ಹಬೀಬುನ್ನೀಸಾಳ ಜನಾಜ – ಬಾನು ಮುಷ್ತಾಕ್
“ಆದರೆ ಅಂತಿಮವಾಗಿ ಅಲ್ಲಾಹನ ಕರೆ ಇದೆಯಲ್ಲಾ… ನನ್ನ ಸಾವು ಉಂಟಾದ ಸಂದರ್ಭದಲ್ಲಿ ತಾವು ನನ್ನ ಜನಾಜದಲ್ಲಿ (ಅಂತ್ಯಕ್ರಿಯೆಯಲ್ಲಿ) ಭಾಗವಹಿಸಬೇಕು. ಬದುಕಿದ್ದಾಗಲೂ ನೀವುಗಳೇ ನನ್ನ ಅಣ್ಣ ತಮ್ಮಂದಿರಾಗಿದೀರಿ. ಇನ್ನು ಸಾವಿನಲ್ಲೂ ನನ್ನ ಬಗ್ಗೆ ಇದೊಂದು ಕರ್ತವ್ಯವಿದೆ.” ಆಕೆ ತನ್ನ ಮನದ ಇಂಗಿತವನ್ನೆಲ್ಲಾ ಹೇಳಿ, ಖಾಲಿಯಾದವಳಂತೆ ಸುಮ್ಮನೆ ಕುಳಿತಳು.
ಇದು ನನ್ನ ತೀರಾ ಖಾಸಗಿ ವಿಷಯ. ನನ್ನ ವೈಯುಕ್ತಿಕ ವಿಷಯಗಳನ್ನು ಸಾರ್ವತ್ರೀಕರಣ ಗೊಳಿಸುವಲ್ಲಿ ನನಗೆ ಅಪಾರ ಸಂಕೋಚವಿದೆ. ಆದರೆ ಹೆಣ್ಣಿನ ತುಡಿತಗಳನ್ನು ಅರ್ಥೈಸಿಕೊಳ್ಳುವಲ್ಲಿ ಈ ಪ್ರಸಂಗವು ನೆರವಾಗಬಹುದು ಎಂಬ ಉದ್ದೇಶದಿಂದ ಮತ್ತು ವಿಭಿನ್ನ ಆಯಾಮವನ್ನು ಹೊಂದಿರುವ ಈ ವಿಷಯವು ನಿಮ್ಮ ಮನಸ್ಸಿನಲ್ಲಿ ಅನೇಕ ಭಾವತರಂಗಗಳನ್ನು ಸೃಷ್ಟಿಸಬಹುದು ಎಂಬ ನಿರೀಕ್ಷೆಯಿಂದ ಇದನ್ನು ನಿಮ್ಮೊಡನೆ ಶೇರ್ ಮಾಡುತ್ತಿದ್ದೇನೆ.
ಆಕೆ ನಮ್ಮ ಕುಟುಂಬಕ್ಕೆ ಹತ್ತಿರವಾದ ಮಹಿಳೆ. ಅಂದರೆ ಆಕೆ ನಮ್ಮ ಬಂಧುವೂ ಅಲ್ಲ ಸ್ನೇಹಿತೆಯು ಅಲ್ಲ. ಉತ್ತರ ಕರ್ನಾಟಕದ ಬಹುಶಃ ರಾಯಚೂರಿನ ನಿವಾಸಿ ಇದ್ದಿರಬಹುದು. ಆಕೆ ಹಾಸನ ನಗರದ ಕಾಲೇಜಿಗೆ ವರ್ಗಾವಣೆಯಾಗಿ ಬಂದಿದ್ದ ಅಧ್ಯಾಪಕ ವೃತ್ತಿಯನ್ನು ಹೊಂದಿದ್ದ ಅತ್ಯಂತ ಶಿಸ್ತು ಮತ್ತು ಸಂಸ್ಕೃತಿಯಿಂದ ಕೂಡಿದ ಮಹಿಳೆಯಾಗಿದ್ದಳು. ಹೀಗೆ ವರ್ಗಾವಣೆಯಾಗಿ ಬಂದ ನಂತರ ಸೂಕ್ತ ವಸತಿಯನ್ನು ಪಡೆಯಲು ಆಕೆ ಕಷ್ಟ ಪಟ್ಟು ಗೊಂದಲಕ್ಕೀಡಾಗಿ ಎಂದೋ ನನ್ನ ಹೆಸರನ್ನು ಕೇಳಿದ ನೆನಪಿನಿಂದ ನಮ್ಮ ಮನೆಗೆ ಬಂದಳು. ಆಕೆಯ ಸಮಸ್ಯೆಯನ್ನು ಕೇಳಿ ನಾನು ಆಕೆಗೆ ನನ್ನ ಪರಿಚಿತರೊಬ್ಬರ ಮನೆಯಲ್ಲಿ ಪೇಯಿಂಗ್ ಗೆಸ್ಟ್ ವ್ಯವಸ್ಥೆಯನ್ನು ಮಾಡಿ ಕೊಟ್ಟೆ. ನಂತರ ತಿಳಿದುಬಂದ ವಿಷಯವೆಂದರೆ ಆಕೆಗೆ ಪತಿ ಮತ್ತು ಇಬ್ಬರು ಮಕ್ಕಳು ಇದ್ದರು. ಆಕೆಯ ಹೆಸರು ಹಬೀಬ್ ಉನ್ನಿಸಾ ಎಂದುಕೊಳ್ಳೋಣ.
ಸುಮಾರು ಒಂದು ವರ್ಷಗಳ ಕಾಲ ಹಬೀಬ್ ಉನ್ನಿಸಾ ಪೇಯಿಂಗ್ ಗೆಸ್ಟ್ ವ್ಯವಸ್ಥೆಯಲ್ಲಿ ಮುಂದುವರೆದು ನಂತರ ಮನೆಯೊಂದನ್ನು ಬಾಡಿಗೆಗೆ ಪಡೆದು ಅಲ್ಲಿ ತನ್ನ ಸಂಸಾರವನ್ನು ಹೂಡಿದರು. ನನ್ನ ಜೊತೆಯಲ್ಲಿ ಆಕೆಗೆ ಹೆಚ್ಚಿನ ಬಳಕೆ ಇರಲಿಲ್ಲ; ಬದಲಿಗೆ ನನ್ನ ತಾಯಿಯೊಂದಿಗೆ ಆಕೆಯ ಬಾಂಧವ್ಯ ಹೆಚ್ಚಿತು. ಅಂದರೆ, ಆಕೆಯ ಅನೇಕ ವಿಷಯಗಳು ನನ್ನ ಅಮ್ಮನಿಂದ ನನಗೆ ತಿಳಿದು ಬರುತ್ತಿತ್ತು. ಸುಮಾರು ಎರಡು ಮೂರು ವರ್ಷಗಳು ಕಳೆದ ನಂತರ ನಮ್ಮ ಅಮ್ಮನಿಂದ ನನಗೆ ಕರೆ ಬಂದಿತು. ವ್ಯಗ್ರರಾಗಿದ್ದ ಅವರು “ನೋಡು ಹಬೀಬುನ್ನೀಸಾಗೆ ಆಕೆಯ ಗಂಡ ತಲಾಕ್ ಕೊಡುತ್ತಿದ್ದಾನಂತೆ. ನೀನು ಈ ಬಗ್ಗೆ ಏನಾದರೂ ಮಾಡಲೇ ಬೇಕು” ಎಂದು ಕಟ್ಟಪ್ಪಣೆ ಮಾಡಿದರು. ಸ್ವತಃ ಪಕ್ಷಕಾರರಿಂದ ಕೋರಿಕೆ ಬಾರದೇ ಅವರ ವೈಯುಕ್ತಿಕ ವಿಚಾರಗಳಲ್ಲಿ ಪ್ರವೇಶ ಮಾಡುವುದು ನನಗೆ ಸುತರಾಂ ಇಷ್ಟವಿರಲಿಲ್ಲ. ಆದರೂ ಕೂಡ ಅಮ್ಮಿಯ ಮಾತನ್ನು ಮೀರದೆ, ಹಬ್ಬೀಬುನ್ನೀಸಾಗೆ ಫೋನ್ ಮಾಡಿ “ನನ್ನಿಂದ ಏನಾದರೂ ಸಹಾಯ ಬೇಕೋ?” ಎಂದು ಕೇಳಿದೆ. ಬಹುಶಃ ಆಕೆ ಅಳುತ್ತಿರಬೇಕು ಆಕೆಯ ಬಿಕ್ಕುಗಳ ನಡುವೆ ಆಕೆ ಸಾವಕಾಶವಾಗಿಯೇ ಮಾತನಾಡಿದರು. ಆಕೆಯ ಧ್ವನಿ ಒಂದಿನಿತೂ ಕೂಡ ತನ್ನ ಯಾತನೆಯನ್ನು ಬಿಟ್ಟುಕೊಡಲಿಲ್ಲ. ಆಕೆ ಹೇಳಿದಳು, “ಬಾನು ಸಾಹೇಬ ನೀವು ನನ್ನ ಈ ವಿಷಯದಲ್ಲಿ ಏನನ್ನು ಕೂಡ ಮಾಡಲು ಸಾಧ್ಯವಿಲ್ಲ. ನನ್ನ ಪತಿ ಈಗಾಗಲೇ ನನಗೆ ತಲಾಕ್ ನೀಡಿಯಾಗಿದೆ. ನನ್ನ ಇದ್ದತ್ ಅವಧಿ ಕೂಡ ಮುಗಿಯುತ್ತಾ ಬಂದಿದೆ” ಎಂದಳು. ನನಗೆ ಏನು ಹೇಳುವುದೆಂದು ತೋಚಲಿಲ್ಲ. ವಿಷಯವನ್ನು ಕೇಳಿ ಹೊಣೆಗಾರಿಕೆಯಿಂದ ನಾನು ಮುಕ್ತಳಾದೆ ಎಂದು ನಿಟ್ಟುಸಿರನ್ನು ಬಿಟ್ಟೆ. ಅಮ್ಮಿಗೆ ಮಾತ್ರ ಆಘಾತವಾಯಿತು.
ನಮ್ಮ ಮಾತುಕತೆಯ ನಡುವೆ ಯಾವಾಗಲಾದರೂ ಹಬೀಬುನ್ನೀಸಾಳ ಪ್ರಸ್ತಾಪ ಬಂದಾಗ ಅಮ್ಮಿಯ ಕಣ್ಣುಗಳು ಕಂಬನಿಯಿಂದ ತುಂಬುತ್ತಿದ್ದವು. ಆದರೆ ಆಕೆ ಆ ದಿನಗಳಲ್ಲಿ ಅಪಾರ ಏಕಾಂಗಿತನ ಮತ್ತು ಪರಕೀಯತೆಯನ್ನು ಅನುಭವಿಸತೊಡಗಿದಳು. ಹಬ್ಬ ಹರಿದಿನಗಳು ಮತ್ತು ನಮ್ಮ ಮನೆಯ ವಿಶೇಷ ಸಂದರ್ಭಗಳಲ್ಲಿ ನಮ್ಮ ಅಮ್ಮಿ ಒಮ್ಮೆಯೂ ಕೂಡ ಆಕೆಯನ್ನು ಮರೆಯಲಿಲ್ಲ. ನಮ್ಮ ಕುಟುಂಬದ ಎಲ್ಲರೊಡನೆಯೂ ಕೂಡ ಆಕೆ ಸಹಜವಾಗಿ ಬೆರೆತು ಆ ವಿಶಿಷ್ಟ ಸಮಾರಂಭಕ್ಕೆ ತಕ್ಕಂತೆ ವ್ಯವಹರಿಸುತ್ತಿದ್ದಳು. ಅಮ್ಮಿ ಅನೇಕ ಸಾರಿ ಆಕೆಗೆ ಮರು ಮದುವೆಯಾಗುವಂತೆ ಸಲಹೆ ನೀಡುತ್ತಿದ್ದರು.ಆಕೆ ನಕ್ಕು ಸುಮ್ಮನಾಗುತ್ತಿದ್ದಳು. ಆದರೆ ಆಕೆಗೆ ಸಾಮಾಜಿಕ ಸಂಬಂಧದ ಅಗತ್ಯವಿತ್ತು. ತನ್ನ ಮಕ್ಕಳ ವಿದ್ಯಾಭ್ಯಾಸ, ಮದುವೆ ಮೊದಲಾದ ಜವಾಬ್ದಾರಿಗಳನ್ನು ನಿರ್ವಹಿಸುವುದರ ನಡುವೆ ಆಕೆಗೆ ಅಪಾರವಾದ ಅನಾಥಪ್ರಜ್ಞೆ ಕಾಡುತ್ತಿತ್ತು. ಹೀಗಾಗಿಯೇ ಆಕೆ ಅಮ್ಮಿಯನ್ನು ಆಶ್ರಯಿಸಿದ್ದರು. ಹಣದ ಕೊರತೆ ಆಕೆಗೆ ಇರಲಿಲ್ಲ. ನನ್ನವರು ಯಾರೂ ಇಲ್ಲ ಎಂಬ ಕೊರಗು ಆಕೆಯನ್ನು ಕಾಡುತ್ತಿತ್ತು. ಹೀಗಾಗಿ ಆಕೆ ಕೆಲವು ಆಯ್ದ ಕುಟುಂಬಗಳೊಡನೆ ಬಾಂಧವ್ಯವನ್ನು ಬೆಳೆಸಿದಳು. ಆದರೆ ಅದೇ ಸಂದರ್ಭದಲ್ಲಿ ತನ್ನ ದೆಸೆಯಿಂದ ಯಾವ ಕುಟುಂಬದಲ್ಲಿಯೂ ಸಮಸ್ಯೆಗಳು ಕೂಡ ಮೂಡಬಾರದು ಎಂಬ ಎಚ್ಚರಿಕೆಯ ಪ್ರಜ್ಞೆ ಕೂಡ ಅವಳಲ್ಲಿ ಜಾಗೃತವಾಗಿತ್ತು. ಆಕೆ ಆ ಕುಟುಂಬಗಳ ಪುರುಷರ ಎದುರಿನಲ್ಲಿ ಅನಗತ್ಯವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಮಹಿಳೆಯರ ಜೊತೆಯಲ್ಲಿಯೂ ಕೂಡ ಆಕೆಯದು ಗೌರವಯುತವಾದ ಬಾಂಧವ್ಯವಾಗಿತ್ತು. ಆಕೆ ತನ್ನ ಸುತ್ತಲೂ ಗೆರೆಗಳನ್ನು ಎಳೆದು ತನ್ನ ಮಿತಿಯನ್ನು ನಿರ್ಧರಿಸಿ ಕೊಂಡಿದ್ದಳು
ಆದರೆ ಆಕೆಗೆ ಅಪಾರವಾದ ಅಭದ್ರತೆಯು ಕಾಡುತ್ತಿತ್ತು. ಅದು ಅವಳ ಮಗಳ ಭವಿಷ್ಯ ಮತ್ತು ತನ್ನ ಮುಂದಿನ ದಿನಗಳ ಬಗ್ಗೆ.
ಹೀಗೆ ಆಕೆ ಈ ರೀತಿಯ ಸಾಮಾಜಿಕ ಬಾಂಧವ್ಯವನ್ನು ಮುಂದುವರೆಸುತ್ತಾ ತನಗೆ ದಕ್ಕಿದಷ್ಟು ಸುಖ ಸಂತೋಷ ಮತ್ತು ದುಃಖದ ಕ್ಷಣಗಳಲ್ಲಿ ಭಾಗಿಯಾಗುತ್ತಾ ಸುಮಾರು ಹತ್ತು ವರ್ಷಗಳನ್ನು ಕಳೆದಳು. ನಂತರ ಆಕೆಗೆ ವಯೋ ಸಹಜವಾಗಿ ಅನೇಕ ಸಂಗತಿಗಳು ಕಾಡಲಾರಂಭಿಸಿದವು ಒಂದು ದಿನ ಮಧ್ಯಾಹ್ನ ಕೋರ್ಟಿನ ಆವರಣದಲ್ಲಿ ನನ್ನ ಕಾರಿನ ಪಕ್ಕ ಆಟೋ ಒಂದನ್ನು ಪಾರ್ಕ್ ಮಾಡಿದ್ದನ್ನು ನಾನು ಗಮನಿಸದೆ, ಮಧ್ಯಾಹ್ನ ಕೋರ್ಟಿಗೆ ಮರಳಿ ಹೋಗಬೇಕಿದ್ದರಿಂದ ಅತ್ತಿತ್ತ ನೋಡದೆ ನನ್ನ ಕಾರಿನಲ್ಲಿ ಕುಳಿತೆ. ಆಗ ಪಕ್ಕದಲ್ಲಿದ್ದ ಆಟೋದಿಂದ ಧ್ವನಿಯೊಂದು “ಬಾನು ಸಾಹೇಬ, ಪ್ಲೀಸ್ ಇತ್ತ ಕಡೆ ಒಮ್ಮೆ ಬನ್ನಿ.” ಎಂದು ಕರೆಯಿತು ಚಾಲಕರ ಸೀಟಿನಿಂದ ನಾನು ಕೆಳಕ್ಕೆ ಇಳಿದು ಆಟೋ ಬಳಿ ಹೋದಾಗ ಆಕೆಯ ಕೈಯಲ್ಲಿ ಸಿಹಿಯ ಪ್ಯಾಕೆಟ್ ಇತ್ತು. ಆಕೆ ಅದನ್ನು ನನ್ನ ಕೈಯಲ್ಲಿರಿಸಿ, “ಬಾನು ಸಾಹೇಬ ಮೇರಾ ರಿಟೈರ್ಮೆಂಟ್ ಹೋಗಯಾ ಎಂದು ತನ್ನ ಬದುಕಿನ ಪ್ರಮುಖ ಘಟನೆಯನ್ನು ಅರುಹಿದಳು. ಆಕೆಗೆ ಸಂತೋಷವಾಗಲಿ ಅಥವಾ ದುಃಖವಾಗಲಿ ಆಕೆ ಕೈಯಲ್ಲಿ ಒಂದಿಷ್ಟು ಸಿಹಿಯನ್ನು ಹಿಡಿದು ನಮ್ಮ ಮನೆಗೆ ಬಂದು ತನ್ನ ವೃತ್ತಾಂತವನ್ನು ಸವಿವರವಾಗಿ ತಿಳಿಸಿ ಹೋಗುತ್ತಿದ್ದಳು.
ಕೆಲವು ದಿನಗಳ ನಂತರ ಆಕೆಯ ಮಗಳ ಮದುವೆಯೂ ಆಯಿತು. ಆಯ್ದ ಕುಟುಂಬಗಳೊಡನೆ ಅವಳು ಹೊಂದಿದ್ದ ಒಡನಾಟದ ದೆಸೆಯಿಂದ ಆ ಮನೆಯ ಮಹಿಳೆಯರು ಮತ್ತು ಪುರುಷರು ಆಕೆಯ ಮಗಳ ಮದುವೆಯಲ್ಲಿ ಬಂಧುಗಳ ಸ್ವರೂಪದಲ್ಲಿ ಭಾಗವಹಿಸಿ ಕಾರ್ಯವನ್ನು ನೆರವೇರಿಸಿದರು. ಹೀಗೆ ಒಂದು ಹಿಡಿ ಪ್ರೀತಿಗಾಗಿ ಸಾಮಾಜಿಕವಾಗಿ ಸುಖ ಸಂತೋಷವನ್ನು ಹಂಚಿಕೊಳ್ಳಲು ಜನರು ತನಗಾಗಿ ಇರಬೇಕು ಎಂದು ತಹತಹಿಸುವ ತಬ್ಬಲಿ ತನವನ್ನು ನಾನು ಬೇರೆ ಎಲ್ಲಿಯೂ ಕಾಣಲಿಲ್ಲ. ಹುಟ್ಟಿ ಬೆಳೆದು ಮದುವೆಯಾಗಿ ಒಂದೇ ಕಡೆ ನಿಂತ ತವರು ಮನೆ ಮತ್ತೆ ಪತಿಗೃಹ ಆ ಮೂಲಕ ನೆಂಟರಿಷ್ಟರು ಮತ್ತು ಅಪಾರ ಹಿಂಡು ಹಿಂಡು ಬಂಧುಗಳು ಇದ್ದ ನನಗೆ ಆಕೆಯ ಈ ಪ್ರೀತಿಯ ಕ್ರಿಯೆಗಳು ಒಮ್ಮೊಮ್ಮೆ ಇಷ್ಟವಾಗುತ್ತಿರಲಿಲ್ಲ. ನನ್ನ ಮಕ್ಕಳ ಹುಟ್ಟುಹಬ್ಬದ ಸಮಾರಂಭಕ್ಕೆ ಇನ್ನೂರರಷ್ಟು ಮಂದಿಯನ್ನು ಆಹ್ವಾನಿಸಿ ನಂತರ ಆ ಕಾರ್ಯಕ್ರಮ ಮುಗಿದ ನಂತರ ನನ್ನ ಉಳಿದ ಸಂಬಂಧಿಗಳಿಂದ ಸ್ನೇಹಿತರಿಂದ ಸುಮಾರು ಒಂದೆರಡು ತಿಂಗಳವರೆಗೂ ಬಯ್ಯಿಸಿಕೊಂಡು ಅನುಭವವಿದ್ದ ನನಗೆ ಬಾಂಧವ್ಯದ ಕೊರತೆ ಎಲ್ಲಿಯೂ ಎದ್ದು ಕಾಣಲಿಲ್ಲ. ಇನ್ನೂ ಹೇಳಬೇಕೆಂದರೆ ಈ ನೆಂಟರಿಷ್ಟರ ಕಾಟ ತಪ್ಪಿದ್ದರೆ ನನಗೆ ಸಾಕಿತ್ತು. ನನ್ನೊಡನೆ ನಾನು ಆಕೆಯನ್ನು ಹೋಲಿಕೆ ಮಾಡಿಕೊಳ್ಳುತ್ತಿರಲಿಲ್ಲ. ಆದರೂ ನನಗೆ ಆಕೆಯ ವೇದನೆಯನ್ನು ಅರ್ಥಮಾಡಿಕೊಳ್ಳುವುದು ಸುಲಭವಾಗಿರಲಿಲ್ಲ.
ಅಂದು ರಾತ್ರಿ ಊಟದ ವೇಳೆಗೆ ಆಕೆ ನಮ್ಮ ಮನೆಗೆ ಬಂದಳು. ಯಥಾ ಪ್ರಕಾರ ಆಕೆಯ ಕೈಯಲ್ಲಿ ಒಂದು ಪ್ಯಾಕೆಟ್. ನಾನು ಅದನ್ನು ಇಸಿದುಕೊಳ್ಳಲು ತುಂಬ ತಕರಾರು ಮಾಡಿದೆ. ಇನ್ನು ಮುಂದೆ ನಮ್ಮ ಮನೆಗೆ ಬಂದಾಗ ಹೀಗೆಲ್ಲಾ ತಿನಿಸು ಹೊತ್ತುಕೊಂಡು ಬರಬಾರದು ಎಂದು ಆಕೆಗೆ ತಾಕೀತು ಮಾಡಿದೆ. ಒಂದಿಷ್ಟು ಘಮಘಮಿಸುವ ಊಟ ಟೇಬಲ್ ಮೇಲಿತ್ತು. ಎಷ್ಟೇ ಕರೆದರೂ ಆಕೆ ಊಟಕ್ಕೆ ಬರಲಿಲ್ಲ. ಹಾಲ್‍ನಲ್ಲಿ ಕುಳಿತಿದ್ದ ಆಕೆಯನ್ನು ಬಿಟ್ಟು ಊಟ ಮಾಡುವುದು ನನಗೆ ಕಿರಿಕಿರಿ ಎನಿಸತೊಡಗಿತ್ತು. ಆದರೂ ಕೂಡ ತರಾತುರಿಯಲ್ಲಿ ಒಂದಿಷ್ಟು ಊಟದ ಶಾಸ್ತ್ರವನ್ನು ಮುಗಿಸಿ ನಾನು ಮತ್ತು ನನ್ನ ಗಂಡ ಆಕೆಯೊಡನೆ ಹಾಲಲ್ಲಿ ಒಂದು ಕುಳಿತೆವು. ಅವೇಳೆಯಲ್ಲಿ ಬಂದು ಮನೆಯಲ್ಲಿ ಕೂರುವುದು, ವಿಪರೀತ ಅಭಿಮಾನ ಮತ್ತು ಸಂಕೋಚದಿಂದ ಏನನ್ನೂ ಸ್ವೀಕರಿಸದೆ ಇರುವುದು ಹಾಗೂ ನನ್ನ ಬಾನು ಸಾಹಿಬಾ ಎಂದು ಸಂಬೋಧಿಸುವುದು ಇವೆಲ್ಲಾ ಒಂದು ರೀತಿಯಲ್ಲಿ ಕೃತಕವಾಗಿ ನನಗೆ ಕಂಡುಬರುತ್ತಿತ್ತು
ನಾವುಗಳು ಆಕೆಯೊಡನೆ ಕುಳಿತಾಗಲೂ ಹತ್ತು ನಿಮಿಷಗಳವರೆಗೆ ಆಕೆ ಸುತ್ತು ಬಳಸಿ ಅದೂ ಇದೂ ಮಾತನಾಡುತ್ತಲೇ ಕುಳಿತಿದ್ದಳು. ‘ಬಂದ ವಿಷಯ ಮಾತನಾಡಬಾರದೆ?’ ನನ್ನ ಅಸಹನೆ ಹೆಚ್ಚತೊಡಗಿತು. ಆ ದಿನ ಆಕೆ ನನ್ನನ್ನು ಬಿಟ್ಟು ಭಾಯಿ ಸಾಹೇಬ್ ಎಂದು ನನ್ನ ಪತಿ ಮುಸ್ತಾಕ್‍ರವರನ್ನು ಸಂಬೋಧಿಸಿದರು.
” ಭಾಯಿ ಸಾಹೇಬ್ ನನ್ನದೊಂದು ಕೋರಿಕೆ ಇದೆ. ಅದನ್ನು ನೀವು ಒಪ್ಪುವುದಾಗಿ ಮಾತು ಕೊಟ್ಟರೆ ನಾನು ಅದನ್ನು ತಮ್ಮ ಮುಂದೆ ಇಡುತ್ತೇನೆ”. ಎಂದು ಆಕೆ ಒಂದು ಹಿಡಿಯಾಗಿ ಕೇಳಿದಳು. ಮುಸುಕು ಮುಚ್ಚಿದ ತಟ್ಟೆಯಂತಹ ಈ ಬೇಡಿಕೆಯನ್ನು ಯಾರಾದರೂ ಮನ್ನಿಸುವುದುಂಟೋ. ಮನ್ನಿಸಿ ಕಮಿಟ್ ಆದನಂತರ ಅದರಿಂದ ಹಿಂದೆಗೆಯಲು ಸಾಧ್ಯವೇ? ಹೀಗಾಗಿ ನನ್ನ ಪತಿ ಕೂಡ ಆಕೆಯ ಮಾತಿಗೆ ಒಪ್ಪಿಗೆಯನ್ನು ನೀಡಲಿಲ್ಲ್ಲ. ಬದಲಿಗೆ, “ಅದೇನೆಂದು ಹೇಳಿ . ನನ್ನ ಮಿತಿಯಲ್ಲಿದ್ದರೆ ಖಂಡಿತವಾಗಿಯೂ ಅದನ್ನು ನಡೆಸಿ ಕೊಡ್ತೀನಿ”. ಎಂದು ಹೇಳಿದರು. ಆಗ ಆಕೆ ಮುಖ ಕೆಳಗೆ ಮಾಡಿ ನೆಲವನ್ನೇ ದಿಟ್ಟಿಸುತ್ತಾ ನೋಡಿ “ಭಾಯಿ ಸಾಹೇಬ್ ನಿಮ್ಮಗಳೆಲ್ಲರ ಸಹಕಾರದಿಂದ ಮಗಳ ಮದುವೆ ಆಯ್ತು. ಅದೊಂದು ನೆಮ್ಮದಿ ನನಗೆ. ಈಗ ನನಗೆ ವಿಪರೀತ ಚಿಂತೆ ಆವರಿಸಿ ಕೊಂಡಿದೆ. ನನಗೆ ಇತ್ತೀಚೆಗೆ ಆರೋಗ್ಯ ಸರಿ ಇಲ್ಲ. ಯಾವ ಹೊತ್ತಿನಲ್ಲಿ ಏನಾಗುವುದೋ ದೇವರೇಬಲ್ಲ”.
“ಯಾರಾದರೂ ಒಳ್ಳೆಯ ವೈದ್ಯರ ಬಳಿ ತೋರಿಸಬೇಕೇ?” ಆಕೆ ಇನ್ನಷ್ಟು ತಲೆ ಬಗ್ಗಿಸಿ, “ಅದೇನೋ ಒಂದು ಆಗುತ್ತೆ. ಆದರೆ ಅಂತಿಮವಾಗಿ ಅಲ್ಲಾಹನ ಕರೆ ಇದೆಯಲ್ಲಾ… ನನ್ನ ಸಾವು ಉಂಟಾದ ಸಂದರ್ಭದಲ್ಲಿ ತಾವು ನನ್ನ ಜನಾಜದಲ್ಲಿ (ಅಂತ್ಯಕ್ರಿಯೆಯಲ್ಲಿ) ಭಾಗವಹಿಸಬೇಕು. ಬದುಕಿದ್ದಾಗಲೂ ನೀವುಗಳೇ ನನ್ನ ಅಣ್ಣ ತಮ್ಮಂದಿರಾಗಿದೀರಿ. ಇನ್ನು ಸಾವಿನಲ್ಲೂ ನನ್ನ ಬಗ್ಗೆ ಇದೊಂದು ಕರ್ತವ್ಯವಿದೆ”. ಆಕೆ ತನ್ನ ಮನದ ಇಂಗಿತವನ್ನೆಲ್ಲಾ ಹೇಳಿ, ಖಾಲಿಯಾದವಳಂತೆ ಸುಮ್ಮನೆ ಕುಳಿತಳು. ನನ್ನ ಪತಿ ಕೂಡಾ ಭಾವುಕರಾದರು. “ಆಗಲಿ.. ಅಲ್ಲಿಯವರೆಗೆ ದೇವರು ನನ್ನ ಆಯಷ್ಯವನ್ನು ವೃದ್ಧಿಸಿದ್ದಲ್ಲಿ ನಾನು ಖಂಡಿತವಾಗಿಯೂ ತಮ್ಮ ಜನಾಜದಲ್ಲಿ ಭಾಗಿಯಾಗುತ್ತೇನೆ” ಎಂದು ಆಕೆಗೆ ಮಾತುಕೊಟ್ಟರು.
ಈ ಸಂಗತಿ ನಡೆದ ಸುಮಾರು ಐದಾರು ವರ್ಷಗಳವರೆಗೂ ನನ್ನ ಪತಿ ಆಗಾಗ್ಯೆ ನನ್ನ ಬಳಿ ಹಬೀಬುನ್ನೀಸಾಳ ಆರೋಗ್ಯವನ್ನು ವಿಚಾರಿಸುತ್ತಿದ್ದರು. ಒಮ್ಮೊಮ್ಮೆ ನಾನು ಆ ಬಗ್ಗೆ ಗಂಭೀರವಾಗಿ ಉತ್ತರಿಸುತ್ತಿದ್ದೆ. ಒಮ್ಮೊಮ್ಮೆ ಕಿಡಿಗೇಡಿತನ ಆವರಿಸಿದಾಗ. “ಸರ್ಕಾರ್, ತಮ್ಮ ಹೆಗಲಿನ ಆಸರೆಯ ಅಗತ್ಯ ಇನ್ನೂ ಆಕೆಗೆ ಬಂದಿಲ್ಲ. ತಾವು ನೆಮ್ಮದಿಯಿಂದ ಇರಬಹುದು. ತಮಗೆ ಬುಲಾವ್ ಬಂದಾಗ ಹಾಜರಾಗಿ” ಎಂದು ನಾಟಕೀಯ ಸಂಭಾಷಣೆಯನ್ನು ಉದುರಿಸಿದಾಗ ಅವರು ಉಸಿರೆತ್ತದೆ, “ಇವಳೆಂಥಾ ಕ್ರೂರಿ” ಎಂಬ ನೋಟವನ್ನು ನನ್ನತ್ತ ಬೀರಿ ಅಲ್ಲಿಂದ ಜಾರಿಕೊಳ್ಳುತ್ತಿದ್ದರು.
ಆ ದಿನ ನಮ್ಮ ಏಕೈಕ ಸುಪುತ್ರ ತಾಹೆರ್‍ನ ಮದುವೆ ಬೆಂಗಳೂರಿನಲ್ಲಿ ನಡೆಯುವುದಿತ್ತು. ಅವನ ಅಕ್ಕಂದಿರು ವಿದೇಶಗಳಿಂದ ಹಾರಿ ಬಂದಿದ್ದರು. ನೆಂಟರಿಷ್ಟರು ತಂಡ ತಂಡವಾಗಿ ತಮ್ಮ ತಮ್ಮ ಸಂಭ್ರಮದ ಪಾತ್ರವನ್ನು ನಿರ್ವಹಿಸುತ್ತಿದ್ದರು. ಅನೇಕ ಕಾರುಗಳು ಹೊರಡಲು ಸಿದ್ಧವಾಗಿದ್ದವು. ಹಾಸನ ಬೆಂಗಳೂರಿನ ಮಾರ್ಗ ಮಧ್ಯದಲ್ಲಿ ಬೆಳಗಿನ ಉಪಹಾರದ ಸಲುವಾಗಿ ಹೋಟೆಲ್‍ನಲ್ಲಿ ವ್ಯವಸ್ಥೆಯಾಗಿತ್ತು. “ಇನ್ನೇನು ಹತ್ತು ನಿಮಿಷದಲ್ಲಿ ಅಲ್ಲಿರ್ತೀವಿ ನಮ್ಮನ್ನು ಕಾಯಿರಿ” ಎಂಬ ಬಂಧುಗಳನ್ನು ನಿರೀಕ್ಷಿಸುತ್ತಿರುವಾಗ, ‘ನನ್ನ ಫೋನ್‍ಗೆ ಕರೆಯೊಂದು ಬಂದಿತು. ಸ್ವೀಕರಿಸಿದಾಗ ನನ್ನ ಎದೆ ಒಡೆದು ಹೋಯಿತು. ಮುಷ್ತಾಕ್‍ನತ್ತ ನೋಡಿದೆ, ತಮ್ಮ ಹೆಣ್ಣು ಮಕ್ಕಳೊಡನೆ ವಿಧವಿಧದ ಪೋಸ್‍ನ ಪೋಟೋ, ಮೊಮ್ಮಕ್ಕಳೊಡನೆ ಆವರಿಸಿಕೊಂಡು ನಿಂತಿದ್ದ ಅವರ ಸೆಂಟಿನ ವಾಸನೆ ಒಂದು ಮೈಲಿ ದೊರದವರೆಗೂ ಪ್ರಸರಿಸಿತ್ತು. ನಾನು ಅಲ್ಲಿದ್ದ ಕುರ್ಚಿಯ ಮೇಲೆ ತಟ್ಟನೆ ಕುಳಿತೆ’. ಓ ದೇವರೆ! ಇದು ಯಾವ ಪರೀಕ್ಷೆ? ನಾನು ಒಂದಷ್ಟು ಹೊತ್ತು ಯಾವುದೇ ಚಲನವಲನವಿಲ್ಲದೆ ಸ್ಥಿರವಾಗಿ ಅಲ್ಲೇ ಕುಳಿತಿದ್ದೆ. ಒಂದೆರಡು ಬಾರಿ ನನ್ನತ್ತ ಕಣ್ಣು ಹಾಯಿಸಿರಬೇಕು ನನ್ನ ಪತಿ. ಅಸಹಜ ಭಂಗಿಯಲ್ಲಿದ್ದು, ಯಾವುದೋ ಲೋಕಕ್ಕೆ ಜಾರಿದ್ದ ನನ್ನನ್ನು ಕಂಡು ಅವರು ನನ್ನ ಬಳಿ ಬಂದರು. “ಹೊರಡೋಣವೇ?” ಅಂತ ಕೇಳಿದರು “ಬೇಡ” ಎಂದೆ. ನಾನೇನೋ ತಮಾಷೆ ಮಾಡ್ತಿದೀನಿ ಅಂತ ಅವರು “ಯಾಕೆ?” ಅಂದರು. “ಯಾಕೆ ಅಂದರೆ, ಹಬೀಬುನ್ನೀಸಾ ಈಗ ಅರ್ಧ ಘಂಟೆಯ ಹಿಂದೆ ತೀರಿ ಹೋದರು” ಅಂದೆ. ನಂಬದವರಂತೆ ಅವರು ನನ್ನನ್ನೇ ದಿಟ್ಟಿಸಿದರು. “ನೀವು ನನ್ನನ್ನು ಹಾಸ್ಯ ಮಾಡುತ್ತಿಲ್ಲ ವಷ್ಟೇ? ಇಂತಹ ಫಿಲ್ಮಿ ಪ್ರಸಂಗ ಹೇಗೆ ನಡೆಯಲು ಸಾಧ್ಯ?” ಎಂದು ಕೇಳಿದವರೇ ಬೆವರುತ್ತಾ ಪಕ್ಕದ ಕುರ್ಚಿಯಲ್ಲಿ ಕುಳಿತು ಬಿಟ್ಟರು. ಇನ್ನು ನಾನೇ ಪ್ರಸಂಗವನ್ನು ನಿಭಾಯಿಸಬೇಕು. ಅವರನ್ನು ನಮ್ಮ ಬೆಡ್ ರೂಮಿಗೆ ಕರೆದೊಯ್ದು, ಅವರ ಹತ್ತಿರದ ಸಂಬಂಧಿಯ ಮರಣದ ವಾರ್ತೆಯಂತೆ ಕಂಗೆಟ್ಟಿದ್ದ ಅವರೆದುರಿಗೆ ಒಂದು ಲೋಟ ನೀರನ್ನು ಹಿಡಿದು ಸಂತೈಸಿದಾಯಿತು. ಕಣ್ಣಂಚಿನಲ್ಲಿ ಮೂಡಿದ್ದ ಹನಿಗಳನ್ನು ಇಂಗಿಸಲು ಪ್ರಯತ್ನಿಸುತ್ತಿದ್ದ ಅವರ ಪ್ರಯತ್ನವನ್ನು ಮೀರಿ ಕಣ್ಣುಗಳು ತೇವಗೊಂಡವು. ನನಗೆ ಕೂಡಾ ನನ್ನ ಹತ್ತಿರದವರನ್ನು ಕಳೆದುಕೊಂಡ ಆರ್ದ್ರ ಭಾವ.
ಕೊನೆಗೊ ಎಲ್ಲಾ ನೆಂಟರಿಷ್ಟರನ್ನು ಅವರವರ ವಾಹನಕ್ಕೇರಿಸಿ, ಬೀಳ್ಳೊಟ್ಟು ನಾವು ಕೂಡಾ ಅವರ ಜೊತೆಯಲ್ಲಿ ಹೊರಟೆವು. ಅವರ ವಾಹನಗಳು ಬೆಂಗಳೂರಿನತ್ತ ಧಾವಿಸಿದರೆ, ನಾವು ಸಾವಿನ ಮನೆಯತ್ತ ನಡೆದವು. ಅಲ್ಲಿ ಹೋಗಿ ಆಕೆಯ ಮುಖದರ್ಶನ ಮಾಡಿ, ಆಕೆಯ ಮಗಳ ಬಳಿ ಅಂತ್ಯ ಸಂಸ್ಕಾರದ ವ್ಯವಸ್ಥೆಯ ಬಗ್ಗೆ ಮಾತನಾಡಿ, ಆ ಮನೆಯಿಂದ ಬೀಳ್ಕೊಟ್ಟಾಗ ಒಂದು ಗಂಟೆ ತಡವಾಗಿತ್ತು. ಆಕೆಯ ಜನಾಜದಲ್ಲಿ ಪೂರ್ಣವಾಗಿ ಭಾಗಿಯಾಗಲಿಲ್ಲ ಮತ್ತು ಆಕೆಯ ಶವಯಾತ್ರೆಗೆ ಹೆಗಲು ಕೊಡಲಿಲ್ಲವೆಂಬ ಖೇದ ನನ್ನ ಪತಿಯ ಮನಸ್ಸಿನಲ್ಲಿ ಇನ್ನೂ ಉಳಿದು ಹೋಗಿದೆ.
ಬಾನು ಮುಷ್ತಾಕ್
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.