ಕವನ ಪವನ / ಸೆಲ್ಫಿ – ಅನು : ರೋಹಿಣಿ ಸತ್ಯ 

ಸೆಲ್ಫಿ 

ಯುಗಯುಗಗಳಿಂದ ಈ ದೇಶವು ನಿನಗಾಗಿಯೇ ಉಸಿರಾಡಿದೆ
ನಿನ್ನೆದೆಯ ಬಾನಿನಲ್ಲಿ ಬೆಳದಿಂಗಳನ್ನರಳಿಸಲೆಂದು
ಕೋಮಲ ಕೈಗಳಿಗೆ ಕಾಮನಬಿಲ್ಲನ್ನು ನೀಡಲೆಂದು
ಮೃದು ಪಾದಗಳಡಿಯಲ್ಲಿ ಹಸಿರ ಹಾದಿಯನ್ನು ಹರವಲೆಂದು
ನೀಲ ನಯನಗಳಲ್ಲಿ ಚಿಟ್ಟೆಗಳನ್ನು ಮೂಡಿಸಲೆಂದು
ಹಾಲ್ಗೆನ್ನೆಗಳ ತುಂಬಾ ಅಮೃತವ ತುಂಬುವ ಸಲುವಾಗಿ ಕನಸುಗಳ ಕಂಡಿದೆಶತಶತಾಬ್ದಗಳಿಂದಲೂ ಈ ದೇಶವು ಎಂದೆಂದಿಗೂ ನಿನ್ನೊಂದಿಗೇ ನಿಂತಿದೆ
ಮುಷ್ಠಿ ಬಿಗಿಹಿಡಿದು ಎದುರಿಸಿನಿಂತಾಗಲು
ಕೋಟೆಕೊತ್ತಲಗಳಮೇಲೆ ಅಷ್ಟೆತ್ತರದ ಪತಾಕೆಯಾಗಿ ಹಾರಿದಾಗಲು
ತುಳಿತಕ್ಕೊಳಗಾದಾಗ ಧಿಕ್ಕಾರದ ಖಡ್ಗವನ್ನು ಝಳಿಪಿಸಿದಾಗಲೂ
ಸ್ವೇಚ್ಛೆಗಾಗಿ ಅಗ್ನಿಜ್ವಾಲೆಯಾಗಿ ಕೆರಳಿದಾಗಲೂ
ಜ್ಞಾನ ಸಮುದ್ರಕ್ಕಾಗಿ ರಕ್ತನದಿಯಾಗಿ ಹರಿದಾಗಲೂ
ಈ ದೇಶವು ನಿನ್ನೊಂದಿಗೆ ಹೆಜ್ಜೆ ಹಾಕಿದೆದಶದಶಾಬ್ದಗಳಿಂದ  ಈ ದೇಶವು ನಿನ್ನೆಡೆಗೆ  ಸಂಭ್ರಮದಿಂದ ನೋಡುತ್ತಿದೆ
ಕೈಗೆ ಕಿವಿಗೆ ನಡುವೆ ಹೊಸ ಅಂಗವನ್ನು ಮೊಳೆಯಿಸಿದಾಗ
ಸಿಟಿಜನ್ ನಿಂದ ನೆಟಿಜೆನ್ ಆಗಿ ಬದಲಾಗಿ ವೆಬ್ ಸಂಚಾರ ಮಾಡುವಾಗ
ಮೇಲ್, ಟ್ವಿಟ್ಟರ್, ಚಾಟ್ ಗಳ  ರೆಕ್ಕೆಗಳನ್ನು ಧರಿಸುತ್ತಿರುವಾಗ
ಎಲ್ಲೆಲ್ಲಿಯ ಲೋಕಗಳನ್ನೋ  ಸ್ಕೈಪ್ ನಲ್ಲಿ ಬೆಸೆಯುವಾಗ
ಯಾವುದೋ ಎದೆಯಾಳವನ್ನು ಫೇಸ್ ಬುಕ್ ನಲ್ಲಿ ಸೇಫ್ ಆಗಿ ಸವರುತ್ತಿರುವಾಗ
ಟಚ್ ಸ್ಕ್ರೀನ್ ಮೇಲೆ ಗ್ರಾಫಿಕಲ್ ವರ್ಚುವಲ್ ಲೋಕವನ್ನ ಸೃಷ್ಠಿಸುತ್ತಿರುವಾಗ
ನಿನ್ನ ಚೇಷ್ಟೆಗಳನ್ನ ಡೀಕೋಡ್ ಮಾಡುವಸಲುವಾಗಿ

ಈ ದೇಶ ಅಚ್ಚರಿಯಿಂದ ನಿನ್ನನ್ನೇ  ನೋಡಿದೆ

ಈ ಕ್ಷಣದಿ ಈ ದೇಶವು ನಿನ್ನೆಡೆಗೇ ಆಸೆಯಿಂದ ನೋಡುತ್ತಿದೆ
ಛಿದ್ರಗೊಂಡ ಆಕಾಶವನ್ನು ಹೊಲಿಯುವೆಯೆಂದು
ಮುಕ್ಕಾದ  ಗಾಳಿ ಪೊರೆಗಳನ್ನು ಕಸಿಮಾಡುವೆಯೆಂದು
ಬಿರುಕು ಬಿಟ್ಟ ಭೂಮಿಗೆ ವರ್ಷ ಲೇಪನವನ್ನದ್ದುತ್ತೀಯೆಂದು
ಶಿಶಿರವಾದ ವಸಂತಕ್ಕೆ ಕೋಗಿಲೆಯ ಇಂಪನ್ನು ತರುವೆಯೆಂದು
ಶುಷ್ಕಗೊಂಡ ದೇಹಗಳಿಗೆ ಸಂಜೀವಿನಿಯಾಗುತ್ತೀಯೆಂದು
ಅವಸಾನದಶೆಯಲ್ಲಿರುವ ಜೀವಗಳನ್ನು ಅಂಗೈಯೊಡ್ಡಿ ಕಾಪಿಡುವೆಯೆಂದು
ಮಣ್ಣ ಭಾಷೆಯನ್ನು  ಮನುಷ್ಯನ ಘೋಷೆಯನ್ನು ಎದೆಯಲ್ಲಿರಿಸುತ್ತೀಯೆಂದು
ಏನೋ ಮಾಡುವೆಯೆಂದು
ಯಾವುದೊ ಭೂತಲ ಸ್ವರ್ಗದ ಕಣಿವೆಗಳಿಗೆ ಕರೆದೊಯ್ಯುವೆಯೆಂದು
ಈ ದೇಶ ಅಭಿಮಾನದಿಂದ  ನಿನ್ನನ್ನು ನೋಡುತ್ತಿದೆ
ನೀನು ಮಾತ್ರ ತನಗೆ ದಿಕ್ಕೆಂದು ನಂಬುತ್ತಿದೆ
ಈ ದೇಶ ನಿನ್ನ ಅಂಗೈಯಲ್ಲಿ ತನ್ನ ಭಾಗ್ಯರೇಖೆಯನ್ನು ಚಿತ್ರಿಸಿಕೊಳ್ಳುತ್ತಿದೆ
ನಿನ್ನ ನಡೆಗಳಲ್ಲಿ ತನ್ನ ‘ಸೆಲ್ಫಿ’ಯನ್ನು  ತಾನು ನೋಡಿಕೊಳ್ಳುತ್ತಿದೆ!

ತೆಲುಗು ಮೂಲ : ಐನಂಪೂಡಿ ಶ್ರೀಲಕ್ಷ್ಮಿ 
ಅನುವಾದ : ರೋಹಿಣಿ ಸತ್ಯ 

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *