FEATUREDಅಂಕಣ

ಸ್ತ್ರೀ ಅಂದರೆ ಅಷ್ಟೇ ಸಾಕೆ?/ ವಿಜ್ಞಾನ ಜಗತ್ತಿನ ಸಾಹಸಯಾನಿ ಕಮಲಾ ಸೊಹೋನಿ- ಟಿ.ಆರ್. ಅನಂತರಾಮು

ಭಾರತದಲ್ಲಿ ಜೀವವಿಜ್ಞಾನ ವಿಭಾಗದಲ್ಲಿ ಬಹು ಎತ್ತರಕ್ಕೇರಿದ ಮಹಿಳೆ ಕಮಲಾ ಸೊಹೋನಿ. ಛಲ ಮತ್ತು ಬಲ ಎರಡೂ ಮೂರ್ತಗೊಂಡಂತಿದ್ದ ಈಕೆ ಸಾಧಕಿಯಾದದ್ದು ಅಚ್ಚರಿಯೇನಲ್ಲ. ಆದರೆ ಆರಂಭದಲ್ಲಿ ಎಡರುತೊಡರುಗಳನ್ನು ದಾಟಿಯೇ ಮುಂದೆ ಬರಬೇಕಾಗಿದ್ದು ಆ ಕಾಲಘಟ್ಟದಲ್ಲಿ ಮಹಿಳೆಗೆ ಅನಿವಾರ್ಯವಾಗಿತ್ತು. ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಸೀಟು ಬೇಕೆಂದು ಗಾಂಧೀಜಿಯವರ ಸತ್ಯಾಗ್ರಹದಿಂದ ಕಮಲಾ ಪ್ರೇರಿತಳಾಗಿ ಧರಣಿಗೆ ಕುಳಿತೇಬಿಟ್ಟರು. ಕ್ರಾಂತಿಕಾರಿ ಮಹಿಳೆ ತೋರಿದ ದಿಟ್ಟ ನಿಲುವು, ಮಾಡಿದ ಸಂಶೋಧನೆ, ಆರಂಭದಲ್ಲಿ ಎದುರಿಸಿದ ಸಮಸ್ಯೆಗಳು ಮುಂದೆ ಮಹಿಳೆಯರಿಗೆ ಹೆಚ್ಚಿನ ಅಧ್ಯಯನಕ್ಕೆ ದಾರಿದೀಪವಾದವು.



ʻಸರಿ, ನೀನು ಬೇರೆಯವರಂತೆ ರೆಗ್ಯುಲರ್ ಕ್ಯಾಂಡಿಡೇಟ್ ಆಗಿ ಅಟೆಂಡ್ ಮಾಡಲು ಆಗುವುದಿಲ್ಲʼ.
ಆಕೆ ʻಮೌನʼ
ʻಸಂಸ್ಥೆಯ ಮಾರ್ಗಸೂಚಿಯಂತೆ ಕೆಲವೊಮ್ಮೆ ತಡರಾತ್ರಿಯವರೆಗೆ ಕೆಲಸ ಮಾಡಬೇಕಾಗುತ್ತದೆʼ.
ಮತ್ತೆ ಆಕೆ ಮೌನ.

ʻಈ ಲ್ಯಾಬ್ ಪರಿಸರವನ್ನು ಯಾವುದೇ ಕಾರಣಕ್ಕೂ ಹಾಳುಮಾಡುವಂತಿಲ್ಲ (ಪುರುಷ ಗಮನ ಸೆಳೆಯುವುದು). ಹಾಗಿದ್ದರೆ ಬಾʼ
ʻಥ್ಯಾಂಕ್ಯು ಸರ್ʼ ಎಂದು ವಿನೀತಳಾಗಿ ಎದ್ದು ನಮಸ್ಕರಿಸಿ ಹೊರಟುಹೋದಳು. ಅವಳಿಗೆ ಬೇಕಾಗಿದ್ದದ್ದು ವಿಜ್ಞಾನದಲ್ಲಿ ಉನ್ನತ ಶಿಕ್ಷಣ ಪಡೆಯುವುದು, ವಿಜ್ಞಾನಿಯಾಗಿ ಏನಾದರೂ ಮಾಡಬೇಕೆಂಬ ಕನಸನ್ನು ನನಸು ಮಾಡಿಕೊಳ್ಳುವುದು. ಮೇಲಿನ ಸಂಭಾಷಣೆಯನ್ನು ಕೇಳಿದಾಗ, ಒಂದರೆಕ್ಷಣ ಪುರುಷ ಸಮಾಜದ ಬಗ್ಗೆ ಮಹಿಳೆಯರಂತಿರಲಿ, ಪುರುಷರಿಗೇ ಬೇಸರವಾಗುತ್ತದೆ. ಇಡೀ ಜಗತ್ತೇ ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯರನ್ನು ಕಡೆಗಣಿಸಿತ್ತು. ಇಂಥ ಸಂದರ್ಭದಲ್ಲಿ ಭಾರತೀಯ ವಿಜ್ಞಾನ ಮಂದಿರ ಅಪವಾದವಾಗಲು ಹೇಗೆ ಸಾಧ್ಯ?

ಈ ಸಂಭಾಷಣೆ ನಡೆದದ್ದು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ. ಪ್ರಶ್ನೆ ಕೇಳಿ, ಎದುರಿಗಿದ್ದ ಹುಡುಗಿಯನ್ನು ಕಂಗೆಡಿಸಿದವರು ನೊಬೆಲ್ ಪ್ರಶಸ್ತಿ ವಿಜ್ಞಾನಿ ಸರ್ ಸಿ.ವಿ. ರಾಮನ್. ಆತ್ಮವಿಶ್ವಾಸದಿಂದ ಎದುರಿಸಿ ಮೌನದಿಂದಲೇ ಉತ್ತರಿಸಿ ಗೆದ್ದು ಆಚೆಗೆ ಬಂದವಳು ಕಮಲಾ.. ಸರ್ ಸಿ.ವಿ. ರಾಮನ್ ಅವರು ಅಂತಾರಾಷ್ಟ್ರೀಯ ಖ್ಯಾತಿಯ ವಿಜ್ಞಾನಿ; ಭಾರತಕ್ಕೆ ಹೆಮ್ಮೆ ತಂದವರು. ಆದರೆ ಮಹಿಳೆಯರ ವಿಚಾರಕ್ಕೆ ಬಂದಾಗ, ʻವಿಜ್ಞಾನ ಮಹಿಳೆಯರಿಗಲ್ಲʼ ಎಂಬ ಧೋರಣೆ ತಳೆದಿದ್ದವರು. ಅವರನ್ನು ಬಲು ಹತ್ತಿರದಿಂದ ನೋಡಿದ ಪುರುಷರಿಗೂ ಈ ಸತ್ಯ ಮನವರಿಕೆಯಾಗಿತ್ತು. ಈ ಕಮಲಾ, ಭಾರತದಲ್ಲಿ ಜೀವವಿಜ್ಞಾನ ವಿಭಾಗದಲ್ಲಿ ಬಹು ಎತ್ತರಕ್ಕೇರಿದ ಮಹಿಳೆ. ಛಲ ಮತ್ತು ಬಲ ಎರಡೂ ಮೂರ್ತಗೊಂಡಂತಿದ್ದ ಈಕೆ ಸಾಧಕಿಯಾದದ್ದು ಅಚ್ಚರಿಯೇನಲ್ಲ. ಆದರೆ ಆರಂಭದಲ್ಲಿ ಇಂಥ ಎಡರುತೊಡರುಗಳನ್ನು ದಾಟಿಯೇ ಮುಂದೆ ಬರಬೇಕಾಗಿದ್ದು ಆ ಕಾಲಘಟ್ಟದಲ್ಲಿ ಮಹಿಳೆಗೆ ಅನಿವಾರ್ಯವಾಗಿತ್ತು. ಬಹುಶಃ ಈಕೆಯ ಮನೆಯ ವಾತಾವರಣವೇ ಈ ಬಗೆಯದು. ಹುಟ್ಟಿದ್ದು ೧೯೧೨ರ ಜೂನ್ ೮ರಂದು, ಮುಂಬೈನಲ್ಲಿ. ಅಪ್ಪ ನಾರಾಯಣ ಭಾಗವತ್ ಮತ್ತು ಚಿಕ್ಕಪ್ಪ ಮಹದೇವರಾವ್ ಭಾಗವತ್ ಇಬ್ಬರೂ ಬೆಂಗಳೂರಿನ ಇದೇ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಕೆಮಿಸ್ಟ್ರಿ ಅಧ್ಯಯನ ಮಾಡಿದವರು. ಆಗ ಇದನ್ನು ಟಾಟಾ ಇನ್ಸ್ಟಿಟ್ಯೂಟ್ ಎನ್ನುತ್ತಿದ್ದರು. ಈಗಲೂ ಕೆಲವರು ಆ ಹೆಸರಿನಿಂದಲೇ ಕರೆಯುವುದುಂಟು. ಹೈಸ್ಕೂಲಿನಲ್ಲಿರುವಾಗಲೇ ಕಮಲಾ ಅವರಿಗೆ ರಸಾಯನ ವಿಜ್ಞಾನದತ್ತ ಒಲವು. ಮನೆಯವರಿಗೂ ಇದು ಅಚ್ಚರಿಯನ್ನು ತರಲಿಲ್ಲ. ಪಂಡಿತ ಕುಟುಂಬದಿಂದ ಬಂದ ಈ ಹುಡುಗಿ ಹೈಸ್ಕೂಲಿನಲ್ಲಿ ಅತ್ಯಧಿಕ ಅಂಕ ಪಡೆದಳು. ಮುಂದೆ ಬಾಂಬೆ ಪ್ರೆಸಿಡೆನ್ಸಿ ಕಾಲೇಜಿಗೆ ಸೇರಿದಳು. ಅವಳಿಗೆ ಇಷ್ಟವಾದದ್ದು ಫಿಸಿಕ್ಸ್ ಮತ್ತು ಕೆಮಿಸ್ಟ್ರಿ. ಇಲ್ಲೂ ಅದೇ ಛಾತಿ-ಮೊದಲ ಸ್ಥಾನ.

ಮುಂದಿನ ನಿಲ್ದಾಣ ಸಹಜವಾಗಿಯೇ ಆ ಕಾಲದಲ್ಲಿ ವಿಜ್ಞಾನಕ್ಕೆ ಹೆಸರಾಗಿದ್ದ ಟಾಟಾ ವಿಜ್ಞಾನ ಸಂಸ್ಥೆ. ಆಗ ಅಲ್ಲಿನ ನಿರ್ದೇಶಕರು ಸರ್ ಸಿ.ವಿ. ರಾಮನ್. ಪ್ರವೇಶಕ್ಕಾಗಿ ಅರ್ಜಿ ಹಾಕಿದಳು, ತಿರಸ್ಕೃತವಾಯಿತು. ವಿಜ್ಞಾನ ಮಹಿಳೆಯರಿಗಲ್ಲ ಎಂಬುದು ರಾಮನ್ ಮಂತ್ರ. ಹಿಂದೆಯೂ ಅವರ ಈ ಮನೋಭಾವ ವ್ಯಕ್ತವಾಗಿತ್ತು. ರಾಮನ್ ಇದನ್ನು ಬಹಿರಂಗವಾಗಿಯೇ ಹೇಳುತ್ತಿದ್ದುದುಂಟು. ಆದರೆ ಈ ಛಲದಂಕ ಮಲ್ಲೆ ಬಿಟ್ಟಾಳೆ? ʻಏಕೆ ತಿರಸ್ಕೃತವಾಗಿದೆ, ಕಾರಣ ಕೊಡಿʼ ಎಂದಳು. ಎಂ.ಎಸ್ಸಿ. ಡಿಗ್ರಿಯನ್ನು ಮೊದಲ ಸ್ಥಾನದಲ್ಲೇ ಪಡೆಯುವೆ ಎಂಬ ಆತ್ಮವಿಶ್ವಾಸದ ಮಾತುಗಳನ್ನೂ ಆಡಿದ್ದ. ಈಗ ರಾಮನ್ ಅವರಿಗೆ ತಮ್ಮ ನಿಲುವಿಗೆ ಅಂಟಿಕೊಳ್ಳಲು ಕಾರಣವಿರಲಿಲ್ಲ. ಸಾಲದೆಂಬಂತೆ ಗಾಂಧೀಜಿಯವರ ಸತ್ಯಾಗ್ರಹದಿಂದ ಕಮಲಾ ಪ್ರೇರಿತಳಾಗಿ ಸಂಸ್ಥೆಯಲ್ಲಿ ಸೀಟು ಬೇಕೆಂದು ಧರಣಿಗೆ ಕುಳಿತೇಬಿಟ್ಟರು. ಈಗ ರಾಮನ್ ಮುಜುಗರಕ್ಕೊಳಗಾದರು. ʻಆಯಿತು ಬಾ, ಕೆಲವು ಕಂಡೀಷನ್ ವೆʼ ಎಂದು ಕರೆದರು. ನೀವು ಈ ಲೇಖನದ ಪ್ರಾರಂಭದಲ್ಲಿ ಓದಿದ ಸಂಭಾಷಣೆ ಅದೇ.

ನನಗೆ ಬೇಕಾದ ಸಂಸ್ಥೆ ಸಿಕ್ಕಿತಲ್ಲ ಎಂದು ಕಮಲಾಗೆ ಖುಷಿ. ಆಕೆ ಸೇರಿದ್ದು ಮೈಕ್ರೋ ಬಯಾಲಜಿ ಕೋರ್ಸಿಗೆ. ಅಲ್ಲಿ ದೊರೆತ ಗುರು ಶ್ರೀನಿವಾಸಯ್ಯ. ಆ ಕಾಲಕ್ಕೆ ಸೂಕ್ಷ್ಮಜೀವಿ ವಿಜ್ಞಾನದಲ್ಲಿ ಬಹು ದೊಡ್ಡ ಹೆಸರು. ಅವರದು ಅತಿ ಶಿಸ್ತು, ಆದರೆ ವಿದ್ಯಾರ್ಥಿಗಳ ಬೆಂಬಲಕ್ಕೆ ಸದಾ ನಿಲ್ಲುತ್ತಿದ್ದರು. ಅವರ ಮಾರ್ಗದರ್ಶನದಲ್ಲಿ ಸಂಶೋಧನೆ, ಎಂ.ಎಸ್ಸಿ. ಡಿಗ್ರಿ ಬೋಧನೆ ಎರಡೂ ನಡೆಯುತ್ತಿದ್ದವು. ದ್ವಿದಳ ಧಾನ್ಯ, ಬೇಳೆಯ ಪ್ರೊಟೀನ್ ಕುರಿತು ಕಮಲಾ ಸಂಶೋಧನೆಯಲ್ಲಿ ತೊಡಗಿದರು. ಭಾರತದ ಆಹಾರದಲ್ಲಿ ಪೌಷ್ಟಿಕಾಂಶ ಕುರಿತು ಆಗತಾನೇ ದೊಡ್ಡ ಪ್ರಮಾಣದ ಸಂಶೋಧನೆಗಳಾಗುತ್ತಿದ್ದುವು. ಆಕೆಯ ಆಸಕ್ತಿ ಮತ್ತು ಸಂಶೋಧನೆಯಲ್ಲಿ ತೋರುತ್ತಿದ್ದ ಶ್ರದ್ಧೆ ರಾಮನ್ ಅವರ ಕಿವಿಗೆ ಮುಟ್ಟಿ ಸಮಾಧಾನಪಟ್ಟರಂತೆ. ಮಹಿಳೆಯರೂ ವಿಜ್ಞಾನ ಸಂಶೋಧನೆಯಲ್ಲಿ ಯಶಸ್ಸು ಪಡೆಯಬಲ್ಲರು ಎಂದು ಹೇಳಿದರಂತೆ.

ಕ್ರಾಂತಿಕಾರಿ ಮಹಿಳೆ

ಇದು ಮುಂದೆ ಎಂಥ ಬದಲಾವಣೆ ತಂದಿತು ಎಂದರೆ ಮುಂದಿನ ವರ್ಷದಿಂದಲೇ ಮಹಿಳೆಯರಿಗೆ ಭಾರತೀಯ ವಿಜ್ಞಾನ ಸಂಸ್ಥೆಗೆ ಪ್ರವೇಶ ಕಲ್ಪಿಸಲಾಯಿತು. ೧೯೩೬ರಲ್ಲಿ ಕಮಲಾ ಡಿಗ್ರಿ ಪಡೆದ ಮರುವರ್ಷವೇ ಯು.ಕೆ.ಯ ಕೇಂಬ್ರಿಡ್ಜ್ ವಿಶ್ವವಿದ್ಯಾಲಯಕ್ಕೆ ಹೋಗುವ ಅವಕಾಶ ಒದಗಿಬಂತು. ಅಲ್ಲಿ ಜಾಗತಿಕ ಮನ್ನಣೆ ಪಡೆದಿದ್ದ ಜೀವ ರಾಸಾಯನಿಕ ನರತಜ್ಞ ಡೆರಿಕ್ ರಿಕ್ಟರ್, ಅನಂತರ ರಾಬಿನ್ ಹಿಲ್ ಜೊತೆಗೂಡಿ ಸಂಶೋಧನೆಗೆ ತೊಡಗಿದರು. ಆಕೆಯ ಶ್ರದ್ಧೆ, ಕಾರ್ತತತ್ಪರತೆ, ಆಳ ತಿಳಿವನ್ನು ಗಮನಿಸಿದ ಸಹೋದ್ಯೋಗಿಯೊಬ್ಬರು ಫ್ರೆಡ್ರಿಕ್ ಹಾಪ್ಕಿನ್ಸ್ ಲ್ಯಾಬ್ ಗೆ ಹೋದರೆ ಇನ್ನೂ ಉತ್ತಮ ಅವಕಾಶ ದೊರೆಯುತ್ತದೆ ಎಂದು ಸೂಚಿಸಿದರು. ಹಾಪ್ಕಿನ್ಸ್ ನೊಬೆಲ್ ಪ್ರಶಸ್ತಿ ಪಡೆದ ವಿಜ್ಞಾನಿ. ಆಹಾರದಲ್ಲಿ ವಿಟಮಿನ್ಗಳ ಪಾತ್ರ ಕುರಿತು ಗಂಭೀರ ಸಂಶೋಧನೆ ಮಾಡಿದ್ದರು. ಕಮಲಾಳ ಶ್ರದ್ಧೆ ಎಷ್ಟಿತ್ತೆಂದರೆ ಅಲ್ಲಿ ಸೇರಿದ ಕೆಲವೇ ತಿಂಗಳಲ್ಲಿ ಡಾಕ್ಟರೇಟಿಗೆ ಥೀಸಿಸ್ ಸಲ್ಲಿಸಿದರು. ಸಸ್ಯಗಳಲ್ಲಿ ಸೈಟೋಕ್ರೋಮ್ ʻಸಿʼ ಎಂಬ ಕಿಣ್ವವನ್ನು ಪತ್ತೆಮಾಡಿದರು. ಈ ಥಿಸೀಸ್ ಮಾಮೂಲಿನಂತಿರಲಿಲ್ಲ. ಕೇವಲ ೪೦ ಪುಟಗಳದ್ದು ಅಷ್ಟೇ. ಆದರೆ ಅದರ ಸತ್ವ ಜೋರಾಗಿತ್ತು. ವಿಜ್ಞಾನದಲ್ಲಿ ಭಾರತೀಯ ಮಹಿಳೆ ಪಡೆದ ಮೊದಲ ಪಿಹೆಚ್. ಡಿ. ಇದಾಗಿತ್ತು. ಅಮೆರಿಕದಲ್ಲೇ ಅನೇಕ ಸಂಸ್ಥೆಗಳು, ವಿಶೇಷವಾಗಿ ಔಷಧಿ ವಿಜ್ಞಾನ ವಾಣಿಜ್ಯ ಸಂಸ್ಥೆಗಳು ಈಕೆಗೆ ಉದ್ಯೋಗ ಕೊಡಲು ಮುಂದೆಬಂದವು. ಆಕೆ ʻಒಲ್ಲೆʼ ಎಂದರು. ೧೯೩೯ರಲ್ಲಿ ಭಾರತಕ್ಕೆ ಮರಳಿ ಮಹಾತ್ಮ ಗಾಂಧಿಯ ಕಟ್ಟಾ ಅನುಯಾಯಿಯಾದರು. ಅಲ್ಪ ಕಾಲಕ್ಕೆ ದೆಹಲಿಯ ಲೇಡಿ ಹಾರ್ಡಿಂಗ್ ಮೆಡಿಕಲ್ ಕಾಲೇಜಿನಲ್ಲಿ ಬೋಧಿಸಿ ಅನಂತರ ನ್ಯೂಟ್ರಿಷನ್ ಸಂಶೋಧನಾ ಲ್ಯಾಬ್ ಸಹಾಯಕ ಸಂಶೋಧಕಿಯಾಗಿ ಹುದ್ದೆ ಸ್ವೀಕರಿಸಿದರು. ಅಲ್ಲಿ ಪೂರ್ಣ ಪ್ರಮಾಣದ ಸಂಶೋಧನೆಯಲ್ಲಿ ತೊಡಗಿಕೊಂಡರು. ವಿ. ಸೊಹೋನಿ ಎಂಬ ವಾಣಿಜ್ಯ ಆಯೋಜಕನ ಪರಿಚಯವಾಯಿತು; ಅವನ ಕೈಹಿಡಿದರು. ೧೯೪೭ರಲ್ಲಿ ಮುಂಬೈಗೆ ಬಂದು ನೆಲೆಸಿದರು.

ಆಗತಾನೇ ಮಹಾರಾಷ್ಟ್ರ ಸರ್ಕಾರ ಬಾಂಬೆ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಲ್ಲಿ ಜೀವಿವಿಜ್ಞಾನ ವಿಭಾಗವನ್ನು ಸ್ಥಾಪಿಸಿತ್ತು. ಕಮಲಾ ಅದರ ಮುಖ್ಯಸ್ಥಳಾದರು. ಇಲ್ಲಿ ಸಂಪೂರ್ಣ ಕ್ರಾಂತಿ ಮಾಡುವಂತಹ ಸಂಶೋಧನೆ ಮಾಡಿದರು. ʻನೀರಾʼ ಎನ್ನುವುದು ತಾಳೆಮರದಿಂದ ಇಳಿಸುವ ಮದ್ಯ. ಸೂರ್ಯನ ಬಿಸಿಲು ಬಿದ್ದರೆ ಅದು ಹುದುಗುಬಂದು ಹೆಂಡ ಎನಿಸಿಕೊಳ್ಳುತ್ತದೆ. ಈಕೆಗೆ ʻನೀರಾʼ, ಸಂಶೋಧನೆಯ ವಸ್ತುವಾಗಿ ಆಕರ್ಷಿಸಿತು. ನೀರಾದಲ್ಲಿ ಸಾಕಷ್ಟು ಪ್ರಮಾಣದ ವಿಟಮಿನ್ ಮತ್ತು ಕಬ್ಬಿಣಾಂಶ ಇರುತ್ತದೆ. ಅದು ಹೆಚ್ಚುಕಾಲ ಕೆಡದಂತೆ ನೋಡಿಕೊಳ್ಳಲು ಬೆಲ್ಲದ ರೂಪದಲ್ಲಿ ರಕ್ಷಿಸುವುದುಂಟು. ಆಗಲೂ ವಿಟಮಿನ್ ಮತ್ತು ಕಬ್ಬಿಣದ ಅಂಶ ಉಳಿದೇ ಇರುತ್ತದೆ. ಕಮಲಾ ಮಾಡಿದ ಸಂಶೋಧನೆ ಇದರ ಮೇಲೆ ಬೆಳಕು ಚಲ್ಲಿತ್ತು. ಅಪೌಷ್ಟಿಕತೆಯಿಂದ ಬಳಲುವ ಭಾರತೀಯ ಶಿಶುಗಳು ಮತ್ತು ಗರ್ಭಿಣಿಯರಿಗೆ ಇದು ಸೇವನೆಗೆ ಯೋಗ್ಯ. ಆಹಾರದೊಡನೆ ಬೆರೆಸಿ ತೆಗೆದುಕೊಂಡಾಗ ಹೆಚ್ಚು ತ್ರಾಣ ಬರುತ್ತದೆ ಎಂದು ವರದಿಕೊಟ್ಟರು. ಅದೇ ಸಮಯದಲ್ಲಿ ಮುಂಬೈನ ಹಾಲು ಉತ್ಪಾದನಾ ಘಟಕವೊಂದಕ್ಕೆ ಸಲಹೆ ಕೊಡಲು ನೇಮಕವಾದರು. ಹಾಲು ಮೊಸರಾಗಿ ಹೆಪ್ಪುಗಟ್ಟುವುದನ್ನು ತಡೆಯಲು ಯಾವ ರಾಸಾಯನಿಕ ಸೇರಿಸಬೇಕೆಂದು ಪರಿಹಾರ ಸೂಚಿಸಿದರು. ಈ ಹೊತ್ತಿಗೆ ಆಕೆ ಶ್ರೇಷ್ಠ ವಿಜ್ಞಾನಿಯ ಸಾಲಿಗೆ ಸೇರಿದ್ದರು. ರಾಷ್ಟ್ರಪತಿ ಪ್ರಶಸ್ತಿಗೆ ಭಾಜನಳಾಗಿದ್ದರು. ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಿರ್ದೇಶಕಿಯಾದರು. ಡೆರಿಕ್ ರಿಕ್ಟರ್ ಗೆ ಮಹದಾನಂದವಾಯಿತು. ʻಕಮಲಾ ಇತಿಹಾಸ ಬರೆದಳುʼ ಎಂದು ಉದ್ಗರಿಸಿದರು.

ತನ್ನ ಬಿಡುವಿಲ್ಲದ ಸಂಶೊಧನೆಯ ನಡುವೆಯೂ ಮಕ್ಕಳಿಗಾಗಿ ಸರಳ ವಿಜ್ಞಾನ ಕೃತಿ ರಚಿಸಿದರು; ಮರಾಠಿ ಭಾಷೆಯಲ್ಲಿ. ಇದಲ್ಲದೆ ಒಂದರ ಮೇಲೊಂದರಂತೆ ಬಳಕೆದಾರರ ಹಕ್ಕು ಕುರಿತು ಲೇಖನ ಬರೆದು ಜನಜಾಗೃತಿ ಹುಟ್ಟಿಸಿದರು. ಕನ್ಸ್ಯೂಮರ್ಸ್ ಗೈಡನ್ಸ್ ಸೊಸೈಟಿಯ ಸ್ಥಾಪಕ ಸದಸ್ಯಳಾದರು. ೧೯೬೯ರಲ್ಲಿ ಕಮಲಾ ಹುದ್ದೆಯಿಂದ ನಿವೃತ್ತಳಾದರು. ೧೯೯೮ರಲ್ಲಿ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್, ಆಕೆಗೆ ಸನ್ಮಾನ ಕಾರ್ಯಕ್ರಮ ಇಟ್ಟುಕೊಂಡಿತು. ಆಕೆ ವೇದಿಕೆಯನ್ನು ಹತ್ತಿದ ಕೆಲವೇ ನಿಮಿಷಗಳಲ್ಲಿ ಕುಸಿದು ಕೊನೆಯುಸಿರೆಳೆದರು (೨೮, ಜೂನ್). ಆದರೆ ಆಕೆ ತೋರಿದ ದಿಟ್ಟ ನಿಲುವು, ಮಾಡಿದ ಸಂಶೋಧನೆ, ಆರಂಭದಲ್ಲಿ ಎದುರಿಸಿದ ಸಮಸ್ಯೆಗಳು ಮುಂದೆ ಮಹಿಳೆಯರಿಗೆ ಹೆಚ್ಚಿನ ಅಧ್ಯಯನಕ್ಕೆ ದಾರಿದೀಪವಾದವು. ಸಾರ್ಥಕ ಬದುಕೆಂದರೆ ಇದಕ್ಕಿಂತ ಬೇರೆ ಅರ್ಥವುಂಟೆ?

ಟಿ.ಆರ್. ಅನಂತರಾಮು

(ನಂ. ೫೩೪, ೭೦ನೇ ಅಡ್ಡರಸ್ತೆ, ೧೪ನೇ ಮುಖ್ಯರಸ್ತೆ, ಕುಮಾರಸ್ವಾಮಿ ಬಡಾವಣೆ ೧ನೇ ಹಂತ, ಬೆಂಗಳೂರು-೫೬೦ ೧೧೧, ಮೊ : ೯೮೮೬೩೫೬೦೮೫)

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *