Latestಅಂಕಣ

ಹದಿನಾರಾಣೆ ಅಸಮಾನತೆ / ಸೆರಗಿನ ರಗಳೆ ಇಲ್ಲದ ನೈಟಿಯ ನಂಟು – ಬಾನು ಮುಷ್ತಾಕ್

ಪುರುಷರು ದ್ವೇಷಿಸುವ `ನೈಟಿ’ ಮಹಿಳೆಯರಿಗೆ ಕೊಟ್ಟ ಸಲೀಸು ಸ್ವಾತಂತ್ರ್ಯ ಅದನ್ನು ತೊಟ್ಟವರಿಗಷ್ಟೇ ಗೊತ್ತು. ಆದರೆ ಹಗಲಿನಲ್ಲಿ ನೈಟಿಯ ಮೆರೆದಾಟಕ್ಕೆ  ಮೂಗುದಾರ ತೊಡಿಸಲು ಗ್ರಾಮಸಭೆಗಳೂ ಮುಂದಾಗುತ್ತಿವೆ. ಮಹಿಳೆಯರ ಉಡುಪು ಎಂಬುದು ಗಂಡಾಳ್ವಿಕೆಯ ಮನಃಸ್ಥಿತಿಗೆ ಅಪಾಯಕಾರಿ ಎಂದೇಕೆ ಅನಿಸುತ್ತದೆ? 
ಮಿಶನ್ ಆಸ್ಪತ್ರೆ ಎಂದು ಕರೆಯುವ ಆ ಆಸ್ಪತ್ರೆ ಹಾಸನದಲ್ಲಿ ಒಂದು ವಿಧದಲ್ಲಿ ಸಾಂಸ್ಕøತಿಕ ಕೇಂದ್ರ. ಅದರ ಬೇರೆ ವಿವರಗಳ ಬದಲಿಗೆ, ಅಲ್ಲಿ ನಾನು ಮೊಟ್ಟಮೊದಲಿಗೆ ಕಂಡ “ನೈಟೀ” ಎಂಬ ಉಡುಗೆಯ ಬಗ್ಗೆ ನನ್ನ ಅನಿಸಿಕೆಗಳನ್ನು ದಾಖಲಿಸುತ್ತೇನೆ. ಆ ಆಸ್ಪತ್ರೆಯ ಸನಿಹದಲ್ಲಿಯೇ ವೈದ್ಯಕೀಯ ಸಿಬ್ಬಂದಿಯÀ ವಸತಿಗೃಹಗಳು ಕೂಡಾ ಇದ್ದವು. ಮತ್ತು ಸಹಜವಾಗಿಯೇ ತಮ್ಮ ಕೆಲಸದ ವೇಳೆ ಮುಗಿದ ನಂತರ ಆ ಸಿಬ್ಬಂದಿಯ ಅನೇಕ ಜನರು ತಮ್ಮ ಮನೆಗಳಲ್ಲಿ ವಿರಾಮವಾಗಿ ತಮ್ಮ ಕೆಲಸಬೊಗಸೆ ಮನೋರಂಜನೆ ಮೊದಲಾದುವುದರಲ್ಲಿ ತೊಡಗಿರುತ್ತಿದ್ದರು. ಸಿಂಥಿಯಾ ನಮ್ಮ ಕುಟುಂಬಕ್ಕೆ ಪರಿಚಯದ ನರ್ಸ್. ಆ ದಿನ ಆಕೆ ನೈಟಿ ತೊಟ್ಟು ಮನೆಯ ಹೊರಗಡೆ ನೆಟ್ಟಿದ್ದ ಗಿಡಗಳಿಗೆ ನೀರುಣಿಸುತ್ತಿದ್ದಳು.
ಆಕೆ ತೆಳುವಾಗಿರಲಿಲ್ಲ ಹೊಟ್ಟೆ ದಪ್ಪಗಿತ್ತು. ಹೀಗಾಗಿ ಆ ಗೌನ್ ಆಕೆಯ ಮೇಲೆ ಅಂತಹ ಚೆನ್ನಾಗೇನೂ ಕಾಣುತ್ತಿರಲಿಲ್ಲ. ಆಕೆಯ ಅಂಕುಡೊಂಕುಗಳನ್ನು ತೋರುವುದಕ್ಕೆ ಬದಲು ಆಕೆಯ ದೇಹದ ವಕ್ರತೆಯನ್ನೇ ಎತ್ತಿ ತೋರುತ್ತಿತ್ತು. ನಾನು ಮಗುವೂ ಅಲ್ಲ, ಯುವತಿಯೂ ಅಲ್ಲದ ವಯಸ್ಸಿನಲ್ಲಿದ್ದೆ. ಆಕೆಯನ್ನು ನೋಡಿ ನಗುವನ್ನು ಅದುಮಿಡಲು ನನಗೆ ಸಾಧ್ಯವಾಗಲಿಲ್ಲ. ವಿನಾಕಾರಣ ನಗುವುದು ಹವ್ಯಾಸವಾಗಿದ್ದ ನನಗೆ ನಗಲು ಕಾರಣವೇ ಬೇಕಿರಲಿಲ್ಲ. ಒದಗಿ ಬಂದ ಸುಸಂಧಿಯನ್ನು ಬಳಸಿಕೊಂಡು ನಾನು ಬಿದ್ದು ಬಿದ್ದು ನಕ್ಕೆ. ಆಕೆಗೇನೂ ಅನಿಸಲಿಲ್ಲವೆನ್ನಿ. ಒಮ್ಮೆ ಮಾತ್ರ ನನ್ನತ್ತ ದೃಷ್ಟಿಬೀರಿ ಆಕೆ ತನ್ನ ಎಂದಿನ ಕೆಲಸದಲ್ಲಿ ನಿರತಳಾದಳು.
ಹೀಗೆ ನನ್ನ ಮತ್ತು ನೈಟಿಯ ನಂಟು ಆರಂಭವಾಯಿತು. ಆದರೆ ಮುಂದುವರೆಯಲಿಲ್ಲ. ಏಕೆಂದರೆ ನೈಟಿಯನ್ನು ತೊಡಬೇಕೆಂದು ನಾನು ನಿರ್ಧರಿಸಿದಾಗಲೆಲ್ಲಾ ನನ್ನ ಕಣ್ಣ ಮುಂದೆ ಆಕೆಯೇ ಮೂಡಿ ಬರುತ್ತಿತ್ತು.
ಆದರೆ ಮುಂದಿನ ದಿನಗಳಲ್ಲಿ ನನ್ನ ಮತ್ತು ನೈಟಿಯ ಬಾಂಧವ್ಯ ಮುಂದುವರೆಯಿತು. ಈ ಬಾಂಧವ್ಯ ನಮ್ಮ ಕುಟುಂಬದ ಇತರೆ ಸದಸ್ಯರಿಗೆ ಆಪ್ಯಾಯಮಾನವಾಗಿ ಕಂಡುಬರಲಿಲ್ಲ. ಏಕೆಂದರೆ ಮದುವೆಯ ನಂತರ ಸುಮಾರು ಮೂರು ವರ್ಷದ ಅವಧಿಯಲ್ಲಿ. ಇದ್ದ ಹವ್ಯಾಸವೆಂದರೆ `ಡಿಸ್ಕೌಂಟ್ ಸೇಲ್’ಗಳಲ್ಲಿ ವ್ಯಾಪಾರವನ್ನು ಭರ್ಜರಿಯಾಗಿ ಮಾಡುವುದು ಹಾಗೆ ತಂದ ಸೀರೆಗಳ ಬ್ಲೌಸ್ ಹೊಲಿಸಿ ಫಾಲ್ಸ್ ಹೊಲೆದು ವಾರ್ಡ್‍ರೋಬ್‍ನಲ್ಲಿ ನೇತು ಹಾಕಿ ಹಗಲಿನ ಹನ್ನೆರಡು ಗಂಟೆಗಳು ಮತ್ತು ರಾತ್ರಿಯ ಹನ್ನೆರಡು ಗಂಟೆಗಳನ್ನು ನೈಟಿಯ ಅಪ್ಪುಗೆಯಲ್ಲಿ ಕಳೆಯುವುದು. ಬಸಿರು ಬಾಣಂತನ ಎಂಬ ಎಲ್ಲಾ ನೆಪಗಳು ಕೂಡಿ ಒದಗಿ ಬಂದಿದ್ದರಿಂದ ನನ್ನ ಅನುಕೂಲತೆಯೊಂದೇ ನನಗೆ ಸಕಾರಣವನ್ನು ಒದಗಿಸಿತ್ತು. ನನ್ನಂತೆಯೇ ನಮ್ಮ ಕುಟುಂಬದ ಅನೇಕ ಮಹಿಳೆಯರು ಸದಾ ಕಾಲ ನೈಟಿಗೆ ಅಂಟಿಕೊಂಡು ಅದನ್ನು ಒಂದು ಅಪಹಾಸ್ಯದ ವಸ್ತುವನ್ನಾಗಿ ಮಾಡುವಲ್ಲಿ ಕಾಣಿಕೆಯನ್ನು ನೀಡಿದರು. ಪುರುಷರಂತೂ ನೈಟಿಯನ್ನು ದ್ವೇಷಿಸಲು ಆರಂಭಿಸಿದರು.
ನೈಟಿ ಎಂಬುದು ನಮ್ಮ ಕುಟುಂಬದ ಮಹಿಳೆಯರಿಗೆ ಮಾತ್ರ ಒಗ್ಗಿದ ವಿಷಯವಾಗಿ ಉಳಿಯಲಿಲ್ಲ. ಬದಲಿಗೆ ಅದು ತನ್ನ  ಸರ್ವವ್ಯಾಪಿ ಗುಣದಿಂದ ಸಾರ್ವತ್ರೀಕರಣಗೊಳ್ಳ ತೊಡಗಿತು. ಮಹಿಳೆಯರು ಎಲ್ಲೆಂದರಲ್ಲಿ ತಮಗೆ ಸರಿ ತೋಚಿದಂತೆ ನೈಟಿಯನ್ನು ತೊಡಲು ಆರಂಭಿಸಿದ್ದಾರೆ. ಬೆಳಗ್ಗೆ ವಾಕಿಂಗ್ ಹೋಗಬೇಕಾದರೆ ನೈಟಿ, ಹಾಗೆಯೇ ನಾಯಿಯನ್ನು ವಾಕಿಂಗ್ ಮಾಡಿಸಿಕೊಂಡು ಬರಲು ನೈಟಿ, ಅರ್ಜೆಂಟಿಗೆ ಆಚೆ ಬೀದಿಯ ಅಂಗಡಿಯಿಂದ ಹಾಲು ತರಲು ನೈಟಿ, ಲೋಕಾಭಿರಾಮವಾಗಿ ಕಾಂಪೌಂಡಿನ ಆಚೆ ಈಚೆ ನಿಂತು ಮಾತನಾಡಲು ನೈಟಿ – ಹೀಗೆ ನೈಟಿ ವಿದೇಶದಿಂದ ಹಾರಿ ಬಂದು ಭಾರತದ ಮನೆಗಳಲ್ಲಿ ಗೂಡು ಕಟ್ಟಿಕೊಂಡು ನಂತರ ಮನೆಯಾಚೆ ಮೆಲ್ಲಗೆ ಅಡಿಯಿಟ್ಟಿತು. ಅನಂತರದಲ್ಲಿ ಮನೆ ಕೆಲಸಕ್ಕೆ ಹೋಗಲು, ತರಕಾರಿ ಮಾರಾಟ ಮಾಡಲು, ಕುಕ್ಕೆಯನ್ನು ತಲೆ ಮೇಲೆ ಹೊರಲು, ದನಗಳನ್ನು ಹೊಡೆದುಕೊಂಡು ಹೋಗಲು, ಕಳೆ ಕೀಳಲು, ದವಸ ಒಟ್ಟಲು, ಹೊಲಗದ್ದೆಗಳಲ್ಲಿ ಕೆಲಸ ಮಾಡಲು ಹೀಗೆ ತನ್ನ ಸಾಮ್ರಾಜ್ಯವನ್ನು ಯಾರ ಅರಿವಿಗೂ ಬರದಂತೆ ವಿಸ್ತರಿಸಿಕೊಂಡು ಎಲ್ಲಾ ಮಹಿಳೆಯರ ಮನೆ ಮತ್ತು ಮನಗಳಲ್ಲಿ ಸ್ಥಾನವನ್ನು ಭದ್ರ ಪಡಿಸಿಕೊಂಡಿತು. ಹಾಗೆ ಅದು ತನ್ನ ಒಳ ವ್ಯಾಪ್ತಿಯನ್ನು ಸಾರ್ವಜನಿಕವಾಗಿ ಹಿಗ್ಗಿಸಿಕೊಂಡಾಗ ಸೆರಗಿನ ಹಂಗು ಹರಿದು ಹೋಯಿತು. ಸೆರಗು ಎಂಬ ಸೂತ್ರವೇ ಕಳೆದು ಹೋದಾಗ  ತಲೆಯ ಮೇಲೆ ಸೆರಗು ಹಾಕುವ ಪ್ರಮೇಯವೇ ಬರಲಿಲ್ಲ. ಕೆಲ ಮಹಿಳೆಯರು ಒಂದಿಷ್ಟು ಎಚ್ಚರಿಕೆ ವಹಿಸಿ ನೈಟಿಯ ಮೇಲೇ ದುಪಟ್ಟಾ ಎಂಬ ವಸ್ತ್ರವನ್ನು ಎಳೆದು ಕೊಳ್ಳುತ್ತಿದ್ದರು. ಕೆಲವರಂತೂ ಬಿಂದಾಸ್ ಆಗಿ ತಮ್ಮ ಮತ್ತು ಸೆರಗಿನ ಗಂಟನ್ನು ಬಿಡಿಸಿಕೊಂಡಿದ್ದರು. ಇನ್ನೂ ಕೆಲವರು ಮುಲಾಜಿಗೆ ಎಂದು ಅಲ್ಲೇ ಬಿದ್ದಿರುತ್ತಿದ್ದ ಟವೆಲ್ಲನ್ನು ಎಡ ಭುಜದ ಮೇಲೆ ಎಳೆದುಕೊಂಡು ಆಚೆ ಬೀದಿ ಈಚೆ ಬೀದಿ ಎಂದು ಓಡಾಡುತ್ತಿದ್ದರು. ಇಷ್ಟೆಲ್ಲಾ ಪರಿವರ್ತನೆಯನ್ನು ಹೊಂದಿದ ನೈಟಿ ತನ್ನ ಸ್ಥಾನವನ್ನು ಭದ್ರವಾಗಿ ಉಳಿಸಿಕೊಂಡಿತು. ಆದರೆ ಲಂಗುಲಗಾಮಿಲ್ಲದೆ ಮೆರೆಯುತ್ತಿದ್ದ ನೈಟಿ ಎಂಬ ಕಾಡುಕುದುರೆಗೆ ಮೂಗುದಾರ ತೊಡಿಸುವ ಪ್ರಯತ್ನವನ್ನು ಕೆಲವು ಪುರುಷರು ಆರಂಭಿಸಿದ್ದಾರೆ.
ಹೆಚ್ಚು ಸುದ್ದಿ ಮಾಡದ ಆದರೆ ಸ್ವಾರಸ್ಯಕರವಾದ ವಿಷಯವೊಂದು ಹೊರಬಂದಿದೆ. ಸುಮಾರು ಐದಾರು ತಿಂಗಳ ಹಿಂದೆ ಆಂಧ್ರಪ್ರದೇಶ ರಾಜ್ಯದ ತೋಕಾಲಪಲ್ಲಿ ಎಂಬ ಗ್ರಾಮಸಭೆಯ ಒಂಬತ್ತು ಮಂದಿ ಸದಸ್ಯರು ಸಭೆ ಸೇರಿ ನೈಟಿಯ ಬಗ್ಗೆ ಗಂಭೀರವಾದ ಆದೇಶವನ್ನು ಹೊರಡಿಸಿದ್ದಾರೆ. ಬಾಲಕಿಯರು ಮತ್ತು ಮಹಿಳೆಯರು ಬೆಳಿಗ್ಗೆ ಏಳರಿಂದ ಸಂಜೆ ಏಳರವರೆಗೆ ನೈಟಿಯನ್ನು ತೊಡಬಾರದು ಎಂಬ ಸುಗ್ರೀವಾಜ್ಞೆಯನ್ನು ಜಾರಿಗೊಳಿಸಿದ್ದಾರೆ. ಅಷ್ಟೇ ಅಲ್ಲದೆ ಸದರಿ ಆದೇಶವನ್ನು ಉಲ್ಲಂಘನೆ ಮಾಡಿದವರು ಎರಡು ಸಾವಿರ ರೂಪಾಯಿಗಳ ದÀಂಡವನ್ನು ತೆರಬೇಕು ಎಂಬ ಕಟ್ಟುನಿಟ್ಟನ್ನು ಕೂಡ ಮಾಡಿದ್ದಾರೆ. ಹೀಗೆ ಮಹಿಳೆಯರು ಸದರಿ ಗ್ರಾಮಸಭೆಯ ಆದೇಶವನ್ನು ಉಲ್ಲಂಘನೆ ಮಾಡಿರುವುದನ್ನು ಪತ್ತೆ ಹಚ್ಚಿದವರಿಗೆ ಒಂದು ಸಾವಿರ ರೂಪಾಯಿಗಳ ಇನಾಮನ್ನು ಕೂಡ ಘೋಷಿಸಿದ್ದಾರೆ. ಎಷ್ಟೇ ಕಷ್ಟ ಬಂದರೂ ನಷ್ಟಕ್ಕೆ ಒಳಗಾಗದಿರಲು ನಿರ್ಧರಿಸಿರುವ ಅಲ್ಲಿನ ಮಹಿಳೆಯರು ಯಾರೂ ಕೂಡ ಆ ಕಾನೂನನ್ನು ಎದುರು ಹಾಕಿ ಕೊಂಡಿರುವುದಿಲ್ಲ ಹಾಗೂ ದಂಡವನ್ನು ತೆತ್ತಿರುವ ಪ್ರಸಂಗ ಕೂಡ ಬಂದಿಲ್ಲ ಎಂದು ವರದಿ ತಿಳಿಸುತ್ತದೆ. ಎಲ್ಲಕ್ಕಿಂತಲೂ ಆಸಕ್ತಿಕರ ವಿಷಯವೆಂದರೆ, ಗ್ರಾಮ ಸಭೆಯ ಮುಖ್ಯಸ್ಥೆ ಒಬ್ಬ ಮಹಿಳೆಯೇ ಆಗಿದ್ದಾಳೆ ಎಂಬುದು!
ಅನೇಕ ಮಹಿಳೆಯರಿಗೆ ಈ ಬಗ್ಗೆ ತೀವ್ರ ವಿರೋಧವಿದ್ದರೂ ಕೂಡ ಆ ಕಾನೂನನ್ನು ಪ್ರತಿಭಟಿಸುವ ಎದೆಗಾರಿಕೆ ಇಲ್ಲ. ಏಕೆಂದರೆ ಆ ಕಾನೂನನ್ನು ಜಾರಿಗೆ ತಂದಿರುವುದರ ಉದ್ದೇಶವೇ ನೈಟಿಯನ್ನು ಧರಿಸುವುದರ ಮೂಲಕ ಮಹಿಳೆಯರು ತಮ್ಮ ಅಂಗಸೌಷ್ಠವದÀ ಪ್ರದರ್ಶನವನ್ನು ಮಾಡಬಾರದೆಂಬುದು. ಯಾವುದೇ ನಿರ್ದಿಷ್ಟ ಶೇಪ್ ಇಲ್ಲದೆ ಸಡಿಲವಾಗಿ ಕಂಡುಬರುವ ನೈಟಿ ಇಷ್ಟೊಂದು ದುಷ್ಟತನವನ್ನು ಅಂದರೆ ಮಹಿಳೆಯರ ಅಂಕುಡೊಂಕುಗಳನ್ನು ಪ್ರದರ್ಶಿಸಿ ಪೀಪಿಂಗ್ ಟಾಮ್‍ಗಳಿಗೆ ಆನಂದವನ್ನು ಒದಗಿಸುವುದು ಎಂಬ ಸತ್ಯ ಇದುವರೆಗೂ ನನಗೆ ಹೊಳೆದಿರಲಿಲ್ಲ. ಈ ಬಗ್ಗೆ ಬಿಬಿಸಿಯ ವರದಿಗಾರರು ಆ ಗ್ರಾಮವನ್ನು ಸಂದರ್ಶಿಸಿದಾಗ ಪ್ರತಿಷ್ಠಿತ ವ್ಯಕ್ತಿಯೊಬ್ಬರು ನೀಡಿದ ಸಂದರ್ಶನದಲ್ಲಿ ಹೇಗೆ ನೈಟಿ ಪುರುಷರನ್ನು ಆಕರ್ಷಿಸುತ್ತದೆ ಎಂಬ ವಿಷಯವನ್ನು ವಿಶದೀಕರಿಸಿರುತ್ತಾರೆ. ನೈಟಿಯ ಮೇಲಿನ ಈ ಹಲ್ಲೆಗಳು ಅದಕ್ಕೆ ಹೊಸದೇನಲ್ಲ. ಈ ಹಿಂದೆ ಕೂಡ ಅಂದರೆ 2014 ನೆಯ ಇಸವಿಯಲ್ಲಿ ನವಿ ಮುಂಬಯಿಯ ಗೋಥಿವಿಲಿ ಗ್ರಾಮದಲ್ಲಿ ಹಗಲಿನಲ್ಲಿ ತೊಡುವ ನೈಟಿಯ ವಿರುದ್ಧ ನಿಷೇಧವನ್ನು ಜಾರಿಗೊಳಿಸಲಾಗಿತ್ತು, ಅದರ ಉಲ್ಲಂಘನೆ ಮಾಡಿದವರಿಗೆ ಐನೂರು ರೂಪಾಯಿಗಳ ದಂಡವನ್ನು ವಿಧಿಸಲಾಗಿತ್ತು. ಆದರೆ ಅಲ್ಲಿನ ಮಹಿಳೆಯರು ಸಾಮೂಹಿಕವಾಗಿ ಸದರಿ ಆಜ್ಞೆಯನ್ನು ತಿರಸ್ಕರಿಸಿದ್ದರಿಂದ ಆ ಕಾನೂನು ಮೂಲೆಗುಂಪಾಗಿತ್ತು. ಆಂಧ್ರದ ಗ್ರಾಮದಲ್ಲಿ ಈ ನಿಷೇಧಗಳು ಎಲ್ಲಿಯವರೆಗೆ ಜಾರಿಯಲ್ಲಿರುತ್ತವೆ ಎಂಬುದನ್ನು ಮುಂಬರುವ ದಿನಗಳೇ ನಿರ್ಧರಿಸುತ್ತವೆ.
ನೈಟಿಯ ಬಗ್ಗೆ ಇಷ್ಟೊಂದು ವ್ಯಾಮೋಹ ಏಕೆ ಎಂಬ ಪ್ರಶ್ನೆಯೊಂದು ನಮ್ಮೆದುರಿಗೆ ಮೂಡುತ್ತದೆ. ನೈಟಿ ಎಂಬ ದಿರಿಸು ಭಾರತೀಯ ಮಹಿಳೆಯರಿಗೆ ಸಾಕಷ್ಟು ಆರಾಮ ಮತ್ತು ಅನುಕೂಲತೆಯನ್ನು ಒದಗಿಸುತ್ತದೆ. ನೈಟಿ ಎಂಬುದು ಒಂದು ಪೀಸ್‍ನ ಉಡುಪು. ಅದು ಬಹುಪಾಲು ಹತ್ತಿ ಬಟ್ಟೆಯಿಂದ ತಯಾರಿಸಲಾಗಿದ್ದು, ಸಡಿಲವಾಗಿರುತ್ತದೆ ಮತ್ತು ದೊಗಳೆಯಾಗಿ ಇಳಿಬಿದ್ದಿರುವುದರಿಂದ ಹಾಗೂ ಬಹು ಮುಖ್ಯವಾಗಿ ಸೆರಗಿನ ರಗಳೆ ಇಲ್ಲದೆ ಇರುವುದರಿಂದ, ಅದು ಭಾರತೀಯ ಮಹಿಳೆಯರ ನಡುವೆ ಅಪಾರ ಜನಪ್ರಿಯತೆಯನ್ನು ಹೊಂದಿದೆ.
ಕೇರಳದಲ್ಲಂತೂ ನೈಟಿ ಮಹಿಳೆಯರಲ್ಲಿ ಎಷ್ಟು ಜನಪ್ರಿಯತೆಯನ್ನು ಗಳಿಸಿದೆ ಎಂದರೆ, ಹಗಲಿನಲ್ಲಿ ಕೂಡಾ ಮಹಿಳೆಯರು ಅದೇ ಉಡುಪನ್ನು ಇಷ್ಟ ಪಡುತ್ತಾರೆ. ಕೇರಳದ ಸಾಂಪ್ರದಾಯಿಕ ದಿರಿಸಾದ ಮುಂಡು – ಒಂದು ಬಿಳಿಯ ಸೀರೆ ಮತ್ತು ಬ್ಲೌಸಿನಿಂದ ಕೂಡಿದ್ದು, ಅದಕ್ಕೆ ಸಮೀಪದ ಬಂಧುವಾಗಿ ಬಂದ ನೈಟಿಯು “ಮುಂಡು”ವನ್ನು ಹಿಂದಿಕ್ಕುತ್ತಿದೆ. ಅದರಲ್ಲೂ ಕೇರಳದ ಗ್ರಾಮಾಂತರ ಭಾಗದಲ್ಲಿ ಹಗಲು-ರಾತ್ರಿ ಮಹಿಳೆಯರು ತೊಡುವ ಈ ನೈಟಿ ಎಂಬ ಉಡುಗೆಯನ್ನು ಹೊಲೆಯುವ ಸಂದರ್ಭದಲ್ಲಿ ಎದೆಯ ಭಾಗದಲ್ಲಿ ಒತ್ತೊತ್ತಾದ ಡಬಲ್ ಫ್ರಿಲ್‍ಗಳನ್ನು ಹೊಲಿದಿರುತ್ತಾರೆ. ಅಂದರೆ ಸಾಮಾನ್ಯವಾಗಿ ಭಾರತೀಯ ಮಹಿಳೆಯರು ಎದೆಯ ಭಾಗವನ್ನು ದುಪಟ್ಟಾ, ಸೆರಗು ಅಥವಾ ಸ್ಕಾರ್ಫ್‍ನಿಂದ ಹೊದೆದು, ತಮ್ಮ ವಕ್ಷಸ್ಥಳದ ಪ್ರದರ್ಶನವನ್ನು ಮುಚ್ಚಿಕೊಳ್ಳಬೇಕು ಎಂಬುದು ಅಲಿಖಿತವಾದ ಕಾನೂನು. ಇಂತಹ ಸಂದರ್ಭದಲ್ಲಿ ಎದೆಯ ಭಾಗವನ್ನು ಮುಚ್ಚಲು ಕಂಡುಕೊಂಡ ಸುಲಭ ಮಾರ್ಗವೆಂದರೆ, ಡಬಲ್ ಫ್ರಿಲ್ ಎಂಬ ಪರಿಹಾರ. ಆದರೂ ಕೂಡಾ, ಭಾರತದಲ್ಲಿ ಮಹಿಳೆಯರು ನೈಟಿಯನ್ನು ತೊಡುವುದು ಅದರಲ್ಲೂ ಹಗಲಿನಲ್ಲಿ ಮತ್ತು ಸಾರ್ವಜನಿಕವಾಗಿ ನೈಟಿಯನ್ನು ತೊಡುವ ಕ್ರಮವನ್ನು ಇಂದಿಗೂ ಕೂಡಾ ಅತ್ಯಂತ ನಿಕೃಷ್ಟ ಭಾವದಿಂದ ನೋಡಲಾಗುತ್ತದೆ. ಅದಕ್ಕೆ ಸುಲಭವಾದ ಅಂಗೀಕಾರ ಮತ್ತು ಮನ್ನಣೆ ದೊರಕಲಿಲ್ಲ. ಆದರೆ ಈ ಒಂದು ವಿಷಯದಲ್ಲಿ ಮಾತ್ರ ನಮ್ಮ ಮಹಿಳೆಯರು ಅಂಗೀಕಾರವನ್ನು ಕೂಡಾ ನಿರೀಕ್ಷಿಸುತ್ತಾ ಕೂರಲಿಲ್ಲ. ಬದಲಿಗೆ ಮುಕ್ತವಾಗಿ ತಮ್ಮ ಆಯ್ಕೆಯನ್ನು ಯಾರ ಮುಲಾಜಿಲ್ಲದೆ, ಎತ್ತಿ ಹಿಡಿಯುತ್ತಿದ್ದಾರೆ.
ಮಹಿಳೆಯರ ಉಡುಪು ಎಂಬುದು ಗಂಡಾಳ್ವಿಕೆಯ ಮನಃಸ್ಥಿತಿಗೆ ಅಪಾಯಕಾರಿ ಎಂದೇಕೆ ಅನಿಸುತ್ತದೆ? ಈ ವಿಷಯದಲ್ಲಿ ಅಂದರೆ ಮಹಿಳೆಯರ ಸಮಾನತೆ ಮತ್ತು ಹಕ್ಕಿನ ವಿಷಯದಲ್ಲಿ ಗಂಡನ್ನು ಮಾದರಿಯಾಗಿ ಇಟ್ಟು ಚರ್ಚಿಸುವುದೇ ಮಹಿಳೆಯರ ಸಬಲೀಕರಣಕ್ಕೆ ತೀವ್ರ ಹಿನ್ನಡೆಯನ್ನು ಉಂಟು ಮಾಡುವಂತಹ ಕಾರ್ಯತಂತ್ರವಾಗಿದೆ. ತನ್ನ ಬದುಕಿನ ಆಯ್ಕೆಗಳಿಗೆ ಆಕೆಯೇ ನಿರ್ಣಾಯಕ ಸ್ವರೂಪದ ತೀರ್ಮಾನಗಳನ್ನು ಕೈಗೊಳ್ಳುವ ಆಕೆಯ ಸಾಮಥ್ರ್ಯವನ್ನು ಮೊಟಕುಗೊಳಿಸುವ, ಆಕೆಯ ಮೇಲೆ ನಿಯಂತ್ರಣವನ್ನು ಹೇರುವ ಹಾಗೂ ಹಿಂಸೆ ಮತ್ತು ದಂಡನೆಯ ಪ್ರಕ್ರಿಯೆಯ ಮೂಲಕ ಆಕೆಯನ್ನು ಅಡಿಯಾಳನ್ನಾಗಿಸುವ ಪ್ರಕ್ರಿಯೆಯೇ ಪುರುಷ ಪ್ರಾಧಾನ್ಯದ ಹುನ್ನಾರವಾಗಿದೆ.
ಸಮಾಜದ ಇಂತಹ ವಿಕ್ಷಿಪ್ತ ಮನೋಭಾವವನ್ನು ಸಮರ್ಥನೆ ಮಾಡಿಕೊಳ್ಳುವ, ವೈಭವೀಕರಿಸುವ ಹಾಗೂ ಅದನ್ನು ಚಾಣಾಕ್ಷತನದಿಂದ ಮತ್ತು ಹಿಂಸಾತ್ಮಕವಾಗಿ ಕಾರ್ಯಗತಗೊಳಿಸುವ ವಿಧಾನಗಳನ್ನು ಇಂದು ಮಹಿಳೆಯರು ಪ್ರಶ್ನಿಸಬೇಕಾಗಿದೆ. ಆ ಹಿನ್ನೆಲೆಯ ಒಂದು ಮೂಲ ಪ್ರಶ್ನೆ ವಸ್ತ್ರ ಸಂಹಿತೆ ಎಂಬುದು. ಆಕೆಯ ಉಡುಗೆತೊಡುಗೆ ಎಂಬುದು ಆಕೆಯ ಅಭಿವ್ಯಕ್ತಿ ಎಂಬ ವಿಷಯವನ್ನು ಗಂಡಾಳ್ವಿಕೆ ಮಾನ್ಯ ಮಾಡಬೇಕಿದೆ. ಹೋರಾಟ ಕಿರಿದೇ ಸರಿ, ಆದರೆ ಗಟ್ಟಿನೆಲದ, ಗಟ್ಟಿದನಿಯ ಪ್ರಶ್ನೆಗಳು ಮೂಡುವುದು ಈ ನಿಟ್ಟಿನಲ್ಲಿ ಒಳ್ಳೆಯ ಕ್ರಿಯೆಯೇ ಆಗಿದೆ.
– ಬಾನು ಮುಷ್ತಾಕ್

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *