟುಂಬದ ಚಂದ್ರಮ್ಮಾಳ್ ಅವರನ್ನು ಮದುವೆಯಾಗಿದ್ದಕ್ಕೆ ಸಮುದಾಯದಿಂದ ಬಹಿಷ್ಕøತರಾಗಿದ್ದ ಅವರು ಅದಕ್ಕೆ ಹೆದರದೆ ತಮ್ಮ ವಿಚಾರಗಳಂತೆ ನಡೆಯುತ್ತಿದ್ದರು. ಮಗಳು ಮುತ್ತುಲಕ್ಷ್ಮಿ ದಿಟ್ಟ ಹೆಣ್ಣಾಗಿ ಬೆಳೆಯಲು ಅವರು ಕೊಟ್ಟ ಪ್ರೋತ್ಸಾಹ ಅಂದಿನ ಕಾಲಕ್ಕೆ ಅಪರೂಪವೆನಿಸಿತ್ತು. ಇದರಿಂದ ವೈದ್ಯಕೀಯ ವೃತ್ತಿ, ಸಮಾಜ ಸುಧಾರಣಾ ಚಳವಳಿ ಮತ್ತು ರಾಜಕಾರಣ ಇವೆಲ್ಲದರಲ್ಲಿ ಮುತ್ತುಲಕ್ಷ್ಮಿ ಕ್ರಿಯಾಶೀಲರಾಗಲು ಬೇಕಾದ ಆತ್ಮವಿಶ್ವಾಸ ದೊರೆಯಿತು. ಇಂಗ್ಲೆಂಡ್‍ನಲ್ಲಿ ಉನ್ನತ ಶಿಕ್ಷಣ ಪಡೆಯುವ ಅಪರೂಪದ ಅವಕಾಶವೂ ಇದರಿಂದ ಲಭ್ಯವಾಯಿತು.

ವೈದ್ಯರಾಗಿದ್ದ ಡಾ. ಸುಂದರ ರೆಡ್ಡಿ ಅವರನ್ನು 1914 ರಲ್ಲಿ ಮದುವೆಯಾದಾಗ ಡಾ. ಮುತ್ತುಲಕ್ಷ್ಮಿ ಕೆಲವು ಷರತ್ತುಗಳನ್ನೇ ಮುಂದಿಟ್ಟಿದ್ದರು. ತನ್ನನ್ನು ಸಮಾನವಾಗಿ ಕಾಣಬೇಕು, ಎಂದೂ ತನ್ನ ಆಸೆಆಕಾಂಕ್ಷೆಗಳಿಗೆ ಅಡ್ಡಬರಬಾರದು ಎಂದು ಮೊದಲೇ ಹೇಳಿದ್ದರು.

ವೈದ್ಯೆಯಾಗಿ ಡಾ. ಮುತ್ತುಲಕ್ಷ್ಮಿ, ಹೆಣ್ಣುಮಕ್ಕಳ ಆರೋಗ್ಯ ಕುರಿತ ಸಾಮಾಜಿಕ ನಂಬಿಕೆಗಳನ್ನೂ ಪ್ರಶ್ನಿಸಿ, ಅವುಗಳನ್ನು ಸರಿಪಡಿಸಲು ಶ್ರಮಿಸಿದರು. ಅಂದಿನ ಕಾಲದಲ್ಲಿ ಶ್ರೀಮಂತ ಕುಟುಂಬಗಳ ಮಹಿಳೆಗೆ ಮಗು ಹುಟ್ಟಿದಾಗ, ಅವಳು ಅದಕ್ಕೆ ಎದೆಹಾಲು ಕುಡಿಸುವಂತಿರಲಿಲ್ಲ. ಅವಳು ತನ್ನ ಮೈಕಟ್ಟು ಕಾಪಾಡಿಕೊಳ್ಳುವುದು ಮುಖ್ಯ ಎನಿಸುತ್ತಿತ್ತು. ಆದ್ದರಿಂದ ಮಗುವಿಗೆ ಹಾಲೂಡಿಸಲು ದಲಿತ ಬಾಣಂತಿಯನ್ನು ನೇಮಿಸಲಾಗುತ್ತಿತ್ತು. ಮಗುವನ್ನು ನೋಡಿಕೊಳ್ಳಲು ದಾಸಿಯರು ಇರುತ್ತಿದ್ದರು. ಇದನ್ನು ಗಮನಿಸಿದ್ದ ಡಾ. ಮುತ್ತುಲಕ್ಷ್ಮಿ, ತಾಯಿ ತನ್ನ ಮಗುವಿಗೆ ಹಾಲೂಡುವುದು ಮತ್ತು ಮಗುವಿಗೆ ಅವಳೇ ಆರೈಕೆ ಮಾಡುವುದು ಎಷ್ಟು ಮುಖ್ಯ ಎಂಬ ಬಗ್ಗೆ ಜಾಗೃತಿ ಮೂಡಿಸಲು ಬಹಳ ಶ್ರಮಪಡಬೇಕಾಯಿತು.

ಆಗ ಮಹಿಳಾ ಹಕ್ಕುಗಳನ್ನು ಪ್ರತಿಪಾದಿಸುತ್ತಿದ್ದ ಆನ್ನಿ ಬೆಸೆಂಟ್, ಮಾರ್ಗರೆಟ್ ಕಸಿನ್ಸ್, ಜೀನರಾಜ ದಾಸ ಮೊದಲಾದವರ ಜೊತೆಗೂಡಿದ ಡಾ. ಮುತ್ತುಲಕ್ಷ್ಮಿ 1917 ರಲ್ಲಿ ಸ್ಥಾಪನೆಯಾದ “ವಿಮೆನ್ಸ್ ಇಂಡಿಯನ್ ಅಸೋಸಿಯೇಷನ್”ನಲ್ಲಿ ಸಕ್ರಿಯ ಪಾತ್ರ ವಹಿಸಿದರು. ಅಷ್ಟೇ ಅಲ್ಲದೆ, ಸಂಸ್ಥೆ ಪ್ರಕಟಿಸುತ್ತಿದ್ದ “ಸ್ತ್ರೀಧಮ್” ಎಂಬ ಪತ್ರಿಕೆಯಲ್ಲಿ ಹೆಣ್ಣುಮಕ್ಕಳ ಸ್ಥಿತಿಗತಿ, ಸುಧಾರಣೆ ಕುರಿತು ಹಲವಾರು ಲೇಖನಗಳನ್ನು ಬರೆದರೆನ್ನುವುದೂ ಬಹಳ ಮುಖ್ಯ.

ಬ್ರಿಟಿಷರ ಕಾಲದಲ್ಲಿ ರೂಪುಗೊಂಡ ಮದ್ರಾಸ್ ಪ್ರಾದೇಶಿಕ ಶಾಸನ ಸಭೆಯು 1921 ರಲ್ಲೇ ಮಹಿಳೆಯರಿಗೆ ಮತದಾನದ ಹಕ್ಕನ್ನು ಕೊಟ್ಟಿತ್ತು. ಬಾಂಬೆ ಶಾಸನ ಸಭೆಯಲ್ಲಿ ಅದರ ವಿಚಾರದಲ್ಲಿ ಮೂರು ದಿನಗಳ ಕಾಲ ಚರ್ಚೆ ನಡೆದಿದ್ದರೆ, ಮದ್ರಾಸ್ ಶಾಸನ ಸಭೆಯಲ್ಲಿ ಕೇವಲ ಒಂದೂವರೆ ಗಂಟೆಯ ಚರ್ಚೆ ನಂತರ ಮತದಾನದ ಹಕ್ಕು ಕೊಡುವುದು ನಿರ್ಧಾರವಾಗಿಬಿಟ್ಟಿತ್ತು. ಇಂಥ ಶಾಸನ ಸಭೆಗೆ 1926 ರಲ್ಲಿ ಜನಪ್ರಿಯ ವೈದ್ಯೆಯಾಗಿದ್ದ ಡಾ. ಮುತ್ತುಲಕ್ಷ್ಮಿ ಅವರನ್ನು ಸದಸ್ಯರನ್ನಾಗಿ ನಾಮಕರಣ ಮಾಡಿದಾಗ, “ಭಾರತದ ಪ್ರಪ್ರಥಮ ಶಾಸಕಿ” ಯಾಗುವ ವೈಶಿಷ್ಟ್ಯ ಅವರದಾಯಿತು. ಅಲ್ಲಿಂದಾಚೆಗೆ ಸುಧಾರಣಾ ಕಾರ್ಯಗಳಿಗೆ ಅವರ ರಾಜಕೀಯ ಅವಕಾಶ ಸದ್ಬಳಕೆಯಾಯಿತು. ಮಹಿಳೆಯರಿಗೆ ಮತದಾನದ ಹಕ್ಕು ಇರಬೇಕು ಎನ್ನುವ ಚಳವಳಿಯಲ್ಲಿ ಡಾ. ಮುತ್ತುಲಕ್ಷ್ಮಿ ಅವರ ಪಾತ್ರ ಬಹಳ ಗಮನಾರ್ಹವಾದದ್ದು.

ಶಾಸನ ಸಭೆಯಲ್ಲಿ ಬಹಳ ಒಳ್ಳೆಯ ವಾಗ್ಮಿಯಾಗಿದ್ದ ಡಾ. ಮುತ್ತುಲಕ್ಷ್ಮಿ, 1927 ರಲ್ಲಿ ದೇವದಾಸಿ ಪದ್ಧತಿಯನ್ನು ನಿಲ್ಲಿಸುವ ಸಲಹೆಯನ್ನು ಸಭೆಯ ಮುಂದಿಟ್ಟರು. ಮುಂದೆ ದೇವದಾಸಿಯರ ಸ್ಥಿತಿಗತಿಗಳನ್ನು ಸುಧಾರಿಸುವ ಸಲಹೆಗಳ ತಿದ್ದುಪಡಿ ಮಸೂದೆಯನ್ನು ಮಂಡಿಸಿದರು. 1929 ರಲ್ಲಿ ದೇವದಾಸಿಯರನ್ನು ದೇವಾಲಯಗಳ ದಾಸ್ಯದಿಂದ ಬಿಡುಗಡೆ ಮಾಡಿ ಅವರಿಗೆ ಜಮೀನು ಮತ್ತಿತರ ಸೌಲಭ್ಯಗಳನ್ನು ನೀಡುವ ಮಸೂದೆಗೆ ಅಂಗೀಕಾರ ದೊರೆಯಿತು.

ಮಹಿಳೆಯರಿಗೆ ಸಾಮಾಜಿಕ ಸ್ವಾತಂತ್ರ್ಯ ದೊರೆಯಬೇಕಾದರೆ ಶಿಕ್ಷಣವೇ ಅದಕ್ಕೆ ಅಡಿಗಲ್ಲು ಎಂದು ನಂಬಿದ್ದ ಡಾ. ಮುತ್ತುಲಕ್ಷ್ಮಿ ಬಾಲಕಿಯರ ಶಾಲಾಶಿಕ್ಷಣ ಮತ್ತು ಮುಂದುವರೆದ ಶಿಕ್ಷಣಗಳ ಅವಕಾಶಕ್ಕೆ ಒತ್ತುಕೊಟ್ಟರು. ಅಷ್ಟೇ ಅಲ್ಲದೆ, ಅನಾಥ ಮಹಿಳೆಯರಿಗೆ ಆಶ್ರಯತಾಣ ಆರಂಭಿಸಿದ್ದು, ಮುಸ್ಲಿಮ್ ಬಾಲಕಿಯರು ಓದುವಂತಾಗಲು ಹಾಸ್ಟೆಲ್ ತೆರೆದದ್ದು, ದಲಿತ ಬಾಲಕಿಯರಿಗೆ ಓದಲು ಸ್ಕಾಲರ್‍ಶಿಪ್ ಕೊಟ್ಟದ್ದು ಇವೆಲ್ಲವೂ ಅವರ ವಿಶಾಲ ಮತ್ತು ದೂರದೃಷ್ಟಿಗೆ ಸಾಕ್ಷಿಯಾಗಿದ್ದವು.

ಡಾ. ಮುತ್ತುಲಕ್ಷ್ಮಿ ಅವರ ಸಾಮಾಜಿಕ ಚಟುವಟಿಕೆಗಳ ವಿಸ್ತಾರ ಬೆರಗು ಹುಟ್ಟಿಸುತ್ತದೆ. ಎಲ್ಲವನ್ನೂ ಅವರು ಒಬ್ಬ ಕಾರ್ಯನಿರತ ವ್ಯೆದ್ಯೆಯಾಗಿ ಹೇಗೆ ನಿಭಾಯಿಸಿದರು ಎಂಬುದು ಅವರ ಗಟ್ಟಿತನವನ್ನು ತೋರಿಸುತ್ತದೆ. 1930 ರಲ್ಲಿ ಲಂಡನ್‍ನಲ್ಲಿ ನಡೆದ ಮೂರನೇ ಮಹಿಳಾ ದುಂಡುಮೇಜಿನ ಪರಿಷತ್ತು ಮತ್ತು 1932ರಲ್ಲಿ ಚಿಕಾಗೋನಲ್ಲಿ ನಡೆದ ವಿಶ್ವ ಮಹಿಳಾ ಕಾಂಗ್ರೆಸ್‍ನಲ್ಲೂ ಅವರು ಭಾಗವಹಿಸಿದ್ದರು. ಭಾರತದಲ್ಲಿ ಶಿಕ್ಷಣ ಕುರಿತ ಸರ್ವೇಕ್ಷಣೆಯಲ್ಲಿ ಅವರು ಪಾಲ್ಗೊಂಡು, ಇಡೀ ದೇಶವನ್ನು ಸುತ್ತಿ ಹೆಣ್ಣುಮಕ್ಕಳ ಶಿಕ್ಷಣದ ಅಗತ್ಯದ ವಿವರಗಳನ್ನು ಸಂಗ್ರಹಿಸಿ ಸರ್ ಫಿಲಿಪ್ ಹರ್‍ಟಾಗ್ ಸಮಿತಿಯ ಸದಸ್ಯೆಯಾಗಿ ಮನವರಿಕೆ ಮಾಡಿಕೊಟ್ಟರು.

ಸಮಾನತೆಯ ಸದಾಶಯದಿಂದ ಕಾಲದ ಕಟ್ಟಳೆಗಳನ್ನು ಮೀರಿ ಮಹಿಳೆಯ ಹಕ್ಕುಗಳಿಗೆ ಹೋರಾಡಿದ ಡಾ. ಮುತ್ತುಲಕ್ಷ್ಮಿ ಅವರನ್ನು ದೇಶವಿಡೀ ಗೌರವಿಸುತ್ತಿತ್ತು. 1947 ರಲ್ಲಿ ಸ್ವಾತಂತ್ರ್ಯ ಬಂದಾಗ, ಕೆಂಪುಕೋಟೆಯ ಮೇಲೆ ಸ್ಫೂರ್ತಿದಾಯಕ. (ಈ ಲೇಖನಕ್ಕೆ ವಿವರ ಸಂಗ್ರಹ ವಿವಿಧ ಮೂಲಗಳಿಂದ ಆಗಿದೆ.)

-ಹಿತೈಷಿಣಿ ಬಳಗ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *