ಸ್ತ್ರೀ ಎಂದರೆ ಅಷ್ಟೇ ಸಾಕೆ?/ ಭೂಮಿಗೆ ಬಿದ್ದ ಜೀವಿವಿಜ್ಞಾನಿ ಜ್ಯೂಲಿಯಾನಿ ಕಕೆ- ಟಿ.ಆರ್. ಅನಂತರಾಮು

ಹುಡುಗಿ ಜ್ಯೂಲಿಯಾನಿ ಆಗಾಗ ತನ್ನ ಬಾಲ್ಯವನ್ನೆಲ್ಲ ಅಮೆಜಾನ್ ಕಾಡಿನಲ್ಲಿದ್ದ ಆ ಸಂಶೋಧನ ಕೇಂದ್ರದಲ್ಲೇ ಕಳೆದಿದ್ದಳು. ಅಲ್ಲಿನ ಪಕ್ಷಿಗಳನ್ನು ಧ್ವನಿ ಮಾತ್ರದಿಂದಲೇ ಗುರುತಿಸುತ್ತಿದ್ದಳು. ಈಗ ಆ ಕೇಂದ್ರಕ್ಕೆ ಹೊರಟಾಗ ಅವಳಿಗೆ ಹದಿನೇಳರ ಹರಯ. ಪ್ರಯಾಣ ಮಾಡುತ್ತಿದ್ದ ವಿಮಾನ ಮೂರು ಕಿಲೋ ಮೀಟರ್ ಎತ್ತರದಲ್ಲೇ ಛಿದ್ರಛಿದ್ರವಾಗಿತ್ತು. ಪ್ರಯಾಣಿಕರನ್ನು ಎಲ್ಲಿ ಎಲ್ಲಿಯೋ ಬೀಳಿಸಿತ್ತು. ಒಟ್ಟು 92 ಮಂದಿ ಪ್ರಯಾಣಿಕರಲ್ಲಿ ಉಳಿದವಳು ಜ್ಯೂಲಿಯಾನಿ ಒಬ್ಬಳೇ! ಮುಂದೆ ಶ್ರೇಷ್ಠ ದರ್ಜೆಯ ಸಂಶೋಧಕಳಾಗಿ ಹೆಸರುಮಾಡಿದಳು.


“ಇಬ್ಬರೂ ಇನ್ನೂ ಒಂದು ಸಲ ಯೋಚಿಸಿ. ಆ ವಿಮಾನದಲ್ಲಿ ಪ್ರಯಾಣ ಮಾಡಬೇಡಿ. ಲಾನ್ಸ್ ಫ್ಲೈಟ್ 518ಕ್ಕೆ ಒಳ್ಳೆಯ ಹೆಸರಿಲ್ಲ. ಕಳೆದ ವರ್ಷ ಅಪಘಾತಕ್ಕೀಡಾಗಿ ನೂರಾರು ಅಮೆರಿಕದ ವಿದ್ಯಾರ್ಥಿಗಳು ಸತ್ತರು. ಬೇರೆ ಇನ್ನಾವುದರಲ್ಲಾದರೂ ಬುಕ್ ಮಾಡಿ. ನನ್ನ ಅಭ್ಯಂತರವಿಲ್ಲ” – ಹ್ಯಾನ್ಸ್ ಕಕೆ, ಮಡದಿ ಮೇರಿಯಾಗೆ ಮತ್ತು ಮಗಳು ಜ್ಯೂಲಿಯಾನಿಗೆ ಎಚ್ಚರಿಕೆ ಕೊಟ್ಟಿದ್ದ.

ಹ್ಯಾನ್ಸ್ ಮತ್ತು ಮೇರಿಯಾ ಇಬ್ಬರೂ ಜೀವಿವಿಜ್ಞಾನಿಗಳು. ಪೆರುವಿನ ಲಿಮಾದಲ್ಲಿರುವ ನೈಸರ್ಗಿಕ ವಸ್ತು ಸಂಗ್ರಹಾಲಯದಲ್ಲಿ ಇಬ್ಬರೂ ಸಂಶೋಧಕರು. ಕಾಡು ಅವರ ಆಡುಂಬೊಲ. ಪೆರುವಿನ ಲಿಮಾದಲ್ಲಿ ಇದ್ದುಕೊಂಡು ಅಮೆಜಾನ್ ಕಾಡಿನಲ್ಲಿ 1968ರಲ್ಲಿ ಇವರೇ ಸ್ಥಾಪಿಸಿದ ಜೀವಿವಿಜ್ಞಾನ ಸಂಶೋಧನ ಕೇಂದ್ರಕ್ಕೆ ಹೋಗಿಬರುತ್ತಿದ್ದರು; ತಿಂಗಳುಗಟ್ಟಳೆ ಅಲ್ಲೇ ಉಳಿಯುತ್ತಿದ್ದರು. ಅಪರೂಪದ ಜೀವಿ ಪ್ರಭೇದಗಳನ್ನು ಉಳಿಸುವುದು ಅವರಿಗೆ ಕಷ್ಟವೇನಾಗಿರಲಿಲ್ಲ. ಆದರೆ ಕಾಡುಗಳ್ಳರು ತಲೆನೋವಾಗಿದ್ದರು. ಅಲ್ಲಿನ ಬಾವಲಿ, ಹಕ್ಕಿಗಳು, ವೈವಿಧ್ಯಮಯ ಸ್ತನಿಗಳು, ಮೊಸಳೆಗಳು ತಮ್ಮ ಮೂಲಾವಾಸದಲ್ಲಿ ಸಂತಾನ ಅಭಿವೃದ್ಧಿಮಾಡಿಕೊಂಡಿದ್ದವು. ಹೊರ ಜಗತ್ತಿಗೆ ಇವುಗಳ ಅನೇಕ ಪ್ರಭೇದಗಳು ಪರಿಚಯವೇ ಆಗಿರಲಿಲ್ಲ. ಪೆರು ಸರ್ಕಾರಕ್ಕೆ ಹಲವು ಬಾರಿ ತಮ್ಮ ಇಂಗಿತವನ್ನು ಹೇಳಿಕೊಂಡಿದ್ದರು- ಇದನ್ನು ರಾಷ್ಟ್ರೀಯ ಉದ್ಯಾನವನವನ್ನಾಗಿ ಮಾಡಬೇಕು ಎಂದು. ಬೇಕಾದರೆ ಖಾಸಗಿಯಾಗಿ ನಿರ್ವಹಿಸಿ, ಬೆಂಬಲ ಕೊಡೋಣ ಎಂದಿತ್ತು ಸರ್ಕಾರ.

ಜ್ಯೂಲಿಯಾನಿ, ಲಿಮಾದಲ್ಲಿ ಅಮ್ಮನನ್ನು ಗೋಗರೆದಳು, “1971 ಡಿಸೆಂಬರ್ 22, ನಮ್ಮ ಶಾಲೆಯಲಿ ನೃತ್ಯ ಕಾರ್ಯಕ್ರಮವಿದೆ. ಮುಂದಿನ ದಿನ ಹೈಸ್ಕೂಲ್ ಗ್ರಾಜ್ಯುಯೇಷನ್ ಕಾರ್ಯಕ್ರಮ. ಅದನ್ನು ಮುಗಿಸಿಕೊಂಡೇ ಹೋಗೋಣ” ಎಂದು. ಅಮ್ಮ “ಸರಿ ಬಿಡು, 24ಕ್ಕೇ ಹೋಗೋಣ. ಕ್ರಿಸ್‍ಮಸ್ ಸಮಾರಂಭವನ್ನು ಅಲ್ಲೇ ಆಚರಿಸಿದರಾಯಿತು” ಎಂದಾಗ ಜ್ಯೂಲಿಯಾನಿ ಹಿಗ್ಗಿದಳು.

ಅಪ್ಪ ಮತ್ತೊಮ್ಮೆ ನೆನಪಿಸಿದ. “ಈಗಲೂ ಯೋಚನೆ ಮಾಡಿ, ಆ ಫ್ಲೈಟ್ ಬೇಡ. ಬೇರೆ ಯಾವುದಾದರೂ ಆದೀತು" ಎಂದು. ಜ್ಯೂಲಿಯಾನಿ “ಅಪ್ಪಾ, ಬರಿ ಒಂದು ಗಂಟೆ ಪ್ರಯಾಣ. ಗೊತ್ತಾಗುವುದೇ ಇಲ್ಲ. ಬರಿ 60 ನಿಮಿಷ ಅಷ್ಟೇ” ಎನ್ನುತ್ತ ಗೇಲಿಮಾಡಿದಳು. ಅಮ್ಮನಿಗೂ ಸರಿ ಎನ್ನಿಸಿತು. ಈ ಹುಡುಗಿ ಆಗಾಗ ತನ್ನ ಬಾಲ್ಯವನ್ನೆಲ್ಲ ಅಮೆಜಾನ್ ಕಾಡಿನಲ್ಲಿದ್ದ ಆ ಸಂಶೋಧನ ಕೇಂದ್ರದಲ್ಲೇ ಕಳೆದಿದ್ದಳು. ಅಲ್ಲಿನ ಪಕ್ಷಿಗಳನ್ನು ಧ್ವನಿ ಮಾತ್ರದಿಂದಲೇ ಗುರುತಿಸುತ್ತಿದ್ದಳು. ಈಗ ಆ ಕೇಂದ್ರಕ್ಕೆ ಹೊರಟಾಗ ಅವಳಿಗೆ ಹದಿನೇಳರ ಹರಯ. ಕಾಡಿನಲ್ಲಿ ದಾರಿ ತಪ್ಪಿದಾಗ ಏನು ಮಾಡಬೇಕು, ಹೇಗೆ ನಿಭಾಯಿಸಬೇಕು ಎಂಬ ಗುಟ್ಟನ್ನೆಲ್ಲ ಅಪ್ಪ, ಅಮ್ಮ ಅರುಹಿದ್ದರು. ಅವಳು ಎಂದೂ ದಾರಿ ತಪ್ಪಿರಲಿಲ್ಲ. ಲಿಮಾದ ಏರ್‍ಪೋರ್ಟ್‍ಗೆ ಬಂದರು. ಯಾವ ಪ್ಲೈಟ್ ಕೂಡ ಖಾಲಿ ಇಲ್ಲ. ಎಲ್ಲ ಕೌಂಟರ್‍ನಲ್ಲೂ ಜನಸಂದಣಿ. ಕೊನೆಗೆ ಸಿಕ್ಕಿದ್ದು ಅದೇ ಫ್ಲೈಟ್ – ಲಾನ್ಸ್ ಪ್ಲೈಟ್ 518. ಇಬ್ಬರು ನಕ್ಕು ಪರಸ್ಪರ ಮುಖ ನೋಡಿಕೊಂಡರು. ಹ್ಯಾನ್ಸ್ ಗೆ ತಿಳಿದಾಗ, ಆ ಕುರಿತು ಅವನು ಮತ್ತೆ ತಗಾದೆ ತೆಗೆಯಲಿಲ್ಲ, ಸುಮ್ಮನಾಗಿಬಿಟ್ಟ. ಮರುದಿನ 24, ಕ್ರಿಸ್‍ಮಸ್‍ನ ಮುನ್ನಾ ದಿನ. ಈ ಕುಟುಂಬಕ್ಕೆ ಅಂಥ ವ್ಯತ್ಯಾಸವೇನೂ ಕಾಣಲಿಲ್ಲ. ಬೆಳಗ್ಗೆ 11 ಗಂಟೆಗೆ ವಿಮಾನ ಹತ್ತಿದರು. ಮನಸ್ಸು ಪಂಗ್ವಾನ ಕಡೆಗೆ. ಸಂಶೋಧನ ಕೇಂದ್ರವಿದ್ದದ್ದು ಅಲ್ಲಿಂದ ಒಂದೂವರೆ ಗಂಟೆ ಕಾಲ್ನಡಿಗೆ, ತೊರೆಯ ಮೂಲಕ ದೋಣಿಯಲ್ಲೂ ಹೋಗಬಹುದಾಗಿತ್ತು. ಅದು ಪೆರು ಭಾಗದ ಅಮೆಜಾನ್‍ನ ದಟ್ಟ ಕಾಡು.

ಮರೆಯಲಾರದ ಆ ಘಳಿಗೆ

ಅಮ್ಮ, ಮಗಳನ್ನು ಕುರಿತು “ನೋಡು ಜ್ಯೂಲಿಯಾನಿ, ಹಕ್ಕಿಗಳ ಹಾರಾಟ ನನಗೂ ಇಷ್ಟ. ಆದರೆ ಈ ಲೋಹದ ಹಕ್ಕಿ ನನಗೇನೂ ಅಂಥ ಖುಷಿ ಕೊಡುವುದಿಲ್ಲ. ಆದರೆ ದೂರ ಪ್ರಯಾಣ ಮಾಡಲೇಬೇಕಲ್ಲ" ಎನ್ನುತ್ತ ಹುಸಿಮುನಿಸು ತೋರಿದಳು. ಅರ್ಧ ಗಂಟೆಯ ಪ್ರಯಾಣದಲ್ಲಿ ಏನೂ ಆಗಲಿಲ್ಲ. ನಿಶ್ಯಬ್ದವಾಗಿಯೇ ವಿಮಾನ ಸಾಗುತ್ತಿತ್ತು. ಗಗನಸಖಿಯರು ಸ್ಯಾಂಡ್‍ವಿಚ್ ಕೊಟ್ಟರು. ಹಿಂದೆಯೇ ಸಾಫ್ಟ್ಡ್ರಿಂಕ್ ಬಂತು. ಟಿಷ್ಯೂ ಪೇಪರ್‍ನಲ್ಲಿ ಬಾಯಿ ಒರೆಸಿಕೊಳ್ಳುವ ಹೊತ್ತಿಗೆ ವಿಮಾನ ಏಕೋ ಅಲುಗಾಡುತ್ತಿದೆ ಎನ್ನಿಸಿತು. ಅದು ಕ್ಷಣಕ್ಷಣಕ್ಕೂ ಎಡಕ್ಕೆ, ಬಲಕ್ಕೆ ಹೊರಳುತ್ತಿತ್ತು. ವಿಮಾನದಲ್ಲಿ ಸೀಟಿನ ಮೇಲಿದ್ದ ಬ್ರೀಫ್‍ಕೇಸ್‍ಗಳು ದಬದಬ ಬೀಳತೊಡಗಿದವು. ತನ್ನನ್ನು ಮರೆತು ಮೇರಿಯಾ ಮಗಳ ತಲೆಯ ಮೇಲೆ ಕೈಇಟ್ಟಳು. ಪಕ್ಕಪಕ್ಕದ ಸೀಟು. ಕ್ಷಣಕ್ಷಣಕ್ಕೂ ವಿಮಾನ ಸಂಪೂರ್ಣ ನಿಯಂತ್ರಣ ಕಳೆದುಕೊಳ್ಳುತ್ತಿತ್ತು. ಕಿಟಕಿಯಾಚೆ ನೊಡಿದರೆ ವಿಮಾನದ ರೆಕ್ಕೆ ಪಳಪಳ ಆಗಾಗ ಮಿಂಚುತ್ತಿತ್ತು, ವಾತಾವರಣವೋ ಗುಡುಗು, ಸಿಡಿಲಿನ ಆರ್ಭಟದಲ್ಲಿ ಏನೂ ಕಾಣದಾಗಿತ್ತು. ಮಿಂಚು ಮತ್ತೆ ಮತ್ತೆ ಹೊಡೆಯುತ್ತಿತ್ತು. ಬಿರುಗಾಳಿಯೂ ಜೊತೆಗೂಡಿತ್ತು. ಅಮ್ಮ ಕಿಟಾರನೇ ಕಿರುಚಿಕೊಂಡಳು. “ಜ್ಯೂಲಿಯಾನಿ, ನಮ್ಮ ಕಥೆ ಮುಗಿಯಿತು ” ಎಂದು. ಬಹುಶಃ ತಾಯಿ ಮಕ್ಕಳ ಮಾತು ಅದೇ ಕೊನೆಯದು. ಯಾರೋ ತಿಂದ ತಿಂಡಿ ಇನ್ಯಾರದೋ ಮುಖಕ್ಕೆ ರಾಚುತ್ತಿತ್ತು. ಸಾಫ್ಟ್ ಡ್ರಿಂಕ್ಸ್ ಮಳೆಯಂತೆ ಸುರಿಯುತ್ತಿತ್ತು. ಮಗಳು ತಾಯಿಯನ್ನು ಭದ್ರವಾಗಿ ತಬ್ಬಿಕೊಂಡಳು. ಮೂರನೆಯ ಸೀಟಿನಲ್ಲಿ ಕುಳಿತಿದ್ದವರು ಯಾರೋ ಇವರಿಗೆ ತಿಳಿಯದು. ಜ್ಯೂಲಿಯಾನಿ ಆಗ ಆದ ಘಟನೆಯನ್ನು ಸ್ಮರಿಸಿಕೊಳ್ಳುತ್ತಾಳೆ:

“ವಿಮಾನ ಪಲ್ಟಿ ಹೊಡೆದಂತಾಗಿ ಯಾರ ಮೇಲೋ ಯಾರೋ ಬೀಳುತ್ತಿದ್ದರು. ಸೀಟ್ ಬೆಲ್ಟ್ ಗಳನ್ನೂ ಕಳಚಿ ಪ್ರಯಾಣಿಕರು ಅತ್ತಿತ್ತ ಬೀಳುತ್ತಿದ್ದರು. ನಾವು ಪ್ರಯಾಣ ಮಾಡುತ್ತಿದ್ದಾಗ, ವಿಮಾನ 6,000 ಕಿಲೋ ಮೀಟರ್ ಎತ್ತರದಲ್ಲಿದ್ದುದು ನೋಡುನೋಡುತ್ತಲೇ 3,000 ಮೀಟರ್‍ಗೆ ಇಳಿದಿತ್ತು. ಕುಳಿತಿದ್ದ ಪ್ರತಿಯೊಬ್ಬರಿಗೂ ಏನೋ ಆಗುತ್ತಿದೆ ಎಂಬ ಅನುಭವ. ಯಾರದೋ ಆರ್ತನಾದ. ಆದರೆ ಯಾರು ಯಾರಿಗೂ ನೆರವು ನೀಡುವ ಸ್ಥಿತಿಯಲ್ಲಿರಲಿಲ್ಲ. ಕಿವಿಗಡಚಿಕ್ಕುವ ಶಬ್ದ. ಅಷ್ಟೇ ನನಗೆ ತಿಳಿದದ್ದು. ಮೆಲ್ಲಗೆ ಅಮ್ಮನ ಸೀಟಿಗೆ ಕೈ ಹಾಕಿದೆ. ಅಮ್ಮ ಇಲ್ಲ. ನಾನೊಬ್ಬಳೇ ಬೀಳುತ್ತಿದ್ದೇನೆ. ಬಹುಶಃ ಆ ಹಂತದಲ್ಲೇ ನನಗೆ ಪ್ರಜ್ಞೆ ಹೋಗಿತ್ತೆಂದು ಕಾಣುತ್ತದೆ. ಮುಂದೇನಾಯಿತೆಂದು ನನಗೆ ತಿಳಿಯದು.

ಕಣ್ಣುಬಿಟ್ಟಾಗ ಆಘಾತವಾದಂತಾಯಿತು. ನಾನು ಕೂತ ಸೀಟು ಬೆಲ್ಟ್ ಸಮೇತ ಕಿತ್ತುಬಂದಿದೆ. ಪಕ್ಕಕ್ಕೆ ಕೈ ಇಟ್ಟರೆ ಮುರಿದ ಸೀಟು. ಏನಾಗಿದೆ ಎಂದು ತಿಳಿಯುತ್ತಿರಲಿಲ್ಲ. ಥಟ್ಟನೆ `ಅಮ್ಮ’ ಎಂದು ಕಿರುಚಿಕೊಂಡೆ. ಬರೀ ಅರಣ್ಯ ರೋದನ ಎನ್ನುವಂತಾಗಿತ್ತು. ಇಡೀ ರಾತ್ರಿ ಹಾಗೆಯೇ ಕಳೆದಿದ್ದೇನೆ. ಮೂರು ಕಿಲೋ ಮೀಟರ್ ಮೇಲಿನಿಂದ ನೆಟ್ಟಗೆ ಬಿದ್ದಿದ್ದೇನೆ. ಅಮೆಜಾನ್‍ನ ಯಾವುದೋ ಮರದ ಮಧ್ಯೆ ಸೀಟು ನನ್ನನ್ನು ನಿಧಾನವಾಗಿ ಇಳಿಸಿದೆ ಎಂಬುದು ತಿಳಿದಾಗ ವಿಪರೀತ ಗಾಬರಿಯಾಯಿತು. ಕ್ರಿಸ್‍ಮಸ್ ಸೂರ್ಯ ಹುಟ್ಟಿದ್ದ. ಮೆಲ್ಲಗೆ ಮೈ ನೋಡಿಕೊಂಡೆ. ಮೈ ಅಲ್ಲಲ್ಲೆ ಗಾಯವಾಗಿದೆ. ಕನ್ನಡಕದ ಫ್ರೇಂ ಅರ್ಧ ಮುರಿದುಹೋಗಿದೆ. ಒಂದು ಕಣ್ಣಿಗೆ ಏಟಾಗಿ ಊದಿಕೊಂಡಿದೆ. ದೂರ ನೋಡಲಾಗುತ್ತಿರಲಿಲ್ಲ. ಏಕೋ ಕತ್ತು ನೋವು ಕಾಡುತ್ತಿತ್ತು. ಮುಟ್ಟಿ ನೋಡಿಕೊಂಡರೆ ಕತ್ತಿನ ಒಂದು ಭಾಗದ ಮೂಳೆ ಮುರಿದುಹೋಗಿತ್ತು-ಕಾಲರ್ ಬೋನ್ ಎನ್ನುತ್ತಾರಲ್ಲ ಅದು. ಸುತ್ತ ನೋಡಿದೆ, ಬಂಗಾರದ ಬಣ್ಣದ ಗಗನಚುಂಬಿ ಮಹಾವೃಕ್ಷಗಳು. ಎಲೆಗಳಿಂದ ನೀರು ತೊಟ್ಟಿಕ್ಕುತ್ತಿತ್ತು. ಪರಿಚಿತ ಹಕ್ಕಿಗಳ ಶಬ್ದ. ಕಪ್ಪೆಗಳು ವಟಗುಟ್ಟುತ್ತಿದ್ದವು. ಈ ಪರಿಸರ ಹೊಸತಲ್ಲ ಎನ್ನಿಸಿತು. ಬಹುಶಃ ನಮ್ಮ ಸಂಶೋಧನ ಕೇಂದ್ರ ಹತ್ತಿರವೇ ಇರಬಹುದು ಎಂದುಕೊಂಡೆ. ಆದರೆ ದಿಕ್ಕೇ ತೋಚುತ್ತಿಲ್ಲ, ಸಂಪೂರ್ಣ ಏಕಾಂಗಿ. ಅಮ್ಮ ಎಲ್ಲಿ ಬಿದ್ದಿದ್ದಾಳೆ ಎನ್ನುವ ಸುಳಿವೂ ಇಲ್ಲ. ಅಮೆಜಾನ್ ಕಾಡು ನನ್ನಿಂದ ಎಲ್ಲವನ್ನೂ ಮುಚ್ಚಿಡುತ್ತಿದೆ ಎನ್ನಿಸಿತು. ವಾಸ್ತವವಾಗಿ ನನಗೆ ಅನಂತರ ತಿಳಿದದ್ದು ನಾವು ಪ್ರಯಾಣ ಮಾಡುತ್ತಿದ್ದ ಫ್ಲೈಟ್ ಮೂರು ಕಿಲೋ ಮೀಟರ್ ಎತ್ತರದಲ್ಲೇ ಛಿದ್ರಛಿದ್ರವಾಗಿತ್ತು. ಪ್ರಯಾಣಿಕರನ್ನು ಎಲ್ಲಿ ಎಲ್ಲಿಯೋ ಬೀಳಿಸಿತ್ತು. ಒಟ್ಟು 92 ಮಂದಿ ಪ್ರಯಾಣಿಕರಲ್ಲಿ ಉಳಿದವಳು ನಾನೊಬ್ಬಳೇ ಎಂದಾಗ ನನಗೆ ಮಾತು ಹೊರಡಲೇ ಇಲ್ಲ.”

ಹಾವಿನ ಬಾಲದ ಹೊಡೆತ

“ಅರೆಘಳಿಗೆ ಸುಧಾರಿಸಿಕೊಂಡೆ. ಏಳುವ ಸ್ಥಿತಿಯಲ್ಲಿರಲಿಲ್ಲ. ಮೈ ಕೈ ನೋವು ವಿಪರೀತವಾಗಿತ್ತು. ಮೆಲ್ಲನೆ ತೆವಳಿ ಸ್ವಲ್ಪ ದೂರ ಹೋದೆ. ಬಹುಶಃ ಒಂದೇ ಸೀಟಿನಲ್ಲಿ ಕೂತಿದ್ದ ನಮ್ಮಮ್ಮ ಎಲ್ಲಾದರೂ ಇಲ್ಲೇ ಬಿದ್ದಿರಬಹುದೇ ಎಂದು ನೋಡಿದೆ. ನನ್ನ ದೃಷ್ಟಿಗೆ ಏನೊಂದೂ ಕಾಣಲಿಲ್ಲ. ಮೊದಲ ಬಾರಿಗೆ ಅನಾಥ ಪ್ರಜ್ಞೆ ಮೂಡಿತು. ಅಮ್ಮನನ್ನು ಹುಡುಕ ಹೊರಟವಳಿಗೆ ಸ್ವಲ್ಪ ದೂರದಲ್ಲೇ ಒಂದು ಕಿತ್ತುಹೋದ ಬ್ರೀಫ್‍ಕೇಸ್ ಕಾಣಿಸಿತು. ಅದರಿಂದ ಒಂದು ಪ್ಯಾಕೆಟ್ ಇಣುಕುತ್ತಿತ್ತು. ಪಟ್ಟನೆ ಕೈಗೆತ್ತಿಕೊಂಡೆ. ಅದು ಚಾಕೋಲೇಟ್ ಪ್ಯಾಕೆಟ್. ತೀರ ಹಸಿವಾಗಿತ್ತು, ಬಾಯಿಗೆ ಹಾಕಿಕೊಂಡೆ. ಅದರ ಹೊರತು ಅಲ್ಲಿ ಯಾವ ಹಣ್ಣು, ಕಾಯಿಯೂ ಕಾಣಿಸುತ್ತಿರಲಿಲ್ಲ. ಮೆಲ್ಲನೆ ಬಂದು ಕುಂಟುತ್ತ ಮರದ ಬಳಿ ಆಶ್ರಯ ಪಡೆದೆ. ಬಾಯಾರಿತ್ತು, ದೊಡ್ಡ ಮರದಿಂದ ಎಲೆಗಳು ನೀರನ್ನು ಉದುರಿಸುತ್ತಿದ್ದವು. ಬಾಯಿ ಅಗಲಿಸಿದೆ, ಗುಟುಕು ಗುಟುಕು ಕುಡಿದೆ. ಸಮಾಧಾನವಾಗುವ ಬದಲು ಏಕೋ ಇನ್ನೂ ಆಯಾಸ ಹೆಚ್ಚಿತು. ಮಳೆ ಕಾಡು ನನಗೇನೂ ಹೊಸತೇನಲ್ಲ. ಆದರೆ ಈ ತೊಟ್ಟಿಕ್ಕುವ ನೀರು ನನ್ನ ಪ್ರಾಣ ಉಳಿಸಿದ್ದು ನನಗೆ ಕೃತಜ್ಞತೆಯನ್ನು ಮೂಡಿಸಿತ್ತು. ಬದುಕಿನಲ್ಲಿ ಇಂಥ ಸಂದರ್ಭವೂ ಬರುತ್ತದೆಯೇ ಎಂದುಕೊಂಡೆ.”

“ಮೆಲ್ಲನೆ ನನ್ನ ದೇಹವನ್ನು ಒಮ್ಮೆ ನೋಡಿಕೊಂಡೆ. ಕೈ ಕಾಲಿಗೆ ಗಾಯವಾಗಿದೆ. ಮರದ ಬುಡದಲ್ಲಿ ಹಾಗೆಯೇ ಆತುಕೊಂಡು ಕೂತೆ. ಸೊಳ್ಳೆಗಳ ದಂಡು ಕಿವಿಯ ಬಳಿಯೇ ಸುತ್ತುತ್ತಿವೆ. ಜೊತೆಗೆ ಜೀರುಂಡೆಗಳು ಗುಯ್‍ಗುಟ್ಟುತ್ತಿವೆ. ಚಿಟ್ಟೆಗಳು ಎದುರಿಗೇ ಹಾದುಹೋಗುತ್ತಿವೆ, ಮಿಡತೆಗಳು ನೆಗೆದಾಡುತ್ತಿವೆ. ಅವುಗಳಿಂದ ನನಗೇನೂ ಅಪಾಯವಿಲ್ಲವೆಂದುಕೊಂಡೆ. ತಲೆಯಲ್ಲಿ ಏನೋ ಸರಿದಂತಾಯಿತು, ಮುಟ್ಟಿ ನೋಡಿದರೆ ಅಲ್ಲಿ ಜೇನುಗಳು ಜಾಗವನ್ನು ಹುಡುಕುತ್ತಿವೆ. ಅವು ವಿಷಪೂರಿತವೋ ಅಲ್ಲವೋ ನಾನು ಆ ಘಳಿಗೆ ನಿರ್ಧರಿಸಲಾಗಲಿಲ್ಲ. ಅಪ್ಪ ಹೇಳುತ್ತಿದ್ದ ಅದೇ ಮಾತು ನೆನಪಿಗೆ ಬರುತ್ತಿತ್ತು. ಕಾಡಲ್ಲಿ ಕಳೆದು ಹೋದರೆ ಬದುಕಿ ಬರುವುದು ಹೇಗೆ? ಎಂಬುದು. ಇಷ್ಟು ಯೋಚಿಸುವ ಹೊತ್ತಿಗೆ ಕಾಲನ್ನು ಕೊಡವುತ್ತಿದ್ದೆ. ನೋಡಿದರೆ ನನಗೆ ಸ್ಪಷ್ಟವಾಗುತ್ತಿತ್ತು, ಅವು ಘೋರ ವಿಷದ ಹಾವುಗಳು. ಬಾಲದಿಂದ ಚಾಟಿಯಂತೆ ನನ್ನ ಕಾಲಿಗೆ ರಪರಪ ಎಂದು ಹೊಡೆಯುತ್ತಿದ್ದವು. ಸದ್ಯ ಅವು ನನ್ನನ್ನು ಕಚ್ಚುವ ಹವಣಿಕೆಯಲ್ಲಿರಲಿಲ್ಲ. ಬಹುಶಃ ನನ್ನ ಕಥೆ ಇಲ್ಲಿಗೆ ಮುಗಿಯಿತು ಎಂಬ ಹಂತಕ್ಕೆ ಬಂದೆ.

ಮತ್ತೆ ಆ ಜಾಗದಿಂದ ಕುಂಟುತ್ತ ಮೆಲ್ಲಗೆ ನಡೆದೆ. ಸಣ್ಣ ಶಬ್ದ, ಅತ್ತ ನಡೆದೆ. ಒಂದು ಚಿಲುಮೆ ಉಕ್ಕಿ ಹರಿಯುತ್ತಿತ್ತು. ಬೊಗಸೆಯಲ್ಲಿ ಮತ್ತೆ ಮತ್ತೆ ಮೊಗೆದುಕೊಂಡು ನನ್ನ ದಾಹವನ್ನು ಇಂಗಿಸುವಷ್ಟು ಕುಡಿದೆ. ಅಪ್ಪ ಇನ್ನೂ ಒಂದು ಮಾತು ಹೇಳಿದ್ದರು. `ಜ್ಯೂಲಿಯಾನಿ, ಒಂದುವೇಳೆ ನೀನು ಕಾಡಿನಲ್ಲಿ ಕಳೆದೇಹೋದೆ ಎಂದುಕೋ, ಸಾಧ್ಯವಾದಷ್ಟೂ ಯಾವುದಾದರೂ ನದಿಯನ್ನೋ ಹಳ್ಳವನ್ನೋ ಗುರುತಿಸು. ಅದರ ಕೆಳಪಾತ್ರದಲ್ಲಿ ನಡೆಯುತ್ತ ಹೋಗು. ಎಲ್ಲೋ ಒಂದು ಕಡೆ ಯಾರೋ ಗುಡಿಸಲನ್ನೋ, ಮನೆಯನ್ನೋ ಕಟ್ಟಿರುತ್ತಾರೆ. ಅಷ್ಟು ಸಾಕು ನೀನು ಬದುಕಲು; ಎಂದಿದ್ದರು. ನಾನು ಆ ಚಿಲುಮೆಯ ನೀರು ಹರಿಯುವ ದಿಕ್ಕಿನಲ್ಲೇ ಹೊರಟೆ. ಚಾಕೋಲೇಟ್ ಬಿಟ್ಟರೆ ಬರಿಗೈ. ಆ ಚಿಲುಮೆಯ ನೀರು ಒಂದು ಸಣ್ಣ ತೊರೆಯನ್ನು ಸೇರುತ್ತಿತ್ತು. ಅಕ್ಕಪಕ್ಕ ಕಾಲುದಾರಿಯೂ ಇಲ್ಲ. ನನಗಿದ್ದದ್ದು ಒಂದೇ ಮಾರ್ಗ. ಆ ತೊರೆಯಲ್ಲಿ ಇಳಿಯುವುದು. ಆದರೆ ಅದರ ಆಳ ಗೊತ್ತಿಲ್ಲ. ಮೆಲ್ಲನೆ ಹೆಜ್ಜೆ ಇಟ್ಟು ನಡೆಯತೊಡಗಿದೆ. ಮಧ್ಯೆ ಮಧ್ಯೆ ದೊಡ್ಡ ಮರದ ದಿಮ್ಕಿಗಳು, ಅರ್ಧ ಕೊಳೆತವು, ಅರ್ಧ ತೇಲುತ್ತಿರುವವು. ಭಯವಾಯಿತು. ಅಮೆಜಾನ್ ನದಿಯಂತಿರಲಿ, ಅದರ ಉಪನದಿಗಳಲ್ಲೂ ಭಯಂಕರ ಮೊಸಳೆಗಳ ಕಾಟ. ಒಂದು ಕ್ಷಣ ಕಣ್ಣು ಮುಚ್ಚಿದೆ. ಆ ಹೊತ್ತಿಗೆ ಸಂಜೆಯಾಯಿತು. ದಾರಿ ಮಬ್ಬು ಮಬ್ಬು. ನದಿ ಬದಿಯ ಒಂದು ಮರದ ಬುಡದಲ್ಲಿ ಆಶ್ರಯ ಪಡೆದೆ. ಮತ್ತೆ ಚಾಕೋಲೇಟ್ ಎತ್ತಿಕೊಂಡೆ. ತಿಂದು ಹಾಗೆಯೇ ಕಣ್ಣು ಮುಚ್ಚಿದೆ. ಡಿಸೆಂಬರ್ 28, ಮತ್ತೆ ತೊರೆಗೆ ಇಳಿದೆ. ಟೈಂ ನೋಡಿಕೊಳ್ಳಬೇಕಾಗಿತ್ತು. ವಾಚ್ ಕಡೆಗೆ ಕಣ್ಣು ಹೊರಳಿಸಿದೆ. ನನ್ನ ಮಣಿಕಟ್ಟಿನಲ್ಲೇ ಅದು ಭದ್ರವಾಗಿ ಕುಳಿತಿತ್ತು. ಆದರೆ ಅದರ ಹೃದಯ ಬಡಿತ ನಿಂತಿತ್ತು. ಮುಳ್ಳುಗಳು ಸ್ಥಗಿತವಾಗಿದ್ದವು. ಅಮ್ಮ ಪ್ರೀತಿಯಿಂದ ಕೊಟ್ಟ ಉಡುಗೊರೆ ಅದು. ವಾಚಿಗೆ ಬಲವಾದ ಪೆಟ್ಟು ಬಿದ್ದಿತ್ತು. ಮಾಡುವುದೇನಿದೆ? ಆಕಾಶದ ಸೂರ್ಯನೇ ಗಡಿಯಾರ. ಸೂರ್ಯ ಕಾಣುವವರೆಗೂ ನಾನು ತೊರೆಯಲ್ಲೇ ನಡೆಯುತ್ತಿದ್ದೆ. ಮನಸ್ಸು ವಿಪರೀತ ಭಾರವಾದಂತಾಯಿತು. ನಾನು ನಡೆಯುತ್ತಿದ್ದ ಸಣ್ಣ ತೊರೆ ಒಂದು ಸಾಧಾರಣ ನದಿಗೆ ಕೂಡಿಕೊಂಡುಬಿಟ್ಟಿತು. ಧೈರ್ಯವಾಗಿ ಹೆಜ್ಜೆ ಇಡುವುದು ಹೇಗೆ? ಯಾವ ಪ್ರಾಣಿ ಯಾವಾಗ ನನ್ನ ಕಾಲನ್ನು ಹಿಡಿಯುತ್ತದೋ ಎಂಬ ಭಯವಿತ್ತು. ಆ ಭಯದಲ್ಲೇ ಮುಂದೆ ಸಾಗಲೇಬೇಕಾಗಿತ್ತು.”

ನಾನು ಜಲರಾಕ್ಷಸಿಯಂತೆ

“ಸ್ವಲ್ಪ ಬಯಲು ಸಿಕ್ಕಂತಾಯಿತು. ಹಕ್ಕಿಗಳ ಸ್ವರದಿಂದಲೇ ನಾನು ಗುರುತಿಸಬಲ್ಲವಳಾಗಿದ್ದೆ. ಅವು ಬಯಲಲ್ಲಿ ವಾಸಮಾಡುವ ಪಕ್ಷಿಗಳು. ಬದುಕಬಲ್ಲೆ ಎಂಬ ಆತ್ಮವಿಶ್ವಾಸದ ಒಂದು ಆಶಾಕಿರಣ ಕಂಡಿತು. ನದಿಯನ್ನು ತೊರೆದು ಸ್ವಲ್ಪ ತೆರವಾಗಿದ್ದ ಜಾಗವನ್ನು ನೋಡಿ ಅಲ್ಲಿ ಹತ್ತಿದೆ. ಆಶ್ಚರ್ಯ ವಿಮಾನದ ಶಬ್ದ ಕೇಳಿಬರುತ್ತಿದೆ, ಅದೂ ಅಮೆಜಾನ್ ದಟ್ಟ ಅರಣ್ಯವನ್ನು ಸೀಳಿಕೊಂಡು. ಆದರೆ ಸುತ್ತ ಒಂದು ನರಪಿಳ್ಳೆಯೂ ಇಲ್ಲ. ಎಲ್ಲೋ ಮನುಷ್ಯರ ಗದ್ದಲ ಕೇಳಿಸುತ್ತಿತ್ತು. ಬಹುಶಃ ನನ್ನೊಬ್ಬಳನ್ನು ಹೊರತುಪಡಿಸಿ, ಉಳಿದ 90 ಮಂದಿ ಪ್ರಯಾಣಿಕರನ್ನು ರಕ್ಷಿಸಿ ಕರೆದುಕೊಂಡು ಹೋಗುತ್ತಿರುವಾಗ ಹೊರಡುತ್ತಿರುವ ಶಬ್ದವೇ ಎಂಬ ಅನುಮಾನ ಮೂಡಿತು. ಆ ಗುಂಪಿನಲ್ಲಿ ನನ್ನ ಅಮ್ಮ ಇರಬಹುದೇ ಎಂದು ಮತ್ತೆ ಮತ್ತೆ ಮನಸ್ಸು ಕೇಳುತ್ತಿತ್ತು. ಜನವಸತಿ ಕೇಂದ್ರಕ್ಕೆ ಹತ್ತಿರವಾಗುತ್ತಿದ್ದೇನೆಂದು ಮನಸ್ಸು ಹೇಳುತ್ತಿತ್ತು. ಆದರೂ ನದಿ ದಡದಲ್ಲಿ ಸ್ಟಿಂಗ್ ರೇಸ್ ಎಂಬ ಭಯಂಕರ ಮೀನು ಇಲ್ಲಿ ಯಥೇಚ್ಛವಾಗಿವೆ ಎಂಬ ಅನುಮಾನ ಹುಟ್ಟಿತು. ಹಾಗಾಗಿ ಸದಾ ಜಾಗರೂಕಳಾಗಿದ್ದೆ. ಪಿರಾನ ಎಂಬ ಇನ್ನೊಂದು ಬಗೆಯ ಮೀನಿದೆ. ಅವು ಕೆಲವೇ ಸೆಕೆಂಡುಗಳಲ್ಲಿ ಯಾವ ಪ್ರಾಣಿಯ ಮಾಂಸವನ್ನಾದರೂ ಮುಕ್ಕಿ ಅಸ್ಥಿಪಂಜರವನ್ನು ಬಿಟ್ಟುಹೋಗುತ್ತವೆ ಎನ್ನುವುದನ್ನು ನೆನೆದು ಮತ್ತೆ ಎದೆಯಲ್ಲಿ ನಡುಕ ಉಂಟಾಯಿತು. ಆದರೆ ಅವು ಹರಿಯುವ ನೀರಿನಲ್ಲಿ ಇರುವುದಿಲ್ಲ ಎಂಬ ಪ್ರಜ್ಞೆ ಜಾಗೃತವಾದ ಮೇಲೆ ಸಮಾಧಾನಪಟ್ಟುಕೊಂಡೆ.

ಆ ಹೊತ್ತಿಗೆ ನದಿಗೆ ಲಂಗರು ಹಾಕಿದ್ದ ದೋಣಿಯೊಂದು ಕಂಡಿತು. ನಾನು ಬದುಕುವುದು ಗ್ಯಾರಂಟಿ ಅಂದುಕೊಂಡೆ. ಯಾರದೋ ದೋಣಿ, ನಾನು ಬಳಸುವುದು ಸರಿಯಲ್ಲ ಎಂದು ಸಮಾಧಾನಪಟ್ಟುಕೊಂಡೆ. ಸ್ವಲ್ಪ ಸ್ವಲ್ಪವೇ ನಡೆಯುತ್ತ ಒಂದು ದಿಬ್ಬವನ್ನು ಹತ್ತಿದೆ. ಅಲ್ಲೊಂದು ಗುಡಿಸಲು, ಬಗ್ಗಿ ನೋಡಿದರೆ ಖಾಲಿ ಖಾಲಿ. ಎಂದೋ, ಯಾರೋ ತೊರೆದು ಹೋದ ಗುಡಿಸಲು. ಸೊಳ್ಳೆಗಳು ಬೆಂಬತ್ತಿ ಬರುತ್ತಿದ್ದವು. ಅವುಗಳನ್ನು ನಿವಾರಿಸುವುದೇ ಕಷ್ಟವಾಗುತ್ತಿತ್ತು. ಅವು ನನ್ನ ಮೂಗಿನೊಳಗೇ ತೂರಲು ಯತ್ನಿಸುತ್ತಿದ್ದವು. ಡಿಸೆಂಬರ್ ಚಳಿ, ಆದರೂ ದಿಢೀರನೆ ಮಳೆ ಬೀಳಲು ಶುರುವಾಯಿತು. ನಿಜವಾಗಲೂ ನಾನು ಅನಾಥೆ ಎಂದುಕೊಂಡೆ. ಅಮ್ಮ ಇರುವಳೋ ಇಲ್ಲವೋ ಮತ್ತೆ ಮತ್ತೆ ನೆನೆಸಿಕೊಂಡು ದುಃಖಪಡುತ್ತಿದ್ದೆ. ಅದು ನನ್ನ ಹತ್ತನೆಯ ದಿನದ ಪಯಣ. ಗುರಿ ಇಲ್ಲದ ಪಯಣ. ಮತ್ತೆ ಮತ್ತೆ ಚಾಕೋಲೇಟ್‍ನಲ್ಲೇ ಜೀವ ಸವೆಸಬೇಕಾಗಿತ್ತು. ಗುಡಿಸಲಿನಿಂದ ಹೊರಬಂದೆ, ಮಳೆ ಸ್ವಲ್ಪ ನಿಂತಿತ್ತು. ಥಟ್ಟನೆ ಎದುರಿಗೆ ಮೂರು ಜನ ಪ್ರತ್ಯಕ್ಷರಾಗಬೇಕೇ. ನನಗೆ ಇದೇನು ಭ್ರಮೆಯೋ ನಿಜವೋ ಎನಿಸಿತು. ಸ್ವಲ್ಪದರಲ್ಲೇ ಖಾತರಿಯಾಯಿತು. ನಾನು ನೋಡುತ್ತಿರುವುದು ಮನುಷ್ಯರನ್ನು”

ಅವರು ಮೀನುಗಾರರು. ನನ್ನನ್ನು ನೋಡಿದೊಡನೆ ಅವರೇ ಬೆಚ್ಚಿಬೀಳುತ್ತಿದ್ದರು. ಅವರು ನನ್ನನ್ನು ಜಲರಾಕ್ಷಸಿ ಎಂದುಕೊಂಡುಬಿಟ್ಟಿದ್ದರಂತೆ. ನನಗೆ ಸ್ಪ್ಯಾನಿಷ್ ಭಾಷೆ ಬರುತ್ತಿತ್ತು. ಸ್ವಷ್ಟವಾಗಿ ಅವರಿಗೆ ಅರ್ಥವಾಗುವಂತೆ ಹೇಳಿದೆ. ಈಗ್ಗೆ 11 ದಿನಗಳ ಹಿಂದೆ ವಿಮಾನ ಅಪಘಾತವಾಯಿತಲ್ಲ, ಅದರಲ್ಲಿ ಬದುಕುಳಿದವಳು ನಾನು. ನನ್ನ ಹೆಸರು ಜ್ಯೂಲಿಯಾನಿ ಎಂದೆ. ಅವರಿಗೆ ಆಶ್ವರ್ಯ ಮತ್ತು ಮರುಕ ಒಟ್ಟಿಗೇ. ಅಂದು ಜನವರಿ 3, ನನ್ನನ್ನು ಸಂತೈಸಿದರು, ತಿಂಡಿ ಕೊಟ್ಟರು. ಜೊತೆಗೆ ತಮ್ಮ ದೋಣಿಯಲ್ಲಿ ಇದ್ದ ಎಣ್ಣೆಯನ್ನು ತಂದು ನನ್ನ ಕಾಲಿನ ಗಾಯಕ್ಕೆ ಸವರಿದರು. ಅವರ ಮಾತು ಕೇಳಿಸುತ್ತಿತ್ತು. ಯಾವುದೋ ಸಣ್ಣ ಕ್ರಿಮಿಗಳು ಗಾಯದಲ್ಲಿ ಆಗಲೇ ಸಣ್ಣ ಸಣ್ಣ ಮೊಟ್ಟೆ ಇಟ್ಟಿದ್ದವಂತೆ. ಎಣ್ಣೆ ಸವರಿದ ಮೇಲೆ ಸ್ವಲ್ಪ ಹಾಯ್ ಎನ್ನಿಸಿತು. ಕೊನೆಗೆ ಸುದ್ದಿ ಒಬ್ಬ ಪೈಲಟ್‍ಗೆ ತಲಪಿ, ಅವನು ಸಣ್ಣ ವಿಮಾನವೊಂದರಲ್ಲಿ ನನ್ನನ್ನು ಕೂಡಿಸಿಕೊಂಡು ಲಿಮಾಕ್ಕೆ ತಂದುಬಿಟ್ಟ. ಅಪ್ಪ, ನಾನು ಸತ್ತು ಹೋಗಿದ್ದೇನೆಂದೇ ಭಾವಿಸಿದ್ದರು. ಅಮ್ಮನ ಆಸೆಯನ್ನೂ ಕೈಬಿಟಿದ್ದರು. ನನ್ನನ್ನು ನೋಡುತ್ತಲೇ ಅವರಿಗೆ ಮಾತು ಹೊರಡಲಿಲ್ಲ. ಬಿಗಿಯಾಗಿ ತಬ್ಬಿಕೊಂಡರು. ನನಗೆ ಅನ್ನಿಸಿತು ಅಪ್ಪನ ಮಾತು ಕೇಳಬೇಕಿತ್ತು, ಆ ಫ್ಲೈಟ್ ಹತ್ತಬಾರದಿತ್ತು ಎಂದು. ಆದರೆ ಕಾಲ ಮಿಂಚಿಹೋಗಿತ್ತು.”

ಮುಂದಿನ ದಿನಗಳು

ಜ್ಯೂಲಿಯಾನಿ ಅಮ್ಮನನ್ನು ಕಳೆದುಕೊಂಡದ್ದಾಯಿತು, ಅಪ್ಪ ಅಸಹಾಯಕನಾಗಿದ್ದ. ಆತನಿಗೆ ಮ್ಯೂಸಿಯಂ ನಿರ್ವಹಣೆಯ ಹೊಣೆ ಇತ್ತು. ಹೊಸ ಪ್ರಭೇದಗಳನ್ನು ಸೇರಿಸುವತ್ತ ಗಮನಕೊಟ್ಟ. ಇತ್ತ, ಜ್ಯೂಲಿಯಾನಿ ಜರ್ಮನಿಗೆ ತೆರಳಿದಳು. ಕೆಲ್ ವಿಶ್ವವಿದ್ಯಾಲಯದಲ್ಲಿ ಜೀವಿವಿಜ್ಞಾನದಲ್ಲಿ 1980ರಲ್ಲಿ ಡಿಗ್ರಿ ಪಡೆದಳು. ಲುಡ್‍ವಿನ್ ಮ್ಯಾಕ್ಸ್‍ಮಿಲನ್ ವಿಶ್ವವಿದ್ಯಾಲಯದಲ್ಲಿ `ಪೆರುವಿನ ಉಷ್ಣವಲಯದ ಕಾಡಿನಲ್ಲಿ ಬಾವಲಿಗಳ ಪರಿಸರ’ ಕುರಿತು ಸಂಶೋಧನೆ ನಡೆಸಿ ಡಾಕ್ಟರೇಟ್ ಪಡೆದಳು. ಶ್ರೇಷ್ಠ ದರ್ಜೆಯ ಸಂಶೋಧಕಳಾಗಿ ಹೆಸರುಮಾಡಿದಳು. 1989ರಲ್ಲಿ ಎರಿಕ್ ಡಿಲ್ಲರ್ ಎಂಬ ಕೀಟವಿಜ್ಞಾನಿಯ ಜೊತೆ ವಿವಾಹವಾದಳು. ಆ ಮನುಷ್ಯ ಪರೋಪಜೀವಿ ಕಣಜ ಕುರಿತು ಮಾಡಿದ ಸಂಶೋಧನೆ ಈಗಲೂ ಆ ಕ್ಷೇತ್ರದಲ್ಲಿ ಅದ್ವಿತೀಯ ಎನಿಸಿಕೊಂಡಿದೆ.

ಗಂಡನೊಡನೆ ಮತ್ತೆ ಜ್ಯೂಲಿಯಾನಿ ತನ್ನ ಕರ್ಮಭೂಮಿ ಪಂಗ್ವಾನದ ಸಂಶೋಧನ ಕೇಂದ್ರಕ್ಕೆ ಹಿಂತಿರುಗಿದಳು. ಮುಂದೆ ಹದಿನೆಂಟು ತಿಂಗಳು ಒಂದೇಸಮನೆ ಆ ಕೇಂದ್ರದಲ್ಲಿ ತಾನೂ ಸಂಶೋಧನೆ ಮಾಡುವುದರ ಜೊತೆಗೆ ಅಮೆಜಾನ್ ಕಾಡಿನ ವಿಶೇಷ ಪ್ರಾಣಿಪಕ್ಷಿಗಳನ್ನು ಕುರಿತು ಅಧ್ಯಯನ ಮಾಡಬಂದವರಿಗೆ ನೆರವಿಗೆ ನಿಂತಳು. ಆ ಸಂಶೋಧನ ಕೇಂದ್ರಕ್ಕೆ ಬಹು ಬೇಗ ದೊಡ್ಡ ಹೆಸರು ಬಂತು. ಅಪ್ಪ ಬಹುವಾಗಿ ಆಸೆಪಟಿದ್ದರು – ಆ ಸಂಶೋಧನ ಕೇಂದ್ರವನ್ನು ಮತ್ತಷ್ಟು ವಿಸ್ತರಿಸಬೇಕೆಂದು. ಕೊನೆಗೂ ಅದು ಫಲಕೊಟ್ಟಿತು. 4,000 ಎಕರೆಗಳಷ್ಟು ಕಾಡನ್ನು ಪೆರು ಸರ್ಕಾರ ಈ ಸಂಶೋಧನ ಕೇಂದ್ರಕ್ಕೆ ನೀಡಿತು. ಆದರೆ ಆ ಹೊತ್ತಿಗೆ ತಂದೆ ಕಣ್ಮರೆಯಾಗಿದ್ದರು. ವಿಶೇಷವೆಂದರೆ, ಈವರೆಗೆ ಜಗತ್ತಿಗೇ ತಿಳಿಯದಿದ್ದ ಇಲ್ಲಿನ ಜೀವಿ ಪ್ರಭೇದಗಳ ಬಗ್ಗೆ 315 ಸಂಶೋಧನ ಪ್ರಬಂಧಗಳು ಪ್ರಕಟವಾಗಿವೆ. ಇದು ಜೀವಿವಿಜ್ಞಾನದ ಸ್ವರ್ಗ. ಹೊರ ಜಗತ್ತಿಗೆ ಪರಿಚಯವೇ ಇಲ್ಲದೆ 500 ವೃಕ್ಷ ಪ್ರಭೇದಗಳು, 160 ಬಗೆಯ ಸರೀಸೃಪ, 100 ಬಗೆಯ ಮೀನು, 7 ಬಗೆಯ ಕಪಿಗಳು, 350 ಪ್ರಭೇದದ ಹಕ್ಕಿಗಳಿಗೆ ಆವಾಸವಾಗಿದೆ. ಸ್ವತಃ ಎರಿಕ್ ಡಿಲ್ಲರ್ 52 ಹೊಸ ಬಾವಲಿ ಪ್ರಭೇದಗಳನ್ನು ಪತ್ತೆಹಚ್ಚಿದ್ದಾನೆ. ಅವೆಲ್ಲ ಆಗಾಗ ಶಬ್ದಮಾಡಿ ಜ್ಯೂಲಿಯಾನಿಗೆ, ಅವರ ಅಪ್ಪನಿಗೆ ಕೃತಜ್ಞತೆ ಹೇಳುತ್ತಿವೆ. ಅವುಗಳ ಉಲಿಯಲ್ಲಿ ಈಕೆ ಪರಮಸುಖವನ್ನೇ ಅನುಭವಿಸುತ್ತಿದ್ದಾಳೆ. ಜರ್ಮನಿಯ ಬವೇರಿಯದಲ್ಲಿ ಪ್ರಾಣಿ ಸಂಗ್ರಹಾಲಯದ ಮುಖ್ಯಸ್ಥೆಯಾಗಿ ಆಕೆ ಹೊಸ ಹೊಸ ಜೀವಿ ಪ್ರಭೇದಗಳನ್ನು ಅಲ್ಲಿಗೆ ಸೇರಿಸುತ್ತಿದ್ದಾಳೆ. ಸಮಯ ಸಿಕ್ಕಾಗಲೆಲ್ಲ ಮತ್ತೆ ಪೆರುವಿನ ಇದೇ ಸಂಶೋಧನ ಕೇಂದ್ರಕ್ಕೆ ಹಿಂತಿರುಗುತ್ತಾಳೆ ಗಂಡನೊಡನೆ. ಆ ದಟ್ಟ ಕಾಡಿನಲ್ಲಿ ಇಬ್ಬರೂ ಬೇರೆ ಬೇರೆ ದಿಕ್ಕು ಹಿಡಿಯುತ್ತಾರೆ. ಹೊಸ ಜೀವಿ ಪ್ರಭೇದಗಳಿಗಾಗಿ ಹುಡುಕಾಟ ನಡೆಸುತ್ತಾರೆ.

ಈಗ ಆಕೆಯ ಸಾಹಸ ಕುರಿತು `ಮಿರಕಲ್ ಸ್ಟಿಲ್ ಹ್ಯಾಪನ್ಸ್’ ಎಂಬ ಸಿನಿಮಾ ಬಂದಿದೆ. ಜೊತೆಗೆ ಆ ದಟ್ಟ ಕಾಡಿನಲ್ಲಿ ನಾನು ಹೇಗೆ ಬದುಕುಳಿದೆನೆಂಬ ಆಕೆಯ ಆತ್ಮಕಥೆ `ವೆನ್ ಐ ಫೆಲ್ ಫ್ರಂ ದಿ ಸ್ಕೈ’ ಓದುಗರಿಗೆ ರೋಚಕ ಅನುಭವ ನೀಡುತ್ತದೆ.

ಟಿ. ಆರ್. ಅನಂತರಾಮು

(ಡಾ. ಟಿ. ಆರ್. ಅನಂತರಾಮು, ನಂ. 534, 70ನೇ ಅಡ್ಡರಸ್ತೆ, 14ನೇ ಮುಖ್ಯರಸ್ತೆ, ಕುಮಾರಸ್ವಾಮಿ ಬಡಾವಣೆ 1ನೇ ಹಂತ, ಬೆಂಗಳೂರು-560 111, ಮೊ: 9886356085)

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

One thought on “ಸ್ತ್ರೀ ಎಂದರೆ ಅಷ್ಟೇ ಸಾಕೆ?/ ಭೂಮಿಗೆ ಬಿದ್ದ ಜೀವಿವಿಜ್ಞಾನಿ ಜ್ಯೂಲಿಯಾನಿ ಕಕೆ- ಟಿ.ಆರ್. ಅನಂತರಾಮು

Leave a Reply

Your email address will not be published. Required fields are marked *