ಸುಮುಹೂರ್ತ – ಸರ್ವಮಂಗಳಾ

ಆಗ ಅದೇ ಸತ್ಯ
ನಿನ್ನ ಕಣ್ಣಂಕೆಯಲ್ಲಿ ಇದ್ದಾಗ
ನಾನು ಸೊನ್ನೆ ಎಂದೇ
ಲೋಕ ಕಲಿಸಿದ್ದು – ನನಗೆ ಅನಿಸಿದ್ದು
ನಿನ್ನ ಮುಂದೆ ನಾನು
ನನ್ನ ಮನೆ, ಕೂಸು, ಕುನ್ನಿಗಳೆಲ್ಲಾ
ಒಂ. . .ದೊಂ. . .ದೇ
ಸೊನ್ನೆ ಪೇರಿಸಿ
ಬ್ಯಾಂಕ್ ಬ್ಯಾಲೆನ್ಸ್ ಬೆಳೆಸಿದ ಭಾವ
ಧನ್ಯ – ಜೀವ !

ಬೆನ್ನು ತೋರಿಸಿದ್ದು
ನೀನೋ… ನಾನೋ…
ಘಟಿಸಿಹೋಯಿತು ಆಕಸ್ಮಿಕ
ಆಹ್ !
ಆ ಘಳಿಗೆ ತಂದ ಆಘಾತ. . .
ಆಹಾ!
ಹೆಬ್ಬಂಡೆಗೆ ಎದೆಯೊಡ್ಡಿ
ನಿಂತ ಸುಮುಹೂರ್ತ.
ಬ್ರಹ್ಮಾಂಡ ಪಿಂಡ ಸಿಡಿದು
ಜೀವಸೆಲೆಯೊಡೆದು
ಅಸ್ಮಿತೆಯ ಹಮ್ಮಿರದ ನಾನು,
ನನ್ನ ಸಾರಿನ ಸೌಟು,
ಅಂಗಳದ ತುಳಸಿ
ಹಿತ್ತಲಿನ ಬಾಳೆ, ಬಳ್ಳಿಗಳೆಲ್ಲ
ಅಂಕೆ ಮೀರಿ, ಅಂಕಿ ಹಾರಿ
ಸೊನ್ನೆಗಳೆಲ್ಲ
ಈಗ ತಮ್ಮಷ್ಟಕ್ಕೆ ತಾವು
ನಾನು, ನೀನು
ಛೇದಿಸಲಾಗದ ಪೂರ್ಣಾಂಕ

ಸರ್ವಮಂಗಳಾ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

One thought on “ಸುಮುಹೂರ್ತ – ಸರ್ವಮಂಗಳಾ

  • August 10, 2018 at 2:20 am
    Permalink

    ಸುಮೂಹೂರ್ಥ ಚಂದ ಕವಿತೆ ಮ್ಯಾಡಂ

    Reply

Leave a Reply

Your email address will not be published. Required fields are marked *