ಹದಿನಾರಾಣೆ ಅಸಮಾನತೆ/ ಸುಧಾರಣೆಗೆ ಸನಾತನರ ವಿರೋಧ – ಬಾನು ಮುಷ್ತಾಕ್

ಬ್ರಿಟಿಷರ ಕಾಲದಲ್ಲಿ ಬಂದ ಮಹಿಳೆಯರ ಪರವಾದ ಅನೇಕ ಸುಧಾರಣೆಗಳು ಮತ್ತು ತೀರ್ಪುಗಳನ್ನು ‘ಅವೆಲ್ಲ ಹಿಂದೂ ಧರ್ಮದ ನಂಬಿಕೆಗಳಿಗೆ ವಿರೋಧವಾಗಿವೆ’ ಎಂದು ಸನಾತನ ಸಮಾಜ ವಿರೋಧಿಸಿತು. ಆದರೆ ಅವುಗಳನ್ನು ಪ್ರಶ್ನಿಸಿದ ಕೆಲವು ಮಹಿಳೆಯರ ಧೀರೋದಾತ್ತ ಹೋರಾಟ ಇಂದಿಗೂ ಸ್ಮರಣೀಯ.

 

ಪುರುಷರ ಜಗತ್ತಿನಲ್ಲಿ ಮಹಿಳೆಯರಿಗೆ ಬದುಕುವ ಹಕ್ಕು ಸುಲಭವಾಗಿ ದೊರಕಿಲ್ಲ. ಜನ್ಮತಃ ಎಲ್ಲವನ್ನೂ ಸುಲಭವಾಗಿ ದಕ್ಕಿಸಿಕೊಂಡು ಅನಭಿಷಿಕ್ತ ರಾಜನಾಗಿ ಮೆರೆಯುವ ಪುರುಷನ ದಮನಕಾರೀ ಶೋಷಣೆಯನ್ನು ಮೆಟ್ಟಿ ನಿಂತು ಮನುಷ್ಯಳಾಗಿ ತನ್ನ ಸ್ಥಾನವನ್ನು ಮಹಿಳೆ ಹೋರಾಟದ ಮೂಲಕ ಮಾತ್ರ ಪಡೆಯಲು ಸಾಧ್ಯವಾಗಿದೆ. ಬೆಂಕಿಯ ಕೆನ್ನಾಲಿಗೆಗಳ ಮೇಲೆ ಆಕೆ ಪಾದವನ್ನೂರಿ ನಿರ್ಮಿಸಿರುವ ಹೋರಾಟದ ಇತಿಹಾಸವು ಆಕೆಯ ನೆತ್ತರಿನಿಂದ ತೋಯ್ದಿದೆ.

ಬ್ರಿಟಿಷ್ ಇಂಡಿಯಾದ ಗವರ್ನರ್ ಜನರಲ್ ಅವರ ಕೌನ್ಸಿಲ್‍ನ ಕಾನೂನು ವಿಭಾಗದ ಪ್ರಥಮ ಸದಸ್ಯನಾದ ಲಾರ್ಡ್ ಮೆಕಾಲೆಯು 1835 ರಲ್ಲಿ ರೂಪಿಸಿದ ಇಂಗ್ಲೀಷ್ ಶಿಕ್ಷಣವನ್ನು ಜಾರಿಗೆ ತರುವ ಪದ್ಧತಿಯು ಭಾರತದ ವಿದ್ಯಾವಂತ ಜನರಿಗೆ ಹೊಸ ಚಿಂತನೆಯ ಹಾದಿಯನ್ನು ತೆರೆಯಿತು. ಸಮಾಜ ಸುಧಾರಣೆ ಮತ್ತು ಮಾನವತಾವಾದದ ಕನಸನ್ನು ಕಂಡ ಹೊಸ ಉತ್ಸಾಹೀ ಯುವ ಪೀಳಿಗೆಯೊಂದು ಭಾರತದಲ್ಲಿ ಮೂಡಿ ಬಂದಿತು. ಭಾರತೀಯ ಯುವ ಸಮೂಹಕ್ಕೆ ದೊರಕಿದ ವಿದ್ಯಾಭ್ಯಾಸವು ಅವರಿಗೆ ವಿಭಿನ್ನ ಚಿಂತನೆಯ ನೆಲೆಗಳನ್ನು ಒದಗಿಸಿತು. ಹೀಗಾಗಿ, ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆಯ ಅಲೆಯೊಂದು ಮೂಡಿ ಬಂದಿತು. ಬಾಲ್ಯವಿವಾಹ ಮತ್ತು ಬಹುಪತ್ನಿತ್ವದ ಪದ್ಧತಿಯ ವಿರೋಧ ಸಮಾಜದಲ್ಲಿ ಕಂಡುಬಂದಿತು. 1813ರವರೆಗೂ ಬ್ರಿಟಿಷ್ ಸರ್ಕಾರವು ಭಾರತೀಯರ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕಿನಲ್ಲಿ ಹಸ್ತಕ್ಷೇಪ ಮಾಡದೆ ತಟಸ್ಥ ನೀತಿಯನ್ನು ಅನುಸರಿಸುತ್ತಿತ್ತು. ಬ್ರಿಟಿಷ್ ಸರ್ಕಾರವು ಭಾರತೀಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕಿನಲ್ಲಿ ಭಾಗವಹಿಸದಂತೆ ಎಷ್ಟೇ ಎಚ್ಚರಿಕೆಯನ್ನು ವಹಿಸಿದರೂ ಕೂಡಾ ಅನಿವಾರ್ಯವಾದ ಕಾನೂನು ಹೋರಾಟದ ಸಂದರ್ಭದಲ್ಲಿ, ಕಾನೂನಾತ್ಮಕ ನಿಲುವನ್ನು ಹೊಂದಬೇಕಾದುದು ಸರ್ಕಾರಕ್ಕೆ ಅಗತ್ಯವಾಯಿತು.

1860 ರಲ್ಲಿ ಮೆಕಾಲೆ ರೂಪಿಸಿದ ದಂಡ ಸಂಹಿತೆ ಜಾರಿಯಾಯಿತು. ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಅಂದಿನ ಶಾಸಕರು ಮತ್ತು ಸುಧಾರಣಾವಾದಿಗಳು ಮಹಿಳೆಯರ ವಿವಾಹದ ವಯಸ್ಸನ್ನು  ಹೆಚ್ಚಿಸಬೇಕೆಂಬ ಮನಃಸ್ಥಿತಿಯನ್ನು ಹೊಂದಿದ್ದು, ಆ ಬಗ್ಗೆ ಶ್ರಮಿಸುತ್ತಿದ್ದರು. ವಿವಾಹದ ಸಲುವಾಗಿ ಬಾಲಕಿಯರ ಸಮ್ಮತಿಯ ವಯಸಿನ ಬಗ್ಗೆ ಸಾರ್ವಜನಿಕ ಚರ್ಚೆಗಳು ಅತ್ಯಂತ ಉದ್ವೇಗದಿಂದ ನಡೆಯುತ್ತಿದವು. ವಿಭಿನ್ನ ನಿಲುವುಗಳು ಚಾಲ್ತಿಯಲ್ಲಿ ಇದ್ದಾಗಲೇ 1889ರಲ್ಲಿ ಫೂಲ್‍ಮೋನಿದಾಸಿ ಎಂಬ ಬಂಗಾಳಿ ಬಾಲಕಿಯ ದಯನೀಯ ಪ್ರಕರಣವೊಂದು ದಾಖಲಾಯಿತು. ಎಂಪ್ರೆಸ್ ವರ್ಸಸ್ ಹರಿಮೋಹನ್ ಮೈತಿ ಎಂಬ ಪ್ರಕರಣವು ಭಾರತಿಯ ಕಾನೂನು ಚರಿತ್ರೆಯಲ್ಲಿ ದಾಖಲಾದ ಅತ್ಯಂತ ಹೃದಯ ವಿದ್ರಾವಕವಾದ ಘಟನೆಯಾಗಿದೆ.

ಹನ್ನೊಂದು ವರ್ಷದ ಆ ಬಾಲಕಿಯನ್ನು 38 ವರ್ಷ ವಯಸ್ಸಿನ ಹರಿಮೋಹನ ಮೈತಿಯೊಂದಿಗೆ ಮದುವೆ ಮಾಡಲಾಗಿತ್ತು. ಆ ದಿನ ಅವನು ಅತ್ತೆಯ ಮನೆಗೆ ಹೋಗಿದ್ದ. ಅಪರೂಪದ ಅಳಿಯನೆಂದು ಭಾವಿಸಿದ ಫೂಲ್‍ಮೋನಿದಾಸಿಯ ತಾಯಿಯಾದ ರಾಧಮೋನಿದಾಸಿಯು ಅವನ ಆತಿಥ್ಯದ ವ್ಯವಸ್ಥೆ ಮಾಡಲು ಮನೆಯಿಂದ ಹೊರಗಡೆ ಹೋಗಿದ್ದಳು. ಫೂಲ್‍ಮೋನಿದಾಸಿಯು ತನ್ನ ಕೋಣೆಯಲ್ಲಿ ಮಂಚದ ಮೇಲೆ ಮಲಗಿದ್ದಳು. ಇನ್ನೂ ಪುಷ್ಟವತಿಯಾಗದ ಆ ಬಾಲಕಿಯನ್ನು ಕಂಡು ಕಾಮೋತ್ತೇಜಿತನಾದ ಹರಿಮೋಹನ ಮೈತಿಯು ಆಕೆಯ ಮೇಲೆ ಎರಗಿದ. ಆಕೆ ತನ್ನ ಪತ್ನಿ ಎಂಬ ಹಕ್ಕಿನಿಂದ ಆಕೆಯ ಮೇಲೆ ಆಕ್ರಮಣ ಮಾಡಿ ಅತ್ಯಾಚಾರವನ್ನು ಎಸಗಿದ. ರಾಧಮೋನಿ ದಾಸಿ ಮನೆಗೆ ಮರಳಿದಾಗ ಮಗಳು ಫೂಲ್ ಮೋನಿದಾಸಿಯು ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ತಾಯಿಯನ್ನು ಕಂಡು ಅವಳು ಅಸ್ಪಷ್ಟ ದನಿಯಲ್ಲಿ ಕುಡಿಯಲು ನೀರನ್ನು ಬೇಡಿದಳು. ಒಂದೆರಡು ಗುಟುಕು ನೀರು ಅವಳ ಗಂಟಲಲ್ಲಿ ಇಳಿಯುತ್ತಿದ್ದಂತೆಯೇ ಅವಳು ತಾಯಿಯ ತೆಕ್ಕೆಯಲ್ಲಿಯೇ ಪ್ರಾಣ ಬಿಟ್ಟಳು.

ಹರಿಮೋಹನ ಮೈತಿಯ ಮೇಲೆ ಅತ್ಯಾಚಾರ ಮತ್ತು ಕೊಲೆಯ ಪ್ರಕರಣಗಳು ದಾಖಲಾದವು. ಕೊಲ್ಕತ್ತದ ಸೆಷನ್ಸ್ ನ್ಯಾಯಾಲಯದಲ್ಲಿ ನಡೆದ ಸದರಿ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಆಕೆಯ ತಾಯಿಯೇ ಸಾಕ್ಷಿ ನುಡಿದು ಆರೋಪಿಗೆ ಶಿಕ್ಷೆಯಾಗುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದಳು. ಪೋಸ್ಟ್ ಮಾರ್ಟಮ್ ವರದಿಯಲ್ಲಿ ಆ ಬಾಲಿಕೆಯು ಪುಷ್ಪವತಿಯಾಗಿರಲಿಲ್ಲ ಮತ್ತು ಲೈಂಗಿಕ ಕ್ರಿಯೆಗೆ ಸಹಕರಿಸುವಂತಹ ದೈಹಿಕ ಪ್ರಕೃತಿಯ ಸಿದ್ಧತೆಯನ್ನು ಆಕೆ ಹೊಂದಿರಲಿಲ್ಲ ಎಂದು ದಾಖಲಾಯಿತು. ಆಕೆಯ ಗರ್ಭಕೋಶವು ಛಿದ್ರಗೊಂಡಿದ್ದು ಆ ಗಾಯಗಳಿಂದ ಉಂಟಾದ ತೀವ್ರ ರಕ್ತಸ್ರಾವದಿಂದ ಆಕೆ ಮರಣ ಹೊಂದಿದಳು ಎಂದು ವೈದ್ಯಕಿಯ ಸಾಕ್ಷ್ಯ ದಾಖಲಾಯಿತು. ಆತನ ಲೈಂಗಿಕ ಕೃತ್ಯದ ದೆಸೆಯಿಂದ ಉಂಟಾದ ರಕ್ತಸ್ರಾವದಿಂದ ಆಕೆ ಮರಣ ಹೊಂದಿದಳೆಂದು ನ್ಯಾಯಾಲಯಕ್ಕೆ ಮನವರಿಕೆಯಾದರೂ ಕೂಡಾ ಆಕೆ ಸಮ್ಮತಿಯ ವಯಸ್ಸಸನ್ನು ತಲುಪಿದ್ದು ಆತನ ವಿವಾಹಿತ ಪತ್ನಿಯಾಗಿದ್ದರಿಂದ ಅತ್ಯಾಚಾರದ ಪ್ರಕರಣದಿಂದ ಆತ ಬಿಡುಗಡೆ ಹೊಂದಿದ. ಆದರೆ ಅಜಾಗರೂಕತೆ ಮತ್ತು ನಿರ್ಲಕ್ಯದ ಕೃತ್ಯದ ಮೂಲಕ ನರಹತ್ಯೆಯನ್ನು ಮಾಡಿದ ಪ್ರಕರಣದಲ್ಲಿ ಅವನಿಗೆ ಸಜೆಯಾಯಿತು. ಭಾರತೀಯ ದಂಡ ಸಂಹಿತೆಯ ಕಲಮು 338ರ ರೀತ್ಯಾ ಇತರೆಯವರ ವೈಯಕ್ತಿಕ ಸುರಕ್ಷತೆ ಅಥವಾ ಜೀವಕ್ಕೆ ತೀವ್ರ ಸ್ವರೂಪದ ಗಾಯವನ್ನುಂಟು ಮಾಡುವ ಕೃತ್ಯಕ್ಕೆ ಆತನಿಗೆ ಸಜೆಯಾಯಿತು.

ಫೂಲ್ ಮೋನಿ ದಾಸಿಯ ದೇಹವು ಆಕೆಯ ಕೋಣೆಯ ಮಂಚದಿಂದ, ಮರಣೋತ್ತರ ಪರೀಕ್ಷೆ ಟೇಬಲ್‍ನಿಂದ ನ್ಯಾಯಾಲಯದ ಕಟಕಟೆಯನ್ನು ಏರಿ ನಂತರ ಸಾರ್ವಜನಿಕ ಚರ್ಚೆಗೆ ಗ್ರಾಸವಾಯಿತು. ಸಾಂಸ್ಕೃತಿಕ ಅಪರಾಧ ಮತ್ತು ಸಾಮಾಜಿಕ ಹೊಣೆಗಾರಿಕೆ ಹಾಗೂ ಮಹಿಳೆಯರ ವಿವಾಹ ಮತ್ತು ಸಮ್ಮತಿಯ ವಯಸ್ಸಿನ ಬಗ್ಗೆ ನಿರಂತರವಾದ ಚರ್ಚೆಗಳು ನಡೆದವು. ಫೂಲ್ ಮೋನಿದಾಸಿಯ ಬಗ್ಗೆ ಅನುಕಂಪವಿದ್ದುದರಿಂದ ಮತ್ತು ಸಾಮಾಜಿಕವಾಗಿ ಅವಹೇಳನಕ್ಕೆ ಗುರಿಯಾಗುವ ಭಯವಿದ್ದುದರಿಂದ ಹರಿಮೋಹನ್ ಮೈತಿಗೆ ಸಾರ್ವಜನಿಕ ಬೆಂಬಲವು ಬಹಿರಂಗವಾಗಿ ಸಿಗಲಿಲ್ಲ. ಆದರೆ, ಆ ಸಂದರ್ಭದ ಎರಡು ಗಮನಸೆಳೆಯುವ ಪ್ರಕರಣಗಳಾದ ಫೂಲ್ ಮೋನಿದಾಸಿ ಮತ್ತು ರಖುಮಾಬಾಯಿ ಪ್ರಕರಣಗಳ ಹಿನ್ನೆಲೆಯಿಂದ ಪ್ರೇರಣೆಯನ್ನು ಹೊಂದಿದ ಬ್ರಿಟಿಷ್ ವಸಾಹತುಶಾಹಿ ಸರ್ಕಾರವು 1891 ನೆಯ ಇಸವಿಯಲ್ಲಿ ಸಮ್ಮತಿಯ ವಯಸ್ಸಿನ ಬಗ್ಗೆ ಶಾಸನವೊಂದನ್ನು ರೂಪಿಸಿತು.

1891ರ ಸಮ್ಮತಿಯ ವಯಸ್ಸಿನ ಕಾಯಿದೆಯು 1891ರ ಮಾರ್ಚ್ 19 ರಂದು ಶಾಸನವಾಗಿ ರೂಪಗೊಂಡಿತು ಆ ಮೇರೆಗೆ ಲೈಂಗಿಕ ಕ್ರಿಯೆಯ ಬಗ್ಗೆ ಸಮ್ಮತಿಯನ್ನು ನೀಡುವ ವಿವಾಹಿತ ಅಥವಾ ಅವಿವಾಹಿತ ಮಹಿಳೆಯರ ವಯಸನ್ನು 10 ವರ್ಷದ ವಯೋಮಾನದಿಂದ 12 ವರ್ಷದ ವಯೋಮಾನದ ವರೆಗೆ ಹೆಚ್ಚಿಸಲಾಯಿತು. ಸದರಿ ಕಾನೂನಿನ ಉಲ್ಲಂಘನೆಯು ಅತ್ಯಾಚಾರವೆಂದು ಪರಿಗಣಿಸಿ ಅದನ್ನು ಕ್ರಿಮಿನಲ್ ಸ್ವರೂಪದ ಶಿಕ್ಷಾರ್ಹ ಅಪರಾಧವೆಂದು ಸದರಿ ಕಾನೂನು ಘೋಷಿಸಿತು. ಮೇಲ್ಕಂಡ ಕಾನೂನನ್ನು ಕೊಲ್ಕತದಲ್ಲಿ ಭಾರತಿಯ ಗವರ್ನರ್ ಜನರಲ್‍ನ ಶಾಸಕಾಂಗ ಸಭೆಯಲ್ಲಿ ಮಂಡಿಸಲಾಯಿತು. ಆ ದಿನದ ಚರ್ಚೆಯಲ್ಲಿ ಸದರಿ ಕಾನೂನನ್ನು ವಿರೋಧಿಸಿದ ಶಾಸಕಾಂಗ ಸಭೆಯ ಬಂಗಾಳದ ಸದಸ್ಯರಾದ ಸರ್ ರೊಮೇಶ್ ಚಂದರ್ ಮಿತ್ತಲ್ ಅವರು ಸನಾತನ ಹಿಂದೂ ಧರ್ಮದ ನಂಬಿಕೆಗಳಲ್ಲಿ ಸದರಿ ಕಾನೂನು ಹಸ್ತಕ್ಷೇಪ ನಡೆಸುವುದೆಂದು ಆಕ್ಷೇಪಣೆ ಮಾಡಿದರು. ಆದರೆ ಬಾಂಬೆ ಪ್ರಾಂತ್ಯದ ಸದಸ್ಯರಾದ ರಾವ್ ಬಹಾದೂರ್ ಕ್ರಿಷನ್‍ಜೀ ಲಕ್ಷ್ಮಣ್ ನೋಲಕರ್ ಅವರು ಸದರಿ ಕಾನೂನನ್ನು ಬೆಂಬಲಿಸಿದರು. ಹಾಗೂ ಸದರಿ ಸಭೆಯ ಅಧ್ಯಕ್ಷ ಮತ್ತು ಗವರ್ನರ್ ಜನರಲ್ ಹಾಗೂ ವೈಸರಾಯ್ ಲಾರ್ಡ್ ಲ್ಯಾನ್ಸ್‍ಡೌನ್ ಕೂಡ ಅದನ್ನು ಬೆಂಬಲಿಸಿದರು.

ಹೀಗಾಗಿ ಧರ್ಮ ಮತ್ತು ರಾಷ್ಟ್ರದ ಶ್ರೇಷ್ಠತೆಯನ್ನು ಎತ್ತಿಹಿಡಿದ ರಾಷ್ಟ್ರೀಯವಾದಿಗಳು ಪರಕೀಯ ಸರ್ಕಾರವು ಹಿಂದೂ ವಿವಾಹದ ಬಗ್ಗೆ ಶಾಸನವನ್ನು ರೂಪಿಸುವ ಪ್ರಕ್ರಿಯೆಯನ್ನು ಕಟುವಾಗಿ ಟಿಕಿಸಿದರು. ಆಗ ಅವರು ನೀಡಿದ ಕಾರಣವೆಂದರೆ ಹಿಂದೂ ಪತಿಯು ತನ್ನ ಪತ್ನಿಯು ಮೈನೆರೆದ ಇಂತಿಷ್ಟು ದಿನಗಳೊಳಗಾಗಿ ತನ್ನ ಪತ್ನಿಯೊಡನೆ ಲೈಂಗಿಕ ಕ್ರಿಯೆಯನ್ನು ನಡೆಸಿ ಗರ್ಭದಾನವನ್ನು ಮಾಡಿ ಗರ್ಭದ ಮತ್ತು ಮುಂದೆ ಹುಟ್ಟುವ ಮಗುವಿನ ಪಾವಿತ್ರ್ಯ ರಕ್ಷಣೆ ಮಾಡಬೇಕಾದುದು ಧರ್ಮ. ಹೀಗಾಗಿ ಸಮ್ಮತಿಯ ವಯಸನ್ನು 10 ರಿಂದ 12 ವರ್ಷಕ್ಕೆ ಏರಿಸುವುದು ತಮ್ಮ ಧರ್ಮದಲ್ಲಿ ಹಸ್ತಕ್ಷೇಪ ಎಂದು ವಾದಿಸಿದರು. ಆದರೆ ಈ ಎರಡು ಪ್ರಕರಣಗಳ ದೆಸೆಯಿಂದ ಮಹಿಳೆಯರ ಬಗ್ಗೆ ಅನೇಕ ಕಾನೂನು ಸುಧಾರಣೆಗಳು ರೂಪುಗೊಂಡವು.

ಮೇಲ್ಕಂಡ ಮಸೂದೆಯನ್ನು ಅನೇಕ ಹಿಂದೂ ಸನಾತನ ಮುಖಂಡರು ವಿರೋಧಿಸಿ ಹಿಂದೂ ಧರ್ಮದಲ್ಲಿ ಬ್ರಿಟಿಷರು ನಡೆಸುತ್ತಿರುವ ಅನಗತ್ಯ ಹಸ್ತಕ್ಷೇಪವನ್ನು ಖಂಡಿಸಿದರು. ಬಾಲಗಂಗಾಧರ ತಿಲಕರು ಕೂಡ ಸಮ್ಮತಿಯ ವಯಸ್ಸಿನ ಸಿದ್ಧಾಂತವನ್ನು ತಿರಸ್ಕರಿಸಿದರು. “ಸರ್ಕಾರವು ನಮ್ಮ ಸಾಮಾಜಿಕ ಆಚರಣೆಗಳನ್ನಾಗಲೀ ಅಥವಾ ಜೀವನ ಶೈಲಿಯನ್ನಾಗಲೀ ನಿಯಂತ್ರಿಸುವ ಕ್ರಮವನ್ನು ನಾವು ಒಪ್ಪುವುದಿಲ್ಲ, ಸರ್ಕಾರದ ಈ ಕ್ರಮವು ಒಂದು ವೇಳೆ ಅತ್ಯಂತ ಉಪಯುಕ್ತ ಮತ್ತು ಸಮಯೋಚಿತ ಕ್ರಮಗಳಿಂದ ಕೂಡಿದ್ದರೂ ಕೂಡ ಅದನ್ನು ಬಲವಾಗಿ ವಿರೋಧಿಸುತ್ತೇನೆ” ಎಂಬುದು ತಿಲಕ್ ಅವರ ನಿಲುವಾಗಿತ್ತು. ರಾಷ್ಟ್ರೀಯ ವಾದವನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸುತ್ತಿದ್ದ ವಸಾಹತುಶಾಹಿ ವಿರೋಧಿ ನಿಲುವಿನ ಹಿಂದೂ ಮುಖಂಡರು ಆ ಮಸೂದೆಯನ್ನು ಜಾರಿಗೊಳಿಸಲು ಅವಕಾಶ ನೀಡದೆ ತೀವ್ರವಾಗಿ ವಿರೋಧಿಸಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

ಭಾರತೀಯ ಮಹಿಳೆಯ ಆವರಣ ಅತ್ಯಂತ ಕಿರಿದಾಗಿತ್ತು. ಆಕೆ ಮೌನವಾಗಿ ಪುರುಷ ಪ್ರಾಧಾನ್ಯದ ಆದೇಶಗಳನ್ನು ಅವಿಮರ್ಶಿತವಾಗಿ ಪರಿಪಾಲಿಸಬೇಕೆಂಬುದು ಸಮಾಜದ ನಿರೀಕ್ಷೆಯಾಗಿತ್ತು. ರಖುಮಾಬಾಯಿ ಎಂಬ 11 ವರ್ಷದ ಎಳೆಯ ಬಾಲೆಯನ್ನು ಅಂದವಾಗಿ ಸಿಂಗರಿಸುತ್ತಿದ್ದರು. ಆ ದಿನ ಆಕೆಯ ಮದುವೆಯು ನಡೆಯುತ್ತಿತ್ತು. ಆಕೆಯ ತಾಯಿಯು ಕೂಡಾ ಆಗಾಗ್ಯೆ ಬಂದು ಮಗಳ ಚೆಲುವನ್ನು ಮತ್ತು ಸಿಂಗಾರವನ್ನು ಕಂಡು ಸಂತಸಪಟ್ಟು ಮಗಳ ಬಾಳು ನೆಮ್ಮದಿಯಿಂದ ಕೂಡಿರಬೇಕೆಂದು ಆಂತರ್ಯದಲ್ಲಿ ಪ್ರಾರ್ಥಿಸುತ್ತ ತನ್ನ ದೃಷ್ಟಿ ಆಕೆಯ ಮೇಲೆ ಬೀಳದಂತೆ ಎಚ್ಚರವಹಿಸಿ ತನ್ನ ಸೆರಗಿನಲ್ಲಿ ಕಣ್ಣೀರನ್ನು ಇಂಗಿಸುತ್ತಿದ್ದಳು. ಅವಳ ಬಾಳಿನಲ್ಲಿ ಕೂಡ ಅನೇಕ ದುರಂತಗಳು ಜರುಗಿದ್ದವು. ಅವಳ ಮದುವೆಯು ಜನಾರ್ದನ ಪಾಂಡುರಂಗನೊಂದಿಗೆ ನಡೆದಾಗ ಅವಳಾಗಲೇ 14 ವರ್ಷ ವಯೋಮಾನವನ್ನು ತಲುಪಿದ್ದಳು. ಐದಾರು ವರ್ಷದ ವಯೋಮಾನದ ಮಕ್ಕಳ ಮದುವೆ ನಡೆಯುತ್ತಿದ್ದ ಆ ಕಾಲದಲ್ಲಿ 14 ವರ್ಷದ ಜಯಂತಿ ಬಾಯಿಯನ್ನು ಯಾರೂ ಕೂಡ ಮದುವೆ ಮಾಡಿಕೊಂಡಿರಲಿಲ್ಲ ಎನ್ನುವುದು ಅತ್ಯಂತ ಅಪಮಾನಕಾರಿ ವಿಷಯವಾಗಿತ್ತು. ಅಂತೂ ಮದುವೆಯಾಗಿ ಆಕೆಗೆ ಇನ್ನೂ 15 ವರ್ಷ ತುಂಬುವುದಕ್ಕೆ ಮೊದಲೇ ಆಕೆ ರಖುಮಾಬಾಯಿಗೆ ಜನ್ಮವಿತ್ತಿದ್ದಳು. ಜಯಂತಿಬಾಯಿ 17 ವರ್ಷ ವಯಸ್ಸನ್ನು ತಲುಪಿದಾಗ ಅವಳ ಪತಿ ಮರಣ ಹೊಂದಿದ್ದ. ಎಳೆಯ ಕೂಸು ರಖುಮಾಬಾಯಿಯನ್ನು ಎದೆಗವಚಿಕೊಂಡು ಆಕೆ ಕಂಗಾಲಾಗಿದ್ದಾಗ 23ನೇ ವಯಸ್ಸಿನಲ್ಲಿ ಆಕೆಯ ಮರು ಮದುವೆಯಾಯಿತು. ಅಸಿಸ್ಟೆಂಟ್ ಸರ್ಜನ್ ಸಖಾರಾಮ್ ಅರ್ಜುನ ತನ್ನ ಸಭ್ಯ ನಡವಳಿಕೆ ಮತ್ತು ಉತ್ತಮ ಗುಣಗಳಿಂದ ತಾಯಿ ಮಗಳಿಬ್ಬರಿಗೂ ಪ್ರಿಯವಾದ. ತಾನೇ ನಿಂತು ಮಲಮಗಳಾದ ರಖುಮಾ ಬಾಯಿಯ ಮದುವೆಯನ್ನು ವಿಜೃಂಭಣೆಯಿಂದ ಮಾಡಿದ. ತನ್ನ ದೂರದ ಸಂಬಂಧಿಯಾಗಿದ್ದ ಮತ್ತು ವಿಧವೆ ತಾಯಿಯೊಡನೆ ವಾಸವಾಗಿದ್ದ ಬಡವನಾಗಿದ್ದರೂ ಯೋಗ್ಯನೆಂದು ತಾನು ಭಾವಿಸಿದ್ದ ದಾದಾಜೀ ಭಿಕಾಜೀಯನ್ನು ತನ್ನ ಅಳಿಯನನ್ನಾಗಿ ಮಾಡಿಕೊಂಡ ಸಂತೃಪ್ತಿ ಅವನಲ್ಲಿತ್ತು. ಅಳಿಯನ ಆರ್ಥಿಕ ಮಟ್ಟವನ್ನು ಸುಧಾರಿಸುವ ದೃಷ್ಟಿಯಿಂದ ಜಯಂತಿಬಾಯಿ ತನ್ನ ಗತಿಸಿದ ಪತಿಯಾದ ಜನಾರ್ದನ ಪಾಡುರಂಗನ ಸಂಪೂರ್ಣ ಆಸ್ತಿಯನ್ನು ಮಗಳಾದ ರಖುಮಾಬಾಯಿಯ ಹೆಸರಿಗೆ ವರ್ಗಾವಣೆ ಮಾಡಿದಳು. ಈ ಐತಿಹಾಸಿಕ ಮದುವೆಯು 1876ರಲ್ಲಿ ನಡೆಯಿತು. ಮದುವೆಯಾದ ನಂತರ ಆಕೆ ತನ್ನ ತವರು ಮನೆಯಲ್ಲಿಯೇ ಉಳಿದಳು. ದಾದಾಜೀ ಭಿಕಾಜಿ ತನ್ನ ತಾಯಿಯೊಡನೆ ಮರಳಿದ.

ತವರು ಮನೆಯಲ್ಲಿ ರಖುಮಾಬಾಯಿಗೆ ಉತ್ತಮ ಶಿಕ್ಷಣ ದೊರಕಿತು. ಆಕೆ ವಿದ್ಯಾಭ್ಯಾಸದಲ್ಲಿ ಪ್ರಗತಿಯನ್ನು ಸಾಧಿಸುವುದರ ಜೊತೆಯಲ್ಲಿ ಅರಿವಿನ ಪ್ರಜ್ಞೆಯನ್ನು ಹೊಂದುತ್ತಾ ಮುನ್ನಡೆದಳು. ಭಿಕಾಜೀಯ ತಾಯಿ ಮರಣ ಹೊಂದಿದ್ದರಿಂದ ಅವನು ತನ್ನ ಸೋದರಮಾವನ ಆಶ್ರಯವನ್ನು ಪಡೆದ. ಆ ಸೋದರ ಮಾವನ ಅನೀತಿಯುತ ಜೀವನ ಭಿಕಾಜಿಯ ಭವಿ ಷ್ಯತ್ತಿಗೆ ಮಾರಕವಾಯಿತು. ಅವನು ವಿದ್ಯಾರ್ಜನೆಯಲ್ಲಿ ಹಿಂದುಳಿದು ಕೂಲಿ ನಾಲಿ ಮಾಡತೊಡಗಿದ ಆಗ ತನಗೊಬ್ಬ ಸಿರಿವಂತ ಪತ್ನಿ ಇದ್ದಾಳೆ ಎಂಬ ಪ್ರಜ್ಞೆ ಮೂಡಿ ಅವಳು ತನ್ನೊಡನೆ ಬಂದು ದಾಂಪತ್ಯ ಜೀವನವನ್ನು ನಡೆಸುವಂತೆ ಆಗ್ರಹಿಸತೊಡಗಿದ, ರಖುಮಾಬಾಯಿ ಆತನೊಡನೆ ದಾಂಪತ್ಯ ಜೀವನ ನಡೆಸಲು ನಿರಾಕರಿಸಿದಳು. ತಮ್ಮ ಮದುವೆಯಾದಾಗ ತನಗೆ 11 ವರ್ಷ ವಯಸ್ಸಾಗಿತ್ತು. ಸದರಿ ಮದುವೆಯು ತನ್ನ ಸಮ್ಮತಿಯಿಂದ ನಡೆದಿಲ್ಲವೆಂತಲೂ, ಮತ್ತು ಮೇಲ್ಕಂಡ ಮದುವೆಯ ಬಾಂಧವ್ಯದಿಂದ ತಾವಿಬ್ಬರೂ ಇದುವರೆಗೆ ದಾಂಪತ್ಯ ಜೀವನ ನಡೆಸದೆ ಇರುವುದರಿಂದ ಆತನೊಡನೆ ದಾಂಪತ್ಯ ಜೀವನವನ್ನು ನಡೆಸಲು ಬಾಧ್ಯಳಲ್ಲವೆಂದೂ ಬ್ರಿಟಿಷ್ ಕಾನೂನಿನ ಆಶ್ರಯವನ್ನು ಪಡೆದಳು.

ಇದರಿಂದ ಸಿಟ್ಟಿಗೆದ್ದ ಭಿಕಾಜಿಯು ಹಿಂದೂ ಕಾನೂನಿನ ರೀತ್ಯಾ ಆಕೆ ತನ್ನ ಪತ್ನಿ ಆದ್ದರಿಂದ ಆಕೆಯು ಪತ್ನಿಯಾಗಿ ತನ್ನ ಕರ್ತವ್ಯ ನಿರ್ವಹಣೆಯನ್ನು ಮಾಡುವ ಸಲುವಾಗಿ ದಾಂಪತ್ಯ ಹಕ್ಕುಗಳ ಪುನಃ ಸ್ವಾಧೀನವನ್ನು ಕೋರಿ ಬಾಂಬೆ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಿದ. ರಖುಮಾಬಾಯಿ ಅದರ ವಿರುದ್ಧ ಕಾನೂನು ಹೋರಾಟವನ್ನು ತನ್ನದಾಗಿಸಿಕೊಂಡಳು. ಅಂದು ಪ್ರಚಲಿತವಿದ್ದ ಕಾನೂನುಗಳ ರೀತ್ಯಾ ಆಕೆಯ ಎದುರು ಎರಡು ಸಾಧ್ಯತೆಗಳಿದ್ದವು. ಮೊದಲನೆಯದಾಗಿ ಆಕೆ ನ್ಯಾಯಾಲಯದ ಆದೇಶವನ್ನು ಮನ್ನಿಸಿ ಭಿಕಾಜಿಯ ಮನೆಗೆ ಹೋಗಿ ಆತನೊಡನೆ ದಾಂಪತ್ಯ ಜೀವನವನ್ನು ನಡೆಸುವುದು. ಎರಡನೆಯದಾಗಿ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ ಅಪರಾಧಕ್ಕಾಗಿ ಎರಡು ವರ್ಷಗಳ ಜೈಲು ವಾಸದ ಶಿಕ್ಷೆಯನ್ನು ಅನುಭವಿಸುವುದು.

ಈ ಮೊಕದ್ದಮೆ ಅವರಿಬ್ಬರ ವೈಯಕ್ತಿಕ ವಿಷಯವಾಗಿ ಉಳಿಯಲಿಲ್ಲ ಬದಲಿಗೆ ಸಾಮಾಜಿಕ ಚರ್ಚೆಗೆ ಗ್ರಾಸವಾಯಿತು, ಮತ್ತು ಸಮಾಜದ ಮೇಲೆ ದೂರಗಾಮಿ ಪರಿಣಾಮವನ್ನು ಬೀರುವ ಪ್ರಕರಣವಾಗಿ ಪರಿಣಮಿಸಿತು. ಪತ್ನಿಯ ಮೇಲೆ ಪತಿಗೆ ಪರಮಾಧಿಕಾರವನ್ನು ನೀಡಿದ್ದು ಆತ ಹಕ್ಕು ಸಾಧನೆ ಮಾಡಲು ಅರ್ಹನಾಗಿದ್ದ. ಸಂಪ್ರದಾಯಬದ್ಧ ಆಲೋಚನೆಯ ಜನರು ಸಮೂಹ ಸನ್ನಿಗೆ ಒಳಗಾದಂತೆ ವರ್ತಿಸತೊಡಗಿದರು. ಪತಿಯು ಕೆಲಸಕ್ಕೆ ಬಾರದವನಾದರೆ ಏನಾಯಿತು ಪತ್ನಿಯು ಅವನನ್ನು ಅವಿಮರ್ಶಿತವಾಗಿ ಅನುಸರಿಸಬೇಕು ಎಂದು ಠರಾವನ್ನು ಮಂಡಿಸಿದರು. ಹಾಗೂ ಅವನ ನ್ಯಾಯಾಲಯದ ವೆಚ್ಚದ ಸಲುವಾಗಿ ಅಪಾರವಾದ ದೇಣಿಗೆಯನ್ನು ಸಂಗ್ರಹಿಸಿದರು. ಈ ಪ್ರಕರಣವು ಮೊದಲು ಪಿನ್ಹೆ ಎಂಬ ನ್ಯಾಯಾಧೀಶರ ಸಮ್ಮುಖದಲ್ಲಿ ವಿಚಾರಣೆ ನಡೆಯಿತು. ಆತನು ಬ್ರಿಟಿಷ್ ಕಾನೂನನ್ನು ಮತ್ತು ವಿವೇಕವನ್ನು ಅನ್ವಯ ಮಾಡಿ ಆಕೆಯ ಸಮ್ಮತಿಯಿಂದ ವಿವಾಹ ಆಗದೆ ಇದ್ದುದರಿಂದ ದಾಂಪತ್ಯ ಹಕ್ಕುಗಳ ಪುನಃ ಸ್ವಾಧೀನದ ಆದೇಶವನ್ನು ನೀಡದೆ ಪ್ರಕರಣವನ್ನು ವಜಾ ಮಾಡಿದ.

ಈ ತೀರ್ಪು ಇಡೀ ಹಿಂದೂ ಸಮಾಜದಲ್ಲಿ ಅಲ್ಲೋಲಕಲ್ಲೋಲವನ್ನು ಉಂಟುಮಾಡಿತು. ಆ ಸಮುದಾಯದ ಬಹುತೇಕ ಜನರು ಭಿಕಾಜಿಗೆ ಬೆಂಬಲವಾಗಿ ನಿಂತರು. ನೈತಿಕವಾಗಿ ಆತನಿಗೆ ಧೈರ್ಯ ಸ್ಥೈರ್ಯವನ್ನು ನೀಡಿದ್ದೂ ಅಲ್ಲದೇ ಆರ್ಥಿಕವಾಗಿ ನೆರವನ್ನು ಕೂಡ ಒದಗಿಸಿಕೊಟ್ಟರು. ‘ದುರದೃಷ್ಟ ಹೆಂಗಸು’ ಎಂದು ರಖುಮಾಬಾಯಿಯನ್ನು ನಿಂದಿಸಿದ್ದೂ ಅಲ್ಲದೇ ಆಕೆಗೆ ಬೆಂಬಲ ನೀಡಿದ ಆಕೆಯ ನಾಲ್ಕಾರು ಗೆಳತಿಯರನ್ನು ಕೂಡಾ ಉಗ್ರವಾಗಿ ಖಂಡಿಸಿದರು. ಅಷ್ಟೇ ಅಲ್ಲದೇ ಈ ತೀರ್ಪು ರಾಜಕೀಯವಾಗಿ ಬ್ರಿಟಿಷ್ ಸರ್ಕಾರದ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆ ನೇರಾನೇರ ಬಹಿರಂಗವಾಗಿ ಬೆದರಿಕೆಯನ್ನು ಒಡ್ಡಿದರು. ತಮ್ಮ ಧರ್ಮದ ಆಚರಣೆಯಲ್ಲಿ ಬ್ರಿಟಿಷ್ ಸರ್ಕಾರವು ಹಸ್ತಕ್ಷೇಪ ಮಾಡದಂತೆ ಎಚ್ಚರಿಸಿದರು ಹಾಗೂ ಮೇಲ್ಮನವಿಯನ್ನು ಸಲ್ಲಿಸಲು ಅಪಾರ ಮೊತ್ತದ ಹಣವನ್ನು ಸಂಗ್ರಹಿಸಿ ಭಿಕಾಜಿಗೆ ಬೆಂಬಲವಾಗಿ ನಿಂತರು. ಬಾಂಬೆ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರು ಸದರಿ ಮೊಕದ್ದಮೆಯನ್ನು ಪುನರ್ ಪರಿಶೀಲನೆ ಮಾಡಬೇಕೆಂದು ಕೆಳ ನ್ಯಾಯಾಲಯಕ್ಕೆ ಕಳುಹಿಸಿದರು. ಕೆಳ ನ್ಯಾಯಾಲಯದಲ್ಲಿ ತೀರ್ಪು ಭಿಕಾಜಿಯ ಪರ ಆಯಿತು. ಪತಿಯೊಡನೆ ಹೋಗಿ ದಾಂಪತ್ಯವನ್ನು ನಡೆಸತಕ್ಕದ್ದು ಎಂದು ಹಿಂದಿನ ನ್ಯಾಯಾಧೀಶರಾಗಿದ್ದ ಪಿನ್ಹೆ ಆಕೆಗೆ ನಿರ್ದೇಶನವನ್ನು ನೀಡಿದನು.

ಈ ಬಗ್ಗೆ ಪಂಡಿತ ರಮಾಬಾಯಿ ತಮ್ಮ ಕೃತಿಯಾದ ‘ಮೇಲುಜಾತಿಯ ಹಿಂದೂ ಮಹಿಳೆ’ ಎಂಬ ತಮ್ಮ ಕೃತಿಯಲ್ಲಿ ಹೀಗೆಂದು ಬರೆಯುತ್ತಾರೆ: “ಬಾಂಬೆ ಉನ್ನತ ನ್ಯಾಯಾಲಯದ ಈ ತೀರ್ಮಾನದಿಂದ ನಮಗೇನೂ ಆಶ್ಚರ್ಯವಿಲ್ಲ, ಏಕೆಂದರೆ ಹಿಂದಿನ ಅನುಭವಗಳು ನಮಗೆ ಪಾಠ ಕಲಿಸಿವೆ. ಒಂದು ಆಶ್ಚರ್ಯದ ಸಂಗತಿ ಎಂದರೆ ಯಾವ ಬಗೆಯ ರಕ್ಷಣೆಯೂ ಇಲ್ಲದ ರಖುಮಾಬಾಯಿ ಪ್ರಬಲ ಹಿಂದೂ ಶಾಸ್ತ್ರ, ಮಹಾ ಬಲಶಾಲಿ ಬ್ರಿಟಿಷ್ ಸರ್ಕಾರ ಹಾಗೂ ಮೂವತ್ತಮೂರು ಕೋಟಿ ಹಿಂದೂ ದೇವತೆಗಳು ತನ್ನ ವಿರುದ್ಧ ನಡೆಸಿದ ಪಿತೂರಿಯನ್ನು ಎದುರಿಸಿ ನಿಂತು ಧೈರ್ಯವಾಗಿ ಅದನ್ನು ಪ್ರಶ್ನೆ ಮಾಡಿದ್ದು. ಸಂಪೂರ್ಣವಾಗಿ ಅವಳನ್ನು ಇಲ್ಲವಾಗಿಸುವುದೇ ಅವರ ಗುರಿಯಾಗಿತ್ತು. ಒಬ್ಬ ನಿಸ್ಸಹಾಯಕ ಹಿಂದೂ ಮಹಿಳೆಯ ರಕ್ಷಣೆಗೆ ಬಾರದಿದ್ದ ಬ್ರಿಟಿಷ್ ಸರ್ಕಾರವನ್ನು ನಾವು ನಿಂದಿಸುವಂತಿಲ್ಲ. ಏಕೆಂದರೆ ಅದು ಭಾರತದ ಗಂಡಸರೊಡನೆ ಮಾತ್ರ ಮಾಡಿಕೊಂಡ ಒಪ್ಪಂದವನ್ನು ಮಾನ್ಯ ಮಾಡಿದೆ!”

ನ್ಯಾಯಾಲಯದ ಆದೇಶವನ್ನು ಪಾಲಿಸಲು ನಿರಾಕರಿಸಿ ತನ್ನ ದೇಹದ ಮೇಲಿನ ಹಕ್ಕನ್ನು ಮತ್ತು ಆತ್ಮಗೌರವವನ್ನು ಕಾಪಾಡಿಕೊಂಡ ರಖುಮಾಬಾಯಿ ಜೈಲಿಗೆ ಹೋಗುವ ನಿರ್ಧಾರವನ್ನು ಕೈಗೊಂಡು ಬ್ರಿಟನ್ ರಾಣಿ ಮತ್ತು ಪ್ರಿವಿ ಕೌನ್ಸಿಲ್‍ಗೆ ತನ್ನ ಮೊಕದ್ದಮೆಯನ್ನು ಕೊಂಡೊಯ್ಯಲು ನಿರ್ಧರಿಸುತ್ತಾಳೆ. ಈ ನಡುವೆ ಈ ವಿಷಯವು ಸಮಕಾಲೀನ ಸಮಾಜದ ಸುಧಾರಣಾವಾದಿಗಳು ಮತ್ತು ಪುರುಷ ಪ್ರಾಧಾನ್ಯದ ಹರಿಕಾರರ ನಡುವೆ ಸಂಘರ್ಷದ ಕೇಂದ್ರ ಬಿಂದುವಾಗಿತ್ತು. ಹಾಗೂ ನ್ಯಾಯಾಲಯವು ಕೂಡ ತನ್ನ ನ್ಯಾಯಾಲಯದ ಆದೇಶವನ್ನು ತಾನೇ ಜಾರಿಗೊಳಿಸಲು ನಿರುತ್ಸಾಹವನ್ನು ತೋರಿತು. ಸುಧಾರಣಾವಾದಿ ಸಹೃದಯರ ಒಂದು ತಂಡವು ಮಧ್ಯಸ್ಥಿಕೆಯನ್ನು ವಹಿಸಿತು. ಹಾಗೂ ಭಿಕಾಜಿ ತನ್ನ ಪತ್ನಿಯಿಂದ ಪರಿಹಾರವನ್ನು ಪಡೆದು ಸದರಿ ಆದೇಶವನ್ನು ಜಾರಿಗೊಳಿಸದೆ ಇರಲು ಒಪ್ಪಿದ. ಮಾಹೆಯಾನ ಹತ್ತು ರೂಪಾಯಿಗಳ ಆದಾಯವನ್ನು ಪಡೆಯುತ್ತಿದ್ದ ದಾದಾಜೀ ಭಿಕಾಜಿ ತನ್ನ ಪತ್ನಿಯಿಂದ ಒಟ್ಟು ಎರಡು ಸಾವಿರ ರೂಪಾಯಿಗಳ ಬೃಹತ್ ಮೊತ್ತವನ್ನು ಪಡೆದು ಮೊಕದ್ದಮೆಯಿಂದ ಹಿಂದೆ ಸರಿದ. ನಂತರ ಆತ ಮರುಮದುವೆಯಾದ. ಆದರೆ ರಖುಮಾಬಾಯಿಯ ವೈವಾಹಿಕ ಸ್ಥಿತಿಯು ಕೊನೆಯವರೆಗೂ ಸ್ಪಷ್ಟವಾಗಲೇ ಇಲ್ಲ. ಹಿಂದೂ ಕಾನೂನಿನ ರೀತ್ಯಾ ವಿವಾಹಿತಳೋ ಅಥವಾ ವಿಚ್ಛೇದಿತೆಯೋ ಎಂಬ ಅಂಶವು ಸ್ಪಷ್ಟವಾಗಲಿಲ್ಲವಾದ್ದರಿಂದ ಆಕೆಯು ಮರುಮದುವೆಯಾಗಲಿಲ್ಲ.

ಆ ಸಂದರ್ಭದಲ್ಲಿ ಆಕೆ ವಿಭಿನ್ನ ಮತ್ತು ಆದರ್ಶ ಇತಿಹಾಸವನ್ನು ಸೃಷ್ಟಿಸಿದಳು. ಒಬ್ಬ ಬ್ರಿಟಿಷ್ ವೈದ್ಯೆ ರಖುಮಾಬಾಯಿಯ ವೈದ್ಯಕೀಯ ಶಿಕ್ಷಣದ ಸಲುವಾಗಿ ಆರ್ಥಿಕ ನೆರವನ್ನು ಕ್ರೋಡೀಕರಿಸಿದಳು. ಆಕೆಯು ಲಂಡನ್ನಿನ ಮಹಿಳಾ ವೈದ್ಯಕೀಯ ಕಾಲೇಜಿನಲ್ಲಿ ತನ್ನ ಶಿಕ್ಷಣವನ್ನು ಮುಂದುವರೆಸಿ 1894ರಲ್ಲಿ ಭಾರತಕ್ಕೆ ಮರಳಿ ಬಂದಳು. ಪುಣೆಯ ಆಸ್ಪತ್ರೆಗಳಲ್ಲಿ ಮುಖ್ಯ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ ಆಕೆ, ತನ್ನ ಬದುಕಿನ ಉದ್ದಕ್ಕೂ ಸಾಮಾಜಿಕ ಪ್ರಜ್ಞೆಯನ್ನು ಜೀವಂತವಾಗಿ ಇರಿಸಿದ್ದ ವಿಶಿಷ್ಟ ಮಹಿಳೆ. ಆಕೆ ಅನೇಕ ಲೇಖನಗಳನ್ನು ಬರೆದಿದ್ದು, ಅವು ಇಂದಿಗೂ ಪ್ರಸ್ತುತವಾಗಿವೆ. ರಖುಮಾಬಾಯಿ ಕೊನೆಯವರೆಗೂ ಮಹಿಳೆಯರ ಸ್ಥಿತಿಗತಿಯ ಬಗ್ಗೆ ನಿರಂತರವಾಗಿ ಕ್ರಿಯಾಶೀಲಳಾಗಿದ್ದು ಹೋರಾಟದ ಕೆಚ್ಚಿನ ರೋಚಕ ಇತಿಹಾಸದ ಹೆಜ್ಜೆ ಗುರುತನ್ನು ಮೂಡಿಸಿದ್ದಾಳೆ. ಸಾಮಾಜಿಕ, ಕಾನೂನು ಮತ್ತು ಮಹಿಳಾ ಚರಿತ್ರೆಯ ಮಿನುಗು ತಾರೆಯಾಗಿದ್ದಾಳೆ.

ಬಾನು ಮುಷ್ತಾಕ್

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *