ಹಿಂದಣ ಹೆಜ್ಜೆ/ ಭಾರತದಲ್ಲಿ ಮಹಿಳಾ ಸುಧಾರಣೆಯ ಹರಿಕಾರ ವಿದ್ಯಾಸಾಗರ – ಎನ್. ಗಾಯತ್ರಿ


ಇಂದು ಈಶ್ವರಚಂದ್ರ ವಿದ್ಯಾಸಾಗರರ 200ನೇ ಹುಟ್ಟಿದ ದಿನ. ಹತ್ತೊಂಭತ್ತನೇ ಶತಮಾನದ ಭಾರತದ ಇತಿಹಾಸದಲ್ಲಿ ಘಟಿಸಿದ ಪುನರುತ್ಥಾನದ ಅವಧಿಯಲ್ಲಿ ಬದುಕಿದ ಈಶ್ವರ ಚಂದ್ರರು ಈ ದೇಶದ ಪುನರುತ್ಥಾನಕ್ಕೆ ಖಚಿತವೂ, ವೈಶಿಷ್ಟ್ಯಪೂರ್ಣವೂ ಆದ ಮಹತ್ತರ ಕೊಡುಗೆ ನೀಡಿದ ಮಹನೀಯರಲ್ಲಿ ಪ್ರಮುಖರು. ಸ್ತ್ರೀಯರ ವಿದ್ಯಾಭ್ಯಾಸ, ಬಹುಪತ್ನಿತ್ವದ ನಿರ್ಮೂಲನಕ್ಕಾಗಿ ಹೋರಾಟ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ವಿಧವೆಯರ ಪುನರ್ವಿವಾಹ – ಈ ಸಾಧನೆಗಳಿಂದಾಗಿ ಭಾರತದಲ್ಲಿ ಮಹಿಳಾ ಸುಧಾರಣೆಯ ಹರಿಕಾರರಾದರು.

ಹತ್ತೊಂಭತ್ತನೇ ಶತಮಾನವು ಭಾರತದ ಇತಿಹಾಸದಲ್ಲಿ ಒಂದು ಗಮನಾರ್ಹ ಘಟ್ಟ. ಆಗ ಬ್ರಿಟಿಷ್ ಆಳ್ವಿಕೆಯು ಮಹತ್ವದ ಮೈಲಿಗಲ್ಲುಗಳನ್ನು ಸ್ಥಾಪಿಸಿತು. ಇದು ಏಕಕಾಲಕ್ಕೆ, ಹಾನಿಕಾರಕವೂ, ಪ್ರಯೋಜನಕಾರಿಯೂ ಆಗಿತ್ತು. ಇದನ್ನೇ ಕಾರ್ಲ್ ಮಾಕ್ರ್ಸ್ ತನ್ನ “ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ಭವಿಷ್ಯದ ಪರಿಣಾಮಗಳು” ಲೇಖನದಲ್ಲಿ ಹೀಗೆ ಗುರುತಿಸಿರುವುದು: “ಭಾರತದಲ್ಲಿ ಇಂಗ್ಲೆಂಡ್ ಎರಡು ರೀತಿಯ ಉದ್ದೇಶಗಳನ್ನು ನಿರ್ವಹಿಸಲಿದೆ: ಒಂದು ವಿನಾಶಕಾರಿಯಾದದು, ಮತ್ತೊಂದು ಸೃಷ್ಟ್ಯಾತ್ಮಕವಾದದ್ದು. ಏಷ್ಯಾಕ್ಕೆ ವಿಶಿಷ್ಟವಾದ ಉತ್ಪಾದನಾ ವೈಖರಿಯನ್ನು ಧ್ವಂಸ ಮಾಡಿ, ಏಷ್ಯಾದಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳ ಭೌತಿಕ ತಳಹದಿಯನ್ನು ಸ್ಥಾಪಿಸಿ ಸುಪ್ತ ಚೈತನ್ಯವನ್ನು ಹೊರಹೊಮ್ಮುವಂತೆ ಮಾಡುವುದೇ ಆಗಿದೆ.”


ಇಂಗ್ಲಿಷ್ ಆಳ್ವಿಕೆಯಿಂದಾಗಿ ಇಂಗ್ಲಿಷ್ ಶಿಕ್ಷಣ ಮತ್ತು ಸಂಸ್ಕೃತಿಯು ಬೀರಿದ ಪ್ರಭಾವದಿಂದ ದೇಶದೆಲ್ಲೆಡೆ ಬದಲಾವಣೆಯ ಗಾಳಿ ಬೀಸಲಾರಂಭಿಸಿತು. ಹಲವಾರು ಸುಧಾರಣಾ ಚಳುವಳಿಗಳು ಹುಟ್ಟಿಕೊಂಡವು. ಅದರಲ್ಲೂ ವಿಶೇಷವಾಗಿ ಬಂಗಾಲ ಮತ್ತು ಮಹಾರಾಷ್ಟ್ರದಲ್ಲಿ ಹುಟ್ಟಿಕೊಂಡ ಸುಧಾರಣೆಯ ಕಿಚ್ಚು ಇಡೀ ದೇಶವನ್ನು ವ್ಯಾಪಿಸಿತು. ಇಂಗ್ಲಿಷ್ ಶಿಕ್ಷಣ ಮತ್ತು ಸುಧಾರಣಾವಾದಿ ಚಳುವಳಿಗಳು ಹೆಣ್ಣನ್ನು ಕುರಿತ ಚಿಂತನೆಯ ಮೇಲೂ ಪ್ರಭಾವ ಬೀರಿದವು. ಅದುವರೆವಿಗೂ ಮಹಿಳೆಯರಿಗೆ ವಿದ್ಯಾಭ್ಯಾಸವೆನ್ನುವುದು ಗಗನ ಕುಸುಮವಾಗಿತ್ತು. ಈಗ ಅವರೂ ಅದನ್ನು ಕಷ್ಟಪಟ್ಟು ಸ್ಪರ್ಶಿಸುವ ಪ್ರಯತ್ನ ಮಾಡಿದರು. ಬಾಲ್ಯ ವಿವಾಹ, ವಿಧವೆಯ ದುಃಸ್ಥಿತಿ, ಸತಿಪದ್ಧತಿಗಳು ಕರ್ಮಸಿದ್ಧಾಂತದೊಳಗೆ ಅನುಭವಿಸಲೇಬೇಕಾದ ಅನಿವಾರ್ಯ ಸ್ಥಿತಿಯೆನಿಸಿದ್ದುದು ಈಗ ಸಮಾಜ ಕಂಟಕದಂತೆ ಗೋಚರಿಸಲು ಪ್ರಾರಂಭಿಸಿತು. ಈ ಅರಿವನ್ನುಂಟುಮಾಡಿಸಿ ಭಾರತೀಯ ಮಹಿಳೆಯರನ್ನು ದೌರ್ಜನ್ಯದ ಕೂಪದಿಂದ ಮುಕ್ತರನ್ನಾಗಿಸಿದವರಲ್ಲಿ ಇಂಗ್ಲಿಷ್ ಶಿಕ್ಷಣ ಪಡೆದ ಭಾರತೀಯ ಮಹನೀಯರು ಹಲವಾರು. ಬಂಗಾಲದ ರಾಜಾ ರಾಮಮೋಹನ್ ರಾಯ್, ಈಶ್ವರಚಂದ್ರ ವಿದ್ಯಾಸಾಗರ, ಮಹಾರಾಷ್ಟ್ರದ ಮಹಾತ್ಮ ಜೋತಿಬಾಫುಲೆ, ಮಹರ್ಷಿ ಕರ್ವೆ, ದಯಾನಂದಸರಸ್ವತಿ ಮುಂತಾದವರು.


ಬಂಗಾಲದ ಮಿಡ್ನಾಪುರ್ ಜಿಲ್ಲೆಯ ಬಿರಸಿಂಘಾ ಎಂಬ ಹಳ್ಳಿಯಲ್ಲಿ 1020ರ ಸೆಪ್ಟೆಂಬರ್ 26ರಂದು ಜನಿಸಿದ ಈಶ್ವರಚಂದ್ರರ ತಂದೆ ಠಾಕೂರದಾಸ ಬಂಡೋಪಾಧ್ಯಾಯ ಮತ್ತು ತಾಯಿ ಭಗವತಿದೇವಿ. ಚಿಕ್ಕಂದಿನಲ್ಲಿ ಅವರ ಹಳ್ಳಿಯಲ್ಲಿಯೇ ವ್ಯಾಸಂಗಮಾಡುತ್ತಿದ್ದ ಈಶ್ವರಚಂದ್ರನನ್ನು ಅವನ ಗುರುವಾದ ಕಾಳಿಕಾಂತ ಚಟ್ಟೋಪಾಧ್ಯಾಯರ ಸಲಹೆಯಂತೆ ಹೆಚ್ಚಿನ ವಿದ್ಯಾಭ್ಯಾಸ ಕೊಡಿಸಲು ಎಂಟು ವರ್ಷದ ಬಾಲಕನನ್ನು ಕಲ್ಕತ್ತೆಗೆ ತಂದೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಓದಿ ಪಂಡಿತನಾದ ಈಶ್ವರಚಂದ್ರನಿಗೆ ‘ಹಿಂದೂ ಲಾ ಪರೀಕ್ಷಕ ಸಮಿತಿ’ಯವರು ‘ವಿದ್ಯಾಸಾಗರ’ ಎಂಬ ಬಿರುದಿನೊಂದಿಗೆ ಪದವಿಪ್ರದಾನಮಾಡುತ್ತಾರೆ. ಇಲ್ಲಿಂದ ಮುಂದಕ್ಕೆ ಅವನ ಮೂಲ ಹೆಸರೇ ಮರೆಯುವಂತೆ ಅವರಿಗೆ ವಿದ್ಯಾಸಾಗರ ಎಂಬ ಹೆಸರು ಸ್ಥಾಯಿಯಾಗಿ ನಿಲ್ಲುತ್ತದೆ. ಇದು ಅನ್ವರ್ಥವೂ ಆಗುತ್ತದೆ. ಅವರ ವಿದ್ವತ್ತು ಸಾಗರದಂತೆ ವಿಶಾಲವಾಗಿದ್ದುದಲ್ಲದೆ, ಅವರು ಸಾಮಾನ್ಯ ಜನರಿಗೆ ಶಿಕ್ಷಣದ ದೀಪ ಹಚ್ಚುವ ಮಹಾನ್ ಕಾಯಕದಲ್ಲಿ ತೊಡಗುತ್ತಾರೆ.


‘ಆಧುನಿಕ ಭಾರತದ ಪಿತಾಮಹ’ ಎಂದೇ ಕರೆಯಲ್ಪಡುವ ಬಂಗಾಲದ ರಾಜಾ ರಾಮಮೋಹನರಾಯರ ಉತ್ತರಾಧಿಕಾರಿಯೆಂದೇ ಈಶ್ವರಚಂದ್ರ ವಿದ್ಯಾಸಾಗರರು ಗುರುತಿಸಲ್ಪಡುತ್ತಾರೆ. ದೇಶದ ಪುನರುತ್ಥಾನಕ್ಕಾಗಿ ಖಚಿತವೂ, ವೈಶಿಷ್ಟ್ಯಪೂರ್ಣವೂ ಆದ ಮಹತ್ತರ ಕೊಡುಗೆ ಇತ್ತವರಲ್ಲಿ ಶ್ರೀ ಈಶ್ವರಚಂದ್ರ ವಿದ್ಯಾಸಾಗರ ಅವರು ಅಗ್ರಗಣ್ಯರು. ಸ್ತ್ರೀ ಶಿಕ್ಷಣ ಮತ್ತು ವಿಧವಾ ವಿವಾಹದ ಸಮಸ್ಯೆಗಳನ್ನು ಸಮರ್ಥವಾಗಿ ಪರಿಹರಿಸುವತ್ತ ದಿಟ್ಟ ಹೆಜ್ಜೆ ಇಟ್ಟರು. ಬಂಗಾಲದ ಶ್ರೇಷ್ಠ ಶಿಕ್ಷಣತಜ್ಞರಾಗಿ ಪ್ರಖ್ಯಾತರಾದ ಈಶ್ವರಚಂದ್ರರು ಜನಸಾಮಾನ್ಯರ ಅಜ್ಞಾನವನ್ನು ಹೊದೆದೋಡಿಸಲು ವಿದ್ಯೆ ಬಹುಮುಖ್ಯ ಅಸ್ತ್ರವೆಂದು ಮನಗಂಡರು ಹಾಗೂ ಈ ದಿಸೆಯತ್ತ ಕಾರ್ಯಪ್ರವೃತ್ತರಾದರು. 1948ರಲ್ಲಿ ಮಹಾರಾಷ್ಟ್ರದಲ್ಲಿ ಜ್ಯೋತಿ ಬಾಫುಲೆಯವರು ಹೆಣ್ಣುಮಕ್ಕಳಿಗಾಗಿ ಕನ್ಯಾಶಾಲೆಯೊಂದನ್ನು ಆರಂಭಿಸಿದ್ದರು. ಇದೇ ಸರಿ ಸುಮಾರಿಗೆ ಜಾನ್ ಡ್ರಿಂಕ್ ವಾಟರ್ ಬೆಥೂನ್ 1949ರಲ್ಲಿ ಆರಂಭಿಸಿದ್ದ ‘ಹಿಂದೂ ಬಾಲಿಕಾ ವಿದ್ಯಾಲಯ’ದ ಮೊದಲ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು. ಈ ಶಾಲೆಯೇ ಮುಂದೆ ‘ಬೆಥೂನ್ ಮಹಿಳಾ ವಿದ್ಯಾಲಯ’ವಾಯಿತು. 1856ರಲ್ಲಿ ವಿದ್ಯಾಸಾಗರರು ವಿಶೇಷ ಶಿಕ್ಷಣಾಧಿಕಾರಿಯಾಗಿ ನೇಮಕವಾದಾಗ ಹಲವಾರು ಶಾಲೆಗಳನ್ನು ಹುಡುಗಿಯರಿಗಾಗಿ ಸ್ಥಾಪಿಸುವತ್ತ ಶ್ರಮವಹಿಸಿದರು. ಕೇವಲ ಒಂದು ವರ್ಷದ ಅವಧಿಯಲ್ಲಿ ವಿದ್ಯಾಸಾಗರರ ಪ್ರಯತ್ನದ ಫಲವಾಗಿ ಬಂಗಾಲದಲ್ಲಿ ಮೂವತ್ತೈದು ಹುಡುಗಿಯರ ಶಾಲೆಗಳು ಆರಂಭವಾದವು. ಈ ಶಾಲೆಗಳಲ್ಲಿ 1300 ಬಾಲಕಿಯರು ಶಿಕ್ಷಣ ಪಡೆಯುತ್ತಿದ್ದರು. ಈ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಉಚಿತವಾಗಿ ವಿದ್ಯಾಭ್ಯಾಸ ದೊರೆಯುತ್ತಿತ್ತು.


ಅಂದು ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆಗಳಿಗೆ ಹುಡುಗಿಯರು ಹೋಗುತ್ತಿರಲಿಲ್ಲ. ಬೆಥೂನ್ ಶಾಲೆಯ ವಿದ್ಯಾರ್ಥಿನಿ ಕುಮಾರಿ ಕಾದಂಬನಿ ಬೋಸ್ 1878ರಲ್ಲಿ ಕಲ್ಕತ್ತ ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆಯನ್ನು ಮೊದಲ ಬಾರಿಗೆ ತೆಗೆದುಕೊಂಡು ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾದಳು. ಭಾರತದ ಮಹಿಳಾ ಶಿಕ್ಷಣದಲ್ಲಿ ಇದೊಂದು ಮಹತ್ವದ ಘಟನೆ. ಈ ಘಟನೆಯಿಂದ 1878ರ ಏಪ್ರಿಲ್‍ನಲ್ಲಿ ಕಲ್ಕತ್ತ ವಿಶ್ವವಿದ್ಯಾಲಯದ ಸೆನೆಟ್‍ನಲ್ಲಿ ‘ಕೆಲವೊಂದು ನಿಯಮಗಳಿಗೆ ಬದ್ಧವಾಗಿದ್ದಲ್ಲಿ ಮಹಿಳಾ ಅಭ್ಯರ್ಥಿಗಳನ್ನು ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆಗಳಿಗೆ ಸೇರಿಸಿಕೊಳ್ಳಬಹುದು’ ಎಂಬ ನಿರ್ಣಯವನ್ನು ಮಂಡಿಸಲಾಯಿತು. ಕುಮಾರಿ ಕಾದಂಬಿನಿ ಬೋಸ್ 1883ರಲ್ಲಿ ಮೊದಲ ಬಿ.ಎ. ಪದವೀಧರೆಯಾಗಿ ತೇರ್ಗಡೆ ಹೊಂದಿದಳು.


ವಿದ್ಯಾಸಾಗರರ ಜೀವನದ ಅತಿದೊಡ್ಡ ಸಾಧನೆಯೆಂದರೆ ವಿಧವಾ ವಿವಾಹವನ್ನು ಕಾನೂನಿನ ದೃಷ್ಟಿಯಲ್ಲಿ ಕ್ರಮಬದ್ಧಗೊಳಿಸಿದ್ದು. ಹಿಂದೂ ಸಮಾಜದ ಮತ್ತೊಂದು ಶಾಪ ವಿಧವಾ ಪಟ್ಟ. ಕುಲೀನತೆಯ ಹೆಸರಿನಲ್ಲಿ ಬಾಲ್ಯ ವಿವಾಹವನ್ನು ಆಚರಿಸುತ್ತಿದ್ದ ಹಿಂದೂಗಳಲ್ಲಿ ಬಾಲ ವಿಧವೆಯರು ಬಹಳಷ್ಟು ಸಂಖ್ಯೆಯಲ್ಲಿದ್ದರು. ಜಗತ್ತೆಂದರೆ ಏನೆಂದೂ ಅರಿಯದ ಮತ್ತು ಅಪ್ರಾಪ್ತ ವಯಸ್ಸಿನವರಿರುವಾಗಲೇ ವಿಧವೆಯರಾಗಿಬಿಡುತ್ತಿದ್ದ ಬಾಲಕಿಯರು ಜೀವನದುದ್ದಕ್ಕೂ ಕಷ್ಟವನ್ನು ಅನುಭವಿಸಬೇಕಿತ್ತು. ವಿಧವೆಯರ ಈ ಎಲ್ಲಾ ಸಮಯಗಳನ್ನು ಶಾಸ್ತ್ರಾಧಾರಸಹಿತವಾಗಿ ಅಭ್ಯಯಿಸಿದ ಈಶ್ವರ ಚಂದ್ರರು ಈ ವಿಷಯವನ್ನು ಕುರಿತಂತೆ ‘ಹಿಂದೂ ವಿಧವೆಯರ ವಿವಾಹ’ ಎಂಬ ಹೊತ್ತಿಗೆಯನ್ನು 1855ರಲ್ಲಿ ಬರೆದರು. ವಿದ್ಯಾಸಾಗರರ ಈ ಗ್ರಂಥ ಅಂದಿನ ಸಾಂಪ್ರದಾಯಿಕ ಸಮಾಜವನ್ನು ಅಲುಗಾಡಿಸಿತು. ಧರ್ಮಶಾಸ್ತ್ರದ ಹೆಸರಿನಲ್ಲಿ ಅವರು ಇದುವರೆಗೂ ನಡೆಸಿದ ದಬ್ಬಾಳಿಕೆಗೆ ಬಾರಿ ಪೆಟ್ಟನ್ನೇ ಕೊಟ್ಟಿತು. ಸಮಾಜದಲ್ಲಿ ಒಂದು ಬಾರಿ ಬಿರುಗಾಳಿಯನ್ನೇ ಎಬ್ಬಿಸಿದ ವಿಧವಾ ವಿವಾಹವನ್ನು ಸಮರ್ಥಿಸಿ ಬರೆದ ಈ ಗ್ರಂಥ ಪ್ರಕಟವಾದ ಏಳು ದಿನಗಳಲ್ಲಿ 2,000 ಪ್ರತಿಗಳು ಮಾರಾಟವಾಗಿದ್ದರಿಂದ ಅದರ 3000 ಪ್ರತಿಗಳನ್ನು ಮತ್ತೆ ಮುದ್ರಿಸಬೇಕಾಗಿಬಂತು. ಅದರ 10,000 ಪ್ರತಿಗಳನ್ನು ಮುದ್ರಿಸುವಷ್ಟು ಬೇಡಿಕೆ ಆ ಪುಸ್ತಕಕ್ಕೆ ಒದಗಿತು. ಆ ಗ್ರಂಥದ ಪ್ರಭಾವ ಕೇವಲ ವಿದ್ಯಾವಂತರಿಗೆ ಸೀಮಿತವಾಗಿ ಉಳಿಯಲಿಲ್ಲ. ಹಳ್ಳಿಗಳಲ್ಲೂ ಪಸರಿಸಿ ನಾಡಿನ ಮೂಲೆ ಮೂಲೆಗಳಲ್ಲಿ ಪ್ರಸಾರವಾಯಿತು. ಹಳ್ಳಿಗಳಲ್ಲಿನ ಜನ ಹಾಡುಗಳನ್ನು ಕಟ್ಟಿ ಹಾಡಹತ್ತಿದರು. ಹೆಣ್ಣು ಮಕ್ಕಳ ಸೀರೆಯ ಅಂಚುಗಳಲ್ಲಿ ವಿಧವಾ ಪುನರ್ವಿವಾಹವನ್ನು ಬೆಂಬಲಿಸುವ ಹಾಡುಗಳ ಸಾಲುಗಳು ಅಚ್ಚುಮಾಡಿಕೊಂಡಿದ್ದರು.


ವಿಧವೆಯರ ಪುನರ್ವಿವಾಹದ ಬಗ್ಗೆ ಮತ್ತೊಂದು ಪುಸ್ತಕವನ್ನು ಬರೆಯುತ್ತಾರೆ. ಅವರ ಈ ಎರಡನೆಯ ಪುಸ್ತಕದಲ್ಲಿ “ ಸಾಮಾಜಿಕ ಆಚರಣೆಗಳು ಶಾಸ್ತ್ರಗಳ ಮೇಲೆ ಕುಳಿತು ಧರ್ಮವನ್ನು ಛಿದ್ರಿಸಿ ಒಳ್ಳೆಯದು-ಕೆಟ್ಟದ್ದು ಎಂಬ ವಿಚಾರಶೀಲತೆಯನ್ನು ಭಂಗಗೊಳಿಸಿ, ನ್ಯಾಯ-ಅನ್ಯಾಯಗಳ ವಿವೇಚನೆಯ ದೃಷ್ಟಿಯನ್ನು ಸಂಪೂರ್ಣವಾಗಿ ನಾಶಗೊಳಿಸಿದೆ” ಎಂದು ಬರೆದರು. ಕ್ರಿ.ಶ. 1856ರಲ್ಲಿ ತಮ್ಮ ಈ ಎರಡೂ ಗ್ರಂಥಗಳನ್ನು ಇಂಗ್ಲಿಷ್ ಭಾಷೆಯಲ್ಲಿ ಭಾಷಾಂತರ ಮಾಡಿಸಿ ‘ Marriage of Hindu Widows’ ’ ಎಂಬ ಗ್ರಂಥವನ್ನು ಪ್ರಕಟಿಸಿದರು. ಅವರ ವೈರಿಗಳು ವಿದ್ಯಾಸಾಗರರ ಮೇಲೆ ಬೈಗುಳ, ಅವಮಾನಗಳನ್ನು ಸುರಿಸುತ್ತಿದ್ದುದಲ್ಲದೆ, ದೈಹಿಕವಾಗಿಯೂ ಅವರ ಮೇಲೆ ಹಲ್ಲೆ ಮಾಡುತ್ತಿದ್ದರು.


ತಾತ್ವಿಕವಾಗಿ ಎಷ್ಟೇ ಕ್ರಾಂತಿಕಾರಕವಾಗಿದ್ದರೂ ಈ ಪುಸ್ತಕಗಳ ಪ್ರಸಾರದಿಂದಷ್ಟೇ ಸಮಸ್ಯೆಗೆ ಪರಿಹಾರ ದೊರೆಯುವಂತಿರಲಿಲ್ಲ. ಆದ್ದರಿಂದ ವಿಧವಾ ಪುನರ್ವಿವಾಹವನ್ನು ಕಾನೂನು ಮನ್ನಿಸುವಂತೆ ಮಾಡಲು ಕಾನೂನಿನ ಹೋರಾಟ ಕೈಗೊಂಡರು. ಸಮಾಜದ 987 ಮಂದಿ ಪ್ರಗತಿಪರರ ಸಹಿ ಮಾಡಿಸಿ, ಇಂಡಿಯನ್ ಲೆಜಿಸ್ಲೇಟಿವ್ ಕೌನ್ಸಿಲ್ಲಿಗೆ ಮನವಿಯನ್ನು ಸಲ್ಲಿಸಿದರು. ಆ ಕೌನ್ಸಿಲ್ಲಿನ ಸದಸ್ಯರಲ್ಲೊಬ್ಬರಾದ ಜಿ.ವಿ. ಗ್ರಾಂಟ್ ಎನ್ನುವರು 1855ರ ನವೆಂಬರ್ 17ರಂದು ಈ ವಿಷಯಕ್ಕೆ ಸಂಬಂಧಿಸಿದ ಮಸೂದೆಯನ್ನು ಮಂಡಿಸಿದರು. ಅದನ್ನು ಮಂಡಿಸುವಾಗ ಅವರು ತಮ್ಮ ಭಾಷಣದಲ್ಲಿ ವಿದ್ಯಾಸಾಗರರ ಬಗ್ಗೆ ಪ್ರಸ್ತಾಪಿಸುತ್ತಾ “ಪಂಡಿತರೂ, ಪ್ರಖ್ಯಾತ ಸಮಾಜ ಸುಧಾರಕರೂ, ಸಂಸ್ಕೃತ ಕಾಲೇಜಿನ ಪ್ರಿನ್ಸಿಪಾಲರೂ ಆದ ವಿದ್ಯಾಸಾಗರರು ಈ ಆಂದೋಳನದ ಮುಂದಾಳುವಾಗಿದ್ದಾರೆ. ಆ ಆಂದೋಲನದ ಪರಿಣಾಮವಾಗಿಯೇ ಈ ಮಸೂದೆ ರೂಪುಗೊಂಡಿದೆ.” ಎಂದು ಹೇಳಿದರು. ಈ ಸಭೆಯನ್ನು ಕುರಿತು ಸಾಕಷ್ಟು ಚರ್ಚೆಗಳಾದವು. ಈ ಮಸೂದೆಯನ್ನು ಬೆಂಬಲಿಸಿ 25 ಅರ್ಜಿಗಳು, 5000 ಸಹಿಗಳು ಸಂಗ್ರಹವಾಗಿದ್ದರೆ, ಇದನ್ನು ಪ್ರತಿಭಟಿಸಿ 40 ಅರ್ಜಿಗಳು ಮತ್ತು 60,000 ಸಹಿಗಳು ಸಂಗ್ರಹವಾಗಿದ್ದವು. ಇಷ್ಟೆಲ್ಲ ವಿರೋಧಗಳ ನಡುವೆಯೂ 1856ರ ಜುಲೈ 26ರಂದು ವಿಧವಾ ಮರುವಿವಾಹ ಕಾಯಿದೆಯು ಸೆಕ್ಷನ್ 15ನೇ ಕಾಲಂನಲ್ಲಿ ಕಾನೂನು ಆಗಿ ಜಾರಿಯಾಯಿತು.
ವಿದ್ಯಾಸಾಗರರು ವಿಧವಾ ವಿವಾಹದ ಕಾನೂನು ಜಾರಿಯಾದ ತಕ್ಷಣ ಅದನ್ನು ಅನುಷ್ಠಾನಕ್ಕೆ ತರಲು ತವಕಿಸಿದರು. 1856ರ ಡಿಸೆಂಬರ್ 7ರಂದು ಮೊದಲ ವಿಧವಾ ವಿವಾಹ ನದೆಯಿತು. ಹತ್ತು ವರ್ಷದ ಬಾಲವಿಧವೆ ಕಾಲಿಮತಿ ದೇವಿಗೂ, ವಿದ್ಯಾಸಾಗರರ ಸಹೋದ್ಯೋಗಿಯಾಗಿದ್ದ ಪಂದಿತ ಶ್ರೀಚಂದ್ರ ವಿದ್ಯಾರತ್ನ ಎಂಬುವರಿಗೂ ವಿವಾಹ ನೆರವೇರಿತು. ಇದು ಭಾರತದ ಇತಿಹಾಸದಲ್ಲಿ ದಾಖಲೆಯಾಗಿರುವ ಮೊದಲ ವಿಧವಾ ವಿವಾಹ. ಈ ಸಂದರ್ಭದಲ್ಲಿ ವಿದ್ಯಾಸಾಗರರು ಮನೆಯಿಂದ ಹೊರಗೆ ಎಲ್ಲೇ ಕಾಣಿಸಿಕೊಳ್ಳಲಿ, ಸಾರ್ವಜನಿಕರಿಂದ ಹಲ್ಲೆಗೊಳಗಾಗುತ್ತಿದ್ದರು. ನಂತರದ ದಿನಗಳಲ್ಲಿ ಅವರ ಮಗ ನಾರಾಯಣಚಂದ್ರನೂ ವಿಧವೆಯನ್ನು ವಿವಾಹವಾದ. ಅದರಿಂದಾಗಿ ಅವರ ಬಂಧುಗಳು ಅವರನ್ನು ಜಾತಿಯಿಂದ ಹೊರಹಾಕುವ ಬೆದರಿಕೆ ಹಾಕಿದರು. ಅದಕ್ಕೆ ಅವರು ಜಗ್ಗಲಿಲ್ಲ.


ಆಗಿನ ಕಾಲದಲ್ಲಿ ಪ್ರಚಲಿತವಿದ್ದ ಕುಲೀನ ಪದ್ಧತಿಯ ಕಾರಣದಿಂದಾಗಿ ಹೆಣ್ಣುಮಕ್ಕಳಿಗೆ ಅಪ್ರಾಪ್ತರಿರುವಾಗಲೇ ಮದುವೆ ಮಾಡದಿದ್ದರೆ, ಮುಂದೆ ಅವರೆಲ್ಲಿ ಆಜೀವಪರ್ಯಂತ ಅವಿವಾಹಿತರಾಗಿಯೇ ಉಳಿದುಬಿಡುತ್ತಾರೋ ಎಂಬ ಆತಂಕ ಹೆತ್ತ ತಂದೆ-ತಾಯಿಗಳನ್ನು ಕಾಡುತ್ತಿತ್ತು. ಆದ್ದರಿಂದ ವರನ ವಯಸ್ಸು ಎಷ್ಟೇ ಆಗಿರಲಿ, ಇಲ್ಲವೆ ಅವನಿಗೆ ವಿವಾಹಿತನಾಗಿ ಪತ್ನಿಯರಿದ್ದರೂ ತಮ್ಮ ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಡುತ್ತಿದ್ದರು. ಕೆಲವೊಮ್ಮೆ ಬಡತನವೂ ಇದಕ್ಕೆ ಕಾರಣವಾಗಿತ್ತು. ಹೀಗಾಗಿ ಬಲಾತ್ಕಾರದಿಂದ ಹೇರಲ್ಪಟ್ಟ ವೈಧವ್ಯ ಮಾತ್ರವಲ್ಲದೆ, ಬಹುಪತ್ನಿತ್ವದ ಪಿಡುಗು ಅಂದಿನ ಸಮಾಜವನ್ನು ಕಾಡುತ್ತಿತ್ತು. ಈ ದುಷ್ಟ ಸಾಮಾಜಿಕ ಪದ್ಧತಿಯ ವಿರುದ್ಧವೂ ಈಶ್ವರಚಂದ್ರರೂ ಮತ್ತೆ ಹೋರಾಟ ನಡೆಸಿದರು. ಬಹುಪತ್ನಿತ್ವದ ವಿರುದ್ಧ ‘ಬಹುಪತ್ನಿತ್ವ ವಿರೋಧಿ ಮನವಿ’ಯನ್ನು ಸರಕಾರಕ್ಕೆ ಸಲ್ಲಿಸಿದರು. ಈ ಮಧ್ಯೆ 1857ರ ಸಿಪಾಯಿ ದಂಗೆಯ ನಂತರ ಭಾರತದ ಸಮಾಜ ಸುಧಾರಣೆಯ ಕಾರ್ಯಗಳ ಬಗ್ಗೆ ಬ್ರಿಟಿಷ್ ಸರ್ಕಾರಕ್ಕೆ ಸಹಾಯ ಮಾಡುವ ಮನಸ್ಸಿರಲಿಲ್ಲ. ಆದರೆ ವಿದ್ಯಾಸಾಗರರು ಇಷ್ಟಕ್ಕೆ ಸೋಲುವ ವ್ಯಕ್ತಿಯಾಗಿರಲಿಲ್ಲ. 1866ರ ನಂತರ ಮತ್ತೆ ತಮ್ಮ ಆಂದೋಲನವನ್ನು ಮತ್ತೆ ಆರಂಭಿಸಿದರು. ಬಂಗಾಲದ ಪ್ರಮುಖ ಮುಖಂಡರನ್ನೊಳಗೊಂಡಂತೆ 21,000 ಜನರು ಅಂಕಿತ ಹಾಕಿದ್ದ ಮನವಿಯನ್ನು ತೆಗೆದುಕೊಂಡು ನಿಯೋಗವೊಂದರಲ್ಲಿ ಹೋಗಿ ಬಂಗಾಲದ ಲೆಫ್ಟಿನೆಂಟ್ ಗವರ್ನರ್‍ಗೆ ಸಲ್ಲಿಸಿದರು. ಆದರೆ ಈ ಬಾರಿ ಸರ್ಕಾರ ಎಚ್ಚರಿಕೆ ವಹಿಸಿ ಈ ಮಸೂದೆಯ ಅಭ್ಯಾಸಕ್ಕೆ ಸಮಿತಿಯೊಂದನ್ನು ಸ್ಥಾಪಿಸಿ ತನ್ನ ಕೈತೊಳೆದುಕೊಂಡುಬಿಟ್ಟಿತು.


ಆದರೆ ವಿದ್ಯಾಸಾಗರರು ಬಹುಪತ್ನಿತ್ವದ ವಿರುದ್ಧ ಬರವಣಿಗೆಯ ಮುಖಾಂತರ ಆಂದೋಲನ ಮುಂದುವರೆಸಿದರು. 1871ರ ಆಗಸ್ಟ್ ಹಾಗೂ 1873ರ ಏಪ್ರಿಲ್ ತಿಂಗಳಲ್ಲಿ ಬಹುಪತ್ನಿತ್ವದ ವಿರುದ್ಧ ಎರಡು ಬೃಹದ್ಗ್ರಂಥಗಳನ್ನು ಬರೆದರು. ಈ ಎರಡೂ ಗ್ರಂಥಗಳು ಶಾಸ್ರಗಳಲ್ಲಿ ಅವರಿಗಿದ್ದ ಪಾಂಡಿತ್ಯವನ್ನು ತೋರಿಸುತ್ತದೆ. ಈ ಸಂಶೋಧನೆಯ ಸಂದರ್ಭದಲ್ಲಿ ಅವರು ನೀಡುವ ಮಾಹಿತಿ ಅತ್ಯಂತ ಕುತೂಹಲಕರವಾಗಿದೆ: ಹೂಗ್ಲಿ ಜಿಲ್ಲೆಯ 133 ಕುಲೀನ ಬ್ರಾಹ್ಮಣರನ್ನು ಪಟ್ಟಿಮಾಡಿ ಅವರು ಹೇಗೆ ವಿವಾಹದ ಹೆಸರಿನಲ್ಲಿ ಹೆಣ್ಣುಮಕ್ಕಳಿಗೆ ಅನ್ಯಾಯ ಮಾಡಿದ್ದಾರೆ ಎಂಬುದನ್ನು ಎತ್ತಿ ತೋರಿಸಿದ್ದಾರೆ. ಅದರ ಕೆಲವೊಂದು ಉದಾಹರಣೆಗಳನ್ನು ನೋಡಬಹುದು. 55 ವರ್ಷದ ಭೋಲಾನಾಥ ಬಂಡೋಪಾಧ್ಯಾಯನಿಗೆ 80ಜನ ಹೆಂಡತಿಯರಿದ್ದರು. 64 ವರ್ಷದ ಭಗವಾನ್ ಚಟ್ಟೋಪಾಧ್ಯಾಯನಿಗೆ 72 ಜನ ಹೆಂಡತಿಯರಿದ್ದರು. 40 ವರ್ಷದ ಮಧುಸೂದನ ಮುಖ್ಯೋಪಾಧ್ಯಾಯನಿಗೆ 56 ಜನ ಹೆಂಡಿರಿದ್ದರು. 20 ವರ್ಷದ ದುರ್ಗಾ ಬಂಡೋಪಾಧ್ಯಾಯನಿಗೆ ಆಗಲೇ 16 ಜನ ಹೆಂಡತಿಯರಿದ್ದರು.


ಹೀಗೆ ಸಮಾಜ ಸುಧಾರಣೆ ವಿದ್ಯಾಸಾಗರರ ಜೀವನದ ಉಸಿರಾಗಿತ್ತು. ಸಮಾಜದ ಬಗ್ಗೆ ಕಾಳಜಿಯುಳ್ಳ ಪ್ರತಿಯೊಬ್ಬ ವ್ಯಕ್ತಿಯೂ ಕಡ್ಡಾಯವಾಗಿ ಕೈಗೊಳ್ಳಬೇಕಾದ 10 ಅಂಶಗಳ ಪ್ರಮಾಣ ವಚನವನ್ನು ಅವರು ತಯಾರಿಸಿದ್ದರೆಂದು ವಿದ್ಯಾಸಾಗರರ ಚರಿತ್ರಕಾರರಾದ ಚಂಡಿಚರಣ ಬಂಡೋಪಾಧ್ಯಾಯರು ಹೇಳುತ್ತಾರೆ. ಇಂತಹ ಸಮಾಜಸುಧಾರಕನ ಪ್ರಭಾವ ಅಂದಿನ ಜನಮಾನಸದಲ್ಲಿ ಎಷ್ಟೊಂದು ಆಳವಾಗಿ ಬೇರೂರಿತ್ತೆಂಬುದನ್ನು ಸ್ವಾಮಿ ವಿವೇಕಾನಂದರ ಮಾತುಗಳಲ್ಲಿ ನೋಡಬಹುದು: “ನನ್ನ ವಯಸ್ಸಿನ ಒಬ್ಬನೇ ವ್ಯಕ್ತಿ ಉತ್ತರ ಭಾರತದಲ್ಲಿ ವಿದ್ಯಾಸಾಗರರ ಪ್ರಭಾವಕ್ಕೆ ಒಳಗಾಗದೆ ಉಳಿದಿರಲು ಸಾಧ್ಯವಿಲ್ಲ” ಎಂದಿದ್ದಾರೆ. ಹಾಗೆಯೇ ರವೀಂದ್ರನಾಥ ಟ್ಯಾಗೋರರು ಅವರು ಮೆಚ್ಚುವ ಮೂರು ವ್ಯಕ್ತಿಗಳಲ್ಲಿ ವಿದ್ಯಾಸಾಗರರೂ ಒಬ್ಬರು ಎಂದಿದ್ದಾರೆ. ಇಂತಹ ವಿದ್ಯಾಸಾಗರರನ್ನು ಇಂದು ಮಹಿಳಾ ಸಮುದಾಯ ಕೃತಜ್ಞತೆಯಿಂದ ನೆನೆಸಿಕೊಳ್ಳಬೇಕಿದೆ.

ಎನ್. ಗಾಯತ್ರಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *