ಹಿಂದಣ ಹೆಜ್ಜೆ / ಅಂಬಾಬಾಯಿಯ ಅಪರೂಪದ ಡೈರಿ… – ಶಾಂತಾ ನಾಗರಾಜ್
೧೯೦೨ರಲ್ಲಿ ಸಂಪ್ರದಾಯಸ್ಥ ಬಡ ಬ್ರಾಹ್ಮಣರ ಮನೆಯಲ್ಲಿ ಚಿತ್ರದುರ್ಗದಲ್ಲಿ ಹುಟ್ಟಿದ ಅಂಬಾಬಾಯಿ ಮುಂದೆ ದೊಡ್ಡ ಹರಿದಾಸ ಕವಯಿತ್ರಿಯಾಗಿ, ಪ್ರಚಾರಕಿಯಾಗಿ ದಾಸ ಪಂಥಕ್ಕೆ ಅತ್ಯಮೂಲ್ಯ ಕೊಡುಗೆಯನ್ನು ನೀಡುತ್ತಾರೆ. ಅವರು ಬರೆದ ಡೈರಿಯೊಂದು ಸಿಕ್ಕಿದ್ದು ಅದು ಅವರ ಬದುಕಿನ ಕೆಲವು ಘಳಿಗೆಗಳನ್ನು ಪರಿಚಯಿಸುತ್ತದೆ. ನೂರು ವರ್ಷಗಳಿಗೆ ಹಿಂದೆ ರಚನೆಯಾದ ಮಹಿಳಾ ಡೈರಿಯಾಗಿ ಇದಕ್ಕೆ ತನ್ನದೇ ಆದ ಚಾರಿತ್ರಿಕ ಮಹತ್ವವೂ ಇದೆ.
೧೯೩೮ ನೇಇಸವಿ. ೩೬ವರ್ಷದ ಮಹಿಳೆಯೊಬ್ಬರು ಒಂದು ಅಪರೂಪದ ದೀಕ್ಷೆಯೊಂದನ್ನು ತೆಗೆದುಕೊಳ್ಳುತ್ತಾರೆ. ಕರ್ನಾಟಕ ಮತ್ತು ನೆರೆ ರಾಜ್ಯವಾದ ಕೊಲ್ಹಾಪುರ ಪಂಢರಾಪುರಗಳಲ್ಲೂ ಸಂಚರಿಸುತ್ತಾ ದಾಸಪಂಥ ಮತ್ತು ದಾಸಸಾಹಿತ್ಯವನ್ನು ಪ್ರಚಾರಮಾಡುವ ದೀಕ್ಷೆಯದು. ಆಕೆ ವಿಧವೆ ಮತ್ತು ಆ ಕಾಲದ ನಿಯಮದಂತೆ ಕೇಶಮುಂಡನಮಾಡಿಸಿಕೊಂಡ ಮಡಿ ಹೆಂಗಸು. ಜೊತೆಯಲ್ಲಿ ಯಾರೂ ಇಲ್ಲ. ಒಂದು ಬವನಾಸಿ( ಹಿತ್ತಾಳೆಯ ಹಿಡಿಯಿರುವ ಪಾತ್ರೆ ) ಭಿಕ್ಷೆಬೇಡಲು. ಕಾಲಿಗೆಗೆಜ್ಜೆ, ಕೈಯಲ್ಲಿ ತಾಳ ಮತ್ತು ಏಕನಾದ ತಂಬೂರಿ, ಜೋಳಿಗೆಯಲ್ಲಿ ಒಂದಷ್ಟು ಕಾಗದದ ಹಾಳೆಗಳು ಮತ್ತು ಮಸಿ ದೌತಿ. ರಸ್ತೆಯಲ್ಲಿ ಹಾಡುತ್ತಾ ಹೋಗುವುದು. ಕೇವಲ ಮೂರೇ ಮನೆಯಲ್ಲಿ ಭಿಕ್ಷೆ ಬೇಡುವುದು, ಅದರಲ್ಲಿ ಅರ್ಧ ದೇವಾಲಯಕ್ಕೆ ದಾನ ನೀಡುವುದು, ಉಳಿದದ್ದನ್ನು ಸ್ವಯಂ ಪಾಕಮಾಡಿ ಒಪ್ಪತ್ತು ಮಾತ್ರ ತಿನ್ನುವುದು, ಊರ ದೇವಾಲಯದ ಕಟ್ಟೆಯಮೇಲೆ ಕುಳಿತುಹಾಡುವುದು, ಕೇಳಿದವರಿಗೆಲ್ಲಾ ಜಾತಿ, ಮತ ಕೇಳದೇ ಹಾಡು ಬರೆದುಕೊಟ್ಟು ಹಾಡುವ ಕ್ರಮವನ್ನೂ ಹೇಳಿಕೊಡುವುದು. ಇದು ಅವರ ಸಂಚಾರದ ಗುರಿ. ಈ ದಾಸಶ್ರದ್ಧೆಯನ್ನು ಅವರು ಸತತ ಎಂಟು ವರ್ಷಗಳ ಕಾಲ ನಡೆಸಿದರು! ಬಹುಶಃ ಆ ಕಾಲಕ್ಕೇನು ಈ ಕಾಲಕ್ಕೂ ಯಾವ ಹರಿದಾಸ ಮಹಿಳೆಯೂ ಈ ಪರಿಯಲ್ಲಿ ದಾಸಪಂಥವನ್ನು ಕೇವಲ ಜನರ ಮನಶಾಂತಿಗಾಗಿ ಪ್ರಚಾರ ಮತ್ತು ಪ್ರಸಾರ ಮಾಡಿದ ಮತ್ತೊಬ್ಬ ಮಹಿಳೆಯಿರಲಾರರು. ಇವರ ಹೆಸರು ಅಂಬಾಬಾಯಿ.
ಅಂಬಾಬಾಯಿಯವರ ಹೆಗ್ಗಳಿಕೆ, ತಾವುಮಾಡುತ್ತಿರುವ ಈ ಕೆಲಸದ ವಿವರವನ್ನು ತಮ್ಮ ಗುರುಗಳಾದ ದೇವರಾಯನ ದುರ್ಗದ ಪರಮಪ್ರಿಯ ಸುಬ್ಬರಾಯದಾಸರಿಗೆ ವರದಿಮಾಡಲು ಪ್ರತಿ ನಿತ್ಯ ಡೈರಿ ಬರೆಯುತ್ತಿದ್ದರು. ಅಚ್ಚುಕಟ್ಟಾಗಿ ದಿನಾಂಕವನ್ನು ನಮೂದಿಸಿ, ತಾವು ಉಳಿದು ಕೊಂಡಿರುವ ಊರಿನ ಹೆಸರನ್ನುಬರೆದು, ತಾವು ಭೇಟಿ ಮಾಡಿದವರ ವಿವರಗಳನ್ನು ಬರೆದು, ತಾವವತ್ತು ಮಾಡಿದ ಎಲ್ಲ ಕಲಾಪಗಳ ವಿವರಗಳನ್ನೂ ಬರೆದು, ಅವೆಲ್ಲವೂ ಗುರು ಕರುಣೆಯೆಂದು ಗುರುವಿಗೆ ಸಮರ್ಪಿಸುತ್ತಾರೆ. ಒಂದು ಸಾಧಾರಣ ನೋಟ್ ಪುಸ್ತಕದಲ್ಲಿ ಬರೆದಿರುವುದರಿಂದ ಅದು ಸಾಕಷ್ಟು ಶಿಥಿಲವಾಗಿದೆ. ಪ್ರಾರಂಭದ ಹಾಳೆಗಳು ಮತ್ತು ಕೊನೆಯ ಹಾಳೆಗಳು ಉದುರಿಹೋಗಿ, ಕೇವಲ ೮೮ ದಿನಗಳ ವಿವರಗಳು ಮಾತ್ರ ಈ ಹಸ್ತಪ್ರತಿಯಲ್ಲಿ ಲಭ್ಯವಾಗಿದೆ.
೧೯೦೨ರಲ್ಲಿ ಸಂಪ್ರದಾಯಸ್ಥ ಬಡ ಬ್ರಾಹ್ಮಣರ ಮನೆಯಲ್ಲಿ ಚಿತ್ರದುರ್ಗದಲ್ಲಿ ಹುಟ್ಟಿದ ಅಂಬಾಬಾಯಿ ಬಾಲ್ಯದಲ್ಲಿ ತುಂಬ ಚುರುಕಾಗಿದ್ದರು. ಹೆಣ್ಣು ಮಕ್ಕಳಿಗೆ ಶಾಲೆ ಅನಿವಾರ್ಯವಾಗಿಲ್ಲದಿದ್ದ ಕಾಲವದಾದರೂ ತಮ್ಮ ಚುರುಕು ಮಗಳನ್ನು ಶಾಲೆಗೆ ಸೇರಿಸಿದರು, ಅವರ ತಂದೆ ಭೀಮಸೇನರಾವ್. ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿಗೆ ಕುಮಾರ ವ್ಯಾಸಭಾರತ ಬಾಯಿಪಾಠವಾಗಿತ್ತು. ಆಕೆ ಅದನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದರು. ಆ ಕಾಲಕ್ಕೆ ತಕ್ಕಂತೆ ಹತ್ತನೇ ವಯಸ್ಸಿಗೆಮದುವೆ, ಹದಿಮೂರು ವರ್ಷಕ್ಕೆ ಒಂದೇ ದಿನ ಪ್ಲೇಗ್ಮಾರಿಗೆ ಗಂಡ ಮತ್ತು ತಂದೆಯ ನಿಧನ. ತಮ್ಮ ೨೯ನೇ ವಯಸ್ಸಿನವರೆಗೆ ಅಂಬಾಬಾಯಿ ತಮ್ಮ ತುತ್ತಿನ ಚೀಲ ಒಪ್ಪತ್ತಿಗೆ ಮಾತ್ರವೇ ತುಂಬಿಕೊಳ್ಳಲು ಅಣ್ಣ, ತಮ್ಮ, ಮತ್ತು ತಂಗಿಯರ ಮನೆಯಲ್ಲಿ ಚಾಕರಿಗೆ ನಿಲ್ಲಬೇಕಾಯಿತು. ೧೯೩೧ರಲ್ಲಿ ಪರಮಪ್ರಿಯ ಸುಬ್ಬರಾಯದಾಸರಿಂದ ’ಗೋಪಾಲಕೃಷ್ಣವಿಠಲದಾಸ ’ ಎನ್ನುವ ಅಂಕಿತ ಪ್ರದಾನವಾದ ಮೇಲೆ ಅಂಬಾಬಾಯಿಯವರ ಜೀವನದ ಗತಿ ಬದಲಾಯಿತು. ಅವರಲ್ಲಿ ಹುದುಗಿದ್ದ ಕಾವ್ಯಗಂಗೆ ಹರಿಯಲಾರಂಭಿಸಿದಳು. ೩೫೦ಕ್ಕೂ ಹೆಚ್ಚು ದೇವರನಾಮಗಳು, ಹತ್ತಾರು ದೀರ್ಘಕೃತಿಗಳು, ವಿಷ್ಣು ತೀರ್ಥರ ಕಬ್ಬಿಣದ ಕಡಲೆಯಂತಹ ಸಂಸ್ಕೃತದ ’ಭಾಗವತ ಸಾರೋದ್ಧಾರ’ವನ್ನು ಕನ್ನಡದಲ್ಲಿ ಸರಳವಾದ ಸಾಂಗತ್ಯದಲ್ಲಿ ಭಾವಾನುವಾದಮಾಡಿದ್ದು, ಇವೆಲ್ಲಕ್ಕೂ ಮುಕುಟವಿಟ್ಟಂತೆ ೨೫೦೧ ಕುಸುಮ ಷಟ್ಪದಿಗಳುಳ್ಳ ’ ಶ್ರೀರಾಮಕಥಾಮೃತಸಾರ ’ ಎನ್ನುವ ರಾಮಾಯಣ ಮಹಾಕಾವ್ಯ ರಚಿಸಿದ್ದು ಇವೆಲ್ಲವೂ ಅಂಬಾಬಾಯಿ ಅವರ ಸಾಧನೆಗಳು. ಇವರ ’ರಾಮಾಯಣ ’ ರಚನೆಯಾದಕಾಲ ೧೯೩೪-೩೫. ಇದು ಕುವೆಂಪುರವರು ’ಶ್ರೀರಾಮಾಯಣದರ್ಶನಂ’ ರಚಿಸಿರುವ (೧೯೪೯) ಸುಮಾರು ಹದಿನಾಲ್ಕು-ಹದಿನೈದು ವರ್ಷಗಳಿಗೂ ಮೊದಲೇ ರಚಿತವಾಗಿದೆ.
ಅಂಬಾಬಾಯಿಯವರ ಡೈರಿ ಬಹಳ ವಿಷಯಗಳಿಂದ ಮಹತ್ವವನ್ನು ಪಡೆಯುತ್ತದೆ. ಆಕೆ ಏಕಾಂಗಿ ಮಹಿಳೆ ಸ್ವಾರ್ಥವಿಲ್ಲದ ಬದುಕನ್ನು ಕೈಗೊಂಡು ಜನರ ನೆಮ್ಮದಿಗಾಗಿ ಭಕ್ತಿಪ್ರಚಾರ ಮಾಡುತ್ತಾ ಅನೇಕ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಅವರ ಗುರುಗಳು ಓದು ಬಾರದವರಿಗೆ ಪ್ರಾಚೀನ ಗ್ರಂಥಗಳ ಪ್ರವಚನವನ್ನು ಮಾಡುತ್ತಿದ್ದಂತೆ ಈಕೆಯೂ ಪ್ರವಚನ ಮಾಡುತ್ತಿದ್ದರು. ಅಲ್ಲಲ್ಲಿ ದಾಸ ಪಂಥದ ಶಾಖೆಯನ್ನು ಸ್ಥಾಪಿಸಿ ಸಂಘಟನೆಗಳನ್ನು ಮಾಡಿದ್ದಾರೆ. ತಾವೇರಚಿಸಿದದೇವರನಾಮಗಳನ್ನುಹಾಡಿದಾಗ, ಅದರ ರಾಗ ವೈಭವಕ್ಕೆ, ಪದ ಲಾಲಿತ್ಯಕ್ಕೆ ಮನ ಸೋತ ಮಹಿಳೆಯರು ಮತ್ತು ಪುರುಷರು “ನಮಗೂ ಇದನ್ನು ಬರೆದುಕೊಡಿ “ ಎಂದು ಕೇಳಿದಾಗ, ತಾವು ರಚಿಸಿದ ಕೀರ್ತನೆಯೆಂದು ಎಲ್ಲೂ ಹೇಳದೇ “ ಯಾರೋ ಗೋಪಾಲಕೃಷ್ಣ ವಿಠಲ ದಾಸರದು “ ಎಂದು ಹೇಳಿ ಪ್ರತಿಗಳನ್ನು ಮಾಡಿ ಹಂಚಿದ್ದಾರೆ. ತಮ್ಮದೇ ಕೆಲವು ದೀರ್ಘ ಕೃತಿಗಳನ್ನು ಮುದ್ರಣ ಮಾಡಿಸಿ ಪ್ರಕಾಶನ ಕೆಲಸವನ್ನೂ ಮಾಡಿದ್ದಾರೆ. ಆನುಗೋಡು ಎನ್ನುವ ಊರಿನಲ್ಲಿ ಪುರಂದರ ದಾಸರು ಬಂದು ಇಲ್ಲಿ ಕುಳಿತಿದ್ದರು ಎನ್ನುವ ಐತಿಹ್ಯವಿದ್ದ ಬಂಡೆಯಿದ್ದ ಸ್ಥಳವನ್ನು, ಆ ಊರಿಗೆ ಅಕಸ್ಮಾತ್ತಾಗಿ ಬಂದ ಅಮಲ್ದಾರರನ್ನು ಭೇಟಿ ಮಾಡಿ, ಅವರಿಗೆ ಸರ್ಕಾರದ ಅಪ್ಪಣೆ ಪಡೆದು ಆ ಬಂಡೆಯ ಮುಂದೆ ಬೃಂದಾವನವನ್ನು ಕಟ್ಟಿಸಿ, ಅದನ್ನು ಸಾರ್ವಜನಿಕ ಕ್ಷೇತ್ರವಾಗಿ ನಿರ್ಮಿಸಿದ್ದಾರೆ. ಇವರ ಪ್ರವಚನದ ವಾಙ್ಮಯತೆಗೆ ಮಾರು ಹೋಗಿ ಅಕ್ಕಪಕ್ಕದ ಊರಿನ ಜನರು ತಮ್ಮ ಊರಿಗೂ ಆಹ್ವಾನಿಸಿ, ಇವರು ಹೋಗುವ ಮುನ್ನವೇ ಕರಪತ್ರಗಳನ್ನು ಪ್ರಕಟಿಸಿ ಹಂಚಿ ಇವರಿಂದ ಪ್ರವಚನ ಮತ್ತು ಭಜನೆಗಳನ್ನುಮಾಡಿಸಿದ್ದಾರೆ.ಕೆಲವು ಊರುಗಳಲ್ಲಿ ’ಸುಜ್ಞಾನ ಮಂದಿರ ’ ಎನ್ನುವ ಭಜನಾಲಯಗಳನ್ನು ಸಾರ್ವಜನಿಕರ ಸಹಾಯದಿಂದ ಸಾರ್ವಜನಿಕರಿಗಾಗಿ ಸ್ಥಾಪಿಸಿದ್ದಾರೆ. ಈ ಎಲ್ಲಾ ಕೀರ್ತಿಗಳನ್ನೂ ಹರಿ ಸಮರ್ಪಣೆ ಮತ್ತು ಗುರು ಸಮರ್ಪಣೆ ಮಾಡಿ ಹೀಗೆ ಹೇಳುತ್ತಾರೆ –
“ ಕಷ್ಟದಲ್ಲಿ ತಲೆತಪ್ಪಿಸಿಕೊಳ್ಳುವುದು ವೈರಾಗ್ಯವಲ್ಲ. ಪರರ ಬಲವದ್ಭಂಧನಕ್ಕೆ ವಹಿಸುವುದು ವೈರಾಗ್ಯವಲ್ಲ. ಬಂದಂಥಾ ಕಷ್ಟನಿಷ್ಟುರಗಳನ್ನು ಜೈಸಿ, ಪರಿಣಾಮವನ್ನು ಪರೀಕ್ಷಿಸಿ, ಸರ್ವರೂ ಸಂತೋಷದಿಂದ ಅಭಿಮಾನಿಸುತ್ತಿದ್ದ ಕಾಲಕ್ಕೆ, ಸಂತೋಷದಿಂದ ಸ್ವಜನಾಭಿಮಾನತ್ಯಾಗ ಪೂರ್ವಕ ಶ್ರೀಹರಿ ಗುರುಚರಣಾರಾಧರರಾಗಿ ತತ್ಪರರಾಗುವುದೇ ಶ್ರೀಹರಿಗುರುಗಳಿಗೆ ಪ್ರೀತಿಕರವಾದ ವೈರಾಗ್ಯ “
ಅಂಬಾಬಾಯಿಯವರು ಹೀಗೆ ಏಕೆ ಹೇಳುತ್ತಾರೆಂದರೆ, ಬಹಳ ಬೇಗ ಅವರ ಕೀರ್ತನೆಗಳು ಹರಿದಾಸರವಲಯದಲ್ಲಿ ಪ್ರಸಿದ್ಧಿಗೆ ಬಂದಿದ್ದವು. ಪರಮ ಪ್ರಿಯ ಸುಬ್ಬರಾಯ ದಾಸರು ಪ್ರಕಟಿಸುತ್ತಿದ್ದ ’ಪರಮಾರ್ಥ ಚಂದ್ರೋದಯ ’ ಎನ್ನುವ ಮಾಸಪತ್ರಿಕೆಯಲ್ಲಿ ಪ್ರತಿತಿಂಗಳೂ ಇವರ ಕೀರ್ತನೆಗಳು ಪ್ರಕಟವಾಗುತ್ತಿದ್ದವು. ಇವರ ಗುರುಗಳು ೧೧೬೫ ಜನರಿಗೆ ಅಂಕಿತ ದೀಕ್ಷೆಯನ್ನು ಕೊಟ್ಟಿದ್ದ ಕಾರಣ, ಅವರೆಲ್ಲರಿಗೂ ಈ ಪತ್ರಿಕೆ ತಲುಪುತ್ತಿತ್ತು. ಹೀಗೂ ಅಂಬಾಬಾಯಿ ಪ್ರಸಿದ್ಧರಾಗಿದ್ದರು. (ಈ ಜನಪ್ರಿಯತೆಯ ಅಹಂಕಾರ ತಲೆಗೇರಿಸಿಕೊಳ್ಳಬಾರದೆನ್ನುವ ಎಚ್ಚರ ಅವರಲ್ಲಿತ್ತು. )
ಅಂಬಾಬಾಯಿಯವರ ಮತ್ತೊಂದು ಪ್ರಯತ್ನವೆಂದರೆ ಸಂಜೆ ಹೊತ್ತಿನಲ್ಲಿ ಮಕ್ಕಳಿಗೆ ಭಜನೆ ಹೇಳಿಕೊಡುವುದು. ಅದನ್ನು ಕುರಿತ ವಿವರ – “ ಕೊಗ್ಗನೂರಿನಲ್ಲಿ ಇರುವಾಗ, ಸಾಯಂಕಾಲ ಊರ ಹೊರಗೆ ಕಲ್ಲುಬೆಂಚಿನಲ್ಲಿ ಕುಳಿತಾಗ ೮-೧೦ ಹುಡುಗರು ಬಂದು ನಮಗೂ ಹಾಡು ಹೇಳಿ ಕೊಡಿ ಎಂದರು. ಶಿವಶಂಕರ, ಪಾಹಿಸ್ತುತಿ, ಮುಂತಾದ ಕೀರ್ತನೆಗಳನ್ನು ಹೇಳಿಕೊಡಲಾಯಿತು. ಮಕ್ಕಳು ಸುಶ್ರಾವ್ಯವಾಗಿ ಹಾಡಿದರು. ಅಲ್ಲೇ ಭಜನೆ ಮಾಡಿ ಮಕ್ಕಳಿಗೆಲ್ಲಾ ಕಲ್ಲು ಸಕ್ಕರೆ ಪ್ರಸಾದವನ್ನುಹಂಚಲಾಯಿತು“ ಎಂದುಬರೆದಿದ್ದಾರೆ.
ಆಕೆಗೆ ಇನ್ನೂ ೩೬ರ ಪ್ರಾಯ ಕೇಶಮುಂಡನವಾದರೇನು ಶರೀರದ ಅಂಗಾಂಗಗಳು ತಮ್ಮ ಪ್ರಕೃತಿ ಧರ್ಮವನ್ನು ಪಾಲಿಸಲೇಬೇಕಲ್ಲ? ಹೀಗೆ ಯಾತ್ರೆ ಮಾಡುವಾಗ ಅಲ್ಲಲ್ಲಿ ಹೆಣ್ಣಿಗೆ ಆಗುವ ’ಮೂರುದಿನ ’ ಋತು ಚಕ್ರದ ಬಗ್ಗೆ ಹೀಗೆ ಬರೆಯುತ್ತಾರೆ “ ಬ್ಯಾಡಗಿಯಲ್ಲಿ ಗುರುಗಳ ಶಿಷ್ಯರಾದ ರಾಮರಾಯರ ಮನೆಯಲ್ಲಿ ರಾತ್ರಿ ಫಲಹಾರವಾಯಿತು. ನಂತರ ಹೊರಗಾದೆ. ತುಂಬಾ ಸಂಕೋಚವಾಯಿತು. ಅವರ ಮನೆಯ ಹೆಂಗಸರು ಬಹಳ ಆದರ ಮಾಡಿದರು. ಮಲಗಲು ಸ್ಥಳ ಕೊಟ್ಟರು. ನಾಲ್ಕು ದಿನಗಳನ್ನು ಅಲ್ಲೇ ಕಳೆಯಬೇಕಾಯಿತು“ .
ಮತ್ತೊಂದು ಊರಿಗೆ ರೈಲಿನಲ್ಲಿ ತಲುಪಿದಾಗ ತೀರಾ ರಾತ್ರಿಯಾಗಿತ್ತು. ಇವರ ಹತ್ತಿರ ಪರಿಚಯದವರೊಬ್ಬರ ವಿಳಾಸವಿತ್ತು. ಮೈಲಿಗಟ್ಟಲೆನಡೆದು ಆ ಮನೆಗೆ ಹೋಗಿ ನೋಡಿದರೆ ಅಲ್ಲಿ ಬೀಗ ಹಾಕಿತ್ತು. ದಿಕ್ಕುಗಾಣದೇ ಆ ಮನೆಯ ಮೆಟ್ಟಿಲ ಮೇಲೆ ಕುಳಿತ್ತಿದ್ದಾಗ ಯಾರೋದಾರಿಹೋಕರು ಈಕೆಯನ್ನು ಗಮನಿಸಿ ತಮ್ಮ ಮನೆಗೆ ಕರೆದೊಯ್ದದ್ದನ್ನು ಹೇಳುತ್ತಾ“ ಶ್ರೀಕೃಷ್ಣಕಾಪಾಡಿದ “ ಎಂದು ಉದ್ಗರಿಸುತ್ತಾರೆ. ಇಂಥಾ ಹಲವಾರು ಘಟನೆಗಳನ್ನು ಯಾವ ಸ್ವಾನುಕಂಪವಿಲ್ಲದೇ ವಿವರಿಸುತ್ತಾರೆ.
ತಳವಾರ ಜಾತಿಯ ಮರಿಯಮ್ಮ ಎನ್ನುವ ಹೆಣ್ಣುಮಗಳು ’ನನ್ನೂರು ರಿತ್ತಿ ಅಲ್ಲಿಗೂಬನ್ನಿ’ ಎಂದು ಕರೆದದ್ದರಿಂದ ಅಲ್ಲಿಗೂ ಹೋಗಿ, ಎರಡು ದಿನವಿದ್ದು, ಅಲ್ಲಿ ಆಕೆಗೂ ಅಂಕಿತ ಬರೆದುಕೊಟ್ಟು, ಕೇವಲ ಬಾಳೇ ಹಣ್ಣು ಸ್ವೀಕರಿಸಿ ಬಂದುದಾಗಿ ಬರೆದಿದ್ದಾರೆ.ಉಪವಾಸ ಮತ್ತು ತಣ್ಣೀರು ಸ್ನಾನಗಳು ಸಹಜವೆನ್ನುವಂತೆ ಸ್ವೀಕರಿಸುತ್ತಾರೆ.ಸವಣೂರಿನ ಹನುಮಂತೇ ಪ್ರಸಾದ್ಎನ್ನುವ ರಜಪೂತ ಹುಡುಗ ತಮ್ಮೂರಿಗೆ ಆಹ್ವಾನಿಸಿದ್ದನ್ನು ದಾಖಲಿಸಿದ್ದಾರೆ. ಪಂಢರಾಪುರದಲ್ಲಿ ಒಂದೇ ಒಂದು ಮನೆಯಲ್ಲಿಯೂ ಭಿಕ್ಷೆ ಹಾಕದೇ ಮುಂದೆಹೋಗಿ’ ಎಂದದ್ದನ್ನು ದಾಖಲಿಸಿ, ಯಾರನ್ನೂ ಆಕ್ಷೇಪಿಸದೇ “ ಇದು ಪಾಂಡುರಂಗನ ಇಚ್ಛೆ “ ಎಂದು ಹೇಳಿ ತೃಪ್ತಿಪಡುತ್ತಾರೆ.
ಇದೊಂದು ಅಪೂರ್ವವಾದ ಡೈರಿ. ಸತತ ಎಂಟು ವರ್ಷಗಳ ಕಾಲ ಪ್ರವಾಸ ಮಾಡುತ್ತಾ ಕೀರ್ತನೆಗಳನ್ನು ರಚಿಸುತ್ತಾ, ತಮ್ಮದೇ ರೀತಿಯಲ್ಲಿ ಅದರ ಪ್ರಸಾರವನ್ನೂ ಮಾಡುತ್ತಾ ಸಂಚರಿಸಿದ ಮಹಿಳೆಯ ಬದುಕನ್ನೂ, ಆಕೆಯ ಮನೋಧಾರ್ಡ್ಯವನ್ನೂ ಬಹಿರಂಗಗೊಳಿಸುವ ಕೃತಿ.
ಶಾಂತಾನಾಗರಾಜ್
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.