ಹದಿನಾರಾಣೆ ಅಸಮಾನತೆ/ ಸ್ವಯಂ ನಿಗಾವಣೆ ಎಂಬ ಅಗತ್ಯದ ಅರಿವು – ಬಾನು ಮುಷ್ತಾಕ್

ಮನೆ ನಿರ್ವಹಣೆಗೆ ಮೈಮನಗಳನ್ನು ತೆತ್ತುಕೊಂಡ ಮಹಿಳೆಗೆ, ತನ್ನನ್ನು ತಾನು ನಿರ್ವಹಿಸಿಕೊಳ್ಳುವ ಅಗತ್ಯದ ಅರಿವೇ ಇರುವುದಿಲ್ಲ. ಆದರೆ ಅವಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ರಕ್ಷಣೆ ಅವಳಿಗೋಸ್ಕರವೇ ಆಗಬೇಕು. ಸ್ವಯಂ ನಿಗಾವಣೆ ಎನ್ನುವುದು ಅವಳ ಅರಿವಿನ ಭಾಗವಾಗಬೇಕು. ಬದುಕಿನಲ್ಲಿ ತನಗೊಂದು ಸ್ವಂತ ‘ಸ್ಪೇಸ್’ ಬೇಕು ಎಂದು ಅವಳೆಂದೂ ದಬಾಯಿಸಿ ಕೇಳಲು ಸಾಧ್ಯವಿಲ್ಲ. ಆದರೆ ಆ ವಿಚಾರ ಅವಳ ಎದೆಗೆ ಬಿದ್ದರೆ ಸಾಕು, ಸದ್ದಿಲ್ಲದೆ ಅವಳದೇ ಆದ ‘ಸ್ಪೇಸ್’ ಸೃಷ್ಟಿಯಾಗುತ್ತದೆ!

ಮಹಿಳೆಯರು ಯಾರ ಅಂಕೆಗೆ ಒಳಪಡಬೇಕು ಎಂಬ ವಿಚಾರವನ್ನು ಧರ್ಮಗ್ರಂಥಗಳು, ಪ್ರಭುತ್ವ, ಕುಟುಂಬ ಮತ್ತು ಸಮಾಜ ಎಲ್ಲವೂ ನಿಯಂತ್ರಿಸುತ್ತವೆ. ಆಕೆಯ ಅಸ್ತಿತ್ವವು ಅನೇಕ ಮಜಲುಗಳಲ್ಲಿ ಮತ್ತು ವಿವಿಧ ಅಯಾಮಗಳ ಮೂಲಕ ಸಹಸ್ರಾರು ವರ್ಷಗಳಿಂದ ನಿಯಂತ್ರಿಸಲಾಗುತ್ತಿದೆ. ಪುರುಷ ಪ್ರಾಧಾನ್ಯವು ನಿರಂತರವಾದ ಪ್ರಕ್ರಿಯೆಗೆ ಒಳಪಟ್ಟಿದ್ದು ಇಡೀ ವ್ಯವಸ್ಥೆಯನ್ನು ತನ್ನ ಹತೋಟಿಗೆ ತೆಗೆದುಕೊಂಡಿದೆ ಹಾಗೂ ಸಾಮ, ದಾನ, ಭೇದ ಹಾಗೂ ದಂಡ ಪ್ರಯೋಗಗಳನ್ನು ಹೆಣ್ಣಿನ ವಿರುದ್ಧ ಮಾಡಿದೆ ಎಂಬುದು ಮಾನವ ಇತಿಹಾಸದ ಪುಟಪುಟವೂ ಹೇಳುತ್ತಿದೆ.
ಆದರೆ ಈಗ ಮಹಿಳೆಯರು ವಿಭಿನ್ನವಾದ ವಾದವನ್ನು ಮುಂದಿಟ್ಟು ತಮ್ಮ ಅಸ್ತಿತ್ವವನ್ನು ಎತ್ತಿ ಹಿಡಿಯುವ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ‘ನನ್ನ ದೇಹ ನನ್ನದು’ ಮತ್ತು ನನ್ನ ಆರ್ಥಿಕ ಸ್ವಾತಂತ್ರ್ಯವನ್ನು ಯಾರಿಗೂ ಒತ್ತೆ ಇಡುವುದಿಲ್ಲ’ ಎಂದು ಹೇಳುತ್ತ ಧಾರ್ಮಿಕ ರಾಜಕೀಯ ಮತ್ತು ಸಾಮಾಜಿಕ ವ್ಯಾಕರಣವನ್ನು ತಮ್ಮದೇ ಆದ ನಿರ್ದಿಷ್ಟ ಧೋರಣೆಯಿಂದ ನಿರ್ವಚನ ಮಾಡುತ್ತಿದ್ದಾರೆ. ಆ ಪ್ರಯತ್ನದ ಒಂದು ಕೊಂಡಿ ಎಂದರೆ ಸ್ವಯಂ ನಿಗಾವಣೆ. ಮಹಿಳೆಯು ಉದೋಗ್ಯಸ್ಥೆ ಆಗಿರಬಹುದು ಅಥವಾ ಕುಟುಂಬದ ವ್ಯಾಪ್ತಿಯೊಳಗೆ ಮಾತ್ರ ತನ್ನ ಛಾಪನ್ನು ಮೂಡಿಸಿದ ಮಹಿಳೆಯಾಗಿರಬಹುದು, ಮನೆಯ ಎಲ್ಲಾ ಜನರ ಸಕಲ ಬೇಡಿಕೆಗಳು ಮತ್ತು ವಸ್ತುಗಳ ನಿಗಾವಣೆಯನ್ನು ಯಾರು ಮಾಡಬೇಕು? ಹೆಣ್ಣು ಕುಟುಂಬದ ನೆಲೆಯಲ್ಲಿ ಮಹತ್ತರ ಪಾತ್ರವನ್ನು ವಹಿಸುವಳು. ಆಕೆ ಅಗತ್ಯ, ಅವಶ್ಯಕ ಮತ್ತು ಅನಿವಾರ್ಯ. ಕಸಮುಸರೆ, ಅಡಿಗೆ ಮತ್ತು ಎಲ್ಲಾ ಕೆಲಸಗಳ ಪರಿಚಾರಿಕೆ ಮಾಡುವಳು. ಪತ್ನಿ ಎಂದರೆ ಅದೆಲ್ಲವನ್ನೂ ಒಳಗೊಳ್ಳಲೇ ಬೇಕು. ಆಕೆ ಬಸಿರಾಗಿ ಮಗುವಿಗೆ ಜನ್ಮ ನೀಡಲು, ಉಸಿರು ಪೋಷಣೆ ಮಾಡಲು ಬೇಕು; ತಲೆ ಇಟ್ಟು ಅಳುವ ಸಲುವಾಗಿ ಹೆಗಲಾಗಬೇಕು; ಆಕೆ ಬ್ಯಾಂಕ್ ಕೂಡ. ಆಕೆ ಕಸಬರಿಕೆ, ಕಾಲೊರೆಸುವ ಮ್ಯಾಟ್, ಸೌಟು, ಹ್ಯಾಂಗರ್ ಮತ್ತು ಹಾಸಿಗೆ ಇನ್ನೂ ಏನೇನೋ ಪಾತ್ರಗಳ ಅಭಿನಯ ಮಾಡುತ್ತಾಳೆ.
ಈ ಹಿನ್ನೆಲೆಯಲ್ಲಿ ಮಹಿಳೆಯೊಬ್ಬಳ ನೆನಪಾಗುತ್ತದೆ. ಆಕೆ ಶಾಲೆಯಲ್ಲಿ ಆಯಾ ಅಗಿದ್ದವಳು. ಮಕ್ಕಳೊಡನೆ ಹೆಚ್ಚು ಒಡನಾಟವಿದ್ದ ಅವಳು ಎಲ್ಲರೊಂದಿಗೂ ನಸುನಗುತ್ತಾ ಮಾತನಾಡುತ್ತಿದ್ದಳು. ಸುಮಾರು ಐವತ್ತರ ಆನುಪಾಸಿನಲ್ಲಿದ್ದಳು. ಪತಿಯ ವ್ಯವಹಾರಕ್ಕೆ ಅರ್ಥಿಕವಾಗಿ ನೆರವು ನೀಡುವ ಸಲುವಾಗಿ ಸ್ವಸಹಾಯ ಸಂಘದಲ್ಲಿ ತನ್ನ ಹೆಸರಿನಲ್ಲಿ ಸಾಲ ಮಾಡಿದ್ದಳು. ಅವನಿಗೆ ಪತ್ನಿಯ ದುಡಿಮೆಯ ಹಣವನ್ನು ನುಂಗಿ ಹಾಕುವ ಅಭ್ಯಾಸವಿತ್ತು. ತನ್ನ ಪತ್ನಿಯ ಸಾಲವನ್ನು ಮರುಪಾವತಿ ಮಾಡಬೇಕಾದ ಅವನು ಉದ್ದೇಶಪೂರ್ವಕವಾಗಿ ತಪ್ಪಿಸಿದ. ನಾಲ್ಕಾರು ತಿಂಗಳುಗಳ ಕಾಲ ಹಣ ಮರುಪಾವತಿ ಮಾಡಿ ನಂತರ ತನ್ನ ಬಳಿ ಹಣವೇ ಇಲ್ಲವೆಂದು ಮೊಂಡಾಟ ಹೂಡಿದ. ಆಕೆ ನಿಗದಿತ ಸಮಯಕೆ ಸ್ವಸಹಾಯ ಸಂಘಕ್ಕೆ ಸಾಲದ ಹಣವನ್ನು ಮರುಪಾವತಿ ಮಾಡಬೇಕಿತ್ತು. ಹಣದ ಸಲುವಾಗಿ ದಿನ ನಿತ್ಯದ ಜಗಳ, ಕಿರಿಕಿರಿ ಮತ್ತು ಸಂಘರ್ಷ ನಡೆಯಿತು. ಕೊನೆಗೂ ಆಕೆ ಅತ್ಮಹತ್ಯೆಗೆ ಶರಣಾದಳು. ಆಕೆಯ ಬದುಕು ಒಂದು ದೃಷ್ಟಾಂತ ಮಾತ್ರ.
ಹೆಣ್ಣು ತನ್ನ ಕರ್ತವ್ಯಗಳ ಹೊಣೆಗಾರಿಕೆಯಿಂದ ಮುಕ್ತಿ ಪಡೆಯುವಂತೆಯೇ ಇಲ್ಲ. ಹೆರಿಗೆಯಾದ ಮೂರು ದಿನಗಳಲ್ಲಿಯೇ ಬಾಣಂತನವನ್ನು ಬದಿಗಿಟ್ಟು, ತನ್ನ ಮನೆಗೆಲಸವನ್ನು ನಿರ್ವಹಿಸುವ ಅನೇಕ ಮಹಿಳೆಯರು ನನ್ನ ಎದುರಿಗೆ ಇದ್ದಾರೆ. ಇಷ್ಟೆಲ್ಲಾ ಹೊಣೆಗಾರಿಕೆಯನ್ನು ನಿರ್ವಹಿಸಿ ಯಾವುದೆ ಬಿರುದು, ಸನ್ಮಾನ, ಪ್ರಶಸ್ತಿಗಳು ಇಲ್ಲದೆ, ಯಾವುದೇ ರೀತಿಯ ವೇತನ ಸೌಲಭ್ಯವಿಲ್ಲದೆ, ತನ್ನನ್ನು ಗಂಧದಂತೆ ತೆಯ್ದುಕೊಳ್ಳುವ ಮಹಿಳೆಗೆ ಬಿಡುವು ಎಂಬುದು ಒಂದು ಮರೀಚಿಕೆ. ಅವಳ ದೈಹಿಕ ಮಾನಸಿಕ ಹಾಗೂ ಭಾವನಾತ್ಮಕ ಅಭಿವ್ಯಕ್ತಿಗೆ ಯಾವುದೆ ಕಿಂಡಿ ಇರುವುದಿಲ್ಲ. ಆಕೆಗೆ ತನ್ನ ಸ್ವಂತದ ಅಗತ್ಯ ತುಡಿತಗಳನ್ನು ನಿರ್ವಹಣೆ ಮಾಡಿಕೊಳ್ಳುವ ಸ್ಪೇಸ್‍ನ ಅಗತ್ಯವಿದೆಯೇ ಎಂಬುದು ಮೂಲಭೂತ ಪ್ರಶ್ನೆ. ಕುಟುಂಬವು ಅದನ್ನು ಗೌರವಿಸುತ್ತಿದೆಯೇ ನಂತರದ ಪ್ರಶ್ನೆ. ಈ ಬಗ್ಗೆ ತನ್ನ ಕುಟುಂಬದೊಡನೆ ಒಬ್ಬ ಮಹಿಳೆ ಸಂವಾದ ನಡೆಸಲು ಸಾಧ್ಯವೆ?
ತನ್ನ ಅವಶ್ಯಕತೆ ಮತ್ತು ಅಗತ್ಯಗಳನ್ನು ಜೀವಮಾನವಿಡೀ ನಿರ್ಲಕ್ಷಿಸುವ ಮತ್ತು ಬದಿಗೆ ತಳ್ಳುವ ಆಕೆ ಅಕಸ್ಮಾತ್ತಾಗಿ ತನ್ನ ಅವಶ್ಯಕತೆಗೆ ಪ್ರಾಮುಖ್ಯತೆಯನ್ನು ನೀಡಿದಲ್ಲಿ ವಿಚಿತ್ರ, ವಿಲಕ್ಷಣ ಹಾಗೂ ಕ್ರೂರ ಸ್ವಾರ್ಥಿ ಎಂದು ಬಿಂಬಿತವಾಗುವ ಸನ್ನಿವೇಶ ಏರ್ಪಡುತ್ತದೆ. ಹಾಗಿದ್ದಲ್ಲಿ ಒಬ್ಬ ಮಹಿಳೆಗೆ ತನ್ನ ದೇಹ, ಮನಸ್ಸು ಮತ್ತು ಸ್ವತಃ ನಿರ್ವಹಣೆಗೆ ಒಂದಿಷ್ಟು ವೇಳೆ, ಹಣ ಮತ್ತು ಬಿಡುಗಡೆಯ ಅವಶ್ಯಕತೆ ಇರುವುದು ಬೇಡವೇ? ಸೆಲ್ಫ್ ಅಥವಾ ಸ್ವಂತ ನಿಗಾವಣೆ ಎಂಬ ಒಂದು ವ್ಯವಸ್ಥೆ ಪ್ರಚಲಿತವಾಗಿಲ್ಲದೆ ಇರುವ ಈ ಸಾಮಾಜಿಕ ಸನ್ನಿವೇಶದಲ್ಲಿ ಒಬ್ಬ ಮಹಿಳೆ ಪತ್ನಿಯಾಗಿ, ಸೊಸೆಯಾಗಿ, ತಾಯಿಯಾಗಿ, ಸ್ವತಃ ನಿಗಾವಣೆಯ ಬಗ್ಗೆ ಗಮನ ನೀಡಬೇಕಾದ ಅವಶ್ಯಕತೆ ಎಂದಿಗಿಂತಲೂ ಇಂದು ಹೆಚ್ಚು ಪ್ರಾಮುಖ್ಯವನ್ನು ಪಡೆದಿದೆ. ಸೆಲ್ಫ್ ಕೇರ್ ಅಥವಾ ಸ್ವಂತ ನಿಗಾವಣೆ ಎಂಬುದು ವಿಭಿನ್ನ ವ್ಯಾಖ್ಯಾನಕ್ಕೆ ಒಳಗಾಗುವ ವಿಷಯವಾಗಿದೆ.
ಸ್ವಂತ ನಿಗಾವಣೆ ಎಂದರೆ, ಕೇವಲ ಪಾರ್ಲರ್‍ಗೆ ಹೋಗಿ ತನ್ನ ಸೌಂದರ್ಯ ರಕ್ಷಣೆಯತ್ತ ಗಮನ ಕೊಡುವುದು ಮಾತ್ರವಲ್ಲ, ಬದಲಿಗೆ ತನ್ನೊಡನೆ ತಾನು ಆರೋಗ್ಯಕರ ಸಂಬಂಧ ಬೆಳೆಸಿಕೊಳ್ಳುವ ಪ್ರಕ್ರಿಯೆಯಾಗಿದೆ. ಕಣ್ಣು ಮತ್ತು ಕಿವಿಗಳನ್ನು ನಮ್ಮ ಸ್ವಂತದ ಬಗ್ಗೆ ತೆರೆದಿಡುವುದಾಗಿದೆ. ನಮ್ಮ ದೇಹ ಮತ್ತು ಮನಸ್ಸಿಗೆ ಏನೋ ಅವಶ್ಯಕವೆಂದು ಪಿಸುಗುಡುತ್ತಿರುವುದನ್ನು ನಾವು ಕೇಳಿಸಿಕೊಳ್ಳಬೇಕಿದೆ ಮತ್ತು ಕಾಣಬೇಕಿದೆ. ಮಹಿಳೆಯರು ತಮ್ಮ ದೇಹ, ಮನಸ್ಸು ಮತ್ತು ಆತ್ಮದ ಬಗ್ಗೆ ಅಗತ್ಯದ ಕಾಳಜಿಯನ್ನು ವಹಿಸಬೇಕಿದೆ ಹಾಗೂ ಒಂದಿಷ್ಟು ಪ್ರೀತಿಯನ್ನು ಕೂಡ ನೀಡಬೇಕಿದೆ. ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳೆಯೊಬ್ಬಳು ಮುಂಜಾನೆಯ ವೇಳೆಗೆ ಟ್ರಾಕ್ ಪ್ಯಾಂಟ್ ಮತ್ತು ಷೂ ಧರಿಸಿ ಓಟಕ್ಕೆ ಅನುವಾದಲ್ಲಿ ಆಕೆಯ ನಡತೆಯೂ ಪ್ರಶ್ನಾರ್ಹವಾಗುವುದು. ಆಕೆ ಓಡುವ ಅಥವಾ ನಡೆಯುವ ಟ್ರ್ಯಾಕ್ ಆದರೂ ಎಲ್ಲಿದೆ? ಮಹಾನಗರಗಳಲ್ಲಿ ಕೆಲವು ಪಾರ್ಕ್‍ಗಳು ಅಲ್ಲಲ್ಲಿ ಕಂಡು ಬರುತ್ತವೆ. ಜಿಲ್ಲಾ ಕೇಂದ್ರ ಅಥವಾ ತಾಲ್ಲೂಕು ಕೇಂದ್ರಗಳಲ್ಲಿ ಅಂಥ ಸೌಕರ್ಯಗಳು ದೊರಕುವುದಿಲ್ಲ.
ತಾತ್ವಿಕವಾಗಿಯೂ ಕೂಡ ಮಹಿಳೆಯ ಚಲನೆಯನ್ನು ಸಮಾಜವು ಅನುಮೋದಿಸುವುದಿಲ್ಲ. ನಾಲ್ಕು ಗೋಡೆಗಳ ನಡುವಿನ ಅವಳ ಬದುಕನ್ನು ನಿರ್ದೇಶಿಸಿ ಮೌಲ್ಯಗಳನ್ನು ನೀಡುತ್ತ ಅತ್ಯಂತ ಪೂರ್ವಗ್ರಹಗಳಿಂದ ಕೂಡಿದ ಮೌಲ್ಯ ಮಾಪನವನ್ನು ಮಾಡುತ್ತ ಇರುತ್ತದೆ. ಆಕೆಯ ಸಕಲ ಕ್ರಿಯಾಶೀಲತೆಯನ್ನು ಹತ್ತಿಕ್ಕುವುದೇ ಇಂದಿಗೂ ಕೂಡ ಪಿತೃಪ್ರಧಾನ ವ್ಯವಸ್ಥೆಯ ಗುರಿಯಾಗಿದೆ. ನಡಿಗೆ, ವ್ಯಾಯಾಮ ಮುಂತಾದುವು ಅವಳ ಆರೋಗ್ಯಕ್ಕೆ ಅವಶ್ಯಕ ಎಂದು ಯಾರೂ ಭಾವಿಸುವುದಿಲ್ಲ. ಇಂದಿನ ರಾಸಾಯನಿಕಯುಕ್ತ ಆಹಾರ ಪದ್ಧತಿಯ ದೆಸೆಯಿಂದ ಮತ್ತು ಹದಿಹರೆಯದಿಂದಲೆ ಕಾಡುವ ಥೈರಾಯಿಡ ಗ್ರಂಥಿಗಳ ವಿಪರೀತ ಚೇಷ್ಟೆಗಳು ಮತ್ತು ಏರುಪೇರುಗಳು ಮಹಿಳೆಯ ದೇಹಕ್ಕೆ ಅಂಟಿಕೊಳ್ಳುತ್ತವೆ. ಅದರೊಟ್ಟಿಗೆ ರಕ್ತದ ಏರುಒತ್ತಡ, ಮಧುಮೇಹ ಹಾಗೂ ಸ್ಥೂಲಕಾಯದ ಕೊಡುಗೆಗಳು ಕೂಡ ಅಪಾರವಾಗಿವೆ. ಈ ಸಂದರ್ಭಗಳಿಗೆ ಅನುಸಾರವಾಗಿ ವೈದ್ಯರ ಸಲಹೆ, “ಓಡು ಮತ್ತು ವ್ಯಾಯಮ ಮಾಡು” ಎಂಬುದಾಗಿದೆ. ಆದರೆ ಅದನ್ನು ಅನುಸರಿಸಲು ಇರುವ ಅಡೆತಡೆಗಳು, ನಿಷೇಧಗಳು ಒಂದೆರಡಲ್ಲ. ಸಂಸಾರದ ಕರ್ತವ್ಯಗಳು ಮತ್ತು ಸಮಾಜದ ನಿಷೇಧಗಳ ನಡುವೆ ಮಹಿಳೆಗೆ ಸ್ವಯಂ ನಿಗಾವಣೆ ಸಾಧ್ಯವೇ? ನಾನಾ ಕಾರಣಗಳಿಂದ ಅವರಿಗೆ ಅದರಲ್ಲಿ ಆಸಕ್ತಿ ಮೂಡುವುದಿಲ್ಲ. ಔಷಧಗಳಿಗೆ ಮೊರೆ ಹೋಗುವ ಅವರಿಗೆ ದೈಹಿಕ ವ್ಯಾಯಾಮದ ಬಗ್ಗೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ.
ನಾನು ಇತ್ತೀಚೆಗೆ ಬಹರೈನ್ ದೇಶದಲ್ಲಿ ಒಂದು ತಿಂಗಳ ಪ್ರವಾಸದ ಖುಷಿಯನ್ನು ಅನುಭವಿಸಿದೆ. ಅದು ಜಗತ್ತಿನ ಶ್ರಿಮಂತ ರಾಷ್ಟ್ರಗಳ ಪೈಕಿ 33ನೇ ಸ್ಥಾನವನ್ನು ಪಡೆದಿದೆ. ರಾಜಪ್ರಭುತ್ವ ಇರುವುದರಿಂದ ಪ್ರಜೆಗಳ ಜೀವನಾವಶ್ಯಕ ಬೇಕು-ಬೇಡ ಎಂಬುದನ್ನು ಆ ದೇಶವು ಕರೆಯದಲೇ ಕೆಳದಲೇ ಮೇಲೆ ಬಿದ್ದು ಪೂರೈಸುತ್ತದೆ. ಹಾಗೆ ವಿಶಾಲವಾದ ರಸ್ತೆಗಳು, ಪಾರ್ಕ್‍ಗಳು ಮತ್ತು ಅಪಾರ ಜಿಮ್‍ಗಳು ಎಡತಾಕುತ್ತಿರುತ್ತವೆ. ಜೊತೆಯಲ್ಲಿ ಈಜುಕೊಳಗಳು ಕೂಡ ಯಥೇಚ್ಛವಾಗಿವೆ. ನಾನು ಭೇಟಿಯಾದ ಹತ್ತಾರು ಮಹಿಳೆಯರ ಪೈಕಿ ಬಹುತೇಕ ಎಲ್ಲರೂ ಕೂಡ ಸೊಂಟದ ಅಳತೆ ಒಂದು ಇಂಚು ಹೆಚ್ಚಾದರೂ ಕೂಡ ಹೌಹಾರಿ ಬೀಳುವರು. ಆದರೆ ಅವರಲ್ಲಿ ಎಲ್ಲೋ ಕೆಲವರು ಸ್ವಂತ ನಿಗಾವಣೆ ಬಗ್ಗೆ ಆಸಕ್ತರಾಗುತ್ತಾರೆಯೇ ಹೊರತು ಬಹಳ ಮಂದಿಗೆ ಅದು ಸಾಧ್ಯವಿಲ್ಲ.
ಬಹುತೇಕ ಮಹಿಳೆಯರು ಆ ಒಂದು ಅಗತ್ಯತೆಯ ಬಗ್ಗೆ ಆಲೋಚನೆಯನ್ನು ಕೂಡ ಮಾಡುವುದಿಲ್ಲ. ಹೆಣ್ಣಿನ ದೇಹದ ಅಪಾರ ಸ್ಥಿತ್ಯಂತರಗಳು ಮತ್ತು ಅದಕ್ಕೆ ಅನುಗುಣವಾಗಿ ಹಾರ್ಮೋನ್‍ಗಳ ಏರುಪೇರು ಮತ್ತು ಅವುಗಳನ್ನು ವೈಜ್ಞಾನಿಕವಾಗಿ ನಿರ್ವಹಿಸುವ ಬಗ್ಗೆ ಸೂಕ್ತ ತರಬೇತುದಾರರ ಮಾರ್ಗದರ್ಶನ ಕೂಡ ಅಗತ್ಯವಾಗಿದೆ. ಆದರೆ ನಮ್ಮ ಕುಟುಂಬದ ಅತಿ ಹಿರಿಯ ಪುರುಷರೊಬ್ಬರು ವಿಭಿನ್ನವಾದ ವ್ಯಾಖ್ಯಾನವನ್ನು ನೀಡುತ್ತಿದ್ದರು- ಮಾಸಿಕ ಋತುಸ್ರಾವದ ಮೂಲಕ ಮಹಿಳೆಯ ದೇಹದ ಕಲ್ಮಶವು ನಿರ್ಮೂಲನವಾಗುತ್ತದೆ, ಆದ್ದರಿಂದ ಆಕೆಗೆ ಇನ್ನು ಯಾವುದೇ ದೈಹಿಕ ಚಟುವಟಿಕೆಯ ಅಗತ್ಯವಿಲ್ಲ ಎಂಬುದು ಅವರು ಒಪ್ಪಿದ ಸಿದ್ಧಾಂತವಾಗಿತ್ತು. ಇದನ್ನು ಮಹಿಳೆಯರೂ ಒಪ್ಪಿಬಿಡುವುದು ದುರಂತ.
ಇನ್ನೂ ಮುಂದುವರಿದಂತೆ ಅನೇಕ ಪುರುಷ ಸಿಂಹಗಳು ಮಹಿಳೆಯರು ಬೀಸುವಕಲ್ಲು, ಒರಳು ಕಲ್ಲು, ಒನಕೆ, ಮೊರ, ನೆಲ ಒರೆಸುವ ಬಟ್ಟೆ ಹಾಗೂ ಸೌದೆ ಒಲೆಯನ್ನು ತೊರೆದಿರುವುದರಿಂದ ತಕ್ಕ ಶಾಸ್ತಿಯನ್ನು ಅನುಭವಿಸುತ್ತಿದ್ದಾರೆ ಎಂದು ಹರ್ಷಿಸುತ್ತಿದ್ದಾರೆ. ಹಾಗೂ ಮರಳಿ ಆ ಸಾಧನಗಳತ್ತ ನಡೆದು ದೈಹಿಕ ಚಟುವಟಿಕೆಯಿಂದ ಕೂಡಿರಬೇಕೆಂದು ಆದೇಶವನ್ನು ಕೂಡ ಹೊರಡಿಸುತ್ತಾರೆ. ಇವೆಲ್ಲವೂಗಳನ್ನು ಕೂಡ ಒಂದು ಬದಿಗಿಟ್ಟು ಮಹಿಳೆ ಕ್ರಿಯಾಶೀಲಳಾಗಬೇಕಿದೆ. ತನ್ನ ಸ್ವಂತ ಬದುಕಿನ ಸಲುವಾಗಿ ಆರ್ಥಿಕವಾಗಿ ಸದೃಢತೆಯನ್ನು ಹೊಂದಬೇಕು, ಅದರ ಜೊತೆಯಲ್ಲಿ ದೈಹಿಕ, ಮಾನಸಿಕ ಚಟುವಟಿಕೆಯ ಸಲುವಾಗಿ ತನ್ನ ಕಾರ್ಯಕ್ಷೇತ್ರವನ್ನು ಗುರುತಿಸಿ ವಿಸ್ತರಿಸಿಕೊಳ್ಳಬೇಕು. ಒಟ್ಟಾರೆ ಅನೇಕ ಹರಿವುಗಳಿಂದ ಕೂಡಿದ ನದಿಯಾಗಿ ಧುಮ್ಮಿಕ್ಕಬೇಕಿದೆ, ಅಂತರ್ಜಲವಾಗಿ ಜಿನುಗಬೇಕಿದೆ.

ಬಾನು ಮುಷ್ತಾಕ್

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *