ಸ್ವರ – ಸನ್ನಿಧಿ/ ಗಾಯನದ ಅನಭಿಷಕ್ತ ರಾಣಿ ಗಿರಿಜಾದೇವಿ – ಡಾ.ಎನ್.ಜಗದೀಶ್ ಕೊಪ್ಪ

ಶುದ್ಧ ಶಾಸ್ತ್ರೀಯ ಸಂಗೀತದಲ್ಲಿ ಬಿಹಾರ ಮತ್ತು ಪೂರ್ವ ಉತ್ತರ ಪ್ರದೇಶದ ದೇಸಿ ಗೀತೆಗಳನ್ನು ಜನಪ್ರಿಯಗೊಳಿಸಿದವರು ಠುಮ್ರಿ ಗಾಯನದ ರಾಣಿ  ಎನಿಸಿಕೊಂಡಿದ್ದ  ವಿದುಷಿ ಗಿರಿಜಾದೇವಿ.  ಸಂಗೀತಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದಅವರ ಜೀವನದ ಯಶೋಗಾಥೆಯ ಇಣುಕು ನೋಟ

ಹಿಂದೂಸ್ತಾನಿ ಸಂಗೀತದ ಪ್ರಕಾರಗಳಲ್ಲಿ ಒಂದಾದ ಹಾಗೂ ಅರೆ ಶಾಸ್ತ್ರೀಯವಾದ ಠುಮ್ರಿ ಗಾಯನದಲ್ಲಿ ಕಳೆದ ಅರವತ್ತು ವರ್ಷಗಳಿಂದ ತಮ್ಮ ಛಾಪು ಮೂಡಿಸಿದ್ದ ಮತ್ತು ಠುಮ್ರಿ ಗಾಯನದ ರಾಣಿ ಎಂದು ಕರೆಯುಲಾಗುತ್ತಿದ್ದ ಬನಾರಸ್ ಮೂಲದ ಶ್ರೀಮತಿ ಗಿರಿಜಾದೇವಿ ಕಳೆದ ವರ್ಷ ಅಕ್ಟೋಬರ್ 24 ರಂದು ಕೊಲ್ಕತ್ತ ನಗರದಲ್ಲಿ ತಮ್ಮ 88 ನೇ ವಯಸ್ಸಿನಲ್ಲಿ ನಿಧನರಾದರು. ಇದರೊಂದಿಗೆ ಭವ್ಯವಾದ ಠುಮ್ರಿ ಗಾಯನದ ಯುಗವೊಂದು ಭಾರತದಲ್ಲಿ ಅಂತ್ಯಗೊಂಡಂತಾಯಿತು.

ಗಿರಿಜಾದೇವಿಯವರು ಇಂದು ಭೌತಿಕವಾಗಿ ನಮ್ಮೊಡನೆ ಇಲ್ಲವಾದರೂ, ಅವರ ಕಂಠಸಿರಿಯಲ್ಲಿ ಮೊಳಗಿದ ಠುಮ್ರಿ, ಟಪ್ಪಾ, ದ್ರುಪದ್, ಖಯಾಲ್ ಪ್ರಕಾರದ ಗೀತ ಗಾಯನಗಳು ಮತ್ತು ಬಿಹಾರ ಹಾಗೂ ಪೂರ್ವ ಉತ್ತರಪ್ರದೇಶದ ಪ್ರಾದೇಶಿಕ ಜನಪದ ಗೀತೆಗಳು ಸಂಗೀತ ರಸಿಕರ ಎದೆಯಲ್ಲಿ ಜೀವಂತವಾಗಿದ್ದು ಅವರ ಹೆಸರನ್ನು ಹಿಂದೂಸ್ತಾನಿ ಸಂಗೀತದಲ್ಲಿ ಶಾಶ್ವತಗೊಳಿಸಿವೆ. ಸದಾ ಶ್ವೇತ ವರ್ಣದ ಉಡುಪು, ಬೆಳ್ಳಿಯ ಎಳೆಗಳಂತಂಹ ಅಚ್ಚ ಬಿಳಿಗೂದುಲು, ಸದಾ ಹಣೆಯಲ್ಲಿ ರಾರಾಜಿಸುತ್ತಿದ್ದ ಶ್ರೀಗಂಧದ ತಿಲಕ, ಬಾಯಿತುಂಬಾ ಹಾಕಿಕೊಂಡು ಜಗಿಯುತ್ತಿದ್ದ ಬನಾರಸ್ ತಂಬೂಲ, ಕಚೇರಿಯ ಗಾಯನದ ಮಧ್ಯ ತಮ್ಮ ಕರವಸ್ತ್ರದಿಂದ ಕೆಂಪು ತುಟಿಯನ್ನು ಪದೇ ಪದೇ ಒರೆಸಿಕೊಳ್ಳುತ್ತಿದ್ದ ವೈಖರಿ, ತಬಲಾ ವಾದಕನನ್ನು ಉತ್ತೇಜಿಸುತ್ತಿದ್ದ ಪರಿ ಇವೆಲ್ಲವೂ ಗಿರಿಜಾದೇವಿಯವರನ್ನು ಸಂಗೀತ ರಸಿಕರು ಮರೆಯಲಾಗದಂತೆ ಮಾಡುವ ಸಂಗತಿಗಳಾಗಿವೆ.

ಹಿಂದೂಸ್ತಾನಿ ಸಂಗೀತದ ಪ್ರಕಾರದಲ್ಲಿ ಖಯಾಲ್ ಮತ್ತು ದ್ರುಪದ್ ನಂತರ ಪ್ರಮುಖವಾದ ಠುಮ್ರಿ ಗಾಯನವನ್ನು ಗಂಭೀರವಾದ ಪ್ರಕಾರ ಎಂದು ಪರಿಗಣಿಸುತ್ತಿರಲಿಲ್ಲ. ನಮ್ಮ ಕರ್ನಾಟಕ ಸಂಗೀತದ ಜಾವಳಿ ಪ್ರಕಾರಗಳಂತೆ ಹೆಚ್ಚು ಶೃಂಗಾರ ಸಾಹಿತ್ಯವನ್ನು ವಿಶೇಷವಾಗಿ ಶ್ರೀಕೃಷ್ಣ ಮತ್ತು ರಾಧೆಯ ಕುರಿತಾಗಿ ಇರುವ ಸಾಹಿತ್ಯವನ್ನು ಒಳಗೊಂಡಿರುವ ಠುಮ್ರಿ ಗಾಯನವು ಬನಾರಸ್, ಲಕ್ನೊ ಮತ್ತು ಪಂಜಾಬ್ ಎಂಬ ಮೂರು ಶೈಲಿಗಳನ್ನು ಒಳಗೊಂಡಿದೆ. ಲಖನೌ ಶೈಲಿಯ ಠುಮ್ರಿ ಗಾಯನವು ಅತ್ಯಂತ ಹೆಚ್ಚು ರೋಚಕತೆಯಿಂದ ಮತ್ತು ಶೃಂಗಾರ ಹಾಗೂ ಪ್ರಣಯದ ಭಾವಗಳ ವರ್ಣನೆಯ ವೈಭವದಿಂದ ಕೂಡಿತ್ತು. ಈ ಶೈಲಿಯ ಹಾಡುಗಾರಿಕೆಯಲ್ಲಿ ಗಜಲ್ ರಾಣಿ ಎಂದು ಹೆಸರಾದ ಬೇಗಂ ಅಕ್ತರ್ ಪ್ರಖ್ಯಾತರಾಗಿದ್ದರು. ಇದಕ್ಕೆ ತದ್ವಿರುದ್ಧವಾಗಿ ಬನಾರಸ್ ಠುಮ್ರಿಯು ಬೋಲ್ ಬನಾವ್ ಶೈಲಿಯಿಂದ ಪ್ರಖ್ಯಾತವಾಯಿತು. ಈ ಶೈಲಿಯನ್ನು ಪೂರಬ್ ಅಂಗ್ ಎಂದೂ ಸಹ ಕರೆಯುತ್ತಾರೆ. ಇದನ್ನು ಮುನ್ನೆಲೆಗೆ ತಂದವರಲ್ಲಿ ಅಜಂಬಾಯ್, ಬಡಿ ಮೋತಿಬಾಯ್, ಸಿದ್ದೇಶ್ವರಿದೇವಿ, ಚನ್ನುಲಾಲ್‍ಮಿಶ್ರ ಪ್ರಮುಖರು. ಈ ಪರಂಪರೆಯನ್ನು ಮುಂದುವರಿಸಿದ ಕೀರ್ತಿ ಗಿರಿಜಾದೇವಿಯವರದು. ಠುಮ್ರಿ ಗಾಯನಕ್ಕೆ ಅನುಭಾವದ ಸ್ವರ್ಶವನ್ನು ನೀಡುವುದರ ಜೊತೆಗೆ ಅದನ್ನು ಶುದ್ಧ ಅನುಭಾವದ ಗಾಯನ ಪ್ರಕಾರವಾಗಿ ಪರಿವರ್ತಿಸಿ ಅದಕ್ಕೆ ಘನತೆ ಮತ್ತು ಗೌರವವನ್ನು ತಂದುಕೊಟ್ಟರು. ತಮ್ಮ ಆರು ದಶಕಗಳ ದಣಿವರಿಯದ ಇಂತಹ ಸಂಗೀತ ಸೇವೆಗಾಗಿ ಅವರು ಕೇಂದ್ರ ಸರ್ಕಾರದಿಂದ 1972 ರಲ್ಲಿ ಪದ್ಮಶ್ರೀ ಪ್ರಶಸ್ತಿ, 1989 ರಲ್ಲಿ ಪದ್ಮಭೂಷಣ ಮತ್ತು 2016ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗೆ ಪಾತ್ರರಾದರು.

1929 ರಲ್ಲಿ ಬನಾರಸ್ ನಗರದ ಶ್ರೀಮಂತ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಗಿರಿಜಾದೇವಿಯವರು ತಮ್ಮ ಐದನೆಯ ವಯಸ್ಸಿನಲ್ಲಿ ಪ್ರಖ್ಯಾತ ಸಾರಂಗಿ ವಾದಕ ಮತ್ತು ಖ್ಯಾಲ್ ಗಾಯಕ ಸರ್ಜುಪ್ರಸಾದ್ ಮಿಶ್ರಾ ಅವರ ಬಳಿ ಖಯಾಲ್ ಮತ್ತು ಟಪ್ಪಾ ಹಾಗೂ ಠುಮ್ರಿ ಗಾಯನವನ್ನು ಅಭ್ಯಾಸ ಮಾಡಿದರು. ಅವರ ತಂದೆಗೆ ಸಂಗೀತದಲ್ಲಿ ಅಪಾರವಾದ ಆಸಕ್ತಿ ಇದ್ದುದರ ಜೊತೆಗೆ ಹಾರ್ಮೋನಿಯಂ ನುಡಿಸುವುದರಲ್ಲಿ ಪ್ರವೀಣರಾಗಿದ್ದರು. ಹಾಗಾಗಿ ತಮ್ಮ ಮನೆಗೆ ಸಂಗೀತ ವಿದ್ವಾಂಸರನ್ನು ಆಹ್ವಾನಿಸುವುದರ ಮೂಲಕ ತಮ್ಮ ಪುತ್ರಿಯ ಸಂಗೀತದ ಆಸಕ್ತಿಯನ್ನು ನಿರಂತರವಾಗಿ ಪೋಷಿಸುತ್ತಾ ಬಂದರು. ಆ ಕಾಲದಲ್ಲಿ ಸ್ವರ ಶುದ್ಧತೆಗಾಗಿ ಸಾರಂಗಿಯ ವಾದನದೊಡನೆ ಸಂಗೀತ ಕಲಿಸುವ ಪದ್ಧತಿಯು ಚಾಲ್ತಿಯಲ್ಲಿತ್ತು. ಗಿರಿಜಾದೇವಿಯವರು ಯಮನ್, ಭೈರವಿ, ಬಿಲಾವಲ್ ನಂತಹ ಪ್ರಮುಖ ರಾಗಗಳಲ್ಲಿ ಖಯಾಲ್ ಗಾಯನವನ್ನು ಅಭ್ಯಾಸ ಮಾಡಿ, ಆನಂತರ ಠುಮ್ರಿ ಮತ್ತು ಟಪ್ಪಾ ಗಾಯನವನ್ನು ಕಲಿತರು. ನಂತರದ ದಿನಗಳಲ್ಲಿ ಚಾಂದ್ ಮಿಶ್ರಾ ಎಂಬುವರ ಬಳಿ ತಮ್ಮ ಸಂಗೀತಾಭ್ಯಾಸವನ್ನು ಮುಂದುವರಿಸಿದ ಅವರನ್ನು 1944 ರಲ್ಲಿ ಅಲಹಾಬಾದ್ ನಗರದ ಶ್ರಿಮಂತ ಕುಟಂಬಕ್ಕೆ ವಿವಾಹ ಮಾಡಿಕೊಡಲಾಯಿತು. ಐದು ವರ್ಷಗಳ ಕಾಲ ಸಂಗೀತ ಲೋಕದಿಂದ ದೂರವಿದ್ದ ಗಿರಿಜಾದೇವಿಯವರು, ಒಂದು ಮಗು ಜನಿಸಿದ ನಂತರ, 1949 ರಲ್ಲಿ ಅಲಹಾಬಾದ್ ಅಕಾಶವಾಣಿಯಲ್ಲಿ ಸಂಗೀತ ಕಾರ್ಯಕ್ರಮ ನೀಡುವುದರ ಮೂಲಕ ಪುನಃ ಸಂಗೀತದ ಜೀವನಕ್ಕೆ ಮರಳಿದರು. ಶ್ರೀಮಂತ ಹಾಗೂ ಬ್ರಾಹ್ಮಣ ಕುಟುಂಬದ ಹೆಣ್ಣು ಮಕ್ಕಳು ಸಾರ್ವಜನಿಕವಾಗಿ ಸಂಗೀತ ಕಚೇರಿ ನಡೆಸಿಕೊಡುವುದು ಅಪಮಾನಕರ ಸಂಗತಿ ಎಂದು ಭಾವಿಸಿದ್ದ ಆ ಕಾಲಘಟ್ಟದಲ್ಲಿ ಎಲ್ಲಾ ಸಂಪ್ರದಾಯ ಮತ್ತು ನಂಬಿಕೆಗಳನ್ನು ಬದಿಗೊತ್ತಿದ ಗಿರಿಜಾದೇವಿಯವರು ತಮ್ಮ ತಾಯಿ ಮತ್ತು ಅಜ್ಜಿಯವರ ವಿರೋಧವನ್ನು ಲೆಕ್ಕಿಸಿದೆ ಬಿಹಾರದಲ್ಲಿ 1951 ರಲ್ಲಿ ಪ್ರಥಮ ಸಂಗೀತ ಕಚೇರಿಯನ್ನು ನಡೆಸಿಕೊಟ್ಟರು.

1960 ರಲ್ಲಿ ಕೊಲ್ಕತ್ತ ನಗರದಲ್ಲಿದ್ದ ಐ.ಟಿ.ಸಿ. ಕಂಪನಿಯ ಸಂಗೀತ್ ರೀಸರ್ಚ್ ಅಕಾಡೆಮಿ ಸಂಸ್ಥೆಗೆ ಸಂಗೀತ ಉಪನ್ಯಾಸಕಿಯಾಗಿ ಸೇರಿದ ಅವರು ನೂರಾರು ಶಿಷ್ಯ ಶಿಷ್ಯೆಯರನ್ನು ತಯಾರು ಮಾಡಿದರು. 1980 ರಿಂದ 2009 ರವರೆಗೆ ಬನಾರಸ್ ನ ಹಿಂದೂ ವಿಶ್ವ ವಿದ್ಯಾನಿಲಯದಲ್ಲಿ ಸೇವೆ ಸಲ್ಲಿಸುತ್ತಾ, ದೇಶದ ವಿವಿಧ ಭಾಗಗಳಲ್ಲಿ ಸಂಗೀತ ಕಚೇರಿ ನಡೆಸಿಕೊಡುತ್ತಾ ಠುಮ್ರಿ ಗಾಯನವನ್ನು ಜನಪ್ರಿಯಗೊಳಿಸಿದರು.
15 ನೇ ಶತಮಾನದಿಂದಲೂ ಅಸ್ತಿತ್ವದಲ್ಲಿರುವ ಠುಮ್ರಿ ಗಾಯನವು ೧೯ ನೇ ಶತಮಾನದಲ್ಲಿ ಅವಧ್ ಸಂಸ್ಥಾನದ ದೊರೆ ವಾಜಿದ್ ಆಲಿ ಷಾ ಹಾಗೂ ಅವನ ಆಸ್ಥಾನದಲ್ಲಿದ್ದ ಸಾದಿಕ್ ಆಲಿಖಾನ್ ಇವರ ಮೂಲಕ ಹೊಸರೂಪ ಪಡಿಯಿತು. ಬಹುತೇಕ ಠುಮ್ರಿಗಳು ಹಿಂದೂಸ್ತಾನಿ ಸಂಗೀತದಲ್ಲಿ ಭೈರವಿ ರಾಗವನ್ನು ಹೊರತು ಪಡಿಸಿದರೆ, ಅಷ್ಟೇನು ಘನವಲ್ಲದ ಪೀಲೂ, ತಿಲ್ಲಾಣ್, ದೇಶ್ ಖಮಾಜ್ ನಂತಹ ರಾಗಗಳಲ್ಲಿವೆ. ಬನಾರಸ್ ಘರಾನೆಯ ಠುಮ್ರಿ ಗಾಯನವು ಬೋಲ್ ಬನಾವ್ ಅಂದರೆ, ಬಂದಿಶ್ ಎಂದು ಕರೆಯಲಾಗುವ ಸಂಗೀತದ ಸಾಹಿತ್ಯ ಅಥವಾ ಪದಗಳನ್ನು ಭಾವಪೂರ್ಣವಾಗಿ ಹಾಗೂ ಕೇಳುಗರ ಎದೆಗೆ ನಾಟುವಂತೆ ಹೃದಯಸ್ಪರ್ಶಿಯಾಗಿ ಹಾಡುವುದು ಇದರಲ್ಲಿ ಗಿರಿಜಾ ದೇವಿಯವರು ನಿಪುಣೆಯಾಗಿದ್ದರು. ಬನಾರಸ್ ಘರಾನೆಯಲ್ಲಿ ಪ್ರಮುಖವಾಗಿ ಚೌಮುಖಿ ಗ್ಯಾನ್ ಎಂಬ ಹೆಸರಿನಲ್ಲಿ ಖಯಾಲ್, ಠುಮ್ರಿ, ಟಪ್ಪಾ ಮತ್ತು ದ್ರುಪದ್ ಪ್ರಕಾರಗಳನ್ನು ಕಲಿಸುವುದು ವಾಡಿಕೆ. ಈ ಪರಂಪರೆಯಲ್ಲಿ ಬೆಳೆದು ಬಂದಿದ್ದ ಗಿರಿಜಾದೇವಿಯರು ತಮ್ಮ ಶಿಷ್ಯರಿಗೆ ಸಂಗೀತದ ಜೊತೆಗೆ ಬನಾರಸ್ ಹಿಂದಿಯ ಉಚ್ಚಾರಣೆಯ ಶೈಲಿಯನ್ನು ಸಹ ಕಲಿಸುತ್ತಿದ್ದರು.

ಗಿರಿಜಾದೇವಿಯವರು ಸಂಪ್ರದಾಯದಂತೆ ಕಚೇರಿಯಲ್ಲಿ ಖಯಾಲ್ ಗಾಯನವನ್ನು ಪ್ರಸ್ತುತ ಪಡಿಸಿ, ನಂತರ ಅರ್ಧ ಭಾಗವನ್ನು ಅರೆ ಶಾಸ್ತ್ರೀಯ ರಚನೆಗಳಾದ ಟಪ್ಪಾ ಮತ್ತು ಠುಮ್ರಿಯನ್ನು ಹಾಡುತ್ತಿದ್ದರು. ಖಯಾಲ್ ಪ್ರಖಾರದ ಪ್ರಖ್ಯಾತಿಯಲ್ಲಿ ಮಾನ್ಯತೆ ಕಳೆದುಕೊಳ್ಳುತ್ತಿದ್ದ ಠುಮ್ರಿ ಗಾಯನಕ್ಕೆ ಹೆಚ್ಚು ಹೆಚ್ಚು ಒತ್ತು ನೀಡುತ್ತಾ ಬಂದ ಫಲವಾಗಿ ಭಾರತದಲ್ಲಿ ಇದು ಜನಪ್ರಿಯವಾಯಿತು. ಲೋಕಸಂಗೀತ ಎಂದು ಉತ್ತರ ಭಾರತದಲ್ಲಿ ಜನಪ್ರಿಯವಾಗಿದ್ದ ಜನಪದ ಗೀತೆಗಳನ್ನು ಕಚೇರಿಯಲ್ಲಿ ಹಾಡುವುದರ ಮೂಲಕ ಅವುಗಳಿಗೆ ಮಾನ್ಯತೆ ದೊರಕಿಸಿಕೊಟ್ಟ ಕೀರ್ತಿ ಇವರಿಗೆ ಸಲ್ಲುತ್ತದೆ. ಠುಮ್ರಿ ಗಾಯನದಲ್ಲಿ ಸಂಗೀತ ಸಾಹಿತ್ಯ ಅಂದರೆ, ಅದರೊಳಗಿನ ಕಾವ್ಯದ ಗುಣಕ್ಕೆ ಅವರು ಸ್ಪಂದಿಸಿ ಹಾಡುತ್ತಿದ್ದ ರೀತಿ ಬೆರಗು ಮೂಡಿಸುವಂತಿತ್ತು. ಸಾಮಾನ್ಯವಾಗಿ ಅವರು ಬನಾರಸ್ ಘರಾಣಾದ  ಠುಮ್ರಿಗಳಲ್ಲಿ ಇರುವ ದೇಶ್, ತಿಲಕ್, ಕಾಮೋದ್, ಕಾಫಿ, ಭೈರವಿ ಮತ್ತು ಬಿಹಾಣ್ ರಾಗಗಳಲ್ಲಿ ಮಾತ್ರ ಹಾಡುತ್ತಿದ್ದರು.

ಸಂಗೀತ ಸೇವೆಗೆ ನಿವೃತ್ತಿ ಇಲ್ಲ ಎಂದು ನಂಬಿದ್ದ ಅವರು ಠುಮ್ರಿಯನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಶಹನಾಯ್ ವಾದನದಲ್ಲಿ ಭಾರತದಲ್ಲಿ ದಂತ ಕಥೆಯಂತೆ ಬದುಕಿ, ಬಾಳಿದ ಪಂಡಿತ್ ಬಿಸ್ಮಿಲ್ಲಾ ಖಾನ್, ಸರೋದ್ ವಾದಕ ಉಸ್ತಾದ್ ಅಮ್ಜದ್ ಆಲಿಖಾನ್, ಕೊಳಲು ವಾದಕ ರೋಣ್ ಮುಜಂದಾರ್ ಮುಂತಾದ ದಿಗ್ಗಜರ ಜೊತೆ ನಡೆಸಿಕೊಟ್ಟರುವ ಜುಗಲ್ ಬಂದಿ ಕಾರ್ಯಕ್ರಮಗಳು ಅವಿಸ್ಮರಣೀಯವಾಗಿವೆ. ಇವಲ್ಲದೆ, ತಬಲಾ ಮಾಂತ್ರಿಕ ಜಾಕಿರ್ ಹುಸೇನ್ ಜೊತೆ ನಡೆಸಿಕೊಟ್ಟಿರುವ ಸಂಗೀತ ಕಾರ್ಯಕ್ರಮಗಳು ಮತ್ತು ರವಿಕಿಬ್ಲು ಎಂಬ ಗಾಯಕನೊಡಗೂಡಿ ಕಜ್ರಿ ಎಂಬ ಗಾಯನ ಪ್ರಕಾರವನ್ನು ಹಾಡಿರುವ ಶೈಲಿ ಇವುಗಳು ಶ್ರೀಮತಿ ಗಿರಿಜಾದೇವಿಯವರಿಗೆ ಹಿಂದೂಸ್ತಾನಿ ಸಂಗೀತದ ಇತಿಹಾಸದಲ್ಲಿ ಶಾಶ್ವತವಾದ ಸ್ಥಾನವನ್ನು ಗಳಿಸಿಕೊಟ್ಟಿವೆ. ಅವರ ನಿರ್ಗಮನದಿಂದ ಠುಮ್ರಿ ಗಾಯನದಲ್ಲಿ ಸೃಷ್ಟಿಯಾಗಿರುವ ಶೂನ್ಯವನ್ನು ತುಂಬುವುದು ಸಧ್ಯದ ಸ್ಥಿತಿಯಲ್ಲಿ ಕಷ್ಟಕರ ಸಂಗತಿಯಂದೇ ಹೇಳಬಹುದು.

 ಡಾ.ಎನ್.ಜಗದೀಶ್ ಕೊಪ್ಪ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *