FEATUREDLatestಅಂಕಣ

ಸ್ವರ ಸನ್ನಿಧಿ / ಭಕ್ತಿಗೀತೆಗಳ ರಾಣಿ ಸುಂದರಾಂಬಾಳ್ – ಡಾ. ಜಗದೀಶ್ ಕೊಪ್ಪ

 ರೈಲುಗಳಲ್ಲಿ ಹಾಡುತ್ತಾ ಪ್ರಯಾಣಿಕರ ಮುಂದೆ ಕೈಯೊಡ್ಡುತ್ತಿದ್ದ ಬಾಲಕಿ ಮುಂದೆ ರಂಗಭೂಮಿ ಮತ್ತು ಸಂಗೀತ ಕ್ಷೇತ್ರಗಳಲ್ಲಿ ಅದ್ಭುತ ಕಲಾವಿದೆಯಾಗಿ ಬೆಳಗಿದ್ದು ಒಂದು ದಂತಕತೆಯೇ ಸರಿ. ಭಕ್ತಿಗೀತೆಗಳನ್ನು ಮಾತ್ರವಲ್ಲ, ದೇಶಭಕ್ತಿಗೀತೆಗಳನ್ನು ಹಾಡುವುದರಲ್ಲೂ ಅಸಾಧಾರಣ ಪ್ರತಿಭೆ ತೋರಿದ ಸುಂದರಾಂಬಾಳ್ ಅವರಿಗೆ ಮಹಾತ್ಮ ಗಾಂಧೀಜಿ ಅವರು ಮೆಚ್ಚುಗೆ ಪತ್ರ ಬರೆದಿದ್ದರು. ಸ್ವಾತಂತ್ರ್ಯ ಹೋರಾಟದಲ್ಲೂ ಪಾಲ್ಗೊಂಡ ಈ ಕಲಾವಿದೆ, `ಕ್ವಿಟ್ ಇಂಡಿಯಾ’ ಚಳವಳಿಯ ಸಂದರ್ಭದಲ್ಲಿ ತನ್ನ ಸ್ವಂತಮನೆಯನ್ನು ಉದಾರವಾಗಿ ದಾನ ಮಾಡಿದ್ದರು.

ತಮಿಳುನಾಡಿನ ಜನಮಾನಸದಲ್ಲಿ ಕೆ.ಬಿ. ಸುಂದರಾಂಬಾಳ್ ಎಂಬುದು ಅಚ್ಚಳಿಯದೆ ಶಾಶ್ವತವಾಗಿ ಉಳಿದ ಹೆಸರುಗಳಲ್ಲಿ ಒಂದಾಗಿದೆ. ತಮಿಳುನಾಡಿನ ಯಾವುದೇ ಮೂಲೆಯ ದೇಗುಲಗಳಿಗೆ ಭೇಟಿ ಇತ್ತಾಗ, ಅಲ್ಲಿನ ಧ್ವನಿವರ್ಧಕಗಳಲ್ಲಿ ಕೆ.ಬಿ. ಸುಂದರಾಂಬಾಳ್, ಎಂ.ಎಸ್. ಸುಬ್ಬುಲಕ್ಷ್ಮಿ, ಡಿ.ಕೆ. ಪಟ್ಟಮ್ಮಾಳ್ ಮತ್ತು ಎಂ.ಎಲ್. ವಸಂತಕುಮಾರಿ ಅವರೆಲ್ಲರ ಕಂಠದಲ್ಲಿ ತಮಿಳು ಭಕ್ತಿಗೀತೆಗಳನ್ನು ನಾವು ಇಂದಿಗೂ ಕೇಳಬಹುದು. ತಮಿಳು ಜನತೆಯ ಆರಾಧ್ಯ ದೇವತೆಯಾದ ಮುರುಗಾ ಎಂದು ಕರೆಯಲಾಗುವ ಷಣ್ಮುಗ ಅಥವಾ ಸುಬ್ರಹ್ಮಣ್ಯನನ್ನು ಸ್ತುತಿಸಿ ತಮ್ಮ ತುಂಬು ಕಂಠದಲ್ಲಿ ಹಾಡಿರುವ ಸುಂದರಾಂಬಾಳ್ ಅವರ ಭಕ್ತಿಗೀತೆಗಳು ಅಲ್ಲಿನ ಜನತೆಗೆ ಅಚ್ಚುಮೆಚ್ಚು. ಭಿಕ್ಷೆ ಬೇಡುವ ಬಾಲಕಿಯಾಗಿ ಬೆಳೆಯುತ್ತಾ, 1920-30 ದಶಕದಲ್ಲಿ ರಂಗಭೂಮಿ ಮತ್ತು ಸಿನಿಮಾ ಕ್ಷೇತ್ರದಲ್ಲಿ ಗಾಯಕಿಯಾಗಿ ಮತ್ತು ನಟಿಯಾಗಿ ಹೆಸರು ಮಾಡಿದ ಸುಂದರಾಂಬಾಳ್ ಆ ಕಾಲದಲ್ಲಿ ಹಾಡುವ ಮತ್ತು ನಟಿಸುವ ನಾಯಕಿ ಪಾತ್ರಕ್ಕಾಗಿ ಒಂದು ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಿದ್ದ ಕಲಾವಿದೆ ಎಂಬ ಕೀರ್ತಿಗೆ ಪಾತ್ರರಾದರು. ಅವರ ಜೀವನಗಾಥೆ ರೋಮಾಂಚನಕಾರಿಯಾಗಿದೆ.
ತಮಿಳುನಾಡಿನ ಅಂದಿನ ಕೊಯಂಬತ್ತೂರು (ಈಗಿನ ಈರೋಡ್) ಜಿಲ್ಲೆಯ ಕೊದುಮುಡಿ ಎಂಬ ಕಾವೇರಿ ನದಿಯ ತಟದ ಗ್ರಾಮದ ಬಡ ಕುಟುಂಬದಲ್ಲಿ 1908 ರ ಅಕ್ಟೋಬರ್ ಹತ್ತರಂದು ಜನಿಸಿದ ಸುಂದರಾಂಬಾಳ್ ಹಾಡಿನ ಮೂಲಕವೇ ಬದುಕು ಕಟ್ಟಿಕೊಂಡ ಅಪ್ರತಿಮ ಗಾಯಕಿ. ತಮಿಳುನಾಡಿನ ಸಂಗೀತದ ಇತಿಹಾಸದ ಪುಟಗಳÀಲ್ಲಿ ಕೆ.ಬಿ. ಸುಂದರಾಂಬಾಳ್ ಅವರ ವಿವರ ದಾಖಲಿಸುವಾಗಿ ಎಲ್ಲಿಯೂ ಅವರ ತಂದೆಯ ಹೆಸರು ನಮೂದಾಗಿಲ್ಲ. ತಾಯಿಯ ಹೆಸರು ಬಾಲಮ್ಮಾಳ್ ಎಂದು ಮಾತ್ರ ನಮೂದಾಗಿದೆ. ಮೂವರು ಹೆಣ್ಣು ಮಕ್ಕಳನ್ನು ಕಟ್ಟಿಕೊಂಡು ಜೀವನಕ್ಕಾಗಿ ಪ್ರಯಾಣಿಕರ ರೈಲಿನಲ್ಲಿ ಹಾಡುತ್ತಿದ್ದ ಕುಟುಂಬ ಎಂದು ಹೇಳಲಾಗಿದೆ ಹಾಗಾಗಿ ಸುಂದರಾಂಬಾಳ್ ಅವರ ತಾಯಿ ದೇವದಾಸಿ ಸಮುದಾಯದಿಂದ ಬಂದ ಹೆಣ್ಣು ಮಗಳಾಗಿರಬಹುದು.
ಆರು ವರ್ಷದ ಬಾಲಕಿಯಾಗಿದ್ದಾಗಲೇ “ಪಿಚ್ಚೈ ಪಾಟ್ಟುಗಳ್” ಎಂದು ಕರೆಯಲಾಗುತ್ತಿದ್ದ ಭಿಕ್ಷುಕರ ಹಾಡುಗಳನ್ನು ತಮ್ಮ ಕಂಚಿನ ಕಂಠದಿಂದ ಸುಶ್ರಾವ್ಯವಾಗಿ ಹಾಡುತ್ತಿದ್ದ ಸುಂದರಾಂಬಾಳ್ ಕುಟುಂಬದ ತುತ್ತಿನ ಚೀಲವನ್ನು ತುಂಬಿಸುತ್ತಿದ್ದರು. ಹದಿನೇಳು ವರ್ಷದ ವಯಸ್ಸಿನಲ್ಲಿಯೂ ಸಹ ರೈಲುಗಳಲ್ಲಿ ಹಾಡುತ್ತಾ ಜೀವನ ಸಾಗಿಸುತ್ತಿದ್ದ ಸುಂದರಾಂಬಾಳ್ ಪ್ರತಿಭೆಯನ್ನು ಗಮನಿಸಿದ ತಮಿಳುನಾಡಿನ ಹಲವಾರು ರಂಗಭೂಮಿಯ ಹಿರಿಯ ಕಲಾವಿದರು ಮತ್ತು ಪೆÇೀಷಕರು ಅವರನ್ನು ತಮಿಳು ರಂಗಭೂಮಿಗೆ ಆಹ್ವಾನಿಸಿದರು. ಇವರಲ್ಲಿ ಇ.ಜಿ. ನಟೇಶನ್ ಅಯ್ಯರ್ ಮತ್ತು ವೇಲು ನಾಯರ್ ಪ್ರಮುಖರು. ಆದರೆ, ತಾಯಿ ಬಾಲಮ್ಮಾಳ್ ವಿರೋಧದಿಂದ ಇದು ಸಾಧ್ಯವಾಗಿರಲಿಲ್ಲ. ಆದರೆ, ತಮ್ಮ ಹದಿಹರೆಯದ ವಯಸ್ಸಿನಲ್ಲಿ ಕಂಡವರ ಕಣ್ಣಿನ ಕತ್ತಿಯಲ್ಲಿ ಇರಿಸಿಕೊಳ್ಳುತ್ತಾ, ರೈಲಿನಲ್ಲಿ ಭಿಕ್ಷೆ ಬೇಡುತ್ತಾ ಹಾಡುವುದಕ್ಕಿಂತ ರಂಗಭೂಮಿ ಕಲಾವಿದೆಯಾಗುವುದು ಸೂಕ್ತ ಎಂದು ನಿರ್ಧರಿಸಿದ ಸುಂದರಾಂಬಾಳ್ ಮನೆಯನ್ನು ತೊರೆದು, ಮದ್ರಾಸ್ ನಗರಕ್ಕೆ ಪ್ರಯಾಣಿಸಿದರು. ಹಾರ್ಮೋನಿಯಂ ಕಲಾವಿದ ಗೋವಿಂದರಾಜುಲು ಎಂಬುವರ ಆಶ್ರಯದಲ್ಲಿ ಬೆಳೆಯುತ್ತಾ, ಕಲಾವಿದೆಯಾಗಿ ಮತ್ತು ಗಾಯಕಿಯಾಗಿ ರೂಪುಗೊಂಡರು.

ಸುಂದರಾಂಬಾಳ್ ಮದ್ರಾಸ್‍ಗೆ ಆಗಮಿಸುವ ವೇಳೆಗೆ ತಮಿಳುನಾಡಿನ ಅನೇಕ ರಾಜ ಮಹಾರಾಜರ ಸಂಸ್ಥಾನಗಳು ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿಗೆ ಒಳಪಟ್ಟಿದ್ದವು. ರಾಜರುಗಳ ಆಸ್ಥಾನದಲ್ಲಿ ನೃತ್ಯ ಕಲಾವಿದೆಯರಾಗಿ, ಗಾಯಕಿಯರಾಗಿ ಬದುಕು ಕಟ್ಟಿಕೊಂಡಿದ್ದ ನೂರಾರು ದೇವದಾಸಿ ಸಮುದಾಯದ ಕಲಾವಿದೆಯರು ಅತಂತ್ರರಾಗಿ ಹೊಸ ಬದುಕು ಅರಸುತ್ತಾ ಮದ್ರಾಸ್ ನಗರಕ್ಕೆ ಆಗಮಿಸಿದ್ದರು. ಆ ವೇಳೆಗಾಗಲೇ ವೃತ್ತಿಯಲ್ಲಿ ವಕೀಲರೂ ಪ್ರವೃತ್ತಿಯಲ್ಲಿ ಹೆಸರಾಂತ ನಾಟಕ ಕಲಾವಿದರೂ ಆಗಿದ್ದ ಕೃಷ್ಣ ಅಯ್ಯರ್ ಎಂಬ ಮಾನವೀಯ ಮುಖದ ವ್ಯಕ್ತಿಯೊಬ್ಬರು ನಾಟಕ ಕಂಪನಿಯನ್ನು ಆರಂಭಿಸಿ ಕಲಾವಿದರಿಗೆ ಆಶ್ರಯದಾತರಾಗಿದ್ದರು. ಆ ಕಾಲಘಟ್ಟದಲ್ಲಿ ತಮಿಳುನಾಡಿನಲ್ಲಿ ಅಸ್ತಿತ್ವದಲ್ಲಿದ್ದ ಮೂರು ಅಥವಾ ನಾಲ್ಕು ನಾಟಕ ಕಂಪನಿಗಳು ತಮಿಳುನಾಡು ಮಾತ್ರವಲ್ಲದೆ, ವರ್ಷಕ್ಕೊಮ್ಮೆ ನೆರೆಯ ಸಿಲೋನ್ (ಶ್ರೀಲಂಕಾ) ಮಲಯಾ (ಮಲೇಷಿಯಾ) ಮತ್ತು ಬರ್ಮಾ (ಮ್ಯಾನ್ಮಾರ್) ರಾಷ್ಟ್ರಗಳಿಗೆ ಪ್ರವಾಸ ಹೋಗಿ ಅಲ್ಲಿನ ತಮಿಳು ಭಾಷಿಕರ ಮುಂದೆ ನಾಟPಗಳನ್ನು ಪ್ರದರ್ಶಿಸುತ್ತಿದ್ದವು. ಇಂತಹ ಒಂದು ನಾಟಕ ಕಂಪನಿಯಲ್ಲಿ ಸುಂದರಾಂಬಾಳ್ ಅವರಿಗೆ 1927 ರಲ್ಲಿ ಕಲಾವಿದೆಯಾಗುವ ಅವಕಾಶ ದೊರೆಯಿತು. ಇದನ್ನು ಸಮರ್ಥವಾಗಿ ಬಳಸಿಕೊಂಡ ಅವರು ತಮ್ಮ ಸುಶ್ರಾವ್ಯ ಕಂಠದ ಹಾಡುಗಳ ಮೂಲಕ ಗಾಯಕಿಯಾಗಿ, ನಾಯಕಿಯಾಗಿ ಕಂಪನಿಯ ಕೇಂದ್ರಬಿಂದುವಾಗಿ ಹೊರಹೊಮ್ಮಿದರು. ಸ್ತ್ರೀ ಮತ್ತು ಪುರುಷ ಎರಡೂ ಪಾತ್ರಗಳನ್ನು ಮಾಡುತ್ತಿದ್ದ ಸುಂದರಾಂಬಾಳ್ ತಮ್ಮ ಪಾತ್ರಗಳಿಗೆ ತಕ್ಕಂತೆ ಧ್ವನಿ ಬದಲಾವಣೆ ಮಾಡಿಕೊಳ್ಳುತ್ತಿದ್ದರು. ನಾಟಕಗಳಲ್ಲಿ ಸುಂದರಾಂಬಾಳ್ ಎದುರು ನಾಯಕನಾಗಿ ನಟಿಸುವ ಪುರುಷ ಕಲಾವಿದರು ಇಲ್ಲ ಎಂಬ ಭಾವನೆಯೂ ಅಂದಿನ ತಮಿಳು ರಂಗಭೂಮಿಯಲ್ಲಿ ಬೆಳೆದು ಬಂದಿತ್ತು.

1927ರಲ್ಲಿ ನಾಟಕ ಕಂಪನಿಯು ಶ್ರೀಲಂಕಾ ಪ್ರವಾಸ ಹೋದಾಗ, “ವಲ್ಲಿ ತಿರುವಾಣಂ” ಎಂಬ ನಾಟಕದಲ್ಲಿ ಸುಂದರಾಂಬಾಳ್ ವಲ್ಲಿಯ ಪಾತ್ರ ನಿರ್ವಹಿಸುತ್ತಿದ್ದರು. ಇವರ ಎದುರು ಎಸ್.ಜಿ. ಕಿಟ್ಟಪ್ಪನ್ ಎಂಬುವರು ಷಣ್ಮುಗನ ಪಾತ್ರ ನಿರ್ವಹಿಸುತ್ತಿದ್ದರು. ಈ ಜೋಡಿಯ ಅಭಿನಯ ಜನಪ್ರಿಯವಾಗತೊಡಗಿದಂತೆ, ಇಬ್ಬರೂ ಅನೇಕ ನಾಟಕಗಳಲ್ಲಿ ಜೊತೆ ಜೊತೆಯಾಗಿ ಅಭಿನಯಿಸಿದರು. ಈ ಇಬ್ಬರ ಜೋಡಿಯ ಸತ್ಯ ಹರಿಶ್ಚಂದ್ರ, ಪಾವಲ್ ಕೋಡಿ ಮತ್ತು ವಲ್ಲಿ ತಿರುವಾಣಂ ನಾಟಕಗಳು ಅತ್ಯಂತ ಜನಪ್ರಿಯವಾದವು. ಈ ಮೊದಲು ವಿವಾಹವಾಗಿದ್ದ ಕಿಟ್ಟಪ್ಪನ್ ನೀಡಿದ ವಿವಾಹದ ಪ್ರಸ್ತಾವನೆಯನ್ನು ಸುಂದರಾಂಬಾಳ್ ಒಪ್ಪಿಕೊಂಡು, ಎರಡನೇ ಪತ್ನಿಯಾದರು. ಆದರೆ, ಅತಿ ಮದ್ಯಪಾನಿಯಾಗಿದ್ದ ಕಿಟ್ಟಪ್ಪನ್ ಜೊತೆಗಿನ ದಾಂಪತ್ಯ ಬದುಕು ಕೇವಲ ನಾಲ್ಕು ವರ್ಷಗಳಲ್ಲಿ ಅಂತ್ಯಗೊಂಡಿತು. ಈ ನಡುವೆ ಇವರಿಬ್ಬರಿಗೆ ಜನಿಸಿದ್ದ ಹೆಣ್ಣು ಮಗುವೊಂದು ಹುಟ್ಟಿದ ಕೆಲವೇ ತಿಂಗಳಿನಲ್ಲಿ ಅಸು ನೀಗಿತ್ತು. ಹಾಗಾಗಿ ಒಂಟಿಯಾಗಿ ಬದುಕುತ್ತಾ, ಕಲಾವಿದೆಯಾಗಿ ಮತ್ತು ಗಾಯಕಿಯಾಗಿ ಜೀವಿಸುತ್ತಿದ್ದ ಸುಂದರಾಂಬಾಳ್ 1931 ರಲ್ಲಿ ತಮಿಳುನಾಡಿನ ಕಾಂಗ್ರೆಸ್ ನಾಯಕ ಸತ್ಯಮೂರ್ತಿಯವರ ಆಹ್ವಾನದ ಮೇರೆಗೆ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು. ಕಾಂಗ್ರೆಸ್ ಸಭೆಗಳಲ್ಲಿ ದೇಶಭಕ್ತಿ ಗೀತೆಗಳನ್ನು ಹಾಡುವುದು, ಖಾದಿ ಮಾರಾಟ ಮಾಡುವುದು ಮುಂತಾದ ಪ್ರಕ್ರಿಯೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಸುಂದರಾಂಬಾಳ್ ಅವರ ತಮಿಳು ಭಕ್ತಿಗೀತೆಗಳಿಗಾಗಿ ಗ್ರಾಮೊಫೋನ್ ಕಂಪನಿಗಳಿಂದ ಅಪಾರ ಬೇಡಿಕೆಯಿತ್ತು. ಜವಹರಲಾಲ್ ನೆಹರೂ ಅವರ ತಂದೆ ಪಂಡಿತ್ ಮೋತಿಲಾಲ್ ನೆಹರೂ ನಿಧನರಾದ ಸಂದರ್ಭದಲ್ಲಿ ಇವರು ಹಾಡಿದ ದೇಶಭಕ್ತಿಯ ಧ್ವನಿ ಮುದ್ರಿಕೆಯೊಂದು ಅತ್ಯಂತ ಜನಪ್ರಿಯವಾಗಿತ್ತು.
1933 ರಲ್ಲಿ ಪತಿ ಕಿಟ್ಟಪ್ಪನವರು ಅತಿಯಾದ ಮದ್ಯಪಾನದಿಂದ ನಿಧನರಾದ ಸಂದರ್ಭದಲ್ಲಿ ದಾಂಪತ್ಯದ ಬದುಕಿನಿಂದ ದೂರವಿದ್ದರೂ ಸಹ ಕಿಟ್ಟಪ್ಪನವರ ಊರಾದ ಸೆಂಗೋಯ್ ಗ್ರಾಮಕ್ಕೆ ತೆರಳಿ ಪತಿಯ ಅಂತ್ಯ ಸಂಸ್ಕಾರ ನೆರವೇರಿಸಿದರು. ಇದು ಮಾತ್ರವಲ್ಲದೆ ಅವರು ಸಾಲ ಮಾಡಿದ್ದ ಹದಿನೆಂಟು ಸಾವಿರ ರೂಪಾಯಿಯನ್ನು ಚುಕ್ತಾ ಮಾಡಿ ಪತಿಯನ್ನು ಋಣಮುಕ್ತನನ್ನಾಗಿ ಮಾಡಿದರು. ಆನಂತರ ಪತಿಯ ಚಿತಾಭಸ್ಮವನ್ನು ಕೊಂಡೊಯ್ದು ವಾರಣಾಸಿಯ ಗಂಗಾನದಿಯಲ್ಲಿ ವಿಸರ್ಜಿಸಿ ಬಂದರು. ಪತಿಯ ಸಾವಿನಿಂದ ಒಂದು ರೀತಿಯಲ್ಲಿ ವೈರಾಗ್ಯ ಜೀವನದತ್ತ ಚಲಿಸಿದ ಸುಂದರಾಂಬಾಳ್ ಶ್ವೇತ ವರ್ಣದ ಖಾದಿ ವಸ್ತ್ರಗಳನ್ನು ಧರಿಸುವುದರ ಮೂಲಕ ನಾಟಕ ಮತ್ತು ಸಿನಿಮಾ ಪಾತ್ರಗಳಿಗೆ ವಿದಾಯ ಹೇಳಿ ಗಾಯನಕ್ಕೆ ಮಾತ್ರ ತಮ್ಮ ಬದುಕನ್ನು ಸೀಮಿತಗೊಳಿಸಿಕೊಂಡರು. ತಮಿಳುನಾಡಿನ ಪ್ರಸಿದ್ಧ ದೇಗುಲಗಳಲ್ಲಿ ವರ್ಷಪೂರ್ತಿ ಜರುಗುವ ದೇವರ ಉತ್ಸವ, ಜಾತ್ರೆ ಮುಂತಾದ ಸಮಾರಂಭಗಳಲ್ಲಿ ಸಂಗೀತ ಕಛೇರಿ ನಡೆಸಿಕೊಡುತ್ತಿದ್ದರು. 1933 ರಲ್ಲಿ ಮಹಾತ್ಮ ಗಾಂಧಿಯವರು ಸುಂದರಾಂಬಾಳ್ ಅವರಿಗೆ ಬರೆದ ಒಂದು ಪತ್ರದಿಂದಾಗಿ ಅವರು ಮದ್ರಾಸ್ ನಗರದಲ್ಲಿ ಶಾಶ್ವತವಾಗಿ ನೆಲೆ ನಿಲ್ಲಲು ನಿರ್ಧರಿಸಿದರು. ರಾಜಾಜಿ, ಸತ್ಯಮೂರ್ತಿ, ಹಿಂದು ಪತ್ರಿಕೆಯ ಸಂಸ್ಥಾಪಕ ಕಸ್ತೂರಿ ಶ್ರೀನಿವಾಸ ಅಯ್ಯಂಗಾರ್ ಮತ್ತು ನಟೇಶನ್ ಮುಂತಾದವರ ಸಹಕಾರದಿಂದ ಅಂದಿನ ಮದ್ರಾಸ್ ನಗರದ ತ್ಯಾಗರಾಜ ನಗರ ಎಂಬ ಪ್ರತಿಷ್ಠಿತ ಬಡಾವಣೆಯ ಪಾಂಡಿ ಬಜಾರ್‍ನಲ್ಲಿ ಒಂದು ಮನೆ ಮಾಡಿದರು. ನಂತರ 1942 ರ ಕ್ವಿಟ್ ಇಂಡಿಯಾ ಚಳುವಳಿಯ ಸಂದರ್ಭದಲ್ಲಿ ಲಕ್ಷಾಂತರ ರೂಪಾಯಿ ಬೆಲೆ ಬಾಳುತ್ತಿದ್ದ ಆ ಮನೆಯನ್ನು ಕಾಂಗ್ರೆಸ್ ಪಕ್ಷಕ್ಕೆ ಉದಾರವಾಗಿ ದಾನವಾಗಿ ಮಾಡಿದರು.
ಸುಂದರಾಂಬಾಳ್ ತಮ್ಮ ಗಾಯನ ಹಾಗೂ ಧ್ವನಿ ಮುದ್ರಿಕೆಗಳ ಮೂಲಕ ಹೇರಳವಾಗಿ ಹಣ ಸಂಪಾದಿಸಿದರೂ ಸಹ ವಿರಾಗಿಣಿಯಂತೆ ಬದುಕುತ್ತಾ, ನಂದನಾರ್, ಅವ್ವೈಯಾರ್, ಕಾರೈಕ್ಕಲ್ ಅಮ್ಮೆಯಾರ್, ಹೀಗೆ ಅನೇಕ ಪೌರಾಣಿಕ ಸಿನಿಮಾಗಳಲ್ಲಿ ನಟಿಸುತ್ತಾ, ಹಾಡುತ್ತಾ ಬದುಕಿದರು. ಈ ಕಲಾವಿದೆಯನ್ನು ಸ್ವಾತಂತ್ರ್ಯ ಬಂದ ನಂತರ ತಮಿಳುನಾಡು ಸರ್ಕಾರವು 1951ರಲ್ಲಿ ವಿಧಾನ ಪರಿಷತ್ತಿಗೆ ನಾಮಕರಣ ಮಾಡಿತು. ವಿಧಾನ ಮಂಡಲ ಪ್ರವೇಶಿಸಿದ ಮೊದಲ ಕಲಾವಿದೆ ಎಂಬ ಕೀರ್ತಿಗೆ ಪಾತ್ರರಾದ ಸುಂದರಾಂಬಾಳ್ ಅವರಿಗೆ 1964 ರಲ್ಲಿ ತಮಿಳು ಇಸೈ ಸಂಘವು “ಇಸೈ ಪೆರಿಜ್ಞಾನರ್” ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಆನಂತರ 1968 ರಲ್ಲಿ ಇವರಿಗೆ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿತು. ಎರಡು ಬಾರಿ ಗಾಯನಕ್ಕಾಗಿ ರಾಷ್ಟ್ರ ಪ್ರಶಸ್ತಿಯನ್ನು ಗಳಿಸಿದ್ದ ಸುಂದರಾಂಬಾಳ್ ಅವರಿಗೆ ತಮಿಳು ಸರ್ಕಾರವೂ ಕೂಡ ಅತ್ಯುತ್ತಮ ಗಾಯಕಿಯ ಪ್ರಶಸ್ತಿ ನೀಡಿ ಗೌರವಿಸಿತು.
1980 ರಲ್ಲಿ ತಮ್ಮ ಎಪ್ಪತ್ತೆರಡನೆಯ ವಯಸ್ಸಿನಲ್ಲಿ ನಿಧನರಾಗುವ ವೇಳೆಗೆ ಸುಂದರಾಂಬಾಳ್ ಅವರ ಬದುಕು ಮತ್ತು ಗಾಯನ ತಮಿಳುನಾಡಿನಲ್ಲಿ ದಂತಕತೆಯಾಗಿ ಮಾರ್ಪಟ್ಟಿದ್ದವು. ತಮ್ಮ ಬದುಕಿನುದ್ದಕ್ಕೂ ಹಾಡುತ್ತಲೇ ಬದುಕಿದ ಸುಂದರಾಂಬಾಳ್ ನಿಧನರಾಗುವ ವೇಳೆಯಲ್ಲಿ ತಮ್ಮೆಲ್ಲಾ ಆಸ್ತಿಯನ್ನು ಪಳನಿಯ ಮುರುಗನ ದೇವಸ್ಥಾನಕ್ಕೆ ದಾನ ಮಾಡುವುದರ ಮೂಲಕ ಬಡತನದಲ್ಲಿ ತಾವು ಹಿಂದೆ ತುಳಿದು ಬಂದ ಹಾದಿಗೆ ಮರಳಿದರು. ಇಂದು ತಮಿಳುನಾಡಿನ ಉತ್ತರದ ತುದಿಯಲ್ಲಿರುವ ತಿರುತ್ತಣಿ, ಪೂರ್ವದ ಕಡಲ ತೀರದಲ್ಲಿರುವ ತಿರುಚಂದೂರ್, ಮಧ್ಯ ಭಾಗದಲ್ಲಿರುವ ಸ್ವಾಮಿಮಲೈ ಅಥವಾ ಪಶ್ಚಿಮ ಭಾಗದಲ್ಲಿರುವ ಪಳನಿಯ ಸುಬ್ರಹ್ಮಣ್ಯನ ದೇಗುಲಗಳಲ್ಲದೆ ಯಾವುದೇ ದೇಗುಲಕ್ಕೆ ಹೋದಾಗ ಅಲ್ಲಿನ ತಮಿಳು ಭಕ್ತಿಗೀತೆಗಳು ನಮ್ಮನ್ನು ಕೆ.ಬಿ. ಸುಂದರಾಂಬಾಳ್ ಅವರ ಗಾಯನದ ಪ್ರತಿಭೆ ಮತ್ತು ಉದಾತ್ತ  ಜೀವನವನ್ನು ನೆನಪಿಸುತ್ತವೆ.

ಡಾ. ಜಗದೀಶ್ ಕೊಪ್ಪ

 

 

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *