ಹಿಂದಣ ಹೆಜ್ಜೆ/ಆದರ್ಶ ಶಿಕ್ಷಕಿ ಸಾವಿತ್ರಿಬಾಯಿ – ಡಾ. ಎಚ್.ಎಸ್. ಅನುಪಮಾ

ಅಸ್ಪೃಶ್ಯರು ಮತ್ತು ಹೆಣ್ಣುಮಕ್ಕಳಿಗೂ ಶಿಕ್ಷಣ ಅಗತ್ಯ ಎಂದು ಪ್ರತಿಪಾದಿಸಿದ ಸಾವಿತ್ರಿಬಾಯಿ ಫುಲೆ ಅದಕ್ಕಾಗಿ ಬಹಳ ವಿರೋಧ ಎದುರಿಸಬೇಕಾಯಿತು. ಆದರೆ ಅದನ್ನು ಲೆಕ್ಕಿಸದೆ ಶಾಲೆಗಳನ್ನು ತೆರೆದು ಶಿಕ್ಷಣ ಕ್ರಾಂತಿಗೆ ನಾಂದಿ ಹಾಡಿದರು. ಅಶಿಕ್ಷಿತರಿಗೆ ಶಿಕ್ಷಣದ ಮಹತ್ವ ತಿಳಿಸಿಕೊಟ್ಟು ಆದರ್ಶ ಶಿಕ್ಷಕಿಯಾಗಿ ಬೆಳಗಿದರು. ಹೆಣ್ಣುಮಕ್ಕಳ ಶಿಕ್ಷಣದ ಪ್ರಮಾಣ ಈಗಲೂ ಕಡಿಮೆ ಇರುವ ಇಂದಿನ ಸಂದರ್ಭದಲ್ಲಿ ಈ ಅಕ್ಷರದವ್ವನ ಸ್ಮರಣೆ ಅರ್ಥಪೂರ್ಣ ಮತ್ತು ಅತ್ಯಗತ್ಯ.

ಫುಲೆ ದಂಪತಿಗಳು ಜ್ಞಾನವನ್ನು ಮೂರನೇ ಕಣ್ಣು ಎನ್ನುತ್ತಿದ್ದರು. ಪಾರಂಪರಿಕ ಜ್ಞಾನವು ಈ ನೆಲದ ಶೂದ್ರಾತಿಶೂದ್ರರು ಹಾಗೂ ಮಹಿಳೆಯರಿಗೆ ತನ್ನ ಬಾಗಿಲನ್ನು ಮುಚ್ಚಿಕೊಂಡಿದ್ದಾಗ ಇಂಗ್ಲಿಷ್ ಶಿಕ್ಷಣ ಅರಿವಿನ ಬೆಳಕನ್ನು ಚೆಲ್ಲಬಲ್ಲದು ಎಂದು ಧೃಢವಾಗಿ ನಂಬಿದ್ದರು. ಶಿಕ್ಷಣ ಮತ್ತು ಜ್ಞಾನ ತನ್ನ ಬಗ್ಗೆ ತಾನು ಕೀಳರಿಮೆ ಹೊಂದಿರುವ ವ್ಯಕ್ತಿಯನ್ನು ವೈಯಕ್ತಿಕವಾಗಿ ಉನ್ನತಿಗೇರಿಸುತ್ತದೆ; ಸಾರ್ವತ್ರಿಕ ಶಿಕ್ಷಣವು ಭಾರತದ ಬಹುಸಂಖ್ಯೆಯ ಅಶಿಕ್ಷಿತ ಜನಸಮುದಾಯವನ್ನು ಎಚ್ಚರಿಸಿ ಹೊಸ ಸಾಮಾಜಿಕ ಮೌಲ್ಯವನ್ನು ವ್ಯವಸ್ಥೆಯಲ್ಲಿ ಅಳವಡಿಸುತ್ತದೆ; ತಳಸಮುದಾಯಗಳ ನೋವು, ಅಭಿಪ್ರಾಯಗಳಿಗೆ ಯಾವುದೇ ಬೆಲೆಯಿಲ್ಲದ ಜಾತಿವ್ಯವಸ್ಥೆಯ ವಿರುದ್ಧ ಆಂದೋಲನ ಶುರುಮಾಡಬೇಕಾದರೆ ಸಾಮೂಹಿಕ ಶಿಕ್ಷಣ ಕೊಡುವುದು ಮೊದಲ ಹೆಜ್ಜೆಯಾಗಬೇಕು ಎನ್ನುವುದು ಅವರ ಅಭಿಪ್ರಾಯವಾಗಿತ್ತು. ದಮನಕಾರಿ ಹಾಗೂ ಅಮಾನವೀಯ ಜಾತಿವ್ಯವಸ್ಥೆಯ ಕಟ್ಟುಗಳನ್ನು ಒಡೆಯಬೇಕಾದರೆ, ಅಂಥ ಜಾಗೃತಿ ಮೂಡಬೇಕಾದರೆ ಇಂಗ್ಲಿಷ್ ಶಿಕ್ಷಣ ಅಗತ್ಯವೆಂದು ಭಾವಿಸಿ ಅದಕ್ಕಾಗಿ ಎಲ್ಲ ಮಾರ್ಗಗಳನ್ನು ಬಳಸಿಕೊಂಡರು.

‘ಜ್ಞಾನ ಇಲ್ದಿದ್ರೆ ಸರ್ವ ನಾಶ ಆಗೋಗುತ್ತೆ
ವಿವೇಕ ಇಲ್ದಿದ್ರೆ ಆಗ್ತೀವಿ ಪಶುಗಳ ಹಂಗೆ’

‘ಜ್ಞಾನದಾನಿಗಳು, ಇಂಗ್ಲೀಷರು ಬಂದಿದಾರೆ ಈಗ
ಕಲೀರಿ, ಸಾವರಾರು ವರ್ಷ ಈ ಅವಕಾಶನೇ ಇರ್ಲಿಲ್ಲ’

‘ಇಂಗ್ಲೀಷಮ್ಮ ನಮ್ಮಂಥೋರ‍್ನ ಅಪ್ಪಿ ಹಿಡೀತಾಳೆ
ಕೆಳಬಿದ್ದೋರ‍್ನ ಮೇಲೆತ್ತಿ ಮೈದಡವಿ ಸಲವುತಾಳೆ’

ಎಂದು ಸಾವಿತ್ರಿಬಾಯಿ ಅವರ ಕವಿತೆಗಳು ಶೂದ್ರಾತಿಶೂದ್ರರನ್ನು ಶಾಲೆಗೆ ಆಹ್ವಾನಿಸಿದವು.

ಅದೇವೇಳೆಗೆ ಅವರಿಗೆ ಬ್ರಿಟಿಷ್ ಸರ್ಕಾರದ ಶಿಕ್ಷಣ ನೀತಿ ಹಾಗೂ ಅದು ನೀಡುವ ಶಿಕ್ಷಣದ ಗುಣಮಟ್ಟ ಕುರಿತು ಕೆಲವು ಆಪಾದನೆಗಳಿದ್ದವು. ಅವರ ಅಭಿಪ್ರಾಯದಂತೆ:

ಬ್ರಿಟಿಷ್ ಶಿಕ್ಷಣನೀತಿ ಜನಸಾಮಾನ್ಯರ ಪ್ರಾಥಮಿಕ ಶಿಕ್ಷಣಕ್ಕಿಂತ ಕೆಲವರಿಗಷ್ಟೇ ಅವಕಾಶ ನೀಡುವ ಉನ್ನತ ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತದೆ. 
ಆ ಶಿಕ್ಷಣವು ಕಾಗದದ ಮೇಲಿನ ತತ್ತ್ವಗಳನ್ನಷ್ಟೇ ಹೇಳಿಕೊಡುತ್ತದೆ, ದೈನಂದಿನ ಬದುಕಿಗೆ ಅವಶ್ಯವಿರುವ ಕೌಶಲ್ಯಗಳನ್ನು ಹೇಳಿಕೊಡುವುದಿಲ್ಲ.
ಗ್ರಾಮೀಣ ಭಾಗದವರಿಗೆ, ಅಲ್ಲಿನ ಪರಿಸ್ಥಿತಿಗೆ ಬ್ರಿಟಿಷ್ ಶಿಕ್ಷಣ ಸೂಕ್ತವಾಗಿಲ್ಲ.
ತರಬೇತಿ ಹೊಂದಿದ ಶಿಕ್ಷಕರು ಹಾಗೂ ತರಬೇತಿ ನೀಡುವಿಕೆ ಸರಿಯಾಗಿಲ್ಲ.
ಪಠ್ಯಗಳು ಬರೀ ತಪ್ಪುಗಳಿಂದ ಕೂಡಿವೆ.
ಅಬ್ರಾಹ್ಮಣ ಶಿಕ್ಷಿತರನ್ನು ಶಿಕ್ಷಕ ವೃತ್ತಿಗೆ ನೇಮಿಸುತ್ತಿಲ್ಲ.

ಶಿಕ್ಷಣಕ್ಕೆ ಮಾಡುತ್ತಿರುವ ಖರ್ಚು ಕೆಲವರ ಉನ್ನತ ಶಿಕ್ಷಣದ ಸ್ಕಾಲರ್‌ಶಿಪ್‌ಗೆ ಮಾತ್ರ ಖರ್ಚಾಗುತ್ತಿದ್ದು ಅದರಿಂದ ಪ್ರಾಥಮಿಕ ಶಿಕ್ಷಣ ಪಡೆದವರ ಸಂಖ್ಯೆ ಏರುತ್ತಿಲ್ಲ ಎಂದೂ ಅವರು ಭಾವಿಸಿದರು. ‘ಸರ್ಕಾರದ ಬಹುಪಾಲು ಆದಾಯ ರೈತಾಪಿ ವರ್ಗದ ಬೆವರಿನಿಂದ ಬರುವಾಗ ಅವರಿಗೆ ನೀಡಬೇಕಾದ ಶಿಕ್ಷಣಕ್ಕೆ ಖರ್ಚು ಮಾಡುತ್ತಿರುವ ಹಣ ತೀರಾ ನಗಣ್ಯ’ ಎಂದು ಅವರು ಪ್ರತಿಪಾದಿಸಿದರು.

ಈ ಅಂಶಗಳನ್ನೆಲ್ಲ ಗಮನದಲ್ಲಿಟ್ಟುಕೊಂಡು ಫುಲೆಗಳು ತಾವೇ ಶಿಕ್ಷಣಸಂಸ್ಥೆಗಳನ್ನು ಕಟ್ಟಿ ಸರಣಿ ಶಾಲೆಗಳನ್ನು ಶುರುಮಾಡಿದರು. ನೇಟಿವ್ ಫೀಮೇಲ್ ಸ್ಕೂಲ್- ಪುಣೆ ಎನ್ನುವುದು ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವ ಸಂಸ್ಥೆಯಾದರೆ ಸೊಸೈಟಿ ಫಾರ್ ಪ್ರಮೋಟಿಂಗ್ ಎಜುಕೇಷನ್ ಆಫ್ ಮಹಾರ‍್ಸ್ ಅಂಡ್ ಮಾಂಗ್ಸ್ ಎನ್ನುವುದು ಅಸ್ಪೃಶ್ಯ ಸಮುದಾಯದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಸಂಸ್ಥೆಯಾಗಿತ್ತು. ಸರ್ಕಾರಿ ಶಾಲೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳ ಸಂಖ್ಯೆಗಿಂತ ೧೦ ಪಟ್ಟು ಹೆಚ್ಚು ವಿದ್ಯಾರ್ಥಿಗಳು ಸಾವಿತ್ರಿಯ ಶಾಲೆಯಲ್ಲಿ ಕಲಿಯುತ್ತಿದ್ದರು.

ಸಗುಣಾ ಅಸ್ಪೃಶ್ಯರಿಗೆ ತೆರೆದ ಶಾಲೆ ಆರೇ ತಿಂಗಳಲ್ಲಿ ಮುಚ್ಚಿ ಹೋದಾಗ ಜೋತಿಬಾ ಸಾರ್ವಜನಿಕ ಸಭೆ ಏರ್ಪಡಿಸಿ ಶಿಕ್ಷಣದ ಅವಶ್ಯಕತೆಯನ್ನು ಎಳೆಎಳೆಯಾಗಿ ಬಿಡಿಸಿ ಹೇಳಿದ್ದರು. ತಾವು ಬಾಲಕಿಯರಿಗಾಗಿ ಶಾಲೆ ತೆರೆಯಲಿರುವುದಾಗಿ ಘೋಷಿಸಿದ್ದರು. ಆಗ ಪುಣೆಯ ಭಿಡೆ ಎನ್ನುವವರು ಬ್ರಾಹ್ಮಣರ ಕೇರಿಯ ತಮ್ಮ ಮನೆಯನ್ನೇ ಶಾಲೆಗೆ ಬಿಟ್ಟುಕೊಡುವುದಾಗಿ ಹೇಳಿ ಅಲ್ಲಿ ಬಾಲಕಿಯರ ಶಾಲೆ ಶುರುಮಾಡುವಂತೆ ಕೇಳಿದರು. ಪುಣೆಯಲ್ಲಿ ಆರಂಭವಾದ ಮೊದಲ ಶಾಲೆ ಭಿಡೆಯವರ ಮನೆಯಲ್ಲೇ ಶುರುವಾಯಿತು.

ತಳಸಮುದಾಯದವರಿಗೆ ಮತ್ತು ಮಹಿಳೆಯರಿಗೆ ಶಿಕ್ಷಣ ಅವಶ್ಯ ಎಂಬ ಬಗ್ಗೆ ಜೋತಿಬಾ ಖಚಿತ ನಿಲುವು ಹೊಂದಿದ್ದರೂ ಶಾಲೆ ತೆರೆಯುವುದು ಸುಲಭವಿರಲಿಲ್ಲ. ‘ಮೌಢ್ಯ, ಜಾತಿ ತಾರತಮ್ಯ, ಭಾಷಾ ತಾರತಮ್ಯ ಈ ದೇಶದ ರೋಗಗಳಾಗಿವೆ. ಎಲ್ಲರೂ ಒಂದಲ್ಲ ಒಂದು ರೀತಿ ಬಾಧಿತರೇ ಆಗಿರುವಾಗ ಯಾರಿಗೆ ಸಹಾಯ ಮಾಡುವುದೆಂಬ ಪ್ರಶ್ನೆಯೂ ಏಳುತ್ತದೆ. ಪ್ರಶ್ನೆಗೆ ಉತ್ತರ ಹುಡುಕುವುದರಲ್ಲೇ ನಿಷ್ಕ್ರಿಯರಾಗುವುದಕ್ಕಿಂತ ಯಾರಿಗೆ ಸಹಾಯದ ಅಗತ್ಯ ಅತಿ ಹೆಚ್ಚು ಇದೆಯೋ ಅವರಿಗೆ ಸಹಾಯ ನೀಡುತ್ತ ಹೋಗಬೇಕು. ಆದ್ದರಿಂದ ನಾನು ಮಹಾರ-ಮಾಂಗರಿಗೆ ಸಹಾಯ ಮಾಡಬೇಕೆಂದು ಭಾವಿಸಿದೆ’ ಎಂದು ಜೋತಿಬಾ ಹೇಳಿಕೊಂಡಿದ್ದಾರೆ.

ಹಂಟರ್ ಕಮಿಷನ್ ಎದುರು ಜೋತಿಬಾ ನೀಡಿದ ಹೇಳಿಕೆ ಆ ಕಾಲದ ಪರಿಸ್ಥಿತಿಯನ್ನು ಪರಿಚಯಿಸುತ್ತದೆ:

‘ಆಗ ಸ್ಥಳೀಯರು ಹೆಣ್ಣುಮಕ್ಕಳಿಗಾಗಿ ನಡೆಸುವ ಶಾಲೆ ಇರಲಿಲ್ಲ. ನಾನು ನನ್ನ ಹೆಂಡತಿ ನಾವೇ ತೆರೆದ ಶಾಲೆಗಳಲ್ಲಿ ಹಲವಾರು ವರ್ಷ ಬೋಧಿಸುತ್ತ ಕೆಲಸ ಮಾಡಿದೆವು. ಎಜುಕೇಷನ್ ಬೋರ್ಡಿನ ಸರ್ ಆರ್ಸ್ಕಿನ್ ಪೆರಿ ಹಾಗೂ ಹಾಗೂ ಸರ್ಕಾರದ ಕಾರ್ಯದರ್ಶಿ ಲೂಮ್ಸ್ ಡೆನ್ ನಮ್ಮ ಶಾಲೆಯ ಕಲಿಕೆಯ ನೀತಿ ಕುರಿತು ಸಮಾಧಾನ ವ್ಯಕ್ತಪಡಿಸಿದ್ದರು.’

ಶಿಕ್ಷಕಿಯ ತರಬೇತಿ ಮುಗಿಸಿ ಸಾವಿತ್ರಿಬಾಯಿ ಬಂದ ಮೇಲೆ ಅವರ ಕುಟುಂಬ ಪುಣೆಯ ದಲಿತ ಕೇರಿಯಲ್ಲಿ ವಾಸವಾಯಿತು. ಒಂಭತ್ತು ವಿದ್ಯಾರ್ಥಿಗಳೊಂದಿಗೆ ೧೮೪೯ರಲ್ಲಿ ಮೊದಲ ಶಾಲೆ ಪುಣೆಯ ಭಿಡೆವಾಡಿಯಲ್ಲಿ ಶುರುವಾಯಿತು. ಅದರಲ್ಲಿ ದಲಿತ ಮುಸ್ಲಿಂ ಹೆಣ್ಣುಮಕ್ಕಳೇ ಬಹುವಾಗಿ ಇದ್ದರು. ಅಹ್ಮದ್ ನಗರದ ಜಡ್ಜ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಜೋತಿಬಾರ ಆಪ್ತ ಸ್ನೇಹಿತ ಸದಾಶಿವ ಗೋವಂದೆ ಮೊದಲ ಶಾಲೆಯ ಮಕ್ಕಳಿಗೆ ಉಚಿತ ಪುಸ್ತಕ ಒದಗಿಸಿದರು. ಆದರೆ ಶಾಲೆಗಾಗಿ ಸ್ಥಳ ಕೊಡುವವರು ಮನಸು ಬದಲಾಯಿಸುತ್ತ ಇದ್ದದ್ದರಿಂದ ಶಾಲೆಯೂ ನಿರಂತರ ಸ್ಥಳ ಬದಲಾಯಿಸುತ್ತ, ಮುಚ್ಚುತ್ತ-ತೆರೆಯುತ್ತ ಹೋಯಿತು.

೧೮೫೧ರ ಜುಲೈನಲ್ಲಿ ಪುಣೆಯಲ್ಲಿ ಎರಡನೇ ಶಾಲೆ ಶುರುವಾಯಿತು. ಮುಸ್ಲಿಮರೊಬ್ಬರು ದೊಡ್ಡ ಮನೆಯನ್ನು ಅದಕ್ಕಾಗಿ ನೀಡಿದರು. ದೇವರಾವ್ ಥೌಸರ್, ಮೋರೋ ವಿಠಲ ವಾಳ್ವೇಕರ್ ನೆರವು ನೀಡಿದರು. ಪುಣೆಯ ಕಾಲೇಜಿನ ಪ್ರಿನ್ಸಿಪಾಲರಾದ ಮೇಜರ್ ಕ್ಯಾಂಡಿ ಉಚಿತ ಪುಸ್ತಕಗಳನ್ನು ಒದಗಿಸಿದರು. ಆ ಶಾಲೆಯಲ್ಲಿ ೪ ಶಿಕ್ಷಕರು ಹಾಗೂ ೪೮ ವಿದ್ಯಾರ್ಥಿನಿಯರಿದ್ದರು. ಅದೇ ವರ್ಷ ನವೆಂಬರಿನಲ್ಲಿ ಇನ್ನೊಂದು ಶಾಲೆ ಶುರುವಾಯಿತು. ಅದರಲ್ಲಿ ೩ ಶಿಕ್ಷಕರು ಹಾಗೂ ೫೧ ವಿದ್ಯಾರ್ಥಿನಿಯರಿದ್ದರು. ೧೮೫೨ರ ಮಾರ್ಚ್‌ನಲ್ಲಿ ಒಬ್ಬರು ಶಿಕ್ಷಕರು ಹಾಗೂ ೩೩ ವಿದ್ಯಾರ್ಥಿನಿಯರೊಡನೆ ಮತ್ತೊಂದು ಶಾಲೆ ಶುರುವಾಯಿತು. ಸಾವಿತ್ರಿ ಬಾಯಿ ಮುಖ್ಯ ಶಿಕ್ಷಕಿಯಾಗಿದ್ದರು. ಕುಟುಂಬ ಸ್ನೇಹಿತರಾದ ವಿಷ್ಣುಪಂತ ಮೋರೇಶ್ವರ ಹಾಗೂ ವಿಠ್ಠಲ ಭಾಸ್ಕರ ಸಹಶಿಕ್ಷಕರಾಗಿ ದುಡಿದರು.

ಜೋತಿಬಾ ಕುಟುಂಬ ನಿರ್ವಹಣೆಗಾಗಿ ಮಿಷನರಿ ಶಾಲೆಗಳಲ್ಲಿ ಅರೆಕಾಲಿಕ ಶಿಕ್ಷಕರಾಗಿ ಬೋಧಿಸುತ್ತಿದ್ದರೆ ಸಾವಿತ್ರಿಬಾಯಿ ಯಾವ ಸಂಬಳವೂ ಇಲ್ಲದೆ ಜೋತಿಬಾರ ಶಾಲೆಗಳಲ್ಲಿ ಉಚಿತವಾಗಿ ದುಡಿದರು. ಎಲ್ಲ ಶಾಲೆಗಳು, ಬೋಧಕರು ಹಾಗೂ ಬೋಧನಾ ಸಿಬ್ಬಂದಿಗಳ ಮೇಲ್ವಿಚಾರಣೆ ನೋಡಿಕೊಂಡರು. ಲೆಕ್ಕಪತ್ರ ಸರಿಯಾಗಿ ಬರೆದಿಡುತ್ತಿದ್ದರು. ದಕ್ಷಿಣಾ ಪ್ರೈಜ್ ಕಮಿಟಿಯಿಂದ ವಾರ್ಷಿಕ ೯೦೦ ರೂ. ಅನುದಾನ ಸಿಗುತ್ತಿತ್ತು ಹಾಗೂ ದೇಣಿಗೆಯ ಹಣ ಸಂಗ್ರಹ ಮಾಡಲಾಗುತ್ತಿತ್ತು. ಸಾವಿತ್ರಿ ಇಟ್ಟ ಲೆಕ್ಕದ ಪ್ರಕಾರ ೧೮೫೨ನೇ ಇಸವಿಯಲ್ಲಿ ದೇಣಿಗೆಯೆಂದು ೧೯೪೭ ರೂಪಾಯಿ ೫೦ ಪೈಸೆ ಸಂಗ್ರಹವಾಗಿತ್ತು. ಸಂಗ್ರಹವಾದ ಹಣ ಹಾಗೂ ಖರ್ಚುವೆಚ್ಚಗಳ ನಿಖರವಾದ ಲೆಕ್ಕ ಇಟ್ಟು ಅದನ್ನು ಶಾಲೆಯ ವಾರ್ಷಿಕ ವರದಿಯಲ್ಲಿ ಒಪ್ಪಿಸಲಾಗುತ್ತಿತ್ತು. ಆಗ ಮುಂದಿನ ವರ್ಷದ ಅನುದಾನ ಹಾಗೂ ದೇಣಿಗೆ ಕೇಳಲು ಸುಲಭವಾಗುತ್ತಿತ್ತು.

೧೮೫೨ರಲ್ಲಿ ಶಿಕ್ಷಣ ಇಲಾಖೆಯು ಮಾದರಿ ಶಿಕ್ಷಕಿ ಎಂದು ಸಾವಿತ್ರಿಬಾಯಿಯವರನ್ನು ಸನ್ಮಾನಿಸಿತು. ೧೮೫೩ರಲ್ಲಿ ಈ ಶಾಲೆಗಳಲ್ಲಿ ಕಲಿತ ಒಟ್ಟು ೨೩೭ ವಿದ್ಯಾರ್ಥಿನಿಯರು ಪುಣೆಯ ಕಾಲೇಜಿನಲ್ಲಿ ಪರೀಕ್ಷೆ ಬರೆದರು. ಪರೀಕ್ಷೆ ಬರೆಯಲು ಹೋದ ಹೆಣ್ಣುಮಕ್ಕಳನ್ನು ನೋಡುವ ಕುತೂಹಲದಿಂದ ಪುಣೆಯ ಕಾಲೇಜಿನ ಕಂಪೌಂಡಿನೊಳಗೆ ೩೦೦೦ ಜನ, ಹೊರಗೆ ಕೆಲವು ಸಾವಿರ ಜನ ನೆರೆದಿದ್ದರು!

೧೮೫೬ರ ಹೊತ್ತಿಗೆ ಅವರ ಶಾಲೆಗಳಲ್ಲಿ ೨೫೮ ಅಸ್ಪೃಶ್ಯ ಮಕ್ಕಳು ಕಲಿಯುತ್ತಿದ್ದರು. ಗಾನು ಶಿವಾಜಿ ಮಾಂಗ್ ಹಾಗೂ ಧುರಾಜಿ ಅಪ್ಪಾಜಿ ಚಂಬಾರ್ ಎಂಬ ಜೋತಿಬಾ ಗೆಳೆಯರೂ ಶಿಕ್ಷಕರಾಗಿ ಬೋಧಿಸುತ್ತಿದ್ದರು. ದಕ್ಷಿಣಾ ಪ್ರೈಜ್ ಕಮಿಟಿಯಿಂದ ಈ ಶಾಲೆಗೆ ವಾರ್ಷಿಕ ೩೦೦ ರೂ. ಅನುದಾನ ಸಿಗುತ್ತಿತ್ತು ಹಾಗೂ ಸರ್ಕಾರವು ಶಾಲೆಯ ಕಟ್ಟಡಕ್ಕೆಂದು ೫೦೦೦ ರೂಪಾಯಿ ಅನುದಾನ ನೀಡಿತು. ೧೮೫೬ರಲ್ಲಿ ಆ ಮಕ್ಕಳು ಮೊದಲ ಪರೀಕ್ಷೆ ಬರೆದರು.

ಆಗಲೂ ಸಹಾ ಈಗಿನ ಹಾಗೆ ಶಾಲೆಯನ್ನು ಅರ್ಧಕ್ಕೇ ಬಿಟ್ಟು ಹೋಗುವವರು ಇದ್ದರು. ಅರ್ಧಕ್ಕೆ ಶಾಲೆ ನಿಲ್ಲಿಸುವುದನ್ನು ತಡೆಯಲು ವಿದ್ಯಾರ್ಥಿಗಳಿಗೆ ಭತ್ಯೆ ಕೊಡುವುದು, ಪಾಠ ಅರ್ಥವಾಗುವಂತೆ ಅವರ ಭಾಷೆಯಲ್ಲಿ ಮಾಡುವುದು, ಸುಲಭದಲ್ಲಿ ನೆನಪಿಡುವ ವಿಧಾನ ಹೇಳಿಕೊಡುವುದು, ಮಕ್ಕಳ ತಾಯ್ತಂದೆಯರಿಗೆ ಶಿಕ್ಷಣದ ಪ್ರಾಮುಖ್ಯತೆ ಕುರಿತು ಹೇಳುವುದು, ಪಾಲಕರಿಗೂ ಅಕ್ಷರ ಕಲಿಸುವುದು ಮುಂತಾದ ಮಾರ್ಗಗಳನ್ನು ಸಾವಿತ್ರಿ ಅನುಸರಿಸಿದರು. ಮಕ್ಕಳು ಶಾಲೆ ಮುಗಿಸಿದ ನಂತರ ಉದ್ಯೋಗ ಮಾಡಲು ಅನುಕೂಲವಾಗುವಂತೆ ಕೆಲವು ಕೈಕೆಲಸಗಳನ್ನೂ ಕಲಿಸುತ್ತಿದ್ದರು. ಅರ್ಧಕ್ಕೆ ಓದು ನಿಲಿಸುವುದನ್ನು ತಡೆಯಲು ಜಾತ್ರಾ-ಖೇತ್ರಾ ವಿಧಾನ ಅನುಸರಿಸಿದರು. ಸಂತೆ, ಜಾತ್ರೆ, ತೀರ್ಥಕ್ಷೇತ್ರವೆನ್ನದೆ ಎಲ್ಲೆಡೆ ಶಿಕ್ಷಣದ ಮಹತ್ವ ಸಾರುವ ವಿಷಯಗಳನ್ನು ಪ್ರಚಾರ ಮಾಡತೊಡಗಿದರು. ಮಕ್ಕಳಲ್ಲಿ ಓದುವ ಹುಚ್ಚು ಬೆಳೆಸಿದರು. ಅವರ ಶಾಲೆಯ ವಿದ್ಯಾರ್ಥಿನಿಯೊಬ್ಬಳು ಯಾವುದೋ ಸ್ಪರ್ಧೆಯಲ್ಲಿ ಬಹುಮಾನ ಪಡೆದಾಗ, ಅದನ್ನು ಸ್ವೀಕರಿಸಲು ವೇದಿಕೆ ಹತ್ತಿದವಳು ಮುಖ್ಯ ಅತಿಥಿಗಳ ಬಳಿ ನಮಗೆ ಬೊಂಬೆ ಬೇಡ; ನಮ್ಮ ಶಾಲೆಗೆ ಗ್ರಂಥಾಲಯ ಕೊಡಿ ಎಂದು ಕೇಳಿದಳಂತೆ! ಅವಳ ತಾಯ್ತಂದೆಯರು ಆ ಹುಡುಗಿ ಸದಾ ಒಂದಲ್ಲ ಒಂದು ಪುಸ್ತಕ ಹಿಡಿದು ಓದುತ್ತಾಳೆ ಎಂದು ದೂರಿದರಂತೆ.

ಹೀಗೆ ಫುಲೆ ದಂಪತಿಗಳು ಒಂದಾದಮೇಲೊಂದು ಶಾಲೆ ತೆರೆದು ತಳಸಮುದಾಯದ ಮಕ್ಕಳಿಗೆ, ಎಲ್ಲ ಹೆಣ್ಮಕ್ಕಳಿಗೆ ವಿದ್ಯಾದಾನ ಮಾಡತೊಡಗಿದರು. ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಹಾಜರು ಮಾಡುವಂತಾದ ಮೇಲೆ ೮-೯ ವರ್ಷ ನಂತರ ಬಾಲಕಿಯರ ಶಾಲೆಗಳನ್ನು ಸರ್ಕಾರದ ಶಿಕ್ಷಣ ಇಲಾಖೆಗೆ ಮಿಸ್ ಮಿಷೆಲ್ ಅವರ ಸುಪರ್ದಿಗೆ ವಹಿಸಿದರು. ಹೆಣ್ಮಕ್ಕಳು ಅಕ್ಷರ ಕಲಿಯತೊಡಗಿದುದು ಸಂಪ್ರದಾಯವಾದಿಗಳಿಗೆ ಹೊಟ್ಟೆ ಕಿವುಚುವಂತೆ ಮಾಡಿತು. ಶೂದ್ರಾತಿಶೂದ್ರ, ಮಹಿಳೆಯರಿಗೆ ಅಕ್ಷರ ಕಲಿಸಿ ಧರ್ಮದ್ರೋಹ ಮಾಡುತ್ತಿದ್ದಾರೆ ಎಂಬ ಆಪಾದನೆಗಳು ಬಂದವು. ಬೆದರಿಕೆಗಳೂ ಬಂದವು. ಅದೆಲ್ಲದರಿಂದ ಒತ್ತಡಕ್ಕೊಳಗಾದ ಜೋತಿಬಾರ ತಂದೆ ಮಗ ಸೊಸೆಯನ್ನು ಮನೆಯಿಂದ ಹೊರಕಳಿಸಿದರು. ಕೆಲಕಾಲ ಗೆಳೆಯ ಉಸ್ಮಾನ್ ಶೇಕ್ ಅವರ ಮನೆಯಲ್ಲಿದ್ದ ಯುವದಂಪತಿ ನಂತರ ಬೇರೆಕಡೆ ಮನೆ ಮಾಡಿಕೊಂಡರು.

ಸಾವಿತ್ರಿ ಬಾಯಿ ಒಮ್ಮೆ ಆರಾಮವಿಲ್ಲದೆ ತವರಿನಲ್ಲಿ ಉಳಿದಿದ್ದಾಗ ಅವರ ಅಣ್ಣ, ‘ನಿಮ್ಮನ್ನು ಜಾತಿಜನ ಬೈಯುವುದು ಸರಿಯೇ ಇದೆ, ಅಸ್ಪೃಶ್ಯರಿಗೇಕೆ ಶಿಕ್ಷಣ ಕೊಡುತ್ತಿದ್ದೀರಿ? ಮುಟ್ಟಬಾರದ ಕೀಳುಜನ ಅವರು’ ಎಂದು ಸಾವಿತ್ರಿಯ ಬಳಿ ವಾದಿಸಿದ್ದರು. ಅದಕ್ಕೆ ಸಾವಿತ್ರಿ, ‘ವಿದ್ಯೆಯಿಲ್ಲದಿರುವುದು ಪಶುತ್ವಕ್ಕೆ ಸಮ. ಜ್ಞಾನ ಸಂಪಾದನೆ ಬ್ರಾಹ್ಮಣರಿಗೆ ಉನ್ನತ ಸ್ಥಾನಮಾನ ನೀಡುತ್ತದೆ. ಜ್ಞಾನ ಮಹತ್ವವಾದುದು ಮತ್ತು ವ್ಯಕ್ತಿಯನ್ನು ಕೀಳುತನದಿಂದ ಮೇಲೇರಿಸುವಂಥದು. ನನ್ನ ಗಂಡ ದೇವರಂಥವರು, ಅವರನ್ನು ಯಾರಿಗೂ ಹೋಲಿಸಲಾಗದು. ಅವರು ಅಸ್ಪೃಶ್ಯರೂ ಕೂಡಾ ವಿದ್ಯೆ ಕಲಿತು ಸ್ವಾತಂತ್ರ್ಯ ಗಳಿಸಲಿ ಎಂದು ಬ್ರಾಹ್ಮಣರನ್ನು ಎದುರು ಹಾಕಿಕೊಂಡು ಹೋರಾಡುತ್ತಿದ್ದಾರೆ. ಅಸ್ಪೃಶ್ಯರೂ ಘನತೆವೆತ್ತ ಬದುಕು ನಡೆಸುವಂತಾಗಲಿ ಎಂದೇ ನಾನೂ ಅವರಿಗೆ ವಿದ್ಯೆ ಕಲಿಸುತ್ತೇನೆ. ಇದರಲ್ಲಿ ತಪ್ಪೇನಿದೆ? ನನ್ನ ಪತಿ ದೇವರ ಹೆಸರು ಹೇಳಿ ತೀರ್ಥಯಾತ್ರೆಗೆ ಹೋಗುವುದಿಲ್ಲ. ಅವರು ವಾಸ್ತವವಾಗಿ ಮಾಡುತ್ತಿರುವುದು ದೇವರ ಕೆಲಸವನ್ನೇ. ಅದು ನನಗೂ ಇಷ್ಟ. ಇದರಿಂದ ನಮಗೆ ಅಪಾರ ಸಂತೋಷ ಸಿಗುತ್ತದೆ’ ಎಂದು ಉತ್ತರಿಸಿದ್ದರು. ತಾಯಿ, ಸೋದರನೊಡನೆ ನಡೆಸಿದ ಚರ್ಚೆಯನ್ನು ಜೋತಿಬಾರಿಗೆ ಬರೆದ ಒಂದು ಪತ್ರದಲ್ಲಿ ಸಾವಿತ್ರಿ ದೀರ್ಘವಾಗಿ ಪ್ರಸ್ತಾಪಿಸಿದ್ದಾರೆ. ಹೀಗೆ ತಮ್ಮದೇ ಆಪ್ತ ಬಂಧುಬಳಗ, ಹಿತೈಷಿಗಳಿಂದ ಬಂದ ವಿರೋಧಗಳನ್ನು ಎದುರಿಸುತ್ತ, ಅವರಿಗೂ ಉತ್ತರಿಸುತ್ತ, ಮನವೊಲಿಸುತ್ತ ಫುಲೆ ದಂಪತಿಗಳು ತಮ್ಮ ಕೆಲಸವನ್ನು ಶ್ರದ್ಧೆಯಿಂದ ಮುಂದುವರೆಸಿದರು.

ಬೋಧಿಸುವವರ ಯಶಸ್ಸು ತಿಳಿಯಲು ಅವರ ಶಿಷ್ಯಗಣವೂ ಒಂದು ಸೂಚಿಯಾಗಬಲ್ಲದು. ಫುಲೆ ಶಾಲೆಯಲ್ಲಿ ಕಲಿತ ಹೆಣ್ಣುಮಕ್ಕಳು ವೈಚಾರಿಕ ಜಾಗೃತಿ ಪಡೆದರು. ಅವರ ಶಾಲೆಯಲ್ಲಿ ಕಲಿಯುತ್ತಿದ್ದ ೧೪ ವರ್ಷದ ಮುಕ್ತಾಬಾಯಿ ಹಾಗೂ ಅವರ ಸಮಕಾಲೀನಳಾದ ಹಾಗೂ ಸತ್ಯಶೋಧಕ ಸಮಾಜದ ಪ್ರಭಾವಕ್ಕೊಳಗಾದ ತಾರಾಬಾಯಿ ಶಿಂಧೆ – ಈ ಈರ್ವರೂ ಜಾತಿವ್ಯವಸ್ಥೆಯನ್ನು ಪ್ರಶ್ನಿಸಿದರು. ಅಷ್ಟೇ ಅಲ್ಲ, ಅದರೊಳಗಿರುವ ಪಿತೃಪ್ರಾಧಾನ್ಯವನ್ನು ಅದರ ಹೆಸರೇ ಎತ್ತದೆ ಬಯಲಿಗೆಳೆದರು. ಇಬ್ಬರು ತಳಸಮುದಾಯದವರು, ಅದರಲ್ಲೂ ಹುಡುಗಿಯರು, ಈ ಪ್ರಶ್ನೆಗಳನ್ನೆತ್ತಿದ್ದು ಕೆಲವರಿಗೆ ನುಂಗಲಾರದ ತುತ್ತಾಯಿತು.

ಮಾಂಗ್ ಸಮುದಾಯದ ಮುಕ್ತಾಬಾಯಿ ೧೯೫೫ರಲ್ಲಿ ಬರೆದ ಪ್ರಬಂಧವು ತಳಸಮುದಾಯಗಳು ಆ ಕಾಲದಲ್ಲಿ ಎದುರಿಸುತ್ತಿದ್ದ ಸಂಕಟಗಳು ಹಾಗೂ ಆಕ್ರೋಶ ಹೇಗಿತ್ತೆಂದು ತಿಳಿಸುತ್ತದೆ. ಜೊತೆಗೆ ಸಾವಿತ್ರಿ ಶಾಲೆಗಳಲ್ಲಿ ಹುಡುಗಿಯರು ಪಡೆಯುತ್ತಿದ್ದ ಮುಕ್ತ ತಿಳುವಳಿಕೆ ಮತ್ತು ಶಿಕ್ಷಣದ ಗುಣಮಟ್ಟವನ್ನೂ ಅದು ತಿಳಿಸುತ್ತದೆ. ಮುಕ್ತಾಬಾಯಿ ಮಾಂಗ್, ಮಹಾರ್ ಎಂಬ ಎರಡು ಅಸ್ಪೃಶ್ಯ ಜಾತಿಗಳ ಒಡಲ ಸಂಕಟದ ಕುರಿತು ಹೀಗೆ ಬರೆಯುತ್ತಾಳೆ:

‘ವೇದಗಳು ಬರೀ ಬ್ರಾಹ್ಮಣರಿಗಾದರೆ ಅವು ನಮಗಲ್ಲ. ವೇದಗಳು ಬರೀ ಬ್ರಾಹ್ಮಣರಿಗಾದರೆ ನಮಗೆ ಪುಸ್ತಕಗಳಿಲ್ಲ. ಅವರು ಹೇಳುವಂತೆ ವೇದಗಳನ್ನು ನೋಡುವುದರಿಂದಲೇ ನಮಗೆ ಪಾಪ ಸುತ್ತಿಕೊಳ್ಳುತ್ತದೆಯಾದ್ದರಿಂದ ಬೈಬಲು, ಕೊರಾನಿನಂತೆ ನಮಗೆ ಯಾವುದೇ ಧರ್ಮಗ್ರಂಥವಿಲ್ಲ. ಓ ದೇವರೇ, ಹಾಗಾದರೆ ಹೇಳು, ಯಾವುದೇ ಪುಸ್ತಕವಿಲ್ಲದ ನಮ್ಮದು ಯಾವ ಧರ್ಮ?

ಈ ಹಿಂದೆ ಕಟ್ಟಡ ಕಟ್ಟುವಾಗ ಮಾಂಗ್ ಮಹಾರರಿಗೆ ಕೆಂಪು ಸೀಸದ ರಸ ಕುಡಿಸಿ ಸಾಯಿಸಿ ಅದರ ಪಾಯದಲ್ಲೇ ನಮ್ಮನ್ನು ಜೀವಂತವಾಗಿ ಹೂಳಲಾಗುತ್ತಿತ್ತು. ನಮ್ಮ ತಲೆಮಾರುಗಳನ್ನೇ ಹೀಗೆ ನಾಶಮಾಡಲಾಯಿತು. ನಮ್ಮನ್ನು ಅವರು ದನ ಎಮ್ಮೆಗಳಿಗಿಂತ ಕೀಳಾಗಿ ಕಂಡರು. ನೀವು ಕುಂಟುಕತ್ತೆಗೆ ಹೊಡೆದರೂ ಅದರ ಯಜಮಾನ ಆಕ್ಷೇಪಿಸುತ್ತಾನೆ. ಆದರೆ ಮಹಾರ್, ಮಾಂಗ್‌ಗಳಿಗೆ ಹೊಡೆದರೆ ಆಕ್ಷೇಪ ವ್ಯಕ್ತಪಡಿಸಲು ಯಾರಿದ್ದಾರೆ? ಪೇಶ್ವಾ ಬಾಜೀರಾವ್ ಆಳುವಾಗ ವ್ಯಾಯಾಮ ಶಾಲೆಯ ಎದುರು ಅಕಸ್ಮಾತ್ ಮಹಾರ್ ಅಥವಾ ಮಾಂಗರು ಸುಳಿದರೆ ಅವನ ತಲೆ ಕಡಿದು ಕತ್ತಿಯನ್ನು ಬ್ಯಾಟು ಮಾಡಿಕೊಂಡು ಬ್ಯಾಟುಬಾಲು ಆಡುತ್ತಿದ್ದರಂತೆ. ಅವರ ಮುಂದೆ ಹೋದರೇ ಶಿಕ್ಷೆಯಾಗುವಾಗ ಆ ಶಿಕ್ಷೆ ತಡೆಯಲು ಹೋಗುವವರಾರು?

.. ಬ್ರಾಹ್ಮಣ ಮಕ್ಕಳು ಕಲ್ಲೆಸೆದು ತಮಗೆ ತೀವ್ರ ಗಾಯಗಳನ್ನು ಮಾಡಿದರೂ ಮಾಂಗ್ ಹಾಗೂ ಮಹಾರ್ ಮಕ್ಕಳು ಎಂದೂ ದೂರು ದಾಖಲಿಸಿಲ್ಲ. ಅವರು ಮೌನವಾಗಿ ನರಳುತ್ತಾರೆ. ಏಕೆಂದರೆ ಮತ್ತೆ ತಂಗಳೂಟ ಬೇಡಲು ಬ್ರಾಹ್ಮಣರ ಮನೆಗೇ ಹೋಗಬೇಕೆಂದು ಅವರಿಗೆ ಗೊತ್ತಿದೆ. ಓ ದೇವರೇ! ಎಂಥ ನೋವು ಇದು. ಈ ಅನ್ಯಾಯದ ಬಗ್ಗೆ ಮತ್ತಷ್ಟು ಬರೆಯಹೋದರೆ ನನಗೆ ಕಣ್ಣೀರು ಉಕ್ಕುತ್ತದೆ.

ಕರುಣಾಮಯಿಯಾದ ದೇವರು ಇಂಥ ದಮನದ ವಿರುದ್ಧ ಧರ್ಮಬುದ್ಧಿಯ ಬ್ರಿಟಿಷರನ್ನು ಕಳಿಸಿದ್ದಾನೆ. ಈಗ ನಾವು ಉತ್ತಮ ಬಟ್ಟೆ ಧರಿಸಿದರೆ ಯಾರೂ ಶಿಕ್ಷಿಸುವುದಿಲ್ಲ. ಮಹಾರ್, ಮಾಂಗ್‌ಗಳು ಶಾಲೆಗೆ ಹೋಗಬಹುದು, ಅದಕ್ಕೆ ಬ್ರಿಟಿಷರ ಬೆಂಬಲವಿದೆ. ಈಗ ನಮಗೆ ಯಾರೂ ಕಿರುಕುಳ ನೀಡುವುದಿಲ್ಲ, ನೇಣಿಗೇರಿಸುವುದಿಲ್ಲ, ಯಾರೂ ನಮ್ಮನ್ನು ಜೀವಂತವಾಗಿ ಹೂಳುವುದಿಲ್ಲ. ನಮ್ಮ ಮುಂದಿನ ಸಂತತಿ ಇನ್ನು ಜೀವಂತವಾಗಿ ಬಾಳಿ ಬದುಕಬಹುದು. ನಾವು ಬಟ್ಟೆ ಧರಿಸಬಹುದು, ಬಟ್ಟೆ ಹೊದೆಯಬಹುದು. ತನ್ನ ಆದಾಯಕ್ಕೆ ತಕ್ಕಂತೆ ಬದುಕುವ ಹಕ್ಕು ಇದೆ. ಅಸ್ಪೃಶ್ಯತೆಯಿಲ್ಲ, ಯಾವ ನಿಷೇಧವೂ ಇಲ್ಲ. ಗುಲ್ತೇಕಡಿಯ ಬಜಾರು ಕೂಡಾ ನಮಗೆ ಈಗ ತೆರೆದಿದೆ. ಓ ಮಹಾರ್, ಮಾಂಗ್‌ಗಳೇ, ಜ್ಞಾನದ ಔಷಧ ಮಾತ್ರ ನಿಮ್ಮನ್ನು ಎಲ್ಲ ರೋಗಗಳಿಂದ ಗುಣಪಡಿಸಬಲ್ಲದು. ದಯವಿಟ್ಟು ಕಷ್ಟಪಟ್ಟು ಕೆಲಸ ಮಾಡಿ, ಅಧ್ಯಯನ ಮಾಡಿ. ಜ್ಞಾನ ನಿಮ್ಮನ್ನು ಶೋಷಣೆಯಿಂದ ಪಾರುಮಾಡುತ್ತದೆ.’

ಮುಕ್ತಾಬಾಯಿಯ ಬರಹವು ಹರಿವ ನದಿಯ ಓಘ ಪಡೆದಿದೆ. ಎಳೆಯ ಹುಡುಗಿಯ ಎದೆಯಲ್ಲಿ ಹೆಪ್ಪುಗಟ್ಟಿ ಇದ್ದಿದ್ದೆಲ್ಲವನ್ನು, ಅವಳ ತಲೆಮಾರುಗಳ ಹಿಂದಿನ ಹಿರಿಯರ ಎದೆಗಳಲ್ಲಿ ಹೆಪ್ಪುಗಟ್ಟಿದ್ದ ದುಃಖ ಆಕ್ರೋಶವನ್ನು, ಕರಗಿಸಿ ನದಿಯಂತೆ ಹರಿಯುವ ಶಕ್ತಿಯನ್ನು ಅಕ್ಷರ ಅವಳಿಗೆ ನೀಡಿತು. ಸಾವಿತ್ರಿ ಕಲಿಸಿದ ಹೆಣ್ಣುಮಕ್ಕಳು ಹೀಗೆ ದನಿಯಿಲ್ಲದವರಿಗೆ ದನಿಯಾಗಿ ಒದಗಿದ ಮೊದಲ ಜೀವಗಳಾದವು.

ಭಾರತದ ಮೊತ್ತಮೊದಲ ಸ್ತ್ರೀವಾದಿ ಲೇಖಕಿ ತಾರಾಬಾಯಿ ಶಿಂಧೆ ಇವರಿಂದ ಪ್ರಭಾವಿತಳಾದ ಪರೋಕ್ಷ ಶಿಷ್ಯೆ ಎನ್ನಬಹುದು. ಆಕೆಯ ತಂದೆ ಸತ್ಯಶೋಧಕ ಸಮಾಜದ ಸದಸ್ಯರಾಗಿದ್ದರು. ಅವಳು ೧೮೮೨ರಲ್ಲಿ ಬರೆದ ‘ಸ್ತ್ರೀಪುರುಷ ತುಲನ’ ಎಂಬ ಪುಟ್ಟ ಹೊತ್ತಗೆ ಇವತ್ತಿಗೂ ದಿಟ್ಟವಾಗಿ ಯುವತಿಯೊಬ್ಬಳು ಬರೆದ ಮೊದಲ ಭಾರತೀಯ ಸ್ತ್ರೀವಾದಿ ಬರಹವಾಗಿದೆ. ಫುಲೆಗಳಿಂದ ಪ್ರಭಾವಿತಗೊಂಡಿದ್ದ ತಾರಾಬಾಯಿ ಶಿಂಧೆ ‘ಸ್ತ್ರೀ ಪುರುಷ ತುಲನ’ದಲ್ಲಿ ನಿರ್ಭಿಡೆಯಿಂದ ದೇವರನ್ನೂ, ಪುರಾಣ ಶಾಸ್ತ್ರಗ್ರಂಥಗಳನ್ನೂ ತರಾಟೆಗೆ ತೆಗೆದುಕೊಂಡಳು. ಆಗ ಪ್ರಕಟವಾಗಿದ್ದ ಪುಸ್ತಕವೊಂದರ ಕಥೆಗಳ ಸ್ತ್ರೀಪಾತ್ರ ಪೋಷಣೆ, ನಾಟಕಗಳ ಸ್ತ್ರೀ ಪಾತ್ರ, ಪುರಾಣದಲ್ಲಿ ಮಹಿಳೆಯ ಚಿತ್ರಣ, ದೇವಾನುದೇವತೆಗಳ ವರ್ತನೆಗಳು, ಅಂದಿನ ಸಮಾಜದಲ್ಲಿ ಪುರುಷರ ತಾರತಮ್ಯದ ನಡವಳಿಕೆಗಳು ಮುಂತಾದವನ್ನೆಲ್ಲ ಕಟುವಾಗಿ ಟೀಕಿಸಿದ ತಾರಾಬಾಯಿ ತನ್ನ ಬರಹವನ್ನು ಪುಸ್ತಕ ಮಾಡಿ ಅಚ್ಚು ಹಾಕಿದ್ದೇ ದೊಡ್ಡ ಹೋರಾಟವಾಗಿತ್ತು. ಕದ್ದುಮುಚ್ಚಿ ೫೦೦ ಪ್ರತಿ ಅಚ್ಚು ಹಾಕಿಸಿ ಮಾರಾಟ ಮಾಡಲಾಯಿತು. ಮಹಿಳೆ ಧೈರ್ಯವಾಗಿ ತನ್ನ ಕುಲಕ್ಕಾಗುತ್ತಿರುವ ಅನ್ಯಾಯವನ್ನು ಅಷ್ಟು ಕಟುಮಾತುಗಳಲ್ಲಿ ಗಟ್ಟಿದನಿಯಲ್ಲಿ ಹೇಳಲು ಸಾಧ್ಯವಾಗಿಸಿದ್ದು ಫುಲೆಗಳು ತಂದ ಶಿಕ್ಷಣ, ಸಾಮಾಜಿಕ ಸುಧಾರಣೆ. ಎಲ್ಲ ಜಾತಿಗಳಲ್ಲೂ ಇರುವ ಲಿಂಗತಾರತಮ್ಯವನ್ನು ಎತ್ತಿ ತೋರಿಸುತ್ತ ಕಟುಮಾತುಗಳಲ್ಲಿ ಕುಟುಕಿರುವ ಆ ಹೊತ್ತಗೆ ಎಲ್ಲ ಸಮುದಾಯದ ಪುರುಷರನ್ನೂ ಕೆರಳಿಸಿತು. ಬ್ರಾಹ್ಮಣ ಮತ್ತು ಕುಣಬಿ ಸಮುದಾಯದವರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಭಾಲೇಕರ್ ಎನ್ನುವವರು ಕಟುವಿರೋಧ ವ್ಯಕ್ತಪಡಿಸಿದರು. ಆಗ ಸ್ವತಃ ಜಾತಿ ತಾರತಮ್ಯ ಅನುಭವಿಸುವ ಅಬ್ರಾಹ್ಮಣ ಮನಸ್ಥಿತಿಯಲ್ಲಿ ಹುದುಗಿಕೊಂಡಿರುವ ಲಿಂಗತಾರತಮ್ಯವನ್ನು ಎತ್ತಿ ತೋರಿಸಿ ಜೋತಿಬಾ ಉತ್ತರಿಸಿದರು. ತಾರಾಬಾಯಿಯನ್ನು ಸಮರ್ಥಿಸಿ ಲೇಖನ ಬರೆದು ಅವಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿದರು. ಅಷ್ಟೇ ಅಲ್ಲ, ಹೆಣ್ಣನ್ನು ಸದಾ ವಿಧೇಯ ಸ್ಥಿತಿಯಲ್ಲಿಡಲು ಚಾಲ್ತಿಗೆ ಬಂದ ಲಿಂಗತಾರತಮ್ಯ ಭಾರತೀಯ ಸಮಾಜದ ಕಟುವಾಸ್ತವವಾಗಿದ್ದು ಆಕೆ ಸತ್ಯವನ್ನೇ ಬರೆದಿದ್ದಾಳೆ ಎಂದು ಹೇಳಿದರು.

ಅದುವರೆಗೂ ಅಸ್ಪೃಶ್ಯ ಸಮುದಾಯದ ಜನ ಬಾಯಾರಿದರೂ ಹನಿ ನೀರನ್ನು ತಂತಾವೇ ಕೆರೆ, ಬಾವಿ, ನದಿಗಳಿಂದ ತೆಗೆದುಕೊಳ್ಳುವಂತಿರಲಿಲ್ಲ. ಫುಲೆ ದಂಪತಿಗಳು ೧೮೬೮ರಲ್ಲಿ ಎಲ್ಲರಿಗೂ ಬಳಕೆಗೆ ಮುಕ್ತವಾದ ನೀರಿನ ತೊಟ್ಟಿ ಕಟ್ಟಿದರು. ೧೮೭೦ರಲ್ಲಿ ಭೀಕರ ಕ್ಷಾಮ ತಲೆದೋರಿತು. ಆಗ ಕ್ಷಾಮ ಪರಿಹಾರ ಕೇಂದ್ರಗಳನ್ನು ಸ್ಥಾಪಿಸುವಲ್ಲಿ, ಅದಕ್ಕೆ ತಕ್ಕಷ್ಟು ದವಸಧಾನ್ಯ ಪಡೆಯುವಲ್ಲಿ ಹಾಗೂ ಎಲ್ಲೆಲ್ಲಿ ಪರಿಹಾರ ಕೇಂದ್ರ ಸ್ಥಾಪಿಸಬೇಕೆಂದು ಗುರುತಿಸುವಲ್ಲಿ ಸಾವಿತ್ರಿಬಾಯಿ ಮಹತ್ವದ ಪಾತ್ರ ವಹಿಸಿದರು. ಪರಿಹಾರ ಕೇಂದ್ರಗಳು ಶುರುವಾದಾಗ ಅಲ್ಲಿಯೂ ಮಕ್ಕಳಿಗಾಗಿ ಶಾಲೆ ನಡೆಸಿದರು. ಕ್ಷಾಮದಲ್ಲಿ ಅನಾಥರಾದ ಮಕ್ಕಳಿಗೆ ೫೨ ವಸತಿ ಶಾಲೆ ತೆರೆಯುವಲ್ಲಿ ಮಹತ್ವದ ಪಾತ್ರ ವಹಿಸಿದರು. ೧೮೭೭ರಲ್ಲಿ ಕ್ಷಾಮ ಪರಿಹಾರವಾಗಿ ‘ವಿಕ್ಟೋರಿಯಾ ಬಾಲಾಶ್ರಮ’ ಶುರು ಮಾಡಲಾಯಿತು.

ಹೀಗೆ ವಿದ್ಯೆಯನ್ನು ಧಾರೆಯೆರೆಯುವುದೇ ತಮ್ಮ ಕಾಯಕವೆಂದುಕೊಂಡ ಫುಲೆಗಳು ಮೊದಲ ಶಾಲೆಗಳ ತೆರೆದು, ಅಶಿಕ್ಷಿತ ಜನರಿಗೆ ಶಿಕ್ಷಣದ ಮಹತ್ವ ತಿಳಿಸಿ ಹೇಳಿ, ವಿದ್ಯಾಜ್ಯೋತಿಗಳಾಗಿ ಬೆಳಕಿನ ಹೊಸಯುಗಕ್ಕೆ ನಾಂದಿ ಹಾಡಿದರು. (ಮೂಲ: “ಕ್ರಾಂತಿಜ್ಯೋತಿ ಸಾವಿತ್ರಿಬಾಯಿ ಫುಲೆ” ಲೇ: ಡಾ. ಎಚ್.ಎಸ್. ಅನುಪಮಾ ಪ್ರ: ಲಡಾಯಿ ಪ್ರಕಾಶನ)

ಡಾ. ಎಚ್.ಎಸ್. ನುಪಮಾ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *