ಹಿಂದಣ ಹೆಜ್ಜೆ / ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಕಾಮಿನಿ ರಾಯ್ -ತಿರು ಶ್ರೀಧರ

ಮಹಿಳೆಯರಿಗೆ ವಿದ್ಯಾಭ್ಯಾಸ ಮತ್ತು ಮತದಾನದ ಹಕ್ಕು ನೀಡಬೇಕೆಂದು ಕಾಮಿನಿ ರಾಯ್ ಹೋರಾಡಿದರು. ಅವರು ಗೆಳತಿಯರೊಂದಿಗೆ ಸ್ಥಾಪಿಸಿದ ನಾರೀ ಸಮಾಜದ ಹೋರಾಟದ ಫಲವಾಗಿ 1926 ರಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ಪ್ರಾಪ್ತವಾಯಿತು. ಒಳ್ಳೆಯ ಲೇಖಕಿಯೂ ಆಗಿದ್ದ ಅವರು ತಮ್ಮ ಸಾಹಿತ್ಯದಲ್ಲಿ ಹೊಸ ದೃಷ್ಟಿಕೋನದಿಂದ ಮಹಿಳೆಯರನ್ನು ಬಿಂಬಿಸಿದ್ದಾರೆ. ಅವರ 155 ನೇ ಜನ್ಮದಿನದಂದು ಗೂಗಲ್ ಡೂಡಲ್ ಗೌರವ ನೀಡಿದೆ.

ಮಹಿಳಾ ಸ್ವಾತಂತ್ರ್ಯ ಎಂಬುದು ಊಹಿಸಲೂ ಕಷ್ಟವಿದ್ದ ಕಾಲದಲ್ಲಿ ಹೋರಾಟಗಾರ್ತಿ ಕಾಮಿನಿ ರಾಯ್ ಮಹಿಳಾ ಕೂಗನ್ನು ದಾಖಲಿಸಿದ್ದರು. “ಮಹಿಳೆಗೆ ವಿದ್ಯಾಭ್ಯಾಸ ಎಂಬುದು ತನ್ನ ಪರಿಪೂರ್ಣತೆಯನ್ನು ಕಂಡುಕೊಂಡು ಸಮಗ್ರ ಅಭಿವೃದ್ಧಿಯನ್ನು ಸಾಧಿಸಲು ಪೂರಕ” ಎಂಬ ನಿಲುವನ್ನು ಅವರು ಹೊಂದಿದ್ದರು. “ಮಹಿಳೆಯನ್ನು ಕೇವಲ ಮನೆಗೆ ಮಾತ್ರ ಯಾಕೆ ಸೀಮಿತಗೊಳಿಸಬೇಕು? ಸಮಾಜದಲ್ಲಿ ಆಕೆಯ ಸ್ಥಾನವನ್ನು ಕಸಿದುಕೊಂಡದ್ದಾದರೂ ಏಕೆ?” ಎಂದು 1924ರಲ್ಲಿ ಕಾಮಿನಿ ರಾಯ್ ಅವರು ಸಾರ್ವಜನಿಕವಾಗಿ ಬಿತ್ತಿದ ಮಾತುಗಳು ಮರೆಯಲಾರದಂತದ್ದು.

ಕಾಮಿನಿ ರಾಯ್ ಅವರು 1864 ವರ್ಷದ ಅಕ್ಟೊಬರ್ 12ರಂದು ಜನಿಸಿದರು. ಬ್ರಿಟಿಷ್ ಭಾರತದಲ್ಲಿ ಬಂಗಾಳ ಪ್ರಾಂತ್ಯದಲ್ಲಿದ್ದ ಇಂದಿನ ಬಾಂಗ್ಲಾ ದೇಶಕ್ಕೆ ಸೇರಿಹೋದ ಬಕೇರ್‌ಗಂಜ್ ಜಿಲ್ಲೆಯ ಬಸಾಂದ ಎಂಬುದು ಇವರ ಊರು. ಇವರ ಸಹೋದರ ಕೋಲ್ಕತ್ತಾದ ಮೇಯರ್ ಆಗಿದ್ದರು. ಸಹೋದರಿ ನೇಪಾಳ ರಾಜವಂಶಸ್ಥರ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದರು. ಕಾಮಿನಿ ಅವರ ತಂದೆ ಚಂಡಿ ಚರಣ್ ಸೇನ್ ನ್ಯಾಯಾಧೀಶರಾಗಿದ್ದರಲ್ಲದೆ ಬರಹಗಾರರೂ ಆಗಿದ್ದರು. ಈ ಸುಶಿಕ್ಷಿತ ವಾತಾವರಣದಲ್ಲಿ ಬೆಳೆದ ಕಾಮಿನಿ ಚಿಕ್ಕಂದಿನಿಂದಲೇ ಓದಿನಲ್ಲಿ ಒಲವು ಕಂಡುಕೊಂಡರು. ಬ್ರಿಟಿಷ್ ಆಡಳಿತದಲ್ಲಿ ಶಾಲೆಗೆ ದಾಖಲಾದ ಪ್ರಥಮ ಹೆಣ್ಣುಮಕ್ಕಳಲ್ಲಿ ಒಬ್ಬರಾದ ಕಾಮಿನಿ ಅವರು 1883 ವರ್ಷದಲ್ಲಿ ಬೆಥೂನ್ ಕಾಲೇಜಿಗೆ ದಾಖಲಾದರು. 1886ರಲ್ಲಿ ಬೆಥೂನ್ ಕಾಲೇಜಿನಲ್ಲಿ ಸಂಸ್ಕೃತದಲ್ಲಿ ಪದವಿ ಪಡೆದು ಅದೇ ವರ್ಷ ಅಲ್ಲಿ ಶಿಕ್ಷಕಿಯಾಗಿಯೂ ಆಗಿ ಕಾರ್ಯ ನಿರ್ವಹಿಸಲು ಆರಂಭಿಸಿದರು. ದೇಶದಲ್ಲಿ ಆನರ್ಸ್ ಪದವಿ ಪಡೆದ ಪ್ರಥಮ ಇಬ್ಬರು ಮಹಿಳೆಯರಲ್ಲಿ ಒಬ್ಬರಾದ ಕಾದಂಬಿನಿ ಗಂಗೂಲಿ ಅವರು ಇದಕ್ಕೆ ಮೂರು ವರ್ಷದ ಹಿಂದೆ ಇದೇ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದರು. 1894 ವರ್ಷದಲ್ಲಿ ಕಾಮಿನಿ ಅವರು ಕೇದಾರನಾಥ ರಾಯ್ ಅವರನ್ನು ವಿವಾಹವಾದರು.

ಕಾಮಿನಿ ಅವರಿಗೆ ಮಹಿಳಾ ಜಾಗೃತಿಯ ಕುರಿತಾಗಿ ಅವರ ಸಹಪಾಠಿಯಾಗಿದ್ದ ಅಬಲಾ ಬೋಸ್ ಪ್ರೇರಕರಾದರು. ಜ್ಞಾನವೃಕ್ಷದ ಫಲ ಎಂಬ ವಿಚಾರದಲ್ಲಿ ಬೆಂಗಾಲಿಯಲ್ಲಿ ಬರೆದ ಅವರ ಪ್ರಬಂಧದ ಧ್ವನಿ ಇಂತಿದೆ: “ಮಹಿಳೆಯ ಪೂರ್ಣತೆಯ ಗಳಿಕೆಯ ಹಾದಿಯಲ್ಲಿ, ಪುರುಷನೇ ಅಡ್ಡಗಾಲು ಎಂದು ಪೂರ್ಣ ಹೇಳಲಾಗದಿದ್ದರೂ, ಆತನ ಆಳ್ವಿಕೆಯ ಆಶಯವಂತೂ ಇದಕ್ಕೆ ಪ್ರಮಖ ಕಾರಣ ಎಂದು ಹೇಳಲೇಬೇಕು. ಪುರುಷನಿಗೆ ಸ್ತ್ರೀಯು ಪೂರ್ಣ ಸ್ವತಂತ್ರಳಾಗಿ ಮೇರೆ ಮೀರಿಬಿಡುತ್ತಾಳೆ ಎಂಬ ಸಂದೇಹವಾದರೂ ಏಕೋ? ಅದೇ ಹಳೆಯ ಹೆದರಿಕೆ, ‘ನಮ್ಮಂತೆಯೇ ಮಹಿಳೆಯರೂ ಮೇಲೇರದಿರಲಿ’ ಎಂಬ ಕ್ಷುದ್ರತೆ”.

1921 ವರ್ಷದಲ್ಲಿ ಕಾಮಿನಿ ರಾಯ್ ಅವರು ಕುಮುದಿನಿ ಮಿತ್ರ ಬಸು ಮತ್ತು ಮೃಣಾಲಿನಿ ಸೆನ್ ಅವರೊಂದಿಗೆ ‘ಬಂಗೀಯ ನಾರೀ ಸಮಾಜ್’ ಎಂಬ ಸ್ತ್ರೀಪರ ಸಮಾಜವನ್ನು ಹುಟ್ಟುಹಾಕಿದರು. ಮಹಿಳೆಯರಿಗೂ ಮತದಾನದ ಹಕ್ಕು ನೀಡಬೇಕು ಎಂದು ಈ ಸಂಘಟನೆ ಹೋರಾಟ ನಡೆಸಿ ಯಶಸ್ಸು ಸಾಧಿಸಿತು. ಹೀಗಾಗಿ 1926 ವರ್ಷದಲ್ಲಿ ಮೊಟ್ಟ ಮೊದಲಬಾರಿಗೆ ಮಹಿಳೆಯರಿಗೆ ಚುನಾವಣೆಗಳಲ್ಲಿ ಮತದಾನ ಚಲಾಯಿಸುವ ಹಕ್ಕು ಪ್ರಾಪ್ತವಾಯಿತು. 1922-23 ವರ್ಷದಲ್ಲಿ ಕಾಮಿನಿ ರಾಯ್ ಅವರು ಫೀಮೇಲ್ ಲೇಬರ್ ಇನ್ವೆಸ್ಟಿಗೇಷನ್ ಕಮಿಶನ್ ಸದಸ್ಯೆ ಆಗಿದ್ದರು.

ಕಾಮಿನಿ ರಾಯ್ ಸಾಹಿತ್ಯದ ಮೂಲಕವೂ ಗಮನ ಸೆಳೆದಿದ್ದರು. 1889 ವರ್ಷದಲ್ಲಿ ಅವರು ಪ್ರಕಟಿಸಿದ “ಅಲೊ ಛಾಯಾ” ಎಂಬ ಸಂಕಲನ ಸಾಹಿತ್ಯವಲಯದಲ್ಲಿ ಚಳುವಳಿಯನ್ನೇ ಎಬ್ಬಿಸಿತಲ್ಲದೆ, ಒಬ್ಬ ಮಹಿಳೆ ತನ್ನ ಸ್ವಯಂಪರಿಪೂರ್ಣತೆ ಗಳಿಕೆಯ ನಿಟ್ಟಿನಲ್ಲಿ ಕಂಡುಕೊಂಡ ಹಲವಾರು ಸೂಕ್ಷ್ಮ ಸಂವೇದನೆಗಳನ್ನು ಅಭಿವ್ಯಕ್ತಿಸಿತ್ತು. ಸುಮಾರು 5 ದಶಕಗಳ ಕಾಲ ಕಾಮಿನಿ ರಾಯ್ ಅವರು ತಮ್ಮ ಲೇಖನಿಯಿಂದ ವಿವಿಧ ರೀತಿಯಲ್ಲಿ ಮಹಿಳೆಯರನ್ನು ಸ್ವಾವಲಂಬನೆ ಮತ್ತು ಸಾಧನೆಗಳ ಕಡೆಗೆ ಪ್ರೇರೇಪಿಸಿದರು. ಅನೇಕ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ನೀರೆರೆದರು. 1923 ವರ್ಷದಲ್ಲಿ ಬರಿಸಾಲ್ಗೆ ಭೇಟಿ ನೀಡಿದ ಅವರು ಮುಂದೆ ಮಹಾನ್ ಪ್ರತಿಭೆಯಾಗಿ ರೂಪುಗೊಂಡ ಸುಫಿಯಾ ಕಮಲ್ ಎಂಬ ಬಾಲಕಿಯ ಬೆನ್ನುತಟ್ಟಿ ಬರವಣಿಗೆಯನ್ನು ಮುಂದುವರೆಸಲು ಪ್ರೋತ್ಸಾಹಿಸಿದರು. 1930 ವರ್ಷದಲ್ಲಿ ಅವರು ಬೆಂಗಾಲಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. 1932-1933 ಅವಧಿಯಲ್ಲಿ ಬೆಂಗಾಲಿ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿದ್ದರು.

ಕಾಮಿನಿ ರಾಯ್ ಅವರು ಸಂಸ್ಕೃತ ಸಾಹಿತ್ಯ ಮತ್ತು ರವೀಂದ್ರನಾಥ ಠಾಕೂರರ ಸಾಹಿತ್ಯಗಳಿಂದ ಪ್ರಭಾವಿತರಾಗಿದ್ದರು. ಕಲ್ಕತ್ತಾ ವಿಶ್ವವಿದ್ಯಾಲಯವು ಅವರನ್ನು ಜಗತ್ತಾರಿಣಿ ಚಿನ್ನದ ಪದಕ ನೀಡಿ ಗೌರವಿಸಿತ್ತು.

ಮಹಾಶ್ವೇತ, ಪುಂಡೋರಿಕ್, ಪೌರಾಣಿಕ್, ದ್ವಿಪ್ ಓ ಧೂಪ್, ಜಿಬೋನ್ ಪತೇಯ್, ನಿರ್ಮಲ್ಯ, ಮಾಲ್ಯ ಓ ನಿರ್ಮಲ್ಯ, ಅಶೋಕ್ ಸಂಗೀತ್, ಗುನ್ಜನ್ (ಮಕ್ಕಳ ಸಾಹಿತ್ಯ), ಬಾಲಿಕಾ ಸಿಖ್ಖರ್ ಆದರ್ಶ ಪ್ರಬಂಧಗಳು ಮುಂತಾದವು ಕಾಮಿನಿ ರಾಯ್ ಅವರ ಇನ್ನಿತರ ಪ್ರಮುಖ ಕೃತಿಗಳು.

ಕಾಮಿನಿ ರಾಯ್ ಅವರು 1933 ವರ್ಷದ ಸೆಪ್ಟೆಂಬರ್ 27ರಂದು ಈ ಲೋಕವನ್ನು ಅಗಲಿದರು. ಈ ಮಹಾನ್ ಚೇತನಕ್ಕೆ ನಮನಗಳು. ಕಾಮಿನಿ ರಾಯ್ ಅವರ 155 ನೇ ಜನ್ಮದಿನದಂದು ಗೂಗಲ್ ಅವರಿಗೆ ಡೂಡಲ್ ಗೌರವ ನೀಡಿದೆ. (ಸೌಜನ್ಯ: ಫೇಸ್ ಬುಕ್ ಕನ್ನಡ ಸಂಪದ ಮತ್ತು ಸಲ್ಲಾಪ.ಕಾಂ)


– ತಿರು ಶ್ರೀಧರ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *