ಸ್ತ್ರೀ ಎಂದರೆ ಅಷ್ಟೇ ಸಾಕೆ?/ ಅಂಟಾರ್ಕ್‍ಟಿಕದಲ್ಲಿ ಅಂಜದ ಸಾಹಸಿ ಫೆಲಿಸಿಟಿ ಆಸ್ಟಾನ್ – ಟಿ.ಆರ್. ಅನಂತರಾಮು

ಜಗತ್ತಿನಲ್ಲಿ ಹವಾಮಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ಮಹಿಳೆಯರಿದ್ದಾರೆ. ಅವರಲ್ಲಿ ಫೆಲಿಸಿಟಿ ಆಸ್ಟಾನ್ ವಿಶ್ವಖ್ಯಾತಿ ಪಡೆದ ಸಾಹಸಿ ಮಹಿಳೆ. ಎರಡು ಚಳಿಗಾಲ, ಮೂರು ಬೇಸಿಗೆಯನ್ನು ಅಂಟಾರ್ಕ್‍ಟಿಕ ಖಂಡದ ಹಿಮದಲ್ಲಿ ಕಳೆದ, ಗ್ರೀನ್ ಲೆಂಡ್ ನಲ್ಲಿ ಹಿಮದ ಮರುಭೂಮಿಯಲ್ಲಿ ಸಾಹಸ ಯಾನ ನಡೆಸಿ ಅಗ್ನಿ ಪರೀಕ್ಷೆಗೆ ಒಳಗಾದ ಅವರ ಸಾಹಸಗಳ ದಾಖಲೆಗೆ ಸರಿಮಿಗಿಲಿಲ್ಲ. ಅವರನ್ನು ಇನ್ನಷ್ಟು ಮತ್ತಷ್ಟು ಸಾಹಸಗಳು ಬಾ ಎಂದು ಕರೆಯುತ್ತಿವೆ. ಫೆಲಿಸಿಟಿಗೆ ವಿರಾಮ ಎನ್ನುವುದು ಮುಂದಿನ ಯಾತ್ರೆಗೆ ಸಿದ್ಧತೆಯ ಸಮಯವಷ್ಟೆ. ಅಂಜದ ಮಹಿಳೆಯ ಪರಿಚಯದ ಮೊದಲ ಭಾಗ ಇಲ್ಲಿದೆ.

`ಈಗ ಹವಾಮಾನ: ಒಳಪ್ರದೇಶದಲ್ಲಿ ದಿನವಿಡೀ ಮೋಡ ಮುಸುಕಿದ ವಾತಾವರಣವಿರುತ್ತದೆ; ಆಗಾಗ ಗುಡುಗು ಸಹಿತ ಮಳೆಬೀಳುವ ಸಾಧ್ಯತೆ ಇದೆ. ಕಡಲತೀರದ ಮೀನುಗಾರರಿಗೆ ಎಚ್ಚರಿಕೆ. ಸಮುದ್ರದಲ್ಲಿ ಬಿರುಗಾಳಿ ಏಳುವ ಸಾಧ್ಯತೆಗಳಿವೆ, ಧಾರಾಕಾರ ಮಳೆಯನ್ನು ನಿರೀಕ್ಷಿಸಬಹುದು. ದಿನದ ಉಷ್ಣತೆ ಒಳಪ್ರದೇಶದಲ್ಲಿ 23 ಡಿಗ್ರಿ ಸೆಂ. ಗಿಂತ ಕಡಿಮೆ ಇದ್ದು, ಅದರಲ್ಲಿ ಸ್ವಲ್ಪ ಬದಲಾವಣೆಯಾಗುವ ಸಾಧ್ಯತೆ ಇದೆ…’

ಸಾಮಾನ್ಯವಾಗಿ ರೇಡಿಯೋಗಳಲ್ಲಾಗಲಿ, ಟ.ವಿ.ಗಳಲ್ಲಾಗಲಿ ಹವಾಮಾನ ವರದಿ ಕೊಡುವುದು ಇದೇ ಭಾಷೆಯಲ್ಲಿ ತಾನೆ? ಜಾಗಗಳ ಹೆಸರು ಬದಲಾಗಬಹುದು, ಆದರೆ ಎಲ್ಲ ದೇಶಗಳಲ್ಲೂ ಹವಾಮಾನ ವರದಿ ಇದಕ್ಕಿಂತ ಬೇರೆ ಇರುವುದಿಲ್ಲ. ಫೆಲಿಸಿಟಿ ಆಸ್ಟಾನ್, ಇಂಥ ಹವಾಮಾನ ವರದಿ ಕೊಡುವ ನಿರೂಪಕಿಯಾಗಲಿಲ್ಲ. ಅವಳು ಹವಾಮಾನ ತಜ್ಞೆ. ಫಿಸಿಕ್ಸ್ ಓದಿ ಹವಾಮಾನ ಅಧ್ಯಯನವನ್ನು ಇನ್ನಷ್ಟು ಎತ್ತರಕ್ಕೇರಿಸಿದ ಬ್ರಿಟನ್ ಹುಡುಗಿ. ಈಕೆಯ ಹೆಸರನ್ನು ಮೊದಲು ಓದಿದಾಗ ತಬ್ಬಿಬ್ಬಾಗಿ ಎರಡನೆಯ ಸಲ ಓದಬೇಕಾಯಿತು. ಫೆಲಿಸಿಟಿಯೋ ಅಥವಾ ಫೆಸಿಲಿಟಿಯೋ? ಎಂಬ ಜಿಜ್ಞಾನೆ. ಮೊದಲನೆಯ ಹೆಸರೇ ಖಚಿತವಾಯಿತು. ವಿಚಿತ್ರ ಹೆಸರು ಎನ್ನಿಸಿತು. ಹೆಸರು ಕೇಳಿರಲಿಲ್ಲ ಅಂದಮೇಲೆ ಅರ್ಥವೂ ಗೊತ್ತಿರಲಿಲ್ಲ. ಫೆಲಿಸಿಟಿ ಎಂದರೆ ಅತೀವ ಸಂತೋಷ ಎಂದು ನಿಘಂಟು ಹೇಳುತ್ತದೆ. ನಾವು `ಸಂತೋಷಿಣಿ’ ಎನ್ನಬಹುದು. ಏಕೆಂದರೆ ಅವಳ ಬದುಕಿಗೂ ಹೆಸರಿಗೂ ತಾಳೆಯಾಗುತದೆ. ಆಸ್ಟಾನ್ ಎಂದರೆ ಪೂರ್ವಪಟ್ಟಣ ಎಂಬ ಅರ್ಥವಂತೆ- ಸಹಜವಾಗಿಯೇ ನಮ್ಮ ಕವಿ ಸಿದ್ದಲಿಂಗ ಪಟ್ಟಣಶೆಟ್ಟಿ ನೆನಪಾಗುತ್ತಾರೆ.

ಜಗತ್ತಿನಲ್ಲಿ ಹವಾಮಾನ ಕ್ಷೇತ್ರದಲ್ಲಿ ಕೆಲಸಮಾಡುತ್ತಿರುವ ಸಾವಿರಾರು ಮಂದಿ ಮಹಿಳೆಯರಿದ್ದಾರೆ. ದಿನವೂ ಮೋಡಕ್ಕೆ ರಾಡಾರ್ ಬಿಟ್ಟು, ಅದರ ಒಳಹೊರಗುಗಳನ್ನು ಅರಿತು, ಬಲೂನ್ ಹಾರಿಬಿಟ್ಟು ವಾಯುಗೋಳವನ್ನು ಅಧ್ಯಯನ ಮಾಡುವುದು ಹವಾಮಾನ ಕಚೇರಿಯಲ್ಲಿ ಕಂಡುಬರುವ ಸಾಮಾನ್ಯನೋಟ. ಯಾವುದೇ ಟಿ.ವಿ. ಚಾನೆಲ್ ನೋಡಿ, ನೂರಾರು ಕಂಪ್ಯೂಟರ್ ಜೊತೆ ತಲೆಯನ್ನು ಬೆಸೆದುಗೊಂಡ ತಾಂತ್ರಿಕ ತಜ್ಞರಿರುತ್ತಾರೆ. ದೊಡ್ಡ ದೊಡ್ಡ ಹವಾಮಾನ ಕೇಂದ್ರಗಳಲ್ಲೂ ಅಷ್ಟೇ. ಕಂಪ್ಯೂಟರ್‍ಗಳು ಕ್ಯೂ ನಿಂತಿವೆ ಎನ್ನುವಷ್ಟು ಅಲ್ಲಿ ಎಲ್ಲವೂ ಬ್ಯುಸಿ. ಅಲ್ಲಿ ಉಲಿಯುವುದು ಮೂರೇ ಮಂತ್ರ; ಉಷ್ಣತೆ-ಆದ್ರ್ರತೆ-ಒತ್ತಡ. ಇವುಗಳ ಸುತ್ತಲೇ ಅಲ್ಲಿನ ವೃತ್ತಿಪರರ ಬದುಕು ಗಿರಿಕಿ ಹೊಡೆಯುತ್ತದೆ. ಭಯವನ್ನು ಅಳೆಯುವ ಕೆಲಸ ಆಸ್ಟಾನ್‍ದು ಇದಕ್ಕಿಂತಲೂ ದೊಡ್ಡ ಹೊಣೆ.

ಭಯವನ್ನು ಅಳೆಯುವ ಕೆಲಸ

ಲಂಡನ್‍ನ ರೀಡ್ ವಿಶವಿದ್ಯಾಲಯದಿಂದ ಹವಾಮಾನ ಮತ್ತು ಭೌತವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಾಗ, ಆಕೆಯಲ್ಲಿ ಉತ್ಸಾಹ ಪುಟಿಯುತ್ತಿತ್ತು. ನಿಸರ್ಗದ ಸವಾಲಿಗೆ ಜವಾಬು ಕೊಡುವ ಉತ್ಸಾಹ. ಆಕೆ ಸ್ಮರಿಸಿಕೊಳ್ಳುತ್ತಾಳೆ: ನನಗೆ ಅಂಥ ಸಂದರ್ಭ ಕೂಡಿಬಂತು. ಬ್ರಿಟಿಷ್ ಅಂಟಾರ್ಕ್‍ಟಿಕ್ ಸರ್ವೇ ಸಂಸ್ಥೆಯ ಜೊತೆ 39 ತಿಂಗಳ ಒಪ್ಪಂದ ಮಾಡಿಕೊಂಡೆ. ಆಗ ನನಗೆ 23ರ ಹರೆಯ. ಅಂಟಾರ್ಕ್‍ಟಿಕ ಖಂಡದ ಅದಿಲೆ ಐಲೆಂಡ್ ಎಂಬ ಭಾಗದಲ್ಲಿ ಬ್ರಿಟನ್ ರೊಥೆರಾ ರೀಸರ್ಚ್ ಸ್ಟೇಷನ್’ ಎಂಬ ಕೇಂದ್ರ ಸ್ಥಾಪಿಸಿತ್ತು. ಅಲ್ಲಿಂದಲೇ ಹಿಮದ ಖಂಡವನ್ನು ಸಮೀಕ್ಷೆ ಮಾಡುವುದು. ವರ್ಷಕ್ಕೆ ಆರು ತಿಂಗಳು ಕತ್ತಲು, ಆರು ತಿಂಗಳು ಬೆಳಕು ಇರುವ ಈ ಖಂಡ ವೈರುಧ್ಯಗಳ ಆಗರ. ಗಂಟೆಗೆ 120 ಕಿ.ಮೀ. ವೇಗದಲ್ಲಿ ಬೀಸುವ ಗಾಳಿ, ಎಚ್ಚರ ತಪ್ಪಿದರೆ ಒಂದು ಕಿಲೋ ಮೀಟರ್‍ಗೂ ಆಳದ ಬಿರುಕುಗಳಲ್ಲಿ ಶಾಶ್ವತವಾಗಿ ಮುಚ್ಚಿಹೋಗುವ ಸಂಭವ. ಚಳಿಯೋ ಅಲ್ಲಿ ಶೂನ್ಯದಿಂದ 20 ಡಿಗ್ರಿ ಕೆಳಕ್ಕೆ. ನನ್ನ ಸಾಹಸಕ್ಕೆ ಇದೇ ತಕ್ಕ ಜಾಗ ಎನ್ನಿಸಿತು. ಇದೇ ಕೇಂದ್ರವನ್ನು ಬಳಸಿಕೊಂಡು ಬ್ರಿಟನ್ ಪರೀಕ್ಷಾರ್ಥ ರಾಕೆಟ್‍ಗಳನ್ನು ಹಾರಿಸುತ್ತಿತ್ತು. ಆದರೆ ನನಗೆ ಕೊಟ್ಟ ಹೊಣೆಯೇ ಬೇರೆ. 1985ರಲ್ಲಿ ಬ್ರಿಟಿಷ್ ಸರ್ವೇ ತಂಡ ಅಂಟಾರ್ಕ್‍ಟಿಕದ ನೆತ್ತಿಯಲ್ಲಿ ಓಜೋನ್ ಪದರ ತೆಳ್ಳಗಾಗುತ್ತಿದೆ, ಅದರ ಮೂಲಕ ಸೂರ್ಯನ ಅಪಾಯಕಾರಿ ಅತಿನೇರಿಳೆ ಕಿರಣಗಳು ತೂರಿಬರುತ್ತಿವೆ ಎಂದು ವರದಿಮಾಡಿತ್ತು. ಅಂಥ ಕಿರಣಗಳು ಜೀವಕ್ಕೆ ಎಂದೂ ಅಪಾಯಕಾರಿ ಎಂದು ಫಿಸಿಕ್ಸ್ ಓದಿದ ನನಗೆ ಚೆನ್ನಾಗಿ ಗೊತ್ತಿತ್ತು. ಅನಂತರ ಅಂತಾರಾಷ್ಟ್ರೀಯ ಒಪ್ಪಂದವಾಗಿ ಓಜೋನ್ ಪದರವನ್ನು ಛಿದ್ರಮಾಡುವ ಅನಿಲಗಳನ್ನು ನಿಯಂತ್ರಿಸುತ್ತ ಬಂದಾಗ ಮತ್ತೆ ಓಜೋನ್ ಪದರ ನಿಧಾನವಾಗಿ ಕೂಡಿಕೊಳ್ಳುತ್ತಿತ್ತು. ನನಗೆ ಇದರ ಮಾನೀಟರಿಂಗ್ ಕೆಲಸ. ಅಂದರೆ ಎಷ್ಟು ಪ್ರಮಾಣದ ಅತಿನೇರಿಳೆ ಕಿರಣಗಳು ಓಜೋನ್ ಪದರವನ್ನು ತೂರಿಬರುತ್ತಿದೆ ಎಂಬುದರ ಲೆಕ್ಕಾಚಾರ. ನಮ್ಮ ಕ್ಯಾಂಪಸ್‍ನಲ್ಲೇ ಸ್ಪೆಕ್ಟ್ರೋಫೋಟೋಮೀಟರ್ ಎಂಬ ಆಳೆತ್ತರದ ಉಪಕರಣವನ್ನು ನೆಲದಲ್ಲೇ ಸ್ಥಾಪಿಸಿದ್ದರು. ನಿತ್ಯವೂ ಅದರಲ್ಲಿ ರೀಡಿಂಗ್ ತೆಗೆದುಕೊಳ್ಳುವುದು. ಅಲ್ಲಿ ಎಷ್ಟು ಹಿಮ ಬೀಳುತ್ತಿತ್ತೆಂದರೆ ನಮ್ಮ ಕ್ಯಾಂಪೇ ಮುಚ್ಚಿಹೋಗುತ್ತಿತ್ತು. ಹಿಮವನ್ನೆಲ್ಲ ಬಗೆದು ಉಪಕರಣವನ್ನು ಹುಡುಕಬೇಕಾಗಿತ್ತು. ಅಲ್ಲದೆ ಅಂಟಾರ್ಕ್‍ಟಿಕದ ಹವಾಮಾನ ಬಲು ಚಂಚಲ. ಏಕೆಂದರೆ ಭೂಮಿಯ ಗಿರಿಕಿಯ ಪ್ರಭಾವ ಅಂಟಾರ್ಕ್‍ಟಿಕ ಖಂಡದ ಸುತ್ತಲ ನೀರಿನ ಮೇಲಾಗುತ್ತದೆ. ಶೀತಲ ನೀರು ದಕ್ಷಿಣ ಸಾಗರ ಸೇರುವಾಗ ಅಲ್ಲಿ ಚಂಡಮಾರುತಗಳೇಳುತ್ತವೆ. ಈ ಕುರಿತು ನಾನು ಸದಾ ನಿಗಾ ಇಡಬೇಕಾಗಿತ್ತು. ಪ್ರತಿದಿನವೂ ವರದಿ ಮಾಡಬೇಕಾಗಿತ್ತು.

`ಮೊದಲ ಬಾರಿ ಈ ಸಂಶೋಧನ ಕೇಂದ್ರಕ್ಕೆ ಹೋದಾಗ ಗಾಬರಿಪಟ್ಟಿದ್ದೆ. ಚಳಿಗಾಲದಲ್ಲಿ ಬಹಳ ಕಡಿಮೆ ಮಂದಿ ಕೆಲಸಮಾಡುತ್ತಾರೆ. ಅದೂ ಸಂಪೂರ್ಣವಾಗಿ ಪುರುಷ ಸಾಮ್ರಾಜ್ಯ. ನಾನು 39 ತಿಂಗಳು ಅಲ್ಲಿ ಕಳೆಯಬೇಕಾಗಿತ್ತು, ಅದೂ -20 ಡಿಗ್ರಿ ಉಷ್ಣತೆಯಲ್ಲಿ. ಮಾನಸಿಕವಾಗಿ ಸಿದ್ಧಳಾಗಿದ್ದೆ. ಬ್ರಿಟನ್ನಿನಿಂದ ಯಾವಾಗಲೋ ಒಮ್ಮೆ ಹೆಲಿಕಾಪ್ಟರ್ ಸಾಮಾನು ಸರಂಜಾಮು ತರುತ್ತಿತ್ತು. ಅದೂ ಭಾರಿ ದುಬಾರಿ ಪ್ರಯಾಣ. ಹಡಗುಗಳು ಏಳು ತಿಂಗಳಿಗೊಮ್ಮೆ ಬರುತ್ತಿದ್ದವು. ಮೊದಲ ಬಾರಿ ಬಹು ದೂರ ಬಂದಿದ್ದೇನೆ ಎನ್ನಿಸಿತು. ಎಲ್ಲರೊಡನೆಯೂ ನಗುನಗುತ್ತಲೇ ಕೆಲಸ ಮಾಡಬೇಕು. ಮುನಿಸಿಕೊಳ್ಳುವಂತಿಲ್ಲ. ಏಕೆಂದರೆ ಯಾರ ಬಗ್ಗೆ ಬೇಸರವಿರುತ್ತಿತ್ತೋ ಅವರನ್ನೇ ಪದೇ ಪದೇ ಅಡುಗೆ ಮನೆಯಲ್ಲೋ, ಡೈನಿಂಗ್ ಹಾಲ್‍ನಲ್ಲೋ ಅಥವಾ ವರಾಂಡದಲ್ಲೋ ನೋಡಲೇಬೇಕು. ಇದು ಒಂದು ಬಗೆಯ ಮನೋವಿಜ್ಞಾನಕ್ಕೇ ಸವಾಲು ಎನ್ನಿಸುತ್ತಿತ್ತು. ಅವೆಲ್ಲವನ್ನೂ ಅನುಭವಿಸಿಯೇ ಹೇಳಬೇಕು. ಬಿರುಗಾಳಿ ಬೀಸಿದರೆ ಇಡೀ ಸಂಶೋಧನ ಕೇಂದ್ರವೇ ಗಾಳಿಯ ಪಾಲಾಗುತ್ತದೇನೋ ಎನ್ನುವಷ್ಟು ಭೀಭತ್ಸ. ಟಿ.ವಿ. ಇಂಟರ್‍ನೆಟ್ ಕೆಲಸ ಮಾಡಬೇಕಾದರೆ ವಾಯುಗೋಳದ ಕೃಪೆ ಬೇಕು. ಇಲ್ಲದಿದ್ದರೆ ಅವು ಟಕ್ ಟಕ್ ಶಬ್ದಮಾಡುತ್ತಲೇ ಕೈಚೆಲ್ಲಿ ಕೂರುತ್ತಿದ್ದವು.’

ಇಂಥ ವಿಶಿಷ್ಟ ಅನುಭವದೊಡನೆ ಆಸ್ಟಾನ್ ಬ್ರಿಟನ್‍ಗೆ ಮರಳಿದಾಗ, ಬ್ರಿಟಿಷ್ ಪತ್ರಿಕೆಗಳಂತೂ ಎರಡು ಚಳಿಗಾಲ, ಮೂರು ಬೇಸಿಗೆಯನ್ನು ಅಂಟಾರ್ಕ್‍ಟಿಕದಲ್ಲಿ ಕಳೆದ ಹೆಮ್ಮೆಯ ಬ್ರಿಟಿಷ್ ಮಹಿಳೆ ಎಂದು ತಲೆಬರಹ ಬರೆದವು. ಲಂಡನ್ನಿನ ರಾಯಲ್ ಜಿಯೋಗ್ರಾಫಿಕಲ್ ಸೊಸೈಟಿ ತನ್ನ ಮುಂದಿನ ನಿಲ್ದಾಣ ಎಂದುಕೊಂಡಳು. ಆದರೆ ಅಲ್ಲಿನ ವಾತಾವರಣ ಇವಳಿಗೆ ಒಂದಿನಿತೂ ಹಿಡಿಸಲಿಲ್ಲ. ಯಾರೋ ಎಲ್ಲೋ ಹೋಗುತ್ತಾರೆ, ಮನಸ್ಸು ಮೈಯನ್ನು ಫಜೀತಿ ಮಾಡಿಕೊಂಡು ಬರುತ್ತಾರೆ. ಮತ್ತೆಲ್ಲೋ ಮಾಯವಾಗಿ ಹೋಗುತ್ತಾರೆ. ಇದು ತನಗೆ ಅಲ್ಲ ಎಂದು ಭಾವಿಸಿದ್ದೇ ತಡ, ಇವಳೂ ಸೇರಿದಂತೆ ನಾಲ್ಕು ಮಂದಿ ತರುಣಿಯರ ತಂಡ ಕಟ್ಟಿಕೊಂಡು ನನ್ನೊಂದಿಗೆ ಗ್ರೀನ್‍ಲೆಂಡಿಗೆ ಬರುವಿರಾ, ಮನಸ್ಸಿದೆಯೇ, ಧೈರ್ಯವಿದೆಯೇ’ ಎಂದು ಪ್ರಶ್ನಿಸಿದಳು. ಅವರೆಲ್ಲರೂ `ರೆಡಿ’ ಎಂದಿದ್ದರು. ಏಕೆಂದರೆ ಎಲ್ಲರೂ ತಾರುಣ್ಯದಲ್ಲಿದ್ದವರು, ಸಾಧಿಸಬೇಕೆಂಬ ಛಲವತಿಯರು. ಉದ್ದೇಶವನ್ನು ಆಸ್ಟಾನ್ ಸ್ಪಷ್ಟಪಡಿಸಿದ್ದಳು. ‘ನಾವು ಗೆದ್ದೇ ಗೆಲ್ಲುತ್ತೇವೆ. ಗ್ರೀನ್‍ಲೆಂಡನ್ನು ಅಡ್ಡಹಾಯ್ದ ಮೊದಲ ಮಹಿಳಾ ತಂಡ ನಮ್ಮದಾಗುತ್ತದೆ’ ಎಂದಾಗ, ಎಲ್ಲರ ಕನಸುಗಳು ಅರಳಿದ್ದವು.

ಹಿಮದ ಮರುಭೂಮಿ

ಅಂಟಾರ್ಕ್‍ಟಿಕವನ್ನುಳಿದರೆ ಇಡೀ ಭೂಮಿಯಲ್ಲಿ ಗ್ರೀನ್‍ಲೆಂಡಿನ ಹಿಮರಾಶಿಯೇ ದೊಡ್ಡದು. ಅದು ತುಂಬಿಕೊಂಡಿರುವ ಹಿಮಗಡ್ಡೆಯನ್ನೆಲ್ಲ ಸುರಿದರೆ 2,85,000 ಘನ ಕಿಲೋ ಮೀಟರ್‍ಗಳಷ್ಟಾಗುತ್ತದೆ. ಒಂದುವೇಳೆ ಎಲ್ಲ ಹಿಮಗಡ್ಡೆಯೂ ಕರಗಿದರೆ, ಜಾಗತಿಕ ಸಾಗರ ಮಟ್ಟ ಈಗಿರುವುದಕ್ಕಿಂತ 7.2 ಮೀಟರ್‍ಗಳಷ್ಟು ಉಬ್ಬುತ್ತದೆ ಎಂಬುದು ಕರಾರುವಾಕ್ಕಾಗಿ ಲೆಕ್ಕಾಚಾರ ಮಾಡಿರುವ ಸತ್ಯ. ಗ್ರೀನ್‍ಲೆಂಡ್ ಸುತ್ತಲೂ ಸಾವಿರಾರು ಹಿಮನದಿಗಳು ಮೆಲ್ಲಗೆ ಸರಿಯುತ್ತ ಸಾಗರ ಸೇರುತ್ತಿವೆ. ಹೆಸರೇನೋ ಗ್ರೀನ್‍ಲೆಂಡ್. ಆದರೆ ಅದು ಹಿಮದ ಮರುಭೂಮಿ. ತೋಳ ಬಲವನ್ನೇ ನಂಬಿ ಗ್ರೀನ್ಲೆಂಡಲ್ಲಿ ಇದೆಲ್ಲವೂ ಆಸ್ಟಾನ್ ತಂಡಕ್ಕೆ ಗೊತ್ತಿತ್ತು. ಇದನ್ನು ಮೆಟ್ಟುವುದರಲ್ಲೇ ನಮ್ಮ ತಾಕತ್ತಿದೆ ಎಂಬ ವಿಶ್ವಾಸವೂ ಅವರಲ್ಲಿತ್ತು. ಹೆಲಿಕಾಪ್ಟರಿನಲ್ಲಿ ಇಡೀ ಗ್ರೀನ್‍ಲೆಂಡನ್ನು ಅಡ್ಡಹಾಯಬಹುದಾಗಿತ್ತು. ಆದರೆ ಇವರಲ್ಲಿ ಅಷ್ಟು ಕಾಸು ಇರಲಿಲ್ಲ, ಅದರ ಜೊತೆಗೆ ಸಾಹಸಯಾನಕ್ಕೆ ಅರ್ಥವೇ ಇರುತ್ತಿರಲಿಲ್ಲ. ಹೀಗಾಗಿಯೇ ಗ್ರೀನ್‍ಲೆಂಡ್ ತಲಪಿದೊಡನೆ ಪೂರ್ವದಿಂದ ಪಶ್ಚಿಮಕ್ಕೆ ನಕ್ಷೆಯಲ್ಲಿ ಒಂದು ಗೆರೆ ಎಳೆದು,`ಇದು ನಮ್ಮ ಮಾರ್ಗ’ ಎಂದು ಆಸ್ಟಾನ್ ಗುರುತಿಸಿದಾಗ, ಅದು ಬರೀ ಎರಡು ಸೆಕೆಂಡಿನ ಕೆಲಸವಾಗಿತ್ತು.

ಆದರೆ ನಿಜವಾದ ಸಾಹಸ ಅಂಥ ಸರಳ ರೇಖೆಯದ್ದಾಗಿರಲಿಲ್ಲ. ಇನ್ನೂ ಒಂದು ಎಡವಟ್ಟಾಗಿತ್ತು. ಎಷ್ಟು ಆಹಾರ ಸಂಗ್ರಹ ಮಾಡಿಕೊಂಡು ಹೋಗಬೇಕೆಂಬ ಸರಿಯಾದ ಅಂದಾಜು ಇಲ್ಲದೆ ಹೋಗಿದ್ದರು. ಜೊತೆಗೆ ತಮ್ಮ ಕಾಲುಗಳಿಗೆ ಯಾವ ಅಳತೆಯ ಷೂಗಳು ಬೇಕೆಂಬುದನ್ನು ಪರಿಗಣಿಸದೆ ಸಿಕ್ಕಿದ್ದನ್ನು ಹೆಕ್ಕಿ ಒಯ್ದಿದ್ದರು. ಒಬ್ಬೊಬ್ಬರೂ ಬರೋಬ್ಬರಿ 50ಕಿಲೋ ತೂಕದ ಸಾಮಾನು ಹೊತ್ತ ಸ್ಲೆಡ್ಜ್ ಎಳೆಯಬೇಕಾಗಿತ್ತು. ದೂರ? 560 ಕಿಲೋ ಮೀಟರ್ ಹಾಯಬೇಕಾಗಿತ್ತು. ಅದೇನೂ ಸಪಾಟಾದ ಜಾಗವಲ್ಲ, ಅಲ್ಲೂ ಏರುತಗ್ಗುಗಳಿದ್ದವು, ಕಣಿವೆ ಕಂದರಗಳಿದ್ದವು. ಪಶ್ಚಿಮದಿಂದ ಹೊರಟು ಪೂರ್ವ ತೀರಕ್ಕೆ ತಲಪಬೇಕು. ಅವರ ತಂಡಕ್ಕೆ ತಾವೇ ಕೊಟ್ಟುಕೊಂಡ ಹೆಸರು ಆರ್ಕ್‍ಟಿಕ್ ಫಾಕ್ಸ್’. ದಾರಿಯಲ್ಲಿ ನರಿಗಳೂ ಕಾಣಲಿಲ್ಲ, ಸಾರಂಗಗಳೂ ಕಾಣಲಿಲ್ಲ. ಇಡೀ ಜಗತ್ತೇ ಪ್ರಾಣಿಗಳಿಂದ ಶೂನ್ಯವಾಗಿದೆ ಎನ್ನುವಷ್ಟು ಬಣಬಣ. ಒಮ್ಮೆ ಈ ತಂಡ ಒಬ್ಬರ ಹಿಂದೆ ಒಬ್ಬರು ಹೋಗುವಾಗ ಭಾರಿ ಹಿಮಕರಡಿ ಎದುರಿಗೆ ಬರುತ್ತಿತ್ತು. ಎಲ್ಲರಿಗೂ ಹತ್ತಿರದಿಂದ ನೋಡುವಾಸೆ. ಆದರೆ ಅವು ಭಯಂಕರ ಪ್ರಾಣಿಗಳು ಎಂಬುದು ಗೊತ್ತಿತ್ತು. ಹೀಗಾಗಿ ದೂರದಿಂದಲೇ ನೋಡಿ ಪುಲಕಗೊಳ್ಳುವ ಅವಕಾಶ. ಆ ಕರಡಿಯೂ ಅಷ್ಟೇ. ಆಹಾರವನ್ನು ಹುಡುಕಲು ಅದೆಷ್ಟು ಕಿಲೋ ಮೀಟರ್ ನಡೆದಿತ್ತೋ ತಿಳಿಯದು. ಇತ್ತೀಚೆಗೆ ಬಿಸಿಲ ತಾಪದಿಂದ ಅಲ್ಲಿನ ಹಿಮಗಡ್ಡೆಗಳು ಕರಗಿ ಅವಕ್ಕೆ ಆಹಾರ ಸಂಚಕಾರ ಉಂಟುಮಾಡಿದ್ದವು. ಅದು ಕೂಡ ದಾರಿ ಬದಲಾಯಿಸಿತು.`ನಿಮ್ಮ ದಾರಿಗೆ ನಾನೇಕೆ ಅಡ್ಡಬರಲಿ’ ಎಂಬ ಔದಾರ್ಯ ತೋರಿದಂತಿತ್ತು. ಕೊಂಚ ನಿರಾಶೆ, ಕೊಂಚ ನಿರಾಳ ತಂಡಕ್ಕೆ.

ಅಂತೂ ರೆಟ್ಟೆಯ ಬಲದಿಂದ ಸ್ಲೆಡ್ಜ್ ಎಳೆಯುತ್ತ ನಿದ್ದೆಬಂದಾಗ ಟೆಂಟ್‍ನಲ್ಲಿ ತೂರುತ್ತ, ಕೊನೆಗೂ ಪೂರ್ವ ಅಂಚನ್ನು ತಂಡ ತಲಪಿತು. ವಾಹ್, ಗೆದ್ದೆಬಿಟ್ಟೆವು’ ಎಂಬ ದನಿ ಎಲ್ಲರ ಬಾಯಲ್ಲೂ. ಆದರೆ ಇವರ ಪ್ಲಾನ್ ಕೈಕೊಟ್ಟಿತ್ತು. ಮರಳುವಾಗ ಮೋಟಾರ್ ಚಾಲಿತ ಗಾಳಿಪಟ ಹಿಡಿದು ಸಲೀಸಾಗಿ ಬರಬಹುದು ಎಂದುಕೊಂಡಿದ್ದರು. ರೆಟ್ಟೆಗೆ ಕೆಲಸ ಕಡಿಮೆ ಎಂಬ ಸಮಾಧಾನದಲ್ಲಿದ್ದರು. ಆದರೆ ಬಿರುಗಾಳಿ ಬೀಸಿ ಗಾಳಿಪಟ ಮೇಲೇಳಲೇ ಎಲ್ಲ. ಇಂಥ ಸಮಯದಲ್ಲೇ ತಂಡದ ನಾಯಕಿ ನಾನು ನಿಜವಾಗಲೂ ಅಗ್ನಿಪರೀಕ್ಷೆಗೆ ಒಳಗಾಗಿದ್ದೆ. ಬೇರೆ ಇನ್ನೇನೂ ಆಯ್ಕೆ ನಮ್ಮ ಬಳಿ ಇರಲಿಲ್ಲ. ಜೊತೆಯವರಿಗೆ ಹೇಳಿದೆ `ಮತ್ತೆ ತೋಳಬಲವನ್ನೇ ನೆಚ್ಚಿಕೊಂಡು 560 ಕಿಲೋ ಮೀಟರ್ ಸಾಗಿ ಮೂಲ ಜಾಗವನ್ನು ತಲಪಬೇಕು’ ಎಂದಾಗ, ಯಾರೂ ಕಂಗಾಲಾಗಲಿಲ್ಲ. ಅದೇ ನನಗೆ ಭರವಸೆಯನ್ನು ಹುಟ್ಟಿಸಿತ್ತು’ ಎನ್ನುತ್ತಾಳೆ ಆಸ್ಟಾನ್. ಹೇಗೆ ಬಂದರೋ ಹಾಗೆಯೇ 31 ದಿನದಲ್ಲಿ ಎರಡು ಬಾರಿ ಗ್ರೀನ್‍ಲೆಂಡನ್ನು ಅಡ್ಡಹಾಯ್ದು 1,120ಕಿಲೋ ಮೀಟರ್ ಕ್ರಮಿಸಿದ್ದರು.

ಜಗತ್ತು ಸಂಭ್ರಮಿಸಿತ್ತು, ತಂಡ ಸಂಭ್ರಮಿಸಿತ್ತು. ಅದು ಚರಿತ್ರಾರ್ಹ ದಾಖಲೆಯಾಯಿತು. ಮತ್ತೊಮ್ಮೆ ಆಸ್ಟಾನ್ ಮಾಧ್ಯಮಗಳಲ್ಲಿ ಮಿಂಚಿದ್ದಳು. ಪ್ರಸಿದ್ಧಿ ಪಡೆದವರಿಗೆ ವಿರಾಮ ಎಂಬುದೆಲ್ಲಿ? ಮನಸ್ಸು ಒತ್ತಿ ಒತ್ತಿ ಹೇಳುತ್ತಿರುತ್ತದೆಹೊರಡು ಹೊರಡು’ ಎಂದು. (ನೇಪಾಳದ ಶೆರ್ಪಾ ಕಾಮಿರೀಟ ಎಂಬ ಪರ್ವತಾರೋಹಿ ಎವರೆಸ್ಟ್ ಶಿಖರವನ್ನು ಇದೇ ವರ್ಷದ ಮೇ7ರಂದು 25ನೆಯ ಬಾರಿ ಹತ್ತಿ ತನ್ನ ದಾಖಲೆಯನ್ನು ತಾನೇ ಮುರಿದಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು). ಪರ್ವತಾರೋಹಿಗಳನ್ನು ಶಿಖರಗಳು ಮತ್ತೆ ಮತ್ತೆ ಕರೆಯುತ್ತವೆ. ಹಾಗೆಯೇ ಆಸ್ಟಾನ್‍ಳನ್ನು ಹಿಮದ ಸಾಮ್ರಾಜ್ಯಗಳು `ಬಾ’ ಎಂದು ಕರೆಯುತ್ತಿರುತ್ತವೆ. ಇದೊಂದು ಗೀಳು ಎನ್ನುವುದಕ್ಕಿಂತ ಛಲ ಎನ್ನುವುದೇ ಸರಿಯಾದ ಪದ. (ಮುಂದಿನ ಕಂತಿನಲ್ಲಿ ಲೇಖನದ ಎರಡನೇ ಭಾಗ)

  • ಟಿ.ಆರ್. ಅನಂತರಾಮು

(ಡಾ ಟಿ.ಆರ್. ಅನಂತರಾಮು, ನಂ. 534, 70ನೇ ಅಡ್ಡರಸ್ತೆ, 14ನೇ ಮುಖ್ಯ ರಸ್ತೆ, ಕುಮಾರಸ್ವಾಮಿ ಬಡಾವಣೆ 1ನೇ ಹಂತ, ಬೆಂಗಳೂರು-560 111, Mobile : 9886356085)


Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

One thought on “ಸ್ತ್ರೀ ಎಂದರೆ ಅಷ್ಟೇ ಸಾಕೆ?/ ಅಂಟಾರ್ಕ್‍ಟಿಕದಲ್ಲಿ ಅಂಜದ ಸಾಹಸಿ ಫೆಲಿಸಿಟಿ ಆಸ್ಟಾನ್ – ಟಿ.ಆರ್. ಅನಂತರಾಮು

  • May 20, 2021 at 2:16 am
    Permalink

    BEAUTIFULLY WRITTEN, AS USUAL!

    Reply

Leave a Reply

Your email address will not be published. Required fields are marked *