ಸ್ವರ ಸನ್ನಿಧಿ/ ಅಪ್ರತಿಮ ಕಲಾವಿದೆ ಬೆಂಗಳೂರು ನಾಗರತ್ನಮ್ಮ – ಡಾ.ಎನ್.ಜಗದೀಶ್ ಕೊಪ್ಪ
ಕನ್ನಡದ ದೇವದಾಸಿ ಸಮುದಾಯದ ಅಪ್ರತಿಮ ಹೆಣ್ಣುಮಗಳಾದ ಬೆಂಗಳೂರು ನಾಗರತ್ಮಮ್ಮ ಸಂಗೀತ ಮತ್ತು ತೆಲುಗು ಸಾಹಿತ್ಯ ಕ್ಷೇತ್ರದಲ್ಲಿದೇವತೆಯಾಗಿ ಬದುಕಿದ ಸಾಹಸಿ. ತಮ್ಮ ಜೀವಿತಾವಧಿಯಲ್ಲಿ ಸಂಪಾದಿಸಿದ ಆಸ್ತಿಯನ್ನು ಕರ್ನಾಟಕ ಸಂಗೀತದ ಪಿತಾಮಹಾರಲ್ಲಿ ಒಬ್ಬರಾದ ತ್ಯಾಗರಾಜರ ಸಮಾಧಿಯ ಪುನರುತ್ಥಾನ ಮತ್ತು ದೇವಸ್ಥಾನದ ನಿರ್ಮಾಣಕ್ಕೆ ವಿನಿಯೋಗಿಸಿ, ತಮಿಳುನಾಡಿನ ತಿರುವಯ್ಯಾರಿನಲ್ಲಿ ಶ್ರೀ ತ್ಯಾಗರಾಜರ ಆರಾಧನೆಯನ್ನು ಆರಂಭಿಸುವುದರ ಮೂಲಕ, ಅವರ ಸ್ಮರಣಾರ್ಥವಾಗಿ ಮೂರು ದಿನಗಳ ಕರ್ನಾಟಕ ಸಂಗೀತ ಉತ್ಸವವನ್ನು ಹುಟ್ಟು ಹಾಕಿದ ವ್ಯಕ್ತಿ. ತೆಲಗು ಪ್ರಾಚೀನ ಕಾವ್ಯ ಮುದ್ದುಪಳನಿಯ “ ರಾಧಿಕಾ ಸಾಂತ್ವನಮು” ಎಂಬ ಅಪೂರ್ವ ಕೃತಿಯನ್ನು ಪರಿಷ್ಕರಿಸಿ, ಟಿಪ್ಪಣಿ ಬರೆದು ಪ್ರಕಟಿಸುವುದರ ಜೊತೆಗೆ ಆ ಕಾಲದ ಪುರುಷ ಪ್ರಧಾನವಾದ ತೆಲುಗು ಸಾಹಿತ್ಯದ ದಿಗ್ಗಜರೊಂದಿಗೆ ಸೆಣಸಿ, ಭಾರತದ ಪ್ರಥಮ ಸ್ತ್ರೀವಾದಿ ಚಿಂತಕಿಯರಲ್ಲಿ ಒಬ್ಬರು ಎಂಬ ಗೌರವವನ್ನೂ ಸಹ ಸಂಪಾದಿಸಿದರು
ಇದು ಕನ್ನಡದ ದೇವದಾಸಿ ಸಮುದಾಯದ ಅಪ್ರತಿಮ ಹೆಣ್ಣುಮಗಳೊಬ್ಬಳು ಸಂಗೀತ ಮತ್ತು ತೆಲುಗು ಸಾಹಿತ್ಯ ಕ್ಷೇತ್ರದಲ್ಲಿ ದೇವತೆಯಾಗಿ ಬದುಕಿದ ಸಾಹಸಮಯ ಬದುಕಿನ ಕಥನ. 1878 ರಲ್ಲಿ ನಂಜನಗೂಡಿನಲ್ಲಿ ಜನಿಸಿ, ಕಲಾವಿದೆಯಾಗಿ ರೂಪುಗೊಂಡು, 1902 ರಲ್ಲಿ ತಮಿಳುನಾಡಿಗೆ ಅವಕಾಶ ಅರಸಿಕೊಂಡು ವಲಸೆ ಹೋದ ಕಾರಣ ನಾಗರತ್ನಮ್ಮನವರು ಹುಟ್ಟಿದ ಕನ್ನಡದ ನೆಲಕ್ಕೆ ಅಪರಿಚಿತಳಾಗಿ ಉಳಿದು ಹೋದರು. ಆದರೆ, ನೆರೆಯ ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಕರ್ನಾಟಕ ಸಂಗೀತದಲ್ಲಿ ಗಾಯನ ಮತ್ತು ನೃತ್ಯಗಳಲ್ಲದೆ, ತೆಲುಗು ಸಾಹಿತ್ಯದಲ್ಲಿ ರಾಣಿಯಂತೆ ಜೀವಿಸಿ ಅಲ್ಲಿನ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ನೆಲೆಗೊಂಡರು. ತನ್ನನ್ನು ಹೊರತುಪಡಿಸಿ ದಕ್ಷಿಣ ಭಾರತದ ಕರ್ನಾಟಕ ಸಂಗೀತದ ಇತಿಹಾಸ ಪೂರ್ಣವಾಗಲಾರದು ಎಂಬಂತೆ ಬದುಕಿದ ಹಾಗೂ ಕರ್ನಾಟಕ ಸಂಗೀತ ಕ್ಷೇತ್ರಕ್ಕೆ ಘನತೆ ಮತ್ತು ಗೌರವವನ್ನು ತರುವುದರ ಮೂಲಕ ಮಹಿಳಾ ಸಮುದಾಯಕ್ಕೆ ಸಂಗೀತ ಕ್ಷೇತ್ರದಲ್ಲಿ ಮಾನ್ಯತೆ ದೊರಕಿಸಿಕೊಟ್ಟರು. ಇದು ಮಾತ್ರವಲ್ಲದೆ, ತೆಲುಗು ಪ್ರಾಚೀನ ಕಾವ್ಯ ಮುದ್ದುಪಳನಿಯ “ ರಾಧಿಕಾ ಸಾಂತ್ವನಮು” ಎಂಬ ಅಪೂರ್ವ ಕೃತಿಯನ್ನು ಪರಿಷ್ಕರಿಸಿ, ಟಿಪ್ಪಣಿ ಬರೆದು ಪ್ರಕಟಿಸುವುದರ ಜೊತೆಗೆ ಆ ಕಾಲದ ಪುರುಷ ಪ್ರಧಾನವಾದ ತೆಲುಗು ಸಾಹಿತ್ಯದ ದಿಗ್ಗಜರೊಂದಿಗೆ ಸೆಣಸಿ, ಭಾರತದ ಪ್ರಥಮ ಸ್ತ್ರೀವಾದಿ ಚಿಂತಕಿಯರಲ್ಲಿ ಒಬ್ಬರು ಎಂಬ ಗೌರವವನ್ನೂ ಸಹ ಸಂಪಾದಿಸಿದರು.
ಮದ್ರಾಸ್ ಪ್ರೆಸಿಡೆನ್ಸಿ ಪ್ರಾಂತ್ಯದಲ್ಲಿನ ಆರು ಸಂಸ್ಥಾನಗಳ ಆಸ್ಥಾನ ಗಾಯಕಿಯಾಗಿ ಹಾಗೂ ಸಂಗೀತ ಕ್ರೇತ್ರದ ಅಪ್ರತಿಮ ಗಾಯಕಿಯಾಗಿ ತಮ್ಮ ಜೀವಿತಾವಧಿಯಲ್ಲಿ ಸಂಪಾದಿಸಿದ ಆಸ್ತಿಯನ್ನು ಕರ್ನಾಟಕ ಸಂಗೀತದ ಪಿತಾಮಹಾರಲ್ಲಿ ಒಬ್ಬರಾದ ತ್ಯಾಗರಾಜರ ಸಮಾಧಿಯ ಪುನರುತ್ಥಾನ ಮತ್ತು ದೇವಸ್ಥಾನದ ನಿರ್ಮಾಣಕ್ಕೆ ವಿನಿಯೋಗಿಸಿ, ಆನಂತರ ತಮಿಳುನಾಡಿನ ತಿರುವಯ್ಯಾರಿನಲ್ಲಿ ಶ್ರೀ ತ್ಯಾಗರಾಜರ ಆರಾಧನೆಯನ್ನು ಆರಂಭಿಸುವುದರ ಮೂಲಕ, ಅವರ ಸ್ಮರಣಾರ್ಥವಾಗಿ ಮೂರು ದಿನಗಳ ಕರ್ನಾಟಕ ಸಂಗೀತ ಉತ್ಸವವನ್ನು ಹುಟ್ಟು ಹಾಕಿದ ನಾಗರತ್ನಮ್ಮನವರು, ತಮ್ಮ ಕೊನೆಯ ದಿನಗಳನ್ನು ತಿರುವಯ್ಯಾರ್ ಪಟ್ಟಣದಲ್ಲಿ ಕಳೆದರು. ಅಂತಿಮವಾಗಿ ತಾನು ಜೀವನ ಪೂರ್ತಿ ಆರಾಧಿಸಿ, ಧ್ಯಾನಿಸಿದ ಹಾಗೂ ತಮ್ಮ ಸಂಗೀತಕ್ಕೆ ಸ್ಪೂರ್ತಿಯಾದ ತ್ಯಾಗರಾಜರ ಸಮಾಧಿಯೆದುರು ತಾವೂ ಸಹ ಮಣ್ಣಾದರು.
ತಮಿಳುನಾಡಿನಲ್ಲಿ ಬಿ.ಎನ್.ಆರ್. ಅಥವಾ ಬೆಂಗಳೂರಿನ ನಾಗರತ್ನಮ್ಮ ಎಂಬ ಹೆಸರಿನಲ್ಲಿ ಪ್ರಸಿದ್ಧಿಯಾಗಿದ್ದ ಬೆಂಗಳೂರು ನಾಗರತ್ನಮ್ಮನವರು ಅಂದಿನ ಮದ್ರಾಸ್‌ನಗರದ ಜಾರ್ಜ್‍ಟೌನ್ ಪ್ರದೇಶದಲ್ಲಿ(ಈಗಿನ ಮದ್ರಾಸ್ ಹೈಕೋರ್ಟ್ ಕಟ್ಟಡದ ಎದುರುಗಿನ ಪ್ರದೇಶ) ಆ ಕಾಲದಲ್ಲಿ ಮ್ಯಾನ್ಸನ್ ಹೌಸ್ ಎಂದು ಕರೆಯಲಾಗುತ್ತಿದ್ದ ಎಂಟು ಕೊಠಡಿಯುಳ್ಳ ಬೃಹತ್ ಬಂಗಲೆಯೊಂದನ್ನು ನಿರ್ಮಿಸಿಕೊಂಡು ಕೊಡುಗೈದಾನಿಯಾಗಿ ಬದುಕಿದವರು. 1920 ರ ದಶಕದಲ್ಲಿ ದಕ್ಷಿಣ ಭಾರತದಲ್ಲಿ ಪ್ರಪ್ರಥವಾಗಿ ಬ್ರಿಟೀಷ್ ಸರ್ಕಾರಕ್ಕೆ ವರಮಾನ ತೆರಿಗೆಯನ್ನು ಪಾವತಿಸಿದ ಏಕೈಕ ಸಂಗೀತ ಕಲಾವಿದೆ ಎಂಬ ಖ್ಯಾತಿಯನ್ನು ಪಡೆದವರು. ತಮಿಳು ನಾಡಿನಲ್ಲಿ 26 ವರ್ಷಗಳ ಕಾಲ ಅಂದರೆ 1905-1931 ರ ನಡುವಿನ ಅವಧಿಯಲ್ಲಿ ದಕ್ಷಿಣ ಭಾರತದ 146 ನಗರಗಳು ಮತ್ತು ಪಟ್ಟಣಗಳಲ್ಲಿ 1235 ಕ್ಕೂ ಹೆಚ್ಚು ಸಂಗೀತ ಕಛೇರಿಗಳನ್ನು ನೀಡಿ ದಾಖಲೆ ಸ್ಥಾಪಿಸಿದ್ದರು. ಮದ್ರಾಸ್‌ನಗರವೊಂದರಲ್ಲಿ ನಾಗರತ್ನಮ್ಮನವರು 849 ಕಾರ್ಯಕ್ರಮಗಳನ್ನು ನಡೆಸಿದ ದಾಖಲೆಗಳಿವೆ. ಆನಂತರ ತಮ್ಮ ಇಡೀ ಸಂಪಾದನೆಯನ್ನು ಕರ್ನಾಟಕ ಸಂಗೀತದ ಆದ್ಯರೆಂದು ಪ್ರಸಿದ್ದಿಯಾದ ವಾಗ್ಗೇಯಕಾರ ತ್ಯಾಗರಾಜರ ಸಮಾಧಿಯ ಅಭಿವೃದ್ಧಿ ಮತ್ತು ತ್ಯಾಗರಾಜರ ಸಂಗೀತ ಆರಾಧನೆಗೆ ಧಾರೆಯೆರೆದು ದಕ್ಷಿಣ ಭಾರತದ ಸಂಗೀತದ ಇತಿಹಾಸದ ಪುಟಗಳಲ್ಲಿ ಅಳಿಸಲಾದ ಒಂದು ಅಪೂರ್ವ ಅಧ್ಯಾಯವಾಗಿ ಉಳಿದು ಹೋದರು. ಓರ್ವ ದೇವದಾಸಿಯ ಪುತ್ರಿಯಾಗಿ ಜನಿಸಿ, ಸ್ವಯಂ ಪ್ರತಿಭೆ, ಮತ್ತು ಸಾಧನೆಗಳ ಮೂಲಕ ಅಪ್ರತಿಮವಾದ ಬದುಕನ್ನು ಬದುಕಿದ ನಾಗರತ್ನಮ್ಮನವರು 1952 ರಲ್ಲಿ ತಿರುವಯ್ಯಾರು ಪಟ್ಟಣದಲ್ಲಿ ನಿಧನರಾದರು. ಆ ಸಂದರ್ಭದಲ್ಲಿ ಅಲ್ಲಿನ ಜನತೆ ಇವರಿಗೆ ತೋರಿದ ಗೌರವ ಹಾಗೂ ಇತರೆ ಸಂಗತಿಗಳು ಹಿಂದೂ ದಿನ ಪತ್ರಿಕೆಯೂ ಒಳಗೊಂಡಂತೆ ಅನೇಕ ತಮಿಳು ವಾರಪತ್ರಿಕೆ ಮತ್ತು ಮಾಸಪತ್ರಿಕೆಗಳಲ್ಲಿ ಸವಿವರವಾಗಿ ಪ್ರಕಟವಾಗಿವೆ.
1952 ರ ಮೇ 19 ರಂದು ತಿರುವಯ್ಯಾರ್ ಪಟ್ಟಣದಲ್ಲಿ ಬಿಸಲಿನ ಬೇಗೆ ತಾಳಲಾರದೆ ಬೀಸಣಿಗೆಯಿಂದ ಗಾಳಿ ಬೀಸಿಕೊಳ್ಳುತ್ತಾ ಕುಳಿತಿದ್ದ ನಾಗರತ್ನಮ್ಮನವರು, ಸ್ವಲ್ಪ ಸಮಯದ ಬಳಿಕ ಎದೆ ನೋವಿನಿಂದ ಬಳಲತೊಡಗಿದರು. ಅವರ ಸೇವಕ ತಕ್ಷಣವೆ ಸ್ಥಳೀಯ ವೈದ್ಯರನ್ನು ಕರೆತಂದನು. ನೆರೆಹೊರೆಯವರೂ ಸಹ ನಾಗರತ್ನಮ್ಮನವರ ಆರೈಕೆಗೆ ಓಡೋಡಿ ಬಂದರು. ನಾಗರತ್ನಮ್ಮವರ ಸ್ಥಿತಿ ಚಿಂತಾಜನಕವೆಂಬುದು ಮೇಲು ನೋಟಕ್ಕೆ ಎಲ್ಲರಿಗೂ ಗೋಚರಿಸುತ್ತಿತ್ತು. ವೈದ್ಯರಿಂದ ಯಾವುದೇ ಔಷಧ, ಇಂಜೆಕ್ಷನ್ ಅಥವಾ ಮಾತ್ರೆಗಳನ್ನು ತೆಗೆದುಕೊಳ್ಳುವುದಕ್ಕೆ ನಾಗರತ್ನಮ್ಮನವರು ನಿರಾಕರಿಸಿದರು. ತಾವು ಕುಳಿತಿದ್ದ ಕುರ್ಚಿಯಿಂದ ಕೆಳಗಿಳಿಸಿ, ನೆಲದ ಮೇಲೆ ಹಾಸಲಾಗಿದ್ದ ಚಾಪೆಯ ಮೇಲೆ ಮಲಗಿಸಲು ಕೇಳಿಕೊಂಡರು. ಅವರ ಅಪೇಕ್ಷೆಯಂತೆ ಚಾಪೆಯ ಮೇಲೆ ಅವರನ್ನು ಮಲಗಿಸಲಾಯಿತು. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿರುವುದನ್ನು ಮದ್ರಾಸ್‌ನಗರದಲ್ಲಿದ್ದ ಸಿ.ವಿ. ರಾಜಗೋಪಾಲಚಾರಿ (ರಾಜಾಜಿ) ಮತ್ತು ಟಿ.ಎ. ರಾಮಚಂದ್ರರಾವ್ ಹಾಗೂ ಬನ್ನಿಬಾಯಿ ಎಂಬ ಹೆಣ್ಣು ಮಗಳಿಗೆ ದೂರವಾಣಿ ಮೂಲಕ ತಿಳಿಸಲಾಯಿತು. ಸಾವು ತನ್ನ ಸನಿಹದಲ್ಲಿದೆ ಎಂಬುದನ್ನು ಗ್ರಹಿಸಿದ ನಾಗರತ್ನಮ್ಮನವರು ಪಚ್ಚಾಯಿ ಎಂಬುವರನ್ನು ಬಳಿಗೆ ಕರೆದು ರಾಮಮಂತ್ರ ಜಪಿಸುವಂತೆ ಕೇಳಿಕೊಂಡರು. ತನ್ನ ತೊಡೆಯ ಮೇಲೆ ನಾಗರತ್ನಮ್ಮವರ ತಲೆ ಇರಿಸಿಕೊಂಡ ಅವರ ಗೆಳತಿ ಪಚ್ಚಾಯಿ ಎಂಬಾಕೆ ರಾಮ ಮತ್ತು ಆಂಜನೇಯನನ್ನು ಸ್ತುತಿಸುವ ತೆಲುಗು ಭಕ್ತಿಗೀತೆಗಳನ್ನು ಮೆಲುದನಿಯಲ್ಲಿ ಹಾಡತೊಡಗಿದರು. ರಾಮನ ಭಜನೆ ಅವರ ಕಿವಿಗೆ ಬೀಳುತ್ತಿದ್ದಂತೆ ಮುಖದಲ್ಲಿ ಮಂದಹಾಸ ಬೀರಿದ ನಾಗರತ್ನಮ್ಮನವರು ಅದೇ ನಗೆಯೊಂದಿಗೆ ಕೊನೆಯುಸಿರೆಳೆದಿದ್ದರು.
ಮರುದಿನ ಮದ್ರಾಸ್‌ನಗರದಿಂದ ರಾಜಾಜಿ ಮತ್ತು ರಾಮಚಂದ್ರರಾವ್ ತಿರುವಯ್ಯೂರಿಗೆ ಆಗಮಿಸಿದರು. ಅವರು ತಲುಪುವ ವೇಳೆಗೆ ಇಡೀ ತಮಿಳುನಾಡಿನ ಸಂಗೀತ ವಿದ್ವಾಂಸರು ಮತ್ತು ಸಂಗೀತ ಪ್ರೇಮಿಗಳು ನಾಗರತ್ನಮ್ಮನವರ ನಿವಾಸದ ಮುಂದೆ ಅಂತಿಮ ನಮನ ಸಲ್ಲಿಸಲು ಸಾಗರೋಪಾದಿಯಲ್ಲಿ ನೆರೆದಿದ್ದರು. ತ್ಯಾಗರಾಜರ ಆರಾಧನೆಯಲ್ಲಿ ಸಂಗೀತದ ಸವಿಯನ್ನು ಅನುಭವಿಸಿದ್ದ ತಂಜಾವೂರು ಮತ್ತು ಕುಂಭಕೋಣಂನ ಸುತ್ತಮುತ್ತಲಿನ ಹಳ್ಳಿಗಳ ಜನತೆ ಪ್ರವಾಹದ ರೀತಿಯಲ್ಲಿ ಬಂದು ಅಂತಿಮ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದರು. ಉತ್ತರ ಅರ್ಕಾಟ್ ಸಂಸ್ಥಾನದ ನವಾಬರು ನಾಗರತ್ನಮ್ಮನವರ ಅಂತಿಮಯಾತ್ರೆಗೆ ಅನುಕೂಲವಾಗುವಂತೆ ತಮ್ಮ ಬಳಿ ಇದ್ದ ತೆರೆದ ವಿದೇಶಿ ಕಾರನ್ನು ಕಳಿಸಿಕೊಡುವುದರ ಜೊತೆಗೆ, ಮಲ್ಲಿಗೆ ಹೂವಿನ ಹಾರ ಮತ್ತು ಒಂದು ಬೆಲೆ ಬಾಳುವ ರೇಷ್ಮೆಯ ಸೀರೆಯನ್ನು ಗೌರವಾರ್ಥವಾಗಿ ಕಳುಹಿಸಿಕೊಟ್ಟಿದ್ದರು.
ನಾಗರತ್ನಮ್ಮನವರ ಮೃತದೇಹಕ್ಕೆ ಸ್ನಾನ ಮಾಡಿಸಿ, ರೇಷ್ಮೆಯ ಸೀರೆಯಿಂದ ಅಲಂಕಾರ ಮಾಡಿ, ಅವರನ್ನು ಮನೆಯ ಗೋಡೆಗೆ ಒರಗಿಸಿ, ದೇವತೆಯ ಮೂರ್ತಿಯಂತೆ ಕೂರಿಸಲಾಯಿತು. ಅಂತಿಮ ದರ್ಶನ ಪಡೆಯಲು ಬಂದ ಜನ ಅವರ ಹಣೆಗೆ ಅರಿಶಿನ ಕುಂಕುಮ ಇಟ್ಟು ನಮಸ್ಕರಿಸಿದರು. ಇನ್ನೂ ಕೆಲವರು ಅವರ ಪಾದಗಳಿಗೆ ತಮ್ಮ ಹಣೆಯನ್ನು ತಾಗಿಸಿ, ಗೌರವ ಸೂಚಿಸಿದರು. ಆ ದಿನ ಇಡೀ ತಿರುವಯ್ಯಾರ್ ಪಟ್ಟಣದ ಜನತೆ ತಮ್ಮ ಅಂಗಡಿ , ಮುಂಗಟ್ಟುಗಳ ವಹಿವಾಟನ್ನು ಸ್ಥಗಿತಗೊಳಿಸಿ ಶೋಕಾಚರಣೆ ನಡೆಸಿದರು. ಅಂತ್ಯ ಸಂಸ್ಕಾರಕ್ಕೆ ಹಾಜರಿದ್ದ ರಾಜಾಜಿ ಹಾಗೂ ಸಂಗೀತ ವಿದ್ವಾಂಸರು ನಾಗರತ್ನಮ್ಮನವರ ಮೃತದೇಹವನ್ನು ತೆರೆದ ಕಾರಿನ ಬದಲು ಪಲ್ಲಕ್ಕಿಯಲ್ಲಿ ಹೊತ್ತು ತಿರುವಯ್ಯೂರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು. ನಂತರ ತ್ಯಾಗರಾಜರ ಸಮಾಧಿ ಎದುರು ಅಂತ್ಯಕ್ರಿಯೆ ನೆರವೇರಿಸಲು ತೀರ್ಮಾನಿಸಿದರು. ಪ್ರತಿ ವರ್ಷ ತ್ಯಾಗರಾಜರ ಆರಾಧನೆಯ ಸಂದರ್ಭದಲ್ಲಿ ತ್ಯಾಗರಾಜರ ಭಾವಚಿತ್ರವನ್ನು ಹೊತ್ತು ಮೆರವಣಿಗೆಯಲ್ಲಿ ಸಾಗುತ್ತಿದ್ದ ಪಲ್ಲಕ್ಕಿಯನ್ನು ನಾಗರತ್ನಮ್ಮನವರ ಅಂತಿಮ ಯಾತ್ರೆಗೆ ಬಳಸಲಾಯಿತು. ತಮ್ಮ ಜೀವನಪೂರ್ತಿ ಯಾವ ಗುರುವನ್ನು ದೇವರೆಂದು ಧ್ಯಾನಿಸಿ, ಆರಾಧಿಸಿದ್ದರೊ, ಅದೇ ಗುರುಗಳ ಪಲ್ಲಕ್ಕಿಯಲ್ಲಿ ನಾಗರತ್ನಮ್ಮನವರು ನಿರ್ಜೀವ ದೇವತೆಯಂತೆ ಕುಳಿತು ಮರೆವಣಿಗೆಯಲ್ಲಿ ಸಾಗಿದರು. ಅಂತಿಮ ಯಾತ್ರೆಯುದ್ದಕ್ಕೂ “ರಘಪತಿ ರಾಘವ ರಾಜಾರಾಂ” ಭಜನೆಯನ್ನು ಪಠಿಸಲಾಯಿತು.
ತ್ಯಾಗರಾಜರ ಸಮಾಧಿ ಮತ್ತು ದೇವಸ್ಥಾನದ ಅಭಿವೃದ್ಧಿಗಾಗಿ ಕಾವೇರಿ ನದಿ ತೀರದಲ್ಲಿದ್ದ 23 ಎಕರೆ ತೆಂಗಿನ ತೋಟದ ಪ್ರದೇಶವನ್ನು ಸ್ವಂತ ಹಣದ ಮೂಲಕ ಖರೀದಿ ಮಾಡಿದ್ದ ನಾಗರತ್ನಮ್ಮನವರನ್ನು ಅದೇ ಭೂಮಿಯಲ್ಲಿ ಹೂಳಲು ರಾಜಾಜಿಯವರು ನಿರ್ಧರಿಸಿದ್ದರು. ಅವರ ಈ ನಿರ್ಣಯಕ್ಕೆ ಬ್ರಾಹ್ಮಣ ಸಮುದಾಯದಿಂದ ವಿರೋಧ ವ್ಯಕ್ತವಾಗಬಹುದೆಂಬ ಆತಂಕವೂ ಸಹ ಎದುರಾಯಿತು. ಆದರೆ, ಭಾರತದ ಪ್ರಥಮ ಗೌರ್ನರ್ ಜನರಲ್ ಹುದ್ದೆಯನ್ನು ಅಲಂಕರಿಸಿದ್ದ, ಸ್ವತಃ ಓರ್ವ ಬ್ರಾಹ್ಮಣ ವ್ಯಕ್ತಿಯಾಗಿ, ಪ್ರಸಿದ್ಧ ವಕೀಲರಾಗಿ, ತಮಿಳುನಾಡಿನ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರಾಗಿ ಹೊರಹೊಮ್ಮಿದ್ದ ರಾಜಾಜಿಯವರ ನಿರ್ಧಾರವನ್ನು ಪ್ರಶ್ನಿಸುವ ಅಥವಾ ಪ್ರತಿಭಟಿಸುವ ನೈತಿಕತೆ ಅಥವಾ ಧೈರ್ಯ ಯಾರಿಗೂ ಇರಲಿಲ್ಲ. ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮುಗಿಸಿ, ತ್ಯಾಗರಾಜರ ಸಮಾಧಿ ಎದುರು ನಾಗರತ್ನಮ್ಮನವರ ಶವವಿದ್ದ ಪಲ್ಲಕ್ಕಿಯನ್ನು ಹೊತ್ತು ತರುವ ವೇಳೆಗೆ ಪಾರ್ಥಿವ ಶರೀರ ಮತ್ತು ಪಲ್ಲಕ್ಕಿ ಇವುಗಳು ಹೂಮಾಲೆಗಳ ರಾಶಿಯಿಂದ ಮುಚ್ಚಿಹೋಗಿದ್ದವು.
ಅಂತಿಮ ವಿಧಿ ವಿಧಾನಗಳೊಂದಿಗೆ ತ್ಯಾಗರಾಜರ ಸಮಾಧಿಗೆ ಎದುರಾಗಿ ಸುಮಾರು ಮುನ್ನೂರು ಅಡಿ ದೂರದಲ್ಲಿ ಕಾವೇರಿ ನದಿಯ ತಟದಲ್ಲಿ ನಾಗರತ್ನಮ್ಮನವರ ಅಂತ್ಯ ಸಂಸ್ಕಾರವನ್ನು ನೆರವೇರಿಸಲಾಯಿತು. ಸಂಸ್ಕಾರಕ್ಕೆ ನೆರೆದಿದ್ದ ಜನಸ್ತೋಮವನ್ನು ನಿಯಂತ್ರಿಸಲು ತಂಜಾವೂರು ನಗರದಿಂದ ನೂರಾರು ಪೊಲೀಸ್ ಸಿಬ್ಬಂದಿ ಮತ್ತು ಸ್ಕೌಟ್ ದಳದ ಕಾರ್ಯಕರ್ತರನ್ನು ಕರೆಸಲಾಗಿತ್ತು. ಅಂತ್ಯಕ್ರಿಯೆ ನೆರವೇರಿದ ನಂತರ ರಾಜಾಜಿಯವರು ವಾಪಸ್ ಮದ್ರಾಸ್ ನಗರಕ್ಕೆ ತೆರಳದೆ, ಒಂದು ವಾರ ಕಾಲ ತಿರುವಯ್ಯೂರು ಪಟ್ಟಣದಲ್ಲಿ ನೆಲೆ ನಿಂತರು. (ತಿರುವಯ್ಯೂರು ರಾಜಾಜಿಯವರ ಜನ್ಮ ಸ್ಥಳ) ದೇವದಾಸಿ ಹೆಣ್ಣು ಮಗಳನ್ನು ಬ್ರಾಹ್ಮಣ ಕುಲಕ್ಕೆ ಸೇರಿದ ಸದ್ಗುರು ತ್ಯಾಗರಾಜರ ಸಮಾಧಿ ಎದುರು ಶವ ಸಂಸ್ಕಾರ ಮಾಡಿದ್ದು ಸಂಪ್ರದಾಯಸ್ಥ ಮನಸ್ಸಿನ ಹಲವು ಬ್ರಾಹ್ಮಣರ ಅಸಮಾಧಾನಕ್ಕೆ ಕಾರಣವಾಗಿತ್ತು. ಹಾಗಾಗಿ ಶವವನ್ನು ಹೊರತೆಗೆದು ನದಿಗೆ ಬಿಸಾಡುವ ಭಯ ಅವರಲ್ಲಿತ್ತು. ಪ್ರತಿ ದಿನ ಸಂಜೆ ನದಿ ತೀರದ ಸಮಾಧಿ ಸ್ಥಳಕ್ಕೆ ಹೋಗುತ್ತಿದ್ದ ರಾಜಾಜಿಯವರು, ತಮ್ಮ ಶಿಷ್ಯರೊಂದಿಗೆ ಮಧ್ಯರಾತ್ರಿಯವರೆಗೆ ಅಲ್ಲಿ ಕುಳಿತು ಬರುತ್ತಿದ್ದರು. ನಾಗರತ್ನಮ್ಮವರನ್ನು ಸಮಾಧಿ ಮಾಡಿದ ಸ್ಥಳದಲ್ಲಿ ಬೃಂದಾವನ ನಿರ್ಮಾಣವಾದ ನಂತರ ಅವರು ನಿಟ್ಟುಸಿರು ಬಿಟ್ಟರು.
ಹನ್ನೊಂದನೆಯ ದಿನದ ಉತ್ತರ ಕ್ರಿಯಾದಿ ಭೂಶಾಂತಿ ಕಾರ್ಯಗಳು ಬನ್ನಿಬಾಯಿ ಅವರ ನೇತೃತ್ವದಲ್ಲಿ ಜರುಗಿದವು. ನಾಗರತ್ನಮ್ಮನವರ ಅಪೇಕ್ಷೆಯಂತೆ ಆ ದಿನ ಸಾವಿರಾರು ಮಂದಿ ಬಡವರಿಗೆ ಅನ್ನದಾನ ಮಾಡಲಾಯಿತು. ನಾಗರತ್ನಮ್ಮನವರು ನಿಧನರಾಗಿ ವರ್ಷ ಕಳೆದ ನಂತರ ಮೊದಲ ವರ್ಷದ ಪುಣ್ಯ ತಿಥಿ ಆಚರಿಸಲು ನಾಗರತ್ನಮ್ಮನವರ ಸಾಕುಮಗಳಂತಿದ್ದ ಬನ್ನಿ ಬಾಯಿ ಸಿದ್ಧತೆ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ನಾಗರತ್ನಮ್ಮನವರ ನಿವಾಸಕ್ಕೆ ಬಂದರು. ಬನ್ನಿಬಾಯಿಗೆ ಆ ವ್ಯಕ್ತಿಯ ಮುಖಪರಿಚಯವಿತ್ತು. ದಕ್ಷಿಣ ರೈಲ್ವೆಯಲ್ಲಿ ಉದ್ಯೋಗಿಯಾಗಿದ್ದ ಅವರು ತನ್ನ ನಿವೃತ್ತಿಯ ಸಮಯದಲ್ಲಿ ದೇಗುಲಗಳ ಪಟ್ಟಣವಾದ ಸೊಲಿಂಗೂರ್ ಎಂಬಲ್ಲಿ ರೈಲ್ವೆ ಸ್ಟೇಶನ್ ಮಾಸ್ಟರ್ ಕಾರ್ಯನಿರ್ವಹಿಸಿದ್ದರು. ನಾಗರತ್ನಮ್ಮನವರು ತಿರುವಯ್ಯೂರು ಪಟ್ಟಣದಲ್ಲಿ ಅನಾಥವಾಗಿದ್ದ ತ್ಯಾಗರಾಜರ ಸಮಾಧಿಯನ್ನು ಮುಳ್ಳು ಹಾಗೂ ಗಿಡಗಂಟಿಗಳ ನಡುವೆ ಹುಡುಕಿ ಅದನ್ನು ಪುನರುತ್ಥಾನ ಗೊಳಿಸಿದ್ದು, ತ್ಯಾಗರಾಜರ ಆರಾಧನೆ ಆರಂಭಿಸಿದ್ದನ್ನು ನೋಡಿದ್ದರು. ಆರಾಧನೆಯ ವೇಳೆ ಪೂಜೆ ಮತ್ತು ಸಂಗೀತಾರಾಧನೆಗಾಗಿ ಎರಡು ಬಣಗಳು ಸೃಷ್ಟಿಯಾಗಿ ಚಿನ್ನ ಕಚ್ಚಿ ಹಾಗೂ ಪೆರಿಯ ಕಚ್ಚಿ ( ಕಿರಿಯಬಣ, ಹಿರಿಯ ಬಣ) ಇವರುಗಳ ಹೋರಾಟದ ನಡುವೆ ನಲುಗಿ, ಕೊನೆಗೆ ಎಲ್ಲರನ್ನೂ ಒಂದುಗೂಡಿಸಿದ್ದು, ಸಂಗೀತ ಕಛೇರಿಗೆ ಮಹಿಳಾ ಕಲಾವಿದೆಯರಿಗೆ ಅವಕಾಶ ನಿರಾಕರಿಸಿದ ಸಂದರ್ಭದಲ್ಲಿ ಆರಾಧನೆಗೆ ಪರ್ಯಾಯವಾಗಿ ಮಹಿಳಾ ಸಂಗೀತಗಾರರಿಂದ ಕಛೇರಿಯನ್ನು ನಡೆಸಿ ಪ್ರತಿಭಟಿಸಿದ್ದು ಹೀಗೆ ನಾಗರತ್ನಮ್ಮನವರ ಹಲವಾರು ಸಾಹಸದ ಘಟನೆಗಳಿಗೆ ಈ ವ್ಯಕ್ತಿ ಮೌನ ಸಾಕ್ಷಿಯಾಗಿದ್ದಕೊಂಡು ಅವರನ್ನು ಮನದಲ್ಲಿ ದೇವತೆಯಂತೆ ಪೂಜಿಸುತ್ತಿದ್ದರು. ಅವರ ಪ್ರಥಮ ಪುಣ್ಯತಿಥಿಯ ಸಂದರ್ಭಕ್ಕೆ ಪ್ರತಿಮೆಯನ್ನು ಸಿದ್ದಪಡಿಸಿ ಕೊಡುವುದಾಗಿ ಹೇಳಿ ಅದನ್ನು ಅವರ ಸಮಾಧಿಯ ಸ್ಥಳದಲ್ಲಿ ಸ್ಥಾಪಿಸಲು ಅನುಮತಿ ನೀಡುವಂತೆ ಬನ್ನಿಬಾಯಿ ಬಳಿ ವಿನಂತಿಸಿಕೊಂಡರು. ಆ ವ್ಯಕ್ತಿಯ ಹೃದಯ ವೈಶಾಲ್ಯತೆಗೆ ಮಾರು ಹೋದ ಬನ್ನಿ ಬಾಯಿ ಮತ್ತು ಸಂಗಡಿಗರು ಸನ್ಯಾಸಿಯ ಕೋರಿಕೆಗೆ ಸಮ್ಮತಿಸಿದರು. ನಾಗರತ್ನಮ್ಮನವರು ಕುಳಿತು, ತನ್ನ ಗುರುವಿಗೆ ಕೈ ಜೋಡಿಸಿ ನಮಸ್ಕರಿಸುತ್ತಿರುವ ಭಂಗಿಯಲ್ಲಿ ಕಪ್ಪು ಶಿಲೆಯಲ್ಲಿ ನಿರ್ಮಿಸಿದ ಪ್ರತಿಮೆಯನ್ನು ನಾಗರತ್ನಮ್ಮನವರ ಸಮಾಧಿಯ ಮೇಲೆ ಪ್ರತಿಷ್ಠಾಪಿಸಲಾಗಿದೆ. ಇದರಿಂದಾಗಿ ತ್ಯಾಗರಾಜರ ದರ್ಶನಕ್ಕೆ ಬಂದವರ ಪಾಲಿಗೆ ನಾಗರತ್ನಮ್ಮ ಎಂಬ ಸಂಗೀತ ದೇವತೆಯ ದರ್ಶನವೂ ದೊರಕುವಂತಾಯಿತು. 1962 ರ ವರೆಗೆ ಎಣ್ಣೆಯ ದೀಪಗಳಿಂದ ಮಾತ್ರ ಬೆಳಗುತ್ತಿದ್ದ ಈ ಎರಡು ದೇವಸ್ಥಾನಗಳಿಗೆ ಅಂದರೆ, ತ್ಯಾಗರಾಜರ ಮತ್ತು ನಾಗರತ್ನಮ್ಮನವರ ಸಮಾಧಿಗಳಿಗೆ ನಮ್ಮ ಕೋಲಾರದ ಕಲಾವಂತಲು ಎಂದು ಆಂಧ್ರದಲ್ಲಿ ಕರೆಸಿಕೊಳ್ಳುವ ದೇವದಾಸಿ ಸಮುದಾಯದಿಂದ ಬಂದ ಕೋಲಾರ ರಾಜಮ್ಮ ಎಂಬ ಸಂಗೀತ ಕಲಾವಿದೆಯೊಬ್ಬರು ವಿದ್ಯುತ್ ಸಂಪರ್ಕ ಕಲ್ಪಿಸಿಕೊಟ್ಟರು.
ತಿರುವಯ್ಯೂರ್ ಪಟ್ಟಣ ಇದೀಗ ತ್ಯಾಗರಾಜರ ಸಂಸ್ಕ್ರತಿಯಿಂದ ಆವರಿಸಿಕೊಂಡಿದೆ. ಆದರೆ, ಇದಕ್ಕೆ ಕಾರಣರಾದ ನಾಗರತ್ನಮ್ಮನವರ ನೆನಪು ಮಾತ್ರ ಯಾರಿಗೂ ಬೇಡವಾಗಿದೆ. ತ್ಯಾಗರಾಜರ ಸಮಾಧಿ ಇರುವ ದೇವಸ್ಥಾನದ ಎದುರು ನಿರ್ಮಿಸುವ ಬೃಹತ್ ಪೆಂಡಾಲ್ ಕೆಳಗೆ ನಡೆಯುವ ತ್ಯಾಗರಾಜರ ಸಂಗೀತ ಆರಾಧನೆಗೆ ನಾಗರತ್ನಮ್ಮನವರ ಸಮಾಧಿ ಮತ್ತು ಮೂರ್ತಿ ಇರುವ ಸ್ಥಳದ ಮುಂಭಾಗದಲ್ಲಿ ಎರಡು ವೇದಿಕೆಗಳನ್ನು ನಿರ್ಮಿಸಲಾಗುತ್ತದೆ. ಜೊತೆಗೆ ವೇದಿಕೆಯ ಹಿಂಬಾಗದಲ್ಲಿ ಬೃಹತ್ತಾದ ಪರದೆಯನ್ನು ಹಾಕಿ ನಾಗರತ್ನಮ್ಮನವರ ಪ್ರತಿಮೆ ಇರುವ ದೇಗುಲವನ್ನು (ಸಮಾಧಿ) ಮುಚ್ಚಲಾಗುತ್ತದೆ. ಪರದೆಯ ಮುಂಭಾಗದಲ್ಲಿ ಇರುವ ಎರಡು ಸಮಾನಾಂತರ ವೇದಿಕೆಗಳಲ್ಲಿ ಮೂರು ದಿನಗಳ ಕಾಲ ಬೆಳಿಗ್ಗೆ ಆರು ಗಂಟೆಯಿಂದ ಮಧ್ಯರಾತ್ರಿ ಹನ್ನೆರೆಡು ಗಂಟೆಯವರಿಗೆ ನಿರಂತರವಾಗಿ ಸಂಗೀತ ಕಾರ್ಯಕ್ರಮಗಳು ಜರುಗುತ್ತವೆ. ಸಂಗೀತದ ಜೊತೆಗೆ ತ್ಯಾಗರಾಜರ ಸಮಾಧಿಯ ಬಳಿ ನಿರಂತರ ಪೂಜೆ ಪುರಸ್ಕಾರಗಳು ನೆರವೇರುತ್ತಲೇ ಇರುತ್ತವೆ ಆದರೆ ಇದೆಕ್ಕೆಲ್ಲಾ ಕಾರಣರಾದ ತ್ಯಾಗಮಯಿ ನಾಗರತ್ನಮ್ಮನವರ ಮೂರ್ತಿ ಮಾತ್ರ ವೇದಿಕೆ ಮತ್ತು ಪರದೆಯ ಹಿಂದೆ ಅನಾಥವಾಗಿರುತ್ತದೆ.
ತಿರುವಯ್ಯೂರಿನ ಕಾವೇರಿ ನದಿ ತಟದ ನಾಗರತ್ನಮ್ಮನವರ ಸಮಾಧಿ ಬಳಿ ಇರುವಾಗ ಒಂದು ಘಟನೆ ಜರುಗಿತು. ಅದು ಮಧ್ಯಾಹ್ನ 12-30 ರ ಸಮಯ. ಸುಮಾರು ಎಪ್ಪತ್ತು ವಯಸ್ಸಿನ ದೈತ್ಯಾಕಾರದ ಹಾಗೂ ಆರಡಿ ಎತ್ತರದ, ಕಪ್ಪನೆಯ ಕಾಯದ ವ್ಯಕ್ತಿಯೊಬ್ಬರು ನದಿಯ ಬಳಿ ಬಂದು ತಾನು ಉಟ್ಟಿದ್ದ ಜುಬ್ಬಾ ಮತ್ತು ಪಂಚೆಯಲ್ಲಿ ನದಿಗೆ ಇಳಿದು ಮೂರು ಬಾರಿ ಮುಳುಗು ಹಾಕಿದರು. ನಂತರ ಒದ್ದೆ ಬಟ್ಟೆಗಳ ಶರೀರದಲ್ಲಿ ತ್ಯಾಗರಾಜರ ಸಮಾಧಿಯೆದುರು ಹಾಗೂ ನಾಗರತ್ನಮ್ಮನವರ ಸಮಾಧಿಯೆದುರು ಎರಡು ನಿಮಿಷಗಳ ಕಾಲ ಕೈಮುಗಿಯುತ್ತಾ ನಿಂತು ಪ್ರಾರ್ಥಿಸಿದರು. ಮತ್ತೆ ನದಿಗೆ ಬಂದು ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿ ಹೊರಡಲು ಅಣಿಯಾದರು. ಇದೆಲ್ಲವನ್ನು ಕುತೂಹಲದಿಂದ ಗಮನಿಸುತ್ತಿದ್ದ ನಾನು ಅವರನ್ನು ತಮಿಳಿನಲ್ಲಿ ಪ್ರಶ್ನಿಸಿದೆ. ನನ್ನ ಪ್ರಶ್ನೆಗೆ ಉತ್ತರಿಸಲು ನನ್ನ ಸನಿಹ ಬಂದು ಕುಳಿತ ಆ ಹಿರಿಯ ವ್ಯಕ್ತಿ ಆಡಿದ ಮಾತುಗಳು ಹೀಗಿದ್ದವು. , “ ನಾನು ಕುಂಭಕೋಣಂ ಸಮೀಪದ ಒಂದು ಹಳ್ಳಿಯವನು. ವೃತ್ತಿಯಲ್ಲಿ ಕ್ಷೌರಿಕ ಜನಾಂಗದವನು. ಆದರೆ, ಬಾಲ್ಯದಲ್ಲಿ ಕಲಿತ ಕರ್ನಾಟಕ ಸಂಗೀತದ ನಾದಸ್ವರ ವಾದನದ ವೃತ್ತಿಯಿಂದಾಗಿ ನೆಮ್ಮದಿಯ ಬದುಕನ್ನು ಕಟ್ಟಿಕೊಂಡಿದ್ದೀನಿ. ನನ್ನ ಕುಟುಂಬದ ಸ್ಥಿತಿ ಈಗ ಉತ್ತಮವಾಗಿದೆ, ಹಾಗಾಗಿ ತಂಜಾವೂರಿನ ಕಡೆ ಬಂದಾಗ, ಇಲ್ಲಿಗೆ ಬಂದು ಕರ್ನಾಟಕ ಸಂಗೀತದ ಮೂಲಕ ನನ್ನ ಬದುಕಿಗೆ ದಾರಿಯಾದ ಈ ಮಹನೀಯರಿಗೆ ( ತ್ಯಾಗರಾಜರು) ಮತ್ತು ಆ ಮಹಾತಾಯಿಗೆ(ನಾಗರತ್ನಮ್ಮನವರು) ನಮನ ಸಲ್ಲಿಸಿ ಹೋಗುತ್ತೇನೆ” ಎಂದು ಹೇಳುತ್ತಾ ಆ ಎರಡು ಸಮಾಧಿಗಳತ್ತ ತಿರುಗಿ ಆ ಹಿರಿಯ ಜೀವ ಕೈ ಮುಗಿಯುವಾಗ ನನ್ನ ಕಣ್ಣುಗಳು ತೇವಗೊಂಡವು. ಗೆದ್ದಲು ಕಟ್ಟಿದ ಹುತ್ತಕ್ಕೆ ಹಾವು ಬಂದು ತಳವೂರಿತು ಎಂಬ ನುಡಿಯಂತೆ ಅಪಾತ್ರರೆಲ್ಲಾ ಇಂದು ನಾಗರತ್ನಮ್ಮನವರ ಟ್ರಸ್ಟ್ ಅನ್ನು ಆಕ್ರಮಿಸಿಕೊಂಡು ಸಂಗೀತದ ಪೋಷಕರು ಎಂಬ ಮುಖವಾಡ ಹೊತ್ತಿರುವ ಈ ದಿನಗಳಲ್ಲಿ, ಯಾವುದೇ ಮುಖವಾಡವಿಲ್ಲದ ಅಶಿಕ್ಷಿತ ಜನಸಾಮಾನ್ಯನೊಬ್ಬ ನಾಗರತ್ನಮ್ಮನವರನ್ನು ತನ್ನ ಎದೆಯಲ್ಲಿಟ್ಟುಕೊಂಡು ಪೂಜಿಸುತ್ತಿರುವ ಕಥೆ ಕೇಳಿ ಮನಸ್ಸು ಕೊಂಚ ಹಗುರಾಯಿತು. ಹುಟ್ಟಿ ಬೆಳೆದ ನೆಲ ಮತ್ತು ತನ್ನ ಕರ್ಮಭೂಮಿಯನ್ನಾಗಿಸಿಕೊಂಡ ನೆಲ ಈ ಎರಡಕ್ಕೂ ಅನಾಮಿಕರಾಗಿ ಹೋಗುತ್ತಿರುವ ಬೆಂಗಳೂರು ನಾಗರತ್ನಮ್ಮನವರ ಸಾಧನೆಗೆ ಸಾವಿಲ್ಲವೆಂಬ ಭರವಸೆ ಮನಸ್ಸಿನೊಳಗೆ ಚಿಗುರೊಡೆಯತೊಡಗಿತು.
ಡಾ.ಎನ್.ಜಗದೀಶ್ ಕೊಪ್ಪ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.