ಹಿಂದಣ ಹೆಜ್ಜೆ/ ಅದ್ಭುತ ಕಲಾಪ್ರತಿಭೆ ಜಟ್ಟಿ ತಾಯಮ್ಮ- ತಿರು ಶ್ರೀಧರ

ಭರತನಾಟ್ಯ ಮತ್ತು ಸಂಗೀತದಲ್ಲಿ ಅಸಾಧಾರಣ ಪ್ರತಿಭೆ ಹೊಂದಿದ್ದ ಜಟ್ಟಿ ತಾಯಮ್ಮ ಅವರು ಹಲವು ಗುರುಗಳಿಂದ ರೂಪುಗೊಂಡ ಕಲಾವಿದೆ. ಭರತನಾಟ್ಯದ ಮೈಸೂರು ಶೈಲಿಗೆ ಹೊಸಕಳೆ ಜೋಡಿಸಿದ ಅವರು, ಸಂಗೀತದ ಹಲವು ವಿಶಿಷ್ಟ ರಚನೆಗಳಿಗೆ ನೃತ್ಯದಲ್ಲಿ ಅಭಿವ್ಯಕ್ತಿ ಕೊಟ್ಟರು. ತಾಯಮ್ಮನವರ ಕಲಾದೃಷ್ಟಿ ಪ್ರಾಂತೀಯ ಭಾವನೆಗಳನ್ನು ಮೀರಿ ಹಲವು ಹೊಸಪ್ರಯೋಗಗಳನ್ನು ಪ್ರೇರೇಪಿಸಿತು.

ಜಟ್ಟಿ ತಾಯಮ್ಮನವರು ಭರತನಾಟ್ಯ ಮತ್ತು ಶಾಸ್ತ್ರೀಯ ಸಂಗೀತ ಕಲಾವಿದೆಯಾಗಿ ಪ್ರಸಿದ್ಧ ಹೆಸರು. ಇವರು ಜನಿಸಿದ್ದು 1857 ವರ್ಷದಲ್ಲಿ. ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಖಾಸಾ ಊಳಿಗದವರಾಗಿದ್ದ ಜಟ್ಟಿ ದಾಸಪ್ಪನವರ ಪುತ್ರಿಯಾದ ಜಟ್ಟಿ ತಾಯಮ್ಮನವರಿಗೆ ಚಿಕ್ಕವಯಸ್ಸಿನಿಂದಲೂ ಸಂಗೀತದಲ್ಲಿ ಅಭಿರುಚಿ. ತಂದೆ ದಾಸಪ್ಪನವರು ಆಂಧ್ರದ ತೆಲುಗು ಜಾವಡಿ, ಮೂವ-ಗೋಪಾಲ ಮತ್ತು ಕ್ಷೇತ್ರಜ್ಞ ಪದದಲ್ಲಿ ಹೆಸರುವಾಸಿಯಾಗಿದ್ದರು. ತಂದೆಯವರು ಕಲಿಸಿದ ಪಾಠವೇ ಅಲ್ಲದೆ ಸುಬ್ಬರಾಯಪ್ಪನವರಿಂದ ಭರತನಾಟ್ಯ ಶಿಕ್ಷಣವೂ ಇವರಿಗೆ ಲಭಿಸಿತು.

ಕ್ರಮೇಣದಲ್ಲಿ ತಾಯಮ್ಮನವರು ಕವೀಶ್ವರ ಗಿರಿಯಪ್ಪನವರಿಂದ ಅಭಿನಯ, ಚಂದ್ರಶೇಖರ ಶಾಸ್ತ್ರಿಗಳಿಂದ ತೆಲುಗು ಜಾವಡಿ ಮತ್ತು ಪದಗಳು ಹಾಗೂ ಅಭಿನವ ಕಾಳಿದಾಸ ಆಸ್ಥಾನ ವಿದ್ವಾನ್ ಬಸವಪ್ಪಶಾಸ್ತ್ರಿಗಳಿಂದ ಕನ್ನಡ ಜಾವಡಿ ಮತ್ತು ಪದಗಳನ್ನು ಕಲಿತರು. ಅನಂತರ ತಮ್ಮ ಹದಿನೈದನೆಯ ವರ್ಷದಲ್ಲಿ ಅರಮನೆಗಳಲ್ಲಿ ಭರತನಾಟ್ಯ ಪ್ರದರ್ಶನವೊಂದನ್ನು ನೀಡಿ ವಿದ್ವಾಂಸರ ಮೆಚ್ಚುಗೆ ಪಡೆದು ರಾಜನರ್ತಕಿಯಾಗಿ ನೇಮಿಸಲ್ಪಟ್ಟರು. ಆದರೆ ಕಾರಣಾಂತರಗಳಿಂದ ಕೆಲವು ದಿನಗಳಲ್ಲಿಯೇ ಅರಮನೆಯ ವೃತ್ತಿಯಿಂದ ದೂರ ಉಳಿದರು. ಆಮೇಲೆ ಚಾಮರಾಜ ಒಡೆಯರ ಆಹ್ವಾನದ ಮೇಲೆ ವಿಶೇಷ ದಿನಗಳಲ್ಲಿ ರಾಜಸಭೆಗಳಲ್ಲಿ ನೃತ್ಯ ಮಾಡುತ್ತಿದ್ದರಷ್ಟೆ.

ನವ ವ್ಯಾಕರಣ ಪಂಡಿತ ಶೃಂಗೇರಿ ಮಠದ ಸರ್ವಾಧಿಕಾರಿಗಳಾಗಿದ್ದ ಸುಬ್ರಹ್ಮಣ್ಯ ಶಾಸ್ತ್ರಿಯವರಿಂದ ತಾಯಮ್ಮ ಬಹುಕಾಲ ಸಂಸ್ಕೃತ ಶಿಕ್ಷಣ ಪಡೆದಿದ್ದುದರಿಂದ ಅಭಿನಯಕ್ಕಾಗಿ ಅವರು ಹೆಚ್ಚಾಗಿ ಗೀತಗೋವಿಂದ, ಅಮರುಕ, ಕೃಷ್ಣಕರ್ಣಾಮೃತ ಮತ್ತು ಕಾಳಿದಾಸಾದಿಗಳ ಕೃತಿಗಳನ್ನು ಬಳಸುತ್ತಿದ್ದರು. ಅವರಲ್ಲಿ ಕನ್ನಡ, ತೆಲುಗು ಜಾವಡಿ ಮತ್ತು ಪದಗಳ ಭಂಡಾರವೇ ಇತ್ತು. ಸಂಗೀತಶಾಸ್ತ್ರ ವಿಶಾರದ ಆಸ್ಥಾನ ವಿದ್ವಾನ್ ವಾಸುದೇವಚಾರ್ಯರು ತಾಯಮ್ಮನವರಿಗೆ ರಾಗಮಾಲಿಕೆಯ ಒಂದು ವಾಮನಸ್ತೋತ್ರವನ್ನು ಅನುಗ್ರಹಿಸಿದ್ದರು.

ತಾಯಮ್ಮನವರ ಕಲಾದೃಷ್ಟಿ ಪ್ರಾಂತ್ಯಭಾವನೆಗಳಿಂದ ದೂರವಾಗಿ ಬಹು ವಿಶಾಲವಾಗಿತ್ತು. ಉತ್ತರಾದಿ ಸಂಗೀತವನ್ನೂ ಶ್ರೇಷ್ಠ ಕಲಾವಿದರಿಂದ ಅಭ್ಯಾಸಮಾಡಿ ಠುಮರಿ, ಗಜಲ್ ಇತ್ಯಾದಿಗಳಿಗೆ ಮನಮೋಹಕವಾಗಿ ಅಭಿನಯ ನೀಡುತ್ತಿದ್ದರಂತೆ.

ಸುಮಾರು 1935ರಲ್ಲಿ ರಾಗಿಣಿದೇವಿ, ಮಿಸಿ ಮೇಯೊ ಮತ್ತು ಐರ್ಲೆಂಡಿನ ಕೆಲವು ಮಹಿಳೆಯರು ಮೈಸೂರಿಗೆ ಬಂದು ಇವರಿಂದ ಭರತನಾಟ್ಯ ಶಿಕ್ಷಣ ಪಡೆದರೆನ್ನಲಾಗಿದೆ. 1945ನೆಯ ಇಸವಿಯಲ್ಲಿ ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಏರ್ಪಡಿಸಿದ್ದ ಒಂದು ಮಹೋತ್ಸವದಲ್ಲಿ ಇವರ ಅಭಿನಯವನ್ನು ವೀಕ್ಷಿಸಿ ಮೆಚ್ಚಿದ ಸರ್ವೆಪಲ್ಲಿ ರಾಧಾಕೃಷ್ಣನ್ ಅವರು ಇವರಿಗೆ ನಾಟ್ಯಸರಸ್ವತಿ ಎಂಬ ಬಿರುದನ್ನಿತ್ತು ಗೌರವಿಸಿದರು.

ಜಟ್ಟಿ ತಾಯಮ್ಮನವರು 1947 ವರ್ಷದಲ್ಲಿ ಈ ಲೋಕದ ಬಾಳ್ವೆಗೆ ವಿದಾಯ ಹೇಳಿದರು. ಆವರು ರೂಢಿಸಿದ ಶಾಸ್ತ್ರೀಯ ಭರತನಾಟ್ಯ ಸಂಪ್ರದಾಯ ಹಳೆಯ ಮೈಸೂರು ಪ್ರದೇಶದಲ್ಲಿ ಇಂದಿಗೂ ಸ್ಥಿರವಾಗಿ ಉಳಿದಿದೆ. (ಸೌಜನ್ಯ: ಫೇಸ್ ಬುಕ್ ಕನ್ನಡ ಸಂಪದ ಮತ್ತು ಸಲ್ಲಾಪ.ಕಾಂ)

  • ತಿರು ಶ್ರೀಧರ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *