ಸ್ತ್ರೀ ಎಂದರೆ ಅಷ್ಟೇ ಸಾಕೆ?/ ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಒಬ್ಬಳು ಅಕ್ಕ – ಸೌಮ್ಯ ಸ್ವಾಮಿನಾಥನ್ – ಟಿ.ಆರ್. ಅನಂತರಾಮು

ವಿಶ್ವಸಂಸ್ಥೆಯಂಥ ಮಹಾನ್ ಸಂಸ್ಥೆಯಲ್ಲಿ ಉನ್ನತ ಹುದ್ದೆಗೆ ಏರಬೇಕೆಂದರೆ ಅವರು ಸರ್ವಸಮರ್ಥರಿರಬೇಕು. ತಮ್ಮ ದೇಶವೊಂದರ ಬಗ್ಗೆಯೇ ಚಿಂತಿಸಿ ಕೂಡುವಂತಿಲ್ಲ. ಜಗತ್ತಿನ ಬಗ್ಗೆ, ಕಡುಬಡವರ ಬಗ್ಗೆ, ಆರೋಗ್ಯ ಸುಧಾರಣೆಯ ಬಗ್ಗೆ ನಿಜವಾದ ಕಾಳಜಿ ಉಳ್ಳವರಾಗಿರಬೇಕು. ಸೌಮ್ಯ ಸ್ವಾಮಿನಾಥನ್ ವಿಶ್ವ ಆರೋಗ್ಯ ಸಂಸ್ಥೆ ಎಂಬ ಕುಟುಂಬದಲ್ಲಿ ಸದ್ಯ ದೊಡ್ಡಕ್ಕ.

“ನನಗೆ ಪ್ರಾಣಿಗಳೆಂದರೆ ಮೊದಲಿನಿಂದಲೂ ಇಷ್ಟ. ಅವಕ್ಕೆ ನಮ್ಮಂತೆ ಮಾತು ಬರದು. ಆದರೆ ಅವು ಪ್ರೀತಿ ತೋರ್ಪಡಿಸುವಾಗ ಮನಸ್ಸು ಮುದಗೊಳ್ಳುತ್ತದೆ. ಬಹುಶಃ ನಾನು ಪ್ರಾಣಿ ವಿಜ್ಞಾನ ಓದಬೇಕು ಎಂದು ನಿಶ್ಚಯಿಸಿದ್ದ ಹಿನ್ನೆಲೆಯಲ್ಲಿ ಈ ಕಾರಣವೂ ಇದ್ದೀತು. ನಮ್ಮ ಮನೆಯಲ್ಲಿ ಓದಿನ ಆಯ್ಕೆ ಕುರಿತು ನಮಗೆ ಸ್ವಾತಂತ್ರ್ಯವಿತ್ತು. ದೆಹಲಿ ವಿಶ್ವವಿದ್ಯಾಲಯದಲ್ಲಿ ಪ್ರಾಣಿ ವಿಜ್ಞಾನ ಓದಲು ಬಿ.ಎಸ್ಸಿ. ತರಗತಿಗೆ ಸೀಟು ಸಿಕ್ಕಿತು, ಖುಷಿಪಟ್ಟೆ. ನನ್ನ ಜೊತೆಗಿದ್ದವರು ಭಾರಿ ಚುರುಕು: `ಏ ಸೌಮ್ಯ, ನೀನು ಕೂಡ ಮೆಡಿಕಲ್ ಎಂಟ್ರನ್ಸ್ ಪರೀಕ್ಷೆ ಬರಿ, ನಿನ್ನ ಪ್ರಾಣಿ ಪ್ರೀತಿಗೆ ಅದೇನೂ ಅಡ್ಡಬರುವುದಿಲ್ಲ’ ಎಂದು ಪುಸಲಾಯಿಸಿದರು. ಪರೀಕ್ಷೆಗೆ ಕೂತೆ, ತೇರ್ಗಡೆಯೂ ಆದೆ. ಅವರಲ್ಲಿ ಕೆಲವರು ಪಾಸಾದರು. ಸಶಸ್ತ್ರ ಸೇನಾಪಡೆ ಮೆಡಿಕಲ್ ಕಾಲೇಜಿಗೆ ಜಿಗಿದುಬಿಟ್ಟೆ.”

-ಇದು ಸೌಮ್ಯ ಸ್ವಾಮಿನಾಥನ್ ಅವರ ಬದುಕಿನಲ್ಲಿ ಬಂದ ತಿರುವು-ಅವರದೇ ಮಾತಿನಲ್ಲಿ. ಅದೇನೂ ಸಾಮಾನ್ಯ ತಿರುವಲ್ಲ. ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಮುಖ್ಯ ವಿಜ್ಞಾನಿಯಾಗಿ ಆಯ್ಕೆಯಾಗುವುದೆಂದರೇನು? ಕಡಿಮೆ ಸಾಧನೆಯೆ? ಅಪ್ಪ ಜಗದ್ವಿಖ್ಯಾತ ಕೃಷಿ ವಿಜ್ಞಾನಿ, ಭಾರತದ ಹಸುರುಕ್ರಾಂತಿಯ ಹರಿಕಾರ ಡಾ. ಸ್ವಾಮಿನಾಥನ್. ಅಮ್ಮ ಮೀನಾ ಕೂಡ ಶಿಕ್ಷಣತಜ್ಞೆ, ಮಕ್ಕಳ ಪ್ರೇಮಿ. ಇಲ್ಲೇ ಸವಾಲಿರುವುದು. ಸಾಮಾನ್ಯವಾಗಿ ಮಕ್ಕಳು ಏನು ಸಾಧಿಸಿದರೂ ಅದನ್ನು ಅವರ ಪೋಷಕರ ಖ್ಯಾತಿಗೆ ಕಟ್ಟುವುದು. ಅದೆಲ್ಲ ಅವರ ಪ್ರಭಾವ’ ಎನ್ನುವುದು. ‘ಅವರ ಸಾಧನೆಯದೇನು ಹೆಚ್ಚುಗಾರಿಕೆ’ ಎಂದು ಉಡಾಫೆ ಹೇಳಿಕೆಗಳನ್ನು ಕೊಡುವುದು. ವಾಸ್ತವವಾಗಿ ಸೌಮ್ಯ ಸ್ವಾಮಿನಾಥನ್ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿಯಾಗಿ ಹುದ್ದೆ ಸ್ವೀಕರಿಸುವವರೆಗೆ ಜನಸಾಮಾನ್ಯರಿಗೆ ಆಕೆಯ ಬಗ್ಗೆ ಹೆಚ್ಚೇನೂ ತಿಳಿದಿರಲಿಲ್ಲ. ಏಕೆಂದರೆ ಆಕೆ ಆ ಸ್ಥಾನಕ್ಕೆ ದಿಢೀರ್ ಎಂದು ಏರಿದವಳಲ್ಲ. ವಿಶ್ವಸಂಸ್ಥೆಯಂಥ ಮಹಾನ್ ಸಂಸ್ಥೆಯಲ್ಲಿ ಉನ್ನತ ಹುದ್ದೆಗೆ ಏರಬೇಕೆಂದರೆ ಅವರು ಸರ್ವಸಮರ್ಥರಿರಬೇಕು. ತಮ್ಮ ದೇಶವೊಂದರ ಬಗ್ಗೆಯೇ ಚಿಂತಿಸಿ ಕೂಡುವಂತಿಲ್ಲ. ಜಗತ್ತಿನ ಬಗ್ಗೆ, ಕಡುಬಡವರ ಬಗ್ಗೆ, ಆರೋಗ್ಯ ಸುಧಾರಣೆಯ ಬಗ್ಗೆ ನಿಜವಾದ ಕಾಳಜಿ ಉಳ್ಳವರಾಗಿರಬೇಕು. ಈ ಅರ್ಥದಲ್ಲಿ ‘ವಸುಧೈವ ಕುಟುಂಬಕಂ’ ಎನ್ನುವ ಮಾತಿನ ನಿಜವಾದ ಅರ್ಥವನ್ನು ತಿಳಿದವರಾಗಿರಬೇಕು. ತಾರತಮ್ಯಗಳಿಂದ ದೂರವಿರಬೇಕು. ಒಂದರ್ಥದಲ್ಲಿ ಕುವೆಂಪು ಅವರು ಹೇಳಿದ `ವಿಶ್ವಮಾನವ’ ಎಂಬ ಮಾತಿಗೆ ಅನ್ವರ್ಥವಾಗಿರಬೇಕು.

ಬಾಲ್ಯದಲ್ಲೇ ಅರಳಿದ ಪ್ರತಿಭೆ

ಬಾಲ್ಯದಲ್ಲಿ ಮನೆಯ ವಾತಾವರಣ ಸೌಮ್ಯಳನ್ನು ಪ್ರಭಾವಿಸಿದ್ದು ನಿಜ. ಮಕ್ಕಳೇನೂ ಸುಮ್ಮನೆ ಕೂರುವವರಲ್ಲ. ಮನೆಗೆ ಯಾರು ಬರುತ್ತಿದ್ದರು, ಅವರ ಏನು ಮಾತನಾಡುತ್ತಿದ್ದರು ಎಂಬುದನ್ನು ಗಮನಿಸುತ್ತಿರುತ್ತಾರೆ. ತಮ್ಮದೇ ಆದ ರೀತಿಯಲ್ಲಿ ಅದನ್ನು ಗ್ರಹಿಸಿರುತ್ತಾರೆ. ಕೃಷಿ ವಿಜ್ಞಾನಿ ತಂದೆಯನ್ನು ನೋಡಲು ಬಹು ದೊಡ್ಡ ವಿಜ್ಞಾನಿಗಳು, ರೈತರು, ಪ್ರಯೋಗಶೀಲರು ಮನೆಗೆ ಬರುತ್ತಿದ್ದರು. ಅವರಾಡುತ್ತಿದ್ದ ಕೃಷಿ ಸಂಶೋಧನೆ ಕುರಿತ ಮಾತುಗಳು ಕಿವಿಗೆ ಬೀಳುತ್ತಿದ್ದವು. ಹಾಗೆಯೇ ಅಪ್ಪನ ಪ್ರತಿಕ್ರಿಯೆಗಳನ್ನೂ ಗಮನಿಸುತ್ತಿದ್ದಳು. ಎಷ್ಟೋ ವೇಳೆ ಅಪ್ಪನೊಡನೆ ಗದ್ದೆಗೆ ಹೋಗಿ ಹಸುರು ಫಸಲನ್ನೂ ಮಕ್ಕಳು ನೋಡುತ್ತಿದ್ದರು. ಬರೀ ಸಂಶೋಧನೆಯ ಮಾತುಗಳೇ ಮನೆಯ ತುಂಬ. ಮನಸ್ಸು ಹರಳುಗಟ್ಟುತ್ತಿದ್ದುದು ಹಾಗೆ. ಇನ್ನು ಅಮ್ಮ ಮೀನಾ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಹಾದಿ ತುಳಿಯುತ್ತಿದ್ದರು. ಸರ್ವರಿಗೂ ಶಿಕ್ಷಣ ಸಿಕ್ಕಿದರೆ ಸಮಾಜದ ಉನ್ನತಿ ಸಾಧ್ಯ ಎಂದು ಬಲವಾಗಿ ನಂಬಿದ್ದ ಮಹಿಳೆ. ಮನೆ ಕಟ್ಟುತ್ತಿದ್ದ ಕೂಲಿ ಕಾರ್ಮಿಕರ ಬಳಿಗೆ ಹೋಗಿ, ಮಕ್ಕಳಿಗೊಂದಷ್ಟು ಪಾಠ ಅಭ್ಯಾಸ ಮಾಡಿಸಿ ಬರುತ್ತಿದ್ದ ಅಪರೂಪದ ಶಿಕ್ಷಕಿ. ಸೌಮ್ಯ ಅಮ್ಮನ ಸೆರಗು ಹಿಡಿದು ಹೋಗಿ ಇದನ್ನೆಲ್ಲ ನೋಡುತ್ತಿದ್ದಳು.

ಒಮ್ಮೆ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ಪ್ರತಿಭಾ ಸ್ಪರ್ಧೆಯಲ್ಲಿ ವಿಜೇತಳಾಗಿ ಬಂದಳು. ಅಪ್ಪನಿಗೆ ಬಿಡುವೆಂಬುದೇ ಅಪರೂಪ. ಅಂಥ ಸಮಯದಲ್ಲಿ ಮೂವರು ಹೆಣ್ಣು ಮಕ್ಕಳನ್ನು ಅವರವರ ಓದು, ಬರಹವನ್ನು ವಿಚಾರಿಸುತ್ತಿದ್ದರು. ಒಮ್ಮೆ “ಏನು ಸೌಮ್ಯ, ಪ್ರತಿಭಾ ಸ್ಪರ್ಧೆಯಲ್ಲಿ ನೀನು ಯಾವುದನ್ನು ಕುರಿತು ಬರೆದೆ?” ಎಂದು ಕೇಳಿದ್ದರು. ಸೌಮ್ಯ ಖುಷಿಯಾಗಿಯೇ “ಅದು ಕ್ರೋಮೋಸೋಮ್ ಕುರಿತು” ಎಂದಿದ್ದಳು. ಅಪ್ಪನಿಗೆ ಖುಷಿಯೋ ಖುಷಿ. “ಅದು ನನ್ನ ಸಂಶೋಧನೆಯ ವಸ್ತು” ಎಂದು ಹೇಳಿ ಮಗಳ ಬೆನ್ನು ತಟ್ಟಿದ್ದರು. ಮುಂದೆ ಸೌಮ್ಯ ವೈದ್ಯಕೀಯ ಅಧ್ಯಯನ ಆರಿಸಿಕೊಂಡಾಗ, “ಬಿಡು, ನಿಮ್ಮ ತಾತನ ಆಸೆ ಪೂರೈಸಿತು” ಎಂದಿದ್ದರು. ಪುಣೆಯ ಸಶಸ್ತ್ರ ಸೇನಾಪಡೆ ವೈದ್ಯಕೀಯ ಕಾಲೇಜಿನಲ್ಲಿ ಎಂ.ಬಿ.ಬಿಎಸ್. ಮುಗಿಸಿದಾಗ, ಸ್ವಾಮಿನಾಥನ್ ಅವರು ಇಂಡಿಯನ್ ಕೌನ್ಸಿಲ್ ಫಾರ್ ಅಗ್ರಿಕಲ್ಚರಲ್ ರಿಸರ್ಚ್’ನ ಮಹಾ ನಿರ್ದೇಶಕರಾಗಿದ್ದರು. ಸೇನಾಪಡೆಯ ಕಾಲೇಜಿನಿಂದ ಮುಂದೆ ನವದೆಹಲಿಯ ‘ಆಲ್‍ಇಂಡಿಯಾ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್’ನಲ್ಲಿ ಉನ್ನತ ಅಧ್ಯಯನಕ್ಕೆ ಸೇರಿದಳು. ಮಕ್ಕಳ ತಜ್ಞೆಯಾಗಬೇಕೆಂಬುದು ಆಕೆಯ ಗುರಿ. ಆ ಹೊತ್ತಿಗಾಗಲೇ ಮೂಲಭೂತ ಸಂಶೋಧನೆಯತ್ತ ಒಲವು ಮೂಡಿತ್ತು.

ಸಂಶೋಧನೆಗೆ ಒಲವು

ಅಪ್ಪ ಆಗಾಗ ಹೇಳುತ್ತಿದ್ದರು: “ನೋಡು ಸೌಮ್ಯ, ಕೃಷಿಗೂ ಆಹಾರ ಪದ್ಧತಿಗೂ ನಿಕಟ ಸಂಬಂಧವಿದೆ. ಆಹಾರ ಪದ್ಧತಿಗೂ ನಮ್ಮ ಆರೋಗ್ಯಕ್ಕೂ ನೇರ ಸಂಬಂಧವಿದೆ. ಒಂದು ಪ್ರಯೋಗ ಮಾಡೋಣ ಬಾ” ಎಂದು ಆಕೆಯನ್ನು ಮಹಾರಾಷ್ಟ್ರ, ಒರಿಸ್ಸಾ ಮುಂತಾದೆಡೆಗೆ ಕರೆದೊಯ್ದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್’ ಮತ್ತುಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್’ ಇವುಗಳ ನೆರವಿನಿಂದ ಜೈವಿಕ ತೋಟಗಳನ್ನು ನಿರ್ಮಿಸಿ, ಉತ್ತಮ ಗೊಬ್ಬರ ಹಾಕಿ ಆರೋಗ್ಯಕರ ಬೆಳೆ ಬೆಳೆಯುವುದು ಹೇಗೆ ಎಂದು ತೋರಿಸಿಕೊಟ್ಟರು. ಆಗ ಅಲ್ಲಿನ ಮಹಿಳೆಯರ ಕಣ್ಣಲ್ಲಿ ಸೌಮ್ಯ ಮಿಂಚನ್ನು ಕಂಡಿದ್ದಳು. ಮುಂದೆ ಅವಳಿಗೆ ರಿಸರ್ಚ್ ಗ್ರಾಂಟ್ ಸಿಕ್ಕಿತು. ನೇರವಾಗಿ ಹೋಗಿದ್ದು ಅಮೆರಿಕದ ಲಾಸ್ ಏಂಜಲೀಸ್‍ಗೆ ಸೇರಿದ ಕೆಕ್ ವೈದ್ಯಕೀಯ ಕಾಲೇಜಿಗೆ. ಅಲ್ಲಿ ರೋಗಗಳನ್ನು ಕುರಿತು ಮೂಲಭೂತ ಸಂಶೋಧನೆಗೆ ಒತ್ತುಕೊಡಬೇಕೆಂಬ ನಿರ್ಧಾರಕ್ಕೆ ಬಂದಳು. ಅನಂತರ ಯುನೈಟೆಡ್ ಕಿಂಗ್‍ಡಂ ಲೇಸಿಸ್ಟರ್ ಎಂಬ ವೈದ್ಯಕೀಯ ಕಾಲೇಜಿನಲ್ಲಿ ಶ್ವಾಸಕೋಶ ಕುರಿತ ಹೆಚ್ಚಿನ ಅಧ್ಯಯನ ಮಾಡಿದಳು. ಅಮೆರಿಕದಲ್ಲಿದ್ದಾಗಲೇ ಅಜಿತ್ ಯಾದವ್ ಎಂಬ ವೈದ್ಯಕೀಯ ವಿದ್ಯಾರ್ಥಿಯ ಪರಿಚಯವಾಯಿತು. ಆತ ಮೂಳೆ ತಜ್ಞನಾಗಿ ಮುಂದೆ ಹೆಸರು ಮಾಡಿದ. ಇಬ್ಬರೂ ಪರಸ್ಪರ ಮೆಚ್ಚಿದರು. ಆದರೆ ಅಂತಿಮವಾಗಿ ನಮ್ಮ ಸೇವೆ ಭಾರತಕ್ಕೇ ಮೀಸಲಾಗಿರಬೇಕೆಂಬ ಒಮ್ಮತಕ್ಕೆ ಬಂದರು. ಸೌಮ್ಯ ಅವರ ನಿಜವಾದ ಸೇವೆಗೆ ನೆಲೆ ಒದಗಿಸಿದ್ದು ಮತ್ತು ಅರ್ಥವನ್ನು ಕೊಟ್ಟದ್ದು ಚೆನ್ನೈನಲ್ಲಿರುವ `ರಾಷ್ಟ್ರೀಯ ಕ್ಷಯ ಸಂಶೋಧನ ಸಂಸ್ಥೆ’. ಆಕೆ ಕ್ಷಯದ ಬಗ್ಗೆ ಗಂಭೀರ ಸಂಶೋಧನೆ ಮಾಡಿದಳು. ಅಂತಾರಾಷ್ಟ್ರೀಯ ಪತ್ರಿಕೆಗೆ ಬರೆದಳು. ಕ್ಷಯವನ್ನು ಆರಂಭದಲ್ಲೇ ಅಂದರೆ ಅಣು ಹಂತದಲ್ಲೇ ಗುರುತಿಸುವುದು ಹೇಗೆ ಎಂಬ ಆಕೆಯ ಸಂಶೋಧನೆ ಜಗತ್ತಿನ ಗಮನ ಸೆಳೆಯಿತು. ಅದೇ ಕಾಲಕ್ಕೆ ಭಾರತದಲ್ಲಿ ಏಡ್ಸ್ ಕಾಯಿಲೆ ವ್ಯಾಪಕವಾಗಿ ಹರಡುತ್ತಿತ್ತು. ಒಂದೆಡೆ ಆಕೆ ಹೇಳಿದ್ದಾರೆ: “ಆಫ್ರಿಕ ಖಂಡದ ಅನೇಕ ದೇಶಗಳಲ್ಲಿ ಏಡ್ಸ್‍ನಿಂದ ಸತ್ತವರ ಮಕ್ಕಳು ಅನಾಥರಾಗಿರುವುದನ್ನು ನಾನು ಕಂಡಿದ್ದೇನೆ. ಏಡ್ಸ್ ಪೀಡಿತರಿಗೆ ಕಾಯಿಲೆ ಶಮನಕ್ಕೆ 90ರ ದಶಕದಲ್ಲಿ ಹತ್ತು ಸಾವಿರ ಡಾಲರ್ ಬೇಕಾಗುತ್ತಿತ್ತು ಎಂದರೆ ಊಹಿಸಬಹುದು. ಸಾವಲ್ಲದೆ ಅಂಥವರಿಗೆ ಬೇರೆ ಮಾರ್ಗವಿರಲಿಲ್ಲ ಎಂದು.”

ಸೌಮ್ಯ ಅವರು, ಏಡ್ಸ್ ಪೀಡಿತರು ಏಕೆ ಸುಲಭವಾಗಿ ಕ್ಷಯರೋಗ ಪೀಡಿತರಾಗುತ್ತಾರೆ ಎಂಬುದನ್ನು ಸಂಶೋಧನೆ ಮಾಡಿದಾಗ, ಜಗತ್ತು ಇವರ ಸಂಶೋಧನೆಯನ್ನು ಮೆಚ್ಚಿತು. ಖ್ಯಾತಿಯ ಶಿಖರಕ್ಕೆ ಏರಿದರು. ಮುಂದೆ ಅಂದಿನ ಮದರಾಸಿನ ಅದೇ ಕ್ಷಯರೋಗ ಸಂಸ್ಥೆಗೆ ನಿರ್ದೇಶಕರಾದರು. ಆ ಹೊತ್ತಿಗೆ ವಿಶ್ವಸಂಸ್ಥೆ ಯು.ಎನ್.ಡಿ.ಪಿ., ವಿಶ್ವಬ್ಯಾಂಕ್ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಜಂಟಿಯಾಗಿ, ಉಷ್ಣವಲಯ ದೇಶಗಳ ಕಾಯಿಲೆ ಕುರಿತು ವ್ಯಾಪಕ ಅಧ್ಯಯನ ಕೈಗೊಂಡಾಗ ಅದರಲ್ಲಿ ಸೌಮ್ಯ ತರಪೇತಿ ಪಡೆದರು. ಮುಂದಿನ ಸಾಧನೆಗೆ ಇದು ಏಣಿಯಾಯಿತು. “ಅರೆರೆ, ನಮ್ಮ ಹುಡುಗಿ ಇಷ್ಟೊಂದು ಕೆಲಸ ಮಾಡಿದ್ದಾಳೆ” ಎಂದು ಹುಬ್ಬೇರಿಸಿ ಕೇಂದ್ರ ಸರ್ಕಾರ ಆರೋಗ್ಯ ಇಲಾಖೆಯ ಕಾರ್ಯದರ್ಶಿಯನ್ನಾಗಿ ನೇಮಿಸಿತು. ಇದರ ಹಿಂದೆಯೇ `ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್’, “ನೀವು ಮಹಾ ನಿರ್ದೇಶಕರಾಗಿ ಈ ಸಂಸ್ಥೆಯನ್ನು ನಡೆಸಬೇಕು” ಎಂದು ಆ ಹುದ್ದೆಯನ್ನು ನೀಡಿತು. “ಇಂಥ ಪ್ರತಿಭೆ ಭಾರತಕ್ಕೆ ಸೀಮಿತವಾದರೆ ಸಾಕೆ? ಜಿನಿವಾಕ್ಕೆ ಬನ್ನಿ, ವಿಶ್ವ ಆರೋಗ್ಯ ಸಂಸ್ಥೆಯ ಉಪ ಮಹಾನಿರ್ದೆಶಕರಾಗಿ ಜಗತ್ತಿಗೆ ಉಪಕಾರಮಾಡಿ” ಎಂದು ಅಲ್ಲಿಂದ ಹುದ್ದೆ 2017ರಲ್ಲಿ ಅರಸಿಬಂತು. “ನಿಮಗೆ ನೀಡಿರುವ ಅಧಿಕಾರದ ವ್ಯಾಪ್ತಿ ಏನೇನೂ ಸಾಲದು, ನೀವು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿಯಾಗಿ” ಎಂದು ಮುಂದಿನ ವರ್ಷ ಆಹ್ವಾನ ಬಂದಾಗ, ಸೌಮ್ಯ ಇದೊಂದು ಅವಕಾಶ ಎಂದು ಒಪ್ಪಿಕೊಂಡರು.

ವಿಶ್ವ ಆರೋಗ್ಯ ಸಂಸ್ಥೆಯಲ್ಲಿ

ಅಕೆ ಮುಖ್ಯ ವಿಜ್ಞಾನಿಯಾಗಿ ಹುದ್ದೆ ವಹಿಸಿಕೊಂಡು ವರ್ಷ ತುಂಬುವುದರಲ್ಲಿ ಕೋವಿಡ್ ಇಡೀ ಜಗತ್ತಿಗೆ ವಕ್ಕರಿಸಿಯೇಬಿಟ್ಟಿತು. ಜಾಗತಿಕ ಪಿಡುಗಾದಾಗ ಈಕೆಯ ಹೊಣೆಯೂ ಹೆಚ್ಚಿತು. ಈಗ ಆಕೆ ಆಡುವ ಪ್ರತಿಯೊಂದು ಮಾತಿಗೂ ಕಿಮ್ಮತ್ತಿದೆ. ಮಾಧ್ಯಮಗಳು ಅದಕ್ಕಾಗಿ ಕಾಯುತ್ತಿರುತ್ತವೆ. ಏಕೆಂದರೆ ಕೋವಿಡ್‍ನಂತಹ ಜಾಗತಿಕ ಪಿಡುಗಿನ ಬಗ್ಗೆ ವಿಶ್ವಸಂಸ್ಥೆ ತಳೆಯುವ ನಿಲವು ಎಂದರೆ ಅದು ಸೌಮ್ಯ ಅವರ ನೇತೃತ್ವದಲ್ಲಿ ತಜ್ಞರ ತಂಡ ತೆಗೆದುಕೊಳ್ಳುವ ನಿಲವು. ಸೌಮ್ಯ ಮತ್ತೆ ಮತ್ತೆ ಸಂದರ್ಶನಗಳಲ್ಲಿ ಖಚಿತವಾಗಿ ಹೇಳುವ ಮಾತುಗಳು ಇವು: “ಹಿಂದಿಗಿಂತ ಇಂದು ಮಾಹಿತಿ ತಲಪಿಸುವುದು ಸುಲಭ. ಪ್ರತಿಯೊಬ್ಬರ ಕೈಯಲ್ಲೂ ಮೊಬೈಲ್ ಇದೆ. ಕ್ಷಣಾರ್ಧದಲ್ಲಿ ನೀವಿರುವ ಜಾಗ ಸುರಕ್ಷಿತವೋ ಅಲ್ಲವೋ ಎಂದು ಅಲರ್ಟ್ ಕೊಡಬಹುದು. ಹೆಲ್ತ್ ಕೇರ್‍ಗೆ ಸಿಕ್ಕಿರುವ ಹೊಸ ಅಸ್ತ್ರ ಇದು. ಸುಳ್ಳುಸುದ್ದಿಗೆ ಭಾರಿ ಪ್ರಚಾರ ಸಿಕ್ಕುತ್ತಿದೆ, ಅದಕ್ಕೆ ಕಡಿವಾಣ ಹಾಕಲೇಬೇಕು. ಕೋವಿಡ್‍ನ 3ನೆಯ ಅಲೆಯ ಬಗ್ಗೆ ಸಿಕ್ಕಿರುವ ಅಪಪ್ರಚಾರಕ್ಕಿಂತ, 2ನೆಯ ಅಲೆಯಲ್ಲಿ ಲಸಿಕೆ ಕಾರ್ಯಕ್ರಮ ಎಷ್ಟರಮಟ್ಟಿಗೆ ಜಗತ್ತಿನಾದ್ಯಂತ ಯಶಸ್ವಿಯಾಗುತ್ತದೆ ಎಂಬುದಕ್ಕೆ ಪ್ರಚಾರ ಬೇಕು. ನಿಜ, ಭಾರತದಲ್ಲಿ ಈಗ ಕಾಡುತ್ತಿರುವ ರೂಪಾಂತರಿತ ಕರೋನಾ ವೈರಸ್ ಬಹುಬೇಗ ಹರಡುತ್ತಿದೆ. ಹಾಗೆಯೇ ಲಸಿಕೆ ಹಾಕುವ ಕಾರ್ಯವೂ ತ್ವರಿತವಾಗಿಯೇ ಇದೆ. ಆದರೆ ಸಮುದಾಯ ನಿರೋಧಕತೆ (Herd Immunity) ಸಾಧಿಸಬೇಕಾದರೆ ಲಸಿಕೆ ಹಾಕುವ ಪ್ರಮಾಣ ಶೇ.70-80 ಆದರೂ ದಾಟಬೇಕು. ಲಸಿಕೆ ಹಾಕಿಸಿಕೊಂಡ ಮಾತ್ರಕ್ಕೆ ಸೇಫ್ ಎನ್ನುವಂತಿಲ್ಲ. ಏಕೆಂದರೆ ಈ ಕುರಿತು ವ್ಯಾಪಕ ಸಂಶೋಧನೆಗಳು ಇನ್ನೂ ಆಗಬೇಕು. ಇಂಗ್ಲೆಂಡಿನಲ್ಲಿ ಲಸಿಕೆ ಹಾಕುವಲ್ಲಿ ತೋರಿದ ಶ್ರದ್ಧೆಯನ್ನೇ ಲಾಕ್ ಡೌನ್ ಮಾಡುವಲ್ಲೂ ತೋರಿದರು. ಹೀಗಾಗಿಯೇ ಕೋವಿಡ್ ಅಲ್ಲಿ ಬೇಗ ನಿಯಂತ್ರಣಕ್ಕೆ ಬಂತು” ಎನ್ನುವುದು ಅವರ ಕಂಡುಕೊಂಡ ಸತ್ಯ.

ಇನ್ನೂ ಕೆಲವು ಸಂದರ್ಶನದಲ್ಲಿ ಅವರು ಇನ್ನೊಂದು ಮಾತನ್ನು ಹೇಳಿದ್ದಾರೆ. ಅದು ಮಕ್ಕಳಿಗೆ ಬಾಯಿಯ ಮೂಲಕ ಕೊಡುವ ಲಸಿಕೆ. ಇದು ಮುಂದೆ ದೊಡ್ಡ ಪ್ರಮಾಣದಲ್ಲಿ ಚಾಲ್ತಿಗೆ ಬರಬೇಕು. ಭಾರತ ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದೆ ಇಟ್ಟಿದೆ ಎನ್ನುತ್ತಾರೆ. ವಿಶ್ವಸಂಸ್ಥೆ ಕೊವ್ಯಾಕ್ಸ್ (Covax) ಎಂಬ, ಕೋವಿಡ್‍ಗೆ ಲಸಿಕೆಯನ್ನು ತಯಾರಿಸಲು ಮುಂದೆ ಬಂದಿತ್ತು. ಶ್ರೀಮಂತ ರಾಷ್ಟ್ರಗಳು ಬೆಂಬಲಿಸದಿದ್ದರೆ, ಅದನ್ನು ಉತ್ಪಾದನೆಯ ಹಂತಕ್ಕೆ ತಂದು ಜನರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡಬಹುದಾಗಿತ್ತು. ಈ ಯೋಜನೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಕೈಬಿಟ್ಟಿಲ್ಲ ಎನ್ನುತ್ತಾರೆ.

“ಜಿನಿವಾಕ್ಕೆ ಹೋಗುವ ಮುನ್ನ ನಾನೊಂದು ಧರ್ಮ ಸಂಕಟವನ್ನು ಎದುರಿಸಲೇಬೇಕಿತ್ತು. ಈಗ ಅಪ್ಪನಿಗೆ 95, ಅಮ್ಮನಿಗೆ 88. ಇನ್ನು ಗಂಡ-ವೈದ್ಯ. ಚಿಕ್ಕ ಮಗು ಬೇರೆ. ಇವರನ್ನೆಲ್ಲ ಬಿಟ್ಟು ನಾನೊಬ್ಬಳೇ ಅಲ್ಲಿಗೆ ಹೋಗುವುದೆಂದರೆ ಹತ್ತು ಸಲ ಯೋಚಿಸಬೇಕಾಗಿತ್ತು. ಕೊನೆಗೂ ಗಟ್ಟಿ ನಿರ್ಧಾರಮಾಡಿದೆ. ಜಗತ್ತಿಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ನೆರವಾಗುವುದಾದರೆ, ನಾನೂ ಅದರಲ್ಲಿ ಭಾಗಿಯಾಗುವ ಸದವಕಾಶವನ್ನು ಬಿಡುವುದು ಬೇಡ ಎಂದು ತೀರ್ಮಾನಿಸಿ ಒಪ್ಪಿಕೊಂಡೆ” ಎನ್ನುತ್ತಾರೆ ಸೌಮ್ಯ. ಇಂದಿನ ಸಂದರ್ಭದಲ್ಲಿ ಅವರೇ ಹೇಳಿದ ಮತ್ತೊಂದು ಮಾತು ಎಷ್ಟೊಂದು ವಾಸ್ತವ ಎನ್ನಿಸುತ್ತದೆ- “ನಾವೇ ಹಡಗು ಕಟ್ಟಬೇಕು, ಅದರಲ್ಲಿ ನಾವೇ ಪ್ರಯಾಣ ಮಾಡಬೇಕು.” ಕೋವಿಡ್ ತಂದೊಡ್ಡಿದ ಸ್ಥಿತಿಯನ್ನು ಮಾರ್ಮಿಕವಾಗಿ ಈ ನುಡಿಗಳು ಸಂಕೇತಿಸುತ್ತವೆ. ಇವರ ಇಬ್ಬರು ಸಹೋದರಿಯರಲ್ಲಿ ಮಧುರ ಬೆಂಗಳೂರಿನ `ಇಂಡಿಯನ್ ಸ್ಟಾಟಿಸ್ಟಿಕಲ್ ಇನ್‍ಸ್ಟಿಟ್ಯೂಟ್’ನಲ್ಲಿ ಅರ್ಥಶಾಸ್ತ್ರದಲ್ಲಿ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇನ್ನೊಬ್ಬ ಸೋದರಿ ನಿತ್ಯಾ ಇಂಗ್ಲೆಂಡಿನ ಈಸ್ಟ್ ಆಂಗ್ಲಿಯ ವಿಶ್ವವಿದ್ಯಾಲಯದಲ್ಲಿ ಲಿಂಗಾಧ್ಯಯನ ಕುರಿತು ವಿಶ್ಲೇಷಣೆಯಲ್ಲಿ ಗಂಭೀರವಾಗಿ ತೊಡಗಿದ್ದಾರೆ.

ಮಹಿಳೆ ಉನ್ನತ ಹುದ್ದೆಗೆ ಏರಿದಷ್ಟೂ ಸಂದರ್ಶಕರು ಅದೇ ಕ್ಲೀಷೆಯ ಮಾತುಗಳನ್ನು ಕೇಳುತ್ತಾರೆ: “ನಿಮಗೆ ಮಹಿಳೆಯಾಗಿ ಎಂದಾದರೂ ಕಿರುಕುಳವಾಗಿದೆಯೆ?”

ಇತ್ತೀಚೆಗೂ ಅಂಥ ಪ್ರಶ್ನೆಗೆ ಸೌಮ್ಯ ಲಗುಬಗೆಯಿಂದಲೇ ಉತ್ತರಿಸಿದ್ದರು: “ಇಂಥ ಪ್ರಶ್ನೆಯನ್ನು ಇದುವರೆಗೂ ನನ್ನನ್ನು ಯಾರೂ ಕೇಳಿದ ನೆನಪಿಲ್ಲ. ಅಂಥ ಪ್ರಸಂಗವೂ ನೆನಪಿಗೆ ಬರುತ್ತಿಲ್ಲ.”

ಎಷ್ಟೋಸಲ ಮನೆಗಳಲ್ಲಿ ದೊಡ್ಡಕ್ಕನ ಮಾತೇ ಚಿಕ್ಕ ಮಕ್ಕಳಿಗೆ ಪ್ರಿತಿ. ಆಕೆ ಗದರಿಸುತ್ತಾಳೆ-ಕಿವಿ ಹಿಂಡುತ್ತಾಳೆ-ಪ್ರೀತಿಸುತ್ತಾಳೆ. ಸೌಮ್ಯ ಸ್ವಾಮಿನಾಥನ್ ವಿಶ್ವ ಆರೋಗ್ಯ ಸಂಸ್ಥೆ ಎಂಬ ಕುಟುಂಬದಲ್ಲಿ ಸದ್ಯ ದೊಡ್ಡಕ್ಕ.

ಟಿ.ಆರ್. ಅನಂತರಾಮು

(ಡಾ. ಟಿ.ಆರ್. ಅನಂತರಾಮು, ನಂ. 534, 70ನೇ ಅಡ್ಡರಸ್ತೆ, 14ನೇ ಮುಖ್ಯರಸ್ತೆ, ಕುಮಾರಸ್ವಾಮಿ ಬಡಾವಣೆ 1ನೇ ಹಂತ, ಬೆಂಗಳೂರು-560111, ಮೊ:9886356085)

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *