ಸ್ತ್ರೀ ಎಂದರೆ ಅಷ್ಟೇ ಸಾಕೆ? / ಆಕಾಶವನ್ನು ಜಾಲಾಡಿದ ಕೆರೋಲಿನ್ ಹರ್ಷಲ್- ಟಿ.ಆರ್. ಅನಂತರಾಮು
ಚಿಕ್ಕಂದಿನಿಂದಲೂ ಆಕಾಶದತ್ತ ಕಣ್ಣು ನೆಟ್ಟ ಕೆರೋಲಿನ್ ನಕ್ಷತ್ರಗಳನ್ನು ಎಣಿಸುತ್ತ ಹೋದಳು; ಧೂಮಕೇತುಗಳನ್ನು ಪತ್ತೆ ಮಾಡಿದಳು; ನೀಹಾರಿಕೆಗಳನ್ನು ಗುರುತಿಸಿದಳು. ಖಗೋಳ ವಿಜ್ಞಾನಕ್ಕೆ ನೀಡಿದ ಕೊಡುಗೆಗೆ ಚಿನ್ನದ ಪದಕದ ಮನ್ನಣೆ ಪಡೆದಳು. ಇಂಥ ಸಂಶೋಧನೆ ಮಾಡಿದ ಮೊದಲ ಮಹಿಳೆ ಎನಿಸಿದಳು. ಅವಳ ಸಮಾಧಿಯ ಮೇಲೆ, `ಇಲ್ಲಿ ಚಿರನಿದ್ರೆಯಲ್ಲಿರುವ ಕೆರೋಲಿನ್ ಹರ್ಷಲ್ ಕಣ್ಣುಗಳು ಸದಾ ಆಕಾಶದ ಕಡೆಗೆ ನೆಟ್ಟಿದ್ದವು’ ಎಂದು ಕೆತ್ತಲಾಗಿದೆ. ಅರ್ಜೆಂಟೈನ ಇನ್ನೂ ಒಂದು ಹೆಜ್ಜೆ ಮುಂದೆಹೋಗಿ 2020ರಲ್ಲಿ
`ಕೆರೋಲಿನ್’ ಎಂಬ ಉಪಗ್ರಹವನ್ನು ಆಕೆಯ ಹೆಸರಲ್ಲಿ ಕರೆದು ಕಕ್ಷೆಗೆ ಸೇರಿಸಿತು.
“ಗಮನವಿಟ್ಟು ಕೇಳು, ನೀನು ಹುಡುಗಿಯಾಗಿ ತೆಪ್ಪಗೆ ಮನೆಯಲ್ಲಿರುವುದೇ ಸರಿ. ಹುಡುಗರೊಡನೆ ಪೈಪೋಟಿ ಏಕೆ? ಶಿಕ್ಷಣ ಹೆಣ್ಣುಮಕ್ಕಳಿಗಲ್ಲ. ಕಾಲ ಕಳೆಯಬೇಕೆಂದರೆ ಮನೆಯಲ್ಲೇ ದಂಡಿಯಾಗಿ ಕೆಲಸವಿರುತ್ತದಲ್ಲ." ಈ ಮಾತು ಉತ್ಸಾಹದಿಂದ ಪುಟಿಯುತ್ತಿದ್ದ ಕೆರೋಲಿನ್‍ಗೆ ಸೂಜಿ ಚುಚ್ಚಿದಂತಾಯಿತು.
“ನಾನು ಅಡುಗೆಮನೆಗೆ ಸೀಮಿತವಾಗಬೇಕೆ? ನನಗೂ ಓದುವ ಆಸೆ ಇದೆ” ಎಂದು ಆಕೆ ಕೇಳುವ ಧೈರ್ಯ ಮಾಡಲಿಲ್ಲ. ಬದಲು ಮನಸ್ಸಿನಲ್ಲಿಯೇ ಗುನುಗಿಕೊಂಡಳು. ಆಕೆ ಅಸಹಾಯಕ ಹುಡುಗಿ. “ಮನೆಯಲ್ಲೇ ಬಿದ್ದಿರು" ಎಂದದ್ದು ಅಪ್ಪನಲ್ಲ, ಅವಳ ಅಮ್ಮ. ಕೆರೋಲಿನ್‍ಗೆ ಹೆಚ್ಚು ನೋವು ಕೊಟ್ಟಿದ್ದು ಈ ಸಂಗತಿ.
ಆಗ ಜಗತ್ತು ಇದ್ದದ್ದು ಹೀಗೆಯೇ. ಜರ್ಮನಿಯಿಂದ ಹಿಡಿದು ಇಂಗ್ಲೆಂಡ್‍ವರೆಗೆ, ಫ್ರಾನ್ಸ್‍ನಿಂದ ಹಿಡಿದು ರಷ್ಯದವರೆಗೆ ಹದಿನೆಂಟನೆಯ ಶತಮಾನದಲ್ಲಿ ಹೆಣ್ಣುಮಕ್ಕಳ ಶಿಕ್ಷಣ ಎಂದರೆ ಸಮಾಜವೇ ಕಿಗ್ಗಣ್ಣಿನಿಂದ ನೋಡುತ್ತಿತ್ತು. ಆದರೆ ಕೆರೋಲಿನ್ ಅಪ್ಪನಿಗೆ ಇದೇಕೋ ಸರಿಯಲ್ಲ ಅನ್ನಿಸಿತು. ಜರ್ಮನಿಯ ಹ್ಯಾನೋವರ್‍ನಲ್ಲಿ ಆತ ಕಾವಲು ಪಡೆಯಲ್ಲಿ ಬ್ಯಾಂಡ್ ಮಾಸ್ಟರ್. ಸಮಯ ಸಿಕ್ಕಾಗ ವಿಶೇಷವಾಗಿ, ತನ್ನ ಹೆಂಡತಿ ಆಚೀಚೆ ಹೋದಾಗ ಕೆರೋಲಿನ್‍ಳನ್ನು ಕರೆದು
“ಬಾ ಪುಟ್ಟಿ, ನೀನು ಒಂದಿಷ್ಟು ವಿದ್ಯೆ ಕಲಿ” ಎಂದು ಪುಸಲಾಯಿಸುತ್ತಿದ್ದ. ಅವಳಿಗೆ ಅದೊಂದು ಸ್ವರ್ಗ ಸುಖ. ಪಾತ್ರೆ ತೊಳೆಯುವುದನ್ನು ಹಾಗೆಯೇ ಬಿಟ್ಟು ಓಡೋಡಿ ಬಂದು ಸಹೋದರರನ್ನು ಕೂಡಿಕೊಳ್ಳುತ್ತಿದ್ದಳು. ಇವಳು ಐದು ವರ್ಷದವಳಿದ್ದಾಗ ಅಕ್ಕ ಸೋಫಿಯಾ ಮದುವೆಯಾಗಿ ಹೋಗಿಬಿಟ್ಟಳು. ಉಳಿದವರು ವಿಲಿಯಂ ಹರ್ಷಲ್ ಮತ್ತು ಅಲೆಕ್ಸಾಂಡರ್ ಹರ್ಷಲ್. ವಿಲಿಯಂಗೆ ಕೆರೋಲಿನ್ ಕಂಡರೆ ಗಾಢ ಪ್ರೀತಿಯೂ ಇರಲಿಲ್ಲ, ತಿರಸ್ಕಾರವೂ ಇರಲಿಲ್ಲ. ಆದರೆ ಅವಳನ್ನೇನೂ ಕಡೆಗಣಿಸಿರಲಿಲ್ಲ. 1731ರಲ್ಲಿ ಅಪ್ಪ ಐಸಾಕ್ ಹರ್ಷಲ್ ಆಸ್ಟ್ರೀಯನ್ ಯುದ್ಧದಲ್ಲಿ ಪಾಲ್ಗೊಂಡ. ಬಂದಾಗ ಅಸ್ತಮಾ ಅಂಟಿಕೊಂಡಿತ್ತು. ಕೆಮ್ಮಿ, ಕೆಮ್ಮಿ ಕೊನೆಯುಸಿರೆಳೆದ. ಕುಟುಂಬ ಕಂಗೆಟ್ಟಿತು. ಹೇಗೋ ಸಹೋದರರಿಬ್ಬರು ಶಾಲೆ ಸೇರಿಕೊಂಡರು. ಕೆರೋಲಿನ್ ಅಡುಗೆಮನೆ ಸೇರಿಕೊಂಡಳು.
ಹತ್ತು ವರ್ಷದ ಹುಡುಗಿ, ಜಗತ್ತನ್ನೇ ಕಾಣದವಳು. ಇದರ ಜೊತೆಗೆ ಟೈಫಸ್ ಎಂಬ ರೋಗ ಅಂಟಬೇಕೆ? ನಿಜಕ್ಕೂ ತತ್ತರಿಸಿದಳು. ಅದು ಗುರುತು ಬಿಟ್ಟು ಹೋಯಿತು. ಈಕೆ ನಾಲ್ಕೂಕಾಲು ಅಡಿಗಿಂತ ಹೆಚ್ಚು ಬೆಳೆಯಲಿಲ್ಲ. “ಕುಳ್ಳಿ" ಎಂಬ ಪಟ್ಟ ಅನಿವಾರ್ಯವಾಯಿತು. ಸಾಲದೆಂಬಂತೆ ಈ ರೋಗ ಅವಳ ಎಡಗಣ್ಣಿನ ದೃಷ್ಟಿಯನ್ನೇ ಅಪಹರಿಸಿತು.
ಸರಿ, ಈ ಹುಡುಗಿ ಹಣೆಬರಹವೇ ಹಾಗಿದ್ದರೆ, ಮಾಡುವುದೇನಿದೆ? ಶಿಕ್ಷಣ ಸಾಧ್ಯವಿಲ್ಲ. ಇನ್ನು ಮದುವೆಯ ಪ್ರಶ್ನೆಯಂತೂ ಇಲ್ಲವೇ ಇಲ್ಲ ಎಂದು ಅಮ್ಮ ತೀರ್ಮಾನಿಸಿಯಾಗಿತ್ತು.
“ಮನೆ ಕೆಲಸ ಮುಗಿದಮೇಲೆ ಬೇಕಾದರೆ ಬಟ್ಟೆ ಹೊಲಿಯಲು ತೊಡಗು, ನನ್ನದೇನೂ ಅಭ್ಯಂತರವಿಲ್ಲ" ಎಂದು ಒಂದಷ್ಟು ರಿಯಾಯತಿ ತೋರಿಸಿದಳು ಅಮ್ಮ. ಪಕ್ಕದ ಮನೆಯವರು ಹುಡುಗಿಯ ಬಗ್ಗೆ ಕನಿಕರಪಟ್ಟು ಒಂದಷ್ಟು ಕಸೂತಿ ಹೇಳಿಕೊಟ್ಟರು. ಅಮ್ಮ
“ಮನೆ ಕೆಲಸ ಯಾರು ಮಾಡುತ್ತಾರೆ?” ಎಂದು ಗುಡುಗಿದಳು. ನೆರೆಯವರು “ಹೋಗಲಿ ಬಿಡು ಮರಿ, ಬೇಸರಮಾಡಿಕೊಳ್ಳಬೇಡ, ಫ್ರೆಂಚನ್ನಾದರೂ ಕಲಿತುಕೋ, ಅದಕ್ಕೇನೂ ದುಡ್ಡು ಕೊಡಬೇಕಾಗಿಲ್"’ ಎಂದರು. ಅಮ್ಮ ಮತ್ತೊಮ್ಮೆ ಗುಡುಗಿದಳು.
“ಯಾರಿಗೆ ಬೇಕು ಫ್ರೆಂಚ್”. ಅದರಿಂದಲೂ ಕೆರೋಲಿನ್ ವಂಚಿತಳಾದಳು.
ಅಪ್ಪ ಸತ್ತ ಎಂದು ಗಂಡು ಮಕ್ಕಳು ಅಳುತ್ತಾ ಕೂಡಲಿಲ್ಲ. ಒಂದು ದಿನ ಇದ್ದಕ್ಕಿದ್ದ ಹಾಗೆ “ನಾವು ಹೊರಟೆವು" ಎಂದರು ಇಬ್ಬರು ಮಕ್ಕಳು. "ಎಲ್ಲಿಗೆ?" ಎಂದಳು ಅಮ್ಮ. "ಇಂಗ್ಲೆಂಡಿನ ಬಾಥ್‍ಗೆ" ಎಂದರು ವಿಲಿಯಂ ಹರ್ಷಲ್ ಮತ್ತು ಅಲೆಕ್ಸಾಂಡರ್ ಹರ್ಷಲ್. ಅಮ್ಮನಿಗೆ ಗೊತ್ತಿತ್ತು, ಈ ಇಬ್ಬರಿಗೂ ಸಂಗೀತದಲ್ಲಿ ಅಭಿರುಚಿ ಇದೆ ಎಂದು. ಎಲ್ಲೋ ಹೇಗೋ ಬದುಕಿಕೊಳ್ಳುತ್ತಾರೆ ಎಂದು ಅಮ್ಮ `ಹ್ಞೂಂ’ ಎಂದಳು. ಹೊರಡುವ ಮೊದಲು ವಿಲಿಯಂ ಇನ್ನೊಂದು ಮಾತು ಸೇರಿಸಿದ. "ಅಮ್ಮಾ ಕೇಳು, ನಮ್ಮೊಡನೆ ಕೆರೋಲಿನ್ ಕೂಡ ಬರುತ್ತಾಳೆ ಎಂದ. ಅದೇಕೋ ಅಮ್ಮ ಸ್ವಲ್ಪ ಮೃದುವಾಗಿಬಿಟ್ಟಳು.
“ನಿನ್ನಿಷ್ಟ” ಎಂದಷ್ಟೇ ಹೇಳಿದಳು. ಮೂವರೂ ಹೊರಟರು ಹಡಗಿನಲ್ಲಿ. ಭವಿಷ್ಯ ಅನಿಶ್ಚಿತ. ಹಡಗು ಪ್ರಯಾಣ ಇವರ ಮಟ್ಟಿಗೆ ಪುಲಕ ಉಂಟುಮಾಡಿತ್ತು. ಸಮುದ್ರದ ಅಲೆಗಳ ಏರಿಳಿತದ ಕಡೆ ಅವರ ಗಮನವಿರಲಿಲ್ಲ. ಕಣ್ಣು ನೆಟ್ಟದ್ದು ಆಕಾಶದೆಡೆಗೆ. ವಿಲಿಯಂ ಹರ್ಷಲ್ ಒಂದರ್ಥದಲ್ಲಿ ನಕ್ಷತ್ರಿಕ- ನಕ್ಷತ್ರವನ್ನೇ ಬೆನ್ನುಹತ್ತಿದವನು. ತನ್ನ ಆಸಕ್ತಿ, ಖುಷಿಯನ್ನು ಕೆರೋಲಿನ್‍ಳೊಡನೆ ಹಂಚಿಕೊಂಡ. ಆಕೆಯೂ ಖುಷಿಖುಷಿಯಾಗಿಯೇ ಆಕಾಶದ ಕಡೆ ಮುಖಮಾಡಿದಳು. ನಕ್ಷತ್ರ ಎಣಿಸಲು ಪ್ರಾರಂಭಿಸಿದಳು. ಅದೇನೋ ತೋಟದಲ್ಲಿ ಸುತ್ತಾಡಿದ ಅನುಭವ.
ಸಂಗೀತ ತೊರೆದು ಆಕಾಶದೆಡೆಗೆ
ಬಾಥ್‍ಗೆ ತಲಪಿದ ಮೇಲೆ ಕೈತುಂಬ ಕೆಲಸ. ವಿಲಿಯಂ ಸಂಗೀತದ ತಂಡ ಕಟ್ಟಿಕೊಂಡು ಹಾಡಲು ಹೊರಟ. ಇವಳ ಕಿವಿಯಲ್ಲೂ ಸದಾ ಅವನ ಹಾಡೇ ಉಲಿಯುತ್ತಿತ್ತು. ನೋಡನೋಡುತ್ತಲೇ ಇವಳಲ್ಲೇ ಮಾರ್ಪಾಡಾಯಿತು. ಸಂಗೀತ ಇವಳ ಎದೆ ಹೊಕ್ಕಿತು. ಈಗ ಬಾಥ್‍ನಲ್ಲಿ “ಹರ್ಷಲ್ ಖಗೋಳ ಮ್ಯೂಸಿಯಂ" ಆಗಿರುವ ಜಾಗದಲ್ಲೇ ಹಿಂದೆ ಇವರ ವಾಸ. ಆಗ ಅದೊಂದು ಪುಟ್ಟ ಮನೆ. ಬಹುಬೇಗ ಈ ತಂಡ ಸಂಗೀತದಲ್ಲಿ ಯಶಸ್ವಿಯಾಯಿತು, ನಗರದ ಮನೆಮಾತಾಯಿತು. ಜನ ಇವರ ಹಾಡುಗಳನ್ನು ಕೇಳಲು ಮುಗಿಬೀಳುತ್ತಿದ್ದರು. ತಂಡದಲ್ಲಿ ಇವಳ ಮಧುರ ಧ್ವನಿಯೂ ಸೇರುತ್ತಿತ್ತು. ಇವಳಿಗೆ ನೆರೆಹೊರೆಯವರೊಡನೆ ಹರಟೆ ಹೊಡೆಯಲು ಆಸಕ್ತಿ ಇರಲಿಲ್ಲ. ಅಣ್ಣ ಇವಳನ್ನು ಸಂಗೀತದ ಕೋಚಿಂಗ್ ಕ್ಲಾಸಿಗೆ ಸೇರಿಸಿದ. ಆಗಾಗ ಗುರುವೂ ಆದ. ಆಕೆಯ ಕಂಠಸಿರಿ ಬಹುಬೇಗ ಜನಮನ ಗೆದ್ದಿತು. ತಂಡದಲ್ಲಿ ಕಾಯಂ ಸದಸ್ಯೆ, ವಾದ್ಯ ನುಡಿಸುವುದರಲ್ಲೂ ಪ್ರವೀಣೆ. ಈ ತಂಡ ಎಷ್ಟು ಖ್ಯಾತವಾಯಿತೆಂದರೆ ಬರ್ಮಿಂಗ್‍ಹ್ಯಾಂ ಸಂಗೀತೋತ್ಸವಕ್ಕೆ ಇವರದೇ ಆಕರ್ಷಣೆ.

ಆಕಾಶ ವೀಕ್ಷಣೆ
ಇದೇ ಹೊತ್ತಿಗೆ ಇನ್ನೊಂದು ಬದಲಾವಣೆಯಾಯಿತು. ಹರ್ಷಲ್ ಆಕಾಶ ವೀಕ್ಷಣೆಯತ್ತ ಆಕರ್ಷಿತನಾದ. ಮನೆಗೆ ಯಾರಾದರೂ ಬರಲಿ, ಹಿಂದಿನ ರಾತ್ರಿ ಆಕಾಶದಲ್ಲಿ ಏನೇನು ಕಂಡೆ ಎಂದು ವಿವರಿಸುತ್ತಿದ್ದ. ಇವಳೂ ಬದಲಾದಳು, ಅಣ್ಣನ ಆಸಕ್ತಿಯ ಕಡೆಗೆ ಇವಳ ಮನಸ್ಸು ಒಲಿಯಿತು. ಇಬ್ಬರಿಗೂ ಬರಿಗಣ್ಣ ಆಕಾಶದಿಂದಾಚೆಗೆ ಏನಿದೆ ಎಂಬ ಕುತೂಹಲ. ದೂರದರ್ಶಕಕ್ಕೆ ಮೊರೆಹೋದರು. ತಾವೇ ಬಿಡಿ ಭಾಗಗಳನ್ನು ತಂದು ವಿನ್ಯಾಸ ಮಾಡತೊಡಗಿದರು. ಕೆರೋಲಿನ್‍ಗೆ ಮಸೂರಗಳನ್ನು ಉಜ್ಜುವುದು, ನುಣುಪುಕೊಡುವುದು, ಜೋಡಿಸುವುದೆಂದರೆ ಪ್ರಾಣ. ರೆಟ್ಟೆ ನೋವು ಬಂದರೂ ಅತ್ತ ಕಡೆ ಅವಳ ಗಮನವಿರುತ್ತಿರಲಿಲ್ಲ. ವಿಲಿಯಂ ಆ ಕಾಲದಲ್ಲಿ ಲಭ್ಯವಿದ್ದ ಆಕಾಶಕಾಯಗಳ ಕ್ಯಾಟಲಾಗ್ ತಂದ. ಕೆರೋಲಿನ್ ಅದನ್ನು ಅಚ್ಚುಕಟ್ಟಾಗಿ ನಕಲು ಮಾಡುತ್ತ ಹೋದಳು. ಅವನು ವೀಕ್ಷಿಸಿದ ಆಕಾಶಕಾಯಗಳ ವಿವರಗಳನ್ನು ಸಂಗ್ರಹಿಸುತ್ತಿದ್ದಳು. ಅದೇನೂ ಯಾಂತ್ರಿಕ ಕೆಲಸವಲ್ಲ, ಬುದ್ಧಿ ಉಪಯೋಗಿಸಬೇಕಾಗಿತ್ತು.
1781ರಲ್ಲಿ ವಿಲಿಯಂ ಹರ್ಷಲ್ ಯುರೇನಸ್ ಗ್ರಹ ಪತ್ತೆಮಾಡಿದ. ಮೊದಲು ಅದು ಧೂಮಕೇತುವೆಂದು ದಾಖಲಿಸಿದ್ದ. ಮುಂದೆ ಅದೊಂದು ಸ್ವತಂತ್ರ ಗ್ರಹ ಎಂಬುದನ್ನು ಖಚಿತಪಡಿಸಿದ. ಆಗ ಕೆರೋಲಿನ್ ನೀಡಿದ ನೆರವನ್ನು ಸ್ಮರಿಸಿದ. ಈಗ ಬಾಥ್‍ನಿಂದ ದೂರ ಹೋಗಿ ಒಳಪ್ರದೇಶದಲ್ಲಿ ಹಳೆಯ ಮನೆಯೊಂದನ್ನು ಹಿಡಿಯಬೇಕಾಯಿತು. ಅದನ್ನು ಜನ ಭೂತಬಂಗಲೆ ಎನ್ನುತ್ತಿದ್ದರು. ಆದರೆ ಆಕಾಶ ವೀಕ್ಷಣೆಗೆ ಇದೇನೂ ಅಡ್ಡಬರಲಿಲ್ಲ. ವಿಲಿಯಂ ಕೈಲಿ 3,000 ನಕ್ಷತ್ರಗಳ ವಿವರಗಳ ಕ್ಯಾಟಲಾಗ್ ಇತ್ತು. ಅತ್ತ, ಕೆರೋಲಿನ್ ಈ ನಕ್ಷತ್ರಗಳ ಹೊರತು ಬೇರೆಯವನ್ನು ಪಟ್ಟಿಗೆ ಸೇರಿಸಬಹುದೇ ಎಂದು ಆಕಾಶ ಜಾಲಾಡುತ್ತಿದ್ದಳು. ಆ ಘಳಿಗೆ ಬಂದೇಬಂತು. `ಬುಕ್ಸ್ ಆಫ್ ಅಬ್ಸರ್ವೇಷನ್' ಎಂಬ ಡೈರಿಯನ್ನು ಇಟ್ಟುಕೊಂಡು ತಾನು ಕಂಡದ್ದನ್ನೆಲ್ಲ ಬರೆಯುತ್ತ ಹೋದಳು. 1793ರಲ್ಲಿ ದೂರದರ್ಶಕ ಬಳಸಿ ಹಿಂದೆ ದಾಖಲೆಯಾಗದಿದ್ದ ನೀಹಾರಿಕೆಯೊಂದನ್ನು ಗುರುತಿಸಿ ಪಟ್ಟಿಗೆ ಸೇರಿಸಿದಳು. ಅದೇ ರಾತ್ರಿ ಅಂಡ್ರೋಮೀಡ ಗೆಲಾಕ್ಸಿಯ ಸಂಗಾತಿಯೊಂದನ್ನು ಪತ್ತೆಮಾಡಿದಳು. ವಿಲಿಯಂಗೆ ಅದೆಷ್ಟು ಖುಷಿಯಾಯಿತೆಂದರೆ ಆಕೆಗಾಗಿ ವಿಶೇಷವಾಗಿ ಧೂಮಕೇತುಗಳನ್ನು ಪತ್ತೆಮಾಡಲು ಒಂದು ದೂರದರ್ಶಕವನ್ನೇ ನಿರ್ಮಿಸಿಕೊಟ್ಟ. ಅದನ್ನು ಬಳಸಿ 1786-97ರ ನಡುವೆ ಎಂಟು ಧೂಮಕೇತುಗಳನ್ನು ಗುರುತಿಸಿದಳು.
ಮಹಿಳೆ ಧೂಮಕೇತುವೊಂದನ್ನು ಗುರುತಿಸಿದ್ದು ಇದೇ ಮೊದಲು. 1795ರಲ್ಲಿ
`ಎನ್ಕೆ’ ಎಂಬ ಧೂಮಕೇತುವನ್ನು ಮರುಪತ್ತೆಹಚ್ಚಿದಳು. ಇದು ಮತ್ತೆ ಮತ್ತೆ ಕಾಣಿಸಿಕೊಳ್ಳುವ ಧೂಮಕೇತು ಎಂದು ವರದಿಮಾಡಿದಳು. ಮಹಿಳೆಯರನ್ನು ದೂರವೇ ಇಟ್ಟಿದ್ದ `ಫಿಲಾಫಿಕಲ್ ಟ್ರಾನ್ಸಾಕ್ಷನ್’ ಪತ್ರಿಕೆ ಈ ಅವಕಾಶ ಎಲ್ಲಿ ಕೈತಪ್ಪಿ ಹೋಗುವುದೋ ಎಂದು ಆಕೆಯನ್ನು ಅಂಗಲಾಚಿ ಸಂಶೋಧನ ಲೇಖನವನ್ನು ಪಡೆದು ಪ್ರಕಟಿಸಿತು. ಆಗ
“ಇದನ್ನೇ ನಾನು ಧೂಮಕೇತುಗಳ ಬಿಲ್ಲು ಮತ್ತು ರಸೀತಿ” ಎಂದು ಕರೆದದ್ದು ಎನ್ನುವ ಅವಳ ಮಾತು ಈಗಲೂ ಚರಿತ್ರೆಯಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತದೆ. ಯಾವ ದೂರದರ್ಶಕವನ್ನೂ ಬಳಸದೆ, ಬರಿಗಣ್ಣಲ್ಲೇ ನೋಡಿ 1797ರಲ್ಲಿ ಇನ್ನೊಂದು ಧೂಮಕೇತುವನ್ನು ಪತ್ತೆಮಾಡಿದಳು. ಈ ಹೊತ್ತಿಗೆ ಅವಳ ಖ್ಯಾತಿ ಆಕಾಶದೆತ್ತರಕ್ಕೆ ಏರಿತ್ತು. ಇಂಗ್ಲೆಂಡಿನ ಮೂರನೇ ಜಾರ್ಜ್ ದೊರೆ ಹಿಗ್ಗಿ ಆಕೆಗೆ ವಾರ್ಷಿಕ 50 ಪೌಂಡ್ ಪಗಾರ ನಿಗದಿಮಾಡಿದ. ಇದು ಕೂಡ ಒಂದು ಚಾರಿತ್ರಿಕ ಘಟನೆ. ಆಗಿನ ಸರ್ಕಾರದಿಂದ ಸಂಬಳ ಪಡೆದ ಮೊದಲ ಮಹಿಳೆ ಎಂಬ ಖ್ಯಾತಿ ಕೆರೋಲಿನ್ ಅವಳದಾಯಿತು. ಮುಂದೆ ಹಿಂದಿನ ನಕ್ಷತ್ರಗಳ ಕ್ಯಾಟಲಾಗನ್ನು ಪರಿಶೀಲಿಸುವ ಜವಾಬ್ದಾರಿ ಬಂತು. ಹಳೆಯ ಪಟ್ಟಿಯಲ್ಲಿ 560 ನಕ್ಷತ್ರಗಳ ವಿವರಗಳೇ ಬಿಟ್ಟುಹೋಗಿವೆ ಎಂದು ತೋರಿಸಿಕೊಟ್ಟಳು. ಪಟ್ಟಿಯನ್ನು ಪುನರ್ ವಿಮರ್ಶಿಸಬೇಕಾಯಿತು.
ಅರಸಿಬಂದ ಖ್ಯಾತಿ

ಈ ಹೊತ್ತಿಗಾಗಲೇ ವಿಲಿಯಂ ಹರ್ಷಲ್ ಶ್ರೀಮಂತ ವಿಧವೆಯೊಬ್ಬಳನ್ನು ಮದುವೆಯಾದ. ಕೆರೋಲಿನ್ ಅವಳ ಕೆಂಗಣ್ಣಿಗೆ ಗುರಿಯಾದಳು. ಅತ್ತಿಗೆಯ ದೃಷ್ಟಿಯಲ್ಲಿ ಇವಳು ವಿಲನ್ ಆದಳು. ಕಸಿವಿಸಿಯಾಯಿತು, ನೋವುಂಡಳು, ಮನೆಯಿಂದ ಹೊರಬಿದ್ದಳು. ಆರ್ಥಿಕವಾಗಿ ಒಂದಷ್ಟು ಭದ್ರತೆ ಇತ್ತು, ಅವಳು ಪ್ರತ್ಯೇಕವಾಗಿ ವಾಸಮಾಡುತ್ತ ಗಗನದತ್ತ ಮೊಗಮಾಡಿದಳು. 1802ರಲ್ಲಿ ರಾಯಲ್ ಸೊಸೈಟಿ ಕೆರೋಲಿನ್ ಪರಿಷ್ಕರಿಸಿದ ಕ್ಯಾಟಲಾಗನ್ನು ಪ್ರಕಟಿಸಿತು. ಆದರೆ ಅದು ವಿಲಿಯಂ ಹರ್ಷಲ್‍ನ ಹೆಸರಿನಲ್ಲಿತ್ತು. ಇದರಲ್ಲಿ ಎರಡು ಸಾವಿರ ನೀಹಾರಿಕೆಗಳ (ನೆಬ್ಯುಲ) ಜೊತೆಗೆ ಇನ್ನೂ ಐನೂರು ನೀಹಾರಿಕೆಗಳನ್ನು ಸೇರಿಸಿದ್ದಳು. ಇಳಿ ವಯಸ್ಸಿನಲ್ಲೂ ಅದನ್ನು ಪರಿಷ್ಕರಿಸುತ್ತಲೇ ಹೋದಳು. ವಿಲಿಯಂ ಹರ್ಷಲ್‍ನ ಮಗ ಜಾನ್ ಹರ್ಷಲ್ ಕೂಡ ಖಗೋಳಜ್ಞನಾಗಿ ಹೆಸರುಮಾಡಿದ. ಅವನಿಗೆ ಈ ಕ್ಯಾಟಲಾಗನ್ನು ಹಸ್ತಾಂತರಿಸಿದಳು. ಇದೇ ಮುಂದೆ ವಿಸ್ಕøತವಾಗಿ “ನ್ಯೂ ಜನರಲ್ ಕ್ಯಾಟಲಾಗ್" ಎಂದು ಪ್ರಕಟವಾಯಿತು. ನಕ್ಷತ್ರವಲ್ಲದ ಅನೇಕ ಆಕಾಶಕಾಯಗಳು ಇದರಲ್ಲಿ ಸೇರಿವೆ. ಈಗಲೂ ಎನ್.ಜಿ.ಸಿ. ಎಂಬ ಹೆಸರಿನಿಂದಲೇ ಈ ಕ್ಯಾಟಲಾಗ್ ಪ್ರಸಿದ್ಧವಾಗಿದೆ.
ಪ್ರೀತಿಯ ಸಹೋದರ ವಿಲಿಯಂ ಹರ್ಷಲ್ 1822ರಲ್ಲಿ ನಿಧನನಾದ ನಂತರ ಕೆರೋಲಿನ್‍ಗೆ ಇಂಗ್ಲೆಂಡ್‍ನಲ್ಲಿ ಉಳಿಯುವ ಮನಸ್ಸಾಗಲಿಲ್ಲ. ಮತ್ತೆ ಜರ್ಮನಿಯ ಹ್ಯಾನೋವರ್‍ಗೆ ಹಿಂತಿರುಗಿದಳು. ಆದರೆ ಕ್ಯಾಟಲಾಗ್‍ನ ಪರಿಷ್ಕರಣೆ ಮುಂದುವರೆಸಿದಳು. ರಾಯಲ್ ಅಸ್ಟ್ರನಾಮಿಕಲ್ ಸೊಸೈಟಿ 1828ರಲ್ಲಿ ಖಗೋಳ ವಿಜ್ಞಾನಕ್ಕೆ ಅವಳು ನೀಡಿದ ಕೊಡುಗೆಯನ್ನು ಗಮನಿಸಿ ಚಿನ್ನದ ಪದಕ ನೀಡಿ ಗೌರವಿಸಿತು. ಮುಂದೆ 1996ರಲ್ಲಿ ವೆರಾ ರುಬಿನ್ ಎಂಬ ಖಗೋಳಜ್ಞೆ ಇಂಥ ಪ್ರಶಸ್ತಿಗೆ ಪಾತ್ರವಾಗುವವರೆಗೆ ಯಾವ ಮಹಿಳಾ ಖಗೋಳ ವಿಜ್ಞಾನಿಯೂ ಇಂಥದೊಂದು ಗೌರವ ಪಾತ್ರವಾಗಿರಲಿಲ್ಲ. ಕೊನೆಯವರೆಗೂ ಕೆರೋಲಿನ್ ಆಸಕ್ತಿ ಕುಂದಲಿಲ್ಲ. ಶರೀರ ದುರ್ಬಲವಾಯಿತು, ಆಕೆಗೆ ದೃಷ್ಟಿ ಅಡ್ಡಬರುತ್ತಿದೆಯಲ್ಲ ಎಂಬ ನೋವು. 1848ರಲ್ಲಿ ಕೆರೋಲಿನ್ ಅದೇ ಹ್ಯಾನೋವರ್‍ನಲ್ಲಿ ಮೃತಳಾದಾಗ ಕುಟುಂಬದವರ ಸಮಾಧಿಯ ಬಳಿಯೇ ಅವಳನ್ನು ಭೂಮಿಗಿಳಿಸಿದರು. ಸಮಾಧಿಯ ಮೇಲೆ
“ಇಲ್ಲಿ ಚಿರನಿದ್ರೆಯಲ್ಲಿರುವ ಕೆರೋಲಿನ್ ಹರ್ಷಲ್‍ನ ಕಣ್ಣುಗಳು ಸದಾ ಆಕಾಶದ ಕಡೆಗೆ ನೆಟ್ಟಿದ್ದವು” (1750-1848) ಎಂದು ಕೆತ್ತಲಾಗಿದೆ.
ಅಡುಗೆಮನೆಗೆ ಸೀಮಿತವಾಗಿದ್ದ ಕೆರೋಲಿನ್ ವಿಶಾಲ ಬಾನಿನತ್ತ ಕಣ್ಣು ಹೊರಳಿಸಿ ಹೊಸ ಇತಿಹಾಸವನ್ನೇ ಬರೆದಳು. ನಕ್ಷತ್ರ, ಧೂಮಕೇತುಗಳು ಅವಳ ಕಿವಿಯಲ್ಲಿ ತಮ್ಮ ಗುಟ್ಟನ್ನೆಲ್ಲ ಹೇಳಿಕೊಂಡವು. ಪ್ರಸಿಯಾದ ದೊರೆ ಆಕೆಯನ್ನು ಗೌರವಿಸಿದ್ದ. ರಾಯಲ್ ಅಸ್ಟ್ರನಾಮಿಕಲ್ ಸೊಸೈಟಿಗೆ ಆಕೆಗೆ ಕೈಮುಗಿದಿತ್ತು. ರಾಯಲ್ ಐರಿಷ್ ಅಕಾಡೆಮಿ ಬಾ ತಾಯಿ’ ಎಂದು ಬರಮಾಡಿಕೊಂಡಿತ್ತು. ಆಕೆ ಚಿರಾಯು. 281-ಲುಕ್ರೆಷಿಯಾ ಎಂದ ಕ್ಷುದ್ರಗ್ರಹಕ್ಕೆ ಆಕೆಯ ಹೆಸರಿಟ್ಟರು. ಎನ್.ಜಿ.ಸಿ.2360 ಎಂಬ ತೆರೆದ ಗುಚ್ಛಕ್ಕೆ ಆಕೆಯ ಹೆಸರಿದೆ. ಅರ್ಜೆಂಟೈನ ಇನ್ನೂ ಒಂದು ಹೆಜ್ಜೆ ಮುಂದೆಹೋಗಿ 2020ರಲ್ಲಿ
`ಕೆರೋಲಿನ್’ ಎಂಬ ಉಪಗ್ರಹವನ್ನು ಆಕೆಯ ಹೆಸರಲ್ಲಿ ಕರೆದು ಕಕ್ಷೆಗೆ ಸೇರಿಸಿತು.
`ಸಾವು ಶರೀರಕ್ಕಷ್ಟೇ, ಕೀರ್ತಿಗಲ್ಲ’ ಇದು ಕೆರೋಲಿನ್ ಬಿಟ್ಟುಹೋದ ಸಂದೇಶ.

- ಟಿ.ಆರ್. ಅನಂತರಾಮು
(ಡಾ. ಟಿ.ಆರ್. ಅನಂತರಾಮು, ನಂ. 534, 70ನೇ ಅಡ್ಡರಸ್ತೆ, 14ನೇ ಮುಖ್ಯರಸ್ತೆ, ಕುಮಾರಸ್ವಾಮಿ ಬಡಾವಣೆ 1ನೇ ಹಂತ, ಬೆಂಗಳೂರು-560111, ಮೊ: 98863 56085)
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.