Uncategorizedಅಂಕಣ

ಸ್ತ್ರೀ ಎಂದರೆ ಅಷ್ಟೇ ಸಾಕೆ?/ ಹವಳ ರಿಪೇರಿ: ಸಾಗರ ತಳದಲ್ಲಿ ನಾರಿ- ಟಿ.ಆರ್. ಅನಂತರಾಮು

ಭೂಮಿಯ ಬಿಸಿಯನ್ನು ಏರಿಸುತ್ತಾ ಹೋದರೆ ಇಡೀ ಜೀವಿ ಸಂಕುಲ ಸಂಕಷ್ಟಕ್ಕೆ ಸಿಗುತ್ತದೆ. ಜಗತ್ತಿನಾದ್ಯಂತ ಸಾಗರಗಳ ಒಳಗಿನ ಹವಳದ ದಿಬ್ಬಗಳು ದಿಕ್ಕೆಡುತ್ತಿವೆ. ಹವಳದ ಬಗ್ಗೆ ಸದಾ ಕಳವಳಗೊಳ್ಳುವ ಕೇಟ್ಲಿನ್ ಲಸ್ಟಿಕ್ ಅಂಥವರು ಹವಳವನ್ನು ಬಿತ್ತಿಬೆಳೆಸಲು ಉಳಿಸಲು ಸಮುದ್ರಕ್ಕೆ ಹಾರುತ್ತಾರೆ. ಅಲ್ಲಿ ಅವರು ಬೆಳೆಸುವ ಹವಳದ ನರ್ಸರಿ ಸಮುದ್ರದ ಆರೋಗ್ಯವನ್ನು ಕಾಪಾಡುತ್ತದೆ. ಅವರ ಬದ್ಧತೆ ನೋಡಿದರೆ ಮಹಿಳೆ ಇಲ್ಲದೆ ಯಾವ ಜೀವಿ ಸಂರಕ್ಷಣೆಯೂ ಸಾಧ್ಯವಿಲ್ಲ ಎಂಬ ಮಾತಿಗೆ ಉದಾಹರಣೆ ಸಿಗುತ್ತದೆ.

ಅಮೆರಿಕದ ಖ್ಯಾತ ನಗರ ಫ್ಲಾರಿಡಾದಲ್ಲಿ ಒಂದು ಸೆಮಿನಾರ್ ನಡೆಯುತ್ತಿತ್ತು. ಅದು ಜೀವಿ ಸಂರಕ್ಷಣೆಯ ವಿಚಾರ ಕುರಿತದ್ದು. ದೇಶದ ಮೂಲೆಮೂಲೆಯಿಂದ ತಜ್ಞರು ಬಂದಿದ್ದರು, ವಿಶೇಷವಾಗಿ ಬದಲಾಗುತ್ತಿರುವ ಹವಾಮಾನ ಸಮುದ್ರ ಜೀವಿಗಳಿಗೆ ತಂದಿರುವ ಕುತ್ತನ್ನು ಚರ್ಚಿಸಲೆಂದೇ ಅದನ್ನು ಏರ್ಪಡಿಲಾಗಿತ್ತು. ತಜ್ಞನೊಬ್ಬ ಹೇಳುತ್ತಲೇ ಇದ್ದ. ಮೃದುಮಾತಿನಲ್ಲಿ ಆದರ ಖಚಿತವಾದ ನಿಲುವು ಅವನ ಧ್ವನಿಯಲ್ಲಿತ್ತು. ಜೊತೆಗೆ ಆತಂಕ, ವಿಷಾದವೂ ಬೆರೆತಿತ್ತು. ಆತ ಎತ್ತಿಕೊಂಡ ಸಮಸ್ಯೆ ಜಾಗತಿಕವಾದದ್ದು. ಎಲ್ಲ ದೇಶಗಳ ಕಥೆಯೂ ಹೌದು.

ಆದರೆ ಆತ ಹೇಳುತ್ತಿದ್ದುದನ್ನು ಗಮನಿಸಿದವರಿಗೆ ಆತನ ನೋವು ಅರ್ಥವಾಗುತ್ತಿತ್ತು. ಉಪನ್ಯಾಸದ ಒಂದು ಹಂತದಲ್ಲಿ ಆತ ಮುನ್ನುಡಿದಿದ್ದ: ನಾವು ಹೀಗೆÉÀಯೇ ಭೂಮಿಯ ಬಿಸಿಯನ್ನು ಏರಿಸುತ್ತ ಹೋದರೆ ಮುಂದಿನ 40-50 ವರ್ಷಗಳಲ್ಲಿ ಮನುಷ್ಯರಷ್ಟೇ ಅಲ್ಲ, ಯಾವ ಜೀವಿಸಂಕುಲವೂ ಉಳಿಯುವ ಸ್ಥಿತಿಯಲ್ಲಿರುವುದಿಲ್ಲ. ಇದು ನಮ್ಮ ತಲೆಯ ಮೇಲೆ ನಾವೇ ಹಾಕಿಕೊಳ್ಳುತ್ತಿರುವ ಕಲ್ಲುಬಂಡೆ. ಏಕೆ ಯಾವ ದೇಶಗಳೂ ಪರಿಹಾರದ ವಿಚಾರ ಬಂದಾಗ ಒಮ್ಮತಕ್ಕೆ ಬರುತ್ತಿಲ್ಲ. ಎಲ್ಲ ದೇಶಗಳಿಗೂ ಭೂಮಿಯ ಬಿಸಿ ತಟ್ಟಿರುವಾಗ ಏಕೆ ನಿರ್ಲಕ್ಷ್ಯ? ಅಲ್ಲಿ ನೋಡಿ ಆಸ್ಟ್ರೇಲಿಯದಲ್ಲಿ ಏನಾಗುತ್ತಿದೆ?ದಿ ಗ್ರೇಟ್ ಬ್ಯಾರಿಯರ್ ರೀಫ್’ ಮೂಲ ಸ್ವರೂಪವನ್ನು ಕಳೆದುಕೊಳ್ಳುತ್ತಿದೆ, ಬಿಳುಚಿಕೊಳ್ಳುತ್ತಿದೆ. ಅದರಲ್ಲಿ ಆಶ್ರಯ ಪಡೆದ ಮೀನು, ಮೊಸಳೆ, ಹಕ್ಕಿಗಳ ಭವಿಷ್ಯವೇನು? ಇದು ಜಗತ್ತನ್ನು ಹೇಗೆ ಬಾಧಿಸುತ್ತಿದೆ ಗೊತ್ತೇ’ ಎಂದು ಧ್ವನಿಯನ್ನು ಏರಿಸಿದಾಗ, ಸಭೆಯಲ್ಲಿ ಒಬ್ಬಳು ತರುಣಿ ಎದ್ದುನಿಂತಳು. ತಾನು ಹೇಳುವುದಿದೆ ಎನ್ನುವ ಅರ್ಥದಲ್ಲಿ ಕೈ ಎತ್ತಿದಳು. ಒಂದು ಕ್ಷಣ ಎಲ್ಲರ ಗಮನವೂ ಅವಳತ್ತ ನೆಟ್ಟಿತು.

ಹೌದು, ಇಡೀ ಸಾಗರ ಜೀವಿಗಳ ಶೇ.25 ಭಾಗ ಹವಳ ದಿಬ್ಬಗಳನ್ನೇ ಆಶ್ರಯಿಸಿವೆ. ಹವಳ ದಿಬ್ಬಗಳು ಛಿದ್ರವಾದುವೆಂದರೆ ಒಂಬೈನೂರು ಕೋಟಿ ಮೌಲ್ಯದ ಕಡಲ ತೀರವೇ ಚಿಂದಿಯಾಗುತ್ತದೆ. 4,000 ಬಗೆ ಬಗೆಯ ಮೀನುಗಳಿಗೆ ಅದರ ಹೊಡೆತ ಬೀಳುತ್ತದೆ. ಮೀನುಗಾರರ ಭವಿಷ್ಯ ಡೋಲಾಯಮಾನವಾಗುತ್ತದೆ.’ ಇನ್ನೂ ಆಕೆ ಹೇಳುವುದು ಬಹಳವಿತ್ತು ಎನ್ನಿಸುತ್ತದೆ. ಒಂದು ತುರ್ತು ಕರೆ ಬಂದು ಆಕೆ ಸಭಾಂಗಣದಿಂದ ನಿರ್ಗಮಿಸಿದಳು. ಯಾರಿವಳು? ಪಟಪಟ ಎಂದು ಅಂಕಿ, ಸಂಖ್ಯೆಯನ್ನು ಕರಾರುವಾಕ್ಕಾಗಿ ಹೇಳುತ್ತಿದ್ದಾಳಲ್ಲ ಎಂದು ಪಿಸು ಪಿಸು ಧ್ವನಿಯಲ್ಲಿ ಮಾತನಾಡುತ್ತಿದ್ದ ಸಭಿಕರಲ್ಲಿ ಯಾರೋ ಹೇಳುತ್ತಿದ್ದರು:ಆಕೆ ಗೊತ್ತಿಲ್ಲವೇ, ಕೇಟ್ಲಿನ್ ಲಸ್ಟಿಕ್ ಎಂದಾಗ ಅನೇಕ ಸಭಿಕರು ಯಾರು ಹವಳ ದಿಬ್ಬವನ್ನು ಉಳಿಸಲು ಸಾಗರ ತಳವನ್ನು ಆಗಾಗ ಮುಟ್ಟುತ್ತಾಳಲ್ಲ, ಆಕೆಯೇ ಎಂದು ಅನೇಕರು ಆಶ್ಚರ್ಯಸೂಚಕವಾಗಿ ಕೇಳಿದರು. ಇದ್ದವರಲ್ಲಿ ಕೆಲವರು `ಹೌದು, ಇವಳು ಆಕೆಯೇ’ ಎಂದರು. ಒಂದುಕ್ಷಣ ಅವರಲ್ಲಿ ಮಿಂಚಿನ ಸಂಚಲನವಾಯಿತು. ಆದರೆ ಮಿಂಚಿನಂತೆಯೇ ಆಕೆ ಸಭಾಂಗಣದಿಂದ ನಿರ್ಗಮಿಸಿದ್ದಳು.

ಇಷ್ಟು ಹೇಳಿದರೆ ಆಕೆಯ ಪರಿಚಯದ ಒಂದಂಶವನ್ನೂ ಹೇಳಿದಂತಾಗುವುದಿಲ್ಲ. ವಾಸ್ತವವಾಗಿ ಆಕೆಯೇನೂ ಪ್ರಚಾರ ಬಯಸಿರಲಿಲ್ಲ. ಒಂದೇ ಮಾತಿನಲ್ಲಿ ಹೇಳುವುದಾದರೆ ಆಕೆ ಸವಾಲುಗಳಿಗೆ ಜವಾಬು ಕೊಡುವುದು ಕೆಲಸದ ಮೂಲಕ, ಪರಿಹಾರ ಸೂಚಿಸುವುದರ ಮೂಲಕ. ಹೀಗಾಗಿ ಜೀವಿ ಸಂರಕ್ಷಣೆಯ ಪ್ರಶ್ನೆ ಬಂದಾಗಲೆಲ್ಲ ಫ್ಲಾರಿಡಾದಲ್ಲಿ ತಪ್ಪದೆ ಆಕೆಯ ಹೆಸರು ಬಂದೇ ಬರುತ್ತದೆ.

ಕೇಟ್ಲಿನ್ ಲಸ್ಟಿಕ್

ಕೇಟ್ಲಿನ್ ಲಸ್ಟಿಕ್ ಅಮೆರಿಕದ ದಕ್ಷಿಣ ಫ್ಲಾರಿಡಾದಲ್ಲಿರುವ `ಮೆರೈನ್ ಕನ್ಸರ್ವೇಷನ್ ಸಂಸ್ಥೆ’ಯ ವ್ಯವಸ್ಥಾಪಕಿ. ಇದು ನೇಚರ್ ಕನ್ಸರ್ವೇಷನ್’ ಎಂಬ ವಿಶಾಲ ಸಂಸ್ಥೆಯ ಒಂದು ಅಂಗ ಅಷ್ಟೇ. ಇಲ್ಲಿನ ವಿಶೇಷವೆಂದರೆ ಉನ್ನತ ಹುದ್ದೆಯಲ್ಲಿರುವ ಶೇ. 40 ಮಂದಿ ಮಹಿಳೆಯರೇ. ಫ್ಲಾರಿಡಾ ಎಂದೊಡನೆ ಅಮೆರಿಕದ ಅದನ್ನು ತನ್ನ ಹೃದಯದಂತೆ ಜೋಪಾನ ಮಾಡಿಕೊಂಡು ಬಂದಿದೆ. ಏಕೆಂದರೆ ಅಲ್ಲೇ `ಜಾನ್ ಎಫ್ ಕೆನಡಿ ಸ್ಪೇಸ್ ಸ್ಠೇಶನ್’ ಇರುವುದು. ಅಪೋಲೋ ಯಾನಿಗಳು ಚಂದ್ರಯಾನ ಮಾಡಲು ಹೊರಟಿದ್ದು ಇಲ್ಲಿಂದಲೇ. ಸ್ಕೈಲ್ಯಾಬ್, ಸ್ಪೇಸ್ ಷಟಲ್‍ಗಳು ಎಲ್ಲಕ್ಕೂ ಫ್ಲಾರಿಡಾ ಅಂತರಿಕ್ಷ ಉಡಾವಣಾ ಕೇಂದ್ರವೇ ನೆಲೆ ಒದಗಿಸಿದ್ದು. ಹೊಸ ಅಂತರಿಕ್ಷ ಯೋಜನೆಗಳು ಮೊಳೆಯುವುದು, ಕಾರ್ಯರೂಪಕ್ಕೆ ಬರುವುದು ಇಲ್ಲಿಯೇ. ಫ್ಲಾರಿಡಾದಿಂದ 70 ಕಿಲೋ ಮೀಟರ್ ದೂರದಲ್ಲಿ ಟಾರ್ಟುಗಾಸ್ ರಾಷ್ಟ್ರೀಯ ಉದ್ಯಾನವನಕ್ಕೆ ಸೇರಿದ ಏಳು ದ್ವೀಪಗಳಿವೆ. ಅಲ್ಲಿಗೆ ತಲಪುವುದು ಸುಲಭವಲ್ಲ. ದೋಣಿಯಲ್ಲಿ ಹೋಗಬೇಕು ಅಥವಾ ಪುಟ್ಟ ಸಾಗರ ವಿಮಾನದಲ್ಲಿ ಹೋಗಬೇಕು. ಕೇಟ್ಲಿನ್ ಲಸ್ಟಿಕ್‍ಗೆ ಇದೇ ಒಂದು ತಪೋಭೂಮಿ. ಅಲ್ಲಿ ಅವಳಿಗೆ ಕಾದಿರುವುದು ಎರಡು ಸಂಗತಿಗಳು. ಒಂದು ಹವಳ, ಇನ್ನೊಂದು ಕಳವಳ. ಹವಳವೆಂದರೆ ದಿಬ್ಬಗಳೂ ದ್ವೀಪಸಮೂಹಗಳು, ಸಾಲುಗಾಲುಗಟ್ಟಿರುವ ಅಟ್ಲಾಂಟಿಕ್ ಸಾಗರದ ಮಹಾ ಆಕರ್ಷಣೆ. ಹಿಂದೆಲ್ಲ ಅಮೆರಿಕದ ಸಿವಿಲ್ ಯುದ್ಧವಾದಾಗ ಇದು ಮುನ್ನೆಲೆಗೆ ಬಂದಿತ್ತು. ಲೇಖಕ ಅರ್ನೆಸ್ಟ್ ಹೆಮಿಂಗ್‍ವೇ ಏಕಾಂತ ಬಯಸಿದಾಗಲೆಲ್ಲ ಇಲ್ಲಿಗೆ ಬಂದು ಹಾಯಾಗಿರುತ್ತಿದ್ದ. ಕೊನೆಗೆ ಕ್ಯೂಬಾದಿಂದ ಬಂದ ನಿರಾಶ್ರಿತರಿಗೂ ಇದೇ ನೆಲೆಯಾಯಿತು. ಅದು ಬೇರೆಯದೇ ಆದ ಕಥೆ.

ಇಲ್ಲಿನ ಹವಳ ದಿಬ್ಬಗಳು ತಮ್ಮ ಆರೋಗ್ಯವನ್ನು ಕಳೆದುಕೊಂಡಿವೆ. ರೋಗಗ್ರಸ್ತವಾಗಿ ಬಿಳುಚಿಕೊಂಡಿವೆ. ಅದನ್ನು ಆಶ್ರಯಿಸಿದ ಸಹಸ್ರಾರು ಸಾಗರ ಜೀವಿಗಳು ಈಗ ದಿಕ್ಕು ಕೆಟ್ಟಿವೆ. ಇದು ಅಮೆರಿಕದ ಕಥೆಯಷ್ಟೇ ಅಲ್ಲ, ಎಲ್ಲೆಲ್ಲಿ ಹವಳ ದಿಬ್ಬಗಳಿವೆಯೋ ಎಲ್ಲದರ ಕಥೆಯೂ ಇದೇ. ಒಟ್ಟಾರೆ ಜಗತ್ತಿನ ಶೇ. 97 ಭಾಗ ಹವಳ ದಿಬ್ಬಗಳು ನೋಡನೋಡುತ್ತಲೇ ಸಾವಿನಂಚಿಗೆ ತಲಪಿಬಿಟ್ಟಿವೆ. ಇದನ್ನು ಲಸ್ಟಿಕ್ ಮತ್ತೆ ಮತ್ತೆ ತನ್ನ ಸಂದರ್ಶನದಲ್ಲಿ ಹೇಳುತ್ತಲೇ ಬಂದಿದ್ದಾಳೆ. ಆಕೆಯ ಕಳವಳ ಇದು. `ಇದರಲ್ಲಿ ನಿಸರ್ಗದ ಪಾತ್ರ ಕಡಿಮೆ, ಮನುಷ್ಯನ ಕೈಯೇ ಮೇಲು. ಸಮುದ್ರ ಆಮ್ಲೀಯವಾಗುತ್ತಿದೆ. ಕಾರ್ಬನ್ ಡೈ ಆಕ್ಸೈಡನ್ನು ಇನ್ನೂ ಹೆಚ್ಚು ಹೀರುವ ಸ್ಥಿತಿಯಲ್ಲಿಲ್ಲ. ಸಾಗರ ಉಬ್ಬಿದಾಗ, ಚಂಡಮಾರುತ ಬಡಿದಾಗ, ಹವಳಗಳ ಭದ್ರ ಕೋಟೆಯ ಮೇಲೆ ದಾಳಿಮಾಡುತ್ತವೆ. ಇದು ಎಲ್ಲ ದೇಶಗಳಿಗೂ ತಿಳಿದೇ ಇದೆ. ಆದರೆ ಪರಿಹಾರಕ್ಕಾಗಿ ದೊಡ್ಡ ಪ್ರಮಾಣದ ಪ್ರಯತ್ನಗಳಾಗುತ್ತಿಲ್ಲ.’

ಹವಳಗಳ ನರ್ಸರಿ

ಈ ಜಾಗತಿಕ ಸಮಸ್ಯೆಗೆ ಉತ್ತರ ಹುಡುಕಲು ಜಗತ್ತು ತಿಣುಕಾಡುತ್ತಿರುವಾಗ, ಕೇಟ್ಲಿನ್ ಮತ್ತು ಅವಳ ಗೆಳತಿಯರು ಉಪಾಯ ಕಂಡುಕೊಂಡಿದ್ದಾರೆ. ಹವಳವೆಂದರೆ ಒಂದು ಜಾತಿಗೆ ಸೇರಿದವಲ್ಲ. ನೂರಾರು ಪ್ರಭೇದಗಳಿವೆ. ಮಿದುಳಿನಂತಿರುವುವು, ಹೂಕೋಸಿನಂತಿರುವುವು, ಕವಲಾಗಿರುವುವು, ಕೊಂಬಿನಂತಿರುವುವು, ಬೆರಳಿನಂತಿರುವುವು ಹೀಗೆ. ಜಾತಿ ಯಾವುದಾದರೇನು? ಇಡೀ ಹವಳ ದಿಬ್ಬಗಳು ಸೃಷ್ಟಿಯಾಗುವುದು ಹವಳದ ಹುಳುಗಳಿಂದಲೇ. ಅವುಗಳ ವಂಶವೇ ನಷ್ಟವಾಗುತ್ತಿವೆ. ಫ್ಲಾರಿಡಾದ ಬೀಚು ನಾಗರಿಕರಿಗೆ ಖುಷಿಕೊಡಬಹುದು, ಕಣ್ಣಿಗೆ ತಂಪೆರೆಯಬಹುದು, ವಾರಾಂತ್ಯದಲ್ಲಿ ಜನ ಅಲ್ಲಿ ಗಿಜಿಗುಟ್ಟುತ್ತಾರೆ.

ಆದರೆ ಈ ದ್ವೀಪಗಳ ಒಳಗಿನ ಸ್ಥಿತಿ ಕೇಟ್ಲಿನ್ ಮತ್ತು ಅಂಥ ಸಮಾನಮನಸ್ಕರಿಗೆ ಮಾತ್ರ ಗೊತ್ತು. ಈಕೆ `ಫ್ಲಾರಿಡಾ ವೈಲ್ಡ್ ಲೈಫ್ ಕನ್ಸರ್ವೇಷನ್ ಕಮಿಷನ್’ಮಿಯಾಮಿ ವಿಶ್ವವಿದ್ಯಾಲಯ’. ಮುಂತಾದವುಗಳ ಜೊತೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದಾಳೆ. ವಿಶೇಷವಾಗಿ ಹವಳ ದಿಬ್ಬಗಳ ಸಂರಕ್ಷಣೆಯ ವಿಚಾರದಲ್ಲಿ ಇವಳ ದಿಟ್ಟ ಹೆಜ್ಜೆಗೆ ಇವೆಲ್ಲ ಕುಮ್ಮಕ್ಕು ಕೊಟ್ಟಿವೆ. ಇವಳು ನಿಜಕ್ಕೂ ಮಹತ್ಕಾರ್ಯಕ್ಕೇ ಕೈಹಾಕಿದ್ದಾಳೆ. ಇಡೀ ರಾಷ್ಟ್ರೀಯ ಉದ್ಯಾನವನದ ಒಂದೆಡೆ ಸಮುದ್ರ ತಳದಲ್ಲಿ ಆರೋಗ್ಯವಂತ ಹವಳಗಳ ಕುಡಿಗಳನ್ನು ಬೆಳೆಸಿದ್ದಾರೆ, ಅದು ನಿಜಕ್ಕೂ ನರ್ಸರಿಯೇ. ದಾಸವಾಳ ಗಿಡದ ಕೊಂಬೆ ನೆಟ್ಟರೆ ಅದು ಗಿಡವಾಗಿ ಹೇಗೋ ಬೆಳೆಯುತ್ತದೋ ಹಾಗೆ ಈ ನರ್ಸರಿಯಲ್ಲಿ 50,000 ಹವಳದ ಕುಡಿಗಳಿವೆ. ಬಹುತೇಕ ಎಲ್ಲ ಜಾತಿಗಳನ್ನೂ ಪ್ರತಿನಿಧಿಸುವಂತೆ. ನಮ್ಮ ರೈತರು ಭತ್ತದ ಪೈರನ್ನು ಮಡಿಗಳಲ್ಲಿ ಬೆಳೆದು ಅನಂತರ ಗದ್ದೆಗೆ ನಾಟಿ ಮಾಡುವಂತೆ ಇಲ್ಲೂ ಹವಳದ ತುದಿಗಳನ್ನು ಕತ್ತರಿಸಿ, ಟ್ರೇನಲ್ಲಿ ಹಾಕಿಕೊಂಡು ಬುಳುಬುಳು ಗುಳ್ಳೆಬಿಡುತ್ತ ಮೇಲೆ ಬರುತ್ತಾರೆ. ಪ್ರತಿಬಾರಿಯೂ ಕೇಟ್ಲಿನ್‍ಳದೇ ಉಸ್ತುವಾರಿ. ಹೀಗೆ ತಂದ ಹವಳಗಳ ಕುಡಿಗಳನ್ನು ರೋಗಗ್ರಸ್ತ ಹವಳಗಳಿರುವ ಜಾಗದಲ್ಲಿ ನೆಡುತ್ತಾರೆ. ಅವು ಸಮುದ್ರದ ಆಂತರಿಕ ಹೊಯ್ದಾಟಕ್ಕೆ ಕಿತ್ತುಹೋಗಬಾರದೆಂದು ಮೊಳೆ ಹೊಡೆದು ನಿಲ್ಲಿಸುತ್ತಾರೆ ಅಥವಾ ಪೈಪುಗಳನ್ನು ನೆಟ್ಟು ಅವುಗಳಿಗೆ ಜೋತುಬಿಡುತ್ತಾರೆ. ಕೇಟ್ಲಿನ್ ಅಂಥವಕ್ಕೆ ಅಭಯಕೊಟ್ಟು ಹೇಗೆ ಬೆಳೆಯುತ್ತದೆ ಎಂದು ತಂಡದಲ್ಲಿ ಮತ್ತೆ ಬರುತ್ತಾಳೆ, ಉಸ್ತುವಾರಿ ನೋಡಿಕೊಳ್ಳುತ್ತಾಳೆ. ಕೆಲವೊಮ್ಮೆ ವರ್ಷದಲ್ಲಿ ವಾರಪೂರ್ತಿ ಇದೇ ಕೆಲಸ. ಇದು ಫಲ ಕೊಟ್ಟಿದೆ, ಹೊಸ ಹವಳ ದಿಬ್ಬಗಳು ನಿರ್ಮಾಣವಾಗುತ್ತಿವೆ. ಇಲ್ಲಿನ ಕೆಲಸವನ್ನು ಕಂಡು ಅಮೆರಿಕದ ವರ್ಜಿನ್ ಐಲೆಂಡ್, ಬ್ರಿಟಿಷ್ ವರ್ಜಿನ್ ಐಲೆಂಡ್, ಗ್ರೆನಡಾ, ಬಹಮಾಸ್, ಡಾಮಿನಿಕ್ ರಿಪಬ್ಲಿಕ್, ಕ್ಯೂಬಾ ಕೂಡ ಈಕೆಯನ್ನು ಆಹ್ವಾನಿಸುತ್ತಿವೆ. ಹವಳದ ನರ್ಸರಿಗಳನ್ನು ಸ್ಥಾಪಿಸುವಂತೆ ಎಲ್ಲ ಅನುಕೂಲಗಳನ್ನೂ ಕಲ್ಪಿಸುತ್ತಿವೆ.

ಕೇಟ್ಲಿನ್ ಲಸ್ಟಿಕ್ ಸದಾ ಬ್ಯುಸಿ. ಅಂಥ ಸಮಯದಲ್ಲಿ ಅವಳ ಸಹೋದ್ಯೋಗಿಗಳು ಈ ಸಮಸ್ಯೆಯತ್ತ ಗಮನ ಹರಿಸುತ್ತಾರೆ. ಕಳೆದ ಮೂರು ದಶಕಗಳಲ್ಲಿ ಜಗತ್ತಿನ ಅರ್ಧದಷ್ಟು ಹವಳ ದಿಬ್ಬಗಳು ನಾಶವಾಗಿವೆ, ಹವಾ ಬದಲಾವಣೆ ಸಮುದ್ರದ ಮೇಲೆ ತರುತ್ತಿರುವ ವಿಪತ್ತುಕಾರಿ ಬದಲಾವಣೆಗಳನ್ನು ತಡೆಯದಿದ್ದರೆ ಹವಳ ದಿಬ್ಬಗಳ ಸರ್ವನಾಶ ಖಚಿತ ಎನ್ನುವುದು ಇಡೀ ತಂಡದ ಖಚಿತ ನಿಲುವು. ಈ ಕಾರಣಕ್ಕಾಗಿಯೇ 2010ರಲ್ಲಿ ಸಾಗರ ತಳದಲ್ಲಿ ನರ್ಸರಿ ಪ್ರಾರಂಭಿಸಿದ್ದು. ಕಳೆದ ಹತ್ತು ವರ್ಷಗಳಲ್ಲಿ 10,000 ಹವಳದ ಕುಡಿಗಳನ್ನು ನೆಟ್ಟಿರುವುದು ಒಂದು ದಾಖಲೆ. ಇದು ಏನೇನೂ ಸಾಲದು ಎಂಬುದು ಅವರ ಅಸಮಾಧಾನ. ಕೊನೆಯ ಪಕ್ಷ ಜನಸಾಮಾನ್ಯರಿಗೂ, ಬದಲಾಗುತ್ತಿರುವ ಹವಾಮಾನ ತಟ್ಟಿದೆ ಎಂಬುದು ಅರಿವಿಗೆ ಬರುತ್ತಿದೆ ಎಂಬುದು ಒಂದು ಸಣ್ಣ ಸಮಾಧಾನ.

ಲಸ್ಟಿಕ್ ವ್ಯವಸ್ಥಾಪಕಿ ನಿಜ. ಆದರೆ ನಮ್ಮಲ್ಲಿ ಕಾಣುವಂತೆ ಸೂಟು, ಬೂಟು ತೊಟ್ಟ ವ್ಯವಸ್ಥಾಪಕಿಯಲ್ಲ. ಅವಳು ಇಲ್ಲಿಗೆ ಇಳಿಯುವುದೇ ಡೈವಿಂಗ್ ಸೂಟಲ್ಲಿ. ಕಿರಿಯರಿಗೆ ತರಬೇತಿ ಕೊಡುವಾಗ ಹವಳದ ನರ್ಸರಿಯಲ್ಲಿ ಏನೇನು ಮಾಡಬೇಕು ಎಂಬುದರ ಪಟ್ಟಿಯನ್ನೇ ಕೊಡುತ್ತಾಳೆ. ಕುಡಿಗಳು ಆರು ಸೆಂಟಿ ಮೀಟರ್ ಉದ್ದವಾಗುವ ಮೊದಲು ಅವುಗಳನ್ನು ಚಿವುಟ ಮಾಡಬೇಡಿ ಎನ್ನುತ್ತಾಳೆ. ನರ್ಸರಿಯಲ್ಲಿ ಹನ್ನೆರಡು ತಿಂಗಳು ಬೆಳೆಸಿದ ಮೇಲಷ್ಟೇ ಇವುಗಳ ಸ್ಥಳಾಂತರ. ತರಬೆÉೀತಿ ಪಡೆಯಲು ಬಂದವರಿಗೆ ಬ್ರಷ್ ಕೊಡುತ್ತಾಳೆ. ಹವಳಗಳ ಸುತ್ತ ನಿಧಾನವಾಗಿ ಉಜ್ಜಿ ಎನ್ನುತ್ತಾಳೆ. ಏಕೆಂದರೆ ಅಲ್ಲಿ ಪಾಚಿ ಬೆಳೆಯುತ್ತದೆÉ. ಹವಳಗಳ ಬೆಳವಣಿಗೆಗೆ ಅಡ್ಡಬರುತ್ತವೆ. ಸಾವಿರಾರು ಮಂದಿ ತರಬೇತಿ ಪಡೆದವರೂ ಈಗ ಸಾಗರವನ್ನಷ್ಟೇ ಪ್ರೀತಿಸುವುದಿಲ್ಲ, ಹವಳಗಳನ್ನೂ ಕೂಡ. ಈಕೆಯೇ ಸ್ಫೂರ್ತಿ. ಅವಳ ಬಾಳಿಗೆ ಗುರಿ ಇದೆ, ಕೊನೆಯ ಪಕ್ಷ ಇಲ್ಲಿನ ಹವಳಗಳಿಗೆ ಭವಿಷ್ಯವಿದೆ.

`ನೇಚರ್ ಕನ್ಸರ್ವೆನ್ಸಿ’ಯ ಯಾವುದೇ ಉನ್ನತ ಹುದ್ದೆಯ ಮಹಿಳೆಯನ್ನು ಕೇಳಿದರೂ ಅದೇ ಉತ್ತರ. ಇಷ್ಟು ದಿನ ಲಿಂಗ ತಾರತಮ್ಯ ನೋಡಿದ್ದೇವೆ. ಕರಿಯರು, ಬಿಳಿಯರು ಎಂಬ ವರ್ಣಭೇದ ನೀತಿಯನ್ನು ನೋಡಿದ್ದೇವೆ. ಈಗ ಜಗತ್ತಿಗೆ ಒಂದು ಅಂಶ ಖಚಿತವಾಗಿದೆ. ಮಹಿಳೆ ಇಲ್ಲದೆ ಯಾವ ಜೀವಿ ಸಂರಕ್ಷಣೆಯೂ ಫಲಕೊಡದು. ಈ ಮಾತಲ್ಲ್ಲಿ ಉತ್ಪ್ರೇಕ್ಷೆ ಎಂಬುದಿಲ್ಲ, ಆತ್ಮವಿಶ್ವಾಸವಷ್ಟೇ ತುಂಬಿರುವುದು.

ನಾವು ಸಾಮಾನ್ಯವಾಗಿ ರೋಲ್ ಮಾಡೆಲ್‍ಗಳಿಗಾಗಿ ಹುಡುಕಾಡುತ್ತಿರುತ್ತೇವೆ. ನಮ್ಮ ಮಧ್ಯೆ ಇರುವವರನ್ನು ಮರೆತೇ ಬಿಟ್ಟಿರುತ್ತೇವೆ. ಕೇಟ್ಲಿನ್ ಲಸ್ಟಿಕ್‍ಗೆ ಈ ಪ್ರಶ್ನೆ ಕೇಳಿದರೆ ಆಕೆ ನಕ್ಕು ತನ್ನ ಡೈವಿಂಗ್ ಸೂಟ್ ಕಡೆ ಕಾಲು ಹಾಕುತ್ತಾಳೆ.

ಟಿ. ಆರ್. ಅನಂತರಾಮು

(ಡಾ. ಟಿ. ಆರ್. ಅನಂತರಾಮು, ನಂ. 534, 70ನೇ ಅಡ್ಡರಸ್ತೆ, 14ನೇ ಮುಖ್ಯರಸ್ತೆ, ಕುಮಾರಸ್ವಾಮಿ ಬಡಾವಣೆ 1ನೇ ಹಂತ, ಬೆಂಗಳೂರು- 5600 11. ಮೊ:98863 56085)

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *