Uncategorizedಹಿಂದಣ ಹೆಜ್ಜೆ

ಹಿಂದಣ ಹೆಜ್ಜೆ/ ಮಲಯಾಳಂ ಸಾಹಿತ್ಯದಲ್ಲಿ ಮಹಿಳಾ ಧ್ವನಿ – ಡಾ. ಪಾರ್ವತಿ ಜಿ. ಐತಾಳ್

ಸ್ತ್ರೀವಾದಿ ಹೋರಾಟವು ಭಾರತವನ್ನು ಪ್ರವೇಶಿಸುವುದಕ್ಕೆ ಮುಂಚೆಯೇ, ಮಲಯಾಳಂ ಬರಹಗಾರ್ತಿಯರು ಲಿಂಗ ತಾರತಮ್ಯದ ವಿರುದ್ಧ ಧ್ವನಿಯೆತ್ತಿ ಪ್ರತಿಭಟಿಸಿದರು. ಇದು ಮಲಯಾಳಂ ಸಾಹಿತ್ಯದಲ್ಲಿ ನಾವು ಕಾಣುವ ಮಹಿಳಾ ಧ್ವನಿಯ ವೈಶಿಷ್ಟ್ಯ. ಮಲಯಾಳಂ ಸಾಹಿತ್ಯದಲ್ಲಿ ಮೂವತ್ತರ ದಶಕದಿಂದಲೇ ಮಹಿಳಾ ಪ್ರತಿಭಟನೆಯ ತೀವ್ರ ಧ್ವನಿ ಕೇಳಿಸಲು ಕಾರಣ ಕೇರಳದ ಸಾಮಾಜಿಕ ಮತ್ತು ಐತಿಹಾಸಿಕ ಹಿನ್ನೆಲೆಯಾಗಿದೆ ಎಂಬುದನ್ನು ನಾವು ಗಮನಿಸಬೇಕು.


ಭಾರತೀಯ ಭಾಷೆಗಳ ಸಾಹಿತ್ಯಗಳಲ್ಲಿ ಮಹಿಳಾ ಧ್ವನಿ ಗಟ್ಟಿಯಾಗಿ ಕೇಳಲಾರಂಭಿಸಿದ್ದು ಬಹಳ ತಡವಾಗಿ. ಕನ್ನಡದಲ್ಲಿ 12ನೆಯ ಶತಮಾನದ ಶರಣ ಚಳುವಳಿಯ ಕಾಲದಲ್ಲಿ ಅಕ್ಕಮಹಾದೇವಿ ಮತ್ತು ಇನ್ನು ಕೆಲವು ಶಿವಶರಣೆಯರ ವಚನಗಳಲ್ಲಿ ಲಿಂಗತಾರತಮ್ಯದ ವಿರುದ್ಧ ಪ್ರತಿಭಟನೆಯ ಧ್ವನಿಯಿತ್ತೆಂದು ನಾವು ಹೇಳಿದರೂ ಅದು ಒಂದು ಹೋರಾಟವಾಗಿ ರೂಪುಗೊಳ್ಳಲಿಲ್ಲ. ಮುಂದುವರೆಯಲೂ ಇಲ್ಲ. ಅಲ್ಲದೆ ಅಕ್ಕನ ವಚನಗಳಲ್ಲಿನ ಧ್ವನಿಯನ್ನು ನಾವು ಗುರುತಿಸ ತೊಡಗಿದ್ದು ಸ್ತ್ರೀವಾದವು ಒಂದು ಚಳುವಳಿಯಾಗಿ ಸಕ್ರಿಯವಾದ ನಂತರವೇ. ಶತ ಶತಮಾನಗಳಿಂದ ಪುರುಷ ಪ್ರಧಾನ ಸಮಾಜದಲ್ಲಿ ಶೋಷಣೆ-ದಬ್ಬಾಳಿಕೆ-ದೌರ್ಜನ್ಯಗಳಿಗೊಳಗಾಗಿ ಮನೆಯೊಳಗಿನ ಕತ್ತಲ ಸೆರೆಮನೆಯಲ್ಲೇ ಕಳೆಯುತ್ತಿದ್ದ ಮಹಿಳೆಗೆ ತನ್ನ ದುಸ್ಥಿತಿಯ ಅರಿವಾದದ್ದೇ 19ನೆಯ ಶತಮಾನದಲ್ಲಿ ಶಿಕ್ಷಣದ ಅವಕಾಶ ಸಿಕ್ಕಾಗ. ಮಹಿಳೆಯರ ಶಿಕ್ಷಣವನ್ನು ಪ್ರೋತ್ಸಾಹಿಸಿದ್ದೂ ಪುರುಷರೇ.

ಪುರುಷ ಸಾಹಿತಿಗಳು ಬರೆದ ಆರಂಭದ ಕಾದಂಬರಿಗಳು ಸ್ತ್ರೀಶಿಕ್ಷಣ ಮತ್ತು ಸ್ತ್ರೀಸ್ವಾತಂತ್ರ್ಯಗಳ ಅಗತ್ಯ ಮತ್ತು ಮಹತ್ವಗಳನ್ನು ಎತ್ತಿ ಹಿಡಿದವು. ಹತ್ತೊಂಬತ್ತನೆಯ ಶತಮಾನದ ಕೊನೆಗೆ ಸರೋಜಿನಿ ನಾಯಿಡು, ತೋರು ದತ್ತರಂಥವರು ಇಂಗ್ಲಿಷಿನಲ್ಲಿ ಕವಿತೆಗಳನ್ನು ಬರೆದರು. ಅವರ ಅನೇಕ ಕವಿತೆಗಳು ಸ್ತ್ರೀಯ ಮಹತ್ವವನ್ನು ಸಾರಿದವು. ಆದರೆ ಭಾರತದ ಪ್ರಾದೇಶಿಕ ಭಾಷೆಗಳಲ್ಲಿ ಸ್ತ್ರೀಯರು ಬರೆಯ ತೊಡಗಿದ್ದು 20ನೆಯ ಶತಮಾನದ ಮೂವತ್ತರ ದಶಕದಲ್ಲಿ. ಕನ್ನಡದಲ್ಲಿ ಕಾಣಿಸಿಕೊಂಡ ಆರಂಭಿಕ ಬರಹಗಾರ್ತಿಯರಾದ ನಂಜನಗೂಡು ತಿರುಮಲಾಂಬಾ, ಆರ್. ಕಲ್ಯಾಣಮ್ಮ, ಸರಸ್ವತಿಬಾಯಿ ರಾಜವಾಡೆ ಮೊದಲಾದವರು ಹೆಣ್ಣು ಅನುಭವಿಸುವ ಕಷ್ಟಗಳನ್ನು ಕುರಿತು ವಸ್ತುನಿಷ್ಠವಾಗಿ ಬರೆದರು. ತ್ರಿವೇಣಿ, ಅನುಪಮಾ ನಿರಂಜನ, ಎಂ.ಕೆ.ಇಂದಿರಾ, ಹೆಚ್.ವಿ. ಸಾವಿತ್ರಮ್ಮ ಮೊದಲಾದವರ ಬರಹಗಳಲ್ಲಿ ಹೆಣ್ಣಿನ ಅಸ್ಮಿತೆಯ ಹುಡುಕಾಟ ನಡೆಯಿತು. ಹೆಣ್ಣಿನ ಮೇಲಾಗುವ ಅನ್ಯಾಯಗಳ ಅದು ಎಪ್ಪತ್ತರ ದಶಕದಲ್ಲಾಗಿತ್ತು. ಆದರೆ ಮಲಯಾಳದ ಬರಹಗಾರ್ತಿಯರು ಆರಂಭದಲ್ಲೇ, ಸ್ತ್ರೀವಾದಿ ಹೋರಾಟವು ಭಾರತವನ್ನು ಪ್ರವೇಶಿಸುವುದಕ್ಕೆ ಮುಂಚೆಯೇ, ಲಿಂಗ ತಾರತಮ್ಯದ ವಿರುದ್ಧ ಧ್ವನಿಯೆತ್ತಿ ಪ್ರತಿಭಟಿಸಿದರು. ಇದು ಮಲಯಾಳ ಸಾಹಿತ್ಯದಲ್ಲಿ ನಾವು ಕಾಣುವ ಮಹಿಳಾ ಧ್ವನಿಯ ವೈಶಿಷ್ಟ್ಯ.

ಮಲಯಾಳಂ ಸಾಹಿತ್ಯದಲ್ಲಿ ಮೂವತ್ತರ ದಶಕದಿಂದಲೇ ಮಹಿಳಾ ಪ್ರತಿಭಟನೆಯ ತೀವ್ರ ಧ್ವನಿ ಕೇಳಿಸಲು ಕಾರಣ ಕೇರಳದ ಸಾಂಸ್ಕøತಿಕ, ಸಾಮಾಜಿಕ ಮತ್ತು ಐತಿಹಾಸಿಕ ಹಿನ್ನೆಲೆಯಾಗಿದೆ ಎಂಬುದನ್ನು ನಾವು ಗಮನಿಸಬೇಕು. ಕ್ರೈಸ್ತಯುಗದ ಆರಂಭದಲ್ಲಿ-ಅಂದರೆ ಸುಮಾರು ಕ್ರಿ.ಪೂ.2ನೆಯ ಶತಮಾನ ಮತ್ತು ಕ್ರಿ.ಶ.ಐದನೇ ಶತಮಾನಗಳ ಮಧ್ಯೆ ಚೇರರ ಆಳ್ವಿಕೆಯ ಕಾಲದಲ್ಲಿ ಸ್ತ್ರೀಯರಿಗೂ ಪುರುಷರಿಗೂ ಸಮಾನ ಹಕ್ಕು-ಅವಕಾಶಗಳು ಇದ್ದವೆಂದೂ, ಅಲ್ಲಿ ಪ್ರಸಿದ್ಧ ಸಂಗಮ ಸಾಹಿತ್ಯದ ಕವಯಿತ್ರಿ ಅವ್ವಯ್ಯಾರ್ ಅವರ ಕೊಡುಗೆ ಮಹತ್ವದ್ದೆಂದೂ ಹೇಳುತ್ತಾರೆ. ಆದರೆ ಎರಡನೆಯ ಚೇರ ಸಾಮ್ರಾಜ್ಯದ ಆಳ್ವಿಕೆಯ ಕಾಲದಲ್ಲಿ-ಅಂದರೆ 8ನೆಯ ಮತ್ತು 11ನೆಯ ಶತಮಾನಗಳ ನಡುವೆ ಪರಿಸ್ಥಿತಿ ಪೂರ್ತಿಯಾಗಿ ಬದಲಾಯಿತೆಂದೂ, ಚೇರರು ಮತ್ತು ಚೋಳರ ನಡುವಿನ ನೂರು ವರ್ಷಗಳ ಯುದ್ಧದ ಕಾಲದಲ್ಲಿ ಸಾಕಷ್ಟು ಸಾಮಾಜಿಕ ಹಾಗೂ ರಾಜಕೀಯ ಏಳು-ಬೀಳುಗಳಿಂದಾಗಿ ಪುರುಷರು ಯುದ್ಧಕ್ಕೆ ಹೋಗಿ ಸ್ತ್ರೀಯರು ತಮ್ಮ ಹಿರಿಯಣ್ಣನೊಂದಿಗೆ ಮನೆಯೊಳಗೆ ಉಳಿದು ಅಣ್ಣನ ( ಕಾರಣವರ್) ಆಶ್ರಯದಲ್ಲಿ ಅವರ ಅಧಿಕಾರವಾಣಿಗೆ ತಲೆ ಬಾಗಿ ಉಳಿಯಬೇಕಾಯಿತು. ಮತ್ತು ಇದು ಮರುಮಕ್ಕತ್ತಾಯ ( ಮಾತೃಪ್ರಧಾನ) ಪದ್ಧತಿಗೆ ಎಡೆಮಾಡಿ ಕೊಟ್ಟಿತು.

ಎರಡನೆಯ ಚೇರ ಆಳ್ವಿಕೆಯ ಕಾಲದಲ್ಲಿ ಮನುಸ್ಮøತಿಯ ವೈಭವೀಕರಣ ಮತ್ತು ಸ್ತ್ರೀಯರ ದಮನ ಮತ್ತು ಶೋಷಣೆಗಳು ಕಾಣಿಸಿಕೊಂಡವು. ಮನುಸ್ಮøತಿ ಮಾತ್ರವಲ್ಲದೆ ಬ್ರಾಹ್ಮಣ ಸಮುದಾಯವು ಶಂಕರ ಸ್ಮøತಿಯನ್ನು ಅನುಸರಿಸಿ ಹೆಂಗಸರ ಮೇಲಿನ ಕಟ್ಟುಪಾಡುಗಳನ್ನು ಬಿಗಿಗೊಳಿಸಿತು. ಶಂಕರ ಸ್ಮøತಿಯ ಪ್ರಕಾರ ನಂಬೂದಿರಿ ( ಬ್ರಾಹ್ಮಣ) ಸಮುದಾಯಕ್ಕೆ ಸೇರಿದ ಹೆಂಗಸರಿಗೆ ವಿದ್ಯಾಭ್ಯಾಸಕ್ಕೆ ಅವಕಾಶ ಕೊಡಕೂಡದು, ಅವರು ತೀರ್ಥ ಸ್ನಾನ ಮಾಡಬಾರದು, ಅವರು ವೇದ ಘೋಷಗಳನ್ನು ಕೇಳಬಾರದು, ಗಂಡನ ವಿನಃ ಬೇರೆ ಯಾವ ಗಂಡಸರನ್ನೂ ಕಣ್ಣೆತ್ತಿ ನೋಡಬಾರದು, ಅವರು ಹೊರಗೆ ಹೋಗುವಾಗ ಒಂದು ವಿಶಿಷ್ಟ ಮರದ ಕೊಡೆಯಿಂದ ಮುಖವನ್ನು ಮರೆಸಿಕೊಳ್ಳಬೇಕು ಮತ್ತು ಜತೆಗೆ ಒಬ್ಬ ಸೇವಕಿಯನ್ನು ಕರೆದೊಯ್ಯಬೇಕು, ರಾತ್ರಿಯ ಹೊತ್ತು ಹೊರಗೆ ಹೋಗ ಕೂಡದು, ಅವರು ಹಾಡು ಹೇಳ ಕೂಡದು ಮತ್ತು ಸಂತೋಷಕ್ಕಾಗಿ ಯಾವುದೇ ಆಟ ಆಡ ಕೂಡದು, ಬಿಳಿಯ ಬಟ್ಟೆಯನ್ನು ಬಿಟ್ಟು ಬೇರಾವ ಬಣ್ಣದ ಬಟ್ಟೆಯನ್ನೂ ಧರಿಸಿಕೊಳ್ಳ ಕೂಡದು, ಉತ್ಸವದ ಕಾಲದಲ್ಲಿ ದೇವಾಲಯಗಳಿಗೆ ಹೋಗ ಕೂಡದು ಮತ್ತು ಮೂಗು ಚುಚ್ಚಿಸಿಕೊಳ್ಳಕೂಡದು.

ಹೆಣ್ಣುಮಕ್ಕಳ ಕಷ್ಟಗಳು : ಇದರಿಂದಲೇ ನಂಬೂದಿರಿ ಹೆಣ್ಣುಮಕ್ಕಳು ಅದೆಷ್ಟು ಸಂಕಟ ಅನುಭವಿಸುತ್ತಿದ್ದರೆನ್ನುವುದು ಗೊತ್ತಾಗುತ್ತದೆ. ಈ ಕುರಿತು ಅದೇ ಸಮುದಾಯಕ್ಕೆ ಸೇರಿದ ಲಲಿತಾಂಬಿಕಾ ಅಂತರ್ಜನಂ ಎಂಬ ಲೇಖಕಿ ಬಹಳಷ್ಟು ಬರೆದಿದ್ದಾರೆ. ಹೆಣ್ಣುಮಕ್ಕಳ ಕಷ್ಟಗಳು ಮತ್ತು ಅವರನ್ನು ಬಂಧಿಸಿದ ಸಂಕೋಲೆಗಳ ಕುರಿತು ತಮ್ಮ ಅನೇಕ ಕಥೆಗಳಲ್ಲಿ ಅವರು ಉಲ್ಲೇಖಿಸಿದ್ದಾರೆ. ಆದರೆ ಭಾರತದ ಇತರ ಭಾಗಗಳಲ್ಲಿ ಎಲ್ಲೂ ಇಲ್ಲದ ‘ಮರುಮಕ್ಕತ್ತಾಯ’ ಪದ್ಧತಿ ಮತ್ತು ಅದರ ಜತೆಗೇ ಸೇರಿಕೊಂಡಿದ್ದ ‘ಸಂಬಂಧಮ್’ ಪದ್ಧತಿಗಳು ಹೆಣ್ಣುಮಕ್ಕಳಿಗೆ ಅನೇಕ ಸವಲತ್ತುಗಳನ್ನು ಒದಗಿಸಿದ್ದೂ ನಿಜ ( ಮುಖ್ಯವಾಗಿ ರಾಜ ಮನೆತನ, ನಾಯರ್ ಸಮುದಾಯ ಮತ್ತು ಅಂಬಲವಾಸಿ ಜಾತಿಗಳಿಗೆ ಸೇರಿದ ಹೆಣ್ಣುಮಕ್ಕಳಿಗೆ).

ಸಂಬಂಧಮ್ ಅನ್ನುವುದು ಬಹಳ ವಿಚಿತ್ರವೂ ವಿಶಿಷ್ಟವೂ ಆಗಿದ್ದ ಒಂದು ವ್ಯವಸ್ಥೆ. ಆಗಾಗ ನಡೆಯುತ್ತಿದ್ದ ಯುದ್ಧಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ ಯುವಕರು ಕೆಲವೊಮ್ಮೆ ಯುದ್ಧರಂಗದಲ್ಲೇ ಸತ್ತು ಹೋಗುತ್ತಿದ್ದರು. ಆದ್ದರಿಂದ ವಿವಾಹ, ದಾಂಪತ್ಯ ಹಾಗೂ ಒಂದು ಸುಭದ್ರವಾದ ಕೌಟುಂಬಿಕ ಬದುಕುಗಳ ಪರಿಕಲ್ಪನೆಯೇ ಕೇರಳದಲ್ಲಿ ಅಂದು ಇರಲಿಲ್ಲ. ಆಸ್ತಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಮತ್ತು ಆಸ್ತಿಯ ಮೇಲಿನ ಹಕ್ಕುಗಳು ಸ್ತ್ರೀಯರದ್ದೇ ಆಗಿರುತ್ತಿತ್ತು. ಕುಟುಂಬವೆಂದರೆ ಗಂಡ-ಹೆಂಡತಿ-ಮಕ್ಕಳು ಆಗಿರಲಿಲ್ಲ. ಅಣ್ಣ-ತಂಗಿಯರೇ ಒಂದು ಕುಟುಂಬದ ಅಂಗಗಳಾಗಿದ್ದರು. ತಂಗಿಯರು ಮತ್ತು ಅವರ ಮಕ್ಕಳ ರಕ್ಷಣೆ ಮಾಡುವ, ಮತ್ತು ಆಸ್ತಿಯ ವ್ಯವಹಾರಗಳನ್ನು ನೊಡಿಕೊಳ್ಳುವ ಹಿರಿಯಣ್ಣ ( ಕಾರಣವರ್) ಮಾತ್ರ ಮೂಲಮನೆಯಲ್ಲಿ( ತರವಾಡು) ತನ್ನ ಅಕ್ಕ-ತಂಗಿಯರ ಜತೆಗೆ ಉಳಿದುಕೊಳ್ಳಬಹುದು. ಆ ಅಕ್ಕ-ತಂಗಿಯರು ತಮಗೆ ಇಷ್ಟ ಬಂದ ಗಂಡನ್ನು ಆರಿಸಿಕೊಂಡು ಅವರನ್ನು ಲೈಂಗಿಕವಾಗಿ ಕೂಡಬಹುದು. ಮಕ್ಕಳನ್ನು ಪಡೆಯಬಹುದು. ಹಾಗೆ ಕೂಡುವುದಕ್ಕೆ ಮೊದಲು ಇರುವ ಒಂದೇ ಒಂದು ಸರಳ ವಿಧಿಯೆಂದರೆ ಗಂಡು ಹೆಣ್ಣಿಗೆ, ಅವಳ ಒಪ್ಪಿಗೆ ಸಿಕ್ಕಿದ ನಂತರ ಒಂದು ‘ಪುಡವ’ ( ಹೊಸ ಮುಂಡು)ಕೊಡುವುದು. ಆ ದಿನದಿಂದ ಅವನು ಅವಳ ಜತೆಗೆ ಮಲಗುತ್ತಾನೆ. ಆದರೆ ಅವಳು ಅವನ ಮನೆಗೆ ಹೋಗುವ ಕ್ರಮ ಇಲ್ಲ. ಅವನನ್ನು ಗಂಡನೆಂದು ಕರೆಯುವುದಿಲ್ಲ. ಬದಲಾಗಿ ಅವನು ಅವಳ ‘ನಾಯರ್’ ಅಥವಾ ‘ಸಂಬಂಧಕಾರನ್’ ಆಗಿರುತ್ತಾನೆ. ಅವನು ದಿನವಿಡೀ ದುಡಿದು ಸಂಪಾದನೆ ಮಾಡಿ ಅವಳು ಮತ್ತು ತನ್ನ ಮಕ್ಕಳಿಗೆ ಖರ್ಚಿಗೆ ಕೊಡಬೇಕು. ದಿನಾ ರಾತ್ರಿ ಅವನು ಅವಳ ಮನೆಗೆ ಬಂದು ಅವಳ ಜತೆಗೆ ಮಲಗಬಹುದು. ಅವನಿಗೆ ಅಪ್ಪನೆನ್ನುವ ಸ್ಥಾನವಿಲ್ಲ. ಗೌರವವೂ ಇಲ್ಲ. ಆದರೆ ಅವಳಿಗೆ ಅಸಮಾಧಾನವಾಯಿತೆಂದರೆ ಅವಳು ಅವನನ್ನು ಬಿಟ್ಟು ಅವನು ಕೊಟ್ಟ ‘ಪುಡವ’ ಹಿಂದಿರುಗಿಸಬೇಕು. ಅನಂತರ ಸಮಾಜದಿಂದ ಅನೈತಿಕತೆಯ ಆರೋಪವಿಲ್ಲದೆಯೇ ಅವಳು ಬೇರೊಬ್ಬನನ್ನು ಕೂಡಬಹುದು.

ಹೀಗೆ ಮುಸಲ್ಮಾನ ಗಂಡಸರು ‘ತಲಾಖ್’ ಹೇಳಿದ ಕೂಡಲೇ ಹೆಂಡತಿಯಿಂದ ಬಿಡುಗಡೆ ಹೊಂದುವ ಹಾಗೆ ಇಲ್ಲಿ ಅದೇ ಅವಕಾಶ ಹೆಣ್ಣುಮಕ್ಕಳಿಗೆ ಇತ್ತು. ಗಂಡು ಮಕ್ಕಳೂ ಅವಳನ್ನು ಬಿಟ್ಟು ಬೇರೆ ಹೆಣ್ಣು ಮಕ್ಕಳೊಂದಿಗೆ ಸಂಬಂಧವಿಟ್ಟುಕೊಳ್ಳಲು ಅಭ್ಯಂತರವಿಲ್ಲ. ಆದರೆ ಅವರಿಗೆ ಎಂದೂ ಕೌಟುಂಬಿಕ ಬದುಕು, ಮಕ್ಕಳ ಒಡನಾಟ, ಆಸ್ತಿಯ ಮೇಲಿನ ಹಕ್ಕು ಯಾವುದೂ ಇರಲಿಲ್ಲ. ಹೀಗೆ ‘ಸಂಬಂಧಂ’ಎನ್ನುವುದು ಸಮಾಜದ ಒಪ್ಪಿಗೆ ಇದ್ದುಕೊಂಡೇ ಇರುವ ಒಂದು ಸಡಿಲ ರೀತಿಯ ಗಂಡು-ಹೆಣ್ಣುಗಳ ಸಂಬಂಧವಾಗಿತ್ತು. ಲೈಂಗಿಕ ಸಂಬಂಧಗಳ ವಿಚಾರದಲ್ಲಿ ಸಾಮಾಜಿಕ ಸಮ್ಮತಿಯೊಂದಿಗೆ ಇಷ್ಟೊಂದು ಸ್ವಾತಂತ್ರ್ಯವಿದ್ದುದರಿಂದ ಕೇರಳದಲ್ಲಿ ವೇಶ್ಯಾ ಪದ್ಧತಿಗೆ ಅವಕಾಶವೇ ಇರಲಿಲ್ಲ. ಅಲ್ಲದೆ ಹೆಣ್ಣುಮಕ್ಕಳು ಮದುವೆಯಾಗಿ ಅತ್ತೆ ಮನೆಗೆ ಹೋಗಿ ಅತ್ತೆ-ಮಾವ-ಮೈದುನ-ನಾದಿನಿಯರ ಕಿರುಕುಳಕ್ಕೆ ಒಳಗಾಗಿ ಕಷ್ಟ ಅನುಭವಿಸುವ ಸ್ಥಿತಿಯಿರಲಿಲ್ಲ. ಆದ್ದರಿಂದ ಸಾಂಸ್ಕøತಿಕವಾಗಿ ದೇಶದ ಇತರ ಭಾಗಗಳಲ್ಲಿ ನಾವು ಕಾಣುವ ಕೌಟುಂಬಿಕ ಬದುಕನ್ನು ನಾವು ಕೇರಳದಲ್ಲಿ ಕಾಣುವುದಿಲ್ಲ.. ಹೆಣ್ಣುಮಕ್ಕಳಿಗಿರುವ ಈ ಪ್ರಾಧಾನ್ಯವು ರಾಜಮನೆತನಗಳ ವಿಷಯದಲ್ಲೂ ಭಿನ್ನವಾಗಿರಲಿಲ್ಲ. ಅಲ್ಲೂ ರಾಜಕುಟುಂಬದಲ್ಲಿ ಹೆಣ್ಣುಮಕ್ಕಳಿಗಷ್ಟೇ ಪ್ರಾಶಸ್ತ್ಯ. ಆಡಳಿತ ವ್ಯವಹಾರಗಳನ್ನು ನೋಡಿಕೊಳ್ಳುವುದಷ್ಟೇ ರಾಜನ ಕೆಲಸ. ಅಧಿಕಾರವಿರುವುದು ರಾಣಿಯ ಕೈಯಲ್ಲಿ. ರಾಜನಿಗೆ ಬೇರೆ ಪ್ರೇಯಸಿಯರಿದ್ದರೆ ಅವರಿಗೆ ಅರಮನೆಯಲ್ಲಿ ಪ್ರಾಮುಖ್ಯವಿಲ್ಲ. ಈ ತಾರತಮ್ಯ ಎಷ್ಟರ ಮಟ್ಟಿಗೆ ಕಾಣುತ್ತಿತ್ತು ಎಂದರೆ ದೊಡ್ಡ ದೊಡ್ಡ ಔತಣಕೂಟಗಳಲ್ಲಿ ರಾಣಿಗೂ ಅವಳ ಹೆಣ್ಣುಮಕ್ಕಳಿಗೂ ಬಡಿಸುತ್ತಿದ್ದ ವಿಶೇಷ ಖಾದ್ಯಗಳಲ್ಲಿ ಅರ್ಧದಷ್ಟು ಮಾತ್ರ ರಾಜನಿಗೆ ನೀಡಲಾಗುತ್ತಿತ್ತು..!

ಶೋಷಣೆ: ಪಾಶ್ಚಾತ್ಯ ಸ್ತ್ರೀವಾದಿಗಳ ಪ್ರಕಾರ ಇದು ಹೆಣ್ಣು ಮಕ್ಕಳ ಪಾಲಿಗೆ ‘ಸ್ವಚ್ಛಂದ ಸ್ವರ್ಗ’. ಆದರೆ ಇಲ್ಲೂ ಸಾಕಷ್ಟು ಶೋಷಣೆಗೆ ಅವಕಾಶವಿತ್ತು. ಕುಟುಂಬದ ಹಿರಿಯಣ್ಣ ( ಕಾರಣವರ್) ತಂಗಿಯಂದಿರು, ಅವರ ಗಂಡಂದಿರು ಮತ್ತು ಅವರ ಮಕ್ಕಳ ಮೇಲೆ ವಿಪರೀತ ಅಧಿಕಾರ ಚಲಾಯಿಸುತ್ತಿದ್ದ. ಅವರ ಮೇಲೆ ಅಮಾನುಷವಾಗಿ ದಬ್ಬಾಳಿಕೆ ನಡೆಸುತ್ತಿದ್ದ. ಜೀವನ ಪೂರ್ತಿ ಅವರ ಬದುಕನ್ನು ನರಕವಾಗಿಸುತ್ತಿದ್ದ. ಆದ್ದರಿಂದ ಈ ಮಾತೃಪ್ರಧಾನ ಕುಟುಂಬಗಳಲ್ಲೂ ಹೆಣ್ಣು ಮಕ್ಕಳು ಶೋಷಣೆಗೊಳಗಾಗುತ್ತಿದ್ದರು. 19ನೇ ಶತಮಾನದ ಕೊನೆಯಲ್ಲಿ ನಾಯರ್ ಸಮಾಜದ ಅನಿಷ್ಟಗಳನ್ನು ಹೋಗಲಾಡಿಸಿ ಅವರನ್ನು ಪ್ರಧಾನ ವಾಹಿನಿಗೆ ತರುವ ಉದ್ದೇಶದಿಂದ ಹಲವಾರು ಯುವಕರು ಹೋರಾಟ ನಡೆಸಿದ ಪರಿಣಾಮವಾಗಿ ಆಗ ಇದ್ದ ಬ್ರಿಟಿಷ್ ಸರಕಾರವು ‘ನಾಯರ್ ವಿವಾಹ ಕಾಯಿದೆ’ಯನ್ನು ತಂದು ಇತರೆಲ್ಲರಂತೆ ವೈವಾಹಿಕ ಸಂಬಂಧಗಳನ್ನು ಇಟ್ಟುಕೊಳ್ಳಬೇಕೆಂದೂ ಸಾಂಸ್ಕøತಿಕವಾಗಿ ದೇಶದ ಪ್ರಧಾನ ವಾಹಿನಿಗೆ ಸೇರಿಕೊಳ್ಳಬೇಕೆಂದೂ ವಿಧಿಸಿತು.

ಸಂಬಂಧಂ ಪದ್ಧತಿಗೆ ನಂಬೂದಿರಿ ಸಮುದಾಯದಲ್ಲೂ ಅವಕಾಶವಿತ್ತು. ಕುಟುಂಬದ ಹಿರಿಯ ಗಂಡುಮಗ ಮಾತ್ರವೇ ಅದೇ ಸಮುದಾಯದ ಹೆಣ್ಣುಮಗಳನ್ನು ಮದುವೆಯಾಗಲು ಅವಕಾಶವಿತ್ತು. ಉಳಿದ ಗಂಡುಮಕ್ಕಳು ಕುಟುಂಬದಿಂದ ಹೊರ ನಡೆದು ನಾಯರ್ ಸಮುದಾಯದ ಹೆಣ್ಣು ಮಕ್ಕಳೊಂದಿಗೆ ‘ಸಂಬಂಧಂ’ಎಂಬ ಪದ್ಧತಿಗನುಸಾರವಾಗಿ ಕೂಡಿಕೊಳ್ಳಬೇಕಿತ್ತು. ಅವರ ಮಕ್ಕಳು ಮೂಲ ಮನೆಗೆ ಬರುವಂತಿಲ್ಲ. ಅವರಿಗೆ ಆಸ್ತಿಯ ಮೇಲಿನ ಯಾವುದೇ ಹಕ್ಕೂ ಇಲ್ಲ. ಇದಕ್ಕೆ ನಂಬೂದಿರಿ ಸಮಾಜದ ಪುರುಷರು ಕೊಡುತ್ತಿದ್ದ ತಾರ್ಕಿಕ ಕಾರಣವೆಂದರೆ ಕುಟುಂಬದ ಆಸ್ತಿ ಭಾಗವಾಗಬಾರದು ಎಂಬುದಾಗಿತ್ತು.ಆದರೆ ಇದರಿಂದ ನಂಬೂದಿರಿ ಹೆಣ್ಣುಮಕ್ಕಳು ಮದುವೆಯ ವಿಚಾರದಲ್ಲಿ ಸರಿಯಾದ ಗಂಡು ಸಿಗದೆ ಮಾನಸಿಕ ಕ್ಷೋಭೆಗೆ ಒಳಗಾಗುತ್ತಿದ್ದರು.

12, 13 ಮತ್ತು 14ನೆಯ ಶತಮಾನಗಳಲ್ಲಿ ದಕ್ಷಿಣ ಭಾರತದ ಅತಿ ದೊಡ್ಡ ಹಾಗೂ ಶ್ರೀಮಂತ ಚೇರ ಸಾಮ್ರಾಜ್ಯದ ಪತನದ ನಂತರ ಅಲ್ಲಲ್ಲಿ ತುಂಡರಸರು ಹುಟ್ಟಿಕೊಂಡು ಅವರ ನಡುವೆ ಆಗಾಗ ಜಗಳ-ಮನಸ್ತಾಪಗಳುಂಟಾಗುತ್ತಿದ್ದವು. ಸ್ತ್ರೀಯರು ಕೂಡಾ ಯುದ್ಧ ಕಲೆಗಳನ್ನು-ಮುಖ್ಯವಾಗಿ ಕಳರಿ ಪಯಟ್ಟ್- ಅಭ್ಯಾಸ ಮಾಡುತ್ತಿದ್ದರು. ಅಂಥ ವೀರ ವನಿತೆಯರ ಕುರಿತಾದ ಹಾಡುಗಳು ಜನಪದ ಹಾಡುಗಳಾಗಿ ಜನಪ್ರಿಯವಾದವು. ‘ಉಣ್ಣಿಯಾರ್ಚ’ ಎಂಬ ಹಾಡು ‘ವಡಕ್ಕನ್ ಪಾಟ್ಟುಗಳ್’ ( ಬಡಗಿನ ಹಾಡುಗಳು) ಎಂದು ಪ್ರಸಿದ್ಧವಾಗಿದೆ. ಈ ಅವಧಿಯಲ್ಲಿ ಬಂದ ಸಾಹಿತ್ಯದಲ್ಲಿ ಹೆಣ್ಣನ್ನು ‘ಲೈಂಗಿಕ ವಸ್ತು’ವಿನಂತೆ ‘ದೇವದಾಸಿ ವರ್ಣನ’ ‘ಸಂದೇಶ ಕಾವ್ಯ’ ಮೊದಲಾದ ಕೃತಿಗಳಲ್ಲಿ ಕಾಣಬಹುದು. ‘ಉಣ್ಣುನಿಲ್ಲಿ ಸಂದೇಶಂ’ ‘’ಉಣ್ಣಿಚಿರುದೇವಿ ಚರಿತಮ್’ ಮೊದಲಾದ ಸಂದೇಶ ಕಾವ್ಯಗಳಲ್ಲಿ ಈ ರೀತಿಯ ಅಶ್ಲೀಲ ಮಿಶ್ರಿತ ಕಾವ್ಯ ಶೈಲಿಯಿದೆ. ಹದಿನಾರನೆಯ ಶತಮಾನದಲ್ಲಿ ಬಂದ ತುಂಜತ್ತ ಎಳುತ್ತಚ್ಛನ್ ಎಂಬ ಮಹಾಕವಿಯು ಬರೆದ ರಾಮಾಯಣ, ಮಹಾಭಾರತ ಮೊದಲಾದ ಭಕ್ತಿ ಕಾವ್ಯಗಳಲ್ಲಿ ಹಳೆಯ ಶೈಲಿ ಮಾಯವಾಗಿ ಕಿಳಿಪ್ಪಾಟ್ಟು ಎಂಬ ಶೈಲಿ ಅಸ್ತಿತ್ವಕ್ಕೆ ಬಂತು. ಅದಕ್ಕೆ ಮೊದಲು ಚೆರುಶ್ಶೇರಿ ಎಂಬ ಕವಿಯೂ ‘ಕೃಷ್ಣಗಾಥಾ’ಎಂಬ ಭಕ್ತಿ ಕಾವ್ಯದ ರಚನೆ ಮಾಡಿದ್ದರು.

1498ರಲ್ಲಿ ಪೋರ್ಚುಗೀಸರ ಆಗಮನದೊಂದಿಗೆ ಅನೇಕ ಸಾಮಾಜಿಕ ಹಾಗೂ ರಾಜಕೀಯ ಪಲ್ಲಟಗಳಾದವು. ಅವರ ಹಿಂದಿನಿಂದ ಬಂದ ಡಚ್, ಫ್ರೆಂಚ್ ಮತ್ತು ಬ್ರಿಟಿಷರು, ಮತ್ತು ಸ್ಥಳೀಯ ಅರಸರುಗಳ ನಡುವೆ ತಿಕ್ಕಾಟ ನಡೆದು ಕೊನೆಗೆ ಈಸ್ಟ್ ಇಂಡಿಯಾ ಕಂಪೆನಿಯ ಸ್ಥಾಪನೆಯಾಯಿತು. ಜತೆಗೆ ಕೇರಳವು ಮೂರು ಭಾಗಗಳಾಗಿ ವಿಭಜನೆಗೊಡಿತು- ತಿರುವಾಂಕೂರು, ಕೊಚ್ಚಿ ಮತ್ತು ಮಲಬಾರ್. ತಿರುವಾಂಕೂರು ಮತ್ತು ಕೊಚ್ಚಿ ರಾಜ್ಯಗಳು ಆಯಾ ಅರಸರಿಂದ ಆಳಲ್ಪಟ್ಟು ಅಲ್ಲಿ ಬ್ರಿಟಿಷ್ ಪ್ರತಿನಿಧಿಗಳೂ ಇರುತ್ತಿದ್ದರು. ಮಲಬಾರ್ ಮಾತ್ರ ಮದರಾಸು ಪ್ರಾವಿನ್ಸ್‍ನ ಕೈಕೆಳಗೆ ಇತ್ತು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ನಂತರ ನವೆಂಬರ್ 1, 1956ರಂದು ಕೇರಳ ರಾಜ್ಯದ ಉದಯವಾಯಿತು. ಭಾಷಾವಾರು ಪ್ರಾಂತ್ಯಗಳ ರಚನೆಯಾಯಿತು.

ಇದಕ್ಕೂ ಮುಂಚೆ 1859ರಲ್ಲಿ ತಿರುವಾಂಕೂರು ಮಹಾರಾಜರು ಗಂಡು ಮಕ್ಕಳಿಗೂ ಹೆಣ್ಣು ಮಕ್ಕಳಿಗೂ ಸಮಾನ ನೆಲೆಯಲ್ಲಿ ಶಿಕ್ಷಣಕ್ಕೆ ಅವಕಾಶ ಸಿಗಬೇಕೆಂದು ಕಾನೂನು ಹೊರಡಿಸಿದರು. ಮಾತ್ರವಲ್ಲದೆ ಹೆಣ್ಣುಮಕ್ಕಳಿಗೋಸ್ಕರ ಪ್ರತ್ಯೇಕ ಶಾಲೆಯನ್ನು ಸ್ಥಾಪಿಸಿದರು. ಹೀಗೆ ಹೆಣ್ಣುಮಕ್ಕಳ ಶಿಕ್ಷಣವು ಕೇರಳದ ಚರಿತ್ರೆಯಲ್ಲಿ ಒಂದು ದೊಡ್ಡ ತಿರುವಾಗಿ ಪರಿಣಮಿಸಿತು. ಅಲ್ಲದೆ 1859ರ ಜುಲೈ26 ಜುಲೈರಂದು ಒಂದು ಮಹತ್ವದ ಘಟನೆ ನಡೆಯಿತು. ಅದುವರೆಗೆ ಕೇರಳದಲ್ಲಿ ಕೆಳ ಜಾತಿಯ ಹೆಣ್ಣು ಮಕ್ಕಳು-ನಾಡಾರ್/ಚೆನ್ನಾರ್- ಎದೆಯನ್ನು ಮುಚ್ಚಿಕೊಳ್ಳುವ ಬಟ್ಟೆ ಧರಿಸ ಕೂಡದು ಎಂಬ ಅಘೋಷಿತ ಕಾನೂನಿತ್ತು. ಇದರಿಂದ ಆ ಜಾತಿಗೆ ಸೇರಿದ ಹೆಣ್ಣು ಮಕ್ಕಳು ಸಂಕಟ ಅನುಭವಿಸುತ್ತಿದ್ದರು. ಈಗ ರಾಜ್ಯದಾದ್ಯಂತ ಸುಮಾರು ಅರ್ಧ ಶತಮಾನದಷ್ಟು ದೀರ್ಘ ಕಾಲ ನಡೆದ ಸ್ತ್ರೀ ಸ್ವಾತಂತ್ರ್ಯ ಚಳುವಳಿಯ ಪರಿಣಾಮವಾಗಿ ಅವರು ರವಿಕೆಗಳನ್ನು ಧರಿಸಬಹುದು ಎಂಬ ಕಾನೂನನ್ನು ಸರಕಾರವೇ ಹೊರಡಿಸಿತು. ‘ಮಾರು ಮರಕ್ಕಲ್ ಸಮರಂ’ ( ಎದೆ ಮುಚ್ಚಿಕೊಳ್ಳುವ ಅವಕಾಶಕ್ಕಾಗಿ ಮುಷ್ಕರ)ವು ಬಹಳಷ್ಟು ಸಾಮಾಜಿಕ ಸುಧಾರಣೆಗಳನ್ನು ತಂದು ಆಧುನಿಕ ಕೇರಳದ ಉದಯಕ್ಕೆ ಕಾರಣವಾಯಿತು.

ಲಾರ್ಡ್ ಮೆಕಾಲೆಯು ತಂದ ಇಂಗ್ಲಿಷ್ ಶಿಕ್ಷಣ ನೀತಿಯು ಸುಧಾರಣೆಯ ಕಿರೀಟಕ್ಕೆ ಇನ್ನೊಂದು ಗರಿಯಾಯಿತು. ಆಸ್ತಿ ವಿಭಾಗೀಕರಣದ ಹಕ್ಕು ಕೇರಳ ಸಮಾಜದ ರೀತಿ ನೀತಿಗಳಲ್ಲಿ ಪರಿವರ್ತನೆ ತಂದ ಇನ್ನೊಂದು ಐತಿಹಾಸಿಕ ಘಟನೆಯಾಯಿತು. ಲೋಕ ಮಹಾ ಯುದ್ಧಗಳು, ರಷ್ಯನ್ ಕ್ರಾಂತಿ, ಕಮ್ಯೂನಿಸ್ಟ್ ಚಳುವಳಿ, ದೇಶದ ಸ್ವಾತಂತ್ರ್ಯ ಚಳುವಳಿ ಮೊದಲಾದ ರಾಜಕೀಯ ವಿದ್ಯಮಾನಗಳು ಸ್ತ್ರೀಯರ ಬರಹಗಳ ಮೇಲೆ ಸಾಕಷ್ಟು ಪ್ರಭಾವ ಬೀರಿದವು. ವಸಾಹತುಶಾಹಿ, ನವ ವಸಾಹತುಶಾಹಿ, ಫೂಕುಯಾಮನ ಪ್ರಪಂಚದ ಅಂತ್ಯದ ಕುರಿತಾದ ಸಿದ್ಧಾಂತ, ಜಾಗತೀಕರಣ, ಪರಿಸರ ರಕ್ಷಣೆಯ ಅಗತ್ಯ, ಅಭಿವೃದ್ಧಿ ಮತ್ತು ಮುಂದುವರಿಕೆಗಳು ಮಹಿಳಾ ಬರಹಗಳಲ್ಲಿ ಉಲ್ಲೇಖಿತವಾದವು. ಈ ಸಂಘರ್ಷ ಹಾಗೂ ಚಳುವಳಿಗಳ ಹೊರತಾಗಿಯೂ ಮಹಿಳೆಯರು ಅಧೀನ ಸ್ಥಾನಗಳಲ್ಲೇ ಉಳಿದು ಬಿಡುವ ಮತ್ತು ಸಮಾನ ಅವಕಾಶಗಳಿಗಾಗಿ ಹೋರಾಡುತ್ತಲೇ ಇರಬೇಕಾದ ಪರಿಸ್ಥಿತಿಯನ್ನು ವ್ಯಂಗ್ಯವನ್ನು ಮಹಿಳಾ ಬರಹಗಳು ಬಿಂಬಿಸಿದವು.

ಇಪ್ಪತ್ತನೆಯ ಶತಮಾನದ ಆರಂಭ ಕಾಲದಲ್ಲಿ ಕೆಲವು ಸಾಮಾಜಿಕ ಪರಿವರ್ತನೆಗಳೂ ಆದವು. ಈ ಪರಿವರ್ತನೆಗಳ ಹಿಂದೆ ಪುರುಷ ಸಾಹಿತಿಗಳೂ ಸಾಕಷ್ಟು ಕೆಲಸ ಮಾಡಿದರು. ಅವರ ಸಹಕಾರದ ಪರಿಣಾಮವಾಗಿಯೇ ಆಧುನಿಕತೆಯು ಕೇರಳದೊಳಗೆ ಹೆಜ್ಜೆಯಿಟ್ಟಿತು. ಆ ದಿನಗಳು ಎಲ್ಲೆಲ್ಲೂ ಪ್ರತಿಭಟನೆ ಮತ್ತು ಮುಷ್ಕರ-ಮೆರವಣಿಗೆಗಳ ಕಾಲವಾಗಿತ್ತು. ಭೂ ಮಾಲೀಕರಾಗಿದ್ದ ಬ್ರಾಹ್ಮಣ ಮತ್ತು ಇತರ ಮೇಲ್ಜಾತಿಯವರು ಕೆಳಜಾತಿಯವರನ್ನು ತಮಗೆ ಮನಬಂದಂತೆ ದುಡಿಸಿಕೊಂಡು ಅವರನ್ನು ಶೋಷಿಸುತ್ತ ಕಳೆಯುತ್ತಿದ್ದುದನ್ನು ಸಹಿಸಲಾಗದೆ ದಮನಿತರು ದಂಗೆಯೆದ್ದ ಕಾಲವಾಗಿತ್ತು. ಸಂತ ಕವಿ ಹಾಗೂ ಸಮಾಜ ಸುಧಾರಕರಾದ ಶ್ರೀನಾರಾಯಣ ಗುರು ಮತ್ತು ಪ್ರಸಿದ್ಧ ಕವಿ ಕುಮಾರನ್ ಆಶಾನ್ ಇವರುಗಳ ನೇತೃತ್ವದಲ್ಲಿ ನಡೆದ ಚಳುವಳಿಯ ಪರಿಣಾಮವಾಗಿ ಈಳವ ಸಮುದಾಯದ ಜೀವನದ ರೀತಿ ನೀತಿಗಳು ಬದಲಾಗಿದ್ದು ಶೋಷಣೆಗೊಳಗಾಗಿದ್ದ ಇತರ ಸಮುದಾಯಗಳ ಗಮನವನ್ನೂ ಸೆಳೆಯಿತು. ಶ್ರೀನಾರಾಯಣ ಗುರುಗಳು ತಮ್ಮ ಸಮುದಾಯದ ಬಿಡುಗಡೆಗಾಗಿ ದುಡಿದದ್ದು ಮಾತ್ರವಲ್ಲದೆ ತಮ್ಮ ‘ಒಂದೇ ಜಾತಿ, ಒಂದೇ ಧರ್ಮ, ಒಂದೇ ದೈವ’ ಎಂಬ ಸಂದೇಶದ ಮೂಲಕ ಇಡೀ ಮಾನವ ಕುಲದಲ್ಲಿ ಐಕ್ಯತೆಯನ್ನು ತರಲು ಪ್ರಯತ್ನಿಸಿದರು. 1903ರಲ್ಲಿ ಅವರು ‘ಶ್ರೀನಾರಾಯಣಗುರು ಧರ್ಮ ಪರಿಪಾಲನಾ ಸಭೆ’ಯನ್ನು ಸ್ಥಾಪಿಸಿದರು.

ಅಯ್ಯಂಕಾಳಿ ಎಂಬ ಇನ್ನೋರ್ವ ಸುಧಾರಕರು ದಲಿತರ ಉದ್ಧಾರಕ್ಕಾಗಿ ‘ಪುಲಯ ಮಹಾಜನ ಸಾಧುಜನ ಪರಿಪಾಲನಾ ಸಭೆ’ ಎಂಬ ಸಂಸ್ಥೆಯನ್ನು 1905ರಲ್ಲಿ ಸ್ಥಾಪಿಸಿದರು. ಕ್ರೈಸ್ತರು ಕಥೊಲಿಕ ಕಾಂಗ್ರೆಸನ್ನೂ ನಾಯರ್ ಸಮುದಾಯದವರು ಕೇರಳ ನಾಯರ್ ಸಮಾಜವನ್ನೂ ನಂಬೂದಿರಿಗಳು ನಂಬೂದಿರಿ ಯೋಗಕ್ಷೇಮಸಭಾವನ್ನೂ ಸ್ಥಾಪಿಸಿದರು. ಇವರೆಲ್ಲರೂ ಸಮಾಜ ಸುಧಾರಣೆಗಾಗಿ ಪ್ರಯತ್ನಿಸುತ್ತ ತಮ್ಮ ಹಕ್ಕುಗಳನ್ನು ಸ್ಥಾಪಿಸಲು ಪ್ರಯತ್ನಿಸಿದರು. ಮುಸ್ಲಿಮರ ಖಿಲಾಫತ್ ಚಳುವಳಿಯ ಬೇರುಗಳೂ ಆಗಲೇ ಹುಟ್ಟಿಕೊಂಡವು. ಕುಮಾರನ್ ಆಶಾನ್ ಕೆಳವರ್ಗದ ದಲಿತ ಮತ್ತು ದಮನಿತ ವರ್ಗದ ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸದ ಅವಕಾಶಕ್ಕಾಗಿ ವಾದಿಸಿದರು. ಅವರು ತಮ್ಮ ‘ಚಂಡಾಲ ಭಿಕ್ಷುಕಿ’ ಮತ್ತು ‘ದುರವಸ್ಥ’ ಎಂಬ ಕಾವ್ಯಗಳ ಕೇಂದ್ರಗಳಲ್ಲಿ ಸ್ತ್ರೀಯರ ಶಿಕ್ಷಣಕ್ಕೆ ಪ್ರಾಮುಖ್ಯ ನೀಡಿದರು. ಮಹಾಕವಿ ಉಳ್ಳೂರು ಪರಮೇಶ್ವರ ಅಯ್ಯರ್ ಕೂಡಾ ತಮ್ಮ ‘ವಿದ್ಯಯುಡೆ ಮಾಹಾತ್ಮ್ಯಮ್’ ಎಂಬ ಕಾವ್ಯದಲ್ಲಿ ಹೆಣ್ಣಿಗೆ ಶಿಕ್ಷಣ ನೀಡಿದರೆ ಅವಳು ಹುಟ್ಟಿದ ಮನೆಯನ್ನೂ ಸೇರಿದ ಮನೆಯನ್ನೂ ಬೆಳಗುತ್ತಾಳೆ ಮತ್ತು ಭವಿಷ್ಯದ ತಲೆಮಾರನ್ನೂ ರೂಪಿಸುತ್ತಾಳೆ ಎಂದರು.

ಸ್ವತಂತ್ರರಾಗುವ ಅವಕಾಶ: ನಂಬೂದಿರಿ ಸಮುದಾಯದಲ್ಲೂ ವಿ.ಟಿ. ಭಟ್ಟಾದಿರಿಪ್ಪಾಡ್, ಎಂ.ಆರ್.ಬಿ. ಇ.ಎಂ.ಎಸ್. ನಂಬೂದಿರಿಪ್ಪಾಡ್ ಮೊದಲಾದ ಯುವಕರು ತಮ್ಮ ಸಮುದಾಯದ ಸ್ತ್ರೀಯರ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಅವರಲ್ಲಿ ಪಾರ್ವತಿ ನೆನ್ಮಿನಿಮಂಗಲಂ, ಆರ್ಯಾ ಪಳ್ಳಂ, ಲಲಿತಾಂಬಿಕಾ ಅಂತರ್ಜನಂ ಮೊದಲಾದ ಯುವತಿಯರೂ ಇದ್ದರು. ಅವರು ನಂಬೂದಿರಿ ಸಮುದಾಯದಲ್ಲಿ ಚಾಲ್ತಿಯಲ್ಲಿದ್ದ ಅನೇಕ ಅರ್ಥಹೀನ ಹಾಗೂ ಮಹಿಳಾ ವಿರೋಧಿ ಸಂಪ್ರದಾಯಗಳನ್ನು ದಿಟ್ಟತನದಿಂದ ವಿರೋಧಿಸಿದರು. ಅವರೆಲ್ಲರೂ ಸೇರಿ ಹೊಸ ನಾಟಕಗಳನ್ನು ಬರೆದು ವೇದಿಕೆಗೆ ತಂದರು. ‘ಅಡುಕ್ಕಳಯಿಲ್ ನಿನ್ನು ಅರಙತ್ತೇಕ್ಕು ‘( ಅಡುಗೆಮನೆಯಿಂದ ರಂಗವೇದಿಕೆಗೆ) ಎಂಬ ನಾಟಕವು ಸಂಪ್ರದಾಯವಾದಿ ಪುರೋಹಿತಶಾಹಿಯ ವಿರುದ್ಧವೂ,, ‘ತೊಳಿಲ್ ಕೇಂದ್ರತ್ತಿಲೇಕ್ಕ್’ ( ಉದ್ಯೋಗ ಕೇಂದ್ರಗಳತ್ತ) ಎಂಬ ನಾಟಕವು ಪುರುಷಾಧಿಕಾರದ ವಿರುದ್ಧವೂ ಆಗಿದ್ದವು. ಇದರ ಪರಿಣಾಮವಾಗಿ ನಂಬೂದಿರಿ ಸ್ತ್ರೀಯರಿಗೆ ಅಡುಗೆ ಮನೆಯ ಕತ್ತಲೆಯಿಂದ ಹೊರಗೆ ಬಂದು ಶಿಕ್ಷಣ ಪಡೆದು ಉದ್ಯೋಗಕ್ಕೆ ಹೋಗಿ ಆರ್ಥಿಕವಾಗಿ ಸ್ವತಂತ್ರರಾಗುವ ಅವಕಾಶಗಳು ಲಭಿಸಿದವು.

19ನೆಯ ಶತಮಾನದ ಕೊನೆ ಮತ್ತು 20ನೆಯ ಶತಮಾನದ ಆರಂಭದಲ್ಲಿ ಸಾಮಾಜಿಕ ಕ್ರಾಂತಿಯನ್ನು ಉಂಟು ಮಾಡಿದ ಇನ್ನು ಕೆಲವು ಘಟಗಳು ‘ಮಾರು ಮರಯ್ಕಲ್ ಸಮರಂ’ ( ಎದೆ ಮರೆಸುವುದನ್ನು ನಿಷೇಧಿಸುವ ಮುಷ್ಕರ) ‘ಘೋಷ ಬಹಿಷ್ಕಾರಂ’ ( ಮುಖ ಮರೆಸುವುದರ ವಿರುದ್ಧ ಮುಷ್ಕರ). ಕಮ್ಯೂನಿಸ್ಟ್ ಚಳುವಳಿ, ದೇವಸ್ಥಾನ ಪ್ರವೇಶ ಚಳುವಳಿ ಇತ್ಯಾದಿಗಳಾಗಿದ್ದವು. ಕೊಚ್ಚಿ ರಾಜ ರಾಮವರ್ಮರು( 1895-1914) ‘ಹೆಣ್ಣುಮಕ್ಕಳು ರವಿಕೆ ಧರಿಸಿ ದೇವಸ್ಥಾನಕ್ಕೆ ಬರಬಹುದು’ ಎಂಬ ಆಜ್ಞೆ ಹೊರಡಿಸಿದರು. ಸಿ.ವಿ.ಕುಞರಾಮನ್ ಅವರ ಅತ್ತೆ ತಮ್ಮ ಸೊಸೆ ರವಿಕೆ ಧರಿಸಿದ್ದಾಕ್ಕಾಗಿ ‘ ಉಮ್ಮಚ್ಚಿಗಳಂತೆ (ಮುಸಲ್ಮಾನ ಹೆಂಗಸರು) ಮೇಲುದಗಳನ್ನು ಧರಿಸಕೂಡದೆಂದು ಬೈದರು. ಮನ್ನತ್ತು ಪದ್ಮನಾಭನ್ ಎಂಬ ಸಮಾಜ ಸೇವಕರು ‘ದೇವಸ್ಥಾನದೊಳಗಿನ ದೇವರು ನಾಯರ್ ಹೆಂಗಸರು ರವಿಕೆ ಧರಿಸಿದ್ದಾರೆಯೇ ಇಲ್ಲವೇ ಎಂದು ನೋಡುವುದಾದರೆ ಹೆಂಗಸರು ದೇವಸ್ಥಾನಗಳಿಗೆ ಹೋಗದಿರುವುದೇ ಒಳ್ಳೆಯದು’ ಎಂದರು (1931). ರವಿಕೆ ಧರಿಸಬೇಕಿದ್ದರೆ ಕೆಳಜಾತಿಯ ಹೆಂಗಸರು ತೆರಿಗೆ ಕೊಡಬೇಕಾಗಿದ್ದ ರಾಜ್ಯವಾಗಿತ್ತು ಅಂದಿನ ಕೇರಳ. ದಮನಿತ ವರ್ಗದ, ಬ್ರಿಟಿಷ್ ಕಾಲನಿಯಲ್ಲಿ ವಾಸಿಸುತ್ತಿದ್ದ ಒಬ್ಬ ಸ್ತ್ರೀ ರವಿಕೆ ಧರಿಸಿ ಓಡಾಡಿದಾಗ ಅತ್ತಿಂಗಲ್‍ನ ರಾಣಿಯ ( ಎರ್ನಾಕುಳಂ) ಸಿಟ್ಟಿಗೆ ಗುರಿಯಾದಳು. ಮಾತ್ರವಲ್ಲದೆ ಆ ರಾಣಿ ಆಕೆಯ ಮೊಲೆಗಳನ್ನು ಕತ್ತರಿಸಲು ಆಜ್ಞೆ ಮಾಡಿದಳು. ಕೇರಳದ ಸ್ತ್ರೀಯರು ತಮ್ಮ ಮೂಲಭೂತ ಹಕ್ಕುಗಳಿಗಾಗಿ ಇಷ್ಟೊಂದು ಹೋರಾಟ ಮಾಡಬೇಕಾದ ಪರಿಸ್ಥಿತಿಯಿತ್ತು. (ಸಶೇಷ)

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *