Uncategorizedಅಂಕಣ

ಸ್ತ್ರೀ ಅಂದರೆ ಅಷ್ಟೇ ಸಾಕೆ?/ ಬುರುಡೆಯೊಂದಿಗೆ ಮಾತನಾಡುವ ಡಯಾನ ಫ್ರಾನ್ಸ್- ಟಿ. ಆರ್. ಅನಂತರಾಮು

ಫೆಬ್ರುವರಿ 11- ಇಂದು `ವಿಜ್ಞಾನ ಕ್ಷೇತ್ರದ ಮಹಿಳೆಯರು ಮತ್ತು ಹುಡುಗಿಯರ ಅಂತಾರಾಷ್ಟ್ರೀಯ ದಿನ’ (International Day of Women and Girls in Science). ಅನೇಕಾನೇಕ ಎಡರುತೊಡರುಗಳ ನಡುವೆ, ಪ್ರತಿರೋಧಗಳ ನಡುವೆ ವಿಜ್ಞಾನ ರಂಗದಲ್ಲಿ ಗಣನೀಯ ಸಂಶೋಧನೆಗಳು ಮತ್ತು ಸಾಧನೆಗಳನ್ನು ಮಾಡಿದ ಮಹಿಳಾ ವಿಜ್ಞಾನಿಗಳ ಹೆಮ್ಮೆಯ ಕೊಡುಗೆಯನ್ನು ಸ್ಮರಿಸುವುದು ಮತ್ತು ಪ್ರಸಾರ ಮಾಡುವುದು ಅಗತ್ಯವಾಗಿ ಆಗಬೇಕಾದ ಕೆಲಸ. ಸಾಗರದಾಳದಿಂದ ಅಂತರಿಕ್ಷಯಾನದವರೆಗೆ ಅವರ ಕಾರ್ಯಕ್ಷೇತ್ರ ಹರಡಿಕೊಂಡಿದೆ. ವಿಶ್ವದ ಅಪ್ರತಿಮ ಮಹಿಳಾ ವಿಜ್ಞಾನಿಗಳ ಸಾಧನೆಗಳನ್ನು ಪರಿಚಯಿಸುವ ಈ ಸರಣಿಯಲ್ಲಿ ಇದು ಹನ್ನೊಂದನೇ ಲೇಖನ.

ಆಕೆಯ ಕೈಯಲ್ಲಿ ಎಂದೋ ಸತ್ತುಹೋದ ವ್ಯಕ್ತಿಯ ತಲೆಬುರುಡೆ ಇತ್ತು. ಅದು ಕೊಲೆ ಕೇಸಿಗೆ ಸಂಭವಿಸಿದ್ದೋ ಅಲ್ಲವೋ ಈ ಕುರಿತು ಆಕೆ ತುಟಿಪಿಟಕ್ಕೆನ್ನಲಿಲ್ಲ. ಏಕೆ ತಲೆಬುರುಡೆ ಒಯ್ಯತ್ತಿದ್ದೀಯಾ ಎಂದು ತಡೆದು ಯಾರೂ ಆಕೆಯನ್ನು ಕೇಳಿಲಿಲ್ಲ; ಎಲ್ಲಿಂದ ತಂದೆ ಎಂದು ಪ್ರಶ್ನಿಸಲಿಲ್ಲ. ಹಾಗೆ ನೋಡಿದರೆ ಅದನ್ನು ಒಯ್ಯುವುದು ರಿಸ್ಕ್ ಎಂದು ಅವಳು ಭಾವಿಸಿಯೇ ಇರಲಿಲ್ಲ. ತಂದ ಬುರುಡೆಯನ್ನು ಬಕೆಟ್ನಲ್ಲಿದ್ದ ಫಾರ್ಮಾಲ್ಡಿಹೈಡ್ ದ್ರಾವಣದಲ್ಲಿ ಅದ್ದಿದಳು. ಗೆಳತಿ ತಂದಿದ್ದ ಕಾರಿನಲ್ಲಿ ಕೂತು ಆ ಬಕೆಟ್ಟನ್ನು ತೊಡೆಯ ಮೇಲೆ ಇರಿಸಿಕೊಂಡಳು. ಸ್ವಲ್ಪ ದೂರ ಪ್ರಯಾಣಿಸಿದ ನಂತರ, ಕಾರು ಹಳ್ಳ ದಿಣ್ಣೆ ಹತ್ತುವಾಗ ಅಲುಗಾಡಿತು. ಇತ್ತ, ಬಕೆಟ್ಟಿನಲ್ಲಿದ್ದ ತಲೆಬುರುಡೆ ಚಂಗೆದ್ದು ಹಾರಿ ಅವಳ ತೊಡೆಯ ಮೇಲೆ ಬಿದ್ದಿತು. ಫಾರ್ಮಾಲ್ಡಿಹೈಡ್‌ ಅವಳ ಉಡುಪನ್ನೆಲ್ಲ ಗಲೀಜು ಮಾಡಿತು. ಅಷ್ಟಾಗಿದ್ದರೆ ಯೋಚನೆ ಇಲ್ಲ, ಸೀಟಿನ ಮೇಲೆ ಬಿದ್ದ ಆ ರಾಸಾಯನಿಕ ಇವಳ ತೊಡೆಯನ್ನು ಸುಟ್ಟಿತು. ಆಕೆಗೆ ಒಂದೇ ಯೋಚನೆ. ಸದ್ಯ ಬುರುಡೆ ಒಡೆಯಲಿಲ್ಲವೆಂದು. ಈ ಘಟನೆಯಿಂದ ಅವಳೇನೂ ಅಷ್ಟೊಂದು ವಿಚಲಿತಳಾಗಿರಲಿಲ್ಲ. ಸೀದಾ ಅಮೆರಿಕದ ವಾಷಿಂಗ್‌ಟನ್‌ನ ಸ್ಮಿತ್‌ಸೋನಿಯನ್‌ ಮ್ಯೂಸಿಯಂಗೆ ಹೋಗಬೇಕಾಗಿತ್ತು. ಮಧ್ಯೆ ಹೋಟೆಲಿನಲ್ಲಿ ಗೆಳತಿಯ ಉಡುಪನ್ನು ಧರಿಸಿ ಹೊರಟಳು. ಸೀದಾ ಮ್ಯೂಸಿಯಂಗೆ ಬಂದು ತಲೆಬುರುಡೆಯನ್ನು ಟೇಬಲ್‌ ಮೇಲೆ ಇಟ್ಟು ಅದರ ಮೇಲೆ ಒಂದು ಚೀಟಿಯನ್ನು ಅಂಟಿಸಿ ʻಇದು ಡಯಾನ ಫ್ರಾನ್ಸ್‌ ಬುರುಡೆʼ ಎಂದು ಬರೆದಳು.

ನೋಡಿದವರಿಗೆ ತಬ್ಬಬ್ಬು. ಪರಿಚತರಂತೂ ಕೆಲವರು ʻಆಕೆ ಹೋದದ್ದೇ ಗೊತ್ತಾಗಲಿಲ್ಲʼ ಎಂದು ನಿಟ್ಟುಸಿರಿಟ್ಟರು. ಅನಂತರ ಗೊತ್ತಾದದ್ದು ಆ ಬುರುಡೆಯನ್ನು ಸಂಗ್ರಹಿಸಿದವಳು ಡಯಾನ ಫ್ರಾನ್ಸ್‌ ಎಂದು. ಡಯಾನಾಗೆ ಅತ್ತ ಗಮನವಿರಲಿಲ್ಲ. ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ತಂದಳು. ನಾಜೂಕಾಗಿ ಬುರುಡೆಗೆ ಮೆತ್ತಿದಳು. ಅದರ ಅಚ್ಚು ತೆಗೆದಳು. ಎಲ್ಲ ವಿವರಗಳೂ ಮೂಡಿವೆ ಎಂದು ಖಾತರಿಮಾಡಿಕೊಂಡು ಡೈರಿಯಲ್ಲಿ ಗುರುತು ಹಾಕಿಕೊಂಡಳು.

ಡಯಾನ ಫ್ರಾನ್ಸ್‌ಗೆ ಇದೇನೂ ಹೊಸ ಅನುಭವವಲ್ಲ; ತೊಡೆ ಸುಟ್ಟಿತು ಎನ್ನುವುದನ್ನು ಬಿಟ್ಟರೆ. ಅಮೆರಿಕದ ಕೊಲರಾಡೋ ನಿವಾಸಿ ಡಯಾನ ಈಗ ಅತಿ ಬೇಡಿಕೆಯಲ್ಲಿರುವ ಮಾನವವಿಜ್ಞಾನ ಪರಿಣತೆ. ಅದರಲ್ಲೂ ಸತ್ತವರ ಮೂಳೆ, ಅಸ್ಥಿಪಂಜರ, ಬುರುಡೆಗಳ ಬಗ್ಗೆ ಸ್ಪೆಷಲಿಸ್ಟ್.‌ ಸರ್ಕಾರವಾಗಲಿ, ಖಾಸಗಿ ಸಂಸ್ಥೆಗಳಾಗಲಿ, ಆಕೆಯಿಂದ ಬುಡಕಟ್ಟು ಅಧ್ಯಯನದ ಬಗ್ಗೆ ಸೇವೆಯನ್ನು ಬಯಸುವುದಿಲ್ಲ. ಆ ಕುರಿತು ಮಾಡುವವರು ಬಹಳಷ್ಟು ಮಂದಿ ಇದ್ದಾರೆ. ನ್ಯಾಯಾಲಯ ಈಕೆಯನ್ನು ʻಕೊಲೆಯಾದ ವ್ಯಕ್ತಿ ಹೇಗೆ ಕೊಲೆಯಾದ, ಏನು ಸಾಕ್ಷಿಗಳಿವೆ, ವೈಜ್ಞಾನಿಕವಾಗಿ ವರದಿ ಕೊಡುವೆಯಾʼ ಎಂದು ಕೋರುತ್ತವೆ. ಆಕೆ ಇಂಥ ಕೋರಿಕೆಗಳನ್ನು ಎಂದೂ ಬದಿಗಿಡುವುದಿಲ್ಲ. ಸಮಗ್ರವಾಗಿ ಅಧ್ಯಯನಮಾಡುತ್ತಾಳೆ. ಅದು ಹೀಗಾಗಿದೆ ಎಂದು ಸಾಕ್ಷಿ ಸಮೇತ ಮುಂದಿಡುತ್ತಾಳೆ. ವೃತ್ತಿಪರತೆಯಂತೆ ಆಕೆಯೂ ವರದಿಯನ್ನು ಗೋಪ್ಯವಾಗಿಡುತ್ತಾಳೆ; ಯಾರಿಗೆ ವರದಿ ಸೇರಬೇಕೋ ಅದು ಸೇರುತ್ತದೆ.

ಅದು ಅನಸ್ತೇಷಿಯದ್ದಲ್ಲ

ಜಿಮ್‌ ರೀಡ್‌ ಎಂಬ ಭೂವಿಜ್ಞಾನಿಯ ಜೊತೆ ಆಕೆ ೧೯೯೦ರ ದಶಕದಲ್ಲಿ ರಷ್ಯದ ಕಡುಶೀತಲ ಪ್ರದೇಶವಾದ ಸೈಬೀರಿಯಕ್ಕೆ ಪ್ರಯಾಣ ಮಾಡಿದಳು. ಅದೊಂದು ತುರ್ತು ಸಂದರ್ಭ. ಎರಡನೇ ಝಾರ್‌ ನಿಕೋಲಸ್‌ನ ಇಬ್ಬರು ಸದಸ್ಯರು ಕಣ್ಮರೆಯಾಗಿದ್ದರು. ಅವರು ಸತ್ತಿರಬಹುದೆಂಬ ಗುಮಾನಿ ಇತ್ತು. ಈಕೆ ಅಲ್ಲಿನ ಕೆಲವು ಬುರುಡೆಗಳನ್ನು ಅಧ್ಯಯನಮಾಡಿ, ಅದು ಆ ಇಬ್ಬರದೇ ಅಲ್ಲವೇ ಎಂದು ವರದಿ ಕೊಡಬೇಕಾಗಿತ್ತು. ಹಾಗೆಯೇ ರೋಮನೋವ್‌ ಕುಟುಂಬದಲ್ಲಿ ೧೭ ವರ್ಷದ ಅನಸ್ತೇಷಿಯ ಎಂಬ ಯುವತಿ ಕಣ್ಮರೆಯಾದಾಗ, ಆಕೆಯೂ ಅಸುನೀಗಿರುವಳೆಂಬ ಅನುಮಾನ ಕಾಡಿತ್ತು. ಆ ಹೊತ್ತಿಗೆ ಒಂದಷ್ಟು ಮೂಳೆಗಳು ಕೂಡ ನಿರೀಕ್ಷಿತ ಜಾಗದಲ್ಲಿ ಸಿಕ್ಕಿದ್ದವು. ರಷ್ಯದ ಗೂಡಚಾರರಿಗೆ ಅದು ಅನಸ್ತೇಷಿಯದ್ದೇ ಎಂಬ ಬಲವಾದ ನಂಬಿಕೆ. ಡಯಾನ ಎಲ್ಲವನ್ನೂ ಕೂಲಂಕಷ ಅಧ್ಯಯನಮಾಡಿ, ʻಇದು ಅವಳದಲ್ಲʼ ಎಂದು ಸ್ಪಷ್ಟವಾಗಿ ನುಡಿದಳು. ʻಇದು ಅವಳದ್ದೇ ಎಂದು ದೃಢಪಡಿಸಿ, ವರದಿಯಲ್ಲಿ ಸಹಿಹಾಕುʼ ಎಂದು ರಷ್ಯ ಬಲವಂತ ಮಾಡಿದಾಗ, ಈಕೆ ಸೊಪ್ಪುಹಾಕದೆ ವಿಮಾನ ಹತ್ತಿದಳು. ಜೊತೆಗೆ ಹೋಗಿದ್ದ ಜೆಮ್‌ ರೀಡ್‌ಗೆ ಈಕೆಗಿದ್ದ ಖಚಿತ ತಿಳಿವು ಮತ್ತು ರಷ್ಯದ ವಿರುದ್ಧ ತೋರಿದ ಧೈರ್ಯ ವಿಸ್ಮಯ ತಂದವು. ಆಕೆ ಹೇಳಿದ್ದು ಇಷ್ಟೇ ʻಸುಳ್ಳು ವರದಿಕೊಡಲು ಅಮೆರಿಕದಿಂದ ಈ ಕಡುಶೀತಲ ಭಾಗಕ್ಕೆ ವಿಮಾನದಿಂದ ಬರಬೇಕೆʼ?’ ಎಂದು.

ಎಷ್ಟೋವೇಳೆ, ಕೊಳೆತ ದೇಹಗಳನ್ನು ಪರೀಕ್ಷಿಸುವ ಅನಿವಾರ್ಯ ಈಕೆಗೆ ಎದುರಾಗುತ್ತದೆ. ಸಣ್ಣ ಸುಳಿವಿಗಾಗಿ ದೇಹವನ್ನೆಲ್ಲ ಜಾಲಾಡಬೇಕಾಗುತ್ತದೆ. ಜಾಕುವಿನಿಂದ ಇರಿದು ಕೊಂದದ್ದೆ? ಅಥವಾ ಬಂದೂಕಿನ ಗುಂಡಿನಿಂದ ಕೊಂದದ್ದೆ? ಎಂದು ಖಚಿತಪಡಿಸಬೇಕಾದಾಗ, ನಾರುವ ಹೆಣವನ್ನು ಪರೀಕ್ಷಿಸಲೇಬೇಕಾಗುತ್ತದೆ ಎಂದು ಆಗಾಗ ತಾನು ಆರಿಸಿಕೊಂಡ ವೃತ್ತಿಯ ಬಗ್ಗೆ ಹೆಮ್ಮೆಯಿಂದಲೇ ಹೇಳಿಕೊಂಡಿದ್ದಾಳೆ. ಆಕೆ ಮಾನವ ಬುರುಡೆ ವಿಶ್ಲೇಷಣೆಯಲ್ಲಿ ಮಹಾ ತಜ್ಞೆ. ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಬಳಸಿ ಪಡಿಯಚ್ಚು ತೆಗೆದರೆ, ಮೂಲ ಯಾವುದು? ಪಡಿಯಚ್ಚು ಯಾವುದು? ಎಂದು ಹೇಳುವುದೇ ಕಷ್ಟ. ಅಷ್ಟರಮಟ್ಟಿಗೆ ಆಕೆ ಈ ಕೆಲಸದಲ್ಲಿ ಕುಶಲಮತಿ. ಅಸ್ಥಿಪಂಜರವನ್ನು ನೋಡಿ, ಅದರಲ್ಲೂ ಸೊಂಟದ ಕೀಲನ್ನು ನೋಡಿ ಮೃತಪಟ್ಟವರು ಹೆಣ್ಣೋ, ಗಂಡೋ ಎಂದು ಕ್ಷಣಮಾತ್ರದಲ್ಲಿ ಹೇಳಿಬಿಡುತ್ತಾಳೆ. ಮನುಷ್ಯರ ಮತ್ತು ಮನುಷ್ಯೇತರ ಜೀವಿಗಳ ಅಸ್ಥಿಪಂಜರದಲ್ಲಿ ಯಾವ ಅಂಶವನ್ನು ಪ್ರಮುಖವಾಗಿ ಪರಿಗಣಿಸಬೇಕು ಎಂದು ಪ್ರಶ್ನೆ ಕೇಳಿದರೆ, ಆ ಕುರಿತೇ ಅವಳು ಬರೆದಿರುವ ʻಬೋನ್‌ ಡಿಟೆಕ್ಟಿವ್‌ʼ ಪುಸ್ತಕವನ್ನು ತೋರಿಸುತ್ತಾಳೆ. ಈಗ ಅದು ಅಮೆರಿಕದ ಅನೇಕ ವಿಶ್ವವಿದ್ಯಾಲಯಗಳಲ್ಲಿ ಪಠ್ಯಪುಸ್ತಕವಾಗಿದೆ.

ಡಯಾನ, ಡೆನ್‌ವರ್‌ನಲ್ಲಿರುವ ಮೆಟ್ರೋಪೋಲಿಯನ್‌ ಯೂನಿವರ್ಸಿಟಿಯಲ್ಲಿ ತನ್ನ ಅಧ್ಯಯನದ ಕೊಠಡಿಯನ್ನೇ ಮ್ಯೂಸಿಯಂ ಆಗಿ ಪರಿವರ್ತಿಸಿಕೊಂಡಿದ್ದಾಳೆ. ಎಲ್ಲಿ ನೋಡಿದರೂ ಬುರುಡೆ, ಮೂಳೆ, ಅಸ್ಥಿಪಂಜರಗಳೇ. ಇನ್ನು ಪೆಟ್ಟಿಗೆಯ ಮೇಲೂ ಅದೇ ಲೇಬಲ್.‌ ಒಳಗಿರುವುದು ಮನುಷ್ಯರ ಬುರುಡೆ, ಇನ್ನೊಂದು ಚಿಂಪಾಂಜಿಯ ಎಡಗೈ, ಅದರ ಸೊಂಟದ ಮೂಳೆ ಹೀಗೆಲ್ಲ ವಿಂಗಡಿಸಿ, ದಪ್ಪ ಅಕ್ಷರದಲ್ಲಿ ಬರೆದಿಟ್ಟಿದ್ದಾಳೆ. ಎಲ್ಲವೂ ಬುರುಡೆ ಕುರಿತ ಕಥೆಗಳೇ. ಆದರೆ ಈಕೆ ಎಂದೂ ಬುರುಡೆ ಬಿಟ್ಟಿದ್ದಿಲ್ಲ. ಅವಳ ಅಧ್ಯಯನದ ಕೊಠಡಿಯಲ್ಲಿ ಒಂದು ತಲೆಬುರುಡೆ ಎಲ್ಲ ಗಮನರ ಸೆಳೆಯುತ್ತದೆ. ಮಾದಕ ದ್ರವ್ಯ ಮಾರಾಟದಲ್ಲಿದ್ದ ಕಳ್ಳನೊಬ್ಬನನ್ನು ಗುಂಡಿಟ್ಟು ಕೊಂದಿದ್ದು. ಈಗ ಬುರುಡೆಯಾಗಿ ಅಲ್ಲಿ ಪ್ರದರ್ಶಿತವಾ ಗಿದೆ. ʻಈ ಗುಂಡೇಟು ತಗಲಿದೆಯಲ್ಲ, ಸರಿಯಾದ ಜಾಗಕ್ಕೇ ಬಿದ್ದಿದೆ, ಪ್ರಾಣ ಉಳಿಯಲು ಸಾಧ್ಯವಿಲ್ಲʼ ಎಂದು ಬಂದವರಿಗೆ ಕಾಮೆಂಟರಿ ಕೂಡ ಕೊಡುತ್ತಾಳೆ. ಜೊತೆಗೆ ಇನ್ನೊಂದು ಮಾತನ್ನು ಸೇರಿಸುತ್ತಾಳೆ: ʻಈ ತಲೆಬುರುಡೆ ಏನು ಕಥೆ ಹೇಳುತ್ತದೆ ಗೊತ್ತೆ? ಅದರಲ್ಲಿ ನಮ್ಮ ಸಮಾಜದ ಕಥೆಯೂ ಇದೆʼ ಎನ್ನುತ್ತಾಳೆ.

ಬುರುಡೆ ಸಂಗ್ರಹದಲ್ಲಿ ಆನಂದ

ʻನೋಡಿ, ನನ್ನ ಮೆಡಿಕಲ್‌ ರಿಪೋರ್ಟ್‌ ಎಲ್ಲವೂ ಸಿದ್ಧವಾಗಿದೆ. ನನ್ನ ಮೂಳೆ, ಚರ್ಮ, ಬುರುಡೆ, ಎಲ್ಲವೂ ಮುಂದೆ ಇದೇ ಮ್ಯೂಸಿಯಂ ಸೇರುತ್ತದೆʼ ಎನ್ನುವಾಗ ಆಕೆಯದು ತತ್ತ್ವಜ್ಞಾನವೋ, ಭವಿಷ್ಯ ಜ್ಞಾನವೋ, ವಿಜ್ಞಾನವೋ ಹೇಳುವುದು ಕಷ್ಟ. ಆದರೆ ಮುಂದಿನ ಪೀಳಿಗೆಗೆ ಅವು ವಸ್ತುವಾಗಬೇಕೆಂಬುದು ಆಕೆಯ ಇರಾದೆ. ಡಯಾನ ಫ್ರಾನ್ಸ್‌ ಅಮೆರಿಕದ ಪರ್ವತ ರಾಜ್ಯವೆಂದೇ ಹೆಸರಾಗಿರುವ ಕೊಲರಾಡೋನಲ್ಲಿ ೧೯೫೪ರಲ್ಲಿ ಹುಟ್ಟಿದಳು. ಚಿಕ್ಕಂದಿನಲ್ಲಿ ಕೆಮಿಸ್ಟ್ರಿ ಮತ್ತು ಮೈಕ್ರೋಸ್ಕೋಪ್‌ ಇವಳ ಸಂಗಾತಿ. ಅಪ್ಪ-ಅಮ್ಮನಿಗೆ ತಿಳಿಯದ ಹಾಗೆ ನೆಲಮಾಳಿಗೆಯಲ್ಲಿ ಜೀವಂತ ಕಪ್ಪೆಯನ್ನು ಕೊಯ್ದು, ಅದರೊಳಗೆ ಏನಿದೆ ಎಂದು ತೆರೆದು ನೋಡುತ್ತಿದ್ದಳು. ಭಯವಾಗಲಿ, ಅಸಹ್ಯವಾಗಲಿ ಎಂದೂ ಅವಳಿಗೆ ಆಗಿರಲಿಲ್ಲ. ತನ್ನ ಗೆಳತಿಯರೆಲ್ಲ ಕಾಡಿಗೆ ಹೋಗಿ ಗಿಡ-ಮರ-ಬಳ್ಳಿಗಳನ್ನು ನೋಡುತ್ತಿದ್ದರೆ, ಇವಳು ದೂರದ ಯಾವುದೋ ಜಾಗದಲ್ಲಿ ಬುರುಡೆಗಳಿಗಾಗಿ ಹುಡುಕುತ್ತಿದ್ದಳು. ಸಾಗರ ಜೀವಿವಿಜ್ಞಾನದಲ್ಲಿ ಪದವಿ ಪಡೆಯಲು ಕೊಲರಾಡೋ ವಿಶ್ವವಿದ್ಯಾಲಯ ಸೇರಿದ್ದೂ ಆಯಿತು. ಆದರೆ ಆಕೆಯ ಮನಸ್ಸು ಮನುಷ್ಯನ ಶರೀರದ ಅಧ್ಯಯನದ ಕಡೆಗೆ, ವಿಶೇಷವಾಗಿ, ಅಂಗರಚನೆಯ ಕಡೆಗೆ ವಾಲಿತ್ತು. ಚಂಗನೆ, ಆಂಥ್ರೋಪಾಲಜಿ ಕಡೆ ಹೊರಟಳು. ಅದರಲ್ಲೂ ಅಪರಾಧ ವಿಜ್ಞಾನಕ್ಕೆ, ಮನುಷ್ಯನ ದೇಹದಲ್ಲಿ ಸಿಕ್ಕುವ ಸಾಕ್ಷಿಯತ್ತ ಅವಳ ಮನಸ್ಸು ಹರಿಯಿತು. ಜೊತೆಜೊತೆಗೆ ಪ್ರಾಣಿಗಳ ಅಂಗರಚನೆಯ ಬಗ್ಗೆಯೂ ಮೂಲಜ್ಞಾನವನ್ನು ಪಡೆದಳು. ಅವುಗಳ ಅಸ್ಥಿಪಂಜರವನ್ನು ನೋಡಿಯೇ, ʻಅವು ಏನನ್ನು ತಿನ್ನುತ್ತಿದ್ದವುʼ ಎಂದು ಹೇಳಬಲ್ಲವಳಾಗಿದ್ದಳು.

ಮುಂದೆ ಕೊಲರಾಡೋ ವಿಶ್ವವಿದ್ಯಾಲಯದಲ್ಲಿ ಈ ಕುರಿತೇ ಬೋಧಿಸಿದಳು. ಅಲ್ಲಿನ ಮತ್ತು ವಿಸ್ಕಾನ್‌ಸಿನ್‌ ರಾಜ್ಯದ ಕೋರ್ಟುಗಳಲ್ಲಿ ಅನೇಕ ಕೊಲೆ ಮೊಕದ್ದಮೆಗಳಲ್ಲಿ, ಈಕೆ ಕೊಡುವ ಸಾಕ್ಷಿ ಅತ್ಯಂತ ಅಮೂಲ್ಯವಾದದ್ದೆಂದು ಭಾವಿಸಲಾಗಿದೆ. ೨೦೦೧ರ ಸೆಪ್ಟೆಂಬರ್‌ ೧೧ರಂದು ನ್ಯೂಯಾರ್ಕ್‌ನ ಟ್ವಿನ್‌ ಟವರ್‌ ಮೇಲೆ ಭಯೋತ್ಪಾದಕರು ಮಾಡಿದ ದಾಳಿ ಜಗತ್ತಿಗೇ ಗೊತ್ತು. ಆಗ ಕ್ರೇನ್‌ನಲ್ಲಿ ಎತ್ತಿ ಅವಶೇಷಗಳನ್ನು ವಿಲೇವಾರಿ ಮಾಡುವಾಗ, ಅನೇಕ ಮಾಂಸದ ತುಂಡುಗಳು ಸಿಕ್ಕಿದ್ದವು. ಈಕೆ ಖಚಿತವಾಗಿ ಹೇಳಿದ್ದಳು: ʻಅವುಗಳನ್ನು ಪರಿಗಣಿಸುವ ಅವಶ್ಯಕತೆ ಇಲ್ಲ. ಏಕೆಂದರೆ ಅವು ಟ್ವಿನ್‌ ಟವರ್‌ನಲ್ಲೇ ಇದ್ದ ರೆಸ್ಟೋರೆಂಟ್‌ಗಳಲ್ಲಿ ಬೇಯಿಸಿ ಇಟ್ಟಿದ್ದ ಮಾಂಸʼ ಎಂದು. ಮುಂದೆ ಅವಳು ಸಂಗ್ರಹಿಸಿ ಕೊಟ್ಟ ಮೂಳೆಗಳನ್ನು ಅಪರಾಧ ವಿಜ್ಞಾನ ತಜ್ಞರು ಡಿ.ಎನ್. ಎ. ವಿಶ್ಲೇಷಣೆಗೆ ಕಳಿಸುತ್ತಿದ್ದರು. ಆಕೆ ಆಗ ದಿನಕ್ಕೆ ೧೩ ಗಂಟೆ ಕೆಲಸಮಾಡಿದ್ದೂ ಉಂಟು. ಆಕೆ ಹೇಳಿದ ಮಾತುಗಳು: ʻಒಮ್ಮೊಮ್ಮೆ ಈ ಕೆಲಸ ಸಾಕು ಎನ್ನಿಸುತ್ತದೆ. ಆದರೆ ನನಗೂ ಜ್ಞಾನೋದಯವಾಗುತ್ತದೆ. ಈ ಕ್ಷೇತ್ರದಲ್ಲಿ ಹೆಚ್ಚು ಪರಿಣತರಿಲ್ಲ. ನಾನು ಆಸಕ್ತಿ ತೋರದಿದ್ದರೆ ಹೇಗೆ?ʼ ಎಂದು. ಇದ್ದಕ್ಕಿದ್ದಂತೆ ಆಕೆಗೆ ಫೋನ್‌ಗಳು ಬರುವುದು ಅನಿರೀಕ್ಷಿತವೇನಲ್ಲ. ವಾಷಿಂಗ್‌ಟನ್‌ ಡಿ.ಸಿ. ಯಲ್ಲಿರುವ ರಾಷ್ಟ್ರೀಯ ಪ್ರಾಣಿ ಸಂಗ್ರಹಾಲಯಕ್ಕೆ ತಕ್ಷಣವೇ ಬರಲು ಸಾಧ್ಯವೇ ಎಂಬ ಕರೆ ಬರುತ್ತದೆ. ಏಕೆಂದರೆ ಅಲ್ಲಿನ ಯಾವುದೋ ಪ್ರಾಣಿಯ ಮಿದುಳನ್ನು ಅನುಕರಿಸುವಂತೆ ಪಡಿಯಚ್ಚನ್ನು ರೂಪಿಸಬೇಕು. ಹೀಗೆಯೇ ಒಮ್ಮೆ ಆನೆಯ ಮಿದುಳಿನ ಪಡಿಯಚ್ಚು ಬೇಕೆಂದಾಗ, ಆಕೆ ಸೀದಾ ಡೆಟ್ರಾಯಿಟ್ ಗೆ ವಿಮಾನದಲ್ಲಿ ಹೋಗಿ, ಜೀವಿವಿಜ್ಞಾನಿಯೊಬ್ಬನ ಸಂಗ್ರಹದಿಂದ ಸತ್ತ ಆನೆಯ ಮಿದುಳನ್ನು ಕೊಂಡು ಮತ್ತೆ ವಾಷಿಂಗ್ಟನ್ ಗೆ ವಿಮಾನದಲ್ಲಿ ಹಿಂತಿರುಗಿದ್ದಳು. ಹೀಗೆಯೇ ಅನೇಕ ಬಾರಿ ಆರ್ಮ್ಡ್ ಫೋರ್ಸ್ ಇನ್ಸ್ಟಿಟ್ಯೂಟ್‌ ಕರೆಬರುತ್ತದೆ. ಆಕೆ ೧೯೯೪ರಿಂದ ಅಲ್ಲಿ ಆಂಥ್ರೋಪಾಲಜಿ ಬೋಧಿಸುತ್ತಿದ್ದಾಳೆ. ಅಲ್ಲಿ ನಡೆಯುವ ವಾರ್ಷಿಕ ಸಭೆಗಳಲ್ಲಿ ಈಕೆ ಇದ್ದೇ ಇರಬೇಕು.

ಡಯಾನ ಬದುಕು ಹೀಗೆಯೇ ಸಾಗಿದೆ. ಈಕೆ ತನ್ನದೇ ಆದ ʻಹ್ಯೂಮನ್ ಐಡೆಂಟಿಫಿಕೇಷನ್ ಲ್ಯಾಬ್ʼ ತೆರೆದಿದ್ದಾಳೆ. ಕೊಲರಾಡೋದಲ್ಲಿರುವ ಈ ಲ್ಯಾಬ್ ಬಗ್ಗೆ ಜಗತ್ತಿಗೇ ಗೊತ್ತು. ಮೂಳೆ, ಬುರುಡೆ, ಅಸ್ಥಿಪಂಜರ ಎಂದರೆ ಸಾಕು, ಅರ್ಧ ರಾತ್ರಿಯಾದರೂ ಸರಿಯೇ. ಆಕೆ ಹೊರಡಲು ಸಿದ್ಧ. ನಮ್ಮಲ್ಲಿ ಸಿನಿಮಾ ನಟರ ಬೇಡಿಕೆಗೆ ಒಂದು ಕಾಲ ಇರುತ್ತದೆ. ಅನಂತರ ಜನಪ್ರಿಯತೆ ಕುಗ್ಗಿದಂತೆ ಅವರು ಜನಮಾನಸದಿಂದ ದೂರವಾಗುತ್ತಾರೆ. ಡಯಾನ ಹಾಗಲ್ಲ, ಈಗಲೂ ಬಹು ಬೇಡಿಕೆಯಲ್ಲಿರುವ ಆಂಥ್ರೋಪಾಲಜಿಸ್ಟ್- ಬುರುಡೆ ತಜ್ಞೆ. ಆಕೆ ಸರ್ಟಿಫಿಕೇಟ್‌ ಕೊಟ್ರೆ ಸಾಕು, ಕೋರ್ಟ್‌ ಮತ್ತೇನೂ ಸಾಕ್ಷಿ ಬೇಡುವುದಿಲ್ಲ.

ಡಯಾನ ಫ್ರಾನ್ಸ್‌ಗೆ ಯಾರು ಕಲಿಸಿದರು ಈ ಅಸಾಮಾನ್ಯ ವಿದ್ಯೆಯನ್ನು? ಪರಿಶ್ರಮ, ಆಸಕ್ತಿ, ಹೊಸದಾರಿಯ ಹುಡುಕಾಟ, ಅದಕ್ಕೇ ಅಲ್ಲವೇ ನಿಸರ್ಗ ಬುರುಡೆಯೊಳಗೆ ಸುಮಾರು ೧,೩೫೦ ಗ್ರಾಂ ತೂಕದ ಮಿದುಳು ಇರಿಸಿರುವುದು!

This image has an empty alt attribute; its file name is T_R_Anantharamu-683x1024.jpg

ಟಿ. ಆರ್.‌ ಅನಂತರಾಮು


( ಡಾ. ಟಿ. ಆರ್.‌ ಅನಂತರಾಮು, ನಂ. ೫೩೪, ೭೦ನೇ ಅಡ್ಡರಸ್ತೆ, ಕುಮಾರಸ್ವಾಮಿ ಬಡಾವಣೆ ೧ನೇ ಹಂತ, ಬೆಂಗಳೂರು – ೫೬೦ ೧೧೧, ಮೊ : ೯೮೮೬೩ ೫೬೦೮೫)

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *