ಹದಿನಾರಾಣೆ ಅಸಮಾನತೆ/ ಮಹಿಳೆ ವಕೀಲಳಾಗುವುದೆಂದರೆ – ಬಾನು ಮುಷ್ತಾಕ್
ಜಗತ್ತಿನ ಬೇರೆ ವಲಯಗಳಲ್ಲಿ ಇರಲಿ, ಕಾನೂನು-ನ್ಯಾಯಾಂಗದಲ್ಲಿ ಕೂಡ ಶಿಕ್ಷಣ ಪಡೆಯಲು ಮತ್ತು ವೃತ್ತಿ ಮಾಡಲು ಮಹಿಳೆಯರಿಗೆ ಪ್ರವೇಶದ ಅವಕಾಶ ಸುಲಭವಾಗಿರಲಿಲ್ಲ ಎನ್ನುವುದು ಕಟುಸತ್ಯ. ಸತತ ಅವಮಾನ, ಅವಹೇಳನ ಮತ್ತು ಅಪನಂಬಿಕೆಗಳ ವಿಷವರ್ತುಲವನ್ನು ದಾಟಿ ನ್ಯಾಯಾಲಯ ಮತ್ತು ನ್ಯಾಯಪೀಠಗಳತ್ತ ಅವರು ಹಾಕಿದ ಹೆಜ್ಜೆ ನಿಜಕ್ಕೂ ಒಂದು ಐತಿಹಾಸಿಕ ಸಾಧನೆ.
ಕಳೆದ ವಾರವಷ್ಟೇ ನನ್ನ ಸಂಬಂಧಿಯೊಬ್ಬಳು ವಕೀಲಳಾಗಿ ನೋಂದಾವಣೆ ಮಾಡಿಕೊಳ್ಳಲು ಭಾರೀ ಉತ್ಸಾಹ ಮತ್ತು ನಿರೀಕ್ಷೆಗಳೊಡನೆ ಸನ್ನದ್ಧಳಾಗಿದ್ದಳು. ಅವಳ ಬಿಳಿಯ ದಿರಿಸು, ಕಪ್ಪುಕೋಟು ಮತ್ತು ಆಕೆ ಮೊದಲ ಬಾರಿ ಧರಿಸಿದ್ದ ಬ್ಯಾಂಡ್ ಆಕೆಗೆ ವಿಶೇಷ ಕಳೆಯನ್ನು ಕೊಟ್ಟಿತ್ತು. ಬಾರ್ ಕೌನ್ಸಿಲ್ ಕಚೇರಿಯ ಮಹಡಿಯಲ್ಲಿ ಸೇರಿದ್ದ ನೂರಾರು ಮಂದಿಯಲ್ಲಿ, ಅಪಾರ ಸಂಖ್ಯೆಯ ಮಹಿಳೆಯರು ಕೂಡಾ ಇದ್ದರು. ಅಲ್ಲಿ ಹೊಸ ವಕೀಲರ ನೋಂದಾವಣೆಯ ವಾತಾವರಣವೇ ಇರಲಿಲ್ಲ. ಬದಲಿಗೆ ಗೌಜು ಗದ್ದಲದ ನಡುವೆ ಸನ್ನದನ್ನು ಕೈಯಲ್ಲಿ ಹಿಡಿದು ಹೊರ ಬರುವುದೇ ಸಾಹಸದ ಕೆಲಸವಾಗಿತ್ತು. ನನ್ನ ಸಂಬಂಧಿ ಕೂಡಾ ಗೆಲುವಿನ ನಗೆಯನ್ನು ಬೀರುತ್ತಾ ಸನ್ನದನ್ನು ಎತ್ತಿ ಹಿಡಿದು ಮುಗುಳುನಗೆಯನ್ನು ಬೀರಿದಳು. ನಾನು ಮುಗುಳುನಗೆಗೆ ಪ್ರತ್ಯುತ್ತರವನ್ನು ನೀಡಲಿಲ್ಲ. ಬದಲಿಗೆ ಆ ಸನ್ನದು ಅವಳ ಹೆಗಲಿನ ಮೇಲೆ ಹೊರಿಸಿದ ಹೊಣೆಗಾರಿಕೆಯನ್ನು ಕುರಿತು ಆಲೋಚನೆ ಮಾಡುತ್ತಿದ್ದೆ. ನಾನು ಮತ್ತೊಂದು ಲೋಕಕ್ಕೆ ತೆರೆದುಕೊಂಡಿದ್ದೆ.
ಅದು ವಿಭಿನ್ನವಾದ ಹೋರಾಟದ ಕಥೆಯಾಗಿತ್ತು. ಹೆಣ್ಣಿನ ನಡಿಗೆ ಎದುರು ಪುರುಷ ಲೋಕವು ಸೃಷ್ಟಿಸಿದ್ದ ತಡೆಗೋಡೆಗಳನ್ನು ಒದ್ದು ಕೆಡವಿ ಆಕೆ ಮುನ್ನಡೆಯಬೇಕಿತ್ತು. ಅಲ್ಲಿ ಹಾರ ತುರಾಯಿಗಳಿರಲಿಲ್ಲ ಮಾನ ಸನ್ಮಾನಗಳಿರಲಿಲ್ಲ. ಬದಲಿಗೆ, ಅವಮಾನ, ಕುಚೇಷ್ಟೆ, ಹುಟ್ಟಿನ ಮೇಲರಿಮೆಯ ಅಹಂಕಾರ ಮತ್ತು ಹೆಣ್ಣನ್ನು ಹೊರಗಿಡುವಿಕೆಯ ವಿಶಿಷ್ಟ ತಂತ್ರಗಾರಿಕೆಯ ದುರುದ್ದೇಶಗಳಿದ್ದವು. ಒಡಲಲ್ಲಿ ಜೈವಿಕ ಹಾಗೂ ಕನಸಿನ ಲೋಕದ ಭ್ರ್ರೂಣಗಳನ್ನು ಹೊತ್ತುಕೊಂಡು, ಅವುಗಳ ಸಾಕಾರಗೊಳ್ಳುವಿಕೆಯನ್ನು ನಿರೀಕ್ಷಿಸುತ್ತಾ ಕಲ್ಲುಮುಳ್ಳಿನ ದುರ್ಗಮ ಹಾದಿಯನ್ನು ಕ್ರಮಿಸುವ ಸವಾಲುಗಳು ಆಕೆಯ ಎದುರಿಗಿದ್ದವು. ಮಹಿಳೆಯರಿಗೆ ಈ ಕರಿಕೋಟು ಹಾಗೂ ಬಿಳಿ ಬ್ಯಾಂಡಿನ ಆಕರ್ಷಣೆ ಎಂದಿನಿಂದಲೂ ಇದ್ದದ್ದೇ. ಬಾಯಿ ತೆರೆದ ವಿಷಪೂರಿತ ಬಿಲಗಳು ಪ್ರತಿ ಹೆಜ್ಜೆಗೂ ಕಬಳಿಸಲು ಕಾದಿದ್ದಾಗ, ಅವುಗಳ ಜಾಲದಲ್ಲಿ ಬೀಳದೆ ಅದರೊಟ್ಟಿಗೆ ಆ ಬಿಲಗಳನ್ನು ಧಿಕ್ಕರಿಸುವುದು ಮತ್ತು ಉಲ್ಲಂಘಿಸುವುದೇ ಅವಳ ಬದುಕಿನ ಅನಿವಾರ್ಯತೆಯಾಯಿತು.
ವಕೀಲಳಾಗುವುದೆಂದರೆ ಎರಡು ಹಂತದ ಪ್ರಕ್ರಿಯೆ. ಮೊದಲನೆಯದಾಗಿ ಕಾನೂನು ಅಭ್ಯಾಸ ಮಾಡಬೇಕು. ನಂತರ ಬಾರ್ ಕೌನ್ಸಿಲ್‍ನಲ್ಲಿ ನೋಂದಾವಣೆಯನ್ನು ಮಾಡಿ ಸನ್ನದನ್ನು ಪಡೆಯಬೇಕು. ನಂತರವೇ ಆಕೆ ಪೂರ್ಣ ಪ್ರಮಾಣದ ವಕೀಲಳಾಗುವುದು. ಪುರುಷ ಪ್ರಾಧಾನ್ಯತೆಯ ಮನಸ್ಸುಗಳು ಈ ಎರಡು ಹಂತದಲ್ಲಿಯೂ ಕಾರ್ಯ ಸನ್ನದ್ಧವಾಗಿರುವುದು ಖಚಿತ. 1869ನೇ ಇಸವಿಯಲ್ಲಿ ಅರಾಬೆಲ್ಲ ಮ್ಯಾನ್ಸ್‍ಫೀಲ್ಡ್ ಎಂಬ ಮಹಿಳೆ ಅಯೋವ ಬಾರ್‍ನಲ್ಲಿ ಪ್ರಾಕ್ಟೀಸ್ ಮಾಡಲು ಅರ್ಜಿಯನ್ನು ಸಲ್ಲಿಸಿದಳು. ಅಲ್ಲಿಯವರೆಗೆ ಕಂಡುಕೇಳರಿಯದ ಈ ವಿದ್ಯಮಾನದಿಂದ ಇಡೀ ಸಮಾಜವೇ ತಲ್ಲಣಿಸಿಹೋಯಿತು. ಅವಳು ಕಾನೂನು ಶಾಲೆಯಲ್ಲಿ ಕಾನೂನನ್ನು ವ್ಯಾಸಂಗ ಮಾಡಿದ್ದರೂ ಆಕೆ ಕೇವಲ ಹೆಣ್ಣು ಎಂಬ ಕಾರಣಕ್ಕೆ ಅವಳಿಗೆ ಪ್ರವೇಶ ನಿರಾಕರಣೆ ಮಾಡಲಾಗಿತ್ತು. ಆ ಅರ್ಜಿಯ ಬಗ್ಗೆ ತೀರ್ಪು ನೀಡಿದ ನ್ಯಾಯಾಧೀಶರು `ಪುಲ್ಲಿಂಗ ಎಂಬ ಪದವು ಮಹಿಳೆಯರನ್ನು ಒಳಗೊಂಡಿರಬಹುದು’ ಎಂದು ನೀಡಿದ ವ್ಯಾಖ್ಯಾನವು ಪುರುಷ ಲೋಕದ ಅನೂಹ್ಯ ಬಾಗಿಲನ್ನು ಮಹಿಳೆಯರಿಗಾಗಿ ತೆರೆದ ಐತಿಹಾಸಿಕ ಕ್ಷಣವಾಗಿತ್ತು.
1872ರಲ್ಲಿ ಷಾರ್ಲೆಟ್‍ರೇ ಎಂಬ ಮಹಿಳೆ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದ ನಂತರ ಆಕೆಗೆ ಕೊಲಂಬಿಯಾ ಬಾರ್‍ನಲ್ಲಿ ಪ್ರಾಕ್ಟೀಸ್ ಮಾಡಲು ಅವಕಾಶ ನೀಡಲಾಯಿತು. ಆಕೆಯು ಕಾನೂನು ಪದವಿ ಪಡೆದ ಅಮೆರಿಕದ ಮೂರನೇ ಮಹಿಳೆ ಮತ್ತು ಆಫ್ರೋ ಅಮೆರಿಕನ್ ಜನಾಂಗದ ಮೊದಲ ಮಹಿಳೆಯಾಗಿದ್ದಳು. 1879ರಲ್ಲಿ ಬೆಲ್ವ ಲಾಕ್‍ವುಡ್ ಎಂಬ ಮಹಿಳೆ ಅಮೆರಿಕದ ಸರ್ವೋಚ್ಚ ನ್ಯಾಯಾಲಯದಲ್ಲಿ ವಾದ ಮಂಡನೆ ಮಾಡಿದ ಮೊಟ್ಟ ಮೊದಲ ಮಹಿಳೆ ಎಂದು ಇತಿಹಾಸ ಸೃಷ್ಟಿಸಿದಳು. ಹಾಗೂ ಆಕೆಯು ಫೆಡರಲ್ ನ್ಯಾಯಾಲಯಗಳನ್ನು ಮಹಿಳೆಯರಿಗೆ ತೆರೆಯಲು ಅವಕಾಶವಾಗುವಂತೆ ಸೂಕ್ತ ಶಾಸನದ ಬೆಂಬಲವನ್ನು ಪಡೆಯಲು ರಾಜಕೀಯ ಪ್ರಭಾವವನ್ನು ಕೂಡಾ ಬೀರಿದ್ದಳು. ಆದರೆ ಆಕೆ ಮೇರಿಲ್ಯಾಂಡ್‍ನ ನ್ಯಾಯಾಲಯದಲ್ಲಿ ಪ್ರಾಕ್ಟೀಸ್ ಮಾಡಲು ಅರ್ಜಿಯನ್ನು ಸಲ್ಲಿಸಿದಾಗ, ಆಕೆಯ ಪರ ವಾದವನ್ನು ಆಲಿಸಿದ ನ್ಯಾಯಾಧೀಶರು ‘ಮಹಿಳೆಯರು ಪುರುಷರಿಗೆ ಸಮಾನರಲ್ಲವೆಂದು ದೇವರೇ ನಿರ್ಣಯಿಸಿದ್ದಾನೆ. ಮತ್ತು ಅದು ಹಾಗೆಯೇ ಇದೆ’ ಎಂದು ತೀರ್ಪನ್ನು ನೀಡಿದರು. ಅವರ ಸದರಿ ನಿಲುವಿಗೆ ಪ್ರತಿಕ್ರಿಯೆಯನ್ನು ನೀಡಲು ಆಕೆ ಪ್ರಯತ್ನಿಸಿದಾಗ ಆ ನ್ಯಾಯಾಧೀಶ ಆಕೆಯನ್ನು ನ್ಯಾಯಾಲಯದಿಂದ ಹೊರಹಾಕಿದರು. ಆದರೆ ಆಕೆ ಅವಮಾನಿತಳಾಗಿ ಪುರುಷ ಅಹಂಕಾರದೆದುರು ಸೋತು ಮೂಲೆ ಸೇರಲಿಲ್ಲ. ಬದಲಿಗೆ ತನ್ನ ಹೋರಾಟದ ನೆಲೆಗಳನ್ನು ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ವಿಸ್ತರಿಸುತ್ತಾ ಹೋದ ಆಕೆ ಕೊನೆಗೆ ಅಮೆರಿಕದ ಸರ್ವೋಚ್ಚ ನ್ಯಾಯಾಲಯದಲ್ಲಿ ವಾದ ಮಂಡಿಸಿದ ಮೊದಲ ಮಹಿಳೆ ಎಂದು ವಿಜಯ ಪತಾಕೆಯನ್ನು ಹಾರಿಸಿ ಪುರುಷನ ಆಧಿಪತ್ಯದ ಬಾಗಿಲನ್ನು ಒದ್ದು ಒಳಪ್ರವೇಶಿಸಿದಳು.
ಅನೇಕ ಸಂದರ್ಭಗಳಲ್ಲಿ ಕೆಲ ಪುರುಷರು ಮಹಿಳೆಯರ ಹಕ್ಕುಗಳನ್ನು ಸಂರಕ್ಷಿಸುವಲ್ಲಿ ಪ್ರಧಾನ ಪಾತ್ರವನ್ನು ವಹಿಸಿದ್ದಾರೆ. ಅಡಾ ಕೆಪ್ಲೆ ತನ್ನ ವಕೀಲ ಪತಿಯಾದ ಹೆನ್ರಿ ಕೆಪ್ಲೆಯ ಕಚೇರಿಯಲ್ಲಿ ಸಹಾಯಕಿಯಾಗಿ ದುಡಿಯುತ್ತಿದ್ದಳು. ಆತ ಆಕೆಗೆ ಅತಿ ಹೆಚ್ಚಿನ ಉತ್ತೇಜನವನ್ನು ನೀಡುತ್ತಿದ್ದ. ಆಕೆ ಯೂನಿಯನ್ ಕಾಲೇಜ್ ಆಫ್ ಲಾ ನಿಂದ ಕಾನೂನು ಪದವಿಯನ್ನು ಪಡೆದಳು. ಆದರೆ ಆಕೆಗೆ ಇಲಿನಾಯ್ ಬಾರ್‍ನಲ್ಲಿ ಪ್ರವೇಶಾವಕಾಶವನ್ನು ತಿರಸ್ಕರಿಸಲಾಯಿತು. ಅಡಾ ಇಲಿನಾಯ್ ನ್ಯಾಯಾಧೀಶರ ಸದರಿ ತೀರ್ಪನ್ನು ಪ್ರಶ್ನಿಸಿದಳು. ಅಷ್ಟೇ ಅಲ್ಲದೆ, ಹೆನ್ರಿ ಕೆಪ್ಲೆಯೊಂದಿಗೆ ಕೈಜೋಡಿಸಿ ಕಾನೂನು ಮತ್ತು ಇತರೆ ಕ್ಷೇತ್ರಗಳಲ್ಲಿ ಲೈಂಗಿಕ ತಾರತಮ್ಯವನ್ನು ಎಸಗುವುದರ ವಿರುದ್ಧ ಕರಡು ಮಸೂದೆಯೊಂದನ್ನು ರೂಪಿಸಿದಳು. ಸದರಿ ಲೈಂಗಿಕ ತಾರತಮ್ಯ ವಿರೋಧಿ ಮಸೂದೆಯು 1872ರಲ್ಲಿ ಬಹುಮತದೊಂದಿಗೆ ಅಂಗೀಕಾರವಾಗಿ ಶಾಸನವಾದರೂ ಆಕೆ ಪ್ರಾಕ್ಟೀಸ್ ಮಾಡಲು ಉತ್ಸಾಹ ತೋರಲಿಲ್ಲ. ಬದಲಿಗೆ ಆಕೆ ಮಹಿಳಾ ಹಕ್ಕುಗಳ ಹೋರಾಟಗಾರ್ತಿಯಾಗಿ ರೂಪುಗೊಂಡಳು. ಅಡಾಳ ಸುಪ್ರಸಿದ್ಧ ಹೇಳಿಕೆಯೊಂದಿದೆ- `ಇಡೀ ಪ್ರಪಂಚದಲ್ಲಿಯೇ ಕಾನೂನು ಪದವಿಯನ್ನು ಪಡೆದ ಮೊಟ್ಟ ಮೊದಲ ಮಹಿಳೆ ನಾನು. ವಿಶ್ವದಾದ್ಯಂತ `ಸ್ವತಂತ್ರ ನಾಡು ವೀರರ ಮನೆ’ ಎಂದು ಹೆಮ್ಮೆ ಪಡುವ ಅಮೆರಿಕ ತನ್ನ ಮಹಿಳೆಯರಿಗೆ ಸ್ವಾತಂತ್ರ್ಯವನ್ನು ನೀಡಿಲ್ಲ. ನಾನು ಪುರುಷನಂತೆಯೇ ಕಷ್ಟಪಟ್ಟು ಕೆಲಸ ಮಾಡುತ್ತೇನೆ. ನಾನು ಪುರುಷನಂತೆಯೇ ಸಂಪಾದಿಸುತ್ತೇನೆ. ಆದರೆ ನನ್ನನ್ನು ಮಹಿಳೆಯನ್ನಾಗಿಸಿ ದೋಚಲಾಗುತ್ತದೆ. ಯಾವ ವಿಷಯದಲ್ಲಿಯೂ ನನ್ನ ಅನಿಸಿಕೆಗೆ ಮಹತ್ವವಿಲ್ಲ. ನಾನು ಕಷ್ಟ ಪಟ್ಟು ದುಡಿದ ಹಣ ಹೇಗೆ ವ್ಯಯವಾಗಬೇಕೆಂಬುದರ ಬಗ್ಗೆ ನನ್ನ ಧ್ವನಿಯನ್ನು ಕೇಳುವವರಿಲ್ಲ. ಇಲಿನಾಯ್ ಮತ್ತು ಅಮೆರಿಕದ ಪುರುಷರು ನನ್ನ ಜೇಬಿನಲ್ಲಿ ಕೈ ತೂರಿಸುತ್ತಾರೆ. ನನ್ನ ಕಷ್ಟದ ದುಡಿಮೆಯನ್ನು ಲೂಟಿ ಮಾಡುತ್ತಾರೆ ಮತ್ತು ಉದ್ಧಟತನದಿಂದ ಕೇಳುತ್ತಾರೆ ‘ಈಗ ನೀನೇನು ಮಾಡಬಲ್ಲೆ?’
ಕ್ಲಾರ ಫೋಲ್ಟ್ಜ್ ಎಂಬ ಯುವತಿಯನ್ನು ಆಕೆಯ ಪತಿ ತೊರೆದಿದ್ದ. ಅದರೊಟ್ಟಿಗೆ ಐದು ಮಕ್ಕಳು ಅವಳ ಕೊರಳನ್ನು ತಬ್ಬಿ ಹಿಡಿದಿದ್ದವು. ಅವರ ಬಾಯಿಗೆ ಗುಕ್ಕನ್ನಿಕ್ಕಿ, ಅವರ ಹಸಿವೆಯನ್ನು ತಣಿಸಿ, ವಿದ್ಯೆಯನ್ನು ನೀಡಿ ಅವರನ್ನು ಸಭ್ಯ ನಾಗರಿಕರನ್ನಾಗಿಸಬೇಕಿತ್ತು. ಅವಳ ಮತ್ತು ಅವಳ ಮಕ್ಕಳ ಸಕಲ ಸವಾಲುಗಳಿಗೆ ಮಿನುಗು ದೀಪವಾಗಿ ಆಕೆಗೆ ಕಂಡು ಬಂದ ಏಕೈಕ ಪರಿಹಾರವೆಂದರೆ ವಕೀಲಳಾಗಿ ದುಡಿಯುವುದು. ವಕೀಲಳಾಗುವ ಆಕೆಯ ಕನಸು ಯಾವ ಸಾಧನೆಯ ಸಲುವಾಗಿಯೂ ಕೂಡಾ ಮೂಡಿದುದಲ್ಲ. ಮಹಿಳಾ ಹೋರಾಟದ ನಿಟ್ಟಿನಲ್ಲಿ ಸುವರ್ಣಾಕ್ಷರಗಳನ್ನು ಛಾಪಿಸುವುದಕ್ಕಲ್ಲ, ಹೆಜ್ಜೆ ಗುರುತುಗಳನ್ನು ದಾಖಲಿಸುವುದಕ್ಕಲ್ಲ; ಬದಲಿಗೆ ದುಡಿಯಲೇ ಬೇಕಾದ ಒತ್ತಡ ಮತ್ತು ಹತಾಶೆ ಅವಳ ಮುಂದಿತ್ತು. ಕಾನೂನು ವಿದ್ಯಾಭ್ಯಾಸದ ಸಲುವಾಗಿ ಆಕೆ ಹೇಸ್ಟಿಂಗ್ಸ್ ಕಾಲೇಜ್ ಆಫ್ ಲಾಗೆ ಅರ್ಜಿಯನ್ನು ಸಲ್ಲಿಸಿದಾಗ ಅದು ತಿರಸ್ಕøತವಾದುದೂ ಅಲ್ಲದೆ, ಅದರೊಟ್ಟಿಗೆ ಕಾಲೇಜಿನ ಆಡಳಿತ ಮಂಡಳಿಯ ಕುಖ್ಯಾತ ಹೇಳಿಕೆಯೂ ಹೊರ ಬಂದಿತು: `ಮಹಿಳೆಯರ ಸ್ಕರ್ಟಿನ ಸರಬರ ಸದ್ದಿನಿಂದ ಪುರುಷ ವಿದ್ಯಾರ್ಥಿಗಳ ಏಕಾಗ್ರತೆಗೆ ಕುಂದು ಬರುತ್ತದೆ!’
ವಿಸ್‍ಕಾನ್‍ಸಿನ್ ಪ್ರಾಂತ್ಯದ ಲ್ಯಾವಿನಿಯ ಗುಡೆಲ್ 1858ರಲ್ಲಿ ವಕೀಲ ವೃತ್ತಿಯನ್ನು ಕೈಗೊಳ್ಳಬೇಕೆಂದು ನಿರ್ದರಿಸಿದಳು. ಆದರೆ ಯಾವ ಕಾನೂನು ಸಂಸ್ಥೆಯು ಕೂಡ ಆಕೆಯನ್ನು ನೇಮಿಸಿಕೊಳ್ಳಲು ಸಿದ್ಧವಿರಲಿಲ್ಲ. ಕೊನೆಗೆ ಆಕೆ ಸ್ವಂತವಾಗಿ ಕಾನೂನಿನ ಅಧ್ಯಯನವನ್ನು ಮಾಡಲಾರಂಭಿಸಿದಳು. ಆಕೆಯ ಅತೀವ ಆಸಕ್ತಿ ಮತ್ತು ಪರಿಶ್ರಮವನ್ನು ಗಮನಿಸಿದ ಜಾಕ್‍ಸನ್ ಮತ್ತು ನಾರ್‍ಕ್ರಾಸ್ ಸಂಸ್ಥೆಯು ಆಕೆಯನ್ನು ತನ್ನ ಸಂಸ್ಥೆಯಲ್ಲಿ ಸೇರಿಸಿಕೊಂಡಿತು. ಆಕೆಯ ಅವಿರತ ಶ್ರಮ ಮತ್ತು ಸಾಧನೆಯ ಛಲವು ಆ ಸಂಸ್ಥೆಯ ಪಾಲುದಾರನಾದ ನಾರ್‍ಕ್ರಾಸ್‍ನ ಮೇಲೆ ಅಪಾರ ಪ್ರಭಾವವನ್ನು ಬೀರಿತು. ವಿಸ್‍ಕಾನ್‍ಸಿನ್ ಬಾರ್‍ನಲ್ಲಿ ಪ್ರಾಕ್ಟೀಸ್ ಮಾಡಲು ಕೋರಿ ಬಂದ ಆಕೆಯ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಧೀಶರು ಆಕೆಯ ಕಾನೂನು ಪರಿಜ್ಞಾನ ಮತ್ತು ನೈತಿಕ ಮಟ್ಟವನ್ನು ಪರಿಶೀಲಿಸಲು ಅತ್ಯಂತ ಕಠಿಣ ಪರೀಕ್ಷೆಗೆ ಆಕೆಯನ್ನು ಗುರಿ ಪಡಿಸಿದರು. ಆಕೆಯ ಕೋರಿಕೆಯಂತೆ ಅನುಮತಿಯನ್ನು ನೀಡಿದರೂ ಆ ನ್ಯಾಯಾಧೀಶರಿಗೆ ಆಕೆಯ ಸಾಮಥ್ರ್ಯದ ಬಗ್ಗೆ ಅಪನಂಬಿಕೆ ಉಳಿದಿತ್ತು. ಆದರೆ ಅವರ ಸಂದೇಹಗಳಿಗೆ ತದ್ವಿರುದ್ಧವಾಗಿ ಆಕೆ ಆ ಪ್ರಾಂತ್ಯದಲ್ಲಿ ಅತ್ಯಂತ ಬೇಡಿಕೆಯ ವಕೀಲಳಾಗಿ ಪ್ರಸಿದ್ಧಿ ಪಡೆದಳು.
ಗುಡೆಲ್ ತನ್ನ ಒಂದು ಪ್ರಕರಣದ ಸಂದರ್ಭದಲ್ಲಿ ಆಕೆ ಸರ್ವೋಚ್ಚ ನ್ಯಾಯಾಲಯಕ್ಕೆ 1876ರಲ್ಲಿ ಮೇಲ್ಮನವಿಯನ್ನು ಸಲ್ಲಿಸಿದಾಗ, ಆಕೆಯ ಅರ್ಜಿಯು ತಿರಸ್ಕøತವಾಯಿತು. ಮುಖ್ಯ ನ್ಯಾಯಮೂರ್ತಿಯಾಗಿದ್ದ ಎಡ್ವರ್ಡ್ ಜಿ. ರಯಾನ್ ಆಕೆಯ ಅರ್ಜಿಯ ಬಗ್ಗೆ ತನ್ನ ಅಸಂತೊಷ ಮತ್ತು ಕ್ರೋಧವನ್ನು ವ್ಯಕ್ತ ಪಡಿಸಿದ್ದೂ ಅಲ್ಲದೆ, ಮಹಿಳೆಯರು ಕಾನೂನನ್ನು ಪ್ರಾಕ್ಟೀಸ್ ಮಾಡಲು ಯಾಕೆ ಸಾಧ್ಯವಿಲ್ಲ ಎಂಬುದರ ಬಗ್ಗೆ ಸುದೀರ್ಘ ವ್ಯಾಖ್ಯಾನವನ್ನು ನೀಡಿದರು. `ಈ ರಾಜ್ಯದ ಯಾವುದೇ ನ್ಯಾಯಾಲಯದಲ್ಲಿ ಪ್ರವೇಶ ಪಡೆಯಲು ಮಹಿಳೆಯರಿಗೆ ಯಾವುದೇ ಶಾಸನಬದ್ಧ ಅಧಿಕಾರವಿಲ್ಲವೆಂಬುದು ಸುಸ್ಪಷ್ಟವಾಗಿದೆ. ಕಾನೂನು ಕ್ಷೇತ್ರದಿಂದ ಮಹಿಳೆಯರನ್ನು ಹೊರಗಿಡುವ ಸಲುವಾಗಿ ಪ್ರಚಲಿತ ಸಾಮಾನ್ಯ ಕಾನೂನಿನ ವಿವೇಕವನ್ನು ನಾವು ಪ್ರಶಂಸೆ ಮಾಡಬೇಕಿದೆ. ಪ್ರಕೃತಿಯ ನಿಯಮವು ನಮ್ಮ ಜನಾಂಗದ ಮಕ್ಕಳನ್ನು ಹೆತ್ತು ಹೊತ್ತು ಪಾಲನೆ ಪೋಷಣೆ ಮಾಡುವ ಕರ್ತವ್ಯವನ್ನು ಮಹಿಳೆಯರ ಮೇಲೆ ಕಡ್ಡಾಯಗೊಳಿಸಿದೆ. ವಿಶ್ವದ ಮನೆಗಳ ಗೌರವವನ್ನು ಕಾಪಾಡುವ ಮತ್ತು ಪ್ರೀತಿ ಹಾಗೂ ಮರ್ಯಾದೆಯಿಂದ ಅದರ ನಿರ್ವಹಣೆ ಮಾಡಬೇಕಾದ ಜವಾಬುದಾರಿ ಅವರ ಮೇಲಿದೆ. ಅವರ ಲೈಂಗಿಕತೆಯ ಈ ಮೂಲಭೂತ ಮತ್ತು ಪವಿತ್ರ ಕರ್ತವ್ಯಗಳೊಂದಿಗೆ ರಾಜಿಯಾಗದ ಅಸಂಬದ್ಧ ಕಾರ್ಯವನ್ನು ಅವರು ಮಾಡುವಂತಿಲ್ಲ. ಕಾನೂನು ವೃತ್ತಿಯನ್ನು ಮಹಿಳೆಯರು ಕೈಗೊಳ್ಳುವುದು ಪ್ರಕೃತಿಯ ನಿಯಮಗಳ ಉಲ್ಲಂಘನೆಯಾಗಿದೆ. ಹಾಗೂ ರಾಜದ್ರೋಹದ ಘನ ಘೋರ ಅಪರಾಧವಾಗಿದೆ.’ ತದನಂತರ ಗುಡೆಲ್‍ನ ಅಪಾರ ಬೆಂಬಲಿಗರಲ್ಲಿ ಒಬ್ಬನಾದ ಮತ್ತು ಅಂದಿನ ಅಸೆಂಬ್ಲಿಯ ಸ್ಪೀಕರ್ ಆಗಿದ್ದ ಜಾನ್ ಕ್ಯಾಸೊಡೆ ಮಹಿಳೆಯರಿಗೆ ಕಾನೂನು ಪ್ರಾಕ್ಟೀಸ್ ಮಾಡಲು ಅವಕಾಶ ನೀಡುವ ಮಸೂದೆಯೊಂದನ್ನು ಮಂಡಿಸಿದ. ಹಾಗೂ 1877ರ ಮಾರ್ಚ್ 22ರಂದು ಈ ಬಗ್ಗೆ ಪೂರ್ಣಪ್ರಮಾಣದ ಶಾಸನವು ರೂಪುಗೊಂಡಿತು. ಎರಡು ವರ್ಷಗಳ ನಂತರ ಗುಡೆಲ್ ಅದೆ ನ್ಯಾಯಮೂರ್ತಿ ರಯಾನ್ ಸಮ್ಮುಖದಲ್ಲಿ ಸಮರ್ಥವಾಗಿ ವಾದವನ್ನು ಮಂಡಿಸಿದಳು.
ಸಾರಾ ಕಿಲ್ಗೋರೆ ಕೂಡಾ ಈ ನಿಟ್ಟಿನ ಇನ್ನೊಂದು ಪ್ರಮುಖ ಹೆಸರು. ಆಕೆ ಕಾನೂನು ವ್ಯಾಸಂಗ ಮಾಡಿದರೂ ಕೂಡಾ ಆಕೆಗೆ ಪ್ರಾಕ್ಟೀಸ್ ಮಾಡಲು ಇಂಡಿಯಾನಪೆÇಲಿಸ್ ಪ್ರಾಂತ್ಯದ ಕಾನೂನುಗಳ ಅಡಿಯಲ್ಲಿ ಅವಕಾಶವನ್ನು ನಿರಾಕರಿಸಲಾಗಿತ್ತು. ಆಕೆಯೂ ಕೂಡಾ ಹೋರಾಟದ ಮೂಲಕ ತನ್ನ ಹಕ್ಕನ್ನು ಮರಳಿ ಪಡೆದಳು.
ಮೈರಾ ಬ್ರಾಡ್‍ವೆಲ್ ಎಂಬ ಮಹಿಳೆಯ ಇನ್ನೊಂದು ಆಸಕ್ತಿಕರ ಹೋರಾಟದ ಘಟ್ಟವನ್ನು ದಾಖಲಿಸಬಹುದಾಗಿದೆ. ಇಲಿನಾಯ್ ಪ್ರಾಂತ್ಯದ ಸವೋಚ್ಚ ನ್ಯಾಯಾಲಯವು ಆಕೆಯ ಅರ್ಜಿಯನ್ನು ತಿರಸ್ಕರಿಸಿದ್ದೂ ಅಲ್ಲದೆ, ‘ಆಕೆಯು ವಿವಾಹಿತಳಾಗಿರುವುದರಿಂದ ಅವಳ ವೈವಾಹಿಕ ಸ್ಥಿತಿಯು ಆಕೆಯು ಕಕ್ಷಿದಾರರ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳುವ ಸಾಮಥ್ರ್ಯವನ್ನು ಕುಂಠಿತಗೊಳಿಸುತ್ತದೆ’ ಎಂಬ ತೀರ್ಪನ್ನು ನೀಡಿತು. ಆಕೆ ಮಹಿಳೆ ಹಾಗೂ ಆಕೆಯು ವಿವಾಹಿತಳು ಎಂಬ ಅಂಶವು ಆಕೆಯ ಅರ್ಹತೆ- ಅನರ್ಹತೆಯ ಮಾನದಂಡವೆಂದು ಒಂದು ಘನತೆವೆತ್ತ ನ್ಯಾಯಾಲಯವು ತೀರ್ಮಾನಿಸಿದ್ದೂ ಅಲ್ಲದೆ, ನ್ಯಾಯದಾನ ಪದ್ಧತಿಯಲ್ಲಿ ಮಹಿಳೆಯ ಭಾಗವಹಿಸುವಿಕೆಯು ಕುಂದನ್ನುಂಟು ಮಾಡುತ್ತದೆ ಎಂದು ಷರಾ ಕೂಡಾ ಬರೆಯಿತು. ಆಕೆ ಅಮೆರಿಕಾದ ಸರ್ವೋಚ್ಚ ನ್ಯಾಯಾಲಯಕ್ಕೆ ರಿಟ್ ಅರ್ಜಿಯನ್ನು ಸಲ್ಲಿಸಿ ನ್ಯಾಯವನ್ನು ಕೋರಿದಾಗ, ಸದರಿ ನ್ಯಾಯಾಲಯವು ಇಲಿನಾಯ್ ಪ್ರಾಂತ್ಯದ ನ್ಯ್ಯಾಯಾಲಯದ ತೀರ್ಪನ್ನ ಎತ್ತಿ ಹಿಡಿದಿದ್ದೂ ಅಲ್ಲದೆ, `ಸೃಷ್ಟಿಕರ್ತನ ಕಾನೂನು ಕೂಡಾ ಮಹಿಳೆಯರ ಕಾರ್ಯ ವ್ಯಾಪ್ತಿಯ ಬಗ್ಗೆ ಮಿತಿಗಳನ್ನು ಹೇರಿದೆ’ ಎಂದು ಅಭಿಪ್ರಾಯ ಪಟ್ಟಿತು. ನಿರಂತರವಾದ ಅಪಮಾನ, ನಿಂದನೆ ಮತ್ತು ಅಪಹಾಸ್ಯಕ್ಕೆ ಒಳಗಾದ ಆಕೆ ಹತಾಶಳಾಗಿ ತನ್ನ ಕಾನೂನು ಹೋರಾಟವನ್ನು ನಿಲ್ಲಿಸಿದಳು. ಆಕೆ ಬಯಸದಿದ್ದರೂ ಆಕೆಯ ಹೋರಾಟವು ಬ್ರಾಡ್‍ವೆಲ್ ವರ್ಸಸ್ ಇಲಿನಾಯ್ ಎಂದು ಕಾನೂನು ಚರಿತ್ರೆಯಲ್ಲಿ ದಾಖಲಾಯಿತು. ನಂತರ ಆ ಪ್ರಕರಣವು ಅಮೆರಿಕಾದ ನ್ಯಾಯಾಲಯಗಳಲ್ಲಿ ಮಹಿಳೆಯರಿಗೆ ಕಾನೂನು ಕ್ಷೇತ್ರದಲ್ಲಿ ಪ್ರವೇಶಾವಕಾಶವನ್ನು ತೆರೆಯಲು ಕಾರಣೀಭೂತವಾಯಿತು. ಆಕೆ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಸಾವಿನಂಚಿಗೆ ತಲುಪಿದ್ದಳು. ಆಗ ಆಕೆಯ ಪತಿಯಾದ ಜೇಮ್ಸ್ ಬ್ರಾಡ್‍ವೆಲ್ ನ್ಯಾಯಾಲಯದ ಮೇಲೆ ಪ್ರಭಾವವನ್ನು ಬೀರಿ ಆಕೆಗೆ ಬಾರ್‍ನಲ್ಲಿ ಪ್ರವೇಶಾವಕಾಶವನ್ನು ನೀಡುವಂತೆ ಮನ ಒಲಿಸಿದ. ಹಾಗೂ ಅರ್ಜಿ ದಿನಾಂಕದಿಂದ ಅಂದರೆ ಎರಡು ವರ್ಷ ಹಿಂದಿನಿಂದಲೇ ಆಕೆಯ ನೋಂದಾವಣೆಯನ್ನು ದೃಢೀಕರಿಸಬೇಕೆಂದು ಕೋರಿದ. ತದನಂತರ ಎರಡು ವರ್ಷಗಳ ನಂತರ ಅಂದರೆ 1894ರಲ್ಲಿ ಆಕೆಯ ಸಾವಿನ ಕೆಲವೇ ತಿಂಗಳು ಮುಂಚಿತವಾಗಿ ಅಮೆರಿಕಾದ ಸರ್ವೋಚ್ಚ ನ್ಯಾಯಾಲಯವು ತನ್ನ ತೀರ್ಪಿಗೆ ಅಂಕಿತವನ್ನು ಹಾಕಿ ಆಕೆಗೆ ಸನ್ನದನ್ನು ನೀಡಿತು. ಹಿಂದೆ ಆಕೆಗೆ ಪ್ರವೇಶಾವಕಾಶವನ್ನೇ ನಿರಾಕರಿಸಿದ್ದ ಇಲಿನಾಯ್ ಬಾರ್ ಅಸೋಸಿಯೇಷನ್ ಆಕೆಯನ್ನು `ಪಯೋನಿಯರ್ ವುಮನ್ ಲಾಯರ್’ ಎಂದು ಸಂಬೋಧಿಸಿ ಗೌರವಿಸಿತು.
ಅಂತರರಾಷ್ಟ್ರೀಯ ಮಟ್ಟದಲ್ಲಿ ಸದರಿ ಘಟನೆಗಳು ನಡೆಯುತ್ತಿದ್ದ ಸಂದರ್ಭದಲ್ಲಿ 1866ರಲ್ಲಿ ಜನ್ಮ ತಳೆದ ಕಾರ್ನೆಲಿಯಾ ಸೊರಾಬ್ಜಿ ಎಂಬ ಭಾರತೀಯ ಸಂಜಾತೆಯು ಆಕ್ಸ್‍ಫರ್ಡ್ ವಿಶ್ವವಿದ್ಯಾಲಯದಲ್ಲಿ ಕಾನೂನು ವಿದ್ಯಾಭ್ಯಾಸವನ್ನು ಪಡೆದ ಮೊದಲ ಮಹಿಳೆಯಾಗಿ ಇತಿಹಾಸದಲ್ಲಿ ದಾಖಲಾದಳು. ಹಾಗೂ ಭಾರತ ಮತ್ತು ಬ್ರಿಟನ್‍ನಲ್ಲಿ ಪ್ರ್ರಾಕ್ಟೀಸ್ ಮಾಡಿದ ಮೊದಲ ಭಾರತೀಯ ಮಹಿಳೆಯಾಗಿದ್ದಳು. 2012ರಲ್ಲಿಲಂಡನ್ನಿನ ಲಿಂಕನ್ಸ್ ಇನ್‍ನಲ್ಲಿ ಆಕೆಯ ಪ್ರತಿಮೆಯನ್ನು ಅನಾವರಣಗೊಳಿಸಿ ಗೌರವಿಸಿದರು. ಆಕೆಯ ಹಿಂದಿನ ಪೀಳಿಗೆಯ ಮಹಿಳೆಯರು ನಡೆಸಿದ ಹೋರಾಟವು ಆಕೆಯ ಹಾದಿಯನ್ನು ಸುಗಮಗೊಳಿಸಿತು.
ಈ ನಿಟ್ಟಿನಲ್ಲಿ ಸುಮಾರು 160 ವರ್ಷಗಳಿಂದ ನಡೆದ ಹೋರಾಟವು ಸಾಮಾಜಿಕವಾಗಿ ವಿಭಿನ್ನವಾದ ಫಲಿತಾಂಶಗಳನ್ನು ನೀಡಿದೆ. ಅಮೆರಿಕಾದಲ್ಲಿ ಕಾನೂನು ವೃತ್ತಿಯು ಮಹಿಳೆಯರ ಆಡುಂಬೊಲವಾಗಿ ಮಾರ್ಪಟ್ಟಿದೆ. ಅಮೆರಿಕಾದಲ್ಲಿ ವಕೀಲವೃತ್ತಿಯಲ್ಲಿ ತೊಡಗಿರುವವರ ಪೈಕಿ 60% ಮಂದಿ ಮಹಿಳೆಯರಿದ್ದಾರೆ ಎಂದು ಅಂಕಿ ಅಂಶಗಳು ದೃಢೀಕರಿಸುತ್ತವೆ. ಆದರೆ ಅಲ್ಲಿಯೂ ಕೂಡ ಕಂಡು ಬರುವ ಕಟುವಾಸ್ತವ ಎಂದರೆ ಮಹಿಳೆಯರು ಕಾನೂನು ಸಂಸ್ಥೆಗಳಲ್ಲಿ ಉದ್ಯೋಗಿಗಳಾಗಿ ಮಾತ್ರ ಕಂಡುಬರುತ್ತಾರೆ. ಕಾನೂನು ಸಂಸ್ಥೆಯ ಪಾಲುದಾರರು ಅಥವಾ ನಿರ್ದೇಶಕರ ಸ್ಥಾನಮಾನ ಅವರಿಗೆ ಮರೀಚಿಕೆಯಾಗಿಯೇ ಉಳಿದಿದೆ. ಭಾರತದ ಸಂದರ್ಭದಲ್ಲಿ ಮಹಿಳಾ ವಕೀಲರು ತಮ್ಮದೇ ಆದ ಛಾಪನ್ನು ಮೂಡಿಸುವುದರ ಮೂಲಕ ಪುರುಷ ಲೋಕದ ತಾರತಮ್ಯಗಳನ್ನು ಯಶಸ್ವಿಯಾಗಿ ಎದುರಿಸಿ ಅನೇಕ ಮಹಿಳಾ ಪರ ಕಾನೂನುಗಳು ರೂಪುಗೊಳ್ಳುವಲ್ಲಿ ಸಕ್ರಿಯ ಪಾತ್ರವನ್ನು ವಹಿಸಿದ್ದಾರೆ.
ಬಾನು ಮುಷ್ತಾಕ್
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.