Uncategorizedಅಂಕಣ

ಸ್ತ್ರೀ ಅಂದರೆ ಅಷ್ಟೇ ಸಾಕೇ?/ ಸೆಕೆ ಸೆಕೆ – ಸರುಹಾಶಿ ನೆನಪಾಗುತ್ತಾಳೆ ಏಕೆ? – ಟಿ.ಆರ್. ಅನಂತರಾಮು

ವಿಜ್ಞಾನ ಲೋಕದಲ್ಲಿ ಅಚ್ಚರಿಯ ಅನ್ವೇಷಣೆಗಳನ್ನು ಮಾಡಿದ ಜಪಾನ್ ಮಹಿಳೆ ಸರುಹಾಶಿ ಹಲವು ಪ್ರಥಮಗಳ ಸಾಧಕಿ. ಈಗ ಜಗತ್ತಿನ ಹವಾಗುಣವೇ ಬದಲಾಗಿದೆ. ಬಿಸಿಲಲ್ಲಿ ಮಳೆಗಾಲ, ಮಳೆಗಾಲದಲ್ಲಿ ಚಳಿಗಾಲ, ಎಲ್ಲ ಋತುಗಳೂ ಹಿಂದುಮುಂದಾಗಿವೆ. ಎಲ್ಲೋ ಅತಿವೃಷ್ಟಿ, ಇನ್ನೆಲ್ಲೋ ಅನಾವೃಷ್ಟಿ. ಮತ್ತೆ ಮತ್ತೆ ಬರದ ಪುನರಾವರ್ತನೆ. ನೆರೆಹಾವಳಿ ಇವೆಲ್ಲ ಭೂತಾಪ ಹೆಚ್ಚಿರುವುದರ ಪರಿಣಾಮ ಎಂದು ಜಗತ್ತಿಗೂ ಗೊತ್ತು. ಈ ಸಂಗತಿಯನ್ನು ಜಗತ್ತಿಗೆ ಸಾರಿದ ಮೊದಲಿಗರಲ್ಲಿ ಸರುಹಾಶಿಯೂ ಒಬ್ಬರು.

ಕೆಲವೊಮ್ಮೆ ನಿಮಗೂ ಇಂಥ ಅನುಭವ ಆಗಿರುತ್ತದೆ. ದಾರಿಯಲ್ಲಿ ಹೋಗುವಾಗಲೋ, ಎಲ್ಲೋ ಕುಳಿತಾಗಲೋ, ಯಾರೋ ಅಪರಿಚಿತರ ಮಾತು ಕಿವಿಗೆ ಬೀಳುತ್ತಿರುತ್ತದೆ. ಕೆಲವು ಹಿತಕರವಾಗಿರಬಹುದು, ಇನ್ನು ಕೆಲವು ಉಪದೇಶವಾಗಿರಬಹುದು ಅಥವಾ ಅವರ ಕಷ್ಟಕಾರ್ಪಣ್ಯಗಳನ್ನು ತೋಡಿಕೊಳ್ಳುವ ಸೋತ ಧ್ವನಿಗಳಾಗಿರಬಹುದು. ಇವೇನು ಕದ್ದು ಕೇಳುವ ಮಾತುಗಳಲ್ಲ, ಅವೇ ರಾಚುತ್ತ ಕಿವಿಗೆ ಬೀಳುವ ಮಾತುಗಳು. ಆ ಒಂದು ಕ್ಷಣ ಅಷ್ಟೇ, ಕೇಳುವವರೂ ಮರೆತುಬಿಡುತ್ತಾರೆ, ಮಾತನಾಡುವವರಿಗಂತೂ ಇನ್ನೊಬ್ಬರನ್ನು ಕುರಿತ ಪರಿಜ್ಞಾನವೂ ಇರುವುದಿಲ್ಲ. ಈ ಕೋವಿಡ್ ಎಂಬ ರಕ್ಕಸ ಜಗತ್ತನ್ನೇ ಅಲುಗಾಡಿಸಲು ಇನ್ನೂ ಪ್ರಾರಂಭಿಸಿರಲಿಲ್ಲ. ವಾಸ್ತವವಾಗಿ ಇದನ್ನು ಎಣಿಸಿಯೂ ಇರಲಿಲ್ಲ. ಅಂಥ ಒಂದು ದಿನ ನಾನು ಬೆಂಗಳೂರಿನ ಜಯನಗರದ ಕಾಂಪ್ಲೆಕ್ಸ್ ಮುಂದೆ ಹಾದುಹೋಗುವಾಗ ಇಬ್ಬರು ಹಿರಿಯ ನಾಗರಿಕರು ಸ್ವಲ್ಪ ಗಟ್ಟಿ ದನಿಯಲ್ಲೇ ಮಾತನಾಡುತ್ತಿದ್ದರು. ಸಾಮಾನ್ಯವಾಗಿ ಜನ ಈ ಜಾಗವನ್ನು ಸೋಮಾರಿಕಟ್ಟೆ ಎಂದೇ ಕರೆಯುವುದನ್ನು ಕೇಳಿದ್ದೇನೆ. ಬಹುತೇಕ ಅಲ್ಲಿ ವೃದ್ಧರದೇ ಸಂಖ್ಯಾಬಾಹುಳ್ಯ.

ಹಲವು ಸಲ ನಾನು ವೃದ್ಧರ ಬಳಿ ಕುಳಿತುಕೊಳ್ಳಲು ಹಿಂಜರಿಯುತ್ತೇನೆ ಎಂದು ಸಾರ್ವಜನಿಕವಾಗಿಯೇ ಒಪ್ಪಿಕೊಳ್ಳುತ್ತೇನೆ. ಇದರರ್ಥ ಅವರ ಬಗ್ಗೆ ಅಸಡ್ಡೆ ಎಂದಲ್ಲ. ಅವರಿಗಿರುವ ಅಪಾರ ಅನುಭವದ ಬಗ್ಗೆಯೂ ಗೊತ್ತು. ಆದರೆ ಒಮ್ಮೆ ಮಾತಿಗೆ ಕೂತರೆ, ಎಲ್ಲೆಲ್ಲೋ ಒಯ್ಯುವ, ಕೊನೆಗೆ ಆ ಕಾಲವೇ ಚೆನ್ನಾಗಿತ್ತು ಎನ್ನುವ ಮಾತಿಗೆ ಬಂದು ನಿಂತುಬಿಡುತ್ತಾರೆ. ಆದರೆ ಎಲ್ಲರೂ ಹಾಗಲ್ಲ ಎನ್ನುವುದೂ ಗೊತ್ತು. ಆ ದಿನ ಆದದ್ದು ಇಷ್ಟು: ಇಬ್ಬರು ವೃದ್ಧರು ಮಾತನಾಡಿಕೊಳ್ಳುತ್ತಿದ್ದುದು ಕಿವಿಗೆ ಬಿತ್ತು. ಒಬ್ಬರು ಶ್ಯಾಮರಾಯರು ಇರಬೇಕು. ಏಕೆಂದರೆ ಅವರೊಂದಿಗಿದ್ದವರು ಪದೇ ಪದೇ ನೋಡು ಶಾಮಣ್ಣ’ ಎನ್ನುತ್ತಿದ್ದರು. ಇನ್ನೊಬ್ಬರು ವಾಸುದೇವಮೂರ್ತಿ ಇರಬೇಕು. ಏಕೆಂದರೆ ಶಾಮಣ್ಣನವರುಹಾಗಲ್ಲ ವಾಸು’ ಎಂದು ಪದೇ ಪದೇ ಹೇಳುತ್ತಿದ್ದರು. ಅವರ ನಡುವೆ ಕಾಡು ಹರಟೆ ಇರಲಿಲ್ಲ ಅನ್ನಿಸಿತು. ಬಹು ಗಂಭೀರವಾದ ಚರ್ಚೆಗೆ ಇವರಿಬ್ಬರಲ್ಲಿ ಯಾರೋ ಒಬ್ಬರು ಭರ್ಜರಿ ಪೀಠಿಕೆ ಹಾಕಿದ್ದರು.

`ನೋಡು ವಾಸು, ಮೊದಲನೇ ಮಹಾಯುದ್ಧದ ಕಾಲದಲ್ಲಿ ಬದುಕಿದ್ದವರು 99 ಭಾಗ ಈಗ ಇಲ್ಲ. ಎರಡನೇ ಮಹಾಯುದ್ಧವನ್ನು ನೋಡಿದವರೂ ಈಗ ಮುದುಕರಾಗಿರುತ್ತಾರೆ. ಆದರೆ ಅವರ ಮನದಾಳದಲ್ಲಿ ಅಚ್ಚಳಿಯದ ದುರಂತವೊಂದು ನೆಲೆಯಾಗಿ ನಿಂತಿದೆ. ಅದು ನಾಗಸಾಕಿ ಮತ್ತು ಹಿರೋಷಿಮಗಳ ಮೇಲೆ ಅಮೆರಿಕ ಮಾಡಿದ ಬಾಂಬ್ ದಾಳಿ. ಕ್ಷಣಮಾತ್ರದಲ್ಲಿ ಲಕ್ಷಾಂತರ ಮಂದಿ ಉರಿದು ಬೂದಿಯಾಗಿಬಿಟ್ಟರು.’ ಎಂದು ಕಾಲವನ್ನು ಹಿಂದಕ್ಕೆ ಸರಿಸಿದ್ದರು ಶಾಮಣ್ಣ.

`ಇದರಲ್ಲಿ ಹಸತೇನಿದೆ? ಜಗತ್ತಿಗೇ ಗೊತ್ತಿರುವ ಕಥೆ ಇದು’ ಎಂದು ವಾಸು ಸಾರಿಸಿ ಹಾಕಿಬಿಟ್ಟರು ಅವರ ಮಾತುಗಳನ್ನು.

ನಾನು ಹೇಳಹೊರಟದ್ದು ಅದಲ್ಲ ವಾಸು, ಸರುಹಾಶಿ ಎಂಬಾಕೆಯ ಹೆಸರನ್ನು ಕೇಳಿದ್ದೀಯಾ? ಮತ್ತೆ ಶಾಮಣ್ಣ ಇನ್ನೊಂದು ಸಂಗತಿಗೆ ಪೀಠಿಕೆ ಹಾಕಿದ್ದರು. ವಾಸು ಅದೇ ಪಟ್ಟಿನಲ್ಲಿಎಷ್ಟೋ ಕೋಟಿ ಜನರ ಹೆಸರು ನಮ್ಮಲ್ಲಿ ಯಾರಿಗೂ ಗೊತ್ತಿಲ್ಲ. ನೀನು ಹೇಳಿದ ಹೆಸರನ್ನಂತೂ ಕೇಳಿಯೇ ಇಲ್ಲ. ಇಷ್ಟಂತೂ ನಿಜ, ಆಕೆ ಜಪಾನಿನವಳಿರಬೇಕು.’ ಎಂದು ತಮ್ಮ ಊಹೆಯನ್ನು ಹರಿಯಬಿಟ್ಟರು. ಆದರೂ ಶಾಮಣ್ಣನವರು ಯಾವುದೋ ಉದ್ದೇಶವಿಟ್ಟುಕೊಂಡೇ ಈ ಹೆಸರು ಎತ್ತಿದ್ದಾರೆ ಎಂಬ ಗುಮಾನಿ ಅವರಿಗೆ. ಸಂಜೆ ಮಬ್ಬುಗತ್ತಲು ಕವಿಯುತ್ತಿತ್ತು ಜೊತೆಗೆ ಮೋಡ ಕೂಡ. ಈ ಇಬ್ಬರು ಮೆಲ್ಲನೆ ಎದ್ದರು.

ಇಷ್ಟು ಮಾತ್ರ ದೃಶ್ಯವನ್ನು ನಾನು ಕಂಡೆ. ಕಿವಿಗೆ ಬಿದ್ದದ್ದೂ ಅಷ್ಟೇ ಮಾತುಗಳು. ಮುಂದೆ ಅದು ಮರೆತೇಹೋಯಿತು. ಎಷ್ಟೋ ಸಲ ಜಪಾನ್, ಚೀನ, ಕೊರಿಯದವರ ಹೆಸರುಗಳನ್ನು ಓದಿದಾಗ ಮಾತ್ರ ಆ ಕ್ಷಣದಲ್ಲಿ ತಲೆಗೆ ಹೋಗಿರುತ್ತವೆ, ಮರುಕ್ಷಣದಲ್ಲಿ ಅವು ಮರೆಯಾಗಿಬಿಡುತ್ತವೆ – ಬಹುಶಃ ಶಾಶ್ವತವಾಗಿ. ಆದರೂ ಈ ಸರುಹಾಶಿ ಹೆಸರು ಏಕೋ ಮನಸ್ಸಿನೊಳಗೆ ಇಳಿದುಬಿಟ್ಟಿತ್ತು. ಮತ್ತೆ ನೆನಪಾದ್ದು 2018ರ ಮಾರ್ಚ್ 22ರಂದು. ಆ ದಿನ ಗೂಗಲ್ ತನ್ನ ಡೂಡಲ್ನಲ್ಲಿ ಈಕೆಯ ರೇಖಾಚಿತ್ರವನ್ನು ಬಿಡಿಸಿ, ಆಕೆಯನ್ನು ಸ್ಮರಿಸಿತ್ತು. ನನಗೋ ಮತ್ತೆ ಆಕೆಯ ಹೆಸರು ಫಟ್ಟನೆ ಸ್ಮರಣೆಗೆ ಬಂತು. ಜೊತೆಗೆ ಶಾಮರಾಯರು ಮತ್ತು ವಾಸು ಅವರ ನಡುವೆ ನಡೆದ ಪುಟ್ಟ ಸಂಭಾಷಣೆ ಕೂಡ. ನನ್ನ ಕುತೂಹಲ ತೆರೆದುಕೊಂಡಿತು. ಸಾಮಾನ್ಯವಾಗಿ ಎರಡನೇ ಮಹಾಯುದ್ಧ ಎಂದೊಡನೆ ನೆನಪಾಗುವುದೇ ಅಮಾಯಕರನ್ನು ಬಾಂಬ್ ದಾಳಿಮಾಡಿ ಕೊಂದ ಅಮೆರಿಕದ ಅಮಾನವೀಯ ನಡೆ. ಈ ಸರುಹಾಶಿಗೂ ಬಾಂಬ್ ದಾಳಿಗೂ ನೇರ ಸಂಬಂಧವಿಲ್ಲ ನಿಜ. ಆದರೆ ಅವಳ ಬದುಕಿನಲ್ಲಿ ಈ ಘಟನೆಯ ಒಂದು ಕೊಂಡಿ ಹಾಸುಹೊಕ್ಕಿತ್ತು.

ಹೆಣ್ಣೆಂದು ಹಿಂಜರಿಯ ಬೇಡ

`ಮಗೂ, ನೀನು ಹೆಣ್ಣೆಂದು ಹಿಂಜರಿಯಬಾರದು, ವಿಜ್ಞಾನ ತಂತ್ರಜ್ಞಾನದ ಅರಿವಿನಿಂದ ನೀನು ವಂಚಿತಳಾಗಬಾರದು. ಅದೇ ನಿನ್ನ ಗುರಿಯಾಗಲಿ’ ಎಂದು ತಲೆಗೆ ತುಂಬಿದ್ದರು. ಅದು ಅವಳಿಗೆ ಮನದಲ್ಲಿ ನಾಟಿಬಿಟ್ಟಿತ್ತು. ಮುಂದೆ ಆಕೆಯೇ ಬರೆದಂತೆ:

ನನಗೆ ಗಣಿತವೆಂದರೆ ಸದಾ ಕುತೂಹಲ. ಅವ್ಯಕ್ತ ಲೋಕದಲ್ಲಿ ವ್ಯವಹರಿಸುವುದು ವಿಚಿತ್ರ ಖುಷಿ ಕೊಡುತ್ತಿತ್ತು. ನಮ್ಮ ಅಧ್ಯಾಪಕಿ ನನ್ನ ಆಸಕ್ತಿ ಗಮನಿಸಿ ಮುಂದಿನ ತರಗತಿಯ ಗಣಿತ ಪಠ್ಯವನ್ನು ಕೊಟ್ಟುನೀನು ಜಾಣೆ, ಇದನ್ನು ಈಗಲೇ ಅಭ್ಯಾಸಮಾಡಿಕೋ’ ಎನ್ನುತ್ತಿದ್ದರು. ಕ್ಲಾಸು ಮುಗಿದಮೇಲೂ ನನ್ನನ್ನು ಕೂಡಿಸಿಕೊಂಡು ಹೊಸ ಲೆಕ್ಕಗಳನ್ನು ಹೇಳಿಕೊಡುತ್ತಿದ್ದರು. ಒಂದೊಂದು ಕ್ಲಾಸ್ ಮುಂದೆ ಹೋದರೂ ನನಗಂತೂ ಹೊಸ ಜಗತ್ತೇ ತೆರೆದಂತೆ ಆಗುತ್ತಿತ್ತು. ಒಮ್ಮೆ ಕ್ಲಾಸಿನಲ್ಲಿ ಕೂತಿದ್ದಾಗ ಹೊರಗೆ ಧುತ್ತೆಂದು ಮಳೆ ಬೀಳುತ್ತಿತ್ತು. ಗಾಜಿನ ಕಿಟಕಿಯ ಮೇಲೆ ಮೊದಲು ಬಿದ್ದ ಹನಿಗಳು ಮೆಲ್ಲನೆ ಒಂದರೊಡನೊಂದು ಕೂಡಿಕೊಂಡು ಪುಟಾಣಿ ನದಿಯಾಗಿ ಹರಿಯುವುದನ್ನು ನೋಡಿದಾಗ, ಮನಸ್ಸು ಪುಲಕಗೊಳ್ಳುತ್ತಿತ್ತು. ನಿಸರ್ಗ ಹೇಗೆ ಈ ಹನಿಗಳನ್ನು ಬಂಧಿಸಿಟ್ಟಿದೆ? ಇವುಗಳ ಬಂಧ ಹೇಗಿದೆ ಎಂಬುದು ನನಗೆ ಬಿಡಿಸಬೇಕಾದ ಕುತೂಹಲ ಎನ್ನಿಸುತ್ತಿತ್ತು.”

21ರ ಹರೆಯದಲ್ಲಿ ಇನ್ಷ್ಯೂರೆನ್ಸ್ ಕಂಪನಿಯಲ್ಲಿ ಕೆಲಸಮಾಡಿದಳು. ಏಕೋ ಅದು ಸರಿಹೋಗಲಿಲ್ಲ. ಟೋಕಿಯೋದ ಇಂಪೀರಿಯಲ್ ಕಾಲೇಜ್ಗೆ ಸೇರಿ 1943ರಲ್ಲಿ ಡಿಗ್ರಿ ಪಡೆದಳು. ಕೆಮಿಸ್ಟ್ರಿಯಲ್ಲಿ ಎಲ್ಲಿಲ್ಲದ ಕುತೂಹಲ ಆಕೆಗೆ. ಅಲ್ಲಿನ ಹವಾಗುಣ ಇಲಾಖೆಯಲ್ಲಿ ವಿಜ್ಞಾನಿಯಾಗಿ ಸೇರಿದಳು. ಬಾಲ್ಯದಲ್ಲಿ ಸಣ್ಣ ನೀರ ಹನಿಗಳು ಕಾಡಿದರೆ, ಡಿಗ್ರಿ ಪಡೆದ ಮೇಲೆ ಇಡೀ ಸಾಗರವೇ ಅವಳನ್ನು ಕರೆಯಿತು. ಈ ಹೊತ್ತಿಗಾಗಲೇ ಜಗತ್ತು ಕೈಗಾರಿಕಾ ಕ್ರಾಂತಿಯ ಫಲಶ್ರುತಿಯನ್ನು ಅನುಭವಿಸಲು ತೊಡಗಿತ್ತು. ಕಾರ್ಬನ್ ಡೈ ಆಕ್ಸೈಡ್ ಪ್ರಮಾಣ ವಾಯುಗೋಳದಲ್ಲಿ ಹೆಚ್ಚುತ್ತ ಹೋಗಿತ್ತು. ಹವಾಗುಣ ಬದಲಾವಣೆಯ ಆರಂಭದ ಪರ್ವ ಇದು.

ಈಕೆಗೆ ಎಲ್ಲಿಲ್ಲದ ಧೈರ್ಯ. ಸರುಹಾಶಿ ಎಂದರೆ ಧೈರ್ಯವಂತೆ ಎಂಬ ಹೆಸರು ಜಪಾನಿನದು. ನಮ್ಮಲ್ಲಿ ಜಯಮ್ಮ ಎನ್ನುವುದಿಲ್ಲವೇ ಹಾಗೆ. ಈಕೆ ಹೆಸರಿಗೆ ತಕ್ಕಹಾಗೆ ಒಂದು ತಂಡ ಕಟ್ಟಿಕೊಂಡು ಪೆಸಿಫಿಕ್ ಸಾಗರವನ್ನೆಲ್ಲ ಜಾಲಾಡಿದಳು. ಕಾರ್ಬನ್ ಡೈ ಆಕ್ಸೈಡ್ ನೀರಿನಲ್ಲಿ ಬೆರೆತಾಗ, ಒಂದು ದುರ್ಬಲ ಆಮ್ಲವಾಗುತ್ತದೆ. ಆದರೆ ಅದರಲ್ಲಿ ಎಷ್ಟು ಪ್ರಮಾಣ ಕಾರ್ಬನ್ ಇರುತ್ತದೆ, ಅಳೆಯುವುದು ಹೇಗೆ? ಇದು ಅಂದಿಗೆ ಯಾರಿಗೂ ತಿಳಿದಿರಲಿಲ್ಲ. ಅದಕ್ಕೊಂದು ಕೋಷ್ಟಕವನ್ನು ತಯಾರುಮಾಡಿದಳು. ತಾನೇ ಅಳೆದು ಇದರಲ್ಲಿ ಅದು ಇಷ್ಟಿದೆ ಎಂದು ತೋರಿಸಿದಳು. ಆ ಕೋಷ್ಟಕವನ್ನು ಈಗಲೂ ಸಾಗರವಿಜ್ಞಾನಿಗಳು ಬಳಸುತ್ತಾರೆ. ಅದಕ್ಕೆ ಅವಳದೇ ಹೆಸರನ್ನು ನೀಡಿ `ಸರುಹಾಶಿ ಕೋಷ್ಟಕ’ ಎಂದಿದ್ದಾರೆ.

ಈಗ ಜಗತ್ತಿನ ಹವಾಗುಣವೇ ಬದಲಾಗಿದೆ. ಬಿಸಿಲಲ್ಲಿ ಮಳೆಗಾಲ, ಮಳೆಗಾಲದಲ್ಲಿ ಚಳಿಗಾಲ, ಎಲ್ಲ ಋತುಗಳೂ ಹಿಂದುಮುಂದಾಗಿವೆ. ಎಲ್ಲೋ ಅತಿವೃಷ್ಟಿ, ಇನ್ನೆಲ್ಲೋ ಅನಾವೃಷ್ಟಿ. ಮತ್ತೆ ಮತ್ತೆ ಬರದ ಪುನರಾವರ್ತನೆ. ನೆರೆಹಾವಳಿ ಇವೆಲ್ಲ ಭೂತಾಪ ಹೆಚ್ಚಿರುವುದರ ಪರಿಣಾಮ ಎಂದು ಜಗತ್ತಿಗೂ ಗೊತ್ತು. ಈ ಸಂಗತಿಯನ್ನು ಜಗತ್ತಿಗೆ ಸಾರಿದ ಮೊದಲಿಗರಲ್ಲಿ ಇವಳೂ ಒಬ್ಬಳು. ಪೆಸಿಫಿಕ್ ಸಾಗರ ಕಾರ್ಬನ್ ಡೈ ಆಕ್ಸೈಡನ್ನು ಹೀರುವ ಪ್ರಮಾಣಕ್ಕಿಂತ ಎರಡು ಪಟ್ಟು ಹೆಚ್ಚಿನ ಪ್ರಮಾಣವನ್ನು ಹೊರಸೂಸುತ್ತಿದೆ. ಇದಕ್ಕೆ ಸಾಗರಜೀವಿಗಳು ಕೊಳೆತಾಗ ಕಾರ್ಬನ್ ಡೈ ಆಕ್ಸೈಡ್ ಬಿಡುಗಡೆಯಾಗುವುದೇ ಕಾರಣ ಎಂದು ಲೆಕ್ಕಕೊಟ್ಟು ಜಗತ್ತನ್ನೇ ಬೆಚ್ಚಿಸಿದ್ದಳು. ಈಗಲೂ ಬೇಸಿಗೆಯೆಂದರೆ ಅದು ಬಿರುಬೇಸಿಗೆಯೇ. ಮತ್ತೆ ಮತ್ತೆ ಸರುಹಾಶಿ ಮತ್ತವಳ ಸಂಶೋಧನೆ ನೆನಪಾಗುತ್ತದೆ.

ವಿಕಿರಣದ ಗಮ್ಮತ್ತು

ಎರಡನೇ ಮಹಾಯುದ್ಧವೇನೋ ಮುಗಿಯಿತು. ಸ್ವತಃ ಅಮೆರಿಕವೇ, ಬಾಂಬು ದಾಳಿಯಿಂದಾದ ವಿಕಿರಣ ಎಲ್ಲೆಲ್ಲಿ ಹರಡಿದೆ ಎಂದು ಅಧ್ಯಯನಮಾಡಲು ಮುಂದಾಯಿತು. ಅದಕ್ಕೆ ಪಾಪಪ್ರಜ್ಞೆ ಕೂಡ ಕಾಡುತ್ತಿತ್ತು. ಜಪಾನಿನಿಂದ ಸುಮಾರು 4,000 ಕಿಲೋ ಮೀಟರ್ ವಾಯುವ್ಯ ಭಾಗದ ಪೆಸಿಫಿಕ್ ಸಮುದ್ರ ದ್ವೀಪಗಳಲ್ಲಿ ಅಮೆರಿಕ ಪರಮಾಣು ಬಾಂಬ್ ಪ್ರಯೋಗವನ್ನು ನಿಲ್ಲಿಸಲಿಲ್ಲ. ಬಿಕಿನಿ ಅಟಾಲ್ ಎಂಬ ಹವಳ ದ್ವೀಪವೇ ಇಂಥ ಪ್ರಯೋಗಗಳ ಕೇಂದ್ರವಾಯಿತು. ಜಪಾನಿನ ಮೀನುಗಾರರು ಅಲ್ಲಿ ನಿಗೂಢವಾಗಿ ಸಾವನ್ನಪ್ಪುತ್ತಿದ್ದುದು ಜಪಾನಿಗೆ ಬಹು ದೊಡ್ಡ ಸಮಸ್ಯೆಯಾಗಿ ಕಾಡಿತು. ಸರ್ಕಾರ ಈಕೆಯ ಮೊರೆಹೋಗಿ, `ಒಂದು ತಂಡ ಕಟ್ಟಿಕೊಂಡು ಹೋಗಿ ಈ ರಹಸ್ಯವನ್ನು ಬಯಲುಮಾಡು’ ಎಂದು ಕೇಳಿಕೊಂಡಿತು. ಅಲ್ಲಿ ಅಧ್ಯಯನ ಮಾಡಿದಾಗ ಕಂಡುಬಂದದ್ದು ಅತಿ ಸೂಕ್ಷ್ಮ ವಿಕಿರಣ ಕಣಗಳು ಸಾಗರಕ್ಕೆ ಬಿದ್ದಿದ್ದವು. ಅವು ಕೊಚ್ಚಿ ಎತ್ತ ಹೋಗುತ್ತವೆ ಎಂಬುದನ್ನರಿಯುವುದು ಸಮಸ್ಯೆಯಾಗಿತ್ತು.

ಕೊನೆಗೂ ಸರುಹಾಶಿ ಈ ಸಮಸ್ಯೆಗೆ ಉತ್ತರ ಕಂಡುಕೊಂಡಳು. ಅಲೆಗಳ ಮೂಲಕವಲ್ಲದೆ, ಸಮುದ್ರ ತಳದ ಒಳಪ್ರವಾಹಗಳ ಮೂಲಕವೂ ವಿಕಿರಣದ ಕಣಗಳು ಹಂಚಿಹೋಗುತ್ತವೆ. ಅವು ಹಂಚಿಹೋಗುವಾಗ ಪ್ರದಕ್ಷಿಣಾ ಪಥ ಅನುಸರಿಸುತ್ತವೆ. ಕೇವಲ ಹತ್ತು ತಿಂಗಳಲ್ಲಿ ಅವು ಜಪಾನ್ ತೀರವನ್ನು ತಲುಪಿವೆ ಎಂದು ವರದಿಕೊಟ್ಟಳು. ಈ ವರದಿ ಅಮೆರಿಕವನ್ನೂ ಬೆಚ್ಚಿಸಿತ್ತು. ಏಕೆಂದರೆ ವಿಕಿರಣದ ಕಣಗಳು ಸಾಗರದ ತುಂಬ ಹರಡಲು ನೂರಾರು ವರ್ಷ ಬೇಕು ಎಂದು ಅಮೆರಿಕ ನಂಬಿತ್ತು. ಸರುಹಾಶಿ ಸ್ಪಷ್ಟವಾಗಿ ನುಡಿದಿದ್ದಳು. 1969ರ ಹೊತ್ತಿಗೆ ಎಲ್ಲ ಸಾಗರಗಳಲ್ಲೂ ವಿಕಿರಣ ಹರಡಿರುತ್ತದೆ ಎಂಬ ವರದಿಯನ್ನು ಈಕೆ ಪ್ರಕಟಿಸಿದ್ದಳು. ಅಮೆರಿಕ ಈಕೆಯನ್ನು ಕರೆಸಿಕೊಂಡು ಅವಳು ಅಳತೆ ಮಾಡಲು ಬಳಸಿದ ವಿಧಾನವನ್ನು ತಿಳಿಯಬಯಸಿತು. ಕೊನೆಗೆ ಇದು ಉತ್ಕøಷ್ಟ ವಿಧಾನವೆಂದು ಒಪ್ಪಬೇಕಾಯಿತು. ಆದರೂ ಆಕೆಯನ್ನು ಅತಿಥಿ ಗೃಹದಲ್ಲಿಡುವ ಬದಲು ಒಂದು ಗುಡಿಸಿಲಿನಲ್ಲಿ ಇರಿಸಿದ್ದರು. ಅವಳ ಗುರು ಡಾ. ಮಿಯಾಕೆ ಸದಾ ಈಕೆಯ ಬೆಂಬಲಕ್ಕೆ ನಿಂತಿದ್ದರು. ಅವಳಿಗೆ ಮಾಡಿದ ತಾರತಮ್ಯವನ್ನು ಖಂಡತುಂಡವಾಗಿ ಖಂಡಿಸಿದ್ದರು. ಜೊತೆಗೆ ಇನ್ನೂ ಒಂದು ಮಾತು ಹೇಳಿದ್ದರು: ವಿಜ್ಞಾನಿಗಳ ಮತ್ತು ತಂತ್ರಜ್ಞರ ಬದುಕಿನ ಗುರಿ ಸಮಾಜವಾಗಿರಬೇಕು. ಮನುಕುಲಕ್ಕೆ ಒಳಿತು ಮಾಡುವುದೇ ವಿಜ್ಞಾನದ ಗುರಿಯಾಗಿರಬೇಕು ಎಂದು ಹೇಳಿದ್ದನ್ನು ಆಕೆ ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಿದ್ದಳು.

ಸರುಹಾಶಿ ಅವೆಷ್ಟು ಪ್ರಥಮಗಳನ್ನು ಸಾಧಿಸಿದಳು – ಟೋಕಿಯೋ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ. ಮಾಡಿದ ಮಹಿಳೆಯರಲ್ಲಿ ಈಕೆ ಮೊದಲಿಗಳು (1957). ಜಪಾನ್ ಸೈನ್ಸ್ ಕೌನ್ಸಿಲ್ಗೆ ಆಯ್ಕೆಯಾದ ಮೊದಲ ಮಹಿಳೆ. ಭೂರಸಾಯನ ವಿಜ್ಞಾನಕ್ಕೆಂದೇ ಮೀಸಲಾಗಿದ್ದ, ಆಕೆಯ ಗುರು ಮಿಯಾಕೆ ಹೆಸರಲ್ಲಿ ಸ್ಥಾಪಿಸಿದ್ದ ಪದಕ ಈಕೆಯ ಕೊರಳನ್ನು ಮೊದಲು ಅಲಂಕರಿಸಿತು. ಸಾಗರ ಜಲವಿಜ್ಞಾನ ಸಂಘ ಸ್ಥಾಪಿಸಿದ ತನಾಕ’ ಪ್ರಶಸ್ತಿಗೆ ಆಕೆ ಭಾಜನಳು. ಅಷ್ಟೇ ಅಲ್ಲ, ಮಹಿಳೆ ಯಾವ ಕ್ಷೇತ್ರದಲ್ಲೂ ಹಿಂದುಳಿಯಬಾರದು ಎಂಬ ಉದ್ದೇಶದಿಂದಜಪಾನ್ ಮಹಿಳಾ ವಿಜ್ಞಾನಿಗಳ ಸಂಘ’ ಸ್ಥಾಪಕಿ ಕೂಡ. ಆಕೆ ತಾನು ಸಂಪಾದಿಸಿದ ಹಣವನ್ನೆಲ್ಲ, ಜಪಾನಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅಪರಿಮಿತ ಸಾಧನೆ ಮಾಡಿದ ಮಹಿಳೆಯರಿಗೆ ಪಾರಿತೋಷಕ ನೀಡಲು ಬಳಸಿದಳು. ನ್ಯುಮೋನಿಯದಿಂದ 2017ರಲ್ಲಿ ಕೊನೆಯುಸಿರೆಳೆದಳು.ಗೂಗಲ್, ಡೂಡಲ್ ಮೂಲಕ ಆಕೆಯನ್ನು ಸ್ಮರಿಸಿಕೊಳ್ಳುವುದಕ್ಕೆ ಕಾರಣ ಇಷ್ಟು ಸಾಲದೆ?

  • ಟಿ. ಆರ್. ಅನಂತರಾಮು

(ಡಾ. ಟಿ. ಆರ್. ಅನಂತರಾಮು, ನಂ. 534, 70ನೇ ಅಡ್ಡರಸ್ತೆ, 14ನೇ ಮುಖ್ಯರಸ್ತೆ, ಕುಮಾರಸ್ವಾಮಿ ಬಡಾವಣೆ 1ನೇ ಹಂತ, ಬೆಂಗಳೂರು – 560111, ಮೊ: 9886356085)

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *