ಹದಿನಾರಾಣೆ ಅಸಮಾನತೆ /ಯುದ್ಧದ ಪೆಟ್ಟಿಗೆ ಹೆದರದ ಗಟ್ಟಿ ಮನಗಳು – ಬಾನು ಮುಷ್ತಾಕ್

ಪ್ರತೀ ದಾಳಿಯಲ್ಲಿ ಹುತಾತ್ಮರಾಗುವ ಸೈನಿಕರ ಮಡದಿಮಕ್ಕಳ ಬದುಕಿನ ಬವಣೆಯನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಆದರೆ ಯುದ್ಧ ತಮಗೆ ತಂದ ನಷ್ಟವನ್ನು ಮನದಲ್ಲೇ ನುಂಗಿಕೊಂಡು ಸುತ್ತಲಿನ ಜನರ ನೋವುಗಳಿಗೆ ಮಿಡಿಯುವ ಅನೇಕ ಸೇನಾವಿಧವೆಯರು ಸಾರ್ಥಕ ಜೀವನ ನಡೆಸುತ್ತಿದ್ದಾರೆ. ಅವರ ಸಮಾಜಸೇವೆಗೆ ಯಾವ ಪ್ರಶಸ್ತಿಯೂ ಅಳತೆಗೋಲಾಗುವುದಿಲ್ಲ. 
ನೀವು ಮನೆಗೆ ಮರಳಿದಾಗ
ಅವರಿಗೆ ನಮ್ಮ ಬಗ್ಗೆ ತಿಳಿ ಹೇಳಿರಿ
ನಿಮ್ಮ ನಾಳೆಗಳಿಗಾಗಿ ನಮ್ಮ ಇಂದನ್ನು
ಕೊಟ್ಟೆವು ಎಂಬುದನೂ ಹೇಳಿ.
ನಾಗಾಲ್ಯಾಂಡ್‍ನಲ್ಲಿರುವ ಕೊಹಿಮಾ ಯುದ್ಧ ಸ್ಮಾರಕದಲ್ಲಿ ಬಂದೂಕಿನಂತೆ ಎದೆ ಸೆಟೆಸಿ ಕೊರೆಯಲ್ಪಟ್ಟಿರುವ ಅಕ್ಷರಗಳು ಇವು. ಎರಡನೆ ವಿಶ್ವಯುದ್ಧದ ಸಂದರ್ಭದಲ್ಲಿ ಜಪಾನೀಯರನ್ನು ಹಿಮ್ಮೆಟ್ಟಿಸುವ ಸಲುವಾಗಿ ತಮ್ಮ ಆತ್ಮಾರ್ಪಣೆಯನ್ನು ಮಾಡಿದ ಸೈನಿಕರ ನೆನಪಿಗೋಸ್ಕರ ನಿರ್ಮಿಸಿರುವ ಯುದ್ಧ ಸ್ಮಾರಕವು ಹುತಾತ್ಮ ಸೈನಿಕರ ಅಸೀಮ ಧೈರ್ಯದ ಸಂದೇಶವನ್ನು ಸಾರುತ್ತಿವೆ.
ಯಾವುದೇ ಯುದ್ಧ ಅಥವಾ ಭಯೋತ್ಪಾದಕ ಕೃತ್ಯಗಳ ಪರಿಣಾಮವಾಗಿ ಯೋಧನೊಬ್ಬ ಹುತಾತ್ಮನಾದರೆ, ದೇಶದಾದ್ಯಂತ ಅವನಿಗೆ ಗೌರವ ಸಲ್ಲಿಸಲಾಗುತ್ತದೆ. ಜನತೆಯ ಮನಸ್ಸು ಆತನ ಸಾವನ್ನು ತಮ್ಮ ವೈಯಕ್ತಿಕ ನೋವೆಂದು ಅನುಭವಿಸುತ್ತಾರೆ. ಆತ ಅಮರನಾದನೆಂದು ಆತನ ನೆನಪಿನಲ್ಲಿ ಆಸಂಖ್ಯ ಮೇಣದ ಬತ್ತಿಗಳನ್ನು ಹಚ್ಚುತ್ತಾರೆ. ಆದರೆ ನಿರಂತರವಾದ ಅಗಲಿಕೆ, ಯಾತನೆ ಮತ್ತು ಗಂಭೀರವಾದ ಆರ್ಥಿಕ ಏರುಪೇರುಗಳಿಗೆ ತುತ್ತಾಗುವವರು ಆತನ ಕುಟುಂಬದವರು ಮಾತ್ರ ಆಗಿರುತ್ತಾರೆ.
ಇಂಗ್ಲಿಷ್‍ನಲ್ಲಿ “ವಾರ್ ವಿಡೋಸ್” ಎಂದು ಕರೆಯಲಾಗುವುದನ್ನು ಕನ್ನಡದಲ್ಲಿ “ಸೇನಾ ವಿಧವೆಯರು” ಎಂದು ಅನುವಾದಿಸಿ ಹೇಳಿದ ಮಾತ್ರಕ್ಕೆ ಸೈನಿಕರ ಪತ್ನಿಯರ ದುಃಖ, ನೋವು ಮತ್ತು ಯಾತನೆಯನ್ನು ಅನುವಾದಿಸಿದಂತಾಗುವುದಿಲ್ಲ. ಭಾರತದ ಮಿಲಿಟರಿ ಇತಿಹಾಸವು ವಿಶಿಷ್ಟವಾಗಿದೆ. ನಮ್ಮ ದೇಶವು ಅಹಿಂಸೆಯನ್ನು ಎತ್ತಿ ಹಿಡಿದು ಸ್ವಾತಂತ್ರ್ಯವನ್ನು ಗಳಿಸಿದರೂ ಕೂಡ ಸುಮಾರು ಹತ್ತು ಲಕ್ಷದಷ್ಟು ಸೈನಿಕರನ್ನು ಪ್ರಪಂಚದ ಅನೇಕ ಭಾಗಗಳಿಗೆ ಯುದ್ಧದ ಸಲುವಾಗಿ ಕಳುಹಿಸಿದೆ. ಹೀಗಾಗಿ ಯಾವ ದೇಶದಲ್ಲಿಯೂ ಇರದಷ್ಟು ಅತೀ ಹೆಚ್ಚಿನ ಸಂಖ್ಯೆಯ ಸೇನಾ ವಿಧವೆಯರು ನಮ್ಮ ದೇಶದಲ್ಲಿ ಇದ್ದಾರೆ. ಸಾವಿರಾರು ಸಂಖ್ಯೆಯ ಮಹಿಳೆಯರು ಯುದ್ಧದಲ್ಲಿ ಪತಿಯನ್ನು ಕಳೆದುಕೊಂಡು ತಮ್ಮ ಬದುಕಿನ ಹೋರಾಟದಲ್ಲಿ ಏಕಾಂಗಿಯಾಗಿ ಉಳಿದಿದ್ದಾರೆ.
ಈ ನಿಟ್ಟಿನಲ್ಲಿ ಹೋರಾಟದಲ್ಲಿ ತೊಡಗಿ ತಮ್ಮ ಕುಟುಂಬದ ಸಶಕ್ತಬಿಂಬವಾಗಿ ಮೂಡಿ ಬಂದಿರುವ ಮಹಿಳೆಯರ ಬದುಕು ಮತ್ತು ಅವರ ಸಾಧನೆ ವಿಶಿಷ್ಟವಾಗಿದೆ. ಹಳ್ಳಿಗಾಡಿನ ಹೆಣ್ಣು ಮಗಳು ಅನಿತಾ ಒಟ್ಟು ಕುಟುಂಬದ ಕುಡಿಯಾಗಿದ್ದಾಕೆ. ಅತ್ಯಂತ ಸುರಕ್ಷಿತ ವಲಯದಲ್ಲಿ ತನ್ನ ಬದುಕಿನ ಬಳ್ಳಿಯನ್ನು ಹಬ್ಬಿಸಿದ್ದಳು. ಆಕೆ ತನ್ನ ಹಳ್ಳಿಯಿಂದ ಮೊದಲ ಬಾರಿಗೆ ದಿಲ್ಲಿಗೆ ಹೋದದ್ದು ಆಕೆಯ ಪತಿಗೆ ಸೇನೆಯಲ್ಲಿ ಪ್ರಪ್ರಥಮ  ಪೋಸ್ಟಿಂಗ್ ಆದಾಗ. ಜಮ್ಮು ಕಾಶ್ಮೀರದ ಕಾರ್ಗಿಲ್ ಪ್ರದೇಶದಲ್ಲಿ ನಿಯೋಜಿತನಾಗಿದ್ದ ಆತ ಅನಿತಾಳಿಗೆ ಪತ್ರವೊಂದನ್ನು ಪೋಸ್ಟ್ ಮಾಡಿ ತನ್ನ ಕ್ಯಾಂಪ್‍ಗೆ ಮರಳುತ್ತಿದ್ದ. ಅಚಾನಕವಾಗಿ ನಡೆದ ಶತ್ರುಗಳ ದಾಳಿಗೆ ಬಲಿಯಾಗಿ ಆತ ನೆಲಕ್ಕೆ ಉರುಳಿದ. ತ್ರಿವರ್ಣ ಧ್ವಜದ ಗೌರವದೊಡನೆ ಆತನ ದೇಹ ಆ ಗ್ರಾಮಕ್ಕೆ ತಲುಪಿದಾಗ ಅವಳ ಸಮಸ್ತ ಚೇತನವೂ ಅಚೇತನವಾಗಿತ್ತು. ತರಗೆಲೆಯಂತೆ ನಡುಗುತ್ತಿದ್ದ ಆಕೆ ಮತಿಶೂನ್ಯಳಾದಳು. ತನ್ನ ಜಗತ್ತು ತನ್ನ ಕಣ್ಣೆದುರಿಗೆ ಸರ್ವನಾಶವಾದಾಗ ತಾನೇಕೆ ಬದುಕಬೇಕು ಎಂಬ ಆತ್ಮಘಾತಕವಾದ ಆಲೋಚನೆಯೊಂದು ಅವಳ ಮನದ ತುಂಬಾ ಪ್ರವಹಿಸಿದಾಗ ಎದುರಿಗೆ ಕಂಡುಬಂದದ್ದು ಇಬ್ಬರ ಮೋರೆಗಳು. ಅಂತಹ ಮುದ್ದಾದ ಹಸುಳೆಗಳನ್ನು ಅನಾಥರನ್ನಾಗಿ ಮಾಡಿ ಹೋಗಬೇಕೆಂಬ ತನ್ನ ಹೇಡಿತನದ ಭಾವಕ್ಕೆ ವಿದಾಯ ಹೇಳುತ್ತಾ ಆಕೆ ತನ್ನ ಪತಿಯ ಸೈನ್ಯದ ಕ್ಯಾಪ್ ಅನ್ನು ಮೂರು ವರ್ಷ ಪ್ರಾಯದ ತನ್ನ ಮಗನ ತಲೆಯ ಮೇಲೆ ಇರಿಸಿ ಅವನಿಗೊಂದು ಸಲ್ಯೂಟ್ ಹೊಡೆದಳು. ಅವನನ್ನು ಬಿಗಿದಪ್ಪಿ `ಮುಂದಿನ ಸೈನಿಕ ನೀನೇ’ ಅಂದಳು. ಅದೇ ಅವಳ ಮುಂದಿನ ಹೋರಾಟದ ಬದುಕಿಗೆ ನಾಂದಿಯಾಯಿತು.
ಬಹುತೇಕ ಸೇನಾ ವಿಧವೆಯರು ಗ್ರಾಮಾಂತರ ಭಾಗದಿಂದ ಬಂದವರಾಗಿರುತ್ತಾರೆ. ಅವರುಗಳ ಪೈಕಿ ಬಹುತೇಕ ಮಹಿಳೆಯರು ಅನಕ್ಷರಸ್ಥರಾಗಿರುತ್ತಾರೆ ಅಥವಾ ಪ್ರಾಥಮಿಕ ಹಂತದ ವಿದ್ಯೆಯನ್ನು ಪಡೆದವರಾಗಿರುತ್ತಾರೆ. ಸೂಕ್ತ ವಿದ್ಯಾರ್ಹತೆ ಇಲ್ಲದ ಪ್ರಯುಕ್ತ ಅವರಿಗೆ ಉದ್ಯೋಗಾವಕಾಶಗಳ ನಿರಾಕರಣೆಯಾಗುತ್ತದೆ. ಆ ಮಹಿಳೆಯರು ಮೂವತ್ತು ವರ್ಷ ತಲುಪುವುದಕ್ಕೆ ಮುನ್ನವೇ ತಮ್ಮ ಪತಿಯನ್ನು ಕಳೆದುಕೊಂಡಿರುತ್ತಾರೆ. ಮುಂದೆ ಹಲವು ದಶಕಗಳ ಹೋರಾಟ ಅವರ ಪಾಲಿನ ಜವಾಬುದಾರಿಯಾಗಿರುತ್ತದೆ.
ತನ್ನ ಕಾಲೇಜಿನ ಪ್ರಾಜೆಕ್ಟೊಂದರ ಸಂಬಂಧದಲ್ಲಿ, ಸೇನಾ ವಿಧವೆಯರ ಸಂಪರ್ಕಕ್ಕೆ ಬಂದ, ಗೌರಿ ಶ್ರೀನಾರಂಗ್ ಎಂಬ ವಿದ್ಯಾರ್ಥಿನಿ, ಅವರ ಸಂಕಷ್ಟಗಳನ್ನು ನೋಡಲಾರದೆ, “ಮಿಷನ್ ಆರ್ಮಿ ವಿಡೋಸ್ ಎಂಪವರ್ ಮೆಂಟ್” ಎಂಬ ಸಂಸ್ಥೆಯೊಂದನ್ನು ಮುಂಬಯಿಯಲ್ಲಿ ಆರಂಭಿಸಿದಳು. ಆಕೆ ಸುಮತಿ ಯಾದವ್ ಎಂಬಾಕೆಯ ಪ್ರಕರಣವನ್ನು ದಾಖಲಿಸಿದ್ದಾಳೆ. 1965ರ ಇಂಡೋ-ಪಾಕ್ ಯುದ್ಧದಲ್ಲಿ ಆಕೆಯ ಪತಿ ಮರಣ ಹೊಂದಿದ. ಆತ ಮರಣ ಹೊಂದಿದ ಸ್ಥಳ ಕಾಶ್ಮೀರವಾಗಿತ್ತು. ಅಲ್ಲಿಂದ ಪತಿಯ ಮರಣದ ವಾರ್ತೆ ಆಕೆಗೆ ತಲುಪುವಲ್ಲಿ ಹತ್ತು ತಿಂಗಳ ಅವಧಿ ಕಳೆದಿತ್ತು. ಆತನ ಕಳೇಬರವಂತೂ ಏನಾಯಿತು ಎಂಬುದೇ ಆಕೆಗೆ ತಿಳಿಯಲಿಲ್ಲ. ಆಕೆಯ ಮಾಸಿಕ ಪಿಂಚಣಿಯು ನಾಲ್ಕೂವರೆ ರೂಪಾಯಿಗಳೆಂದು ನಿಗದಿಯಾಯಿತು. ತಿಂಗಳಿಗೆ ನಾಲ್ಕೂವರೆ ರೂಪಾಯಿಗಳ ಪಿಂಚಣಿ ಪಡೆದ ಆಕೆ, ತನ್ನ ಪತಿ ಗತಿಸಿದ ಒಂದು ವಾರದಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ್ದಳು. 1999ನೇ ಇಸವಿಯಲ್ಲಿ ಆಕೆಯ 73ನೇ ವಯಸ್ಸಿನಲ್ಲಿ ಆಕೆಯ ಪಿಂಚಣಿಯನ್ನು 22,000/- ರೂಗಳಿಗೆ ಸರ್ಕಾರವು ಹೆಚ್ಚಳ ಮಾಡಿತು. ಅದಾಗಲೇ ಆಕೆಯ ಮಗ ವಾಸಿಯಾಗದ ಸುದೀರ್ಘ ಕಾಯಿಲೆಯಿಂದ ಬಳಲುತ್ತಿದ್ದ. ಆತನ ಚಿಕಿತ್ಸೆಗೆ ಸಂಪೂರ್ಣ ಹಣವನ್ನು ವ್ಯಯ ಮಾಡಿದ ಆಕೆ ನಂತರ ಅಪಾರ ಸಾಲದ ಸುಳಿಯಲ್ಲಿ ಸಿಲುಕಿದಳು.
ಅವಳೆದುರು ಧುತ್ತೆಂದು ಮೂಡಿಬರುತ್ತಿದ್ದುದು ಒಂದೇ ಪ್ರಶ್ನೆ. ತನ್ನ ಮಗನಿಗೆ ಅಪ್ಪನ ಆಸರೆ, ಪಾಲನೆ ಪೋಷಣೆ ದೊರಕುತ್ತಿದ್ದಲ್ಲಿ ಆತನ ಭವಿಷ್ಯ ಭಿನ್ನವಾಗುತ್ತಿತ್ತೇ? ಈ ಪ್ರಶ್ನೆಗೆ ಉತ್ತರಿಸುವರಾರು? ಕುಟುಂಬದ ಜವಾಬುದಾರಿಗಳನ್ನು ಹೊರುವ ಹೆಗಲೇ ಧರಾಶಾಯಿಯಾದರೆ, ಆ ಎಳೆಯ ವಿಧವೆಯರು ಮತ್ತು ಅಮಾಯಕ ಕೂಸುಗಳ ಬೆಂಗಾವಲು ಯಾರಾಗುತ್ತಾರೆ? ತಬ್ಬಲಿತನವನ್ನು ನೀಗುವವರ್ರ್ಯಾರು? ತುತ್ತಿನ ಚೀಲವನ್ನು ತುಂಬಿಸುವವರ್ಯಾರು? ಕಾಮನ ಬಿಲ್ಲಿನ ಬಣ್ಣಗಳನ್ನು ಮುಷ್ಟಿ ತುಂಬಾ ತುಂಬಿಸಿ ನಗೆ ಬೀರುವವರ್ಯಾರು? ತ್ರಿವರ್ಣ ಧ್ವಜ ಅವರ ಕೈಗಳಲ್ಲಿ ತಲುಪಿದಾಗ ಮೂಡುವ ಹೆಮ್ಮೆ ನಂತರದ ಶೂನ್ಯವನ್ನು ತುಂಬುವರ್ಯಾರು? ಬದುಕಿನ ಬವಣೆಯನ್ನು ಜೊತೆಯಲ್ಲಿ ಎದುರಿಸುವ ಸಂಗಾತಿಯ ಸ್ಥಳದಲ್ಲಿ ಶೂನ್ಯ, ಒಂಟಿತನದ ವ್ಯಗ್ರತೆ, ಅಗಾಧ ಕಡಲಿನ ಆಳೆತ್ತರದ ಅಲೆಗಳನ್ನು ಆಕೆ ಒಂಟಿಯಾಗಿ ನಿರ್ವಹಿಸುವ ಬಗೆ ಎಂತು?
ಹೀಗೆಲ್ಲಾ ಮೂಡಿಬಂದ ಆಲೋಚನೆಗಳು ಸೇನಾವಿಧವೆಯರ ಬದುಕನ್ನು ದಿಕ್ಕುಗೆಡಿಸಲು ಸಮರ್ಥವಾದರೂ, ಅವರು ದಿಕ್ಕು ತಪ್ಪುವುದಿಲ್ಲ. ಅಸೀಮ ಧೈರ್ಯದ ಪ್ರತೀಕವಾಗಿ ಇಂದು ಸುಭಾಷಿಣಿ ವಸಂತ್ ನಮ್ಮೊಡನೆ ಇದ್ದಾರೆ. ಆಕೆಯ ಪತಿ ಕರ್ನಲ್ ವಸಂತ ಗೋಪಾಲ್ ಸಮವಸ್ತ್ರದಲ್ಲಿ ನಿಂತಿದ್ದ ಫೋಟೋ ಹೂವಿನ ಹಾರದೊಂದಿಗೆ ಗೋಡೆಯನ್ನು ಅಲಂಕರಿಸಿದಾಗ ಆಕೆ ಛಿದ್ರಗೊಂಡಳು. ಉರಿಯಲ್ಲಿ ನಡೆದ ದಾಳಿಯಲ್ಲಿ ಮರಣ ಹೊಂದಿದ್ದ ಪತಿಯ ಸೇವೆಗೆ ಗೌರವದಿಂದ ನೀಡಲಾದ ಮರಣೋತ್ತರ ಅಶೋಕ ಚಕ್ರ ಪ್ರಶಸ್ತಿಯನ್ನು ಆಕೆ ಸ್ವೀಕರಿಸಿದಳು. ವೈಯಕ್ತಿಕ ಬದುಕಿನ ನೋವನ್ನು ಮೀರಿ, ಆಕೆ ಸಾರ್ವಜನಿಕ ಬದುಕಿಗೆ ಕಾಲಿಟ್ಟಿದ್ದು “ವಸಂತ ರತ್ನ ಫೌಂಡೇಶನ್ ಫಾರ್ ಆಟ್ರ್ಸ್” ಅನ್ನು ಸ್ಥಾಪಿಸಿ ಅದರಲ್ಲಿ ಸಕ್ರಿಯಳಾದಾಗ. ವೈಯಕ್ತಿಕ ಬದುಕಿನ ತೀವ್ರ ಶೂನ್ಯದಿಂದ ಆಕೆ ಸಾರ್ವತ್ರೀಕರಣದ “ಇತರರ ನೋವನ್ನು” ಹಂಚಿಕೊಳ್ಳುವ ವೇದಿಕೆಗೆ ಪದಾರ್ಪಣ ಮಾಡಿದಾಗ ಆಕೆಯ ಕಣ್ಣೆದುರಿಗೆ ಕಂಡುಬಂದ ಸತ್ಯಗಳು ತಮ್ಮ ಕರಾಳ ಮಗ್ಗಲನ್ನು ತೆರೆದಿಡುತ್ತಿದ್ದವು. ಸೇನಾ ವಿಧವೆಯರಿಗೆ ಸಾಂತ್ವನ ಬೇಕಿತ್ತು; ಆರ್ಥಿಕ ನೆರವಿನ ಅಗತ್ಯವಿತ್ತು. ಅಮಾಯಕ ಮಕ್ಕಳು ಮತ್ತು ಅಸಹಾಯಕ ಅತ್ತೆ ಮಾವಂದಿರ ಜವಾಬುದಾರಿಗಳನ್ನು ಹೊರುವ ಆತ್ಮವಿಶ್ವಾಸ ಬೆಳೆಸಿಕೊಂಡು, ಒಂಟಿತನದ ಖಿನ್ನತೆಯಿಂದ ಹೊರ ಬರಬೇಕಿತ್ತು. ಮನೆಯಿಂದಾಚೆ ಹೊರಬರದ ಪಾದಗಳಿಗೆ ಸ್ವಾವಲಂಬನೆಯ ಬಲ ಬೇಕಿತ್ತು. ಮನೆಯೊಳಗಿನ ಅರೆಮಬ್ಬು ಬೆಳಕಿಗೆ ಹೊಂದಿಕೊಂಡಿದ್ದ ಕಂಗಳು ವಾಸ್ತವದ ಪ್ರಖರ ಕಿರಣಗಳಿಂದ ಕೂಡಿದ ಹೊರಗಿನ ಬೆಳಕಿಗೆ ಕಣ್ಣು ಮುಚ್ಚದಂತಹ ಜಾಗೃತಿಯ ವಿವೇಕ ಅವರಿಗೆ ಅಗತ್ಯವಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಅವರ ಬದುಕಿಗೆ ಒಂದು ಉದ್ದೇಶ ಬೇಕಿತ್ತು. ಹೀಗಾಗಿ, ಸದರಿ ಸಂಸ್ಥೆಯು ಸೇನಾ ವಿಧವೆಯರ ಸಮಗ್ರ ಬೆಳವಣಿಗೆ ಮತ್ತು ನೆರವಿನ ಉದ್ದೇಶದಿಂದ ಸಕ್ರಿಯವಾಗಿದೆ.
ವೈಜಯಂತಿಮಾಲಾ ಎಂಬ ಅಭಿನೇತ್ರಿ ಮತ್ತು ಗುರುವಿನ ಬಳಿ ಆಕೆ ಅಭ್ಯಾಸ ಮಾಡಿದ್ದ ನೃತ್ಯ ಆ ಸಂಕಷ್ಟಕರ ಸಮಯದಲ್ಲಿ ಆಕೆಯ ಕೈಹಿಡಿಯಿತು. ಆ ಮೂಲಕ ಆಕೆ ಕೇವಲ ತನ್ನ ಬದುಕು ಮಾತ್ರವಲ್ಲದೆ ಇನ್ನಿತರೆ ನೂರಾಇಪ್ಪತ್ತು ಸೇನಾ ವಿಧವೆಯರ ಕುಟುಂಬಗಳನ್ನು ತನ್ನ ಹೆಗಲಿಗೇರಿಸಿಕೊಂಡಳು. ಸರ್ಕಾರ ಮತ್ತು ಸಂಸ್ಥೆಗಳಿಂದ ಆ ಕುಟುಂಬಗಳಿಗೆ ಅಗತ್ಯದ ಮಾಹಿತಿ, ನೆರವು, ಪಿಂಚಣಿ, ಉದ್ಯೋಗ, ಉನ್ನತ ಶಿಕ್ಷಣ ಮೊದಲಾದ ಎಲ್ಲಾ ಕ್ಷೇತ್ರಗಳಲ್ಲಿಯೂ ನೆರವನ್ನು ಒದಗಿಸುತ್ತಾ ಆಕೆ ತನ್ನ ಬದುಕಿಗೆ ಹೊಸ ದಿಕ್ಕು ಕಂಡುಕೊಂಡಿದ್ದಾಳೆ.
ಸೇನಾ ವಿಧವೆಯರ ಈ ಹೋರಾಟ, ಸಂಕಲ್ಪ ಮತ್ತು ಸಾಧನೆಯ ನಡುವೆ ಯುದ್ಧದ ಭೀಕರತೆ ಮತ್ತು ಉದ್ದೇಶಗಳನ್ನು ಮರೆಯುವಂತಿಲ್ಲ. ಏಕೆಂದರೆ ಯುದ್ಧವೆಂಬುದು ಕೆಲವರಿಗೆ ಅಧಿಕಾರ ಭದ್ರ ಪಡಿಸಿಕೊಳ್ಳುವ ಹುನ್ನಾರ. ಇನ್ನು ಕೆಲವರಿಗೆ ಜನತೆಯ ಮನಸ್ಸನ್ನು ಭಾವೋದ್ರೇಕಕ್ಕೆ ಒಳಪಡಿಸಿ ವಾಸ್ತವ ಬದುಕನ್ನು ಭಂಗಗೊಳಿಸುವ ಅಮಲೇರಿಸುವ ಕ್ರಿಯೆ. ಕೆಲವರಿಗೆ ವ್ಯಾಪಾರ ಮತ್ತು ಲಾಭ. ಇನ್ನೂ ಕೆಲವರಿಗೆ ಮನೋರಂಜನೆ. ಇತರೆಯವರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡುವ ಕುಟಿಲತೆ. ಅದಕ್ಕೆಂದೇ ಬಸವರಾಜ ಸೂಳಿಬಾವಿಯವರ ಒಂದು ಕವಿತೆ ಹೀಗಿದೆ:
ಆಗಸದಲ್ಲಿ ಕೂಡಿಯೇ
ಹಾರಾಡುವ
ನಿಶಾನೆಗಳಲಿ
ನಾಯಕರು
ಕಾಣುತ್ತಿದ್ದರು
ನೆಲದ ಮೇಲೆ ತುಂಬಿ
ಹರಿಯೋ ರಕ್ತದೊಡಲಲಿ
ಬರೀ ಸೈನಿಕರಿದ್ದರು.
ಅಂತೆಯೇ ಯುದ್ಧದ ಬಗ್ಗೆ ಅಂತಃಕರಣಪೂರ್ವಕವಾಗಿ ಕವನ ಕಟ್ಟಿರುವ ಡಾ|| ರಾಹತ್ ಇಂದೋರಿಯ ಒಂದು ಪ್ರಶ್ನೆ ಹೀಗಿದೆ:
ಸರ್‍ಹದೋಂಪರ್ ಬಹುತ್
ತನಾವ್ ಹೈ ಕ್ಯಾ
ಕುಛ್ ಪತಾ ತೋ ಕರೋ
ಚುನಾವ್ ಹೈ ಕ್ಯಾ
-ಬಾನು ಮುಷ್ತಾಕ್

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *