ಸೇಫ್ಟಿ ಪಿನ್- ಗಿರಿಜಾ ಶಾಸ್ತ್ರಿ
ಅರವತ್ತು ಸಮೀಪಿಸುತ್ತಿರುವ ಅಕ್ಕ
ಈಗ ಥೇಟ್ ಅಮ್ಮನಂತೆಯೇ ಆಗಿಬಿಟ್ಟಿದ್ದಾಳೆ
ಮೊಗೆ ಮೊಗೆದು ನೀಡುವಾಗಲಂತೂ
ಅವಳದೇ ಛಾಪು ಬಡಿಸಲು ಬಗ್ಗುವಾಗೆಲ್ಲಾ
ಅವಳ ತಾಳಿ ಸರ ತೂಗಾಡುತ್ತದೆ
ಜೊತೆಗೆ ಐದಾರು ಸೇಫ್ಟಿ ಪಿನ್ನುಗಳೂ
ಜಮದಗ್ನಿಯ ಕೈ ಹಿಡಿದವಳು
ಕಲ್ಲಾಗಿ ಎಲ್ಲಮ್ಮನಾಗಲಿಲ್ಲ, ಬೆತ್ತಲೆ ಸೇವೆ ಬೇಡಲಿಲ್ಲ
ಭಕ್ತರು ಭಂಡಾರ ಹಚ್ಚಿ ಹುಟಗಿ ಉಟ್ಟು ಸಾಲು ನಿಲ್ಲಲಿಲ್ಲ
ರೋಷಾವೇಷದ ಅಗ್ನಿಯೊಳಗೆ
ಸುಟ್ಟು ಕರಕಾಗಿ
ಹರಿದ ನೀರಿನೊಳಗೆ ಹರಿದು ಹೋಗಲೂ ಇಲ್ಲ
ನಿಂತೇ ನಿಂತಳು ಹುಲ್ಲಾಗಿ
ಬೆಟ್ಟದಡಿ
ಕಾಲನ ಆವೇಶಕ್ಕೆ ಸಾಕ್ಷಿಯಾಗಿ
ಪಕ್ಕೆಗೆ ರೆಕ್ಕೆ ಕಟ್ಟಿಕೊಂಡು ಅಕ್ಕ
ಹೇಗೆ ಹಾರುತ್ತಿದ್ದಳು ಕಾಲೇಜು ಕಾರಿಡಾರುಗಳಲ್ಲಿ
ವಾರದ ಕೊನೆಯೆಂದರೆ ಏನೋ ಲಗುಬಗೆ
ದಿನವಿಡೀ ಗರಿಗರಿ ಗಂಜಿ ಇಸ್ತ್ರಿ ಮಾಡಿ ಸೀರೆಗೆ
ಹೀಲ್ಡು ಚಪ್ಪಲಿ ಹಾಕಿಯೇ ಅದನ್ನುಟ್ಟು
ಕಣ್ಣಿಗೆ ಬೇರೆ ದೊಡ್ಡ ತಂಪು ಕನ್ನಡಕ ತೊಟ್ಟು
ಗರಿಗೆದರಿ ಹಾರಿದಳೆಂದರೆ ಬೀದಿಗೆ
ಪಡ್ಡೆಹುಡುಗರ ಪಡೆಯೇ ಹಿಂದುಮುಂದೆ
ಧಿಗ್ಗಡ ದಿಮ್ಮಿಯೆಂದು
ಎಲ್ಲ ಬೈದದ್ದು ಎಷ್ಟು ಸಲ
ಎರೆದುಕೊಂಡ ತಲೆಗೂದಲ ರಾಶಿ ಬೆನ್ನಮೇಲೆ ಹರಿಯಬಿಟ್ಟು
ನೀಳ ಬೆರಳುಗಳನ್ನು ಮೃದುವಾಗಿ ಮೇಜಿನ ಮೇಲಿಟ್ಟು
ತುಸುವೇ ಬಗ್ಗಿ ಹಗೂರ ಉಗುರ ಸಮ ಕತ್ತರಿಸಿ
ನಯವಾಗಿ ಬಣ್ಣ ಬಳಿದು
‘ಉಫ್’ ಊದುತ್ತಾ ಅದನ್ನೇ ನೋಡುತ್ತಾ ಪ್ರೀತಿಯಿಂದ
ಕೂರುವುದೆಂದರೆ ಅವಳಿಗೆ ಎಷ್ಟು ಇಷ್ಟ.
ಮನೆಗೆ ಟೂಥ್ ಬ್ರಷ್ ಬಂದದ್ದೇ ಅವಳಿಂದಾಗಿ
ಎರೆಡೆರೆಡು ಸಲ ಕಾಲ್ಗೇಟ್ ಉಜ್ಜಿ
ಕನ್ನಡಿಯಲ್ಲಿ ಹಲ್ಲು ಫಳ ಫಳಿಸಿ ನಿಲ್ಲುವಾಗ
ದಿಮಾಕಿನವಳೆಂದು ಅಮ್ಮ ಬೈದದ್ದು
ಎಂದೂ ಕಿವಿಗೆ ಹಾಕಿಕೊಂಡವಳೇ ಅಲ್ಲ.
ಈಗ ಅರವತ್ತು ಸಮೀಪಿಸುತ್ತಿರುವ ಅಕ್ಕ
ಅಮ್ಮನಂತೇ ಆಗಿಬಿಟ್ಟಿದ್ದಾಳೆ
ಮೂವತ್ತೈದು ಶಿಶಿರ ಕಂಡ ದಾಂಪತ್ಯ
ಈಗಲೂ ತೂಗುತ್ತಿದೆ ಅವಳ ತಾಳಿಸರದಲ್ಲಿ
ಐದೋ ಆರೋ ಸೇಫ್ಟಿ ಪಿನ್ನುಗಳು
ಎಲ್ಲ ಜಂಗು ಹಿಡಿದವುಗಳು
ಗಿರಿಜಾ ಶಾಸ್ತ್ರಿ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.