ಸ್ತ್ರೀ ಎಂದರೆ ಅಷ್ಟೇ ಸಾಕೆ?/ ಅಂತರಿಕ್ಷದಲ್ಲಿ ಮೊದಲ ಮಹಿಳೆ : ವ್ಯಾಲೆಂಟಿನ ತೆರೆಷ್ಕೋವ – ಟಿ.ಆರ್. ಅನಂತರಾಮು

ಕಾಣದ ಕನಸನ್ನು ನನಸಾಗಿಸಿಕೊಂಡ ವಿರಳ ಸಾಧಕಿ ವ್ಯಾಲೆಂಟಿನ ಆಕಾಶಕ್ಕೆ ಹಾರಿದ ಮೊದಲ ಮಹಿಳೆ. `ರಷ್ಯದಲ್ಲಿ ಮಹಿಳೆಯರು ರೈಲ್ವೆ ಲೈನ್ ಎಳೆಯುವಷ್ಟು ಬುದ್ಧಿವಂತರಾಗಿರುವಾಗ, ಆಕಾಶಕ್ಕೆ ಏಕೆ ಹಾರಬಾರದು?’ ಎಂಬ ತೆರೆಷ್ಕೋವಳ ಬಹು ಪ್ರಸಿದ್ಧ ಮಾತು, ಲಕ್ಷಾಂತರ ಮಹಿಳೆಯರಿಗೆ ಸ್ಫೂರ್ತಿ ಕೊಟ್ಟಿದೆ. ಆಕೆಯ ದಾಖಲೆಯನ್ನು ಯಾರೂ ಎಂದಿಗೂ ಮುರಿಯಲು ಸಾಧ್ಯವಿಲ್ಲ. ಅಂತರಿಕ್ಷ ಸಾಹಸ ಮಾಡಿದ ಮೊದಲ ಮಹಿಳೆಯಷ್ಟೇ ಅಲ್ಲ, ಒಂಟಿಯಾಗಿ ಹೋದ ಮಹಿಳೆ ಎಂಬುದು ಆಕೆಗಿರುವ ಹೆಗ್ಗಳಿಕೆ.

`ನಿನ್ನ ಹೆಸರೇನು ಪುಟ್ಟ?’

`ವ್ಯಾಲೆಂಟಿನ’

ಓಹ್, ವ್ಯಾಲೆಂಟಿನ ತೆರೆಷ್ಕೋವಳ ಸಂಬಂಧಿಯೆ?’

`ಇಲ್ಲ, ನಾನು ಸಂಬಂಧಿಯಲ್ಲ’.

`ಸರಿ, ಮುಂದೆ ಏನಾಗಬೇಕೆಂದಿದ್ದೀ?’

`ತೆರೆಷ್ಕೋವಳ ತರಹ ನಾನು ಅಂತರಿಕ್ಷದಲ್ಲಿ ಹಾರಾಡಬೇಕು-ಗಗನಯಾನಿಯಾಗಬೇಕು’ ಎಂದು ಮಗು ಆಸೆ ತೋಡಿಕೊಂಡರೆ ಅದು ಅನಿರೀಕ್ಷಿತವೂ ಅಲ್ಲ, ಆಶ್ಚರ್ಯಕರವೂ ಅಲ್ಲ. ವ್ಯಾಲೆಂಟಿನ ಎಂದೊಡನೆ ರಷ್ಯ ಏನು ಬಂತು, ಇಡೀ ಜಗತ್ತಿನ ಕಿವಿ ನೆಟ್ಟಗಾಗುತ್ತದೆ. ಕಣ್ಣಮುಂದೆ ಥಟ್ಟನೆ ಮೂಡುವುದು ರಷ್ಯ ಸಂಜಾತೆ, ಮೊದಲ ಮಹಿಳಾ ಗಗನಯಾನಿ ವ್ಯಾಲೆಂಟಿನ ತೆರೆಷ್ಕೋವಳದೇ. ಈಕೆಗೀಗ 84ರ ಹರೆಯ, ಆದರೂ 24ರ ಹರೆಯದ ಹುಮ್ಮಸ್ಸು. ನಮ್ಮ ನಡುವೆ ನಗುನಗುತ್ತಲೇ ಇದ್ದಾಳೆ. ಕಾಣದ ಕನಸನ್ನು ನನಸಾಗಿಸಿಕೊಂಡ ವಿರಳಾತಿವಿರಳ ಸಾಧಕಿ.

ನಮ್ಮಲ್ಲಿ ವ್ಯಾಲೆಂಟಿನ ಎಂದೊಡನೆ ತರುಣ ಪೀಳಿಗೆ ಪ್ರೇಮಿಗಳ ದಿನವಾದ ವ್ಯಾಲೆಂಟೈನ್ಸ್ ಡೇ ನೆನಪಿಸಿಕೊಳ್ಳುತ್ತಾರೆ. ಗುಲಾಬಿ ವಿನಿಮಯ ಮಾಡಿಕೊಂಡದ್ದನ್ನು ಮೆಲುಕು ಹಾಕುತ್ತಾರೆ. ಇರಲಿ, ಹೆಸರಲ್ಲೇನಿದೆ ಎಂದು ಷೇಕ್ಸ್‍ಪಿಯರ್ `ರೋಮಿಯೋ ಅಂಡ್ ಜ್ಯೂಲಿಯೆಟ್’ ನಾಟಕದಲ್ಲಿ ರೋಮಿಯೋ ಪಾತ್ರದ ಮೂಲಕ ಹೇಳಿಸಿದ. ಹೆಸರಲ್ಲಿ ಎಲ್ಲವೂ ಇದೆ ಎಂದು ನಾವೇ ದಬಾಯಿಸೋಣ. ಷೇಕ್ಸ್‍ಪಿಯರ್ ಈಗ ಇರದಿದ್ದರೂ. ಎಲ್ಲ ಹೆಸರಿಗೂ ಒಂದು ಹಿನ್ನೆಲೆ ಇರುತ್ತದೆ ತಾನೆ? ವ್ಯಾಲೆಂಟೇನ್ ಎಂದರೆ ಲ್ಯಾಟಿನ್ ಭಾಷೆಯಲ್ಲಿ ಶಕ್ತಿವಂತೆ, ಆರೋಗ್ಯವಂತೆ ಎಂಬ ಅರ್ಥವಿದೆ. ನಮ್ಮ ಈ ನಾಯಕಿಗೆ ಕೂಡ ಈ ವಿಶೇಷಣಗಳು ಒಪ್ಪುತ್ತವೆ. ಹಾಗಿರದಿದ್ದರೆ ಅಂತರಿಕ್ಷಕ್ಕೆ ಹಾರಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಸಲ್ಲುತ್ತಿದ್ದುದಾದರೂ ಹೇಗೆ?

ರಷ್ಯದಲ್ಲಿ ಮಹಿಳೆಯರು ರೈಲ್ವೆ ಲೈನ್ ಎಳೆಯುವಷ್ಟು ಬುದ್ಧಿವಂತರಾಗಿರುವಾಗ, ಆಕಾಶಕ್ಕೆ ಏಕೆ ಹಾರಬಾರದು?’ ಇದು ತೆರೆಷ್ಕೋವಳ ಬಹು ಪ್ರಸಿದ್ಧ ನುಡಿ, ಲಕ್ಷಾಂತರ ಮಹಿಳೆಯರಿಗೆ ಇದು ಸ್ಫೂರ್ತಿ ಕೊಟ್ಟಿದೆ. ಎಲ್ಲರಿಗೂ ಬಾಲ್ಯವಿರುತ್ತದೆ, ಬಾಲ್ಯದಲ್ಲಿ ಕನಸುಗಳಿರುತ್ತವೆ. ಅದೂ ಬಣ್ಣ ಬಣ್ಣದ ಕನಸುಗಳು. ನಿಮಗೆ ಅಚ್ಚರಿ ಎನಿಸಬಹುದು, ಅವಳಿಗೆ ಕನಸುಗಳೇ ಇರಲಿಲ್ಲ! ಅವರ ಅಪ್ಪ-ಅಮ್ಮ ಉದ್ದನೆಯ ಹೆಸರಿಟ್ಟಿದ್ದರು-ವ್ಯಾಲೆಂಟಿನ ವ್ಲಾದಿಮಿರೋವ್ನ ತೆರೆಷ್ಕೋವ. ಆದರೆ ಪದೇ ಪದೇ ಹೆಸರು ಕರೆಯಬೇಕಲ್ಲ, ನೂರೆಂಟು ಬಾರಿ. ಅದಕ್ಕೆವಾಲ್ಯ’ ಎಂದು ಹೆಸರನ್ನು ಮೊಟಕುಮಾಡಿದರು, ನಮ್ಮಲ್ಲಿ ಸುಶೀಲಮ್ಮನನ್ನು ಸುಶೀ ಅಂದಂತೆ. ವಸಂತಲಕ್ಷ್ಮಿಯನ್ನು ವಸು ಎಂದಂತೆ.

ಭಾರತದ ಮಟ್ಟಿಗೆ ಗಂಗಾನದಿಯ ಹೆಸರು ನಮ್ಮ ಸಾಂಸ್ಕøತಿಕ ಇತಿಹಾಸದಲ್ಲೇ ಸೇರಿಹೋಗಿದೆ. ಹಾಗೆಯೇ ರಷ್ಯದ ವೋಲ್ಗಾ ನದಿಯು ಕೂಡ. ಮಾಸ್ಕೋಗೆ 270 ಕಿಲೋ ಮೀಟರ್ ಈಶಾನ್ಯಕ್ಕಿರುವ ವೋಲ್ಗಾ ನದಿ ದಂಡೆಯಲ್ಲಿ ಬಚ್ಚಿಟ್ಟುಕೊಂಡಿರುವ ಮಾಲ್ಸೆನಿಕೋವೊ ಎಂಬ ಪುಟ್ಟ ಹಳ್ಳಿ ಇದೆ. ಗೂಗಲ್ ಮ್ಯಾಪನ್ನು ಹಿಗ್ಗಿಸಿ, ಹಿಗ್ಗಿಸಿ ನೋಡಿದರೆ ಕಾಣಬಹುದೇನೋ. ಈ ಮ್ಯಾಪಿಲ್ಲದಿದ್ದರೆ ಈ ಪುಟ್ಟ ಹಳ್ಳಿಗೆ ಅಸ್ತಿತ್ವವೇ ಇಲ್ಲವೇನೋ ಅನ್ನುವಷ್ಟು ಗೌಣ. 1937ರ ಮಾರ್ಚ್ 6ರಂದು ವಾಲ್ಯ ಹುಟ್ಟಿದ್ದು ಅಲ್ಲಿ; ಬಡ ಕುಟುಂಬ. ಅಪ್ಪ ವ್ಲಾದಿಮೀರ್ ತೆರೆಷ್ಕೋವ್ ರಷ್ಯದ ಸೈನ್ಯದ ತುಕಡಿಯೊಂದರಲ್ಲಿ ಸಾರ್ಜೆಂಟ್ ಆಗಿದ್ದ. ಆಗಾಗ ಕೃಷಿಯನ್ನು ಮಾಡುತ್ತಿದ್ದ. ಆದರೆ ವ್ಯಾಲೆಂಟಿನ ಎರಡು ವರ್ಷದವಳಿದ್ದಾಗಲೇ ಅವರ ಅಪ್ಪ ಎರಡನೇ ಮಹಾಯುದ್ಧದಲ್ಲಿ ಸತ್ತುಹೋದ. ಬೇರೆ ದಾರಿಯಿಲ್ಲದೆ ಅಮ್ಮನೊಡನೆ ಹತ್ತಿ ಫ್ಯಾಕ್ಟರಿಗೆ ಸೇರಿಕೊಂಡಳು. ವಯಸ್ಸು ಹತ್ತಾದರೂ ಶಾಲೆಯ ಮುಖ ನೋಡಲಿಲ್ಲ. ಟೈರ್ ಫ್ಯಾಕ್ಟರಿಯಲ್ಲೂ ದುಡಿದಿದ್ದಾಯ್ತು. ಮತ್ತೆ ಶಾಲೆಗೆ ಹೊರಟಳು, ಮತ್ತೆ ಬಿಟ್ಟಳು. ಶಿಕ್ಷಣ ಮತ್ತೆ ಅವಳನ್ನು ಒಳಗೊಳಗೇ ಪೀಡಿಸುತ್ತಿತ್ತು. ಕೊನೆಗೆ ಕರೆಸ್ಪಾಂಡೆನ್ಸ್ ಕೋರ್ಸ್‍ಗೆ ಸೇರಿದಳು, ಫ್ಯಾಕ್ಟರಿಯಲ್ಲಿ ದುಡಿಯುತ್ತಲೇ ಇದ್ದಳು. 1960ರಲ್ಲಿ ಲೈಟ್ ಇಂಡಸ್ಟ್ರೀ ಟೆಕ್ನಿಕಲ್ ಸ್ಕೂಲಿನಿಂದ ಪದವಿ ಪಡೆದಳು.

ಫ್ಯಾಕ್ಟರಿಯಲ್ಲಿ ಏನೋನೋ ಅಧ್ವಾನಗಳು. ಸಂಬಳದಲ್ಲಿ ಏರುಪೇರು, ಬರೀ ದುಡಿತ. ಇದಕ್ಕೆಲ್ಲ ಏನು ಮದ್ದು ಎಂದು ತನ್ನನ್ನು ತಾನೇ ಕೇಳಿಕೊಳ್ಳುತ್ತಿದ್ದಳು. ಥಟ್ಟನೆ ಹೊಳೆಯಿತು, ತಂಡದಲ್ಲಿ ಸೇರಬೇಕು, ಅನ್ಯಾಯವನ್ನು ಮಟ್ಟಹಾಕಬೇಕು ಎಂದು. ಯಂಗ್ ಕಮ್ಯುನಿಸ್ಟ್ ಲೀಗ್’ ಸೇರಿಕೊಂಡಳು. ಅನ್ಯಾಯದ ವಿರುದ್ಧ ತಿರುಗಿಬೀಳುತ್ತಿದ್ದಳು. ಈಕೆಯ ದಿಟ್ಟ ನಡೆ ಕಂಡುಬಾ ಮರಿ, ಕಮ್ಯುನಿಸ್ಟ್ ಪಾರ್ಟಿ ಸೇರಿಕೋ’ ಎಂದರು ಅಗೋಚರ ನಾಯಕರು. ಅಲ್ಲೂ ಅವಳ ಧ್ವನಿ ಜೋರು. ಬಿಡುವಿದ್ದಾಗ ಬೆಟ್ಟಕ್ಕೆ ಹೋಗಿ ಪ್ಯಾರಷೂಟ್ ಬಳಸಿ ಜಂಪ್ ಮಾಡುವುದನ್ನು ಕಲಿತಳು.

ಇದನ್ನೆಲ್ಲ ಗಮನಿಸುತ್ತಿದ್ದ `ಯಾರೋಸ್ಲಾವ್ ಏರ್‍ಸ್ಪೋಟ್ರ್ಸ್ ಕ್ಲಬ್’ ನಮ್ಮಲ್ಲಿಗೆ ಬಾ ಎಂದು ಸ್ವಾಗತಿಸಿತು. ಆಗತಾನೇ ಯೂರಿ ಗಗಾರಿನ್ ಮೊದಲ ಗಗನಯಾತ್ರಿಯಾಗಿ ದೊಡ್ಡ ಸುದ್ದಿಮಾಡಿದ್ದ. 1961ರಲ್ಲಿ ಎಲ್ಲ ಪತ್ರಿಕೆಗಳಲ್ಲೂ ಇವನದೇ ವಿವರ, ಸಾಧನೆಯ ಪ್ರಶಂಸೆ. ಆತ ಎಲ್ಲರ ಕಣ್ಣಲ್ಲೂ ಹೀರೋ ಆಗಿಬಿಟ್ಟಿದ್ದ. ತೆರೆಷ್ಕೋವಾಗೂ ಅವನಂತೆ ಆಗಬೇಕೆಂಬ ಬಯಕೆ ಚಿಗುರಿದ್ದು ಆಗ. ಮಹಿಳೆಗೇಕೆ ಗಗನಯಾನಿಯಾಗಲು ಸಾಧ್ಯವಿಲ್ಲ, ಅದೇನು ಸಾಧಿಸಲಾಗದ ಕ್ಷೇತ್ರವೆ? ಎಂದು ಪ್ರಶ್ನೆ ಕೇಳುತ್ತಲೇ ಸೀದಾ ಸೋವಿಯತ್ ಅಂತರಿಕ್ಷ ಯೋಜನೆಯನ್ನು ನಿರ್ವಹಿಸುತ್ತಿದ್ದ ಕಚೇರಿಯ ಬಾಗಿಲು ತಟ್ಟಿದಳು.

`ಒಳಗೆ ಬರಬಹುದು’ ಎಂದಿತು ಅಪರಿಚಿತ ಬಾಸ್ ಧ್ವನಿ. ಅದರ ಹಿಂದೆಯೇಇನ್ನೊಂದು ಪ್ರಶ್ನೆ, ನಿನಗೆ ಪೈಲಟ್ ಆಗಿ ಅನುಭವವಿದೆಯೆ? ಎಷ್ಟು ಗಂಟೆ ಹಾರಾಟ ಮಾಡಿದ್ದೀಯಾ? ಸರ್ಟಿಫಿಕೇಟ್ ತಂದಿದ್ದೀಂiÀi?’

`ನೀವು ಕೇಳಿದ ಯಾವ ದಾಖಲೆಗಳೂ ನನ್ನಲ್ಲಿಲ್ಲ. ನಾನು ಪೈಲಟ್ ಅಲ್ಲ’, ಹೀಗೆ ಹೇಳುವಾಗ ಅವಳು ಅಳುಕಲಿಲ್ಲ;

`ಮತ್ತೆ ಇಲ್ಲಿಗೇಕೆ ಬಂದೆ? ಗೊತ್ತಿಲ್ಲವೆ ಅಂತರಿಕ್ಷ ಯೋಜನೆಗೆ ತೊಡಗುವವರಿಗೆ ಕನಿಷ್ಠ ಪೈಲಟ್ ಆಗಿ ಅನುಭವವಿರಬೇಕು.’

ಇವಳು ಮತ್ತೆ ಅದೇ ತಾಕತ್ತಿನ ಧ್ವನಿಯಿಂದ ಹೇಳಿದಳು `ನನಗೆ ನೂರಿಪ್ಪತ್ತಾರು ಬಾರಿ ಪ್ಯಾರಾಷೂಟ್‍ನಿಂದ ಇಳಿದ ಅನುಭವವಿದೆ.’

ಹುಡುಗಿಯ ಧಿಮಾಕು ಕಂಡು ಬಾಸ್ ಅಬ್ಬರಿಸಬೇಕಾಗಿತ್ತು; ಹಾಗೆ ಮಾಡಲಿಲ್ಲ. ಆತ ಒಂದು ಕ್ಷಣ ಯೋಚಿಸಿದ. ಹೌದು, ಪ್ರತಿ ಗಗನಯಾನಿಯೂ ತುರ್ತು ಸಂದರ್ಭದಲ್ಲಿ ಪ್ಯಾರಷೂಟ್ ಬಳಸಿ ತನ್ನ ಜೀವ ರಕ್ಷಿಸಿಕೊಳ್ಳಬೇಕು. ತರಪೇತಿಯಲ್ಲಿ ಅದು ಕಡ್ಡಾಯ ಎಂದುಕೊಂಡ. ತೆರೆಷ್ಕೋವಾಗೆ ಆತ್ಮವಿಶ್ವಾಸ, ಪ್ರಾಯ ಎರಡೂ ಇದ್ದವು. ತಡಮಾಡದೆ ಆತ `ನಾಳೆಯೇ ಸೇರಿಕೋ’ ಎಂದ. ತೆರೆಷ್ಕೋವಳ ಸಾಹಸಗಾಥೆ ಪ್ರಾರಂಭವಾದ ಕ್ಷಣ ಇದು. ಈಕೆಯ ಜೊತೆ ಇನ್ನೂ ನಾಲ್ಕು ಮಂದಿ ಮಹಿಳೆಯರು ಹದಿನೆಂಟು ತಿಂಗಳು ಕಠಿಣ ತರಪೇತಿ ಪಡೆದರು. ದೀರ್ಘ ಏಕಾಂತವನ್ನು ಅನುಭವಿಸುವ ಪರೀಕ್ಷೆ. ಅಸಾಮಾನ್ಯ ಗುರುತ್ವದಲ್ಲಿ ಶರೀರ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬ ಪರೀಕ್ಷೆ. ಈಜುಕೊಳದಲ್ಲಿ ಭರ್ರನೆ ಸುನಾಮಿ ಏಳಿಸಿ, ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬ ಪರೀಕ್ಷೆ, ಹೀಗೆ ಒಂದಲ್ಲ, ಹತ್ತಾರು ಪರೀಕ್ಷೆಗಳು ನಡೆದೇ ಇದ್ದವು. ಅಂತಿಮವಾಗಿ ಗೆದ್ದವಳು ಇವಳೊಬ್ಬಳೇ-ತೆರೆಷ್ಕೋವ.

ಕನಸು ಮೀರಿದ ವಾಸ್ತವತೆ

ತೆರೆಷ್ಕೋವ, ವೋಸ್ತಾಕ್-6 ಎಂಬ ಗಗನನೌಕೆ ಚಲಾಯಿಸಬೇಕು. ಅನುಭವೀ ಗಗನಯಾನಿ ವೆಲೇರಿ ಬೈಕೋವ್‍ಸ್ಕಿ, ವೋಸ್ತಾಕ್-5ರಲ್ಲಿ ಜೂನ್ 14, 1963ರಲ್ಲಿ ಕಕ್ಷೆಗೆ ಹೋಗಬೇಕು. ಎರಡು ದಿನ ತಡವಾಗಿ ತೆರೆಷ್ಕೋವ ಕಕ್ಷೆಯಲ್ಲಿ ಅವನನ್ನು ಸಂಧಿಸಬೇಕು. ಅದೂ ಐದು ಕಿಲೋ ಮೀಟರ್ ಸಮೀಪಕ್ಕೆ ಬಂದು. ಜೊತೆಗೆ ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳಬೇಕು. ನಿಜಕ್ಕೂ ಸವಾಲಿನ ಕೆಲಸ. ಅದೂ ಆರಂಭದಲ್ಲೇ. ಇಬ್ಬರೂ ಯಶಸ್ವಿಯಾದರು. ತೆರೆಷ್ಕೋವಾ 48 ಬಾರಿ ಭೂಪ್ರದಕ್ಷಿಣೆ ಮಾಡಿದಳು. 70 ಗಂಟೆ ಕಕ್ಷೆಯಲ್ಲಿ ಹಾರಾಟಮಾಡಿದಳು. ಅಂದಿನ ಸೋವಿಯತ್ ರಷ್ಯ ಮತ್ತು ಯೂರೋಪಿನಲ್ಲಿ ಟಿ. ವಿ. ಸೇರಿದಂತೆ ಎಲ್ಲ ಮಾಧ್ಯಮಗಳೂ ಅವಳ ಮೇಲೆ ಕೇಂದ್ರೀಕರಿಸಿದ್ದವು. ಕೊಟ್ಟ ಕೆಲಸವನ್ನು ನಗುನಗುತ್ತಲೇ ನಿಭಾಯಿಸಿದ್ದಳು. ಎಲ್ಲರ ಬಾಯಲ್ಲೂ ಇವಳದೇ ಸ್ತುತಿ. `ಎಂಥ ಕೆಚೆÀ್ಚದೆಯ ಹೆಣ್ಣು’ ಎಂದು. ಆದರೆ ಮುಂದಿನ ಕೆಲವೇ ಗಂಟೆಗಳಲ್ಲಿ ತೆರೆಷ್ಕೋವಗೆ ಸಾವು ಬದುಕಿನ ನಡುವೆ ಹೋರಾಟ ಮಾಡಬೇಕಾಗುತ್ತದೆಂಬ ಕಲ್ಪನೆಯೇ ಇರಲಿಲ್ಲ. ಆದದ್ದಿಷ್ಟು, ಗಗನನೌಕೆಯ ಅಟೋಮೆಟಿಕ್ ನೆವಿಗೇಷನ್ ಸಾಫ್ಟ್ಟ್‍ವೇರ್‍ನಲ್ಲಿ ದೋಷ ತಲೆದೋರಿತ್ತು. ಆಗಸದಲ್ಲಿ ಮಾಡುವುದೇನು? ಪಾರ್ಕ್ ಮಾಡಿ ಸರಿಪಡಿಸಲಾದೀತೆ? ತಕ್ಷಣ ಗ್ರೌಂಡ್ ಕಂಟ್ರೋಲ್ ರೂಂನಿಂದ ಈ ಸಮಸ್ಯೆಯನ್ನು ಪರಿಹರಿಸಿದರು.

ತೆರೆಷ್ಕೋವ ಧರೆಗೇನೋ ಇಳಿದಳು. ಆದರೆ ನಿರೀಕ್ಷೆಗಿಂತ ಹೆಚ್ಚು ರಭಸದಲ್ಲಿ. ಮಂಗೋಲಿಯ ಮತ್ತು ಚೀನ ಗಡಿ ನಡುವೆ ಈಗಿನ ಕಝಕಿಸ್ತಾನದ ಒಂದು ಹಳ್ಳಿಯ ಬಳಿ ಈಕೆ ನೌಕೆಯಿಂದ ಜಿಗಿದು ಪ್ಯಾರಷೂಟ್‍ನಿಂದ ಇಳಿದಾಗ, ಸುತ್ತಣ ಹಳ್ಳಿಗರು ಬಂದು ಬಾಯಿ ಬಾಯಿ ಬಿಟ್ಟು ನೋಡುತ್ತಿದ್ದರು. ಕೆಲವು ಹಿರಿಯರು ಬಂದು ಅವಳನ್ನು ಕರೆದೊಯ್ದು ಊಟೋಪಚಾರ ಮಾಡಿದರು. ಆ ಹೊತ್ತಿಗೆ ಆಗಲೇ ಸೇಬಿನ ಮೇಲೆ ಚಾಕು ಗೀರಿದಂತೆ ಮುಖದ ತುಂಬ ಗೀರು ಗಾಯಗಳಾಗಿದ್ದವು. ತೆರೆಷ್ಕೋವ ಸುರಕ್ಷಿತವಾಗೇನೋ ಇಳಿದಳು, ಆದರೆ ಕಾನೂನನ್ನು ಎದುರಿಸಬೇಕಾದ ಪ್ರಸಂಗ ಬಂತು. ಏಕೆಂದರೆ ಯಾರೇ ಗಗನಯಾನಿಯಾಗಲಿ ಧರೆಗೆ ಇಳಿದೊಡನೆ ನೇರವಾಗಿ ಎಲ್ಲಿಗೂ ಹೋಗುವಂತಿಲ್ಲ. ಆರೋಗ್ಯ ತಪಾಸಣೆ ಕೋಣೆಗೆ ಹೋಗಬೇಕು. ಅಲ್ಲಿ ಕ್ಲಿಯರೆನ್ಸ್ ಕೊಟ್ಟ ಮೇಲಷ್ಟೇ ಹೊರ ಪ್ರಪಂಚಕ್ಕೆ ಪ್ರವೇಶ. ಆದರೆ ಅವಳ ಸನ್ನಿವೇಶವನ್ನು ಗಮನಿಸಿ, ಮೇಲಧಿಕಾರಿಗಳು ಮಾಫಿ ಮಾಡಿದರು. ಶಿಕ್ಷೆಯಿಂದ ಬಚಾವಾದಳು.

ಅಮೆರಿಕದೊಂದಿಗೆ ಆಗಿನ ರಷ್ಯ ಅಂತರಿಕ್ಷ ಸ್ಪರ್ಧೆಯಲ್ಲಿ ನೇರವಾಗಿಯೇ ತೊಡಗಿತ್ತು. ಯೂರಿ ಗಗಾರಿನ್ ಮೊದಲ ಗಗನಯಾನಿಯಾಗಿ ಹೆಸರು ಮಾಡಿದ್ದು ರಷ್ಯಕ್ಕೆ ಕೋಡು ಮೂಡಿಸಿತ್ತು. ಮಹಿಳಾ ಸಾಧಕಿಯೂ ನಮ್ಮ ರಾಷ್ಟ್ರದವಳೇ ಆಗಬೇಕೆಂಬುದು ಆ ದೇಶದ ಆಸೆ. ಈಗ ತೆರೆಷ್ಕೋವ ಮೂಲಕ ಆ ಕೀರ್ತಿಯೂ ರಷ್ಯದ ಪಾಲಾಗಿತ್ತು. ಲೆನಿನ್ ಪದಕ’ವನ್ನು ಕೊಟ್ಟು ಅವಳನ್ನು ಗೌರವಿಸಿತು. ಅನೇಕ ದೇಶಗಳಿಗೆ ಸೋವಿಯತ್ ಒಕ್ಕೂಟದ ಪ್ರತಿನಿಧಿಯಾದಳು. ವಿಶ್ವಸಂಸ್ಥೆ ಈಕೆಯನ್ನುಶಾಂತಿದೂತೆ’ ಎಂದು ಕರೆದು ಪದಕ ನೀಡಿ ಸೆಲ್ಯೂಟ್ ಹೊಡೆಯಿತು. ಅಚ್ಚರಿ ಎಂದರೆ ಮುಂದೆ ತೆರೆಷ್ಕೋವ ಗಗನದೆಡೆಗೆ ಮುಖ ಮಾಡಲಿಲ್ಲ. ಟೆಸ್ಟ್ ಪೈಲಟ್ ಆದಳು. ಅದರಲ್ಲಿ ಗಾಢ ಅಧ್ಯಯನ ಮಾಡಿ ಡಾಕ್ಟರೇಟ್ ಪಡೆದಳು. ಗಗನಯಾನಿ, ಸಹೋದ್ಯೋಗಿ ಆಂಡ್ರಿಯಸ್ ನಿಕೊಲೋವ್‍ನನ್ನು ವರಿಸಿದಳು. ಮುದ್ದು ಮಗು ಎಲೆನ ಜನಿಸಿದಳು. ಅವಳಿಗೂ ಕೀರ್ತಿ. ಏಕೆಂದರೆ ಇಬ್ಬರು ಗಗನಯಾನಿಗಳಿಗೆ ಹುಟ್ಟಿದ ಮಗು ಅವಳಾಗಿದ್ದಳು.

ಮಗಳು ಎಲೆನ ಮುಂದೆ ವೈದ್ಯಳಾದಳು. ಆ ಹೊತ್ತಿಗೆ ಅಪ್ಪ-ಅಮ್ಮ ಮುಖ ತಿರುಗಿಸಿಕೊಂಡಿದ್ದರು. ಅದು ಯಾವ ಮಟ್ಟಕ್ಕೆ ಹೋಗಿತ್ತೆಂದರೆ ಗ್ರೂಪ್ ಫೋಟೋ ತೆಗೆಸುವಾಗ, ಒಂದೇ ಸಾಲಿನಲ್ಲಿ ಇಬ್ಬರೂ ಇರುವುದನ್ನು ತಪ್ಪಿಸುತ್ತಿದ್ದರು. ಕೊನೆಗೆ ವಿಚ್ಛೇದನ ಅನಿವಾರ್ಯವಾಯಿತು. ಪ್ರೀತಿ ಹುಟ್ಟುವ ಸಮಯ ಕವಿಗೂ ತಿಳಿಯುವುದಿಲ್ಲ. ಹಾಗೆಯೇ ವಿಚ್ಛೇದನ ಬಿಂದು ಯಾವುದೆಂದು ಗಣಿತಜ್ಞನೂ ಲೆಕ್ಕ ಹಾಕಲಾರ. ಮುಂದೆ ತೆರೆಷ್ಕೋವ, ಯಾಲಿ ಶೆಪೋಶ್ನಿಕೋವ್ ಎಂಬ ವೈದ್ಯನನ್ನು ವರಿಸಿದಳು. ಆತ ಕೂಡ ಗಗನಯಾನಿಗಳ ವೈದ್ಯಕೀಯ ತಪಾಸಣೆ ಮಾಡುವುದರಲ್ಲಿ ತಜ್ಞ. ಈಕೆಯನ್ನು ತಪಾಸಣೆ ಮಾಡಿದ್ದನಂತೆ. ಪ್ರೇಮ ಯಾವಾಗ ಹುಟ್ಟಿತೋ ಇಬ್ಬರಿಗೂ ತಿಳಿಯದು.

ಲೆನಿನ್ ಸಮಾಧಿಯ ಬಳಿ ಯೂರಿ ಗಗಾರಿನ್, ಪವೇಲ್ ಪೊಪೊವಿಚ್, ವ್ಯಾಲೆಂಟಿನ ತೆರೆಷ್ಕೋವ ಮತ್ತು ಕ್ರುಶ್ಚೇವ್ (1963)

ಮುಂದೆ ತೆರೆಷ್ಕೋವ ಬದುಕಿನುದ್ದಕ್ಕೂ ಏರು ಮೆಟ್ಟಿಲುಗಳೇ. ಸೋವಿಯತ್ ರಷ್ಯದ ಸುಪ್ರೀಂ ಸೋವಿಯತ್ ಡÉಪ್ಯುಟಿ ಆದಳು. ಸುಪ್ರಿಂ ಸೋವಿಯತ್ ಪ್ರೆಸಿಡಿಯಂ ಸದಸ್ಯಳಾದಳು. ಮುಂದೆ ಇಡೀ ಸೋವಿಯತ್ ರಷ್ಯದ ಮಹಿಳಾ ಸಮಿತಿಯ ಅಧ್ಯಕ್ಷಳಾದಳು. ಈಗಲೂ ಚಟುವಟಿಕೆಯಿಂದಿದ್ದಾಳೆ. ಅಂತರಿಕ್ಷ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾಳೆ. 2017ರಲ್ಲಿ ಲಂಡನ್ ಸೈನ್ಸ್ ಮ್ಯೂಸಿಯಂ’, ವ್ಯಾಲೆಂಟಿನ ತೆರೆಷ್ಕೋವ : ಅಂತರಿಕ್ಷದಲ್ಲಿ ಮೊದಲ ಮಹಿಳೆ’ ಎಂಬ ವಸ್ತುಪ್ರದರ್ಶನ ಏರ್ಪಡಿಸಿತ್ತು. ಆಕೆ ಅಂತರಿಕ್ಷಯಾನ ಮಾಡಿದಾಗ ಬಳಸಿದ ಉಡುಪು, ವಸ್ತುಗಳು, ಅಪರೂಪದ ಛಾಯಾಚಿತ್ರಗಳನ್ನು ಪ್ರದರ್ಶನ ಮಾಡಿತ್ತು. 2014ರಲ್ಲಿ ಬಿ.ಬಿ.ಸಿ. ಆಕೆಯನ್ನು ಕುರಿತುಗಗನಯಾನಿ – ರಷ್ಯ ಹೇಗೆ ಅಂತರಿಕ್ಷ ಸ್ಪರ್ಧೆಯನ್ನು ಗೆದ್ದಿತು’ ಎಂಬ ಡಾಕ್ಯುಮೆಂಟರಿ ಚಿತ್ರ ರೂಪಿಸಿತ್ತು. 2008ರಲ್ಲಿ ಒಲಿಂಪಿಕ್ ಜ್ಯೋತಿ ಒಯ್ಯುವ ಅವಕಾಶ ಇವಳದಾಗಿತ್ತು.

ಸಾರ್ವಜನಿಕ ಸಮಾರಂಭದಲ್ಲಿ ಜನ ಆಕೆಯನ್ನು ಬಗೆಬಗೆಯ

ಪ್ರಶ್ನೆ ಕೇಳುತ್ತಾರೆ. ಈಗಲೂ ಆಕೆಯನ್ನು ಅಂತರಿಕ್ಷದಲ್ಲಿದ್ದಾಗ ನಿಮಗೆ ಏನನ್ನಿಸಿತು?’ ಎಂದು ಕೇಳುವುದುಂಟು. ಆಕೆ ಥಟ್ಟನೆಅಲ್ಲಿಂದ ನೋಡಿದರೆ ಭೂಮಿ ಅದೆಷ್ಟು ಛಿದ್ರವಾಗಿದೆ ಎಂಬ ದೃಶ್ಯ ನೋಡಿ ನನ್ನ ಮನಸ್ಸು ಹಿಂಡಿಹೋಗುತ್ತದೆ’ ಎನ್ನುತ್ತಾಳೆ. ಆಕೆಯ ದಾಖಲೆಯನ್ನು ಯಾರೂ ಎಂದಿಗೂ ಮುರಿಯಲು ಸಾಧ್ಯವಿಲ್ಲ. ಅಂತರಿಕ್ಷ ಸಾಹಸ ಮಾಡಿದ ಮೊದಲ ಮಹಿಳೆಯಷ್ಟೇ ಅಲ್ಲ, ಒಂಟಿಯಾಗಿ ಹೋದ ಮಹಿಳೆ ಎಂಬುದು ಆಕೆಗಿರುವ ಹೆಗ್ಗಳಿಕೆ. ಅವಳ ಸಾಧನೆಯನ್ನು ಪರಿಗಣಿಸಿ ಆಕೆಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ನೂರಾರು ಪ್ರಶಸ್ತಿ, ಪದಕಗಳು ಸಂದಿವೆ. ಇವೆಲ್ಲಕ್ಕಿಂತ ಮೀರಿದ್ದು ಜಗತ್ತಿನ ಜನಮನದಲ್ಲಿ ಆಕೆ ಗಳಿಸಿರುವ ಶಾಶ್ವತ ಸ್ಥಾನ, ಸಾಕಲ್ಲ, ಬದುಕು ಧನ್ಯ ಎಂದು ಹೇಳಲು?

  • ಟಿ.ಆರ್ ಅನಂತರಾಮು(ಟಿ.ಆರ್ ಅನಂತರಾಮು, ನಂ. 534, 70ನೇ ಅಡ್ಡರಸ್ತ, 14ನೇ ಮುಖ್ಯರಸ್ತೆ, ಕುಮಾರಸ್ವಾಮಿ ಬಡಾವಣೆ, ಬೆಂಗಳೂರು-560 111. ಮೊ: 98863 56085)

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *