ಸ್ತ್ರೀ ಎಂದರೆ ಅಷ್ಟೇ ಸಾಕೆ?/ ಅಂಟಾರ್ಕ್ಟಿಕದಲ್ಲಿ ಅಂಜದ ಸಾಹಸಿ -ಭಾಗ-2 – ಟಿ.ಆರ್. ಅನಂತರಾಮು

ಅಂಟಾರ್ಕ್ಟಿಕಮೂರು ಕಿಲೋ ಮೀಟರ್ ದಪ್ಪದ ಹಿಮದ ಸ್ತರ ಮನುಷ್ಯನ ಚರಿತ್ರೆಯನ್ನಷ್ಟೇ ಅಲ್ಲ, ಭೂಚರಿತ್ರೆಯನ್ನೇ ಬಚ್ಚಿಟ್ಟುಕೊಂಡುಬಿಟ್ಟಿದೆ. ಕಣಿವೆ-ಕಂದರ, ಬೆಟ್ಟ-ಗುಡ್ಡ, ಸದ್ದಿಲ್ಲದೆ ಸರಿಯುವ ಹಿಮನದಿಗಳು ಎಲ್ಲದರ ಕೂಟ ಅಂಟಾರ್ಕ್ಟಿಕ. ಫೆಲಿಸಿಟಿ ಆಸ್ಟಾನ್‍ಗೆ ಅಂಟಾರ್ಕ್ಟಿಕ ಎಂದರೆ ಪ್ರಾಣ; ಅಲ್ಲೇ ಪ್ರಾಣ ಹೋದರೂ ಸರಿಯೇ ಎನ್ನುವಷ್ಟು. ಆಕೆಗೆ ಅಂಟಾರ್ಕ್ಟಿಕ ಖಂಡ ಒಡ್ಡುವ ಸವಾಲುಗಳ ಬಗ್ಗೆ ಸ್ಪಷ್ಟ ಅರಿವಿತ್ತು. ಆದರೆ `ಸೋಲೋ’ ಯಾತ್ರೆ ಮಾಡುವೆನೆಂದು ನಿರ್ಧರಿಸಿಯೇಬಿಟ್ಟಳು. ಒಂಟಿ ಪಯಣವೆಂದರೆ ಅದು ಸಾವು-ಬದುಕಿನೊಡನೆ ಆಡುವ ಆಟ. ಮರಳಿ ಬಂದಾಗ, ಆಕೆಯ ಸಾಧನೆ ಗಿನ್ನೀಸ್ ಬುಕ್‍ಗೆ ಸೇರಿತ್ತು.

ದಕ್ಷಿಣ ಧ್ರುವಕ್ಕೆ ಲಗ್ಗೆ

ಇದು 2009ರ ಸಂಗತಿ. ರಷ್ಯದ ಕಾಸ್ಪೆರಿಸ್ಕಿ ಎಂಬ, ಕಂಪ್ಯೂಟರ್ ನಾಶಮಾಡುವ ಸಾಫ್ಟ್‍ವೇರ್ ಕಂಪನಿಗೆ ಒಂದು ಯೋಚನೆ ಮೊಳೆಯಿತು. ತನ್ನ ಕಂಪನಿಯ ಉತ್ಪನ್ನಕ್ಕೆ ವಿಶ್ವಮಾನ್ಯತೆ ಬೇಕು ಎಂದು ಅದು ಹಂಬಲಿಸುತ್ತಿತ್ತು. ಹಲವು ಬಾರಿ ಕಂಪನಿಯ ಮ್ಯಾನೇಜ್‍ಮೆಂಟ್ ಈ ಕುರಿತು ಚರ್ಚೆಯನ್ನೂ ಮಾಡಿತ್ತು. ಆಗ ನೆನಪಾದ್ದು ಫೆಲಿಸಿಟಿ ಆಸ್ಟಾನ್. ಗ್ರೀನ್‍ಲೆಂಡನ್ನು ಗೆದ್ದ ವೀರವನಿತೆ. ಆದರೆ ಅವಳನ್ನು ಬಳಸಿಕೊಳ್ಳಲು ಸಂದರ್ಭವೂ ಬೇಕಲ್ಲ! ಅದೂ ಒದಗಿಬಂದಿತ್ತು. ಕಾಮನ್‍ವೆಲ್ತ್ ರಾಷ್ಟ್ರಗಳು ಸ್ಥಾಪನೆಯಾದ 60ನೇ ವರ್ಷ ಅದು. ಆಸ್ಟಾನ್‍ಳೊಂದಿಗೆ ಚರ್ಚಿಸಿದಾಗ, ಅವಳು ಪಟ್ಟನೆ ಹೇಳಿದ್ದಳು: “ಕಾಮನ್‍ವೆಲ್ತ್ ರಾಷ್ಟ್ರಗಳ ಆಯ್ದ ಮಹಿಳೆಯರನ್ನು ದಕ್ಷಿಣ ಧ್ರುವಕ್ಕೆ ಕೊಂಡೊಯ್ಯಲು ನಾನು ಸಿದ್ಧ". ಕಂಪನಿಗೆ ಇದಕ್ಕಿಂತ ದೊಡ್ಡ ಅವಕಾಶ ಬೇಕೇ ಎನ್ನಿಸಿತು. ಧಾರಾಳವಾಗಿಯೇ ಫಂಡ್ ಒದಗಿಸಿತ್ತು.

ಯಾತ್ರಿಗಳನ್ನು ಆಯ್ಕೆಮಾಡುವಾಗ ಭಾರಿ ಕಟ್ಟುನಿಟ್ಟು ಅನುಸರಿಸಬೇಕು. ದೈಹಿಕವಾಗಿ ಮತ್ತು ಮಾನಸಿಕವಾಗಿ ಅವರು ಸಮರ್ಥರಾಗಿರಬೇಕು. ಯಾವುದೇ ಅನಿರೀಕ್ಷಿತ ಸಮಸ್ಯೆ ಎದುರಾದರೂ ನಿಭಾಯಿಸುವ ಚಾಕಚಕ್ಯತೆ ಇರಬೇಕು. ಇದರ ಸಲುವಾಗಿಯೇ ಒಂದು ಜಾಲತಾಣವನ್ನು ತೆರೆದು, ಅರ್ಜಿಯನ್ನು ಕರೆದಾಗ, 800 ಮಂದಿ ಆನ್‍ಲೈನಿನಲ್ಲೇ ಅರ್ಜಿ ತುಂಬಿದ್ದರು. ಎಲ್ಲವನ್ನೂ ಅಳೆದು, ತೂಗಿ ಕೊನೆಗೆ ಒಂಬತ್ತು ಮಹಿಳೆಯರನ್ನು ಆಸ್ಟಾನ್ ಆಯ್ಕೆ ಮಾಡಿದಳು. ಇದರಲ್ಲಿ ಭಾರತದ ರೀನಾ ಕೌಶಲ್ ಧರ್ಮಶಕ್ತ ಕೂಡ ಒಬ್ಬಳು. ಬ್ರಿಟನ್ ಬ್ರುನೇಯ್, ಘಾನಾ, ಭಾರತ, ಜಮೈಕ, ನ್ಯೂಜಿಲೆಂಡ್ ಮತ್ತು ಸಿಂಗಪುರದಿಂದ ತರುಣಿಯರು ಧ್ರುವದ ಕನಸು ಕಾಣತೊಡಗಿದರು. ಘಾನಾದ ಬಾರ್ಬರ ಯಾನಿ ಇನ್ನೇನು ಸಾಹಸಯಾತ್ರೆಗೆ ಹೊರಡಬೇಕೆನ್ನುವಾಗ ಮಲೇರಿಯ ಅಮರಿಸಿತು. ಆಕೆಯನ್ನು ಕೈಬಿಡಬೇಕಾಯಿತು. ಜಮೈಕದ ಕಿಂಗ್ ಮೇರಿ ಸ್ಪೆನ್ಸ್‍ಗೆ ಮೂರು ದಿನಗಳ ಯಾತ್ರೆಯ ನಂತರ ಕಾಲ ಬೆರಳನ್ನು ಹಿಮಕಚ್ಚಿ ಅವಳನ್ನು ಹಿಂದಕ್ಕೆ ಕಳಿಸಬೇಕಾಯಿತು.

ಪೂರ್ವ ಅಂಟಾರ್ಕ್ಟಿಕದ ಪೇಟ್ರಿಯಲ್ ಹಿಲ್‍ನಿಂದ ನಡಿಗೆ ಪ್ರಾರಂಭ. ಇದು ಕೂಡ ಯಾವ ಯಾಂತ್ರಿಕ ನೆರವೂ ಇಲ್ಲದೆ ಎಂದಿನಂತೆ ಸ್ಲೆಡ್ಜ್ ಎಳೆದುಕೊಂಡು ಹೋಗಬೇಕಾಯಿತು. ಒಬ್ಬೊಬ್ಬರ ಸ್ಲೆಡ್ಜ್‍ನಲ್ಲೂ 80 ಕಿಲೋ ಗ್ರಾಂ ತೂಕದ ಸಾಮಾನು. ಇನ್ನು ಖಂಡದ ಅಂಚನ್ನು ಬಿಟ್ಟು ಒಳಕ್ಕೆ ಹೋಗುತ್ತಲೇ ಉಷ್ಣತೆ ಶೂನ್ಯದಿಂದ ಕೆಳಕ್ಕೆ 42 ಡಿಗ್ರಿ ಸೆಂ. ಇಳಿದಿತ್ತು. ಮುಖಕ್ಕೆ ಗಂಟೆಗೆ 120 ಕಿಲೋ ಮೀಟರ್ ವೇಗದಲ್ಲಿ ಬಿರುಗಾಳಿ ರಾಚುತ್ತಿತ್ತು. ಹಾಕಿದ್ದ ಕನ್ನಡಕವನ್ನು ಸ್ವಲ್ಪ ತೆಗೆದರೂ ಸಾಕು, ಹಿಮದಿಂದ ಪ್ರತಿಫಲಿತವಾದ ಬೆಳಕು ಇವರ ಕಣ್ಣನ್ನು ಕುರುಡುಮಾಡುವ ಸಂಭವವಿತ್ತು. ಕ್ಷಣಕ್ಷಣಕ್ಕೂ ಕನ್ನಡಕದ ಮೇಲೆ ಸಂಚಯಿಸುತ್ತಿದ್ದ ಹಿಮವನ್ನು ಸ್ವಚ್ಛಗೊಳಿಸಬೇಕಾಯಿತು. ದಿನಕ್ಕೆ ಹತ್ತು ಗಂಟೆಯ ನಡಿಗೆ, ಕನಿಷ್ಠ 23 ಕಿಲೋ ಮೀಟರ್ ಸಾಗಲೇಬೇಕು. ದೂರ 904 ಕಿಲೋ ಮೀಟರ್. ಗಡವು ಬರೀ 38 ದಿನಗಳು. ದಕ್ಷಿಣ ಧ್ರುವದ ಭಾಗದಲ್ಲಿ ಇಂಗ್ಲೆಂಡ್, ಅಮುಂಡ್‍ಸನ್ ಸ್ಕಾಟ್ ಸಂಶೋಧನ ಕೇಂದ್ರವನ್ನು ತೆರೆದಿದೆ. ಇವರು ಅದನ್ನು ಮುಟ್ಟಬೇಕು. ಇವರೊಡನೆ ಹೊರಟ ತಂಡದ ಸದಸ್ಯರಲ್ಲಿ ಹೆಚ್ಚಿನವರು ಹಿಮವನ್ನೇ ನೋಡಿರಲಿಲ್ಲ. ಮೈನಸ್ 1 ಡಿಗ್ರಿ ಸೆಂಟಿಗ್ರೇಡ್ ಎಂದರೂ ಗಡಗಡ ನಡುಗುವ ಪೈಕಿ. ಇನ್ನು ಟೆಂಟ್ ವಾಸವಂತೂ ಕನಸಿನಲ್ಲೂ ಅವರು ಊಹಿಸಿರಲಿಲ್ಲ.

ಇದೆಲ್ಲವನ್ನೂ ಬಲ್ಲ ಆಸ್ಟಾನ್ ಇವರನ್ನು ಆರಂಭದಲ್ಲೇ ನ್ಯೂಜಿಲೆಂಡ್ ಮತ್ತು ನಾರ್ವೆ ದೇಶಗಳ ಹಿಮಪರ್ವತವನ್ನು ಹತ್ತಿಸಿ ತರಪೇತಿ ಕೊಟ್ಟು ಪ್ರೋತ್ಸಾಹಿಸಿದ್ದಳು. ದಕ್ಷಿಣ ಧ್ರುವವನ್ನು ತಲಪಿದಾಗ `ನಾವು ಕ್ಷೇಮ’ ಎಂದಷ್ಟೇ ಟ್ವೀಟ್ ಮಾಡಲು ಸಾಧ್ಯವಾಯಿತು. ಅದು ಕೂಡ ದಾಖಲೆಯೇ. ದಕ್ಷಿಣ ಧ್ರುವದಿಂದ ವಿಮಾನದಲ್ಲಿ ಚಿಲಿ ಮೂಲಕ ಲಂಡನ್ನಿಗೆ ಮರಳಿದಾಗ, ಪತ್ರಕರ್ತರು ಆಸ್ಟಾನ್‍ಗೆ ಕೇಳಿದ ಮೊದಲ ಪ್ರಶ್ನೆ:
ಈ ಕ್ಷಣ ನಿಮಗೆ ಏನನ್ನಿಸುತ್ತದೆ" ತಡಮಾಡದೆ ಆಸ್ಟಾನ್ ಉತ್ತರಿಸಿದ್ದಳು: “ನಾನು ಕೊನೆಯ ಬಾರಿಗೆ ಸ್ನಾನ ಮಾಡಿದ್ದು ನವೆಂಬರ್ ತಿಂಗಳಲ್ಲಿ. ಈ ಕ್ಷಣ ಬಚ್ಚಲಮನೆಗೆ ಓಡಿಹೋಗಬೇಕು ಎನ್ನಿಸುತ್ತಿದೆ”.

ಅಂಟಾರ್ಕ್ಟಿಕ ಎಂದರೆ ಪ್ರಾಣ

ಅಂಟಾರ್ಕ್ಟಿಕದಲ್ಲಿ`ಸೊಲೋ’ ಯಾತ್ರೆ ಇಂಗ್ಲಿಷ್‍ನಲ್ಲಿ ಸೋಲೋ’ ಎಂದರೆ ಒಬ್ಬೊಂಟಿ ಯಾನಕ್ಕೆ ಅನ್ವಯಿಸಿದರೂ, ನಮ್ಮಲ್ಲಿ ಒಂಟಿ, ಏಕಾಂಗಿ, ಒಬ್ಬೊಂಟಿ ಎಂದು ಅರ್ಥೈಸಿದಾಗ, ಅದೇನೋ ಅನಾಥ ಪ್ರಜ್ಞೆ ಹುಟ್ಟಿಸುತ್ತದೆ. ಆಸ್ಟಾನ್‍ಗೆ ಅಂಟಾರ್ಕ್ಟಿಕ ಎಂದರೆ ಪ್ರಾಣ; ಅಲ್ಲೇ ಪ್ರಾಣ ಹೋದರೂ ಸರಿಯೇ ಎನ್ನುವಷ್ಟು. ಆಕೆಗೆ ಅಂಟಾರ್ಕ್ಟಿಕ ಖಂಡ ಒಡ್ಡುವ ಸವಾಲುಗಳ ಬಗ್ಗೆ ಸ್ಪಷ್ಟ ಅರಿವಿತ್ತು. ಅದು ಹೇಗೆ ಜಗತ್ತಿನ ಹವಾಮಾನವನ್ನೇ ಬದಲಾಯಿಸಬಹುದು ಎನ್ನುವುದನ್ನು ಸ್ವತಃ ಹವಾಮಾನ ತಜ್ಞೆಯಾಗಿ ಚೆನ್ನಾಗಿಯೇ ಅರಿತಿದ್ದಳು. ದಕ್ಷಿಣ ಧ್ರುವದ ಬಳಿ ಈಗಲೂ ಇರುವ ರಷ್ಯ ನಡೆಸುತ್ತಿರುವ `ವೋಸ್ಟಾಕ್’ ಎಂಬ ಕೇಂದ್ರದಲ್ಲಿ ಮೈನಸ್ 89 ಡಿಗ್ರಿ ಸೆಂ. ಉಷ್ಣತೆ ಅಳತೆ ಮಾಡಿದ್ದು 1983ರಲ್ಲಿ, ಅದು ಕೂಡ ಆಕೆಗೆ ಗೊತ್ತು.

ಅಂಟಾರ್ಕ್ಟಿಕದ ಅಂಚಿನಿಂದ ಹಿಮಗಡ್ಡೆಗಳು ಕಿತ್ತುಬಂದವೆಂದರೆ ಇಡೀ ದಕ್ಷಿಣ ಸಾಗರವೇ ಅಲ್ಲೋಲಕಲ್ಲೋಲವಾಗುವುದು ಈಗಲೂ ಸರ್ವಸಾಮಾನ್ಯ. ಬೀಸುವ ಬಿರುಗಾಳಿಗೆ ತಡೆಯೊಡ್ಡಲು ಅಲ್ಲಿ ಏನೂ ಇಲ್ಲ. ಬರೀ ಹಿಮವನ್ನೇ ಮೇಲೆತ್ತಿ ಬಾರಿ ಬಾರಿ ಕುಕ್ಕುವ ಬಿರುಗಾಳಿ ಯಾನಿಗಳು ಉಳಿಯುತ್ತಿದ್ದ ಟೆಂಟುಗಳನ್ನೇ ಕಣ್ಮರೆ ಮಾಡುತ್ತಿದ್ದ ಸಂದರ್ಭಗಳು ಅನೇಕ. ಇಂಗ್ಲೆಂಡಿನ ರಾಬರ್ಟ್ ಫಾಲ್ಕನ್ ಸ್ಕಾಟ್ 1912ರಲ್ಲಿ ಧ್ರುವವನ್ನು ಮುಟ್ಟಿ ಹಿಂತಿರುಗುವಾಗ ಬಿರುಗಾಳಿಗೆ ಸಿಕ್ಕಿ, ಶೈತ್ಯಕ್ಕೆ ನಡುಗಿ, ಆಹಾರ ಕೊರತೆ ಎದುರಿಸಿ, ತನ್ನೊಡನೆ ಒಯ್ದಿದ್ದ ಶ್ವಾನ ತಂಡವನ್ನೇ ತಾನೇ ಗುಂಡಿಕ್ಕಿ ಕೊಲ್ಲುವ ದಾರುಣ ಸ್ಥಿತಿಯ ಬಗ್ಗೆಯೂ ಈಕೆ ಓದಿದ್ದಳು. ಅಂಟಾರ್ಕ್ಟಿಕದ ಈ ಭೀಭತ್ಸ ಮುಖದ ಬಗ್ಗೆ ತಿಳಿದಿದ್ದರೂ ಮತ್ತೆ ಅದನ್ನೇ ತಬ್ಬುವ ಆಸೆ ಆಸ್ಟಾನ್‍ಗೆ. ಇದಕ್ಕೆ ಕಾಸ್ಪೆರಿಸ್ಕ್ಕಿ ಕಂಪನಿಯೂ ಸೇರಿದಂತೆ ಅನೇಕ ಖಾಸಗಿ ಸಂಸ್ಥೆಗಳು ಬೆಂಬಲ ಸೂಚಿಸಿ ಆಕೆಯನ್ನು `ಹೋಗಿ ಬಾ’ ಎಂದಿದ್ದವು. ಅವಳಿಗೆ ಅದೂ ಗೊತ್ತಿತ್ತು, ಒಂಟಿ ಪಯಣವೆಂದರೆ ಅದು ಸಾವು-ಬದುಕಿನೊಡನೆ ಆಡುವ ಆಟ ಎಂಬುದು. ಏಕೆಂದರೆ ಕಣ್ಗಾವಲಾಗಲಿ, ಬೆಂಗಾವಲಾಗಲಿ ಕೊಡಲು ಯಾವ ಕಂಪನಿಯೂ ತಯಾರಿರುವುದಿಲ್ಲ. ಕೋಟಿ ಕೋಟಿ ರೂಪಾಯಿ ಖರ್ಚು!

ಜೊತೆಗೆ ಈಕೆಗೂ ಅದು ಬೇಕಿರಲಿಲ್ಲ. ನಿರ್ಧರಿಸಿಯೇಬಿಟ್ಟಳು `ಸೋಲೋ’ ಯಾತ್ರೆ ಮಾಡುವೆನೆಂದು. ಪುರುಷರು ತಮ್ಮ ತೋಳಬಲದ ಬಗ್ಗೆ ಆಗಾಗ ಕೊಚ್ಚಿಕೊಳ್ಳುವುದು ಈಕೆಯ ಕಿವಿಗೂ ಬಿದ್ದಿತ್ತು. ಅಷ್ಟೇ ಅಲ್ಲ, ಕಣ್ಣಾರೆ ಕಂಡಿದ್ದಳು ಕೂಡ. ಆಗೆಲ್ಲ ತನ್ನನ್ನೇ ತಾನು ಕೇಳಿಕೊಂಡಿದ್ದಳು, ಮಹಿಳೆಯ ತೋಳಲ್ಲಿ ಬಲವಿಲ್ಲವೆ? ಎಂದು. ಮೊದಲೇ ಅಂದಾಜು ರೂಪಿಸಿದ್ದಳು. ಒಟ್ಟು 59 ದಿನಗಳಲ್ಲಿ 1,744 ಕಿಲೋ ಮೀಟರ್ ಒಂಟಿಯಾಗಿ ಸಾಗಬೇಕು, ಅದೂ ಎರಡು ಸ್ಲೆಡ್ಜ್‍ಗಳಲ್ಲಿ ಬದುಕಲು ಅವಶ್ಯಕವಿರುವ ಎಲ್ಲ ವಸ್ತುಗಳೊಡನೆ. ಅಂಟಾರ್ಕ್ಟಿಕದ ಮೇಲ್ಮೈ ಲಕ್ಷಣ ಹೇಗಿದೆಯೆಂದರೆ ನೀವು ಒಂದು ಪರಿಚಯದ ಉದಾಹರಣೆಯನ್ನೇ ಗಮನಿಸಬಹುದು. ನಿಮ್ಮ ಮನೆಯ ಪಡಸಾಲೆಯಲ್ಲಿ ಮೇಜು ಇದೆ, ಕುರ್ಚಿ ಇದೆ, ಪುಸ್ತಕಗಳಿವೆ, ಹಾಸಿಗೆ ಇರುವ ಮಂಚವಿದೆ, ಕೆಳಗೆ ಚಾಪೆಯೂ ಇದೆ, ಡಬ್ಬಗಳೂ ಇವೆ ಎಂದುಕೊಳ್ಳಿ. ಇವೆಲ್ಲವನ್ನೂ ಮುಚ್ಚುವಂತೆ ದೊಡ್ಡ ಕಂಬಳಿ ಹೊದೆಸಿದರೆ ಹೇಗೆ ಆ ಲಕ್ಷಣಗಳು ಕಾಣುತ್ತವೋ ಹಾಗೆ ಅಂಟಾರ್ಕ್ಟಿಕ ಕೂಡ. ಮೂರು ಕಿಲೋ ಮೀಟರ್ ದಪ್ಪದ ಹಿಮದ ಸ್ತರ ಮನುಷ್ಯನ ಚರಿತ್ರೆಯನ್ನಷ್ಟೇ ಅಲ್ಲ, ಭೂಚರಿತ್ರೆಯನ್ನೇ ಬಚ್ಚಿಟ್ಟುಕೊಂಡುಬಿಟ್ಟಿದೆ. ಕಣಿವೆ-ಕಂದರ, ಬೆಟ್ಟ-ಗುಡ್ಡ, ಸದ್ದಿಲ್ಲದೆ ಸರಿಯುವ ಹಿಮನದಿಗಳು ಎಲ್ಲದರ ಕೂಟ ಅಂಟಾರ್ಕ್ಟಿಕ. ಮತ್ತೆ ಮತ್ತೆ ಆಸ್ಟಾನ್ ತಾನು ಒಯ್ಯಲಿರುವ ಸಾಮಾನನ್ನೆಲ್ಲ ಎಣಿಸಿ ಎಣಿಸಿ ನೋಡುತ್ತಿದ್ದಳು. ಏಕೆಂದರೆ ಬಟ್ಟೆಯ ಒಂದು ಗುಂಡಿ ಕಿತ್ತುಹೋದರೂ ಅಲ್ಲಿ ಅಪಾಯವೇ. ಶೈತ್ಯ ದೇಹಕ್ಕೆ ನುಗ್ಗಿಬಿಡುತ್ತದೆ. ಅದಕ್ಕೆಂದೇ ಸೂಜಿಯೂ ಬೇಕು, ದಾರವೂ ಬೇಕು. 85 ಕಿಲೋ ಗ್ರಾಂ ತೂಕದ ಭಾರ ಹೊತ್ತ ಹಿಮಬಂಡಿಯನ್ನು ರಟ್ಟೆಯ ಶಕ್ತಿಯಲ್ಲೇ ಎಳೆಯಬೇಕು.

ಎಲ್ಲವೂ ಕಾಲಬದ್ಧ

ಅಂಟಾರ್ಕ್ಟಿಕದ ಚರಿತ್ರೆಯಲ್ಲಿ ಮಹಿಳೆಯಂತಿರಲಿ, ಮಾನವ ಮಾಡಿದ ಮಹಾ ಪ್ರಯತ್ನ ಇದು. ವಿಮಾನ ಒಂದು ಬಂತು. ಆಕೆಯನ್ನು ರಾಸ್ ಷೆಲ್ಪ್ ಬಳಿಯ ಹಿಮನದಿಯೊಂದರ ಮೇಲೆ ಇಳಿಸಿ, ಕ್ಷಣಾರ್ಧದಲ್ಲಿ ಮಾಯವಾಯಿತು. ಅಲ್ಲಿಂದ ಶುರುವಾಯಿತು ದಿಢೀರ್ ಎಂಬ ಏಕಾಂತ. “ಒಂದು ಕ್ಷಣ ನಾನು ವಿಚಲಿತಳಾದದ್ದು ಸುಳ್ಳಲ್ಲ. ಆದರೆ ಮನಸ್ಸನ್ನು ಗಟ್ಟಿಮಾಡಿಕೊಂಡೇ ಬಂದಿದ್ದೆ, ಒಡನೆಯೇ ಸಾವರಿಸಿಕೊಂಡೆ” ಎಂದು ಆಸ್ಟಾನ್ ಸಂರ್ದಶನ ಒಂದರಲ್ಲಿ ಹೇಳಿದ್ದಾಳೆ. ಹೆಜ್ಜೆಗಳನ್ನು ದಡದಡ ಎಂದು ದಾಪುಗಾಲು ಹಾಕುತ್ತ ಓಡುವಂತಿಲ್ಲ. ನಿಧಾನ ಮಾಡುವಂತೆಯೂ ಇಲ್ಲ. ಎಲ್ಲವೂ ಕಾಲಬದ್ಧವಾಗಿ ಆಗಬೇಕು, ಅದಕ್ಕಾಗಿ ಅವಳ ಕಾಲೂಬದ್ಧ. ಟೆಂಟಿನಲ್ಲಿ ರಾತ್ರಿ ಮಲಗಿದರೆ ಹೊರಬರಲು ಅಲ್ಲಿಂದಲೇ ಚೂಪು ಸುತ್ತಿಗೆಯಿಂದ ಸುತ್ತಣ ಹಿಮವನ್ನು ಬಿಡಿಸಬೇಕಾಗಿತ್ತು. ಇದು ಇಡೀ ಯಾನದುದ್ದಕ್ಕೂ ಅವಳಿಗೆ ಅಭ್ಯಾಸವಾಗಿಬಿಟ್ಟಿತು.

ಇದ್ದಕ್ಕಿದ್ದಂತೆ ಇಡೀ ವಾತಾವರಣವೇ ಬಿಳುಪಾಗಿಬಿಡುತ್ತಿತ್ತು. ಇದನ್ನು ಅಲ್ಲಿ “ವೈಟ್‍ಔಟ್’ ಎನ್ನುತ್ತಾರೆ. ನಮ್ಮಲ್ಲಿ ಕರೆಂಟ್ ಹೋದರೆ ಬ್ಲಾಕ್‍ಔಟ್ ಎನ್ನುತ್ತೀವಲ್ಲ ಹಾಗೆ. “ಇಡೀ ಬಯಲಿನಲ್ಲಿ ಸಾವಿರ ಸಾವಿರ ಸೂರ್ಯರು ಹೊಳೆದಂತೆ ತೇಲುತ್ತಿರುವ ಹಿಮಕಣಗಳು ಸೂರ್ಯಬಿಂಬವನ್ನು ಅವೆಷ್ಟೋ ಬಾರಿ ಪ್ರತಿಫಲಿಸಿದ್ದನ್ನು ಕಂಡು ನಾನು ದಂಗಾಗಿ ಹೋಗಿದ್ದೆ. ಹಾಗೆಯೇ ಸಂಜೆಯ ಹೊತ್ತು ದಿಗಂತದಲ್ಲಿ ರಂಗುರಂಗಿನ ಬೆಳಕು ಕಾಣಿಸುತ್ತಿತ್ತು. ಒಮ್ಮೆ ಕೆಂಪು, ಇನ್ನೊಮ್ಮೆ ಹಸಿರು, ಮಗದೊಮ್ಮೆ ನೇರಿಳೆ ಬಣ್ಣ. ಯಾರೋ ಬಣ್ಣದ ಬೆಳಕನ್ನು ಬಿಡುತ್ತಿದ್ದಾರೋ ಎನ್ನುವ ಅನುಭವ. ಆದರೆ ನನಗೆ ಗೊತ್ತಿತ್ತು ಧ್ರುವಪ್ರದೇಶಗಳ ಮೇಲೆ ಎಲೆಕ್ಟ್ರಾನ್‍ಗಳು ನುಗ್ಗಿಬಂದು ಬಿದ್ದಾಗ, ಭೂಕಾಂತಕ್ಷೇತ್ರ ಕೊಡೆಯಂತೆ ಹರಡಿ, ಆ ಕಣಗಳನ್ನು ಉರುಳಿಸಿಬಿಡುತ್ತದೆ. ಆಗ ಹುಟ್ಟುವ ಬಣ್ಣಗಳು ಇವು. ದಕ್ಷಿಣಧ್ರುವಲ್ಲಿ ಇವನ್ನು ಅರೋರ ಆಸ್ಟ್ರೇಲಿಸ್ ಎನ್ನುತ್ತಾರೆ. ನನಗೆ ಇಡೀ ಅಂಟಾರ್ಕ್ಟಿಕದ ಬಾನು ಫಿಸಿಕ್ಸ್‍ನ ತೆರೆದ ಪ್ರಯೋಗಾಲಯ ಎನ್ನಿಸುತ್ತಿತ್ತು. ಆದರೆ ಅಲ್ಲಿ ಕಂಡ ಮನಮೋಹಕ ದೃಶ್ಯಗಳನ್ನು ಯಾರೊಂದಿಗೆ ಹಂಚಿಕೊಳ್ಳುವುದು. ಕುಣಿದಾಡಿದರೆ ನಾನೊಬ್ಬಳೇ ಕುಣಿಯಬೇಕಿತ್ತು. ಆದರೆ ಸೌಂದರ್ಯವನ್ನು ಮನಸಾ ಸವಿಯಬಹುದಲ್ಲ. ನನಗೆ ಅದು ಅಂಥ ಸಂದರ್ಭವನ್ನು ಒದಗಿಸಿತ್ತು. ಕಣ್ಣೀರು ಬಂತು-ಅಳುವಲ್ಲ!"

"ನಾನು ಪುರುಷದ್ವೇಷಿಯಲ್ಲ, ಪುರುಷರ ಅಹಮ್ಮನ್ನೂ ಬಲ್ಲೆ. ಎಂದೂ ನಾನು ಹೆಣ್ಣು ಅಬಲೆ ಎಂದು ಭಾವಿಸಿದವಳಲ್ಲ. ಹಾಗೆಂದು ಪುರುಷರೊಂದಿಗೆ ವಿನಾಕಾರಣ ಸ್ಪರ್ಧೆಗಿಳಿಯುವುದು ನನಗೆ ಒಗ್ಗದು. ಆದರೆ ಇಲ್ಲಿ ಒಂದು ಸಂದರ್ಭವನ್ನಂತೂ ಹೇಳಲೇಬೇಕು. ಅದನ್ನು ಹೇಳಿಬಿಡುತ್ತೇನೆ. ಇದು ಮೂತ್ರವಿಸರ್ಜನೆಯ ಸಂದರ್ಭದಲ್ಲಿ ಆಗುತ್ತಿದ್ದ ತೊಡಕು. ಪುರುಷರಾದರೆ ಪ್ಯಾಂಟಿನ ಎರಡು ಬಟನ್ ಬಿಚ್ಚಿ ನಿಂತೇ ಕೆಲಸ ಮುಗಿಸಬಹುದು. ನನಗೆ ಅದು ಬಹು ಸಂಕಟದ ಸಮಯ. ಏಕೆಂದರೆ ಇಡೀ ಕೆಳ ಉಡುಪನ್ನೇ ಬಿಚ್ಚಬೇಕು ಅಥವಾ ಸರಿಸಬೇಕು. ಆಗ ಹಿಮ ಸೂಜಿಯಂತಾಗಿ ಸಾವಿರ ಸಾವಿರ ಕಡೆ ಚುಚ್ಚಿದ ಅನುಭವವಾಗುತ್ತಿತ್ತು. ಬಯಲು ಶೌಚಾಲಯ, ಆದರೆ ನಿರ್ಜನ ಪ್ರದೇಶ. ನನಗೆ ಎಂದೂ ಅದು ಮುಜುಗರ ತರಲಿಲ್ಲ. ಅಂಥ ಸಂದರ್ಭದಲ್ಲಿ ಮಾತ್ರ ಪ್ರಕೃತಿಯು ಪುರುಷ ಮತ್ತು ಮಹಿಳೆಯರ ನಡುವೆ ತಾರತಮ್ಯ ಮಾಡಿಬಿಟ್ಟಿದೆ ಎನ್ನುವುದಂತೂ ಮನಸ್ಸಿಗೆ ಬರುತ್ತಿತ್ತು." ಹೀಗೆಂದು ಸಂದರ್ಶನ ಒಂದರಲ್ಲಿ ಆಕೆ ನಿಸ್ಸಂಕೋಚವಾಗಿ ಹೇಳಿಕೊಂಡಿದ್ದಾಳೆ.

ಅಂಟಾರ್ಕ್ಟಿಕದಂಥ ಹಿಮದ ಸಾಮ್ರಾಜ್ಯದಲ್ಲಿ ದೀರ್ಘ ಕಾಲವಿದ್ದರೆ ಅದು ಮನಸ್ಸಿನ ಮೇಲೆ ಬೇರೆ ಬೇರೆ ತರಹದ ಒತ್ತಡ ಬೀರುತ್ತದೆ. ಒಬ್ಬೊಬ್ಬರು ಒಂದೊಂದು ರೀತಿ ಪ್ರತಿಕ್ರಿಯಿಸುತ್ತಾರೆ. ಆಸ್ಟಾನ್, ಅಂಟಾರ್ಕ್ಟಿಕ ಯಾತ್ರೆಗೆ ಹೊರಡುವ ಮುನ್ನ ಮನೋವಿಜ್ಞಾನಿಯನ್ನು ಭೇಟಿಮಾಡಿ ಏಕಾಂತವನ್ನು ಹೇಗೆ ಎದುರಿಸಬೇಕು ಎಂಬುದನ್ನು ಕುರಿತು ಟಿಪ್ಸ್ ಪಡೆದಿದ್ದಳಂತೆ.ಒಂದು ಸಲ ನಾನು ಎರಡೂ ಹಿಮಬಂಡಿಯನ್ನು ಎಳೆಯುತ್ತಿದ್ದಾಗ, ಕಣ್ಣಲ್ಲಿ ಒಂದೇ ಸಮನೆ ಬುಳು ಬುಳು ನೀರು ಹರಿಯುತ್ತಿತ್ತು. “ನನಗೆ ಗೊತ್ತಿತ್ತು ನಾನು ಏಕಾಂತತೆಯಿಂದಾಗಿ ಅಳುತ್ತಿರಲಿಲ್ಲ, ಬದಲು ಒತ್ತಡ ಹೊರಹಾಕಲು ಕೆಲವು ಹಾರ್ಮೋನುಗಳು ಹೀಗೆ ಕೆಲಸಮಾಡುತ್ತವಂತೆ ಎಂದು ಮನೋವಿಜ್ಞಾನಿ ಹೇಳಿದ್ದ ಮಾತು ಆಗ ನೆನಪಿಗೆ ಬರುತ್ತಿತ್ತು. ಈ ಅಳುವಿನ ಅನುಭವ ಪುರುಷರಿಗೂ ಆಗಿರುತ್ತದೆ" ಎಂದು ಮನೋವಿಜ್ಞಾನಿ ಹೇಳಿದ್ದರಂತೆ. ಮಧ್ಯೆ ಮಧ್ಯೆ ಪಾಡ್‍ಕಾಸ್ಟ್‍ನಂತೆ ಫೋನ್ ಕಾಸ್ಟ್ ಸಂದೇಶವನ್ನು ಕಳಿಸುವ ಅವಕಾಶವಿರುತ್ತಿತ್ತು. ಆದರೆ ತನ್ನ ಗುರಿಗೆ ಭಂಗವಾಗುತ್ತದೆಂದು ಆಕೆ ಹೆಚ್ಚು ಬಳಸುತ್ತಿರಲಿಲ್ಲವಂತೆ.“ಕೆಲವೊಮ್ಮೆ ವಿನಾಕಾರಣ ನಗು ಬರುತ್ತಿತ್ತು. ಹುಚ್ಚಿಯಂತೆ ನಗುತ್ತಿದ್ದೆ, ಅದರಲ್ಲಿ ಯಾವ ಅರ್ಥವನ್ನೂ ಕಾಣಲಿಲ್ಲ. ಹೊರಗೋ ಮೈನಸ್ 30 ಡಿಗ್ರಿ ಸೆಂ.ಗಿಂತ ಉಷ್ಣತೆ ಮೇಲೇರಲೇ ಇಲ್ಲ. ಕನ್ನಡಕದ ತುಂಬ ಬರೀ ಹಿಮದ ಅಂಟು. ತಪ್ಪಿಯೂ ಕನ್ನಡಕ ತೆಗೆಯುವಂತಿರಲಿಲ್ಲ. ಹೆಚ್ಚಿನಪಾಲು ನೀರು ತೆಗೆದ ಶುಷ್ಕ ಆಹಾರವನ್ನೇ ನಾನು ಬಳಸಬೇಕಾಗಿತ್ತು. ಬಂಡಿ ಎಳೆಯುವಾಗ ನನಗೆ ತಾಕತ್ತು ಕೊಡುತ್ತಿದ್ದುದು ಚಾಕೋಲೇಟ್ ಒಂದೇ” ಎನ್ನುತ್ತಾಳೆ ಆಸ್ಟಾನ್.

ನಿಗದಿಯಂತೆ 59 ದಿನದಲ್ಲಿ ಖಂಡವನ್ನು ಅಡ್ಡಹಾಯುವಾಗ ಇನ್ನೊಮ್ಮೆ ದಕ್ಷಿಣ ಧ್ರುವವನ್ನು ಮೆಟ್ಟಿ ಅಲ್ಲಿ ನೆಟ್ಟಿರುವ ಕಂಬವನ್ನು ತಬ್ಬಿಕೊಂಡಿದ್ದಳು. ಇಲ್ಲಿ ಇನ್ನೊಂದು ವಿಶೇಷ ಸಂದರ್ಭ ಆಕೆಯ ಮನಃಪಟಲದಲ್ಲಿ ಎಂದೂ ಉಳಿಯುತ್ತದೆ. ಹಿಂದಿನ ವರ್ಷ ಈಕೆ ಸಾಗುವ ಮಾರ್ಗದಲ್ಲಿ ವಿಮಾನದ ಮೂಲಕ ಎರಡು ಗಂಟನ್ನು ಎಸೆದಿದ್ದರು. ಆಹಾರ-ಔಷಧಿ-ಬಟ್ಟೆ! ತೀರ ಆಪತ್ಕಾಲಕ್ಕೆ ಒದಗಿ ಬರಲಿ ಎಂದು. ದಕ್ಷಿಣ ಧ್ರುವ ತಲಪುತ್ತಲೇ ಅದನ್ನು ಎತ್ತಿಕೊಂಡಿದ್ದಳು. ಇನ್ನೊಂದು ಇನ್ನೂ 500 ಕಿ. ಮೀ. ದೂರದಲ್ಲಿತ್ತು.. ಅದನ್ನು ಮುಟ್ಟುವಾಗ ಅದೇನೋ ಪುಲಕ. ಇನ್ನೇನು ದಕ್ಷಿಣ ಧ್ರವದಿಂದ ಹೊರಡಬೇಕೆನ್ನುವಾಗ ದೂರದಲ್ಲಿ ಕರಿ ಚುಕ್ಕೆಗಳು ಇವಳತ್ತ ಬರುತ್ತಿರುವುದು ಕಾಣಿಸತು. ಹತ್ತಿರ ಬಂದಂತೆ ಇಬ್ಬರು ಧ್ರುವದತ್ತ ಸ್ಕೀಯಿಂಗ್ ಮಾಡಿಕೊಂಡು ಬರುತ್ತಿದ್ದಾರೆ. ಆಸ್ಟ್ರೇಲಿಯದ ಸಾಹಸಿಗಳು. ಇನ್ನಷ್ಟು ಖುಷಿಯಾಗಿ ಇಬ್ಬರನ್ನು ತಬ್ಬಿಕೊಳ್ಳುವ ಆಸೆ. ಆದರೆ ಶೈತ್ಯ ಮೈನಸ್ 54 ಡಿಗ್ರಿ ಸೆಂ.- ಅಭಿನಂದಿಸಿ ಅವರವರ ದಾರಿ ಹಿಡಿದರು.

ಸಾಧನೆ – ದಾಖಲೆ

ಮರಳಿ ಇಂಗ್ಲೆಂಡಿಗೆ ಬಂದಾಗ, ಆಕೆಯ ಸಾಧನೆ ಗಿನ್ನೀಸ್ ಬುಕ್‍ಗೆ ಸೇರಿತ್ತು. ಈಗಲೂ ಆಕೆಗೆ ವಿಜ್ಞಾನ ಸಂಸ್ಥೆಗಳಲ್ಲೋ, ಸಾರ್ವಜನಿಕ ವೇದಿಕೆಗಳಲ್ಲೋ ಅಂಟಾರ್ಕ್ಟಿಕ ಕುರಿತು ಮಾತನಾಡುವುದೆಂದರೆ ಎಲ್ಲಿಲ್ಲದ ಉತ್ಸಾಹ. “ನಾನು ಮೊದಲು ಹವಾಮಾನ ವಿಜ್ಞಾನಿ, ಅನಂತರ ಸಾಹಸಯಾನಿ" ಎಂದೇ ಆಕೆ ಉಪನ್ಯಾಸ ಪ್ರಾರಂಭಿಸುತ್ತಾಳೆ. ಅಂಟಾರ್ಕ್ಟಿಕದಿಂದ ಹಿಂತಿರುಗಿದ ಮೇಲೂ ಆಕೆ ಮೊದಲಿನ ಚಟುವಟಿಕೆಯಲ್ಲಿ ತೊಡಗಿಕೊಂಡಳು.ಈ ಹಿಂದೆ,ಮಿದುಳಿಗೆ ಪೆಟ್ಟು ಮಾಡಿಕೊಂಡ ಆದರೆ ಎಲ್ಲದಕ್ಕೂ ಪ್ರತಿಕ್ರಿಯಿಸಬಲ್ಲ ಮಕ್ಕಳ ಗುಂಪೊಂದನ್ನು 2005ರಲ್ಲಿ ಐಸ್‍ಲೆಂಡ್ ಸುತ್ತಮುತ್ತ ಯಾನ ಮಾಡಿಸಿ, ಬಿಸಿ ನೀರಿನ ಬುಗ್ಗೆಯಲ್ಲಿ ಮೀಯಿಸಿ ಬಂದ ಮಹಾನ್ ಮಹಿಳೆ ಆಸ್ಟಾನ್. ಇಬ್ಬರು ಪುರುಷರೊಡನೆ 2013ರಲ್ಲಿ ಒಂದು ತಂಡ ಕಟ್ಟಿ ಉತ್ತರ ಧ್ರುವದ, ಸೈಬೀರಿಯ, ನಾರ್ವೆ, ಫಿನ್‍ಲೆಂಡ್‍ಗಳನ್ನು ಹಾಯುವಾಗ ಮೈನಸ್ 58 ಡಿಗ್ರಿ ಸೆಂ. ಶೈತ್ಯಕ್ಕೂ ಮೈಯೊಡ್ಡಿಕೊಂಡು 36,000 ಕಿಲೋ ಮೀಟರ್ ಪ್ರಯಾಣ ಮಾಡಿದ್ದು ಕೂಡ ಒಂದು ದಾಖಲೆಯೇ.

ಆಸ್ಟಾನ್, 2014ರಲ್ಲಿ ಲಂಡನ್ನಿನ ಬಿ.ಬಿ.ಸಿ.ಗಾಗಿ “ಆಪರೇಷನ್ ಕ್ಲೌಡ್ ಲ್ಯಾಬ್: ಸೀಕ್ರೆಟ್ ಆಫ್ ದಿ ಸ್ಕೈಸ್’” ಕುರಿತು ಎರಡು ಡಾಕ್ಯುಮೆಂಟರಿ ಚಿತ್ರಗಳನ್ನು ತಯಾರಿಸಿ ಕೊಡಲು ಅಮೆರಿಕದ ಪೂರ್ವ ತೀರದಿಂದ ಪಶ್ಚಿಮ ತೀರದವರೆಗೆ ವಿಶೇಷ ವಿಮಾನದಲ್ಲಿ ಹಾರಿದ್ದಳು. ಆ ಯಾನದಲ್ಲಿ ಮನುಷ್ಯರು ವಾಯುಗೋಳದ ಮೇಲೆ ಮಾಡಿರುವ ಅತಿಕ್ರಮಣವನ್ನು ದಾಖಲೆಮಾಡುವಾಗ ಬೆಚ್ಚಿದ್ದಳು. ಅಂಟಾರ್ಕ್‍ಟಿಕದ ಪರಿಸರ ಎಷ್ಟು ಶುದ್ದ, ಇಲ್ಲಿ ಅದೆಷ್ಟು ಹದಗೆಟ್ಟಿದೆ ಎಂಬುದನ್ನು ಖುದ್ದಾಗಿ ನೋಡಿ ಆ ಕುರಿತು ವಿಶೇಷ ಕಾಮೆಂಟರಿ ಕೊಟ್ಟಿದ್ಧಾಳೆ. ಅಷ್ಟೇ ಅಲ್ಲ, ಸದಾ ಮರಳುಗಾಡಿನ ಪರಿಸರದಲ್ಲೇ ಇರುವ ಅರಬ್ ರಾಷ್ಟ್ರದ ಉತ್ಸಾಹಿ ತರುಣಿಯರ ಗುಂಪೊಂದನ್ನು ಉತ್ತರ ಧ್ರುವಕ್ಕೆ 2018ರಲ್ಲಿ ಕರೆದೊಯ್ದಿದ್ದಳು.

ಆಸ್ಟಾನ್‍ಗೆ ಹತ್ತಾರು ಪ್ರಶಸ್ತಿ, ಸನ್ಮಾನಗಳು ಸಂದಿವೆ. ವಿಶೇಷವಾಗಿ ಕ್ಯಾಪ್ಟನ್ ಸ್ಕಾಟ್ ಸೊಸೈಟಿಯ ಸ್ಪಿರಿಟ್ ಆಫ್ ಅಡ್ವೆಂಚರ್’ ಪ್ರಶಸ್ತಿ, ಲಂಡನ್ನಿನ ರಾಯಲ್ ಜಿಯಾಗ್ರಾಫಿಕಲ್ ಸೊಸೈಟಿ, ನ್ಯೂಯಾರ್ಕ್‍ನ ಎಕ್ಸ್‍ಫ್ಲೋರರ್ಸ್ ಕ್ಲಬ್ ಸದಸ್ಯತ್ವ ನೀಡಿ ಗೌರವಿಸಿವೆ. ವಿಮೆನ್ ಆಫ್ ಡಿಸ್ಕವರಿ’ ಪ್ರಶಸ್ತಿಗೆ ಭಾಜನಳಾಗಿದ್ದಾಳೆ. ಲಂಡನ್ನಿನ `ಮೆಂಬರ್ ಆಫ್ ದಿ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್’ ಈಕೆಗೆ ಕ್ವೀನ್ಸ್ ಪೋಲಾರ್ ಮೆಡಲ್’ ನೀಡಿದೆ. ಕ್ಯಾಂಟರ್‍ಬರಿ ಕ್ರೈಸ್ಟ್ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿದೆ. ನ್ಯಾಷನಲ್ ಜಿಯಾಗ್ರಾಫಿಕ್ ಯು.ಕೆ. ಆಕೆಯ ಕೊಡುಗೆಗಾಗಿ ವಿಶೇಷ ಪ್ರಶಸ್ತಿಯನ್ನು ನೀಡಿದೆ. ಒಂದು ಲೆಕ್ಕದಲ್ಲಿ ಆಸ್ಟಾನ್‍ನ ಷೋಕೇಸ್ ಮತ್ತು ವಾರ್ಡ್‍ರೋಬ್ ತುಂಬ ಅವಾರ್ಡ್‍ಗಳೇ.

ಆಸ್ಟಾನ್, ಎರಿಕ್ ಎಂಬ ಐಸ್‍ಲೆಂಡ್ ಸಾಹಸಿಯನ್ನು ಮದುವೆಯಾಗಿದ್ದಾಳೆ. ಒಂದು ಮಗು ಇದೆ ಎನ್ನುವುದನ್ನು ಬಿಟ್ಟರೆ ಆಕೆ ವೈಯಕ್ತಿಕ ಬದುಕಿನ ಬಗ್ಗೆ ಹೆಚ್ಚು ಮಾತನಾಡಲು ಇಷ್ಟಪಡುವುದಿಲ್ಲ. ಆಕೆಯ ಮುಂದಿನ ನಿಲ್ದಾಣ ಮತ್ತೆ ಉತ್ತರ ಧ್ರುವ ಎಂದು ಖಚಿತಮಾಡಿಕೊಂಡಿದ್ದಾಳೆ. 2022ರ ಏಪ್ರಿಲ್‍ನಲ್ಲಿ ಆರು ಮಂದಿ ಮಹಿಳೆಯರೊಂದಿಗೆ ಉತ್ತರ ಧ್ರುವಕ್ಕೆ ಹೋಗುವ ತಯಾರಿಯಲ್ಲಿದ್ದಾಳೆ. ಅಲ್ಲಿ ಈ ಬಾರಿ ಸಾಹಸಯಾತ್ರೆಗಿಂತ ಹೆಚ್ಚಾಗಿ ವಿಜ್ಞಾನದ ಕಡೆ ಗಮನ ಕೊಡುವೆ ಎಂದಿದ್ದಾಳೆ. ಏಕೆಂದರೆ ಜಾಗತಿಕ ಉಷ್ಣತೆಯಿಂದ ಈಗ ಉತ್ತರ ಧ್ರುವ ಭಾಗದ ಹಿಮ ಬಹುಬೇಗ ಕರಗುತ್ತಿದೆ, ಅಲ್ಲಿನ ಜೀವಿಸಂಕುಲಕ್ಕೆ ಕುತ್ತು ಬಂದಿದೆ. ಆ ಭಾಗದಿಂದ ಮೀಥೇನ್ ಹೊರಸೂಸುತ್ತ ವಾಯುಗೋಳ ಸೇರುತ್ತಿದೆ. ಇವೆಲ್ಲವೂ ಮನುಷ್ಯ ನಿರ್ಮಿತ ಸಮಸ್ಯೆ ಎನ್ನುತ್ತಾಳೆ ಆಸ್ಟಾನ್.
ಧ್ರುವಯಾತ್ರೆಯೆಂದರೆ ಎಲ್ಲರಿಗೂ ಬೇಕಾದ ನೆಚ್ಚಿನ ನಾಯಕಿ ಫೆಲಿಸಿಟಿ ಆಸ್ಟಾನ್.

-ಡಾ ಟಿ.ಆರ್. ಅನಂತರಾಮು

(ಡಾ ಟಿ.ಆರ್. ಅನಂತರಾಮು, ನಂ. 534, 70ನೇ ಅಡ್ಡರಸ್ತೆ, 14ನೇ ಮುಖ್ಯ ರಸ್ತೆ, ಕುಮಾರಸ್ವಾಮಿ ಬಡಾವಣೆ 1ನೇ ಹಂತ, ಬೆಂಗಳೂರು-560 111, ಮೊ : 9886356085)

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *