ಹಿಂದಣ ಹೆಜ್ಜೆ/ ನೃತ್ಯಕ್ಕೆ ನಾದ ತುಂಬಿದ ಬಾಲಸರಸ್ವತಿ – ತಿರು ಶ್ರೀಧರ

ಭರತನಾಟ್ಯದ ಸೊಬಗನ್ನು ದೇಶವಿದೇಶದ ನೃತ್ಯಪ್ರೇಮಿಗಳಿಗೆಲ್ಲ ಪರಿಚಯಿಸಿದ ತಂಜಾವೂರು ಬಾಲಸರಸ್ವತಿ ಸಮಾಜದ ಟೀಕೆ, ನಿಂದನೆಯನ್ನು ಲೆಕ್ಕಿಸದೆ ಕಲೆಯ ಅನ್ವೇಷಣೆಯಲ್ಲಿ ನಿರತರಾಗಿದ್ದ ಅಸಾಮಾನ್ಯ ಕಲಾವಿದೆ. ಅವರು ರಂಗದ ಮೇಲೆ ಬಂದರೆ ಮಿಂಚಿನ ಸಂಚಾರವಾಗಿ, ನೃತ್ಯ ಮತ್ತು ಕೃತಿಯ ಮಿಲನ ದಿವ್ಯಾನುಭವ ನೀಡುತ್ತಿತ್ತು ಎಂಬ ಪ್ರಶಂಸೆ ಇತ್ತು. ಅಮೆರಿಕದ ಕನೆಕ್ಟಿಕಟ್ ರಾಜ್ಯದ ವೆಸ್ಲೇಯನ್ ವಿಶ್ವವಿದ್ಯಾಲಯದ ಕಲಾನಿಕಾಯದಲ್ಲಿದ್ದ ಬಾಲಸರಸ್ವತಿ ಭಾರತೀಯ ಕಲಾಪ್ರಕಾರಗಳಿಗೆ ಅಲ್ಲೊಂದು ಭದ್ರ ನೆಲೆಯನ್ನು ಕಲ್ಪಿಸಿದರು.

ಭಾರತೀಯ ನೃತ್ಯ ಕಲೆಯಲ್ಲಿ ಬಾಲಸರಸ್ವತಿಯವರದು ಪ್ರಖ್ಯಾತ ಹೆಸರು. ಭರತನಾಟ್ಯ ಕಲೆಯನ್ನು ಭಾರತ ಮತ್ತು ವಿಶ್ವದ ವಿವಿಧೆಡೆಗಳಲ್ಲಿ ಪ್ರಖ್ಯಾತಗೊಳಿಸುವಲ್ಲಿ ಬಾಲಸರಸ್ವತಿಯವರ ಕೊಡುಗೆ ಮಹತ್ವದ್ದು.

ಬಾಲಸರಸ್ವತಿಯವರು 1918 ವರ್ಷದ ಮೇ 13 ರಂದು ಜನಿಸಿದರು. ಸಂಗೀತ ಮತ್ತು ನೃತ್ಯಕಲೆಯ ಪಾರಂಪರಿಕ ಹಿನ್ನಲೆ ಹೊಂದಿದ್ದ ವಂಶದಿಂದ ಬಂದ ಅವರು, ತಮ್ಮ ವಂಶವಾಹಿನಿಯ ಏಳನೆಯ ತಲೆಮಾರಿನ ಪ್ರತಿಭೆ ಎಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಬಾಲಸರಸ್ವತಿಯವರ ಪೂರ್ವಜರಾದ ಪಾಪಮ್ಮಾಳ್ ಅವರು ಸಂಗೀತ ಮತ್ತು ನೃತ್ಯ ವಿದ್ವನ್ಮಣಿಯಾಗಿ ಹದಿನೆಂಟನೆಯ ಶತಮಾನದ ಮಧ್ಯಭಾಗದಲ್ಲಿ ತಂಜಾವೂರು ಸಂಸ್ಥಾನದ ಆಸ್ಥಾನ ಕಲಾವಿದೆಯಾಗಿದ್ದರು. ಬಾಲಸರಸ್ವತಿಯವರ ಅಜ್ಜಿ ವೀಣಾ ಧನಮ್ಮಾಳ್, ಇಪ್ಪತ್ತನೆ ಶತಮಾನದ ಪ್ರಾರಂಭದಲ್ಲಿ ಅತ್ಯಂತ ಪ್ರಭಾವಶಾಲಿ ಸಂಗೀತಗಾರ್ತಿಯಾಗಿದ್ದರು. ತಾಯಿ ಜಯಮ್ಮಾಳ್ ಅವರು ಪ್ರಖ್ಯಾತ ಗಾಯಕಿಯಾಗಿದ್ದು ಮಗಳ ಕಲಿಕೆಗೆ ನೀರೆರೆದರು. ಬಾಲಸರಸ್ವತಿಯವರು ಸಂಗೀತ ಮತ್ತು ನೃತ್ಯಗಳೆರಡರಲ್ಲೂ ಪರಿಣತಿಯನ್ನು ಸಾಧಿಸಿದರು.

ಬಾಲಸರಸ್ವತಿಯವರು ಪುಟ್ಟ ಮಗುವಾಗಿರುವಾಗಲೇ ಮನೆಯಲ್ಲಿ ಸಂಗೀತ ಕಲಿಯತೊಡಗಿದರು. ಇನ್ನೂ ನಾಲ್ಕು ವಯಸ್ಸಿನವರಾಗಿದ್ದಾಗ ತಂಜಾವೂರಿನ ಪ್ರಸಿದ್ಧ ವಿದ್ವಾಂಸರಾದ ನಟ್ಟುವನಾರ್ ಕೆ ಕಂದಪ್ಪನ್ ಅವರಿಂದ ನೃತ್ಯ ಕಲಿಯಲಾರಂಭಿಸಿದರು. ಬಾಲಸರಸ್ವತಿಯವರ ಸಹೋದರರಾದ ಟಿ ರಂಗನಾಥನ್ ಮತ್ತು ಟಿ ವಿಶ್ವನಾಥನ್ ಅವರು ಪ್ರಸಿದ್ಧ ಸಂಗೀತಗಾರರಾಗಿಯೂ ಸಂಗೀತ ಶಿಕ್ಷಕರಾಗಿಯೂ ಭಾರತ ಮತ್ತು ಅಮೆರಿಕಗಳಲ್ಲಿ ಪ್ರಸಿದ್ಧಿ ಪಡೆದಿದ್ದರು. ಬಾಲಸರಸ್ವತಿಯವರ ಪುತ್ರಿ ಲಕ್ಷ್ಮಿ ನೈಟ್ ಅವರು ತಮ್ಮ ತಾಯಿಯವರ ಮಾದರಿಯ ನೃತ್ಯಶೈಲಿಯಲ್ಲಿ ಪರಿಣಿತೆಯಾಗಿದ್ದರು. ಅವರ ಮೊಮ್ಮಗ ಅನಿರುದ್ಧ ನೈಟ್ ಅವರು ತಮ್ಮ ಕುಟುಂಬದ ಈ ಪರಂಪರೆಯನ್ನು ಮುಂದುವರೆಸಿದ್ದು “ಬಾಲಾ ಮ್ಯೂಸಿಕ್ ಅಂಡ್ ಡ್ಯಾನ್ಸ್ ಅಸೋಸಿಯೇಶನ್” ಎಂಬ ಸಂಸ್ಥೆಯನ್ನು ಅಮೆರಿಕದಲ್ಲಿಯೂ “ಬಾಲಸರಸ್ವತಿ ಸ್ಕೂಲ್ ಆಫ್ ಡ್ಯಾನ್ಸ್” ಎಂಬ ಸಂಸ್ಥೆಯನ್ನು ಭಾರತದಲ್ಲಿಯೂ ನಡೆಸುತ್ತಿದ್ದಾರೆ. ಬಾಲಸರಸ್ವತಿಯವರ ಅಳಿಯ ಡಗ್ಲಾಸ್ ಎಂ ನೈಟ್ (ಜ್ಯೂ) ಅವರು ಬಾಲಸರಸ್ವತಿಯವರ ಜೀವನ ಚರಿತ್ರೆಯನ್ನು “Balasaraswati : Her Art and Life” ಪುಸ್ತಕದಲ್ಲಿ ನಿರೂಪಿಸಿದ್ದಾರೆ.

ಬಾಲಸರಸ್ವತಿಯವರು 1925ರ ವರ್ಷದಲ್ಲಿ ತಮ್ಮ ಮೊದಲ ನೃತ್ಯ ಪ್ರದರ್ಶನವನ್ನು ನೀಡಿದರು. ಪ್ರಸಿದ್ಧ ನೃತ್ಯ ಕಲಾವಿದರಾದ ಉದಯಶಂಕರ್ ಅವರ ಆಹ್ವಾನದ ಮೇರೆಗೆ ದಕ್ಷಿಣಭಾರತದಿಂದ ಹೊರಗೆ ಭರತನಾಟ್ಯ ಪದ್ರರ್ಶನವನ್ನು ನೀಡಿದ ಮೊಟ್ಟ ಮೊದಲನೆಯವರಾದ ಅವರು 1934 ವರ್ಷದಲ್ಲಿ ಕೋಲ್ಕತ್ತಾದಲ್ಲಿ ಪ್ರದರ್ಶನ ನೀಡಿದರು. 1937 ವರ್ಷದಲ್ಲಿ ಬಾಲಸರಸ್ವತಿಯವರು ನೀಡಿದ ನೃತ್ಯ ಪ್ರದರ್ಶನಕ್ಕೆ ರಬೀಂದ್ರನಾಥ ಠಾಗೂರರು ಆಗಮಿಸಿದ್ದರು.

ವಿಶ್ವದಾದ್ಯಂತ ಹಲವಾರು ವಿದ್ವಾಂಸರ ಮೆಚ್ಚುಗೆಯನ್ನು ಗಳಿಸಿದ್ದ ಬಾಲಸರಸ್ವತಿಯವರ ನೃತ್ಯ ಸಾಮರ್ಥ್ಯವನ್ನು ಶಂಭು ಮಹಾರಾಜ್, ಡೇಮ್ ಮಾರ್ಗಾಟ್ ಫಾಂಟೆಯಿನ್, ಮಾರ್ಥಾ ಗ್ರಾಹಮ್ ಮತ್ತು ಮೆರ್ಸ್ ಕನ್ನಿಂಗ್ ಹ್ಯಾಮ್ ಮುಂತಾದ ವಿಶ್ವವಿಖ್ಯಾತ ನೃತ್ಯ ಪರಿಣತ ಗಣ್ಯರು ಪ್ರಶಂಸಿಸಿದ್ದರು.

ಬಾಲಸರಸ್ವತಿ ಅವರಿಗೆ ಪದ್ಮಭೂಷಣ, ಪದ್ಮವಿಭೂಷಣ, ಕೇಂದ್ರ ಸಂಗೀತ ನೃತ್ಯ ಅಕಾಡಮಿ ಪ್ರಶಸ್ತಿಗಳು, ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ನೃತ್ಯ ವಿಮರ್ಶಕರಾದ ಅನ್ನಾ ಕಿಸ್ಸೆಲ್ ಗೊಫೆಶನಲ್ ಸರ್ವಿಸ್ ಪ್ರಶಸ್ತಿ ಮತ್ತು ಮದ್ರಾಸಿನ ಸಂಗೀತ ಕಲಾನಿಧಿ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದವು.

2000ದ ವರ್ಷದಲ್ಲಿ ಪ್ರಕಟಗೊಂಡ ‘America’s Irreplaceable Dance Treasures: The First 100” ಸಂಚಿಕೆಯಲ್ಲಿ ಮೂಡಿ ಬಂದ ಪಾಶ್ಚಿಮಾತ್ಯ ದೇಶಗಳಿಂದ ಹೊರತಾದ ಏಕೈಕ ಪ್ರತಿಭೆ ಎಂಬ ಹೆಗ್ಗಳಿಕೆ ಬಾಲಸರಸ್ವತಿಯವರದು.

ಬಾಲಸರಸ್ವತಿಯವರು 1984 ವರ್ಷದ ಫೆಬ್ರುವರಿ 9 ರಂದು ಈ ಲೋಕವನ್ನಗಲಿದರು. ಈ ಮಹಾನ್ ಪ್ರತಿಭೆಗೆ ನಮ್ಮ ನಮನಗಳು. (ಸೌಜನ್ಯ: www.sallapa.com )

ತಿರು ಶ್ರೀಧರ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *