ಸ್ರ್ತೀ ಎಂದರೆ ಅಷ್ಟೇ ಸಾಕೆ?/ಭೂಮಿಯ ಪಿಸುಮಾತು ಆಲಿಸಿದ ಇಂಗೆ ಲೆಹ್ಮನ್-ಟಿ.ಆರ್. ಅನಂತರಾಮು
ಭೂಮಿಯ ಪಿಸುಮಾತುಗಳನ್ನು ಕೇಳಿಸಿಕೊಳ್ಳುತ್ತ, ಭೂಕಂಪನದ ಅಲೆಗಳ ಮರ್ಮ ತಿಳಿಯುತ್ತ, ಕ್ರಾಂತಿಕಾರಕ ಊಹೆಗಳನ್ನು ಮಾಡುತ್ತ ಭೂಮಿಯ ಅಂತರಾಳವನ್ನು ಅರಿಯಲೆತ್ನಿಸಿದ ಇಂಗೆ ಲೆಹ್ಮನ್ ವಿಜ್ಞಾನಕ್ಕೆ ಕೊಟ್ಟ ಕೊಡುಗೆಗಳು ಬಹಳ ಅಮೂಲ್ಯ. ಪುರುಷ ಪ್ರಾಧಾನ್ಯವನ್ನು ಲೆಕ್ಕಕ್ಕಿಡದೆ ಏಕಾಂಗಿಯಾಗಿ ಮುನ್ನಡೆದು ಹೆಜ್ಜೆಗುರುತುಗಳನ್ನು ಮೂಡಿಸಿದ ಅವರ ಜೀವನೋತ್ಸಾಹವೇ ಒಂದು ರೂಪಕ. ಭೂಮಿ ಮತ್ತು ಆಕಾಶದ ಹಲವು ವಿಶೇಷಗಳಿಗೆ ಇಂಗೆ ಲೆಹ್ಮನ್ ಹೆಸರು ಇಡಲಾಗಿದ್ದು, ಹಲವು ಪ್ರಥಮಗಳ ಗೌರವವನ್ನು ಅವರು ಪಡೆದಿದ್ದಾರೆ. ಇಂಗೆ ಲೆಹ್ಮನ್ ಮತ್ತು ಅವರಂಥ ವಿಜ್ಞಾನ ವಿದ್ವನ್ಮಣಿಗಳನ್ನು ಈ ಲೇಖನಮಾಲೆ ಪರಿಚಯಿಸಲಿದೆ.
ಎದುರಿಗೆ ಬಂದ ಪರಿಚಿತರೋ ಅಥವಾ ಅಪರಿಚಿತರೋ ದಿಢೀರೆಂದು ನಿಮ್ಮನ್ನು ಉದ್ದೇಶಿಸಿ “ನಿಮ್ಮ ಕಾಲಕೆಳಗೆ ಏನಿದೆ?" ಎಂದು ಕೇಳಿದರೆ ನಿಮ್ಮ ಸ್ಥಿತಿ ಆಗ ಹೇಗಿರಬಹುದು? ಹಾವೋ, ಚೇಳೋ, ಇನ್ನೇನೋ ಇದ್ದೀತು ಎಂದು ಊಹೆಮಾಡಿಕೊಂಡೇ ಗಾಬರಿಪಟ್ಟು ಸರಕ್ಕನೆ ಕಾಲು ತೆಗೆಯುತ್ತೀರಿ ಅಲ್ಲವೆ? "ಕಾಲಕೆಳಗೆ ಏನಿದೆ" ಎಂಬುದು ಜನಸಾಮಾನ್ಯರ ದೃಷ್ಟಿಯಲ್ಲಿ ಇದಕ್ಕಿಂತ ಬೇರೆ ಅರ್ಥಗಳಿಸುವುದಿಲ್ಲ.
ಇದೇ ಪ್ರಶ್ನೆಯನ್ನು ಸಂಪ್ರದಾಯವಾದಿಗಳಿಗೆ ಕೇಳಿದರೆ, ತಡವರಿಸದೆ
ಕಾಲಕೆಳಗೆ ಅತಲ, ವಿತಲ, ಸುತಲ, ರಸಾತಲ, ಮಹಾತಲ, ತಲಾತಲಾ, ಪಾತಾಲ ಎಂಬ ಏಳು ಲೋಕಗಳಿವೆ’ ಎಂದು ಪುರಾಣಗಳು ಹೇಳುತ್ತ ಬಂದ ಪಟ್ಟಿಯನ್ನೇ ನಿಮ್ಮ ಮುಂದಿಡುತ್ತಾರೆ. ಗ್ರೀಕರೂ ಹಾಗೇ ನಂಬಿದ್ದರು, ಈಜಿಪ್ಟಿನವರೂ ಹಾಗೇ ನಂಬಿದ್ದರು. ಒಬ್ಬರಲ್ಲ ಒಬ್ಬರಿಗೆ ಪಾತಾಳ ದೇವತೆಯ ಪಟ್ಟ. ಕಣ್ಣುಬಿಟ್ಟು ನಿರಭ್ರ ಆಕಾಶ ನೋಡಿದರೆ ಎಷ್ಟೋ ಕೋಟಿ ಕಿಲೋ ಮೀಟರ್ ದೂರವಿರುವ ನಕ್ಷತ್ರಗಳು ಕಾಣುತ್ತವೆ. ನಮ್ಮ ನಮ್ಮ ಧಾರ್ಮಿಕ ನಂಬಿಕೆಯ ಪ್ರಕಾರ ಅವುಗಳಿಗೂ ಪಟ್ಟ ಕಟ್ಟಿದ್ದೇವೆ. ಮಹಾವ್ಯಾಧ ನಕ್ಷತ್ರಪುಂಜವನ್ನು ಸಾಮಾನ್ಯ ತಿಳಿವಳಿಕೆ ಇರುವ ಯಾರಾದರೂ ಗುರುತಿಸಬಹುದು. ಏಕೆಂದರೆ ಆಕಾಶದಲ್ಲಿ ಕಾಯಗಳು ಕಾಣಿಸುತ್ತವೆ. ಅಂದರೆ ನೋಡಲು ಅವಕಾಶವಿದೆ. ಆದರೆ ನಮ್ಮ ಕಾಲಡಿಯ ನೆಲದಲ್ಲಿ ಎಲ್ಲವೂ ನಿಗೂಢ. ಊಹೆಗಷ್ಟೇ ನಿಲುಕುತ್ತವೆ. ಮಹಾಭಾರತದ ಅರ್ಜುನ ನಾಗಕನ್ನಿಕೆಯನ್ನು ಕರೆತಂದು ವಿವಾಹವಾಗಲು ಪಾತಾಳಕ್ಕೆ ಹೋಗಿದ್ದನಂತೆ. ಇನ್ನು ಹೆಸರಾಂತ ವಿಜ್ಞಾನ ಲೇಖಕ ಜೂಲ್ಸ್ ವರ್ನ್ “ಜರ್ನಿ ಟು ದಿ ಸೆಂಟರ್ ಆಫ್ ದಿ ಅರ್ಥ್" ಎಂಬ ಫ್ಯಾಂಟಸಿಯನ್ನೇ ಬರೆದು ಪಾತಾಳ ಲೋಕವನ್ನೇ ಸಶರೀರಿಗಳಾಗಿ ನೋಡಿದ ತಂಡದ ಚಿತ್ರವನ್ನು ನಮಗೆ ಕೊಟ್ಟ.
ಕಾಲ ಕೆಳಗೆ ಏನಿದೆ ಎಂಬ ಅದೇ ಪ್ರಶ್ನೆಯನ್ನು ವಿಜ್ಞಾನಿಗಳನ್ನು ಕೇಳಿದರೆ, ಅವರು ಊಹಾಪ್ರಪಂಚದಲ್ಲಿ ಕೂತು ಬಣ್ಣಬಣ್ಣದ ಲೋಕಗಳನ್ನು ವರ್ಣನೆ ಮಾಡುವುದಿಲ್ಲ; ಇವರೆಲ್ಲ ವಾಸ್ತವವಾದಿಗಳು. ಯಾರೂ ಪಾತಾಳಕ್ಕೆ ಹೋಗಿಲ್ಲ ನಿಜ. ಆದರೆ ಭೂಮಿಯ ಒಳಗೆ ಏನಿದೆ ಎಂಬುದನ್ನು ಸಕಾರಣವಾಗಿ ಊಹಿಸಬಲ್ಲರು. ತರ್ಕದಿಂದ ಒಪ್ಪಿಸಬಲ್ಲರು. ಡೆನ್ಮಾರ್ಕ್ನಲ್ಲಿ, ಅಷ್ಟೇ ಏಕೆ ಇಡೀ ಯೂರೋಪಿನಲ್ಲಿ ಭೂಗರ್ಭ ಹೇಗಿದೆ ಎಂದು ವಿಜ್ಞಾನಿಗಳನ್ನು ಕೇಳಿದ್ದರೆ, ಇಪ್ಪತ್ತನೇ ಶತಮಾನದ ಪೂರ್ವಾರ್ಧದಲ್ಲಿ
“ಅಗೋ ನೋಡಿ, ಆ ಮಹಿಳೆ ಇದ್ದಾಳಲ್ಲ, ಕುಳಿತು ಅದೇನೋ ಗೆರೆಗಳನ್ನು ಹಾಕುತ್ತಿದ್ದಾಳಲ್ಲ, ಬರೆದು ಬರೆದೂ ಅಳಿಸುತ್ತಿದ್ದಾಳಲ್ಲ, ಆಕೆಯನ್ನು ಕೇಳಿ” ಎಂದು ಒಬ್ಬ ಮಹಿಳೆಯ ಕಡೆಗೆ ಕೈತೋರಿಸುತ್ತಿದ್ದರು. ಸಶರೀರಿಯಾಗಿ ಯಾರು ತಾನೇ ಭೂಗರ್ಭಕ್ಕೆ ಇಳಿದಾರು? ಈಕೆಯೂ ಅಷ್ಟೇ. ಆ ಸಾಹಸ ಮಾಡಿರಲಿಲ್ಲ. ಆದರೆ ಕೇಳಿದವರ ಪ್ರಶ್ನೆಗೆ ಆತ್ಮವಿಶ್ವಾಸದಿಂದ ಚಿತ್ರ ಬರೆದು ತೋರಿಸುತ್ತಿದ್ದಳು. “ನೀವು ಕೋಳಿಮೊಟ್ಟೆ ನೋಡಿದ್ದೀರಲ್ಲಾ, ಭೂಮಿಯೂ ಹಾಗೆಯೇ. ಕೋಳಿಮೊಟ್ಟೆಯ ಮೇಲಿನ ಬಿಳಿಸಿಪ್ಪೆ ಇದೆಯಲ್ಲ ಅದನ್ನೇ ಭೂಮಿಯ ತೊಗಟೆ ಅಥವಾ ಚಿಪ್ಪು ಎನ್ನಿ. ಮಧ್ಯದಲ್ಲಿ ಮೊಟ್ಟೆಯಲ್ಲಿ ಮೃದುಭಾಗ ಇರುತ್ತದಲ್ಲ, ಅದು ಭೂಮಧ್ಯ ಭಾಗೆ ಎನ್ನಿ, ಮೊಟ್ಟಯಲ್ಲಿ ಹಳದಿ ಭಂಡಾರವಿರುತ್ತದಲ್ಲ, ಅದನ್ನೇ ಭೂಗರ್ಭ ಎನ್ನಿ. ಹ್ಞಾ ಒಂದು ಮಾತು. ಹಳದಿ ಭಂಡಾರವಿದೆಯಲ್ಲ, ಭೂಮಿಯ ಮಟ್ಟಿಗೆ ಅದು ಎರಡು ಗೋಳ. ಮೇಲಿನದು ಅರೆದ್ರವ ಘನರೂಪದ್ದು, ಕೆಳಗಿನದು ಗಟ್ಟಿಯಾದ ಗರ್ಭ".
ಹೀಗೆಂದು ಆಕೆ ಭೂಮಿಯ ರಚನೆಯನ್ನು ಖುದ್ದು ತಾನೇ ಇಣುಕಿ ನೋಡಿರುವಂತೆ ಹೇಳುತ್ತಿದ್ದಳು. ಇದೊಂದು ಕ್ರಾಂತಿಕಾರಕ ಊಹೆ. ಆಕೆಗೋ ಕ್ಲಿಷ್ಟ ಸಮಸ್ಯೆಗಳನ್ನು ಬಿಡುಸುವುದರಲ್ಲೇ ಖುಷಿ. ಹೀಗೆ ಹೇಳಲು ಆಕೆ ಹಲವು ದಶಕ ಭೂಮಿಯ ಅಧ್ಯಯನ ಮಾಡಿದ್ದಳು. ಈಕೆ ಡೆನ್ಮಾರ್ಕಿನ ಮಹಿಳೆ- ಇಂಗೆ ಲೆಹ್ಮನ್ (Inge Lehmann). ಅನಿರೀಕ್ಷಿತ ಕ್ಷೇತ್ರಕ್ಕೆ ಪ್ರವೇಶಮಾಡಿ ಕ್ರಾಂತಿಕಾರಿ ಸಿದ್ಧಾಂತಕ್ಕೆ ಬುನಾದಿಹಾಕಿ, ಇಡೀ ಭೂಮಿಯ ಬಗ್ಗೆ ವಿಜ್ಞಾನಿಗಳ ಪರಿಕಲ್ಪನೆಯನ್ನೇ ಬದಲಾಯಿಸಿದವಳು. ಅವಳ ಇಡೀ ಕುಟುಂಬವೇ ಬುದ್ಧಿವಂತರ ಕುಟುಂಬ. ಅವಳ ತಾಯಿಯ ಕಡೆಯಿಂದ ತಾತನ ಕುಟುಂಬದವರು 1854ರಲ್ಲೇ ಡೆನ್ಮಾರ್ಕಿನಲ್ಲಿ ಕೇಬಲ್ ಎಳೆದು ಸಂಪರ್ಕಜಾಲದ ಕ್ರಾಂತಿಗೆ ನಾಂದಿಹಾಡಿದ್ದರು. ಅಪ್ಪ ಆಲ್ಪ್ರೆಡ್ ಲೆಹ್ಮನ್ ಕೊಪನ್ಹೇಗನ್ ವಿಶ್ವವಿದ್ಯಾಲಯದಲ್ಲಿ ಪ್ರಾಯೋಗಿಕ ಮನೋವಿಜ್ಞಾನಿ. ಆ ಕಾಲಕ್ಕೆ ಬಹು ಖ್ಯಾತ. ತಾಯಿ ದಕ್ಷ ಗೃಹಿಣಿ. ಎಲ್ಲರ ಆಸೆ, ಆಕಾಂಕ್ಷೆಗಳಿಗೆ ನೀರು ಎರೆಯುವ, ಸದಾ ಜೈ ಎನ್ನುವ ವಿಶ್ವಾಸವಾದಿ. ಇಂಗೆಯ ಚಿಕ್ಕಮ್ಮ
“ನೀವು ಏನು ಬೇಕಾದರೂ ಮಾಡಿಕೊಳ್ಳಿ, ನಾನು ಹೊರಟೆ. ಮಹಿಳೆಯರಿಗೆ ಎಲ್ಲ ಕ್ಷೇತ್ರಗಳಲ್ಲೂ ಅನ್ಯಾಯವಾಗುತ್ತಿದೆ. ಪ್ರತಿಭಟನೆಗೆ ಕಾಯುತ್ತಿದ್ದಾರೆ’ ಎಂದು ಅರ್ಧರಾತ್ರಿಯೇ ಮನೆಬಿಟ್ಟು ಹೊರಡುತ್ತಿದ್ದ ಛಲಗಾರ್ತಿ. ಆಕೆಯ ಮಗಳಿಗೂ ಕ್ರಾಂತಿಯಕಿಡಿ ಹೊತ್ತಿಕೊಳದಿದ್ದೀತೆ? ಯಾವುದಕ್ಕೂ ಅಧಿಕಾರವಿದ್ದರೆ ಬದಲಾವಣೆ ತರುವುದು ಸುಲಭ ಎಂದು ನಂಬಿದ್ದಳು. ಸರ್ಕಾರದಲ್ಲಿ ವಾಣಿಜ್ಯ ಮಂತ್ರಿಯಾಗಿ ಹೆಸರು ಮಾಡಿದಳು. ಇಂಗೆಗೆ ಒಬ್ಬಳು ತಂಗಿ ಇದ್ದಳು. “ನನ್ನದು ಚಲನಚಿತ್ರ ಕ್ಷೇತ್ರ. ಅಲ್ಲಿ ಏನಾದರೂ ಮಾಡಬಲ್ಲೆ" ಎಂಬ ವಿಶ್ವಾಸ. ಸ್ಕ್ರಿಪ್ಟ್ ತಯಾರಿಸುವಲ್ಲಿ ಎತ್ತಿದ ಕೈ. ಅವಳಿಗೆ ಗಂಡ, ಮಕ್ಕಳು ಇದ್ದರು. ಆದರೆ ಇಂಗೆ ಒಂಟಿ
“ನಾನು ಭೂಮಿಯನ್ನು ಪ್ರೀತಿಸುತ್ತೇನೆ. ಅದರ ಪಿಸುಮಾತನ್ನು ಕೇಳಿಸಿಕೊಳ್ಳುತ್ತೇನೆ. ಅದರಲ್ಲೇ ನನಗೆ ಬದುಕಿನ ಸಾರ್ಥಕತೆ ಇದೆ” ಎಂದು ನಗುನಗುತ್ತಲೇ ಒಪ್ಪಿಕೊಂಡಿದ್ದಳು. ತನ್ನ ವಿವಾಹದ ಬಗ್ಗೆ ತಿರಸ್ಕಾರವಾಗಲಿ, ಪುರಸ್ಕಾರವಾಗಲಿ ಇರಲ್ಲ ಅಥವಾ ವಿವಾಹ ಎನ್ನುವುದು ಒಂದು ಬಂಧನ ಎಂಬ ಮಾತು ಎಂದೂ ಅವಳ ಬಾಯಿಂದ ಬರಲಿಲ್ಲ.

ಇಂಗೆಯ ಬದುಕಿಗೆ ಭದ್ರ ಬುನಾದಿ ಹಾಕಿದ ಸಂಗತಿಯೂ ಉಂಟು. ಅದು ನಿಸ್ಸಂಶಯವಾಗಿ ಪಾಲೇಸ್ಕೋಲಿನ್ ಎಂಬ ಶಾಲೆ. ಹನ್ನಾ ಆಡ್ಗರ್ ಅದನ್ನು ನಿರ್ವಹಿಸುತ್ತಿದ್ದಳು. ಈಕೆ ಪ್ರಖ್ಯಾತ ಭೌತವಿಜ್ಞಾನಿ ನೀಲ್ಸ್ ಬೋರ್ನ ಸಂಬಂಧಿ. ಇಂಗೆ ಆಗಾಗ ನೆನಪಿಸಿಕೊಳ್ಳುತ್ತಿದ್ದಳು. “ನಮ್ಮ ಸ್ಕೂಲಿನಲ್ಲಿ ಹುಡುಗ, ಹುಡುಗಿ ಎಂಬ ಲಿಂಗ ತಾರತಮ್ಯವಿರಲಿಲ್ಲ. ಒಟ್ಟಿಗೇ ಸಾಸರ್ ಆಡುತ್ತಿದ್ದೆವು, ಹುಡುಗರಿಗೂ ಕಸೂತಿ ಹೇಳಿಕೊಡುತ್ತಿದ್ದರು. ಇನ್ನು ವರ್ಣಭೇದ ಎಂಬ ಶಬ್ದವೇ ನಮ್ಮ ಕಿವಿಗೆ ಬಿದ್ದಿರಲಿಲ್ಲ. ಅಷ್ಟೇ ಅಲ್ಲ, ವಿಪರೀತ ಶಿಸ್ತಿಗೂ ನಮ್ಮನ್ನು ಒಳಪಡಿಸುತ್ತಿರಲಿಲ್ಲ. ತಲೆಭಾರವಾಗುವಷ್ಟು ಹೋಂ ವರ್ಕ್ ಕೂಡ ಕೊಡುತ್ತಿರಲಿಲ್ಲ’. 1906ರಲ್ಲಿ ಇಂಗೆ ಶಾಲೆಯನ್ನು ಬಿಟ್ಟಳು, ಆದರೆ ಪ್ರವೇಶ ಪರೀಕ್ಷೆಯಲ್ಲಿ ಮೊದಲಿಗಳು. ಕೊಪೆನ್ಹೇಗನ್ ವಿಶ್ವವಿದ್ಯಾಲಯದಲ್ಲಿ ಆಕೆಯ ಒಲವು ಗಣಿತದತ್ತ. ಮುಂದೆ ಕೇಂಬ್ರಿಡ್ಜ್ನ ನ್ಯೂನ್ಹ್ಯಾಮ್ ಕಾಲೇಜಿಗೆ ಸೇರಿದಾಗ
“ಯಾಕೆ ಈ ಪುರುಷರು ಮಹಿಳೆಯನ್ನು ತಾತ್ಸಾರದಿಂದ ನೋಡುತ್ತಾರೆ. ನಮ್ಮ ಬಾಲ್ಯದಲ್ಲಿ ಹೀಗೆ ಇರಲಿಲ್ಲವಲ್ಲ” ಎಂದು ಹುಬ್ಬೇರಿಸಿದ್ದಳು. ತರುಣಿಯರೆಂದರೆ ಅದೇನೇನೋ ಕಟ್ಟುಪಾಡು. ಮುಕ್ತವಾಗಿ ಓಡಾಡುವಂತಿರಲಿಲ್ಲ, ಗಂಡಸರೊಡನೆ ಸಲೀಸಾಗಿ ಬೆರೆಯುವಂತಿರಲಿಲ್ಲ. ಇದೆಂತ ದರಿದ್ರ ವಾತಾವರಣ ಎನ್ನಿಸಿತ್ತು. ಏಕೋ ಆರೋಗ್ಯವೂ ಕೆಟ್ಟಿತು. ಮರಳಿ ಡೆನ್ಮಾರ್ಕ್ಗೆ ಬಂದಳು.
ಸುಮ್ಮನೆ ಕುಳಿತಿರಲಾದೀತೆ? ಯಾವುದೋ ಇನ್ಷ್ಯೂರೆನ್ಸ್ ಕಂಪನಿಗೆ ಸೇರಿದಳು. ಅಲ್ಲೋ ವಿಚಿತ್ರ ಕೆಲಸ. ಇವಳಿಗೆ ಗಣಿತ ಮತ್ತು ಸಂಖ್ಯಾವಿಜ್ಞಾನದ ಹಿನ್ನೆಲೆ ಇದ್ದುದರಿಂದ
“ನೋಡು ಇಂಗೆ, ಮುಂದೆ ಮರಣದ ಪ್ರಮಾಣ ಎಷ್ಟಾಗಬಹುದು? ಅದರಿಂದ ನಮ್ಮ ಕಂಪನಿಗೆ ಯಾವ ಪ್ರಮಾಣದ ನಷ್ಟ ಆಗಬಹುದು ಎಂದು ಲೆಕ್ಕಾಚಾರ ಮಾಡಿ ಹೇಳು” ಎಂದು ಕಂಪನಿ ಆ ಕೆಲಸ ವಹಿಸಿತು. ತನ್ನ ನಿಜವಾದ ಗಣಿತದ ಸಾಮಥ್ರ್ಯಕ್ಕೆ ಇದು ಒಗ್ಗುವುದಿಲ್ಲ ಎಂದು ಭಾವಿಸಿ ಹುದ್ದೆ ತೊರೆದಳು. 1918ರಲ್ಲಿ ಕೊಪೆನ್ಹೇಗÉನ್ ವಿಶ್ವವಿದ್ಯಾಲಯ ಸೇರಿ ಎಂ.ಎ.ಗೆ ಸಮಾನವಾದ ಡಿಗ್ರಿಯನ್ನು ಗಣಿತ ಮತ್ತು ಭೌತವಿಜ್ಞಾನದಲ್ಲಿ ಪಡೆದಳು. ಇನ್ನೂ ಹೆಚ್ಚಿನ ಅನುಭವ ಪಡೆಯಲು ಜರ್ಮನಿಯ ವಿಲ್ಹೆಂ ಬ್ಲಾಕ್ ಎಂಬ ಪ್ರೊಫೆಸರ್ ಅವರ ಮಾರ್ಗದರ್ಶನ ಪಡೆದಳು.
1923ರಲ್ಲಿ ಡೆನ್ಮಾರ್ಕ್ಗೆ ಮರಳಿದಾಗ ಆಕೆಗೆ ಮತ್ತೆ ಅದೇ ಸಂಖ್ಯಾವಿಜ್ಞಾನ ತಗಲಿಹಾಕಿಕೊಂಡಿತು. ಮತ್ತದೇ ಸಾವಿನ ಲೆಕ್ಕಾಚಾರ. “ಇದೇನು ಸಾವು ನನ್ನನ್ನು ಭೂತದಂತೆ ಕಾಡುತ್ತಿದೆ" ಎಂದುಕೊಳ್ಳುವ ಹೊತ್ತಿಗೆ ಡ್ಯಾನಿಷ್ ಜಿಯೋಡೆಟಿಕ್ ಇನ್ಸ್ಟಿಟ್ಯೂಟ್ನಲ್ಲಿ (ಭೂಮಾಪನ ಸಂಸ್ಥೆ) ಸಹಾಯಕ ಹುದ್ದೆ ಅರಸಿಬಂತು. ಅದು ಅವಳ ಬದುಕಿನ ಹೊಸಪರ್ವ. ಅಷ್ಟೇ ಅಲ್ಲ, ಹೊಸ ಸವಾಲು ಕೂಡ. ಡೆನ್ಮಾರ್ಕ್ ಮತ್ತು ಗ್ರೀನ್ಲ್ಯಾಂಡ್ಗಳಲ್ಲಿ ಭೂಕಂಪನ ಅವಲೋಕನ ಜಾಲಗಳನ್ನು ತೆರೆಯುವುದು ಮತ್ತು ಅವುಗಳ ಫಲಿತಾಂಶವನ್ನು ದಾಖಲಿಸುವುದು. ಆಕೆಯ ಬಾಸ್ ಒಂದು ರಿಯಾಯತಿ ತೋರಿದ್ದರು.
“ನೀನೇನೂ ಸಂಶೋಧನೆ ಮಾಡಬೇಕಾಗಿಲ್ಲ. ಫಲಿತಾಂಶವನ್ನು ಅಚ್ಚುಕಟ್ಟಾಗಿ ದಾಖಲೆ ಮಾಡಿದರೆ ಸಾಕು” ಎಂದಿದ್ದರು.
ವೈಜ್ಞಾನಿಕ ಜ್ಞಾನೋದಯ
ಆದರೆ ಇಂಗೆ ಈ ಅವಕಾಶವನ್ನು ಬಿಟ್ಟಾಳೆಯೆ? ಅದರಲ್ಲೂ ಗ್ರೀನ್ಲ್ಯಾಂಡಿನಲ್ಲಿ ಭೂಕಂಪನ ಜಾಲ ತೆಗೆಯುವುದೆಂದರೆ ಮಹಾ ಸಾಹಸದ ಕೆಲಸ. ದೋಣಿಯಲ್ಲಿ ಎಲ್ಲವನ್ನೂ ಒಯ್ದು ಕೇಂದ್ರ ಸ್ಥಾಪಿಸಬೇಕಾಯಿತು. ಪ್ರತಿದಿನವೂ ರಿಸ್ಕ್, ಆದರೆ ಆಕೆಗೆ ಅದು ವಿಶೇಷ ಅನುಭವ ಮತ್ತು ಆತ್ಮಸ್ಥೈರ್ಯ ನೀಡಿತು. ಭೂಕಂಪನಗಳಾದಾಗ ಚಲಿಸುವ ಅಲೆಗಳು ವಿವಿಧ ವರ್ತನೆ ತೋರುತ್ತವೆ. ಅದು ಭೂಮಿಯ ಒಳರಚನೆಯನ್ನು ಅವಲಂಬಿಸಿದೆ ಎಂಬ ಗುಟ್ಟನ್ನು ಜರ್ಮನಿಯ ಗುಟನ್ಬರ್ಗ್ನಿಂದ ಕಲಿತಳು. ಅದೋ ಮಹಾಯುದ್ಧದ ಅತಿ ಒತ್ತಡದ ದಿನಗಳು. 1928ರಲ್ಲಿ ಇಂಗೆ ಡ್ಯಾನಿಷ್ ಜಿಯೋಡೆಟಿಕ್ ಇನ್ಸ್ಟಿಟ್ಯೂಟ್ನ ಮುಖ್ಯಸ್ಥೆಯಾದಳು. ಮಹಿಳೆಯೊಬ್ಬಳು ಇಂಥ ದೊಡ್ಡ ಸ್ಥಾನಕ್ಕೇರಿದ್ದು ದೊಡ್ಡ ಸುದ್ದಿಯಾಯಿತು. ಅವಳಿಗೆ ನೀಡಿದ ಜವಾಬ್ದಾರಿಯೂ ದೊಡ್ಡದು. ಡೆನ್ಮಾರ್ಕ್ನ ಎಲ್ಲ ಭೂಕಂಪನ ಕೇಂದ್ರಗಳು ಸರಿಯಾಗಿ ಕಂಪನಗಳನ್ನು ದಾಖಲಿಸುತ್ತಿವೆಯೇ ಎಂಬುದನ್ನು ಖುದ್ದಾಗಿ ಹೋಗಿ ಪರೀಕ್ಷಿಸುತ್ತಿದ್ದಳು. ಪ್ರತಿ ಕೇಂದ್ರದ ಫಲಿತಾಂಶವನ್ನು ಅತ್ಯಂತ ಗಂಭೀರವಾಗಿ ವಿಶ್ಲೇಷಿಸುತ್ತಿದ್ದಳು. ಒಂದು ಹಂತದಲ್ಲಿ ಆಕೆಗೆ ಮಹಾ ಸತ್ಯ ಹೊಳೆಯಿತು. ಬೇಕಾದರೆ “ವೈಜ್ಞಾನಿಕ ಜ್ಞಾನೋದಯ" ಎನ್ನಿ. ಭೂಮಿಯ 5,100 ಕಿಲೋ ಮೀಟರ್ ಆಳದಲ್ಲಿ ಮೊದಲು ಹೊರಟ ತರಂಗಗಳು ಮುಖ ತಿರುಚಿಕೊಳ್ಳುತ್ತಿವೆ ಎನ್ನಿಸಿತು. ಸರಸರ ಹರಿದುಬರುತ್ತಿರುವ ಹಾವು ಯಾರಾದರೂ ಎದುರಿಗೆ ಬಂದರೆ ತನ್ನ ಪಥ ಬದಲಿಸುವಂತೆ. ಇಷ್ಟು ಸಾಕಾಗಿತ್ತು; ಗುಟ್ಟು ಬಯಲಾಯಿತು. ಭೂಗರ್ಭದಲ್ಲೇ ಎರಡು ಗೋಳಗಳಿವೆ, ಹೊರಗಿನದು ದ್ರವರೂಪಿ, ಒಳಗಿನದು ಘನರೂಪಿ. ಈ ಸತ್ಯ ಬಯಲು ಮಾಡಿದಾಗ ಜಗತ್ತು ಆಕೆಯ ಬುದ್ಧಿಮತ್ತೆಯನ್ನು ಕೊಂಡಾಡಿತು. ಈಗಲೂ ಆ ವಲಯವನ್ನು
“ಇಂಗೆ ವಿಚ್ಛಿನ್ನ ವಲಯ’” ಎಂದು ಕರೆದು ಆಕೆಯ ಹೆಸರನ್ನು ಶಾಶ್ವತಗೊಳಿಸಲಾಗಿದೆ. ವಿಚ್ಛಿನ್ನ ಎಂದರೆ ಬೇರೇನೂ ಅಲ್ಲ, ನಿರಂತರವಾಗಿ ಸಾಗುತ್ತಿರುವ ಅಲೆಗಳಿಗೆ ಎದುರಾಗುವ ಅಡೆತಡೆ ಅಷ್ಟೇ.

ಅಮೆರಿಕ ಆ ಹೊತ್ತಿಗೆ ಲ್ಯಾಮಾಂಟ್ ಎಂಬಲ್ಲಿ ಭೂಕಂಪನ ಅವಲೋಕನ ಕೇಂದ್ರವನ್ನು ತೆರೆದಿತ್ತು. ಆದರೆ ಅಲ್ಲಿ ದಾಖಲೆಯಾಗುತ್ತಿದ್ದ ಅಲೆಗಳಲ್ಲಿ ಏನೋ ಗೊಂದಲವಿದೆ ಎನ್ನುವ ಅನುಮಾನ ತಜ್ಞರಿಗೆ. ಅಂಥ ಕ್ಲಿಷ್ಟ ಸಮಯದಲ್ಲಿ ಸುಲಭ ಪರಿಹಾರ ಸೂಚಿಸುತ್ತಿದ್ದವಳು ಇಂಗೆ ಲೆಹ್ಮನ್. ಇಂಗೆಯ ತಂಗಿಯ ಮಗ ಒಂದು ಕಡೆ “ನಮ್ಮ ದೊಡ್ಡಮ್ಮ ಹಿತ್ತಲಿನಲ್ಲಿ ಮೇಜು, ಕುರ್ಚಿ ಹಾಕಿಕೊಂಡು ಕುಳಿತಾಗ, ಅದೇನೋ ಡಬ್ಬದಿಂದ ತೆಗೆಯುತ್ತಿದ್ದಳು. ಅದರ ತುಂಬ ಬರೀ ಕಾರ್ಡುಗಳೇ. ಬರೀ ಏರಿಳಿತದ ಗೆರೆಗಳೇ. ಅವೆಲ್ಲವೂ ಭೂಕಂಪನದ ಅಲೆಗಳ ದಾಖಲೆ. ಬರೀ ಗ್ರಾಫ್. ನನಗಂತೂ ತಲೆಬುಡ ಅರ್ಥವಾಗದೆ ನಿಂತುಬಿಡುತ್ತಿದ್ದೆ" ಎಂದು ದಾಖಲಿಸಿದ್ದಾನೆ. ಆಕೆ ತುಂಬ ವಾಚಾಳಿ ಏನಲ್ಲ. ಹಾಗೆಂದು ಸ್ನೇಹಿತರ ಪರಿವಾರವೇನೂ ಕಡಿಮೆ ಇರಲಿಲ್ಲ. ಹೆಚ್ಚಿನ ಪಾಲು ತಮಗಿದ್ದ ಗೊಂದಲವನ್ನು ನಿವಾರಿಸಿಕೊಳ್ಳಲೆಂದೇ ಅವಳನ್ನು ಹುಡುಕಿಕೊಂಡು ಬರುತ್ತಿದ್ದರು. ಒಮ್ಮೊಮ್ಮೆ ಆಕೆ ಸ್ಕೇಟಿಂಗ್ ಮಾಡುತ್ತಿದ್ದಳು, ಪಕ್ಕಾ ಕ್ರೀಡಾಪಟುವಿನಂತೆ. ಪರ್ವತಾರೋಹಣ ಕೂಡ ಅವಳ ಪ್ರಿಯ ಹವ್ಯಾಸವಾಗಿತ್ತು. ಒಂದು ಕಡೆ ತನ್ನ ಬದುಕನ್ನು ಹಿಂತಿರುಗಿ ನೋಡುತ್ತಾ ಇಂಗೆ
“ಪುರುಷರೊಂದಿಗೆ ನನ್ನದು ಹೋರಾಟದ ಬದುಕು. ಆದರೆ ನಾನು ಪ್ರತಿಸ್ಪರ್ಧಿ ಎಂದು ತೋರಗೊಡದೆ ನನ್ನ ಕೆಲಸದಲ್ಲಿ ಮಗ್ನವಾಗಿರುತ್ತಿದ್ದೆ. ಪುರುಷರ ಆ ದೃಷ್ಟಿಯನ್ನು ಕಡೆಗಣಿಸುವುದೆಂದರೆ ಇದು ನಾನು ಕಂಡಕೊಂಡ ಮಾರ್ಗ” ಎಂದು ಬರೆದಿದ್ದಾಳೆ.
ಇಂಗೆ ಲೆಹ್ಮನ್ ಪ್ರಶಸ್ತಿ ಅರಸಿ ಹೊರಟವಳಲ್ಲ. ಆದರೆ ಪ್ರಶಸ್ತಿಗಳು ಎಂದೂ ಚಲನಶೀಲ. ಇವಳನ್ನು ಹುಡುಕಿಕೊಂಡೇ ಬರುತ್ತಿದ್ದವು. ಇದನ್ನು ಪುರುಷ ಸಮಾಜವೇನೂ ನಿರುತ್ಸಾಹಗೊಳಿಸಲಿಲ್ಲ. ಗಾರ್ಡನ್ವುಡ್ ಅವಾರ್ಡ್ (1960), ಎಮಿಲ್ ರಿಚರ್ಟ್ ಪಾರಿತೋಷಿಕ (1964), ಡ್ಯಾನಿಷ್ ರಾಯಲ್ ಸೊಸೈಟಿಯ ಚಿನ್ನದ ಪದಕ (1965), ರಾಯಲ್ ಸೊಸೈಟಿಯ ಫೆಲೋ (1969), ವಿಲಿಯಂ ಬೋವೆ ಮೆಡಲ್ (1971)-ಇಂಗೆ ಇದನ್ನು ಪಡೆದ ಮೊದಲ ಮಹಿಳೆ. ಅನಂತರ ಸೀಸ್ಮಾಲಾಜಿಕಲ್ ಸೊಸೈಟಿ ಆಫ್ ಅಮೆರಿಕ ಪಾರಿತೋಷಿಕ ನೀಡಿ ಗೌರವಿಸಿತು (1977). ಕೊಲಂಬಿಯ ವಿಶ್ವವಿದ್ಯಾಲಯ (1964), ಕೊಪೆನ್ಹೇಗನ್ ವಿಶ್ವವಿದ್ಯಾಲಯ 1958ರಲ್ಲಿ ಗೌರವ ಡಾಕ್ಟರೇಡ್ ನೀಡಿ ತಮ್ಮ ಗೌರವವನ್ನು ಹೆಚ್ಚಿಸಿಕೊಂಡವು.
ಆಕೆಯನ್ನು ಜಗತ್ತು ಹೇಗೆ ಹೇಗೋ ಸ್ಮರಿಸಿಕೊಂಡಿದೆ. ಕ್ಷುದ್ರಗ್ರಹ-5632ಕ್ಕೆ ಇಂಗೆ ಲೆಹ್ಮನ್ ಹೆಸರು ಕೊಟ್ಟಿದೆ. 2015ರಲ್ಲಿ ಡೆನ್ಮಾರ್ಕ್ನಲ್ಲಿ ಪುರುಷ ದಬ್ಬಾಳಿಕೆಯ ವಿರುದ್ಧ ಧ್ವನಿ ತೆಗೆದ ನೂರನೇ ವಾರ್ಷಿಕೋತ್ಸವದಲ್ಲಿ ಈಕೆಯ ಹೆಸರಿನಲ್ಲಿ ಪ್ರಶಸ್ತಿಯನ್ನು ಸ್ಥಾಪಿಸಿತು. ಇನ್ನೂ ವಿಶೇಷವೆಂದರೆ ಜೀವಿ ವಿಜ್ಞಾನಿಗಳಿಗೂ ಈಕೆಯನ್ನು ಗೌರವಿಸುವ ಆಸೆ. ಯಾವುದೋ ಒಂದು ಕೀಟಕ್ಕೆ ಇವಳ ಹೆಸರು ನೀಡಿ ತೃಪ್ತಿಪಟ್ಟುಕೊಂಡರು. ಭೂಕಂಪನಗಳ ಅಧ್ಯಯನಕ್ಕೆ ಇಂಗೆ ಕೊಡುಗೆ ಸ್ಮರಿಸಿ 1997ರಲ್ಲಿ ಅಮೆರಿಕದ ಜಿಯೋ ಫಿಸಿಕಲ್ ಯೂನಿಯನ್ ಲೆಹ್ಮನ್ ಪಾರಿತೋಷಿಕ ಸ್ಥಾಪಿಸಿದೆ. ಕೊಪೆನ್ಹೆಗನ್ನಲ್ಲಿ ಆಕೆಯ ಪುತ್ಥಳಿಯೊಂದನ್ನು ಸಾರ್ವಜನಿಕ ಸ್ಥಳವೊಂದರಲ್ಲಿ ಸ್ಥಾಪಿಸಲಾಗಿದೆ.
ಭೂಮಿ ಆಕೆಯನ್ನು 104 ವರ್ಷ ತಬ್ಬಿಕೊಂಡು (1888-1993) ಅನೇಕ ಗುಟ್ಟುಗಳನ್ನು ಆಕೆಯ ಕಿವಿಯಲ್ಲಿ ಪಿಸುನುಡಿದು ನಿರಾಳಮಾಡಿಕೊಂಡಿತು. ವಿಶೇಷವೆಂದರೆ ತನ್ನ 99ನೇ ವಯಸ್ಸಿನಲ್ಲಿ ಆಕೆ ಕೊನೆಯ ಸಂಶೋಧನ ಪ್ರಬಂಧವನ್ನು ಪ್ರಕಟಿಸಿದಳು. ಬದುಕೆಂದರೆ ಉತ್ಸಾಹದ ಚಿಲುಮೆ ಎನ್ನುವುದಕ್ಕೆ ಆಕೆ ಈಗಲೂ ರೂಪಕವಾಗಿದ್ದಾಳೆ. ತಾನು ಸಂಪಾದಿಸಿದ ಹಣವನ್ನೆಲ್ಲ ಡ್ಯಾನಿಷ್ ಅಕಾಡೆಮಿಗೆ ಕೊಟ್ಟುಬಿಟ್ಟಳು. ಮುಂದಿನ ಜನ್ಮದ ಮಾತೇಕೆ?

– ಡಾ. ಟಿ.ಆರ್. ಅನಂತರಾಮು
ಮೊ: 98863 56085
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.
“ಇಂಗೆ ವಿಚ್ಛಿನ್ನ ವಲಯ” ವನ್ನು ಸಾಮಾನ್ಯ ಜನರೂ ಕುತೂಹಲಭರಿತರಾಗಿ ಒಂದೇ ಗುಕ್ಕಿನಲ್ಲಿ ಓದುವಂತೆ ಪ್ರೇರೇಪಿಸುವಷ್ಟು ಚುಂಬಕ !
ಲೇಖಕರಿಗೆ ನಮೋ