ಸ್ತ್ರೀ ಎಂದರೆ ಅಷ್ಟೇ ಸಾಕೇ?/ ನೀಲಿ ಶಿಶುಗಳಿಗೆ ಜೀವದಾತೆ ಹೆಲೆನ್ ಟೌಸಿಗ್- ಟಿ.ಆರ್. ಅನಂತರಾಮು
ಮನಸ್ಸು ಸದೃಢವಾಗಿದ್ದರೆ, ದೇಹವೈಕಲ್ಯ ಎನ್ನುವುದು ಯಾವ ಸಾಧನೆಗೂ ಅಡ್ಡಿ ಮಾಡುವುದಿಲ್ಲ ಎಂಬ ಸತ್ಯಕ್ಕೆ ಅಸಾಧಾರಣ ವೈದ್ಯವಿಜ್ಞಾನಿ ಹೆಲೆನ್ ಟೌಸಿಗ್ ಅವರ ಉದಾಹರಣೆಗಿಂತ ಬೇರೆ ಬೇಕಿಲ್ಲ. ವಿಜ್ಞಾನದಲ್ಲಿ ಶಿಕ್ಷಣ ಪಡೆಯಲು ಅನೇಕ ವಿಶ್ವವಿದ್ಯಾಲಯಗಳಿಗೆ ಅಲೆದು, ಹೆಣ್ಣುಮಕ್ಕಳಿಗೆ ಪದವಿ ಕೊಡುವುದಿಲ್ಲ ಎಂಬ ಉತ್ತರ ಪಡೆದಿದ್ದ ಅವರು ನಂತರ ತಮ್ಮ ಸಂಶೋಧನೆಗಳಿಗೆ ಇಪ್ಪತ್ತು ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್‍ಗಳ ಗೌರವಕ್ಕೆ ಪಾತ್ರರಾದರು. ಶಿಶು ಹೃದಯದ ಬಾಧೆಗಳಿಗೆ ಪರಿಹಾರ ನೀಡಲು ಶ್ರಮಿಸಿದ ಹೆಲೆನ್ ಟೌಸಿಗ್, ವೈದ್ಯರ ಹೃದಯಗಳಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ.
ಫ್ರಾಂಕ್ ವಿಲಿಯಂ ಟೌಸಿಗ್‍ಗೆ ಅಮೆರಿಕದ ಆರ್ಥಿಕ ಕ್ಷೇತ್ರದ ಏರಿಳಿತಗಳನ್ನು ಗ್ರಾಫ್‍ನಲ್ಲಿ ಮೂಡಿಸುವ ತವಕ. ಕೆಲವೊಮ್ಮೆ ಮೆಚ್ಚುವ, ಕೆಲವೊಮ್ಮೆ ಬೆಚ್ಚುವ ಅನುಭವ. ಆತ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಆರ್ಥಿಕ ತಜ್ಞ. ಪತ್ನಿ ಎಡಿತ್ ಗಿಲ್ಡ್, ರ್ಯಾಡ್‍ಕ್ಲಿಫ್ ಕಾಲೇಜಿನ ಮೊದಲ ಬ್ಯಾಚಿನ ವಿದ್ಯಾರ್ಥಿನಿ. ಗಿಡ, ಮರ, ಬಳ್ಳಿಗಳ ಬಗ್ಗೆ ಅಪಾರ ಆಸಕ್ತಿ. ಪ್ರಾಣಿ, ಪಕ್ಷಿ, ಕೀಟಗಳ ಬಗ್ಗೆ ಅದಮ್ಯ ಕುತೂಹಲ. ತಾನು ಕಂಡದ್ದನ್ನೆಲ್ಲ ಮಗಳು ಹೆಲೆನ್ ಟೌಸಿಗ್ ಜೊತೆ ಹಂಚಿಕೊಂಡು ಸಂಭ್ರಮಪಡುವ ಪ್ರಕೃತಿ ಪ್ರೇಮಿ. ಸಹಜವಾಗಿಯೇ ಮಗಳಿಗೆ ಜಗತ್ತಿನ ಬಗ್ಗೆ ಆಸಕ್ತಿ ಬೆಳೆಯಿತು. ಅದನ್ನು ಪೋಷಿಸಿಕೊಂಡು ಬಂದಳು ಸಹ.
ಬದುಕು ಎಂದೂ ನೇರ ಗೆರೆಯಲ್ಲ. ಸಾಗಿದಷ್ಟೂ ವಕ್ರರೇಖೆಗಳನ್ನು ಹಾಯಬೇಕು, ಅನಿರೀಕ್ಷಿತ ಸಿಕ್ಕುಗಳನ್ನು ಬಿಡಿಸಬೇಕು. ನಮ್ಮೆಲ್ಲರ ಅನುಭವ ಅದೇ ತಾನೆ? ದಡ ಸಿಕ್ಕಿತು ಎನ್ನುವ ಹೊತ್ತಿಗೆ ಇನ್ನೆಂಥದೋ ಅಡ್ಡಬರುತ್ತದೆ. ಮನಸ್ಸು ದುರ್ಬಲವಾಗಿದ್ದರೆ `ಇದೆಲ್ಲ ಹಣೆಬರಹ’ ಎಂದು ಸಮಾಧಾನ ಪಟ್ಟುಕೊಳ್ಳುವವರುಂಟು. ಬಹುಶಃ ಈ ಶರಣಾಗತಿಯೂ ಬೇಕೇನೋ. ಬಿಡಿ, ಇಲ್ಲಿ ಹೇಳಹೊರಟಿದ್ದು ಬೇರೆಯದೇ ಸಂಗತಿ. ಸಂಕಷ್ಟಗಳು ಬಂದರೆ ಹೇಗೆ ಒಂದರ ಹಿಂದೆ ಒಂದು ಗುದ್ದಿಕೊಂಡು ಬರುತ್ತವೆ ಎಂಬುದಕ್ಕೂ ಹೆಲೆನ್ ಟೌಸಿಗ್ ಉದಾಹರಣೆಯಾಗಿದ್ದಾಳೆ.
ಮೆಸಾಚ್ಯುಸೆಟ್ಸ್‍ನಲ್ಲಿ ಭರ್ಜರಿ ವಿದ್ಯಾವಂತ ಕುಟುಂಬದಲ್ಲಿ ಹುಟ್ಟಿದ ಈ ಹುಡುಗಿ ತನ್ನ ಹನ್ನೊಂದನೆ ವಯಸ್ಸಿಗೆ ತಾಯಿಯನ್ನು ಕಳೆದುಕೊಂಡಳು. ಆಕೆಗೆ ಕ್ಷಯ ಬಾಧಿಸಿತು. ಅದೇ ಹೊತ್ತಿಗೆ ಹೆಲೆನ್‍ಗೆ ಅದೆಂಥ ಕಾಯಿಲೆ ತಗುಲಿಹಾಕೊಂಡಿತೋ, ಅಕ್ಷರಗಳನ್ನು ಓದಲು ಹೋದರೆ ಎಲ್ಲ ಕಲಸುಮೇಲೊಗರ, ಅರ್ಥವಾಗದ ಚಿತ್ತಾರದಂತೆ ಕಾಣುತ್ತಿತ್ತು. ಹೋಂ ವರ್ಕ್ ಕೂಡ ಮಾಡದ ಸ್ಥಿತಿ ಎದುರಾದಾಗ ಅವಳು ಖಿನ್ನತೆಗೆ ಬಲಿಯಾಗಬೇಕಾಗಿತ್ತು. ಆದರೆ ಈ ಹುಡುಗಿ ಬದುಕನ್ನು ಎದುರಿಸುತ್ತೇನೆ ಎಂದುಕೊಂಡಳು. ಓದುವ ಆಸೆ, ಪದೇ ಪದೇ ಅದೇ ನಿರಾಶೆ. ಇದೇ ಸಂದರ್ಭದಲ್ಲಿ ಕಿವಿಗಳು ಕೂಡ ಕೈಕೊಟ್ಟವು. ಯಾರು ಮಾತನಾಡಿದರೂ ಅವರ ತುಟಿ ಚಲನೆ ಕಾಣುತ್ತಿತ್ತೇ ವಿನಾ ಶಬ್ದವಲ್ಲ. ಅಪ್ಪ ಗಟ್ಟಿಯಾಗಿ ಕೂಗಿದಾಗ ಮಾತ್ರ ಆ, ಏನಂದೆ?’ ಎನ್ನುತ್ತಿದ್ದಳು. ಅಪ್ಪ ಹೇಳುತ್ತಿದ್ದುದೇ ಬೇರೆ, ಇವಳು ಅರ್ಥಮಾಡಿಕೊಳ್ಳುತ್ತಿದ್ದುದೇ ಬೇರೆ. ಅಪ್ಪ ಕೂಡ ನಿರಾಶನಾಗಲಿಲ್ಲ,
ಎಲ್ಲಕ್ಕೂ ಒಂದು ದಾರಿ ಇದೆ’ ಎಂದು ಅಪ್ಪ-ಮಗಳು ಇಬ್ಬರೂ ನಂಬಿದ್ದರು. ಓದಲು ಆಗದ ಸ್ಥಿತಿಯನ್ನು ವೈದ್ಯಕೀಯವಾಗಿ `ಡಿಸ್‍ಲೆಕ್ಷಿಯಾ’ ಎನ್ನುತ್ತಾರೆ. ಅದಕ್ಕೆ ಆಗ ಯಾವುದೇ ಪರಿಹಾರವಿರಲಿಲ್ಲ.
ಬಿಡು ಮಗು, ದೃಢವಾಗಿ ನಿಶ್ಚಯಿಸು, ಮಾರ್ಗವೊಂದು ನಿನಗೆ ತೆರೆದುಕೊಳ್ಳುತ್ತದೆ’ ಎಂದು ಅಪ್ಪ ಪುಸಲಾಯಿಸುತ್ತಲೇ ಇದ್ದ. ಪ್ರಕೃತಿ ಕರುಣಿಸಿದ್ದ ಈ ವ್ಯಾಧಿಯ ವಿರುದ್ಧ ಸೆಣೆಸಿಕೊಂಡೇ ಓದುತ್ತಿದ್ದಳು. ಒಂದು ಪ್ಯಾರಾ ಓದಲು ಅದೆಷ್ಟು ಬಾರಿ ಪ್ರಯತ್ನಿಸಿದ್ದಳೋ ಆದರೆ ಇವಳ ಹುಮ್ಮಸ್ಸನ್ನಂತೂ ಈ ತೊಂದರೆ ಕಿತ್ತುಕೊಳ್ಳಲಿಲ್ಲ. ಹತ್ತೊಂಬತ್ತರ ಪ್ರಾಯದ ಹುಡುಗಿ. ಹಠ ತೊಟ್ಟು 1917ರಲ್ಲಿ ಕೇಂಬ್ರಿಡ್ಜ್ ಬಾಲಕಿಯರ ಶಾಲೆಯಲ್ಲಿ ಕೊನೆಯ ಹಂತದ ಓದನ್ನು ಮುಗಿಸಿದಳು. ಅಮ್ಮ ಓದಿದ ಕಾಲೇಜಿನಲ್ಲೇ ಇವಳ ವ್ಯಾಸಂಗ. ಮುಂದೆ ಬಕ್ರ್ಲಿಯ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಳು. ಶಿಕ್ಷಣದ ಒಂದು ಹಂತ ಮುಗಿದಿತ್ತು, ಆತ್ಮವಿಶ್ವಾಸದ ಸೋಪಾನ ಎದುರಿಗಿತ್ತು.
ಮಗು, ನೀನೇಕೆ ಹಾರ್ವರ್ಡ್ ಮೆಡಿಕಲ್ ಕಾಲೇಜಿಗೆ ಸೇರಬಾರದು’ ಎಂದು ಅಪ್ಪ ಸೂಚಿಸಿದಾಗ, ಒಡನೆಯೇ ಓಡಿದಳು ಕನಸುಗಳನ್ನು ಬೆನ್ನು ಹತ್ತಿ. ನೇರ ಡೀನ್ ರೂಂಗೆ ನುಗ್ಗಿದಳು. ನಾನು ಇಲ್ಲಿ ವೈದ್ಯಕೀಯ ಓದಲು ಬಂದಿರುವೆ’ ಎಂದಳು. ಹುಡುಗಿಯ ಧೈರ್ಯ ಕಂಡು ಡೀನ್
ಭೇಷ್’ ಎಂದ.
ಆ ಮಾತಿನ ಹಿಂದೆಯೇ ಸಾರಿ, ಹೆಣ್ಣುಮಕ್ಕಳು ಈ ಕಾಲೇಜಿನಲ್ಲಿ ಓದಬಹುದು. ತರಗತಿಗಳಲ್ಲಿ ಕೂಡಬಹುದು. ಆದರೆ ಡಿಗ್ರಿ ಕೊಡುವಂತಿಲ್ಲ’ ಎಂದಾಗ ಪಟ್ ಎಂದು ಹೆಲೆನ್ ಹೇಳಿದಳು:
ಈ ಸಂಪತ್ತಿಗೆ ನನ್ನ ಬದುಕಿನ ಅಮೂಲ್ಯ ಕಾಲವನ್ನು ವ್ಯರ್ಥಮಾಡಬೇಕೆ?’ ಡೀನ್‍ನ ಉತ್ತರಕ್ಕೂ ಕಾಯದೆ ಹೊರಟೇಬಿಟ್ಟಳು. ಆಗ ಬಾಲಕಿಯರಿಗೆ ಇದ್ದ ದೊಡ್ಡ ಅಡ್ಡಗೋಡೆ ಎಂದರೆ ಇದೇ. ಓದಬಹುದು, ಡಿಗ್ರಿ ಮಾತ್ರ ಇಲ್ಲ. 1945ರವರೆಗೆ ಆ ಕಾಲೇಜಿನಲ್ಲಿ ಇದೇ ಸ್ಥಿತಿ ಇತ್ತು. ಮನೆಗೆ ಬಂದಾಗ ಹೆಲೆನ್ ದುಮ್ಮಾನಪಡಲಿಲ್ಲ. ಅಪ್ಪನಿಗೆ ಇದ್ದುದನ್ನು ಇದ್ದಹಾಗೇ ಹೇಳಿದಳು.
`ಹೆಲೆನ್, ನೀನು ಒಂದು ಕೆಲಸಮಾಡು. ಸಾರ್ವಜನಿಕ ಆರೋಗ್ಯ ಶಿಕ್ಷಣ ಪಡಿ. ಅದೇನೂ ನಿನಗೆ ಹೆಚ್ಚು ಕಷ್ಟವಾಗದು. ಹೆಣ್ಣುಮಕ್ಕಳಿಗೆ ಹೇಳಿಮಾಡಿಸಿದ ವೃತ್ತಿ ಇದು’ ಎಂದು ಮತ್ತೆ ಬೆನ್ನು ತಟ್ಟಿದ. ಆಕೆ ಅದೇ ಉತ್ಸಾಹದಲ್ಲಿ ಮತ್ತೆ ಓಡಿದಳು. ಅಲ್ಲೂ ಅದೇ ಉತ್ತರ.
ಬೇಕಾದರೆ ತರಗತಿಗೆ ಬಾ, ಕೋರ್ಸನ್ನು ಮುಗಿಸು, ಆದರೆ ಡಿಗ್ರಿ ಕೊಡಲು ಆಗುವುದಿಲ್ಲ.’ ಈ ಬಾರಿ ಹೆಲೆನ್ ಟೌಸಿಗ್‍ಗೆ ರೇಗಿಹೋಯಿತು.
`ಅಲ್ಲಾ ಸಾರ್, ನಾಲ್ಕು ವರ್ಷ ಓದಿ, ಡಿಗ್ರಿ ಸಿಕ್ಕುವುದಿಲ್ಲ ಅಂದರೆ ಯಾರು ತಾನೇ ಬರುತ್ತಾರೆ?’ ಎಂದಳು. ಆತ ಅಷ್ಟೇ ಸಮಾಧಾನವಾಗಿ
ನೀನು ಹೇಳುವುದು ನಿಜ. ಯಾರೂ ಬರುವುದಿಲ್ಲ’ ಎಂದ. ಯಾವುದೋ ಒಂದು ಚಿಲುಮೆ ಬತ್ತಿದರೆ, ಇಡೀ ಭೂಮಿಯೇ ಬರಡೆ? ಸಾವಿರ ಸಾವಿರ ಚಿಲುಮೆಗಳು ಎಲ್ಲೋ ಉಕ್ಕುತ್ತವಲ್ಲವೆ? ಎಂದು ತನಗೆ ತಾನೆ ಗುನುಗಿಕೊಂಡು ಹೆಲೆನ್ ಚಿಲುಮೆಯನ್ನರಸಿ ಬಾಸ್ಟನ್‍ಗೆ ಹೊರಟೇಬಿಟ್ಟಳು. ಇಲ್ಲೋ ಇನ್ನೊಂದು ವಿಚಿತ್ರ ಕಟ್ಟಳೆ. ಈಕೆ ಶರೀರಕೋಶ ಅಧ್ಯಯನ, ಬ್ಯಾಕ್ಟೀರಿಯ ಅಧ್ಯಯನ, ಅಂಗರಚನೆಯ ಅಧ್ಯಯನಕ್ಕೆ ಒಲಿದಳು. ಮನ ಅರಳಿತು. ಆದರೆ ಅರಳುತ್ತಿದ್ದ ಮನ ಮುದುಡುವ ಕಾಲವೂ ಬಂತು. ಬೆಂಚಿನಲ್ಲಿ ಕೊನೆಯ ಸಾಲಿನಲ್ಲಿ ಹುಡುಗರ ಹಿಂದೆ ಹುಡುಗಿಯರು ಕೂಡಬೇಕಾಗಿತ್ತು. ಅಪ್ಪಿತಪ್ಪಿಯೂ ಹುಡುಗರೊಂದಿಗೆ ಮಾತನಾಡುವಂತಿರಲಿಲ್ಲ. ಇದಕ್ಕಿಂತಲೂ ಘೋರವೆಂದರೆ ಮತ್ತೆ ಅದೇ ಭೂತ ಎದ್ದು ಕುಣಿಯಿತು. `ನಿನಗೆ ಡಿಗ್ರಿ ಕೊಡಲು ಆಗುವುದಿಲ್ಲ’.
ಹೆಲೆನ್, ` ಅಷ್ಟೇ ತಾನೇ, ನನಗೆ ಹೇಗೆ ಮುಂದುವರಿಯಬೇಕೆಂದು ಗೊತ್ತಿದೆ. ನಡೆದೇ ತೀರುತ್ತೇನೆ’ ಎಂದುಕೊಂಡಳು. ವಿದ್ಯಾರ್ಥಿ ದೆಸೆಯಲ್ಲೇ ಎತ್ತಿನ ಹೃದಯದ ಮಾಂಸಖಂಡ ಚಲನೆಯನ್ನು ಕುರಿತು ಅಲೆಕ್ಸಾಂಡರ್ ಬೆಗ್ ಎಂಬ ಸಂಶೋಧಕನ ಜೊತೆ ಸಂಶೋಧನ ಲೇಖನವೊಂದನ್ನು ಬರೆದಳು. ಹುಡುಗರಷ್ಟೇ ಅಲ್ಲ, ಪುರುಷ ಅಧ್ಯಾಪಕರೂ ದಂಗಾದರು. ಹಿಂದಿನ ಬೆಂಚಿನ ಹುಡುಗಿಗೆ ಇಷ್ಟೊಂದು ಸಾಮಥ್ರ್ಯವೆ? ಅದೂ ಪಾಠ ಹೇಳಿಕೊಡುತ್ತಿದ್ದ ಗುರುವಿನ ಜೊತೆ ಸಂಶೋಧನ ಲೇಖನಕ್ಕೆ ಸಹಲೇಖಕಿ! ಇದ್ದಕ್ಕಿದ್ದಂತೆ ಆಕೆ ಪ್ರಸಿದ್ಧಳಾಗಿಬಿಟ್ಟಳು. ಆದರೆ ಗುರು ಇನ್ನೊಂದು ಗುಟ್ಟು ಹೇಳಿಕೊಟ್ಟ.
ಈ ವಿಶ್ವವಿದ್ಯಾಲಯ ನಿನ್ನಂಥ ಪ್ರತಿಭಾವಂತೆಗಲ್ಲ, ಮೊದಲು ಇದನ್ನು ತೊರೆದು ಜಾನ್ ಹಾಪ್ಕಿನ್ಸ್ ಮೆಡಿಕಲ್ ಕಾಲೇಜಿಗೆ ಸೇರಿಕೋ’ ಎಂಬ ಸೂಚನೆ ಕ್ಲಿಕ್ ಆಯಿತು. ಅಲ್ಲಿ ಲಿಂಗ ತಾರತಮ್ಯವಿರಲಿಲ್ಲ. ಮಹಿಳೆಯರಿಗೆ ಪ್ರವೇಶ ಕಲ್ಪಿಸಿದ್ದ ಕೆಲವೇ ಕಾಲೇಜುಗಳಲ್ಲಿ ಅದೂ ಒಂದು. ಮೇಲಾಗಿ ಡಿಗ್ರಿ ಪಡೆಯುವ ಅವಕಾಶವಿತ್ತು.
1927ರಲ್ಲಿ ಎಂ.ಡಿ. ಮುಗಿಸಿ ಆಚೆ ಬರುವಾಗ ಆಕೆ ಹೃದಯತಜ್ಞೆಯಾಗಿದ್ದಳು. ಎರಡು ವರ್ಷ ಶಿಶು ವೈದ್ಯಕೀಯದಲ್ಲಿ ಇಂಟರ್ನ್‍ಷಿಪ್ ಮುಗಿಸಿದಳು. ಆಕೆಗೆ ಫಿಸಿóಷಿಯನ್ ಆಗಬೇಕೆಂಬ ಮಹದಾಸೆ. ಆದರೆ ಅಲ್ಲಿ ಇದ್ದ ಒಂದೇ ಹುದ್ದೆಯಲ್ಲಿ ಆಗಲೇ ವೈದ್ಯನೊಬ್ಬ ಕೂತುಬಿಟ್ಟಿದ್ದ. ಆಕೆ ತಡಮಾಡಲಿಲ್ಲ. ಶಿಶು ವೈದ್ಯದಲ್ಲಿ ಮುಂದುವರಿಯುವುದು ಹೇಗೆ ಎಂಬ ಯೋಚನೆ ಬಂತು. ಅದರಲ್ಲೂ ಮಕ್ಕಳ ಹೃದಯ ತಜ್ಞೆಯಾದರೆ ಹೇಗೆ ಎಂಬ ಹೊಸಹೊಳಹು ಮೂಡಿತು. ಆಗ ಈ ಕ್ಷೇತ್ರದಲ್ಲಿ ಹೇಳಿಕೊಳ್ಳಬಹುದಾದ ಕ್ರಾಂತಿಕಾರಿ ಪ್ರಗತಿ ಆಗಿರಲಿಲ್ಲ. ಈ ಹೊತ್ತಿಗೆ ಇನ್ನೊಂದು ಸವಾಲು ಆಕೆಗೆ ಎದುರಾಗಿತ್ತು. ಕಿವುಡುತನ ಬಲವಾಗಿ ಕಾಡಿತ್ತು. ಏನೂ ಕೇಳಿಸದ ಸ್ಥಿತಿ. ತುಟಿಚಲನೆ ಅಭ್ಯಾಸಮಾಡಿಕೊಂಡಳು. ರೋಗಿಗಳ ಜೊತೆಗೆ ಅದನ್ನೇ ಸಂಪರ್ಕ ಮಾಧ್ಯಮವಾಗಿ ಬಳಸಿಕೊಂಡಳು. ಹೃದಯದ ಡಬ್ ಡಬ್ ಬಡಿತ ಕೇಳಿಸುತ್ತಿರಲಿಲ್ಲ. ಆದರೆ ಸ್ಪರ್ಶಮಾತ್ರದಿಂದಲೇ ಆರೋಗ್ಯಕರ ಹೃದಯದ ಬಡಿತ ಯಾವುದು? ರೋಗಗ್ರಸ್ತ ಹೃದಯದ ಬಡಿತ ಯಾವುದು ಎಂಬುದನ್ನು ಅತ್ಯಂತ ಸ್ಪಷ್ಟವಾಗಿ ಅರಿಯಬಲ್ಲವಳಾಗಿದ್ದಳು. ಕಿವಿಗೆ ಪುಟ್ಟ ಯಂತ್ರ ಬಂತು. ಈಗ ಕ್ಷೀಣವಾಗಿಯಾದರೂ ಶಬ್ದ ಕಿವಿಗೆ ಬೀಳುತ್ತಿತ್ತು. ಆದರೂ ಕೈ ಸನ್ನೆ, ಬಾಯಿ ಸನ್ನೆ ಅವಳಿಗೆ ಸಂವಹನ ಮಾಡಲು ಸಲೀಸಾಗಿತ್ತು. ಮುಂದಿನದು ಆಕೆಯ ಸಾಧನೆಯ ಪರ್ವ.
ನೀಲಿ ಶಿಶುಗಳಿಗೆ ಜೀವದಾತೆ

ಹುಟ್ಟುತ್ತಲೇ ಕೆಲವು ಮಕ್ಕಳು ನೀಲಿ ಬಣ್ಣಕ್ಕೆ ತಿರುಗಿ ಉಸಿರಾಟದ ತೊಂದರೆ ಅನುಭವಿಸುವುದುಂಟು. ಇದನ್ನು ವೈದ್ಯಕೀಯವಾಗಿ “ಸಯೋನೋಟಿಕ್ ಹಾರ್ಟ್ ಡಿಸೀಸ್’’ ಎನ್ನುವುದುಂಟು. ಮಗುವಿನ ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆಯಾಗಿ ರಕ್ತವು ಆಕ್ಸಿಜನ್ ಕೊರತೆ ಅನುಭವಿಸುತ್ತದೆ. ಏಕೆಂದರೆ ಹಿಮೋಗ್ಲೋಬಿನ್ ಆಕ್ಸಿಜನ್ ವಾಹಕ. ಇಂಥ ಸಂದರ್ಭದಲ್ಲಿ ನವಜಾತ ಶಿಶುಗಳು ನೀಲಿ ಬಣ್ಣ ತಳೆಯುವುದುಂಟು.
ನೀಲಿ ಶಿಶುಗಳ ಮರಣದ ಸಂಖ್ಯೆ ದೊಡ್ಡ ಪ್ರಮಾಣದಲ್ಲೇ ಇತ್ತು. ಹೆಲೆನ್‍ಗೆ ನೀಲಿ ಶಿಶುಗಳನ್ನು ಉಳಿಸುವುದು ಹೇಗೆ ಎಂಬ ಕಡೆ ಗಮನಹೋಯಿತು. ಕೊನೆಗೆ ಒಂದು ಉಪಾಯ ಹೊಳೆಯಿತು. ಹೃದಯದ ಧಮನಿಯ ಒಂದು ಕವಲನ್ನು ಸಣ್ಣ ಪೈಪಿನ ಮೂಲಕ ಶ್ವಾಸಕೋಶಕ್ಕೆ ಜೋಡಿಸಿದರೆ ಹೇಗೆ? ಆಗ ಆಕ್ಸಿಜನ್‍ಪೂರಿತ ರಕ್ತ ನೇರವಾಗಿಯೇ ಶ್ವಾಸಕೋಶ ತಲಪಿದರೆ ಸಹಜ ಉಸಿರಾಟ ಸಾಧ್ಯ ಎಂಬುದು ಅವಳ ವೈದ್ಯಕೀಯ ತರ್ಕ. ಆದರೆ ಇಂಥ ಚಿಕಿತ್ಸೆಗೆ ಯಾವ ಪರಿಣತ ಶಿಶುರೋಗ ವೈದ್ಯರು ತಯಾರಾಗಿರಲಿಲ್ಲ. ಅದನ್ನು ರಿಸ್ಕ್ ಎಂದು ಭಾವಿಸುತ್ತಿದ್ದ ಕಾಲ. ಅಂತಿಮವಾಗಿ ಆಲ್ಫ್ರೆಡ್ ಬ್ಲಾಲಾಕ್ ಎಂಬ ತಜ್ಞ ಈ ಶಸ್ತ್ರ ಚಿಕಿತ್ಸೆಗೆ ಮುಂದಾಗಿ ಯಶಸ್ವಿಯಾದ ನಂತರ ಇದಕ್ಕೆ ಬಹುದೊಡ್ಡ ಪ್ರಚಾರ ಸಿಕ್ಕಿತು. ಮರಣಮುಖಿಗಳಾಗಿದ್ದ ಅನೇಕ ಶಿಶುಗಳ ಜೀವ ಉಳಿಯಿತು. ಇಂಥ ತಾಂತ್ರಿಕ ಉಪಕರಣ ಜೋಡಣೆಯನ್ನು ಈಗಲೂ ಬ್ಲಾಲಾಕ್-ಟೌಸಿಗ್ ಷಂಟ್ ಎನ್ನುವುದುಂಟು. ಆದರೆ ಹೆಲೆನ್ ಪೋಷಕರಿಗೆ ಸ್ಪಷ್ಟ ನುಡಿಗಳಲ್ಲಿ ಹೇಳುತ್ತಿದ್ದಳು: ಇದೊಂದು ತಾತ್ಕಾಲಿಕ ವ್ಯವಸ್ಥೆ ಅಷ್ಟೇ. ಮಗುವಿನ ಜೀವ ಉಳಿಸಲು ಮುಂದೆ ಶಸ್ತ್ರ ಚಿಕಿತ್ಸೆಗೆ ಒಳಗಾಗಲೇಬೇಕು ಎಂದು.
1945ರಲ್ಲಿ ಜರ್ನಲ್ ಆಫ್ ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್‍ನಲ್ಲಿ ಈ ಕುರಿತು ಸಂಶೋಧನ ಲೇಖನ ಬರೆದಳು. ಅದು ಜಾಗತಿಕ ಮನ್ನಣೆ ಪಡೆಯಿತು. ಬ್ಲಾಲಾಕ್ ಜೊತೆ ಯೂರೋಪ್ ಮತ್ತು ಅಮೆರಿಕ ಪ್ರವಾಸ ಮಾಡಿ ವ್ಯಾಪಕ ಜಾಗೃತಿ ಮೂಡಿಸಿದಳು. ಮುಂದೆ ಈ ಕುರಿತು ಪಠ್ಯಪುಸ್ತಕವನ್ನೇ ರಚಿಸಿದಳು. ಆಕೆ ಸದಾ ಅವಿಶ್ರಾಂತೆ, ಮಕ್ಕಳ ರೋಗಗಳ ಬಗ್ಗೆಯೇ ಚಿಂತೆ. 1950ರ ದಶಕದಲ್ಲಿ ಯೂರೋಪಿನಲ್ಲಿ ಇನ್ನೊಂದು ಪಿಡುಗು ಕಾಣಿಸಿತು. ಅದು ಅಂಗವೈಕಲ್ಯ ಇರುವ ಮಕ್ಕಳ ಜನನ. ಹುಟ್ಟುತ್ತಲೇ ಕೆಲವರಿಗೆ ಕೈಗಳಿರಲಿಲ್ಲ, ಕೆಲವರಿಗೆ ಕಾಲುಗಳೇ ಅಭಿವೃದ್ಧಿಯಾಗಿರಲಿಲ್ಲ. ಇದನ್ನು ವೈದ್ಯಕೀಯವಾಗಿ ಫÉೂೀಕೋಮೇಲಿಯ ಸಿಂಡ್ರೋಮ್ ಎನ್ನುತ್ತಾರೆ. ಈ ಕುರಿತು ಹಳೆಯ ವಿದ್ಯಾರ್ಥಿಯೊಬ್ಬ ಹೆಲೆನ್ ಗಮನಕ್ಕೆ ತಂದ.
ಜರ್ಮನಿಯಲ್ಲಿ ಈ ಕುರಿತು ಸಂಶೋಧನೆ ಮಾಡಲು ಹೆಚ್ಚು ಅವಕಾಶವಿದ್ದುದರಿಂದ ಆಕೆ ಹೊರಟೇಬಿಟ್ಟಳು. ಇದು ಥ್ಯಾಲಿಡೋಮೈಡ್ ಎಂಬ ಔಷಧಿಯ ಪರಿಣಾಮ. ಗರ್ಭಿಣಿಯರು ವಾಂತಿ ತಡೆಯಲು, ಬೆಳಗಿನ ಜೋಕರಿಕೆ ತಡೆಯಲು ಯೂರೋಪಿನಲ್ಲಿ ವ್ಯಾಪಕವಾಗಿ ಬಳಸುತ್ತಿದ್ದರು. ಅದರ ಪರಿಣಾಮ ಏನಾಗಬಹುದೆಂದು ವೈದ್ಯರೂ ಆಗ ತಲೆಕೆಡಿಸಿಕೊಂಡಿರಲಿಲ್ಲ. 1962ರಲ್ಲಿ ಈಕೆ ಅಮೆರಿಕಕ್ಕೆ ಮರಳಿದಾಗ ಎಲ್ಲವೂ ಸ್ಪಷ್ಟವಾಗಿತ್ತು. ಥ್ಯಾಲಿಡೋಮೈಡ್ ಅತ್ಯಂತ ಅಪಾಯಕಾರಿ ಔಷಧಿ ಎಂದು ಅಮೆರಿಕನ್ ಕಾಲೇಜ್ ಆಫ್ ಫಿಸಿóಷಿಯನ್ಸ್ ಮುಂದೆ ತೆರೆದಿಟ್ಟಳು. ಅಮೆರಿಕ ಒಡನೆಯೇ ಇದರ ಪೂರೈಕೆಯನ್ನು ನಿಲ್ಲಿಸಿತು. ಸ್ವತಃ ಅಧ್ಯಕ್ಷ ಜಾನ್ ಕೆನೆಡಿ ಮುತುವರ್ಜಿ ತೋರಿ ಯಾವ ಔಷಧವನ್ನೂ ದೀರ್ಘವಾಗಿ ಪರೀಕ್ಷಿಸದೆ ಮಾರುಕಟ್ಟೆಗೆ ಬಿಡಕೂಡದು ಎಂಬ ಕಾಯ್ದೆಯನ್ನೇ ತಂದರು. ಪ್ರತಿಷ್ಠಿತ ಪ್ರಶಸ್ತಿಗಳ ಜೊತೆಗೆ ಹೆಲೆನ್‍ಗೆ 20 ಗೌರವ ಡಾಕ್ಟರೇಟ್ ಡಿಗ್ರಿ ಅರಸಿಬಂದವು.
ದಣಿವರಿಯದ ಹೆಲೆನ್ ಟೌಸಿಗ್ 129 ಸಂಶೋಧನ ಲೇಖನಗಳನ್ನು ಮಕ್ಕಳ ಹೃದಯ ಕುರಿತಂತೆ ಬರೆಯುತ್ತ ಹೋದಳು. ಈ ಪೈಕಿ 40 ಲೇಖನಗಳು ನಿವೃತ್ತಿಯ ನಂತರ ಬರೆದವು. ತನ್ನ 67ನೇ ವಯಸ್ಸಿನಲ್ಲಿ ಅಮೆರಿಕನ್ ಹಾರ್ಟ್ ಅಸೋಸಿಯೇಷನ್‍ನ ಅಧ್ಯಕ್ಷಳಾದ ಮೊದಲ ಮಹಿಳೆ ಎನಿಸಿಕೊಂಡಳು. `ಒಂದು ಹಂತದಲ್ಲಿ ನನಗೆ ಸಿಕ್ಕಬೇಕಾದ ಘಟ್ಟದಲ್ಲಿ ಪ್ರಾಶಸ್ತ್ಯ ಸಿಕ್ಕಲಿಲ್ಲ. ಈಗ ಕ್ರಿಯಾಶೀಲತೆ ನಿಲ್ಲಿಸುವ ಹೊತ್ತಿಗೆ ನನ್ನನ್ನು ಗುರುತಿಸಲಾಗಿದೆ’ ಎಂದು ಬೇಸರಪಟ್ಟಿದ್ದೂ ಉಂಟು. ಏಕೆಂದರೆ ಆಕೆ ಅಸಿಸ್ಟೆಂಟ್ ಹುದ್ದೆಯಿಂದ ಬಡ್ತಿ ಪಡೆಯಲೇ ಇಲ್ಲ. ಬಾಳ ಸಂಜೆಯಲ್ಲಿ ಆಕೆ ತನ್ನ ವಾಸ್ಯವ್ಯವನ್ನು ಪೆನ್ಸಿಲ್‍ವೇನಿಯಾಕ್ಕೆ ಬದಲಾಯಿಸಿದಳು. 88ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲು ಮೂರು ದಿನ ಮಾತ್ರ ಬಾಕಿ ಇತ್ತು. 1986ರಲ್ಲಿ ಕಾರಿನ ಅಪಘಾತವೊಂದರಲ್ಲಿ ದಯನೀಯ ಸಾವನ್ನಪ್ಪಿದಳು (1898-1986). ಹಾಪ್‍ಕಿನ್ಸ್ ಆಸ್ಪತ್ರೆಯ ಶಿಶು ಹೃದಯರೋಗ ಕೇಂದ್ರಕ್ಕೆ ಆಕೆಯ ಹೆಸರನ್ನಿಟ್ಟು ಸ್ಮರಿಸಲಾಗಿದೆ. ಈಗ ಆಕೆ ವೈದ್ಯರ ಹೃದಯದಲ್ಲೇ ನೆಲೆಸಿದ್ದಾಳೆ, ಇನ್ನೇನು ಬೇಕು?
ಡಾ.ಟಿ.ಆರ್.ಅನಂತರಾಮು
(ಡಾ.ಟಿ.ಆರ್.ಅನಂತರಾಮು, ನಂ. 534, 70ನೇ ಅಡ್ಡರಸ್ತೆ, 14ನೇ ಮುಖ್ಯರಸ್ತೆ, ಕುಮಾರಸ್ವಾಮಿ ಬಡಾವಣೆ 1ನೇ ಹಂತ, ಬೆಂಗಳೂರು-560111, ಮೊ: 98863 56085)
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.