FEATUREDಅಂಕಣ

ಸ್ತ್ರೀ ಎಂದರೆ ಅಷ್ಟೇ ಸಾಕೆ?/ ಚಿರತೆಗೆ ಮಾತೆ ಲೋರಿ ಮಾರ್ಕರ್ -ಟಿ.ಆರ್. ಅನಂತರಾಮು

ಕೇವಲ ಶತಮಾನದ ಹಿಂದೆ ಲಕ್ಷಾಂತರ ಸಂಖ್ಯೆಯಲ್ಲಿದ್ದ ಚಿರತೆಗಳು ನೋಡನೋಡುತ್ತ ಕಣ್ಮರೆಯಾದವು. ಅವುಗಳ ಅಳಿವಿಗೆ ಭಾರತ ಸೇರಿ ಹಲವು ದೇಶಗಳು ಕಾರಣವಾದವು. ಆದರೆ ಜಗತ್ತಿನಲ್ಲಿ ಚಿರತೆ ಸಂತತಿಯನ್ನು ಉಳಿಸಿ ಬೆಳೆಸಲು ಜೀವನವನ್ನೇ ಮುಡಿಪಾಗಿಟ್ಟ ವಿಜ್ಞಾನಿ ಲೋರಿ ಮಾರ್ಕರ್. ಅವರಿಗೆ ಚಿರತೆಯೇ ಅದ್ಭುತ ಪ್ರಪಂಚ. ಸುಮಾರು 50 ಲಕ್ಷ ವರ್ಷಗಳಿಂದ ಚಿರತೆಗಳು ನಮ್ಮೊಂದಿಗಿವೆ, ಮುಂದೆಯೂ ಅವು ಇರಬೇಕು ಎಂದು ಲೋರಿ ಹಟ ತೊಟ್ಟು ಅವುಗಳನ್ನು ಉಳಿಸಿದ ಸಾಧನೆಯನ್ನು ಇಡೀ ಜಗತ್ತು ಕೊಂಡಾಡುತ್ತಿದೆ. ಸಹಜವಾಗಿಯೇ ಅನೇಕ ಉನ್ನತ ಮಟ್ಟದ ಪ್ರಶಸ್ತಿಗಳು ಅವರಿಗೆ ಸಂದಿವೆ.

`ನೋಡಮ್ಮಾ, ನಮಗಾಗಿರುವ ಲಾಸ್ ನೀನು ಕಟ್ಟಿಕೊಡ್ತೀಯಾ? ನಮ ್ಮಜತೆ ಒಂದು ತಿಂಗಳು ಇರು ಸಾಕು, ನೀನೇ ಕಣ್ಣಾರೆ ನೋಡುತ್ತೀಯಾ, ಆಗ ನಮ್ಮ ಸಂಕಟ ಏನು ಎಂದು ಅರ್ಥವಾಗುತ್ತೆ.’

ಆಕೆ ಹೆಚ್ಚು ವಾದ ಮಾಡಬಾರದೆಂದು ಮೊದಲೇ ನಿರ್ಧರಿಸಿದ್ದಳು. ಇವರ ಪಡಿಪಾಟಲು ಏನು ಎಂದು ಕೇಳಿಸಿಕೊಳ್ಳಬೇಕು ಎಂದು ಸ್ವಗತವಾಡಿದ್ದಳು.

`ನಿಮ್ಮ ಸಮಸ್ಯೆ ಏನು? ಬಿಡಿಸಿ ಹೇಳಿ’ ಎಂದು ಅವರ ಉತ್ತರಕ್ಕಾಗಿ ಕಾದಳು.

ರಾತ್ರಿಯಾದರೆ ಸಾಕು, ಚಿರತೆಗಳು ದೊಡ್ಡಿಗೆ ನುಗ್ಗಿ, ನಮ್ಮ ಕುರಿ, ಮೇಕೆಗಳನ್ನು ಅನಾಮತ್ತಾಗಿ ಹೊತ್ತುಕೊಂಡು ಹೋಗುತ್ತವೆ. ಚಂಗೆಂದು ಬೇಲಿ ನೆಗೆಯುತ್ತವೆ. ಎಷ್ಟು ದಿನ ಅಂಥ ನೋಡೋದು. ನಮ್ಮ ಆಸ್ತಿಯೇ ದನ, ಕುರಿ, ಮೇಕೆ. ಅವನ್ನು ಕಳೆದುಕೊಂಡರೆ ನಮ್ಮ ಬದುಕು ಹೇಗೆ?’ ರೈತರು ತಮ್ಮ ಅಳಲನ್ನು ಹೇಳಿಕೊಳ್ಳುತ್ತಲೇ ಹೋದರು. ಆಕೆ ಅಷ್ಟೇ ಸಾವಧಾನವಾಗಿ ಹೌದು, ನಿಮ್ಮ ಸಮಸ್ಯೆ ಅರ್ಥವಾಗುತ್ತದೆ. ಆದರೆ ಚಿರತೆಗಳನ್ನು ಕೊಲ್ಲುವುದು ಇದಕ್ಕೆ ಪರಿಹಾರವಲ್ಲ’ ಎಂದಳು. ಗುಂಪಿನಲ್ಲಿ ಒಬ್ಬ ಪಟ್ಟೆಂದು ಎದ್ದು `ಕೊಲ್ಲದೆ ಮುದ್ದು ಮಾಡಿ ಸಾಕಬೇಕೆ?’ ಎಂದು ಕೋಪದಿಂದಲೇ ಕೇಳಿದ.

`ನಾನು ಹಾಗೆ ಹೇಳಲಿಲ್ಲ. ಬೇರೆ ಪರಿಹಾರ ಹುಡುಕಬೇಕು ಎಂದೆ ಅಷ್ಟೇ.’

ಗುಂಪಿನಲ್ಲಿ ಇನ್ನೊಬ್ಬ ಎದ್ದ – `ನೀವು ಪರಿಹಾರ ಹುಡುಕುತ್ತಲೇ ಇರಿ, ನಾವು ನಮ್ಮ ರಾಸುಗಳನ್ನು ಕಳೆದುಕೊಳ್ಳುತ್ತಲೇ ಹೋಗುತ್ತೇವೆ. ನಮ್ಮ ಬದುಕೇ ಇಷ್ಟು’ ಎಂದು ಅಸಹನೆಯಿಂದ ನುಡಿದ.

ಆಕೆ ಆಗಲೂ ಸಹನೆಯಿಂದಲೇ ಕೇಳಿಸಿಕೊಂಡಳು. ನಗುಮುಖದಿಂದಲೇ ಅಲ್ಲಿಂದ ಹೊರಟಳು. ಮತ್ತೆ ಬರುತ್ತೇನೆ’ ಎಂದಳು. ಬಹುಶಃ ಯಾರಿಗೂ ಆಕೆಯ ಕೊನೆಯ ಮಾತು ಕೇಳಿಸಲಿಲ್ಲ ಅಥವಾ ಕೇಳಿಸಿಕೊಳ್ಳುವ ಮನಸ್ಸಿರಲಿಲ್ಲ.ಇಂಥವರು ಸರ್ಕಾರದ ಕಡೆಯಿಂದ ಬರುತ್ತಾರೆ, ನಾಲ್ಕು ಬೆಣ್ಣೆಮಾತು ಹೇಳಿ ಕೈ ತೊಳೆದುಕೊಂಡುಬಿಡುತ್ತಾರೆ. ನಾವು ಇಂಥವರನ್ನು ಬಹಳ ನೋಡಿದ್ದೇವೆ’ ಎಂದು ತಮ್ಮತಮ್ಮಲ್ಲೇ ಮಾತನಾಡಿಕೊಂಡರು.

ಆಕೆಗೂ ಗೊತ್ತಿತ್ತು. ಚಿರತೆಗಳನ್ನು, ಹುಲಿಗಳು ಕಾಡಿನ ಅಂಚಿಗೆ ತಳ್ಳಿಬಿಡುತ್ತವೆ ಅಥವಾ ಅವು ಬೇಟೆಮಾಡಿದ ಮೃಗವನ್ನು ಅವೇ ಕೊಂಡೊಯ್ದುಬಿಡುತ್ತವೆ. ಹೀಗಾಗಿ ಚಿರತೆಗಳಿಗೆ ನಿಜವಾದ ಆವಾಸವೇ ನಷ್ಟವಾಗುತ್ತಿದೆ. ಅವೂ ಬದುಕಬೇಕಲ್ಲ. ಕಾಡಿನಿಂದ ಹೊರಬೀಳುತ್ತಲೇ ಸಾಕು ಪ್ರಾಣಿಗಳ ಕಡೆ ಹಾರುತ್ತವೆ. ರಾತ್ರಿಯ ಹೊತ್ತು ಹೊಂಚುಹಾಕಿ, ನುಗ್ಗಿ, ಕುರಿ, ಮೇಕೆಗಳನ್ನು ಬೇಟೆಯಾಡುವುದು ಅವುಗಳಿಗೆ ಅನಿವಾರ್ಯ. ಯಾರ ಪರ ವಹಿಸಬೇಕು? ಎಂದು ಅಕೆ ಸುದೀರ್ಘವಾಗಿ ಯೋಚನೆ ಮಾಡಿದಳು.

ಆಕೆಗೆ ಕೆಲವು ವರ್ಷಗಳಿಂದ ಅದೇ ಯೋಚನೆ- `ಜಗತ್ತಿನಾದ್ಯಂತ ಒಂದು ಶತಮಾನದ ಹಿಂದೆ ಒಂದು ಲಕ್ಷ ಚಿರತೆಗಳಿದ್ದವು. ಈಗ ಅಬ್ಬಬ್ಬಾ ಎಂದರೆ 7,500 ಇದ್ದಾವು. ಆಫ್ರಿಕದ ನಮೀಬಿಯದಲ್ಲಿ 1,500 ಚಿರತೆಗಳಿವೆ. ಪ್ರತಿವರ್ಷವೂ ಕನಿಷ್ಠ 950 ಚಿರತೆಗಳನ್ನು ಕುರಿಗಾಹಿಗಳು ಕೊಲ್ಲುತ್ತಿದ್ದಾರೆ. 1977ರಲ್ಲಿ ನಮೀಬಿಯದಲ್ಲಿ ಇದ್ದ ಚಿರತೆಗಳ ಸಂಖ್ಯೆ 4000. ಚಿರತೆಗಳನ್ನು ಉಳಿಸದಿದ್ದರೆ ಅವು ಕೂಡ ಅಳಿವಿನಂಚಿಗೆ ಬರುತ್ತವೆ. ಇದರ ಜೊತೆಗೆ ಬಡ ಕುರಿಗಾಹಿಗಳನ್ನೂ ಉಳಿಸಬೇಕು. ಇದು ನನ್ನ ಬದುಕಿನ ಅತಿದೊಡ್ಡ ಸವಾಲು, ಮಾಡಿಯೇ ತೀರುತ್ತೇನೆ’ ಎಂದು ನಿರ್ಧರಿಸಿದಳು.

ಈಕೆ ಡಾ. ಲೋರಿ ಮಾರ್ಕರ್. ಜಗತ್ತು ಇವಳನ್ನು ಚಿರತೆಯ ತಾಯಿ’ ಎಂದೇ ಪ್ರೀತಿಯಿಂದ ಕರೆದಿದೆ. ಚಿರತೆಗಳ ಬೇಟೆ, ಚಿರತೆಯ ಬೇಟೆ ಎರಡೂ ಸಮಸಮವಾಗಿತ್ತು. ಪರಿಣಾಮ ನಮೀಬಿಯದಲ್ಲಿ ಚಿರತೆಯ ಸಂತತಿ ಕುಗ್ಗಿ 1,500ಕ್ಕೆ ಇಳಿದಿತ್ತು. ಲೋರಿ ಇದನ್ನು ಗಂಭೀರವಾಗಿ ಪರಿಗಣಿಸಿದಳು. ಇಡೀ ಅಮೆರಿಕದ ಪ್ರಾಣಿ ಸಂಗ್ರಹಾಲಯಗಳ ಮುಖ್ಯಸ್ಥರುಗಳಿಗೆ ಬರೆದಳು. ಪಶು ಸಂಗೋಪನೆಯ ನಿರ್ದೇಶಕರ ಬೆನ್ನುಹತ್ತಿದಳು. ವನ್ಯಜೀವಿ ಸಂರಕ್ಷಣಾ ಸಂಸ್ಥೆಗಳನ್ನು ಗೋಗರೆದಳು. ಚಿಕ್ಕಾಸಿನ ಪ್ರಯೋಜನವೂ ಆಗಲಿಲ್ಲ. ಒಮ್ಮೆ 1990ರಲ್ಲಿ ನಮೀಬಿಯದ ಮೊದಲ ಅಧ್ಯಕ್ಷ ಸ್ಯಾಮ್‍ಜೋಮ ಅವರು ವಾಷಿಂಗ್‍ಟನ್‍ನ ಸಮಾರಂಭವೊಂದಕ್ಕೆ ಬಂದಾಗ, ಈಕೆ ಸೀದಾ ಅವರ ಬಳಿ ಹೋಗಿ, ಅವರ ಕೋಟಿಗೆ ಚಿನ್ನದಿಂದ ಮಾಡಿದ ಚಿರತೆಯ ಪುಟ್ಟ ಪಿನ್ನನ್ನು ಸಿಕ್ಕಿಸಿದಳು. ಅವರ ಪ್ರತಿಕ್ರಿಯೆಗೂ ಕಾಯದೆನಾನು ನಮೀಬಿಯಕ್ಕೆ ಹೊರಟಿದ್ದೇನೆ. ಚಿರತೆಗಳನ್ನು ಕೊಲ್ಲುವುದನ್ನು ತಪ್ಪಿಸಬೇಕು’ ಎಂದು ಹೇಳಿ ಹೊರಟೇಬಿಟ್ಟಳು. ಅಲ್ಲಿ ರೈತರೊಂದಿಗೆ, ಕುರಿಗಾಹಿಗಳೊಂದಿಗೆ ಮಾಡಿದ ಸಂಭಾಷಣೆಯ ತುಣುಕನ್ನೇ ನೀವು ಲೇಖನದ ಆರಂಭದಲ್ಲಿ ಓದಿದ್ದು.

ಲೆಪರ್ಡ್ ಮತ್ತು ಚೀತಾ ಬೇರೆ ಬೇರೆಯೆ?

ಲೋರಿ ಮಾಡಿದ ಸಾಹಸಯಾತ್ರೆಯ ಬಗ್ಗೆ ತಿಳಿಯುವ ಮೊದಲು ಚಿರತೆಗಳ ಬಗ್ಗೆ ಒಂದೆರಡು ಅಂಶಗಳನ್ನು ಗಮನಿಸಬೇಕು. ನಮಗೆ ಲೆಪರ್ಡ್ ಎಂದರೂ ಒಂದೇ, ಚೀತಾ ಎಂದರೂ ಒಂದೇ. ಅದು ಕನ್ನಡದಲ್ಲಿ ಚಿರತೆ ಅಷ್ಟೇ. ಆದರೆ ಇಂಗ್ಲಿಷ್‍ನಲ್ಲಿ ಚಿರತೆಗೆ ಬೇರೆ ಬೇರೆ ಹೆಸರಿದೆ. ಕಣ್ಣಿಂದ ಕರಿನೀರು ಹರಿದು ಬರುತ್ತಿದೆಯೋ ಎಂಬಂಥ ಚಹರೆ ಇರುವುದನ್ನು ಚೀತಾ ಎನ್ನುತ್ತಾರೆ. ಇನ್ನೊಂದು ಲೆಪರ್ಡ್. ಈ ಎರಡಕ್ಕೂ ಮೈಯೆಲ್ಲ ಚುಕ್ಕೆಗಳು ಇದ್ದರೂ ಲೆಪರ್ಡ್‍ಗೆ ಗುಲಾಬಿಯಂತೆ ಅರಳಿದ ಚುಕ್ಕೆ ಇರುತ್ತದೆ. ಚೀತಾಗೆ ದುಂಡು ಅಥವಾ ಬಾದಾಮಿ ಆಕೃತಿಯ ಚುಕ್ಕೆ ಇರುತ್ತದೆ. ಕಣ್ಣಿನ ಮೇಲೆ ಹೆಚ್ಚು ಬಿಸಿಲು ಬೀಳದಂತೆ ಬೆಳಕನ್ನು ಈ ಕರಿಸಾಲು ಹೀರಿಕೊಳ್ಳುತ್ತದೆ. ಇದು ಚೀತಾದ ವೈಶಿಷ್ಟ್ಯ. ಏಕೋ `ವಿಕಾಸದೇವ’ ಈ ವರವನ್ನು ಲೆಪರ್ಡ್‍ಗೆ ಕೊಟ್ಟಿಲ್ಲ.

ಭಾರತದಲ್ಲಿ ಲೆಪರ್ಡ್‍ಗಳು ದಂಡಿಯಾಗಿದೆ, ಚೀತಾಗಳಲ್ಲ. ಈ ಲೇಖನದಲ್ಲಿ ಮುಂದೆ ಪ್ರಸ್ತಾಪಿಸುವುದೆಲ್ಲ ಚೀತಾ ಬಗ್ಗೆ. ಅವನ್ನು ಸರಳವಾಗಿ `ಚಿರತೆ’ ಎಂದೇ ಕರೆಯೋಣ. 1947ರಲ್ಲಿ ಮಧ್ಯಪ್ರದೇಶದ ಛತ್ತೀಸ್‍ಗಡದಲ್ಲಿ ಚಿರತೆಯ ಕೊನೆಯ ಸಂತತಿ ನಾಶವಾಯಿತು. ಸರ್ಗುಜಾ ರಾಜ್ಯದ ಆಗಿನ ಮಹಾರಾಜ ರಾಮಾನುಜ ಪ್ರತಾಪಸಿಂಗ್ ಕೊನೆಯ ಚಿರತೆಗೆ ಗುಂಡಿಟ್ಟು ಖುಷಿಪಟ್ಟ. ಮೊಘಲರು, ರಜಪೂತರು, ಮರಾಠರು ಅನಂತರ ಬ್ರಿಟಿಷ್ ದೌಲತ್ತುಗಾರರು ಚಿರತೆಯ ವಂಶವನ್ನು ಮುಗಿಸುತ್ತಲೇ ಹೋದರು. ಅಕ್ಬರ್ ಚಕ್ರವರ್ತಿ, ಜಿಂಕೆಗಳನ್ನು ಬೇಟೆಯಾಡಲೆಂದೇ ಒಂದು ಸಾವಿರ ಚಿರತೆಗಳನ್ನು ಸಾಕಿದ್ದನಂತೆ. ಅವುಗಳನ್ನು ಅತಿಯಾಗಿ ಹಿಡಿದು ಅವುಗಳ ವಂಶ ನಷ್ಟಮಾಡಿದ ಕುಖ್ಯಾತಿಯೂ ಅವನಿಗೇ ಸೇರಬೇಕು.

ಈಗ ಲೋರಿಯ ಸಾಹಸಕ್ಕೆ ಹಿಂತಿರುಗೋಣ. ಏಕೆ ಈಕೆಗೆ ಚಿರತೆಯ ಮೇಲೆ ಇಂಥ ಪ್ರೀತಿ. ಕಾರಣ ಇರಬೇಕಲ್ಲ. ಮೂಲತಃ ಕುದುರೆ ಸಾಕುವ ಕುಟುಂಬ ಅದು. ಕ್ಲಬ್ ಕೂಡ ನಡೆಸುತ್ತಿದ್ದರು. ಮತ್ತೆ ವೈನ್ ತಯಾರಿಕೆಗೆ ಲೋರಿ ನೆರವಾಗುತ್ತಿದ್ದಳು. ಅಮೆರಿಕದ ಡೆಟ್ರಾಯಿಟ್‍ನಲ್ಲಿ ಹುಟ್ಟಿದ ಲೋರಿ ತಂದೆ, ತಾಯಿಯೊಡನೆ ದಕ್ಷಿಣ ಕ್ಯಾಲಿಫೋರ್ನಿಯಕ್ಕೆ ಬಂದು ನೆಲೆನಿಂತಳು. ಮುಂದೆ ಪ್ರಾಣಿ ವಿಜ್ಞಾನವನ್ನು ಓದಿ ಡಿಗ್ರಿ ಪಡೆದಳು. ಆಕೆ ಪಶುವೈದ್ಯಳಾಗಬೇಕೆಂದು ಬಯಸಿದ್ದಳು. ಒರೆಗಾನ್ ವೈಲ್ಡ್ ಲೈಫ್ ಸಫಾರಿಯಲ್ಲಿ ಆಕೆಯ ಮನೋಭಿಲಾಷೆ ನೆರವೇರಿತು. ಅಲ್ಲಿ, ಸೆರೆಹಿಡಿದ ಅನೇಕ ಮೃಗಗಳಿಗೆ ಅಭಯ ಕೊಡಬೇಕಾಗಿತ್ತು. ಲೋರಿಗೆ ಚಿರತೆಗಳ ಸಹಜ ಬದುಕು ಅಂದರೆ ಬೇಟೆಯಾಡಿಯೇ ಆಹಾರ ಸಂಪಾದಿಸುವುದನ್ನು ರೂಢಿಮಾಡಲು ಹಂಬಲಿಸಿದಳು. ಏಕೆಂದರೆ ಸೆರೆಯಲ್ಲಿದ್ದ ಬಹುತೇಕ ಚಿರತೆಗಳು ತಮ್ಮ ಮೂಲ ಗುಣವನ್ನೇ ಮರೆತುಬಿಟ್ಟಿದ್ದವು. ಆಗ ಹುಟ್ಟಿದ ಚಿರತೆ ಮರಿಯೊಂದಕ್ಕೆ `ಕಯಾಮ್’ ಎಂದು ಹೆಸರಿಟ್ಟಳು. ಆ ಪುಟ್ಟ ಮರಿಯನ್ನು ನಮೀಬಿಯಕ್ಕೆ ಒಯ್ಯುತ್ತಿದ್ದಳು. ಕಾಡಿನಲ್ಲಿ ಅದು ಬೇಟೆಯನ್ನು ರೂಢಿ ಮಾಡಿಕೊಂಡಿತ್ತು. ಮತ್ತೆ ಇವಳು ಕರೆದಾಗ ಓಡೋಡಿ ಬರುತ್ತಿತ್ತು.

ಲೋರಿ ಹೇಳುತ್ತಾಳೆ: ಚಿರತೆಗಳು ವಿಶೇಷ ಬೆಕ್ಕುಗಳೇ. ನೆಲವಾಸಿ ಜೀವಿಗಳಲ್ಲಿ ಇವುಗಳಿಗಿಂತ ಅಧಿಕವಾಗಿ ಓಡುವ ಪ್ರಾಣಿಗಳು ಬೇರಿಲ್ಲ. ಗಂಟೆಗೆ 70 ಕಿಲೋ ಮೀಟರ್ ವೇಗ. ಹೀಗಾಗಿಯೇ ಸುಲಭವಾಗಿ ಬೇಟೆಯಾಡಬಲ್ಲವು. ನೆಲ ಕೆರೆಯುತ್ತವೆ, ತಮ್ಮದೇ ಆದ ಸ್ವರ ಹೊರಡಿಸುತ್ತವೆ. ನಾಯಿಯಂತೆ ಬೊಗಳುತ್ತವೆ. ಹಕ್ಕಿಗಳ ಉಲಿಯನ್ನೂ ಹೊರಡಿಸಬಲ್ಲವು. ಅವಕ್ಕೆ ದೂರದೃಷ್ಟಿ ಹೆಚ್ಚು. ಹುಲ್ಲುಗಾವಲಾಗಿದ್ದರೆ ಒಂದು ಕಿಲೋ ಮೀಟರ್ ದೂರದಿಂದಲೇ ಬೇಟೆಯನ್ನು ಗುರುತಿಸಬಲ್ಲವು. ಇವಕ್ಕಿಂತ ಚುರುಕು ಪ್ರಾಣಿಯನ್ನು ನಾನು ನೋಡಿಲ್ಲ. ಬಹುಶಃ 50 ಲಕ್ಷ ವರ್ಷಗಳಿಂದ ಅವು ನಮ್ಮೊಂದಿಗೆ ಇವೆ. ನನಗೆ ಚಿರತೆ ಎಂದರೆ ಅದೇ ಒಂದು ಅದ್ಭುತ ಪ್ರಪಂಚ. ಅದಲ್ಲದೆ ನನಗೆ ಬೇರೆ ಪ್ರಪಂಚವೇ ಇಲ್ಲ.

ಇನ್ನು ನಿಮ್ಮ ಕುರಿ-ಮೇಕೆಗಳು ಸುರಕ್ಷಿತ

ಇಷ್ಟು ಚಿರತೆಯ ಪ್ರೀತಿ ಬೆಳೆಸಿಕೊಂಡವಳು ಮತ್ತೆ ನಮೀಬಿಯಕ್ಕೆ ಹೊರಟಳು. ಅದೇ ರೈತರು, ಕುರಿಗಾಹಿಗಳನ್ನು ಭೇಟಿಯಾಗಿ ನಿಮ್ಮ ಸಮಸ್ಯೆಗೆ ಪರಿಹಾರ ತಂದಿದ್ದೇನೆ’ ಎಂದಾಗ, ಎಲ್ಲರೂ ಕಾತರವಾಗಿ ಅವಳ ಮುಖವನ್ನು ನೋಡುವವರೇ. ವಾಸ್ತವವಾಗಿ ಅವಳನ್ನು ಜನ ಮರೆತೇಬಿಟ್ಟಿದ್ದರು. ಹಿಂತಿರುಗುತ್ತಾಳೆಂಬುದನ್ನು ಎಣಿಸಿಯೇ ಇರಲಿಲ್ಲ.ನಿಮ್ಮ ಕುರಿ, ಮೇಕೆ ಕಾಯಲು ಹೊಸ ನಾಯಿ ತಳಿಯನ್ನು ತಂದಿದ್ದೇನೆ’ ಎಂದು ಮುದ್ದಾದ ನಾಯಿ ಮರಿಯನ್ನು ತೋರಿಸಿದಳು. ಇದಕ್ಕೆ ಚಿರತೆ ಎದುರಿಸುವ ಶಕ್ತಿ ಇದೆಯೇ’ ಎಂದು ಜನ ಅನುಮಾನ ಪಟ್ಟಾಗ `ಇದನ್ನು ನಿಮ್ಮಲ್ಲೇ ಬಿಟ್ಟುಹೋಗುತ್ತೇನೆ. ನೀವೇ ಪರೀಕ್ಷಿಸಿ’ ಎಂದಳು. ರೈತರು ನಮ್ಮ ಕೈಲಿ ಕಾಸಿಲ್ಲ ಎಂದು ಕೈಯಾಡಿಸಿದರು. ಲೋರಿ ಪರವಾಗಿಲ್ಲ, ಇವು ನಿಮ್ಮ ಕುರಿ, ಮೇಕೆ ಉಳಿಸುತ್ತವೆ’ ಎಂದು ತಂದಿದ್ದ ಇನ್ನೊಂದಷ್ಟು ತಳಿಗಳನ್ನು ತೋರಿಸಿದಳು. ಅವು ಬೆಳೆಯುತ್ತ ಭರ್ಜರಿ ಕಾವಲು ನಾಯಿಗಳಾಗಿ ಕುರಿ, ಮೇಕೆಗಳನ್ನು ಕಾಯತೊಡಗಿದವು. ಅವು ಬೊಗಳಿದುವೆಂದರೆ ಚಿರತೆಗಳೂ ಹೆದರಿ ಪರಾರಿಯಾಗುತ್ತಿದ್ದವು; ಮತ್ತೆ ಅತ್ತ ಸುಳಿಯುತ್ತಿರಲಿಲ್ಲ. ಇವು ವಿಶೇಷ ಜಾತಿಯ ನಾಯಿ. ಅನಟೋಲಿಯನ್ ಶೆಫರ್ಡ್, ಟರ್ಕಿಯಲ್ಲಿ ಈ ಜಾತಿಯ ನಾಯಿಗಳನ್ನು ಕಳೆದ 5,000 ವರ್ಷಗಳಿಂದ ದನ ಕಾಯುವವರು ಸಾಕುತ್ತಿದ್ದರಂತೆ. ಮುಂದೆ ಈ ತಳಿಯನ್ನು ತಜ್ಞರು ಉಳಿಸಿಕೊಂಡರು.

1994ರಲ್ಲಿ ನಮೀಬಿಯದಲ್ಲಿ ಈ ನಾಯಿಗಳಿಗೆ ಎಷ್ಟು ಬೇಡಿಕೆ ಬಂತೆಂದರೆ ಲೋರಿ 650 ಮರಿಗಳನ್ನು ರೈತರಿಗೆ ಹಂಚಿದಳು. ಕೊನೆಗೆ ರೈತರು ವೇಟಿಂಗ್ ಲಿಸ್ಟ್‍ನಲ್ಲಿ ಇರಬೇಕಾಯಿತು. ರೈತಾಪಿ ವರ್ಗದಲ್ಲಿ ಲೋರಿ ಆಶಾಕಿರಣವಾಗಿ ಬಂದಿದ್ದಳು. ಬರುಬರುತ್ತ `ನಮ್ಮ ರಾಸುಗಳು ಸತ್ತವು’ ಎನ್ನುವ ವರದಿಗಳು ಹೆಚ್ಚು ಕಡಿಮೆ ನಿಂತೇಹೋದವು. ಇನ್ನು ಬಂಧನದಲ್ಲಿಟ್ಟ ಚಿರತೆಗಳನ್ನು ನೋಡಿಕೊಳ್ಳುವುದು ಹೇಗೆ? ಲೋರಿಯ ಚಿಂತನೆ ಇದು. ತನ್ನ ಆಸ್ತಿಪಾಸ್ತಿಯನ್ನೆಲ್ಲ ಮಾರಿಬಿಟ್ಟಳು. ನಮೀಬಿಯ ಸರ್ಕಾರಕ್ಕೆ ಒಪ್ಪಿಸಿಬಿಟ್ಟಳು. ಸರ್ಕಾರ 1,65,000 ಎಕರೆ ಜಾಗವನ್ನು ಮಂಜೂರು ಮಾಡಿತು. ಅಲ್ಲಿ ಚಿರತೆಗಳಿಗಷ್ಟೇ ಅಲ್ಲ, ಹಸು, ಕುರಿ, ಮೇಕೆಗಳಿಗೂ ಜಾಗಕೊಟ್ಟಳು. “ಚೀತಾ ಕನ್ಸರ್‍ವೆಶನ್ ಫಂಡ್" ಎಂಬ ಸಂಸ್ಥೆ ಪ್ರಾರಂಭಿಸಿದಳು. ನಮೀಬಿಯ ಚಿರತೆಗಳ ರಾಜಧಾನಿ ಎನಿಸಿತು. ಜಗತ್ತಿನ ಗಮನ ಸೆಳೆಯಿತು. ಆ ನೈಸರ್ಗಿಕ ತಾಣದಲ್ಲೇ ಸಂದರ್ಶಕರಿಗಾಗಿ ಗೆಸ್ಟ್ ಹೌಸ್ ಇದೆ. ವನ್ಯಜೀವಿಗಳ ಅಧ್ಯಯನ ಕೇಂದ್ರವಿದೆ. ಚಿರತೆಯ ಮ್ಯೂಸಿಯಂ ಇದೆ. ಜೆನೆಟಿಕ್ಸ್ ಲ್ಯಾಬ್ ಇದೆ. ವೆಟರ್ನರಿ ಆಸ್ಪತ್ರೆ ಇದೆ. ಚಿರತೆಯನ್ನು ನೋಡಬೇಕೆಂದರೆ ಆಯಕಟ್ಟಿನ ಸ್ಥಳಗಳಲ್ಲಿ ವಿಶೇಷ ಅನುಕೂಲ ಕಲ್ಪಿಸಲಾಗಿದೆ. ಜೈವಿಕ ತಂತ್ರಜ್ಞಾನದ ಪ್ರದರ್ಶನ ಕೇಂದ್ರವಿದೆ. 90 ಮಂದಿ ತಜ್ಞರು ಮತ್ತು ಸಿಬ್ಬಂದಿ ಅಲ್ಲಿ ಚಿರತೆಗಳ ರಕ್ಷಣೆಗಾಗಿ ದುಡಿಯುತ್ತಿದ್ದಾರೆ. ಈಗ ಅದು ಅಂತಾರಾಷ್ಟ್ರೀಯ ಖ್ಯಾತಿಯ ಸಫಾರಿ ಕೇಂದ್ರವೂ ಹೌದು. ಅನಟೋಲಿಯನ್ ಶೆಪರ್ಡ್ ನಾಯಿಗಳನ್ನು ಬೆಳೆಸಲು ಪ್ರತ್ಯೇಕ ವ್ಯವಸ್ಥೆ ಇದೆ. ಚಿರತೆಗಳು ದಾಳಿಮಾಡುತ್ತಿವೆ ಎಂದು ಎಲ್ಲಿಂದಲಾದರೂ ದೂರು ಬಂದರೆ, ಲೋರಿ ಕೈ ಮುಂದು ಮಾಡಿ ನಾಯಿಮರಿಯನ್ನು ಕೊಡುತ್ತಾಳೆ. ಚಿರತೆಗಳ ಆರೋಗ್ಯವನ್ನು ತಪಾಸಣೆ ಮಾಡಲು ಪ್ರತಿವರ್ಷವೂ ದಕ್ಷಿಣ ಆಫ್ರಿಕ, ಯುನೈಟೆಡ್ ಕಿಂಗ್‍ಡಂ, ಅಮೆರಿಕದಿಂದ ತಜ್ಞರು ಬರುತ್ತಾರೆ. ಲಸಿಕೆ ಕಾರ್ಯಕ್ರಮವಿದೆ.

ಸೋಮಾಲಿ ಲ್ಯಾಂಡ್‍ನ ಸರ್ಕಾರ `ತಾಯಿ, ನೀನು ನಮ್ಮ ಚಿರತೆಗಳಿಗೂ ತಾಯಿಯಾಗಬೇಕು’ ಎಂದಾಗ, ಲೋರಿ ಕ್ಷಣಮಾತ್ರವೂ ಯೋಚಿಸದೆ ಹೊರಟೇಬಿಟ್ಟಳು. ಅಲ್ಲಿ ಯೆಮನ್‍ಗೆ ರವಾನೆಯಾಗುತ್ತಿದ್ದ ಚಿರತೆ ಮರಿಗಳನ್ನು ರಕ್ಷಿಸಿ ಸಂರಕ್ಷಣಾತಾಣಕ್ಕೆ ಬಿಟ್ಟಳು. ಆಕೆ ಅಷ್ಟಕ್ಕೇ ತನ್ನ ಯೋಜನೆಯನ್ನು ಮೊಟಕುಗೊಳಿಸಲಿಲ್ಲ. ಒಂದಷ್ಟು ಚಿರತೆಗಳನ್ನು ಸಫಾರಿಯಿಂದ ಹೊರತಂದು ಅವುಗಳಿಗೆ ಕಾಲರ್‍ಕಟ್ಟಿ ಮತ್ತೆ ಕಾಡಿಗೆ ಬಿಟ್ಟಳು. ಅವು ಸಹಜವಾಗಿ ಬೇಟೆಯಾಡಿ, ಆಹಾರ ಸಂಪಾದಿಸಲಿ ಎಂಬ ಉದ್ದೇಶ ಅವಳದು. ಅವುಗಳ ಗತಿ ಏನಾಗಿದೆ ಎಂದು ತಿಳಿಯಲು ಉಪಗ್ರಹದ ಮೂಲಕ ಅವುಗಳ ಚಲನ, ವಲನಗಳ ಮೇಲೆ ಕಣ್ಣಿಡುವ ಏರ್ಪಾಟನ್ನೂ ಮಾಡಿದ್ದಾಳೆ. ನಮೀಬಿಯ ಸರ್ಕಾರ ವರ್ಷಕ್ಕೆ 20 ಲಕ್ಷ ಡಾಲರ್ ಅನುದಾನವನ್ನು ಈ ಸಫಾರಿಗೆ ಕೊಡುತ್ತಿದೆ. ಈಗ ಅದು ಪ್ರವಾಸಿ ತಾಣವಾಗಿ ಬೆಳೆದಿದೆ.

ಭಾರತಕ್ಕೆ ಕಿವಿ ಮಾತು

ಲೋರಿಯನ್ನು ಹೇಗೆ ಸಂಬೋಧಿಸುವುದು? ಆಕೆ ಸಂಶೋಧನೆ ಮಾಡುವ ವಿಜ್ಞಾನಿ. ಸಂರಕ್ಷಣ ತಜ್ಞೆ. ಆಕ್ಸ್‍ಫರ್ಡ್‍ನಲ್ಲಿ ತರಪೇತಿ ಪಡೆದ ಪ್ರಾಣಿ ವಿಜ್ಞಾನಿ. ಲೇಖಕಿ. ಚಿರತೆಯ ಡಾಕ್ಟರ್. ಮೇಕೆ ಸಾಕುವಾಕೆ. ನಾಯಿ ತಳಿಗಳನ್ನು ಎಬ್ಬಿಸುವ ನಿಪುಣೆ. ಪಶು ಸಂಗೋಪನೆಯಲ್ಲಿ ನುರಿತವಳು. ಶಿಕ್ಷಣ ತಜ್ಞೆ. ಸಾರ್ವಜನಿಕ ಉಪನ್ಯಾಸಕಿ. ಸರ್ಕಾರಕ್ಕೆ ನೀತಿರೂಪಿಸುವ ವಿ.ಐ.ಪಿ. ಈ ಎಲ್ಲವನ್ನೂ ನಗುನಗುತ್ತಲೇ ನಿಭಾಯಿಸುತ್ತಾಳೆ. ಅವಳಿಗಿರುವ ಒಂದೇ ಕೊರಗೆಂದರೆ ಚಿರತೆಗಳಲ್ಲಿ ವೈವಿಧ್ಯವಿಲ್ಲ. 10,000 ವರ್ಷಗಳ ಹಿಂದೆ ಹಿಮ ಯುಗದಲ್ಲಿ ಬದುಕುಳಿದ 10 ಚಿರತೆಗಳಿಂದ ಈ ಮಟ್ಟಕ್ಕೆ ಇವು ವೃದ್ಧಿಸಿದವು ಅಂದರೆ `ಜೀನ್ ಪೂಲ್’ ತುಂಬ ಸೀಮಿತವಾದ್ದು. ಹಾಗಿದ್ದಾಗ, ಇವುಗಳ ವಂಶನಷ್ಟ ಬಹುಬೇಗ ಆಗುತ್ತದೆ. ಈ ಕುರಿತು ಆಕೆ ಹೆಚ್ಚು ಪ್ರಚಾರ ಕೊಡುತ್ತಾಳೆ. ಉದ್ದೇಶ ಚಿರತೆ ಸಂತತಿ ಉಳಿಯಲಿ ಎಂದು. ಅಫ್ರಿಕ ಖಂಡದಲ್ಲಿ ಯಾವುದೋ ಚಿರತೆಗೆ, ಎಲ್ಲೋ ಗಾಯವಾಗಿದೆ ಎಂದು ಗೊತ್ತಾದರೆ ಸಾಕು, ಆಕೆ ಪ್ರಶಸ್ತಿ ಕಾರ್ಯಕ್ರಮವಾದರೂ ಸರಿಯೇ, ಬಿಟ್ಟು ದೌಡಾಯಿಸುತ್ತಾಳೆ.

ಇದೇ ಸಂದರ್ಭದಲ್ಲಿ ಇನ್ನೊಂದು ಸಂಗತಿಯೂ ಗಮನಿಸುವಂತದ್ದು. ಚಿರತೆಯನ್ನು (ಚೀತಾ) ಸಂಪೂರ್ಣವಾಗಿ ವಂಶನಷ್ಟಕ್ಕೆ ತಳ್ಳಿದ ಭಾರತ, ಈಗ ಅವನ್ನು ಮತ್ತೆ ನಮ್ಮ ಪರಿಸರಕ್ಕೆ ತರಲು ಹೋರಾಡುತ್ತಿದೆ. `ನ್ಯಾಷನಲ್ ಟೈಗರ್ ಕನ್ಸರ್‍ವೇಶನ್ ಅಥಾರಿಟಿ’ (ಓಖಿಅಂ) ಸರ್ಕಾರದ ಗಮನ ಸೆಳೆದು, ವಿದೇಶಗಳಿಂದ ಚಿರತೆ ತರಬೇಕೆಂದು ಸಲಹೆ ನೀಡಿದಾಗ, ಸರ್ಕಾರ ಅದನ್ನು ಗಂಭೀರವಾಗಿ ತೆಗೆದುಕೊಂಡಿತು. ಸುಪ್ರೀಂಕೋರ್ಟಿನ ಮೇಲ್ವಿಚಾರಣೆಯಲ್ಲಿ ಇದು ನಡೆಯಬೇಕೆಂಬ ಆದೇಶ ಕೂಡ ಬಂತು. ಭಾರತವು ಮೊದಲು ಇರಾನ್ ದೇಶವನ್ನು ಸಂಪರ್ಕಿಸಿತು. ಆ ದೇಶ ಈ ವಿಚಾರವಾಗಿ ಕೈ ಜೋಡಿಸಲಿಲ್ಲ. ಇದ್ದದ್ದು ಒಂದೇ ದಾರಿ. ನಮೀಬಿಯ ದೇಶವನ್ನು ಸಂಪರ್ಕಿಸುವುದು. ಅಂದರೆ ಸರ್ಕಾರದ ಮೂಲಕ, ಲೋರಿ ಸ್ಥಾಪಿಸಿದ “ಚೀತಾ ಕನ್ಸರ್‍ವೇಶನ್ ಫಂಡ್” ನೆರವು ಕೋರುವುದು. ಲೋರಿ ಮತ್ತು ಆಡಳಿತಾಧಿಕಾರಿಗಳು ಒಪ್ಪಿಗೆ ನೀಡಿದರು. ಆಕೆ ಭಾರತಕ್ಕೂ ಬಂದುಹೋದಳು. ವನ್ಯಜೀವಿ ತಜ್ಞರೊಡನೆ ದೀರ್ಘ ಸಮಾಲೋಚನೆ ಮಾಡಿದಳು. ಚಿರತೆಗಳು ಪರಿಸರಕ್ಕೆ ಬೇಗ ಹೊಂದಿಕೊಳ್ಳುತ್ತವೆ. ಆದರೆ ಒಂದೇ ಬಾರಿಗೆ ಎಲ್ಲವನ್ನೂ ಕಾಡಿಗೆ ಬಿಡಬೇಡಿ ಎಂಬ ಕಿವಿಮಾತನ್ನು ಹೇಳಿದಳು. ಅವುಗಳ ಮೇಲೆ ಹೇಗೆ ನಿಗಾ ಇಡಬೇಕೆಂಬ ಗುಟ್ಟನ್ನು ಹೇಳಿದಳು. ಆಕೆ ಭಾರತಕ್ಕೆ ಭೇಟಿಮಾಡಿದ್ದು 2009ರಲ್ಲಿ. ಈಗ ನಮೀಬಿಯದಿಂದ ಹತ್ತು ಚಿರತೆಗಳು (ಚೀತಾ) ಇದೇ ಅಕ್ಟೋಬರ್‍ನಲ್ಲಿ ಭಾರತಕ್ಕೆ ಬರಲಿವೆ. ಇವನ್ನು ಸೂಕ್ತ ಪರಿಸರವಿರುವ ಮಧ್ಯಪ್ರದೇಶದ `ಕುನೋ ರಾಷ್ಟ್ರೀಯ ಉದ್ಯಾನವನ’ಕ್ಕೆ ಬಿಡಲಾಗುತ್ತದೆ.

ಲೋರಿಯ ಈ ಅಪ್ರತಿಮ ಸಾಧನೆಯನ್ನು ಜಗತ್ತೇ ಕೊಂಡಾಡುತ್ತಿದೆ. ಚಿರತೆಯ ಬಗ್ಗೆ ಅಥಾರಿಟಿ ಯಾರು ಎಂದು ಕೇಳಿದರೆ, ನಾಲಗೆಯ ತುದಿಯಲ್ಲೇ ಇರುವ ಹೆಸರು ಲೋರಿ ಮಾರ್ಕರ್’. ಸಹಜವಾಗಿಯೇ ಅನೇಕ ಉನ್ನತ ಮಟ್ಟದ ಪ್ರಶಸ್ತಿಗಳು ಅವರಿಗೆ ಸಂದಿವೆ. 1988ರಲ್ಲೇ ಒರೆಗಾನ್‍ನ ಮೊದಲ ಹತ್ತು ಸಾಧಕಿಯರ ಪಟ್ಟಿಯಲ್ಲಿ ಈಕೆಯ ಹೆಸರಿತ್ತು. 1992ರಲ್ಲಿ ಆಫ್ರಿಕದ ಸಫಾರಿ ಕ್ಲಬ್ ಪ್ರಶಸ್ತಿ ನೀಡಿತು. 2020ರಲ್ಲಿ ಅಮೆರಿಕದ ಅಧ್ಯಕ್ಷರಿಂದ `ಎಕ್ಸ್‍ಪ್ಲೋರೇಷನ್ ಕ್ಲಬ್ ಪ್ರಶಸ್ತಿಗೆ ಭಾಜನಳಾದಳು. ಈಕೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ 43ಕ್ಕಿಂತಲೂ ಹೆಚ್ಚು ಪ್ರಶಸ್ತಿಗಳು ಅರಸಿ ಬಂದಿವೆ. ಈಕೆ ತನಗೆ ಬಂದ ಗೌರವಧನವನ್ನೆಲ್ಲ ಚಿರತೆಗಳ ಸಂರಕ್ಷಣೆಗೆ ವ್ಯಯಿಸುತ್ತಿದ್ದಾಳೆ. ಡಿಸೆಂಬರ್ 4, ಪ್ರತಿವರ್ಷವೂ “ಅಂತಾರಾಷ್ಟ್ರೀಯ ಚಿರತೆ ದಿನ” ಎಂದು ಆಚರಿಸುವುದರ ಹಿಂದೆ ಈಕೆಯದೇ ಪ್ರಯತ್ನವಿದೆ. ಆ ದಿನ ಕಯಾಮ್ ಎಂಬ ಚಿರತೆ ಮರಿ ಹುಟ್ಟಿದ ದಿನವಂತೆ.

ಈಗ ಹೇಳಿ ಲೋರಿಯ ದಿಟ್ಟ ನಿಲುವು, ಅರ್ಪಣಾ ಮನೋಭಾವ, ಚಿರತೆ ಸಂರಕ್ಷಣೆಗೆತೋರಿದ ವಿಶೇಷ ಆಸಕ್ತಿಯಲ್ಲಿ ಅವಳಿಗೆ ಸರಿಗಟ್ಟುವವರು ಯಾರಿದ್ದಾರೆ? ಹೀಗಾಗಿಯೇ ಲೋರಿ ಚಿರತೆಗಳಿಗೆ ದೊರೆತ ಮಾತೆ.

-ಟಿ.ಅರ್. ಅನಂತರಾಮು

(ಟಿ.ಅರ್. ಅನಂತರಾಮು, ನಂ. 534, 70ನೇ ಅಡ್ಡರಸ್ತೆ, 14ನೇ ಮುಖ್ಯರಸ್ತೆ, ಕುಮಾರಸ್ವಾಮಿ ಬಡಾವಣೆ 1ನೇ ಹಂತ, ಬೆಂಗಳೂರು-560111, ಮೊ: 98863 56085)

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *