ಹಿಂದಣ ಹೆಜ್ಜೆ/ `ಮಹಾತಾಯಿ’ಗೆ ಶತಮಾನದ ನಮನ – ಎನ್.ಎಸ್.ಶ್ರೀಧರ ಮೂರ್ತಿ


ಅಧಿಕೃತವಾಗಿ ಕನ್ನಡದ ಮೊದಲ ನಿರ್ಮಾಪಕಿ ಮತ್ತು ಅನಧಿಕೃತವಾಗಿ ಕನ್ನಡದ ಮೊದಲ ನಿರ್ದೇಶಕಿ ಆಗಿರುವ ಪ್ರತಿಭಾನ್ವಿತ ಅಭಿನೇತ್ರಿ ಎಂ.ವಿ. ರಾಜಮ್ಮ ಅವರು ದಕ್ಷಿಣಭಾರತದ ಚಿತ್ರರಂಗದಲ್ಲಿ ಹಲವು ಪ್ರಯೋಗಗಳನ್ನು ಮಾಡಿದ್ದಾರೆ. ಬೆಳ್ಳಿತೆರೆಯ ಮೇಲೆ ಅಮ್ಮನ ಪಾತ್ರಕ್ಕೆ ಮತ್ತೊಂದು ಹೆಸರಾಗಿದ್ದ ಅವರು, ನಿಜ ಜೀವನದಲ್ಲೂ ಅನೇಕ ಕಲಾವಿದರನ್ನು ಗುರುತಿಸಿ ಬೆಳೆಸಿದ್ದಾರೆ. ಬೆಂಗಳೂರಿನ ಕಂಠೀರವ ಸ್ಟುಡಿಯೋ ನಿರ್ಮಾಣದಲ್ಲಿ ಅವರ ಕೊಡುಗೆಯೂ ಇದೆ. ರಾಜಮ್ಮ ಅವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಅವರ ಸಾಧನೆ, ಸಾಹಸಗಳನ್ನು ಚಿತ್ರರಂಗ ಅಗತ್ಯವಾಗಿ ಸ್ಮರಿಸಿಕೊಳ್ಳಬೇಕು.

ಕೆಲವರು ಕಲಾವಿದರಾಗಿ ಬಹಳ ದೊಡ್ಡ ಸಾಧನೆ ಮಾಡಿದವರು ಇರುತ್ತಾರೆ. ಆದರೆ ವಾಸ್ತವದಲ್ಲಿ ಅದಕ್ಕೆ ಬಹುಪಾಲು ದೂರ ಇರುತ್ತಾರೆ. ಆದರೆ ಬೆಳ್ಳಿತೆರೆಯ ಮೇಲೆ ಹೇಗಿದ್ದರೂ ನಿಜ ಜೀವನದಲ್ಲಿಯೂ ಹಾಗೆಯೇ ಮಹಾತಾಯಿ' ಆಗಿ ಇದ್ದವರು ಎಂ.ವಿ.ರಾಜಮ್ಮ. ಅವರ ಬದುಕೇನು ಸುಖದ ಸುಪ್ಪತ್ತಿಗೆ ಆಗಿರಲಿಲ್ಲ. ನಡೆದದ್ದು ಕಲ್ಲು ಮುಳ್ಳುಗಳ ಹಾದಿಯಲ್ಲೇ. ಆದರೆ ಅದರಲ್ಲಿಯೇ ಅವರು ಮೇರು ಸಾಧನೆ ಮಾಡಿ ಅವಿಸ್ಮರಣೀಯರು ಎನ್ನಿಸಿಕೊಂಡರು. ಈ ವರ್ಷ ಆ ಮಹಾತಾಯಿಯ ಶತಮಾನೋತ್ಸವ.

ಎಂ.ವಿ. ರಾಜಮ್ಮ ಅವರು ಜನಿಸಿದ್ದು ಬೆಂಗಳೂರು ಜಿಲ್ಲೆ ಅಗ್ಗೊಂಡನ ಹಳ್ಳಿಯಲ್ಲಿ, ಅವರ ಜನ್ಮ ದಿನಾಂಕ 10 ಮಾರ್ಚ್ 1921. ಅಂದರೆ ಇತ್ತೀಚೆಗೆ ತಾನೆ ಅವರ ನೂರನೇ ಜನ್ಮ ದಿನೋತ್ಸವ ಆಗಿದೆ. ಜಮೀನ್ದರ ಕುಟುಂಬದ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದ ನಂಜಪ್ಪ ಅವರ ತಂದೆ, ತಾಯಿ ಸುಬ್ಬಮ್ಮನವರು. ರಾಜಮ್ಮ ಚಿಕ್ಕವರಾಗಿದ್ದಾಗಿಂದಲೇ ಅತಿ ಸುಂದರಿ ಅನ್ನಿಸಿ ಕೊಂಡಿದ್ದರು. ಇದರ ಜೊತೆಗೆ ಕಂಠ ಕೂಡ ಚೆನ್ನಾಗಿತ್ತು. ಇದರಿಂದ ಅವರು ಓದುತ್ತಿದ್ದ ಬೆಂಗಳೂರಿನ ಆರ್ಯ ಬಾಲಿಕಾ ಶಾಲೆಯಲ್ಲಿ ಮೆಚ್ಚಿನ ಹುಡುಗಿಯಾದರು. ಅಲ್ಲಿ ನಾಟಕಗಳಲ್ಲಿ ನಟಿಸಲು ಶುರು ಮಾಡಿದರು. ಅದರಲ್ಲಿಯೂ ಕೃಷ್ಣನ ಪಾತ್ರಕ್ಕೆ ಸಾಕಷ್ಟು ಪ್ರಸಿದ್ಧರಾಗಿದ್ದರು.

ಇವರ ನಟನೆ ಚಾತುರ್ಯ ಮತ್ತು ಟೈಮಿಂಗ್ ಬಗ್ಗೆ ತಿಳಿದು ಕೊಂಡಿದ್ದ ಆ ಕಾಲದ ಬಹಳ ದೊಡ್ಡ ರಂಗಕಲಾವಿದರಾಗಿದ್ದ ಮಹಮದ್ ಪೀರ್ ತಮ್ಮ ‘ಚಂದ್ರಕಲಾ ನಾಟಕ ಮಂಡಳಿ’ ಸೇರುವಂತೆ ಕೇಳಿದರು. ರಾಜಮ್ಮನವರಿಗೂ ಆಸಕ್ತಿ ಇದ್ದಿದ್ದರಿಂದ ಸೇರಿ ಕೊಂಡೇ ಬಿಟ್ಟರು. ‘ಸಂಸಾರ ನೌಕ’ ‘ಗೌತಮ ಬುದ್ಧ’ ನಾಟಕಗಳಲ್ಲಿ ಅಭಿನಯಿಸಿ ಸಾಕಷ್ಟು ಹೆಸರು ಮಾಡಿದರು. ಪರಮ ಸುಂದರಿಯಾಗಿದ್ದ ರಾಜಮ್ಮನವರನ್ನು ಹಲವು ಆಸೆಗಣ್ಣುಗಳು ನೋಡುತ್ತಿದ್ದವು. ಆ ಕಾಲದಲ್ಲಿ ಹುಡುಗಿಯರ ಮದುವೆಗಳು ಬೇಗನೆ ಆಗುತ್ತಿದ್ದವು. ಇದರಿಂದ ಹಿರಿಯರು ತಮ್ಮ ಜವಾಬ್ದಾರಿ ಮುಗಿಯಿತು ಎಂದು ಕೊಳ್ಳುತ್ತಿದ್ದ ಕಾಲ ಅದು. ಹದಿನಾಲ್ಕು ವರ್ಷದ ರಾಜಮ್ಮನವರ ಮದುವೆಯನ್ನು ಪೀರ್ ಅವರ ಕಂಪನಿಯಲ್ಲಿಯೇ ಕೆಲಸ ಮಾಡುತ್ತಿದ್ದ ಮೈಸೂರು ಚನ್ನವೀರಪ್ಪನವರ ಜೊತೆ ನಡೆಸಲು ಕೆಲವು ಹಿರಿಯರು ಸೂಚಿಸಿದರು. ಇಬ್ಬರ ಮನೆಯ ಹಿರಿಯರೂ ಒಪ್ಪಿದರು. 1935ರ ಮೇ 19ರಂದು ಅವರ ಮದುವೆ ಬೆಂಗಳೂರಿನಲ್ಲಿ ನಡೆಯಿತು.

ಆದರೆ ಈ ಮದುವೆ ಬಾಳಿದ್ದು ಆರು ತಿಂಗಳು ಮಾತ್ರ. ಏಕೆಂದರೆ ರಾಜಮ್ಮನವರಿಗೆ ದಕ್ಷಿಣ ಭಾರತದ ಮೊದಲ ಸಾಂಸಾರಿಕ ಚಿತ್ರ ‘ಸಂಸಾರ ನೌಕ’ದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತು. ಇದು ಗಂಡನ ಮನೆಯವರಿಗೆ ಇಷ್ಟವಾಗಲಿಲ್ಲ. ವಿರಸ ತೀವ್ರವಾದಾಗ ರಾಜಮ್ಮ ಕಲಾ ಬದುಕನ್ನೇ ಆಯ್ಕೆ ಮಾಡಿ ಕೊಂಡರು. ಸಂಸಾರವನ್ನು ತೊರೆದು ಮದ್ರಾಸಿಗೆ ಹೊರಟು, ಮದುವೆ ಮುರಿದುಕೊಂಡರೂ ರಾಜಮ್ಮ ತಮ್ಮ ಇನ್ಷಿಯಲ್ಸ್ ನಲ್ಲಿ ಇದ್ದ ಗಂಡನ ಹೆಸರನ್ನು ಕೊನೆಯವರೆಗೂ ಬದಲಾಯಿಸಲಿಲ್ಲ. ರಾಜಮ್ಮ ಪತಿಯ ಮನೆಯವರಿಗೆ ನೆರವಾದರು. ಅವರಿಗೆ ಇರಲು ಮನೆ ಕಟ್ಟಿಸಿ ಕೊಟ್ಟರು. ಆ ಪತಿಯೋ ಒಂದಲ್ಲ ಎರಡಲ್ಲ ಮೂರು ವಿವಾಹವಾದರು. ಮೂರನೆಯ ಮಡದಿಗೆ ಮಕ್ಕಳಾದರು. ರಾಜಮ್ಮನವರು ಆ ಮಕ್ಕಳ ವಿದ್ಯಾಭ್ಯಾಸಕ್ಕೂ ಕೂಡ ನೆರವಾದರು. ಆ ಮಕ್ಕಳಲ್ಲಿ ಒಬ್ಬ ಮುಂದೆ ತಾನೇ ರಾಜಮ್ಮನವರ ಆಸ್ತಿಗೆ ವಾರಸುದಾರ ಎಂದು ಕೋರ್ಟ್ ಮೆಟ್ಟಿಲು ಹತ್ತಿದ. ಹೀಗಿದ್ದರೂ ರಾಜಮ್ಮನವರು ದ್ವೇಷ ಸಾಧಿಸಿದೆ ಎಲ್ಲರಿಗೂ ಸಮನಾಗಿ ಬರುವಂತೆ ತಮ್ಮ ಆಸ್ತಿಯನ್ನು ಹಂಚಿದರು.

‘ಸಂಸಾರ ನೌಕ’ ಸಿನಿಮಾದಲ್ಲಿ ಮೊದಲು ರಾಜಮ್ಮನವರನ್ನು ಚಿಕ್ಕದಾದ ಗಿರಿಜೆಯ ಪಾತ್ರಕ್ಕೆ ಆಯ್ಕೆ ಮಾಡಿದ್ದರು. ಅವರ ಅಭಿನಯ ಮತ್ತು ಡೈಲಾಗ್ ಡೆಲಿವರಿ ಕ್ರಮ ನೋಡಿ ನಾಯಕಿ ಸರಳೆಯ ಪಾರ್ಟ್ ಮಾಡ್ತೀಯಾ ಎಂದು ಡೈರೆಕ್ಟರ್ ಎಚ್.ಎಲ್.ಎನ್. ಸಿಂಹ ಕೇಳಿದರು. ‘ಪುರುಷ ಪಾತ್ರವನ್ನೇ ಲೀಲಾಜಾಲವಾಗಿ ಅಭಿನಯಿಸೋ ನನಗೆ ಇದು ಯಾವ ಲೆಕ್ಕ’ ಎಂದು ರಾಜಮ್ಮನವರು ಒಪ್ಪಿ ಕೊಂಡರು. ಈ ಚಿತ್ರದ ಮೂಲಕ ಅವರು ಸಾಕಷ್ಟು ಪ್ರಸಿದ್ಧರಾದರು. ಈ ಸಿನಿಮಾ ಮೂಲಕವೇ ಅವರಿಗೆ ಬಿ.ಆರ್. ಪಂತುಲು ಅವರ ಸ್ನೇಹವಾಯಿತು. ಇದು ಮುಂದೆ ಇನ್ನಷ್ಟು ನಿಕಟವಾಗಿ ‘ಪದ್ಮಿನಿ ಪಿಕ್ಚರ್ಸ್’ ಎನ್ನುವ ಪ್ರಮುಖ ಚಿತ್ರ ನಿರ್ಮಾಣದ ಸಂಸ್ಥೆಯ ಹುಟ್ಟಿಗೆ ಕಾರಣವಾಯಿತು. ‘ಸಂಸಾರ ನೌಕ’ದ ನಂತರ ರಾಜಮ್ಮನವರು ತಮಿಳಿನ ‘ಭಕ್ತ ಪ್ರಹ್ಲಾದ’ ಸಿನಿಮಾದ ಕಯಾದು ಪಾತ್ರದ ಅಭಿನಯಕ್ಕೆ ಎಲ್ಲರ ಮೆಚ್ಚುಗೆ ಪಡೆದರು. ಆ ಕಾಲದಲ್ಲಿ ಪಿ.ಯು. ಚಿನ್ನಪ್ಪ ಅನ್ನುವವರು ಗಾಯಕ ಮತ್ತು ನಾಯಕ ನಟರೂ ಆಗಿದ್ದರು. ಅವರ ಜೊತೆ ರಾಜಮ್ಮನವರ ಜೋಡಿ, ತಮಿಳಿನಲ್ಲಿ ಸಾಕಷ್ಟು ಫೇಮಸ್ ಆಯಿತು. ಯಯಾತಿ, ಉತ್ತಮ ಪುತ್ರನ್, ಅರ್ಧನಾರಿ ಮೊದಲಾದ ಸಿನಿಮಾಗಳು ಸಾಕಷ್ಟು ಹೆಸರು ಮಾಡಿದವು. ಇನ್ನೊಬ್ಬ ಗಾಯಕ-ನಾಯಕ ಟಿ.ಆರ್. ಮಹಾಲಿಂಗಂ ಅವರ ಜೊತೆಗಿನ ಜ್ಞಾನ ಸುಂದರಿ, ರತ್ನಪುರಿ ಇಳವರಸಿ ಮೊದಲಾದ ಸಿನಿಮಾಗಳೂ ಕೂಡ ಹೆಸರು ತಂದು ಕೊಟ್ಟವು. ಇದರ ಜೊತೆಗೆ ರಾಜಮ್ಮನವರ ಬಾಲ್ಯಕಾಲದ ರೋಲ್ ಮಾಡಲ್ ವೇಮೂರಿ ಗಗ್ಗಯ್ಯ ಅವರ ಜೊತೆಗೆ ‘ಕೃಷ್ಣ ಜರಾಸಂಧ’ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಹೀಗೆ ರಾಜಮ್ಮನವರು ತಮಿಳು ಮತ್ತು ತೆಲುಗು ಸಿನಿಮಾದ ಆ ಕಾಲದಫೇಮಸ್ ಸ್ಟಾರ್’ ಎನ್ನಿಸಿಕೊಂಡುಬಿಟ್ಟರು.

ಹೀಗೆ ತಮಿಳು ಮತ್ತು ತೆಲುಗು ಸಿನಿಮಾದಲ್ಲಿ ಖ್ಯಾತಿ ಪಡೆದರೂ ತಮ್ಮ ಮಾತೃಭಾಷೆ ಕನ್ನಡದಲ್ಲಿ ಸಿನಿಮಾ ಮಾಡಬೇಕು ಅನ್ನುವ ಅನ್ನೋ ಆಸೆ ರಾಜಮ್ಮನವರಿಗೆ ಇತ್ತು. 22ನೇ ವಯಸ್ಸಿನಲ್ಲಾಗಲೇ ಅವರು ಟಾಪ್ ಹೀರೋಯಿನ್ ಆಗಿ ಸಾಕಷ್ಟು ಹಣ ಸಂಪಾದಿಸಿದ್ದರು. ಇದನ್ನು ಬಳಸಿ 1943ರಲ್ಲಿ ‘ರಾಧಾರಮಣ’ ಅನ್ನೋ ಕನ್ನಡ ಸಿನಿಮಾ ತಾವೇ ನಿರ್ಮಿಸಲು ತಯಾರಿ ನಡೆಸಿದರು. ಕಲಾವಿದರ ಆಯ್ಕೆಯೂ ಆಯಿತು. ಬಂಗಾಳದ ಜ್ಯೋತಿ ಸಿನ್ಹಾ ಅನ್ನುವವರು ನಿರ್ದೇಶಕರಾಗಿ ಆಯ್ಕೆಯಾದರು. ಆದರೆ ಅವರು ಮಧ್ಯದಲ್ಲಿ ಬಿಟ್ಟು ಹೋದರು. ರಾಜಮ್ಮನವರು ಇದರಿಂದ ನಿರಾಶರಾಗಲಿಲ್ಲ. ಸೆಟ್‍ನಲ್ಲಿ ಇದ್ದ ಬಿ.ಆರ್. ಪಂತುಲು ಮತ್ತು ಬೇರೆ ತಂತ್ರಜ್ಞರ ನೆರವು ಪಡೆದು ಸಿನಿಮಾ ಮುಗಿಸಿದರು. ಮಹಿಳೆಯಾಗಿ ಇಂಥ ಸಾಹಸ ಮಾಡಿದ ಅವರು ಹೀಗೆ ಅಧಿಕೃತವಾಗಿ ಕನ್ನಡದ ಮೊದಲ ನಿರ್ಮಾಪಕಿ ಮತ್ತು ಅನಧಿಕೃತವಾಗಿ ಕನ್ನಡದ ಮೊದಲ ನಿರ್ದೇಶಕಿ.

ಹಿನ್ನೆಲೆಯಲ್ಲೇ ಉಳಿದರು

ಈ ಸಾಧನೆ ಮಾಡಿದ್ದರೂ ಮುಂದೆ ರಾಜಮ್ಮನವರು ಪಂತುಲು ಅವರು ‘ಪದ್ಮಿನಿ ಪಿಕ್ಚರ್ಸ್’ ಆರಂಭಿಸಿದಾಗ ತಾವು ಮುನ್ನೆಲೆಗೆ ಬರದೇ ಹಿನ್ನೆಲೆಯಲ್ಲೇ ಉಳಿದರು. ಆದರೆ ಕಥೆಯ ಆಯ್ಕೆಯಿಂದ ಹಿಡಿದು ಸಿನಿಮಾ ವಿತರಣೆವರೆಗೆ ಎಲ್ಲಾ ತರಹದ ಜವಾಬ್ದಾರಿಗಳನ್ನೂ ವಹಿಸಿಕೊಂಡರು. ಇದರ ಜೊತೆಗೆ ರತ್ನಗಿರಿ ರಹಸ್ಯ, ಸ್ಕೂಲ್ ಮಾಸ್ಟರ್, ಗಾಳಿ ಗೋಪುರ, ಅಮ್ಮ, ಸಾಕುಮಗಳು, ಚಿನ್ನದ ಗೊಂಬೆ, ಕಿತ್ತೂರು ಚೆನ್ನಮ್ಮ, ಶ್ರೀಕೃಷ್ಣದೇವರಾಯ ಮೊದಲಾದ ಸಿನಿಮಾಗಳಲ್ಲಿ ಅತ್ಯಂತ ಪ್ರಭಾವ ಬೀರುವ ಅಭಿನಯವನ್ನು ನೀಡಿದರು. ಅವರು ಈ ನಡುವೆ ನಿರ್ಮಿಸಿದ್ದು ‘ಮಕ್ಕಳ ರಾಜ್ಯ’ ಸಿನಿಮಾ ಒಂದೇ. ಈ ಸಿನಿಮಾ ಎಂ.ವಿ.ಆರ್. ಪ್ರೊಡಕ್ಷನ್ ಎನ್ನುವ ಲಾಂಛನದಲ್ಲಿ ಹೊರಗೆ ಬಂದಿತು. ಮುಂದೆ ಪ್ರಮುಖ ಹಾಸ್ಯನಟರಾದ ಎಂ.ಎಸ್.ಉಮೇಶ್ ಈ ಸಿನಿಮಾದಲ್ಲಿ ಬಾಲನಟರಾಗಿ ಅಭಿನಯಿಸಿದ್ದರು. ಈ ಸಿನಿಮಾಕ್ಕೆ ರಾಷ್ಟ್ರ ಪ್ರಶಸ್ತಿಯೂ ಬಂದಿತು. ರಾಜಮ್ಮನವರು ಅದನ್ನು ಅಂದಿನ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಅವರಿಂದ ಸ್ವೀಕರಿಸಿದ್ದರು. ಪಂತುಲು ಅವರ ಹಠಾತ್ ನಿಧನದ ನಂತರ ಅವರ ಕೊನೆಯ ಚಿತ್ರ ‘ಕಾಲೇಜು ರಂಗ’ವನ್ನು ಮುಗಿಸುವುದರಲ್ಲಿ ಕೂಡ ರಾಜಮ್ಮನವರು ಮುಖ್ಯವಾದ ಪಾತ್ರವನ್ನು ವಹಿಸಿದ್ದರು.
ನಂದಗೋಕುಲ
ಮದ್ರಾಸಿನ ತ್ಯಾಗರಾಜ ನಗರದಲ್ಲಿ ಇದ್ದ ರಾಜಮ್ಮನವರ ಮನೆ ನಂದ ಗೋಕುಲದಂತೆ ಇತ್ತು. ಎಲ್ಲರಿಗೂ ಅವರು ಅಕ್ಕರೆಯ ಅಮ್ಮನಾಗಿದ್ದರು. ಕಷ್ಟದಲ್ಲಿದ್ದ ಅನೇಕ ಕಲಾವಿದರಿಗೆ ಹಲವಾರು ರೀತಿಯಲ್ಲಿ ನೆರವು ನೀಡಿ ಅವರ ಬದುಕಿನಲ್ಲಿ ಬೆಳಕು ಮೂಡಲು ಕಾರಣರಾಗಿದ್ದರು. ಅನೇಕ ಬಡ ಹೆಣ್ಣು ಮಕ್ಕಳಿಗೆ ತಮ್ಮ ಮನೆಯಲ್ಲಿಯೇ ಆಶ್ರಯ ನೀಡಿ ಅವರು ಬೆಳೆದು ದೊಡ್ಡವರಾದ ಮೇಲೆ ಮದುವೆ ಮಾಡಿ ಜೀವನಕ್ಕೆ ದಾರಿ ಮಾಡಿ ಕೊಟ್ಟಿದ್ದರು. ರಾಜಮ್ಮನವರಿಗೆ ಸ್ವಂತ ಮಕ್ಕಳಿರಲಿಲ್ಲ. ಇದು ಬಹಳ ಕಾಲ ಅವರಿಗೆ ಕೊರಗಾಗಿತ್ತು. ಕೊನೆಗೆ ತಮ್ಮನ ಮಗ ಮತ್ತು ಮಗಳನ್ನು ದತ್ತು ತೆಗೆದು ಕೊಂಡು ಹೆತ್ತ ತಾಯಿಗಿಂತಲೂ ಮಮತೆಯಿಂದ ಸಾಕಿದರು.

ಮಗಳು ಉಮಾಳನ್ನು ಬ್ಯಾಂಕ್ ಉದ್ಯೋಗಿ ಕಾಳಾಚಾರ್ ಅವರಿಗೆ ಮದುವೆ ಮಾಡಿ ಕೊಟ್ಟಿದ್ದಲ್ಲದೆ ಅವರಿಗೆ ವಾಸಕ್ಕೆ ಮನೆಯನ್ನೂ ಕೂಡ ಕಟ್ಟಿಸಿ ಕೊಟ್ಟರು. ಕಾಳಾಚಾರ್ ಅವರು ಹೇಳುವಂತೆ ‘ರಾಜಮ್ಮನವರು ಏನಿಲ್ಲ ಎಂದರೂ ಒಂದು ನೂರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿಸಿದ್ದಾರೆ. ನಮ್ಮದೇ 86ನೇ ಮದುವೆ’. ಕಾಳಾಚಾರ್ ಅವರು ಮದುವೆ ಆಗುವಾಗ ರಾಜಮ್ಮನವರ ಬಗ್ಗೆ ಅನೇಕ ವಿಷಯಗಳನ್ನು ಕೇಳಿದ್ದರು. ಆಗ ತಮಿಳು ನಾಡಿನ ಮುಖ್ಯಮಂತ್ರಿಯಾಗಿದ್ದ ಎಂ.ಜಿ. ರಾಮಚಂದ್ರನ್ ಅವರು ರಾಜಮ್ಮನವರಿಗೆ ಆತ್ಮೀಯರು ಎಂದು ತಿಳಿದಿದ್ದರು. ಅತ್ತೆಯವರನ್ನು ಒಂದು ಸಲ ಎಂ.ಜಿ.ಆರ್. ಅವರ ಬಳಿ ಕರೆದು ಕೊಂಡು ಹೋಗುವಂತೆ ಕೇಳಿಕೊಂಡರು. ರಾಜಮ್ಮ ಮಗಳು ಮತ್ತು ಅಳಿಯನನ್ನು ರಾಮಾವರಂ ಗಾರ್ಡನ್‍ನಲ್ಲಿ ಇದ್ದ ಎಂ.ಜಿ.ಆರ್. ನಿವಾಸಕ್ಕೆ ಕರೆದುಕೊಂಡು ಹೋದರು. ರಾಜಮ್ಮನವರು ಬರುವ ಸುದ್ದಿ ತಿಳಿದು ಎಂ.ಜಿ.ಆರ್. ಸ್ವತ: ತಾವೇ ಮನೆಯ ಬಾಗಿಲಿನಲ್ಲಿ ನಿಂತು ಕಾಯುತ್ತಿದ್ದರು. ರಾಜಮ್ಮನವರನ್ನು ಗೌರವ ಆದರದಿಂದ ಕರೆದುಕೊಂಡು ಹೋಗಿ ತಮ್ಮ ಮುಖ್ಯಮಂತ್ರಿ ಕುರ್ಚಿಯ ಮೇಲೆ ಕುಳ್ಳಿರಿಸಿ ‘ಅಮ್ಮಾ ಇದು ನೀವು ನೀಡಿದ ಭಿಕ್ಷೆ’ ಎಂದು ಕಾಲಿಗೆ ನಮಸ್ಕಾರ ಮಾಡಿದ್ದರು.

ಎಂ.ಜಿ.ಆರ್. ಅವರ ಪತ್ನಿ ಜಾನಕಿ ರಾಮಚಂದ್ರನ್ ಅವರಿಗೆ ಕೂಡ ರಾಜಮ್ಮನವರಲ್ಲಿ ಅಪಾರ ಭಕ್ತಿ. ಸಮಯ ಆದಾಗಲೆಲ್ಲವೂ ಅವರು ರಾಜಮ್ಮನವರ ಮನೆಯಲ್ಲಿ ಸಮಯ ಕಳೆಯುತ್ತಿದ್ದರು. ಎಂ.ಜಿ.ಆರ್. ಅವರ ನಿಧನದ ನಂತರ ಜಾನಕಿಯವರೇ ಮುಖ್ಯಮಂತ್ರಿಗಳಾಗಿ ಆಯ್ಕೆಯಾದರು. ಅವರು ರಾಜಮ್ಮನವರ ಮನೆಗೆ ಬಂದು ಮುಖ್ಯಮಂತ್ರಿಗಳ ನೇಮಕದ ಆದೇಶವನ್ನು ಅವರ ಕಾಲಿನ ಬಳಿ ಇಟ್ಟು ನಮಸ್ಕರಿಸಿ ಆರ್ಶಿವಾದ ಪಡೆದ ನಂತರವೇ ಪ್ರಮಾಣವಚನ ಸ್ವೀಕರಿಸಿದ್ದರು. ಮುಂದೆ ಕಾಲಚಕ್ರ ಉರುಳಿ ಜಾನಕಿ ಅಧಿಕಾರ ಕಳೆದು ಕೊಂಡು ಜಯಲಲಿತಾ ಅವರು ಮುಖ್ಯಮಂತ್ರಿಗಳಾದರು. ಜಯಲಲಿತಾ ಅವರಿಗೂ ರಾಜಮ್ಮನವರ ಬಗೆಗೆ ಅಪಾರ ಗೌರವ. ಮುಖ್ಯಮಂತ್ರಿಗಳಾದ ಕೆಲದಿನಗಳ ನಂತರ ರಾಜಮ್ಮನವರ ಮನೆಗೆ ಬಂದು ‘ನಾನು ನಿಮ್ಮ ಗೆಳತಿಗೆ ಮೋಸ ಮಾಡಿಲ್ಲ. ಇದೆಲ್ಲಾ ರಾಜಕೀಯ ಚದುರಂಗ. ನಾನೂ ಒಂದು ಕಾಯಿ ಅಷ್ಟೇ! ನಿಮ್ಮ ಆಶೀರ್ವಾದ ನನ್ನ ಮೇಲೆ ಕೂಡ ಇರಲಿ’ ಎಂದು ನಮಸ್ಕರಿಸಿದ್ದರು.

ರಾಜ್ ಕುಮಾರ್ ಅವರಿಗೂ ಕೂಡ ರಾಜಮ್ಮನವರ ಮೇಲೆ ಅಪಾರ ವಿಶ್ವಾಸ. ‘ನಿಮ್ಮ ಚಿತ್ರಗಳಲ್ಲಿ ನನಗೆ ಪಾತ್ರ ಸಿಕ್ಕುತ್ತಿಲ್ಲ’ ಎಂದು ರಾಜ್ ಕುಮಾರ್ ಕೇಳಿದಾಗ `ಇಲ್ಲ ಮಗು ಬಹಳ ದಿನಗಳಿಂದ ನಿನ್ನನ್ನು ಕರೆಯಬೇಕು ಅಂದುಕೊಂಡೆ. ಆದರೆ ಈಗ ಮಾಡುತ್ತಿರುವ ಚಿತ್ರದಲ್ಲಿ ನಿನಗೆ ಆಗುವ ಪಾತ್ರ ಇಲ್ಲ. ಮುಂದೆ ಅವಕಾಶ ಕೊಡುವೆ’ ಎಂದರು. ಆದರೆ ರಾಜ್ ಕುಮಾರ್ ‘ನಿಮ್ಮ ಚಿತ್ರದಲ್ಲಿ ಅಭಿನಯಿಸುವುದೇ ಪುಣ್ಯ.. ಯಾವ ಪಾರ್ಟ್ ಆದರೂ ಸರಿ’ ಎಂದಾಗ ‘ಕಿತ್ತೂರು ಚೆನ್ನಮ್ಮ’ ಚಿತ್ರದಲ್ಲಿ ಅಭಿನಯಿಸಿದರು. ಮುಂದೆ ರಾಜ್ ಕುಮಾರ್ ಅವರು ರಾಜಮ್ಮನವರ ಹಲವು ಚಿತ್ರಗಳಲ್ಲಿ ಅಭಿನಯಿಸಿದರು. ಅದರಲ್ಲಿಯೂ ‘ಶ್ರೀಕೃಷ್ಣದೇವರಾಯ’ ಚಿತ್ರದಲ್ಲಿನ ಅವರ ಅಭಿನಯವನ್ನಂತೂ ಯಾರೂ ಮರೆಯಲಾರರು. ಮುಂದೆ ರಾಜಮ್ಮನವರೂ ಕೂಡ ರಾಜ್ ಕುಮಾರ್ ಅವರ ಒತ್ತಾಯದ ಮೇರೆಗೇ ‘ಬಂಗಾರದ ಪಂಜರ’ ‘ದಾರಿ ತಪ್ಪಿದ ಮಗ’ ‘ಸಂಪತ್ತಿಗೆ ಸವಾಲ್’ ಚಿತ್ರಗಳಲ್ಲಿ ಅಭಿನಯಿಸಿದ್ದರು. ‘ಹುಲಿಯ ಹಾಲಿನ ಮೇವು’ ಚಿತ್ರದಲ್ಲಿ ಅಭಿನಯಿಸುವಂತೆ ರಾಜ್ ಕುಮಾರ್ ಕೋರಿಕೊಂಡಾಗ ‘ಮಗು ಅಭಿನಯಿಸುವ ಉತ್ಸಾಹ ಇದೆ, ಆದರೆ ದೇಹ ಕೇಳುತ್ತಿಲ್ಲ. ಇದು ನಿವೃತ್ತಿ ಕಾಲ’ ಎಂದು ನಿರಾಕರಿಸಿದ್ದರು. ರಾಜಮ್ಮನವರು ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ ಎಂಬ ಸುದ್ದಿ ತಿಳಿದು ರಾಜ್ ಕುಮಾರ್ ಅವರು ಮದ್ರಾಸಿಗೆ ಹೋಗಿ ಅವರನ್ನು ನೋಡಿ ಕಂಬನಿ ಮಿಡಿದು ಅವರ ಮಗನನ್ನು ಕರೆದು ‘ಅಮ್ಮನನ್ನ ಚೆನ್ನಾಗಿ ನೋಡಿಕೋ. ಇದು ಸಾವಿರಾರು ಮನೆಯ ದೀಪವನ್ನು ಬೆಳಗಿದ ಜ್ಯೋತಿ, ಅದಕ್ಕೆ ಏನು ಸಲ್ಲಿಸಿದರೂ ಕಡಿಮೆಯೇ’ ಎಂದಿದ್ದರು.

ರಾಜಮಾತೆ

ರಾಜಮ್ಮನವರ ಹೆಸರಿನಲ್ಲಿ ಇದ್ದ ‘ಅಮ್ಮ’ ಎನ್ನುವ ಪದ ಒಂದು ರೀತಿಯಲ್ಲಿ ಅನ್ವರ್ಥಕ. ಅವರು ನಿಜವಾಗಿಯೂ ರಾಜಮಾತೆಯ ತರಹವೇ ಇದ್ದರು. ಅಭಿನೇತ್ರಿ ಲೀಲಾವತಿ ಹೇಳುತ್ತಾರೆ: ‘ನನ್ನ ಪಾಲಿಗೆ ರಾಜಮ್ಮ ಎಂದರೆ ಸಾಕ್ಷತ್ ದೈವ ಸ್ವರೂಪಿಯೇ ಸರಿ. ನನ್ನ ಮಗ ವಿನೋದ್ ಹುಟ್ಟಿದಾಗ ಯಾರೂ ನೋಡಲು ಬರಲಿಲ್ಲ. ಬಹಳ ಕಷ್ಟದ ದಿನಗಳು ಅವು. ಆಸ್ಪತ್ರೆ ಬಿಲ್ ಕಟ್ಟಲೂ ಕೂಡ ದುಡ್ಡು ಇರಲಿಲ್ಲ. ಯಾರಿಂದಲೋ ವಿಷಯ ತಿಳಿದು ಬಂದ ರಾಜಮ್ಮನವರು ಪೂರ್ತಿ ಬಿಲ್ ಕಟ್ಟಿದ್ದು ಮಾತ್ರವಲ್ಲದೆ ಕಾರಿನಲ್ಲಿ ತಮ್ಮ ಮನೆಗೆ ಕರೆದುಕೊಂಡು ಹೋಗಿ ಒಂದು ತಿಂಗಳು ಇಟ್ಟುಕೊಂಡು ಆರೈಕೆ ಮಾಡಿದ್ದರು. ಮುಂದೆ ಕೂಡ ನಮ್ಮ ಕಷ್ಟಸುಖಕ್ಕೆ ಆಗ್ತಾ ಇದ್ದೋರು ಅವರೇ. ನನ್ನ ಏಳ್ಗೆಯನ್ನು ಕಂಡು ಸಂತೋಷ ಪಡುತ್ತಿದ್ದ ಜೀವ ಅಂದರೆ ಅದೊಂದೇ’.

ಕಲಾವಿದೆ ಜಯಂತಿ ‘ರಾಜಮ್ಮನವರ ಮನೆ ಅಂದರೆ ಕನ್ನಡದ ಎಲ್ಲಾ ಕಲಾವಿದೆಯರಿಗೂ ತವರುಮನೆಯೇ ಸರಿ. ನಾನಂತೂ ಯಾವಾಗಲೂ ಅವರ ಮನೆಯಲ್ಲಿಯೇ ಉಳಿದು ಕೊಳ್ತಾ ಇದ್ದೆ’ ಎಂದು ಹೇಳುತ್ತಾರೆ. ಸಿನಿಮಾಗಳಲ್ಲಿ ಅವಕಾಶ ಅರಸಿ ಬಂದ ಎಷ್ಟೋ ಕಲಾವಿದರಿಗೆ ಆಸರೆ ಕೊಟ್ಟು, ಸಿನಿಮಾದ ಅಭದ್ರತೆ ಕುರಿತು ವಿವರಿಸಿ ಹೇಳಿ ಅವರನ್ನು ಮತ್ತೆ ಹಣ ಕೊಟ್ಟು ಊರಿಗೆ ಕಳುಹಿಸಿದ ಮಹಾತಾಯಿ ಅವರು. ಸಂಪಾದಿಸಿದ ಹಣವನ್ನೆಲ್ಲಾ ನಿವ್ರ್ಯಾಮೋಹದಿಂದ ಎಲ್ಲರಿಗೂ ಹಂಚಿ ಬಿಟ್ಟರು. ತಮ್ಮ ಸ್ವಂತ ಊರು ಅಗ್ಗೊಂಡನ ಹಳ್ಳಿಯಲ್ಲಿ ಶಾಲೆ ಮತ್ತು ಆಶ್ರಮ ಕಟ್ಟಿಸಿದ್ದರು. ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ಅನಾಥಾಶ್ರಮ ಕಟ್ಟಿಸಿದರು. ಆದರೆ ಎಲ್ಲದರ ನಿರ್ವಹಣೆಯನ್ನು ಬೇರೆಯವರಿಗೆ ವಹಿಸಿ ಸದ್ವಿನಿಯೋಗವಾಗುವಂತೆ ನೋಡಿಕೊಂಡರು.

ರಾಜಮ್ಮನವರಿಗೆ ‘ಮಕ್ಕಳ ರಾಜ್ಯ’ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಬಂದಿತು. ಆಂಧ್ರ ಮತ್ತು ತಮಿಳು ನಾಡು ಸರ್ಕಾರಗಳು ಮೇರು ಗೌರವಗಳನ್ನು ನೀಡಿದವು. ಆದರೆ ಮಾತೃಭಾಷೆ ಕನ್ನಡದಿಂದ ಗೌರವ ಸಿಗಲಿಲ್ಲ ಎನ್ನುವ ಕೊರಗು ಅವರನ್ನು ಕಾಡುತ್ತಾ ಇತ್ತು. ಕೊನೆಯ ಕಾಲದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಮತ್ತು ಡಾ.ರಾಜ್ ಕುಮಾರ್ ಗೌರವ ದೊರಕಿತು. ‘ನಾನೊಬ್ಬಳು ಇದ್ದೀನಿ ಅನ್ನೋದಾದರೂ ಕನ್ನಡಿಗರಿಗೆ ಗೊತ್ತಾಯ್ತಲ್ಲ’ ಎಂದು ರಾಜಮ್ಮ ಹೇಳಿದ್ದೂ ಕೂಡ ಉಂಟು.

ನಾನು ಎಂ.ವಿ. ರಾಜಮ್ಮನವರನ್ನು ನೋಡಿದ್ದು ಒಂದೇ ಸಲ. ಅದೂ ಆರ್.ಎನ್.ಜಯಗೋಪಾಲ್ ಅವರ ಕೃಪೆಯಿಂದ. ಆಗ ಅವರ ಆರೋಗ್ಯ ಚೆನ್ನಾಗಿರಲಿಲ್ಲ. ನೆನಪುಗಳೂ ಸ್ಫುಟವಾಗಿರಲಿಲ್ಲ. ಆದರೂ ಒಮ್ಮೊಮ್ಮೆ ಅದು ಮಿಂಚಿನಂತೆ ಬೆಳಕನ್ನು ಬೀರುತ್ತಿತ್ತು. ಅವರ ‘ರಾಧಾರಮಣ’ ಸಿನಿಮಾದ ವಸ್ತು ಬಹಳ ವಿಭಿನ್ನವಾಗಿತ್ತು. ಅದು ರಾಧಾ ಮತ್ತು ಕೃಷ್ಣರ ಪ್ರೇಮದಲ್ಲಿನ ನಿಷ್ಕಲ್ಮಶತೆಯನ್ನು ಹೇಳುತ್ತದೆ. ರಾಧೆಯ ಪತಿ ಅನಯನಿಗೆ ಕೃಷ್ಣನ ಮೇಲೆ ಸಂಶಯ. ಕೃಷ್ಣನ ಜನ್ಮರಹಸ್ಯ ತಿಳಿದ ಅನಯ ಕಂಸನೊಂದಿಗೆ ಷಡ್ಯಂತ್ರ ರಚಿಸುತ್ತಾನೆ. ಹಿತೈಷಿಯಂತೆ ನಟಿಸಿ ರಾಧೆಯನ್ನೇ ಕಂಸ ಬಲಾತ್ಕರಿಸಲು ಪ್ರಯತ್ನಿಸಿದಾಗ ಕೃಷ್ಣ ಅದನ್ನು ವಿಫಲಗೊಳಿಸುತ್ತಾನೆ. ಈ ವಸ್ತುವನ್ನು ನಾನು ಎಲ್ಲಿಯೂ ಕೇಳಿರಲಿಲ್ಲ. ಯಾವ ಭಾಗವತದಲ್ಲಿಯೂ ಇದು ಇದ್ದಂತಿಲ್ಲ. ಕುತೂಹಲದಿಂದ ರಾಜಮ್ಮನವರನ್ನು ‘ಅಮ್ಮ ಈ ಕಥೆ ನಿಮಗೆ ಎಲ್ಲಿ ಸಿಕ್ಕಿತು?’ ಎಂದು ಕೇಳಿದ್ದೆ. ನನ್ನ ಉಳಿದ ಪ್ರಶ್ನೆಗಳಿಗೆ ಉತ್ತರಿಸದಿದ್ದರೂ ಇದಕ್ಕೆ ಮಾತ್ರ ನಕ್ಕು. ‘ಎಲ್ಲಿ ಸಿಗುವುದಪ್ಪ..ಅದು ನನ್ನದೇ ಕಥೆ’ ಎಂದು ನಕ್ಕಿದ್ದರು. ನಾನು ಆ ಕ್ಷಣವನ್ನು ಎಂದಿಗೂ ಮರೆಯಲಾರೆ! ರಾಜಮ್ಮನವರ ಪತಿಗೆ ಬಿ.ಆರ್. ಪಂತುಲು ಅವರ ಮೇಲೆ ಸಂಶಯ. ಮುಂದೆ ಅವರು ಬೇರೆ ಆಗಿದ್ದು, ರಾಜಮ್ಮ ಪಂತುಲು ಅವರ ತಾರಾಪತ್ನಿಯಾಗಿದ್ದು, ಹೀಗೆ ಇತಿಹಾಸ ಒಂದು ಕ್ಷಣ ಕಣ್ಣ ಮುಂದೆ ಸುಳಿದು ಹೋಯಿತು.

ರಾಜಮ್ಮನವರಿಗೆ ಬೆಂಗಳೂರಿನಲ್ಲಿ ಒಂದು ಸ್ಟುಡಿಯೋ ಸ್ಥಾಪಿಸಬೇಕು, ಕನ್ನಡ ಚಿತ್ರರಂಗದ ಚಟುವಟಿಕೆಗಳು ಇಲ್ಲಿಯೇ ನಡೆಯುವ ಹಾಗೆ ಆಗಬೇಕು ಅಂತ ಬಹಳ ಆಸೆ ಇತ್ತು. ಇದಕ್ಕಾಗಿ ಅಂದಿನ ಮುಖ್ಯಮಂತ್ರಿ ಬಿ.ಡಿ.ಜತ್ತಿ ಅವರಿಗೆ ಮನವಿ ಸಲ್ಲಿಸಿದರು. ಅವರು ಅದಕ್ಕೆ ಕೂಡಲೇ ಸ್ಪಂದಿಸಿ ಈ ಕುರಿತು ಪರಾಮರ್ಶೆ ನಡೆಸಲು ತಮ್ಮ ಅಧ್ಯಕ್ಷತೆಯಲ್ಲಿಯೇ ಒಂದು ಸಮಿತಿಯನ್ನು ನೇಮಿಸಿದರು. ಅದರಲ್ಲಿ ರಾಜಮ್ಮನವರೂ ಸೇರಿದಂತೆ ಗುಬ್ಬಿ ವೀರಣ್ಣ, ಕೆಂಪರಾಜ ಅರಸ್, ಡಾ. ರಾಮದಾಸ್ ಇದ್ದರು. ಈ ಸಮಿತಿ ಖಾಸಗಿಯವರಿಗೆ ಅವಕಾಶ ಕೊಡುವ ಬದಲು ಸರ್ಕಾರವೇ ಸ್ಟುಡಿಯೋ ಮಾಡುವಂತೆ ಸಲಹೆ ನೀಡಿತು.

ರಾಜಮ್ಮನವರು ಇದಕ್ಕೆ ಸ್ವಲ್ಪವೂ ಬೇಸರಗೊಳ್ಳದೆ ತಾವು ಸ್ಟುಡಿಯೋಕ್ಕೆ ಎಂದು ಎತ್ತಿಟ್ಟಿದ್ದ ಹಣವನ್ನು ಸರ್ಕಾರಕ್ಕೆ ಕೊಟ್ಟು ಬಿಟ್ಟರು. ಎಲ್ಲಿಯೂ ತಮ್ಮ ಹೆಸರು ಬರಬೇಕು ಎನ್ನುವ ಬೇಡಿಕೆಯನ್ನು ಇಡಲಿಲ್ಲ. ಹೀಗೆ ಕಂಠೀರವ ಸ್ಟುಡಿಯೋ ಸ್ಥಾಪನೆಯಾಯಿತು. ಇಂದಿಗೂ ಅದು ಕನ್ನಡ ಚಿತ್ರರಂಗದ ಪ್ರಮುಖ ಚಟುವಟಿಕೆಯ ಸ್ಥಾನವಾಗಿದೆ. ಆದರೆ ಅಲ್ಲಿ ರಾಜಮ್ಮನವರ ಸ್ಮರಿಸುವ ಯಾವ ಕುರುಹುಗಳೂ ಇಲ್ಲ. ಶತಮಾನೋತ್ಸವ ಸಂದರ್ಭದಲ್ಲಾದರೂ ಇಂತಹ ಸ್ಮರಣೆ ನಡೆಯಬೇಕು.
ತುಂಬು ಜೀವನ ನಡೆಸಿದ ರಾಜಮ್ಮನವರು 1999ರ ಏಪ್ರಿಲ್ 23ರಂದು ನಮ್ಮನ್ನು ಅಗಲಿದರು. ಇದು ಅವರ ಜನ್ಮ ಶತಮಾನೋತ್ಸವ ವರ್ಷ. ಅವರ ನೆನಪುಗಳು ಉಳಿಯುವಂತಹ ಕೆಲಸಗಳು ಆಗಬೇಕು.

ಎನ್.ಎಸ್. ಶ್ರೀಧರಮೂರ್ತಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *