Uncategorizedಅಂಕಣ

ಸ್ತ್ರೀ ಅಂದರೆ ಅಷ್ಟೇ ಸಾಕೆ?/ ಕಬ್ಬಿನ ಸಿಹಿಯ ಜಾನಕಿ ಅಮ್ಮಾಳ್ – ಟಿ. ಆರ್. ಅನಂತರಾಮು

      ಭಾರತದಲ್ಲಿ ಕೃಷಿ ಪ್ರಯೋಗದ ವಿಚಾರ ಬಂದಾಗ ಥಟ್ಟನೆ ನೆನಪಿಗೆ ಬರುವ ಹೆಸರು ಜಾನಕಿ ಅಮ್ಮಾಳ್. ಆಕೆ ಸಸ್ಯವಿಜ್ಞಾನಿ. ಮಾಡಿದ ಪ್ರಯೋಗವೋ ಬಹು ದೊಡ್ಡದು. ಇದರಲ್ಲಿ ಸ್ವಂತಕ್ಕೆ ಎಂಬುದು ಏನೂ ಇಲ್ಲ; ಎಲ್ಲವೂ ದೇಶದ ಹಿತಕ್ಕೆ. ಇದು ಆಕೆಯ ಹೋರಾಟದ ಒಂದು ಭಾಗ, ಸವಾಲನ್ನು ಸ್ವೀಕರಿಸಿದ ಪರಿ. ಇನ್ನೊಂದು ವೈಯಕ್ತಿಕ ನೆಲೆಯ ಹೋರಾಟ. ಇದು ಆಕೆ ಹುಟ್ಟಿದ ದಲಿತ ವರ್ಗದ ವಿರುದ್ಧ ಸಮಾಜ ನಡೆದುಕೊಂಡ ಬಗೆ, ಅದರ ವಿರುದ್ಧ ಈಕೆಯ ಹೋರಾಟ. ಎಲ್ಲ ಮಹಿಳೆಯರೂ ಮುಂದಣ ಹೆಜ್ಜೆ ಇಡಬೇಕೆಂದಾಗಲೆಲ್ಲ ಭಾರತದಲ್ಲಿ ಪುರುಷ ಪ್ರಾಬಲ್ಯವನ್ನು ಮೀರಬೇಕು, ಜಾತಿಯ ಹೀಗಳಿಕೆಗೆ ಸೊಪ್ಪು ಹಾಕಬಾರದು – ಅದು ಹೋರಾಟದ ಬದುಕು. ಇಂಥ ಸಂಕಷ್ಟ ಪರಿಸ್ಥಿತಿಯಲ್ಲಿ, ಜಾನಕಿ ಮಾಡಿದ ಸಂಶೋಧನೆ ಭಾರತದ ಕೃಷಿಯಲ್ಲಿ ಹೊಸತೊಂದು ಅಧ್ಯಾಯ ಬರೆಯಿತು. ಈಕೆಯ ಕೊಡುಗೆಯನ್ನು ಸ್ಮರಿಸಿ ಒಂದು ಸಂಪಿಗೆ ಪ್ರಭೇದಕ್ಕೆ ʻಮ್ಯಾಗ್ನೋಲಿಯ ಕೋಬಸ್ ಜಾನಕಿ ಅಮ್ಮಾಳ್ʼ ಎಂದು ಹೆಸರು ದೆ.

ʻಮನುಷ್ಯ ಕೃಷಿಗೆ ಇಳಿದು ಎಷ್ಟು ವರ್ಷ ಆಯ್ತು? ಯಾರಾದರೂ ಹೇಳ್ತೀರಾ?ʼ

ಈ ಪ್ರಶ್ನೆ ಸಾಮಾನ್ಯಜ್ಞಾನ ಪರೀಕ್ಷಿಸಲೆಂದು ಯಾರೋ ಕೇಳಿದ್ದಲ್ಲ. ಐ.ಎ.ಎಸ್, ಕೆ.ಎ.ಎಸ್, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಇಂಥ ಪ್ರಶ್ನೆ ಕೇಳುವುದಿಲ್ಲ; ಉತ್ತರಿಸುವುದೂ ಕಷ್ಟವಲ್ಲ. ಕೃಷಿ ಕುರಿತು ತಾಲ್ಲೂಕು ಮಟ್ಟದಲ್ಲಿ ಒಂದು ಉಪನ್ಯಾಸ ಏರ್ಪಡಿಸಿದ್ದಾಗ ತಜ್ಞರೊಬ್ಬರು ತಮ್ಮ ಉಪನ್ಯಾಸವನ್ನು ಪ್ರಾರಂಭಿಸಿದ್ದು ಈ ಪ್ರಶ್ನೆಯೊಂದಿಗೆ. ಅನಂತರ ಸಭಿಕರ ಉತ್ತರಕ್ಕೂ ಕಾಯದೆ ನಗುನಗುತ್ತಲೇ ಹೇಳಿದ್ದರು `ಸುಮಾರು ಹತ್ತು ಸಾವಿರ ವರ್ಷಗಳು ಆಗಿರಬಹುದು’. ಆ ತಜ್ಞ ಮುಂದಿನ ಪ್ರಶ್ನೆ ಕೇಳಿದಾಗ ಸಭಿಕರು ಒಬ್ಬೊರಿಗೊಬ್ಬರು ಮುಖ ನೋಡಿಕೊಂಡರು. ಪ್ರಶ್ನೆ : ಮೆಕ್ಕೆ ಜೋಳ ಬೆಳೆದದ್ದು ಎಲ್ಲಿ? ಗೋಧಿ ಎಲ್ಲಿಂದ ಬಂತು?ʼ. ಸಭಿಕರಾರು ಉತ್ತರಿಸಲಿಲ್ಲ. ಮೊದಲು ಸುಮ್ಮನಿದ್ದರು. ಹೇಗಿದ್ದರೂ ಈ ಉಪನ್ಯಾಸಕರೇ ಉತ್ತರಿಸುತ್ತಾರೆ ಎಂಬುದು ಗೊತ್ತಿತ್ತು. ತಜ್ಞ ಮುಂದುವರಿದು ಮೆಕ್ಕೆ ಜೋಳ ಬಂದದ್ದು ಮೆಕ್ಸಿಕೋದಿಂದ, ಗೋಧಿ ಬಂದದ್ದು ಸಿರಿಯದಿಂದ ಎಂದಾಗ ಸಭಿಕರಲ್ಲಿ ಒಬ್ಬ ಇನ್ನೊಬ್ಬನ ಕಿವಿಯಲ್ಲಿ ʻಓಹೋ, ಇವು ನಮ್ಮ ದೇಶದ ಬೆಳೆ ಅಲ್ವಾ?ʼ ಎಂದು ವಿಸ್ಮಿತವಾಗಿ ಪಿಸುಗುಟ್ಟುತ್ತಿದ್ದ.

ಸಭೆಯಲ್ಲಿ ಓದುಗರ ವರ್ಗವೂ ಇತ್ತು. ಅಲ್ಲೂ ಸಣ್ಣ ಧ್ವನಿಯಲ್ಲಿ ಮಾತನಾಡುವವನೊಬ್ಬನಿದ್ದ, ಪಕ್ಕದಲ್ಲಿ ಕುಳಿತವನಿಗೆ ಹೇಳುತ್ತಿದ್ದ: ʻಬಿ.ಜಿ.ಎಲ್. ಸ್ವಾಮಿ ಅವರ ʻನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕ ಓದಿಲ್ವಾ?, ಟೊಮ್ಯಾಟೋ ನಮ್ಮದಲ್ಲ, ಸೀಮೆಬದನೆಕಾಯಿ ನಮ್ಮದಲ್ಲ, ಬೀನ್ಸ್ ನಮ್ಮದಲ್ಲ, ನೀನು ವರ್ಷಕ್ಕೆ ಶೇಂಗಾ ಬೆಳೆದು ಸುಮಾರು ಐವತ್ತು ಸಾವಿರ ರೂಪಾಯಿ ಗಳಿಸುತ್ತೀಯಲ್ಲ, ಶೇಂಗಾ ಕೂಡ ನಮ್ಮದಲ್ಲ.ʼ ಹೀಗೆ ಅವನ ಪಟ್ಟಿ ʻನಮ್ಮದಲ್ಲʼ, ʻನಮ್ಮದಲ್ಲʼ ಎಂದು ಬೆಳೆಯುತ್ತಲೇ ಇತ್ತು. ಕೇಳುವವನಿಗೆ ದಿಕ್ಕು ತಪ್ಪಿದಂತಾಗಿ, ʻಹಾಗಾದರೆ, ನಮ್ಮ ದೇಶದ್ದು ಏನೂ ಇಲ್ವಾ?ʼ ಎಂದು ಹುಬ್ಬೇರಿಸಿದ. ಮುಂದೆ ಉಪನ್ಯಾಸಕನ ಭಾಷಣದ ವಿಚಾರ ಬೇರೆಡೆಗೆ ಜಾರಿತು. ಅದು ನಾವು ತಿನ್ನುವ ಆಹಾರ ಪದಾರ್ಥದಲ್ಲಿ ಬೆರೆತಿರುವ ಕೀಟನಾಶಕಗಳ ಬಗ್ಗೆ, ಅದು ತರುವ ಘೋರ ವಿಪತ್ತುಗಳ ಬಗ್ಗೆ.

ಕೃಷಿಗೆ ಸಂಬಂಧಿಸಿದಂತೆ ಲಕ್ಷಾಂತರ ಇಂಥ ಉಪನ್ಯಾಸಗಳು ನಮ್ಮ ದೇಶದಲ್ಲಿ, ರಾಜ್ಯದಲ್ಲಿ ನಡೆದೇ ಇವೆ. ನೀವು ಅರೆಘಳಿಗೆ ಪುರುಸೊತ್ತು ಮಾಡಿಕೊಂಡು ಈಗಿನ ಅಧ್ವಾನದ ರಾಜಕೀಯವನ್ನು ನಿಮ್ಮ ತಲೆಯಿಂದ ಸ್ವಲ್ಪ ಬದಿಗೆ ಸರಿಸಿ, ನಾವು ನಡೆದುಬಂದ ದಾರಿಯನ್ನು ಒಮ್ಮೆ ಗಮನಿಸಿ. ಇದನ್ನು ದೊಡ್ಡವರು ಸಿಂಹಾವಲೋಕನ ಎನ್ನುತ್ತಾರೆ; ಬಹುಶಃ ನಮ್ಮಲ್ಲಿ ೯೯ ಮಂದಿ ನೈಸರ್ಗಿಕ ಪರಿಸರದಲ್ಲಿ ಸಿಂಹವನ್ನು ನೋಡಿಲ್ಲ, ಅದು ಹಿಂತಿರುಗಿ ಅವಲೋಕನ ಮಾಡಿದ್ದಂತೂ ನೋಡಿಯೇ ಇಲ್ಲ. ಇದು ಒತ್ತಟ್ಟಿಗಿರಲಿ, ಒಂದಂತೂ ನಿಜ. ಮನುಷ್ಯನ ವಿಕಾಸದ ಆರಂಭಿಕ ಹಂತದಲ್ಲಿ ಬೇಟೆಯಾಡಿದ, ಪ್ರಾಣಿಗಳ ರುಚಿ ನೋಡಿದ. ಅಷ್ಟಕ್ಕೇ ಅವನ ಹೊಟ್ಟೆ ತುಂಬಲಿಲ್ಲ. ಸುತ್ತಮುತ್ತ ಸಮೃದ್ಧವಾಗಿ ಬೆಳೆದಿದ್ದ ಹಣ್ಣು, ಕಾಯಿ, ಪಲ್ಲೆಗಳನ್ನು ತಿಂದ. ನಾಲಗೆಗೆ ರುಚಿ ಹತ್ತಿತು. ಹೊಟ್ಟೆಯೂ ಒಪ್ಪಿತು. ಇಂಥ ಹಣ್ಣು ತಿನ್ನಲು ಯೋಗ್ಯ, ಇಂಥದು ನಮ್ಮ ಹೊಟ್ಟೆಗೆ ಆಗಿಬರುವುದಿಲ್ಲ ಎಂಬ ತೀರ್ಮಾನಕ್ಕೆ ಬರುವ ಮೊದಲು ಅದೆಷ್ಟು ಸಾವಿರ ವರ್ಷ ಪ್ರಯೋಗಶೀಲನಾಗಿದ್ದನೋ ಲೆಕ್ಕವಿಟ್ಟವರಿಲ್ಲ. ಕೃಷಿಗೆ ಇಳಿದ, ಸುಧಾರಿತ ತಳಿಗಳನ್ನು ಸೃಷ್ಟಿಸಿದ. ವನ್ಯ ತಳಿಗಳನ್ನು ಬೇಸಾಯಕ್ಕೆ ಒಗ್ಗಿಸಿದ. ಕೃಷಿಗೆ ಭದ್ರ ಬುನಾದಿ ಸಿಕ್ಕಿತು. ಹಾಗೆಯೇ ಅಲೆಮಾರಿಯಾಗಿದ್ದವನಿಗೆ ನೆಲೆಯೂ ಸಿಕ್ಕಿತು. ಇಂದು ನಾವು ತರಹೆವಾರಿ ಹಣ್ಣುಹಂಪಲುಗಳನ್ನು ತಿನ್ನುತ್ತಿದ್ದರೆ, ಅದು ನಿರಕ್ಷರಕುಕ್ಷಿಗಳು ಮಾಡಿದ ನಿಜವಾದ ಕೃಷಿ ಪ್ರಯೋಗಗಳಿಂದ. ಜೀವನಾನುಭವ ಕಲಿಸಿದ ಪಾಠ ಅದು. ಸುಧಾರಿತ ತಳಿಗಳನ್ನು ಬೆಳೆಸುವಾಗ ಅವನಿಗೇನೂ ಈಗಿನಂತೆ ಜೆನಿಟಿಕ್ಸ್ ಗೊತ್ತಿರಲಿಲ್ಲ, ವರ್ಣತಂತುಗಳ ಬಗ್ಗೆ ಕೇಳಿಯೇ ಇರಲಿಲ್ಲ. ಜೀವಕೋಶ ಎಂಬುದು ಅವನ ಕಲ್ಪನೆಗೂ ನಿಲುಕದ ಶಬ್ದವಾಗಿತ್ತು. ಕುತೂಹಲ, ನಿರಂತರ ಪ್ರಯೋಗಶೀಲತೆ, ವಿಫಲತೆಸಫಲತೆ ಇವುಗಳ ಮೊತ್ತವೇ ಇಂದಿನ ಕೃಷಿ. ಕ್ರಾಂತಿ ಕುರಿತು ಕೃಷಿ ತಜ್ಞರು, ಚರಿತ್ರೆಕಾರರು ಬೇಕಾದಷ್ಟು ಬರೆದಿದ್ದಾರೆ. ಆದರೆ ಇಂಥದೇ ವರ್ಷ ಹೀಗಾಯಿತು ಎಂದು ಹೇಳುವ ಕುರುಹು ಎಂದೂ ಸಿಕ್ಕುವುದಿಲ್ಲ. ಬಿಡಿ, ಅದನ್ನು ಇತಿಹಾಸಕ್ಕೆ ಬಿಟ್ಟುಬಿಡೋಣ. ಕೃಷಿ ಕ್ರಾಂತಿಯ ಫಲಾನುಭವಿಗಳು ನಾವು ಎಂದು ತಿಳಿದಿದ್ದರೆ ಅಷ್ಟು ಸಾಕು.

ಭಾರತದಲ್ಲಿ ಕೃಷಿ ಪ್ರಯೋಗದ ವಿಚಾರ ಬಂದಾಗ ಥಟ್ಟನೆ ನೆನಪಿಗೆ ಬರುವ ಹೆಸರು ಜಾನಕಿ ಅಮ್ಮಾಳ್. ಆಕೆ ಸಸ್ಯವಿಜ್ಞಾನಿ. ಮಾಡಿದ ಪ್ರಯೋಗವೋ ಬಹು ದೊಡ್ಡದು. ಭಾರತಕ್ಕೆ ವಿಶೇಷವಾಗಿ ಕಬ್ಬಿನ ಬೆಳೆಗಾರರಿಗೆ ಭಾರಿ ಲಾಭ ತರುವಂಥದ್ದು. ಇದರಲ್ಲಿ ಸ್ವಂತಕ್ಕೆ ಎಂಬುದು ಏನೂ ಇಲ್ಲ; ಎಲ್ಲವೂ ದೇಶದ ಹಿತಕ್ಕೆ. ಇದು ಆಕೆಯ ಹೋರಾಟದ ಒಂದು ಭಾಗ, ಸವಾಲನ್ನು ಸ್ವೀಕರಿಸಿದ ಪರಿ. ಇನ್ನೊಂದು ವೈಯಕ್ತಿಕ ನೆಲೆಯ ಹೋರಾಟ. ಇದು ಆಕೆ ಹುಟ್ಟಿದ ದಲಿತ ವರ್ಗದ ವಿರುದ್ಧ ಸಮಾಜ ನಡೆದುಕೊಂಡ ಬಗೆ, ಅದರ ವಿರುದ್ಧ ಈಕೆಯ ಹೋರಾಟ. ಎಲ್ಲ ಮಹಿಳೆಯರೂ ಮುಂದಣ ಹೆಜ್ಜೆ ಇಡಬೇಕೆಂದಾಗಲೆಲ್ಲ ಭಾರತದಲ್ಲಿ ಪುರುಷ ಪ್ರಾಬಲ್ಯವನ್ನು ಮೀರಬೇಕು, ಜಾತಿಯ ಹೀಗಳಿಕೆಗೆ ಸೊಪ್ಪು ಹಾಕಬಾರದು – ಅಂದರೆ ಅದು ಹೋರಾಟದ ಬದುಕು. ಮನಸ್ಸು ಗಟ್ಟಿಮಾಡಿಕೊಂಡವರು ಇದರಲ್ಲಿ ಗೆಲ್ಲುತ್ತಾರೆ. ಡಾರ್ವಿನ್ ಹೇಳಿಲ್ಲವೇ: ʻಸಮರ್ಥರಷ್ಟೇ ಬದುಕುಳಿಯುತ್ತಾರೆʼ ಎಂದು. ಇವೆರಡನ್ನೂ ಗೆದ್ದುಬಂದವಳು ಜಾನಕಿ ಅಮ್ಮಾಳ್. ಈಗಲೂ ಸಂಕರ ತಳಿ, ಮಿಶ್ರತಳಿ ಎಂದೆಲ್ಲ ಹೇಳುವ ಬೆಳೆಗಳ ಪ್ರಶ್ನೆ ಬಂದಾಗ ಜಾನಕಿ ಅಮ್ಮಾಳ್ ಹೆಸರು ಹೇಳದೆ ಮುಂದೆ ಹೋಗುವಂತೆಯೇ ಇಲ್ಲ. ಭಾರತದಲ್ಲಷ್ಟೇ ಅಲ್ಲ, ವಿದೇಶದಲ್ಲೂ ಆಕೆಯ ಕೊಡುಗೆಯ ಬಗ್ಗೆ ಗೌರವವಿದೆ, ಆಕೆಗೆ ಶಾಶ್ವತ ಸ್ಥಾನವಿದೆ.

ಜಾನಕಿ ಅಮ್ಮಾಳ್ ಹುಟ್ಟಿದ್ದು ೧೮೯೭ರ ನವೆಂಬರ್ ೪ರಂದು, ಕೇರಳದ ತೆಲ್ಲಿಚೆರಿಯಲ್ಲಿ. ತಂದೆ ಆಗಿನ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಸಬ್ ಜಡ್ಜ್. ಅವರಿಗೆ ದಿವಾನ್ ಬಹದ್ದೂರ್ ಎಂಬ ಬಿರುದೂ ಇತ್ತು. ಅವರ ಪಕ್ಷಿವೀಕ್ಷಣೆಯ ಹವ್ಯಾಸ, ಮನೆಮಂದಿಗೆಲ್ಲ ನಿಸರ್ಗದ ಬಗ್ಗೆ ಪ್ರೀತಿ ಹುಟ್ಟಿಸಿತ್ತು. ಸುಸಂಸ್ಕೃತ ಕುಟುಂಬ, ಕುಟುಂಬದ ತುಂಬ ಬರಿ ಮಕ್ಕಳೇ. ಬರೋಬ್ಬರಿ ಒಂದು ಡಜನ್. ತಂದೆ ಏದವಲತ್ ಕಕ್ಕಟ ಕೃಷ್ಣನ್, ಮಕ್ಕಳಿಗೆ ಶಿಕ್ಷಣ ಕೊಡಿಸುವುದರಲ್ಲಿ ಹಿಂದುಳಿಯಲಿಲ್ಲ. ಆದರೆ ಸಮಾಜ ಅಷ್ಟು ಉದಾರವಾಗಿರಲಿಲ್ಲ. ಇವರದ್ದು ದಲಿತ ಕುಟುಂಬ ಎನ್ನುವ ಕಾರಣಕ್ಕಾಗಿ ಸದಾ ವಕ್ರದೃಷ್ಟಿಯಲ್ಲೇ ನೋಡುತ್ತಿತ್ತು. ಕೇರಳದಲ್ಲಿ ಎಜ಼ವಾ ಎಂಬ ವರ್ಗಕ್ಕೆ ಸೇರಿದವರು. ವಾಸ್ತವವಾಗಿ ಇವರನ್ನು ಹಿಂದುಳಿದವರು ಎಂದು ಹೇಳುವುದೇ ತಪ್ಪು. ಕೇರಳದಲ್ಲಿ ಈಗಲೂ ಸಮುದಾಯ ದೊಡ್ಡ ಸಂಖ್ಯೆಯಲ್ಲೇ ಇದೆ. ಅಧ್ಯಾತ್ಮ ಗುರು, ನಾರಾಯಣ ಗುರು, ಕೇರಳದ ಈಗಿನ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಕೂಡ ಸಮುದಾಯದಿಂದ ಬಂದವರೇ. ಹಿಂದೆ ಸಮುದಾಯದವರು ವೀರರು, ಶೂರರು ಎಂದೆಲ್ಲ ಕರೆಸಿಕೊಂಡಿದ್ದರು; ಸೈನಿಕರಾಗಿದ್ದರಂತೆ.

ಜಾನಿಕ ಅಮ್ಮಾಳ್ ತಾಯಿ ದೇವಿ ಕುರುವಾಯಿ. ಅವರಿಗೊಂದು ವಿಶಿಷ್ಟ ಹಿನ್ನೆಲೆ ಇದೆ. ದೇವಿ ಕುರುವಾಯಿ, ತಿರುವಾಂಕೂರಿನಲ್ಲಿ ರೆಸಿಡೆಂಟ್ ಆಗಿದ್ದ ಜಾನ್ ಚೈಲ್ಡ್ ಹ್ಯಾನಿಂಗ್ಟನ್ ದಂಪತಿಗೆ ಹುಟ್ಟಿದ ಮಗಳು. ಹೀಗಾಗಿ ಕುಟುಂಬದಲ್ಲಿ ಜಾತಿ ಕುರಿತು ಯಾರೂ ತಲೆ ಕೆಡೆಸಿಕೊಂದಡಿರಲಿಲ್ಲ. ಸಮಾಜ ಇವರನ್ನು ಕೆಳಸ್ತರದವರು ಎಂದು ಭಾವಿಸಿದ್ದರೂ, ವಿದ್ಯೆಯಲ್ಲಿ ಅವರು ತೋರಿದ ಶ್ರದ್ಧೆ, ಆಸಕ್ತಿಯಿಂದಾಗಿ, ಇಡೀ ಕುಟುಂಬವೇ ಸುಸಂಸ್ಕೃತ ಕುಟುಂಬ ಎನ್ನಿಸಿಕೊಂಡಿತ್ತು. ಬಾಲ್ಯದಲ್ಲಿ ಉತ್ತಮ ಶಿಕ್ಷಣ ಜಾನಕಿ ಅಮ್ಮಾಳ್ ಸಿಕ್ಕಿತ್ತು. ಆಗಿನ ಕಾಲದಲ್ಲೇ ಕಾನ್ವೆಂಟ್ ಶಿಕ್ಷಣ, ತಲಚೇರಿಯ ಸೇಕ್ರೆಡ್ ಹಾರ್ಟ್ ಕಾನ್ವೆಂಟಿನಲ್ಲಿ ಓದು. ಆಗ ದಕ್ಷಿಣ ಭಾರತದಲ್ಲಿ ಉನ್ನತ ಶಿಕ್ಷಣ ಬಯಸಿದವರು ಮದ್ರಾಸಿಗೆ ಹೋಗಬೇಕಾಗಿತ್ತು. ಆಕೆ ಮದ್ರಾಸ್ ಕ್ವೀನ್ ಮೇರೀಸ್ ಕಾಲೇಜಿನಲ್ಲಿ ಸಸ್ಯವಿಜ್ಞಾನದಲ್ಲಿ ಪದವಿ ಪಡೆದಳು. ಸಸ್ಯವಿಜ್ಞಾನ ಆಕೆಯನ್ನು ಏಕೆ ಆಕರ್ಷಿಸಿತೋ ತಿಳಿಯದು. ಬಹುಶಃ ಕೇರಳದ ಸಹಜ ದಟ್ಟ ಕಾಡಿನ ಪ್ರಭಾವವೂ ಇದ್ದೀತು. ಮುಂದೆ ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ೧೯೨೧ರಲ್ಲಿ ಸಸ್ಯವಿಜ್ಞಾನದಲ್ಲಿ ಆನರ್ಸ್ ಪದವಿ- ಶಿಕ್ಷಕಿಯಾಗಲು ಮನ ಹಾತೊರೆಯುತ್ತಿತ್ತು. ಅಲ್ಲಿನ ವಿಮೆನ್ಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಉಪನ್ಯಾಸಕಿಯಾದರು. ಅದು ಯಶಸ್ಸಿನ ಮೊದಲ ಮೆಟ್ಟಿಲು. ಕುಟುಂಬದ ಬೆಂಬಲವಿತ್ತು.

ಉನ್ನತ ಶಿಕ್ಷಣ ಅರಸಿ ಬಾರ್ಬೌರ್ ವಿದ್ಯಾರ್ಥಿ ವೇತನ ಪಡೆದು ಜಾನಕಿ ಸಪ್ತಸಾಗರ ದಾಟಿ ಅಮೆರಿಕದ ಮಿಚಿಗನ್ ವಿಶ್ವವಿದ್ಯಾಲಯದ ಸಸ್ಯವಿಜ್ಞಾನ ವಿಭಾಗದಲ್ಲಿ ಸಂಶೋಧನೆಗೆ ಹೊರಟರು. ೧೯೨೫ರಲ್ಲಿ ಸ್ನಾತಕೋತ್ತರ ಪದವಿ ಪಡೆದು ಮತ್ತೆ ವಿಮೆನ್ಸ್ ಕ್ರಿಶ್ಚಿಯನ್ ಕಾಲೇಜಿಗೆ ಮರಳಿದರು. ಮತ್ತೆ ಸೆಳೆತ, ಮತ್ತೆ ಮಿಚಿಗನ್ ವಿಶ್ವವಿದ್ಯಾಲಯಕ್ಕೆ ಬಂದಳು. ೧೯೩೨ರಲ್ಲಿ ಡಿ.ಎಸ್ಸಿ ಪದವಿ ಪಡೆದರು. ಭಾರತೀಯ ಹೆಣ್ಣು ಮಗಳೊಬ್ಬಳು ಈ ಉನ್ನತ ಪದವಿ ಪಡೆದದ್ದು ಇದೇ ಮೊದಲು. ಮತ್ತೆ ಭಾರತಕ್ಕೆ ಮರಳಿದರು. ಈ ಸಲ ನಿಲ್ದಾಣ ಬದಲಾಯಿತು. ಆಕೆ ಟ್ರಿವಾಂಡ್ರಮ್ ಸೈನ್ಸ್ ಕಾಲೇಜಿಗೆ ಉಪನ್ಯಾಸಕಿಯಾಗಿ ಕೆಲಸ ಮಾಡಿದರು. ಬಾಟನಿ ಆಕೆಯ ಬದುಕನ್ನೇ ಆವರಿಸಿತ್ತು. ಮದುವೆಯಾಗುವ ಯೋಚನೆಯೇ ಬರಲಿಲ್ಲ; ಅಷ್ಟರಮಟ್ಟಿಗೆ ಸಂಶೋಧನೆ, ಅಧ್ಯಾಪನದಲ್ಲಿ ತೊಡಗಿದ್ದರು. ಎರಡು ವರ್ಷ ಅಲ್ಲಿ ಕೆಲಸಮಾಡಿ, ಜಾನಕಿ ಮಗ್ಗಲು ಬದಲಾಯಿಸಿ, ಈಗ ಕೊಯಮತ್ತೂರಿನಲ್ಲಿ ಶುಗರ್ಕೇನ್ ಬ್ರೀಡಿಂಗ್ ಇನ್ಸ್ಟಿಟ್ಯೂಟ್ಗೆ ವಿಜ್ಞಾನಿಯಾಗಿ ಪ್ರವೇಶ ಪಡೆದರು. ಆ ಕಾಲದಲ್ಲೂ ಈ ಸಂಸ್ಥೆಗೆ ದೊಡ್ಡ ಗೌರವವಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಈ ಸಂಸ್ಥೆಯ ಹಿರಿಯ ವಿಜ್ಞಾನಿಗಳು ಕಬ್ಬಿನ ಬೇರೆ ಬೇರೆ ತಳಿಗಳನ್ನು ಸೃಷ್ಟಿಸಿದ್ದರು; ರೋಗ ಮತ್ತು ಬರ ನಿರೋಧಕ ಗುಣವುಳ್ಳ ಕಬ್ಬನ್ನು ಸೃಷ್ಟಿಸಿ ಭಾರತದಾದ್ಯಂತ ದೊಡ್ಡ ಸುದ್ದಿ ಮಾಡಿದ್ದರು.

ಹೊಸತೊಂದು ಅಧ್ಯಾಯ

ಜಾನಕಿ ಅಮ್ಮಾಳ್ ಈ ಸಂಶೋಧನೆಯ ಮುಂದುವರಿದ ಭಾಗವಾಗಿ ಅತಿ ಹೆಚ್ಚು ಸಕ್ಕರೆಯ ಅಂಶವಿರುವ ಕಬ್ಬಿನ ತಳಿಯನ್ನು ಸೃಷ್ಟಿಸಿದರೆ ಹೇಗೆ ಎಂಬ ದೃಷ್ಟಿ ಇಟ್ಟುಕೊಂಡು ಯೋಜನೆಯೊಂದನ್ನು ತಯಾರಿಸಿದರು. ಇಲ್ಲಿ ಅವಕಾಶವೂ ಇತ್ತು, ಸವಾಲೂ ಇತ್ತು. ತಳಿ ತಂತ್ರಜ್ಞಾನವನ್ನು ಬಳಸಿ ಇದ್ದ ತಳಿಗೆ ಹೊಸ ಜೀನ್ ಸೇರಿಸಿ ಮೂರು ತಳಿಗಳನ್ನು ಸೃಷ್ಟಿಸಿದರು. ವಿಜ್ಞಾನದಲ್ಲಿ ಸಾಮಾನ್ಯವಾಗಿ ಇದನ್ನು ಸೈಟೋಜೆನೆಟಿಕ್ಸ್ ಎಂದು ಕರೆಯುವುದಿದೆ. ಆಗಿನ ಪರಿಸ್ಥಿತಿ ಹೇಗಿತ್ತೆಂದರೆ ಭಾರತದಲ್ಲಿ ಬೇಡಿಕೆನುಗುಣವಾಗಿ ಉತ್ತಮ ಗುಣಮಟ್ಟದ ಕಬ್ಬು ದೊರೆಯುತ್ತಿರಲಿಲ್ಲ. ಕಬ್ಬನ್ನು ಆಗ್ನೇಯ ಏಷ್ಯದಿಂದ ಆಮದು ಮಾಡಿಕೊಳ್ಳಬೇಕಾಗಿತ್ತು. ಪಾಪುವಾ ನ್ಯೂಗಿನಿಯಲ್ಲಿ ಮಾತ್ರ ಹೆಚ್ಚು ಸಕ್ಕರೆ ಅಂಶವಿರುವ ಕಬ್ಬು ಬೆಳೆಯುತ್ತಿದ್ದರು. ಆದರೆ ಆಮದು ಮಾಡಿಕೊಳ್ಳಲು ಹೆಚ್ಚು ವಿದೇಶಿ ವಿನಿಮಯ ಖರ್ಚುಮಾಡಬೇಕಾಗಿತ್ತು. ಇಂಥ ಸಂಕಷ್ಟ ಪರಿಸ್ಥಿತಿಯಲ್ಲಿ, ಜಾನಕಿ ಮಾಡಿದ ಸಂಶೋಧನೆ ಭಾರತದ ಕೃಷಿಯಲ್ಲಿ ಹೊಸತೊಂದು ಅಧ್ಯಾಯ ಬರೆಯಿತು. ಏಕೆಂದರೆ ಕಬ್ಬು ಆಗಲೂ ಅಷ್ಟೇ, ಈಗಲೂ ಅಷ್ಟೇ, ವಾಣಿಜ್ಯ ಬೆಳೆ. ಇದರಲ್ಲಿ ರೈತರ ಪಾಲಿದೆ, ಸಕ್ಕರೆ ಕಾರ್ಖಾನೆಯ ಪಾಲಿದೆ, ಸಕ್ಕರೆಯ ಆಮದು, ರಫ್ತಿನ ಪಾಲೂ ಇದೆ.

ಜಾನಕಿ ಅಮ್ಮಾಳ್ ಹೆಸರು ಭಾರತದ ಹೊರಕ್ಕೂ ಪಸರಿಸಿತು. ಭಾರತ ಸರ್ಕಾರವಂತೂ ಈಕೆಗೆ ಋಣಿಯಾಯಿತು. ಆದರೆ ಆಗಿನ ಸಂದರ್ಭ ಹೇಗಿತ್ತೆಂದರೆ ಮಹಿಳೆಯರು ವಿಜ್ಞಾನದಲ್ಲಿ ಸಂಶೋಧನೆ ಮಾಡಿ ಮುಂದೆ ಬರುತ್ತಾರೆಂದರೆ ಪುರುಷ ಲೋಕ ಸಹಿಸುತ್ತಿರಲಿಲ್ಲ. ಏನಾದರೂ ಮಾಡಿ ಬಡಿದು ಕೂಡಿಸುವ ಹುನ್ನಾರ ಮಾಡುತ್ತಿತ್ತು. ಈಕೆಗೂ ಈ ಸಂಸ್ಥೆಯಲ್ಲಿ ಅದೇ ಬಿಸಿ ತಟ್ಟಿತು. ಆದರೆ ಒಮ್ಮೆಯೂ ಆಕೆ ಪ್ರತಿಭಟಿಸಲಿಲ್ಲ, ಎದುರುತ್ತರ ಕೊಡಲಿಲ್ಲ. ತನ್ನ ಸಂಶೋಧನೆ ಕುರಿತ ಏಕಾಗ್ರತೆಯಿಂದ ವಿಚಲಿತಳಾಗಲಿಲ್ಲ. ಆದರೆ ಏಕೋ ಇಲ್ಲಿ ಮಹಿಳೆಯರ ಸಂಶೋಧನೆಗೆ ತೊಡಕಿನ ವಾತಾವರಣವಿದೆ ಎಂಬುದಂತೂ ಆಕೆಯ ಅರಿವಿಗೆ ಬಂತು. ೧೯೩೯ರಲ್ಲಿ ಜಾನಕಿ ಸಂಶೋಧನೆಯನ್ನು ಪರಿಗಣಿಸಿ ʻಇಂಟರ್ ನ್ಯಾಶನಲ್ ಜೆನೆಟಿಕ್ಸ್ ಕಾಂಗ್ರೆಸ್ʼಗೆ ಆಹ್ವಾನಿತಳಾದರು. ಇದು ಕೂಡ ಸಹೋದ್ಯೋಗಿಗಳಲ್ಲಿ ಅಸಹನೆಯನ್ನು ಹೆಚ್ಚಿಸಿತು.

ಈ ಹೊತ್ತಿಗೆ ಲಂಡನ್ನಿನ ಕ್ಯೂ ಗಾರ್ಡನ್ ಅಸಿಸ್ಟೆಂಟ್ ಸೈಟಾಲಜಿಸ್ಟ್ ಹುದ್ದೆ ಸ್ವೀಕರಿಸುವಂತೆ ಆಹ್ವಾನ ಬಂತು. ಅಲ್ಲಿ ರಾಯಲ್ ಹಾರ್ಟಿಕಲ್ಚರ್ ಸೊಸೈಟಿ ತಜ್ಞರೊಡನೆ ಮುಕ್ತವಾಗಿ ಕೆಲಸಮಾಡುವ ಅವಕಾಶ ಬಂತು. ಆಕೆಗೆ ಬಹು ಇಷ್ಟವಾಗಿದ್ದ ತಳಿ ತಂತ್ರಜ್ಞಾನ ಕುರಿತು ಇನ್ನಷ್ಟು ಆಳ ಸಂಶೋಧನೆಗೆ ಇಳಿದರು. ತೋಟದ ಸಸ್ಯಗಳ ವರ್ಣತಂತು ಕುರಿತು ವಿಶೇಷವಾಗಿ ಅಧ್ಯಯನ ಮಾಡಿದರು. ಕೆಲವು ಸಸ್ಯ ಪ್ರಭೇದಗಳ ವಿಕಾಸ ಮತ್ತು ವೈವಿಧ್ಯವನ್ನು ಈ ಹಿನ್ನೆಲೆಯಲ್ಲಿ ಪರಿಶೀಲಿಸಿದರು. ಸಿ.ಡಿ. ಡಾರ್ಲಿಂಗ್ಟನ್ ಅವರೊಡನೆ ೧೯೪೫ರಲ್ಲಿ ʻಅಟ್ಲಾಸ್ ಆಫ್ ಕಲ್ಟಿವೇಟೆಡ್ ಪ್ಲಾಂಟ್ಸ್ʼ ಎಂಬ ಅತ್ಯಂತ ಪ್ರಬುದ್ಧ ಪರಾಮರ್ಶನ ಗ್ರಂಥ ಬರೆದರು. ಇದು ಈಕೆಗೆ ಜಾಗತಿಕ ಮನ್ನಣೆ ದೊರೆಯುವಂತೆ ಮಾಡಿತು. ಅದೇ ವೇಳೆ ಹೂತೋಟಗಳಲ್ಲಿ ಬೆಳೆಯುವ ಸಂಪಿಗೆ ಕುರಿತು ಸಂಶೋಧನೆ ಮಾಡಿದರು. ಅವು ಮರಗಳಾಗಿರದೆ ಕುಬ್ಜ ಪೊದೆ ಸಸ್ಯಗಳಾಗಿದ್ದವು. ಹಾರ್ಟಿಕಲ್ಚರ್ ಸೊಸೈಟಿ ಈಕೆಯ ಕೊಡುಗೆಯನ್ನು ಸ್ಮರಿಸಿ ಒಂದು ಸಂಪಿಗೆ ಪ್ರಭೇದಕ್ಕೆ ʻಮ್ಯಾಗ್ನೋಲಿಯ ಕೋಬಸ್ ಜಾನಕಿ ಅಮ್ಮಾಳ್ʼ ಎಂದು ಹೆಸರು ಕೊಟ್ಟಿದೆ.

ಮುಂದೆ ಜಾನಕಿ ಅಮ್ಮಾಳ್ ಗೆಣಸು ಮತ್ತು ದತ್ತೂರದ ಬಗ್ಗೆ, ಗುಳ್ಳು ಬದನೆಕಾಯಿಯ ಬಗ್ಗೆ ಸಂಶೋಧನೆ ಮಾಡಿ ತಳಿ ಅಭಿವೃದ್ಧಿ ಮಾಡಿದರು. ಈಶಾನ್ಯ ಹಿಮಾಲಯ ಭಾಗದಲ್ಲಿ ಸಸ್ಯಗಳ ವೈವಿಧ್ಯ ವರ್ಧನೆಗೆ ಅನುಕೂಲಕರ ವಾತಾವರಣವಿರುವುದಾಗಿ ಅಧ್ಯಯನ ಮುಖೇನ ತಿಳಿದುಕೊಂಡರು. ಲಂಡನ್ನಿನಲ್ಲಿ ಆಗ ಎರಡನೇ ಮಹಾಯುದ್ಧದ ಬಿಸಿ ತಾಕಿತ್ತು. ನಿತ್ಯ ಸುತ್ತಮುತ್ತ ಬಾಂಬ್ ದಾಳಿಯನ್ನು ಕಣ್ಣಾರೆ ಕಾಣುತ್ತಿದ್ದರು. ಒಮ್ಮೆ ತಾನು ಉಳಿದುಕೊಂಡ ಮನೆಯೂ ಬಾಂಬ್ ಗಾಸಿಯಾದಾಗ, ಗಾಜಿನ ಚೂರುಗಳನ್ನೆಲ್ಲ ಗುಡಿಸುವುದೇ ಒಂದು ದೊಡ್ಡ ಕೆಲಸವಾಗಿತ್ತು. ಒಮ್ಮೊಮ್ಮೆ ಬಾಂಬಿನ ದಾಳಿಗೆ ಹೆದರಿ ಮಂಚದ ಕೆಳಗೆ ಅಡಗಿಕೊಳ್ಳುತ್ತಿದ್ದುದೂ ಉಂಟು. ಆದರೆ ಈಕೆ ಇದಕ್ಕೆ ಹೆದರಲಿಲ್ಲ.

ಜಾನಕಿ ಅಮ್ಮಾಳ್ ಸಸ್ಯವಿಜ್ಞಾನದಲ್ಲಿ ಮಾಡಿದ ಉನ್ನತ ಪ್ರಯೋಗಗಳು ಆಕೆಯ ಅರ್ಪಣಾ ಮನೋಭಾವ, ಭಾರತದ ಪ್ರಧಾನಿ ನೆಹರೂ ಅವರ ಗಮನಕ್ಕೂ ಬಂದಿತ್ತು. ಆಗ್ಗೆ ಇಂಡಿಯನ್ ಬಟಾನಿಕಲ್ ಸರ್ವೇ ಅನುದಾನವಿಲ್ಲದೆ ಸಂಶೋಧನೆಗಳಿಗೆ ಅಲ್ಲಿ ಹಿನ್ನಡೆಯಾಗಿತ್ತು. ನೆಹರೂ ಅವರು ೧೯೫೭ರಲ್ಲಿ ಜಾನಕಿ ಅಮ್ಮಾಳ್ ಭಾರತಕ್ಕೆ ಮರಳಬೇಕೆಂದೂ, ಈ ಸಂಸ್ಥೆಯ ಚುಕ್ಕಾಣಿ ಹಿಡಿಯಬೇಕೆಂದೂ ಬಯಸಿದರು. ಜಾನಕಿ ಇದಕ್ಕೆ ಒಪ್ಪಿ ಭಾರತಕ್ಕೆ ಮರಳಿದರು. ಈ ಸಂಸ್ಥೆಯ ಪ್ರಯೋಗಾಲಯದ ನಿರ್ದೇಶಕಿಯಾಗಿ ೧೯೫೯ರವರೆಗೆ, ನಿವೃತ್ತಿಯಾಗುವವರೆಗೂ ಈ ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ತಂದರು. ಹೊಸ ಯೋಜನೆಗಳು ಮೊಳೆತವು, ವಿಶೇಷವಾಗಿ ಬುಡಕಟ್ಟು ಜನರ ಸಸ್ಯಜ್ಞಾನ ಸಂಪತ್ತನ್ನು ಬಳಸಿಕೊಂಡು ಔಷಧಿಯ ಸಸ್ಯಗಳ ಸಂಗ್ರಹಿಸುವ ಕಾರ್ಯ ಚಾಲ್ತಿಗೆ ಬಂತು.

ಸಹಜವಾಗಿಯೇ ಜಾನಕಿ ಅಮ್ಮಾಳ್ ಸಲ್ಲಬೇಕಾದ ಗೌರವ, ಪ್ರಶಸ್ತಿಗಳು ಸಂದವು. ಇಂಡಿಯನ್ ನ್ಯಾಶನಲ್ ಸೈನ್ಸ್ ಅಕಾಡೆಮಿ, ಯು.ಕೆ. ಲೀನಿಯನ್ ಸೊಸೈಟಿ, ರಾಯಲ್ ಜಿಯಾಗ್ರಫಿಕಲ್ ಸೊಸೈಟಿ, ಇಂಗ್ಲೆಂಡಿನ ಜೆನೆಟಿಕ್ ಸೊಸೈಟಿ, ಅಮೆರಿಕದ ಜೆನೆಟಿಕ್ ಸೊಸೈಟಿ, ಗೌರವ ಸದಸ್ಯತ್ವ ನೀಡಿದವು. ಹಾಗೆಯೇ ಭಾರತದ ಬಟಾನಿಕಲ್ ಸೊಸೈಟಿಯ ಕಾರ್ಯದರ್ಶಿ ಮತ್ತು ಅಧ್ಯಕ್ಷೆಯೂ ಆದರು. ಇಂಡಿಯನ್ ಅಕಾಡೆಮಿ ಆಪ್ ಸೈನ್ಸ್ನಲ್ಲಿ ಚುನಾಯಿತ ಉಪಾಧ್ಯಕ್ಷೆಯೂ ಆದರು. ಮಿಚಿಗನ್ ವಿಶ್ವವಿದ್ಯಾಲಯ ಎಲ್.ಎಲ್.ಡಿ. ಡಿಗ್ರಿ ನೀಡಿತು. ಇತ್ತ ಭಾರತದಲ್ಲಿ ಬೀರಬಲ್ ಸಾಹ್ನಿ ಪ್ರಶಸ್ತಿ ಮತ್ತು ಭಾರತ ಸರ್ಕಾರದ ʻಪದ್ಮಶ್ರೀʼ ಪ್ರಶಸ್ತಿಗೆ ಜಾನಕಿ ಅಮ್ಮಾಳ್ ಭಾಜನರಾದರು. ಫೆಬ್ರವರಿ ೭, ೧೯೮೪ರಲ್ಲಿ, ೮೬ರ ವಯಸ್ಸಿನಲ್ಲಿ ಆಕೆ ನಿಧನಳಾಗುವವರೆಗೆ ಮದುರವೊಯಲ್ ಬಳಿಯ ಸಸ್ಯವಿಜ್ಞಾನ ಪ್ರಯೋಗಾಲಯದಲ್ಲಿ ಸಂಶೋಧನೆಯಲ್ಲಿ ನಿರತಳಾಗಿದ್ದಳೆಂಬುದು ಆಕೆಯ ಕಾರ್ಯನಿಷ್ಠೆಯ ಸೂಚಕ.

ಜಾನಕಿ ಅಮ್ಮಾಳ್ ಹೆಸರು ಕೇಳಿದಾಗಲೆಲ್ಲ ಮತ್ತೆ ಅದೇ ಪ್ರಶ್ನೆ ಏಳುತ್ತದೆ : ಒಂದು ಜೀವಮಾನದಲ್ಲಿ ವ್ಯಕ್ತಿ ಎಷ್ಟೆಲ್ಲ ಕೆಲಸ ಮಾಡಬಹುದು?

ಟಿ. ಆರ್. ಅನಂತರಾಮು

(ಡಾ. ಟಿ.ಆರ್. ಅನಂತರಾಮು, ನಂ. ೫೩೪,೭೦ನೇಅಡ್ಡರಸ್ತೆ, ೧೪ನೇ ಮುಖ್ಯರಸ್ತೆ, ಕುಮಾರಸ್ವಾಮಿ ಬಡಾವಣೆ ೧ನೇ ಹಂತ, ಬೆಂಗಳೂರು – ೫೬೦ ೧೧೧, ಮೊ: ೯೮೮೬೩ ೫೬೦೮೫.)

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *