ಸುದ್ದಿಜಗತ್ತಿನ ಅಪೂರ್ವ ಮಹಿಳೆ ಕ್ರಿಶ್ಚಿಯಾನ್ ಅಮಾನ್ಪುರ್ : ಜ್ಯೋತಿ ಇರ್ವತ್ತೂರು
ಹಾದಿ ಇಲ್ಲದಿರುವೆಡೆ ಅದನ್ನು ರೂಪಿಸಿಕೊಂಡ, ಮೆಟ್ಟಿಲು ಇಲ್ಲದಿರುವೆಡೆ ಅವನ್ನು ಕಟ್ಟಿಕೊಂಡ ಪತ್ರಕರ್ತೆ ಕ್ರಿಶ್ಚಿಯಾನ್ ಅಮಾನ್ಪುರ್ ಅವರ ಸಾಧನೆ ಎಲ್ಲರಿಗೂ ಸ್ಫೂರ್ತಿದಾಯಕ. ಜಾಗತಿಕ ವಿದ್ಯಮಾನಗಳ ಬಗ್ಗೆ ಅವರ ವಿಶ್ಲೇಷಣೆಗೆ ಎಲ್ಲಿಲ್ಲದ ಮಾನ್ಯತೆ ಸಿಗುತ್ತದೆ.
ಸುದ್ದಿ ಜಗತ್ತಿನಲ್ಲಿ ಮಹಿಳೆಯ ಪಾತ್ರ ಕುರಿತು ಚರ್ಚಿಸುವಾಗ ಮನನವಾಗುವ ಸಂಗತಿಯೆಂದರೆ ಪತ್ರಕರ್ತೆಯರ ಅನುಭವ ಮತ್ತು ಸ್ಥಿತಿಗತಿ ಎಲ್ಲ ದೇಶಗಳಲ್ಲೂ ಹೆಚ್ಚುಕಡಿಮೆ ಒಂದೇ ರೀತಿ ಇವೆ ಎನ್ನುವ ಸತ್ಯ. ಮುಂದುವರೆದ ದೇಶಗಳಲ್ಲೂ ಕೂಡ ನೀತಿನಿರ್ಧಾರಕ ಸ್ಥಾನಗಳಲ್ಲಿ ಅವಳನ್ನು ಕೂರಿಸಲು, ಅವಕಾಶಗಳನ್ನು ಕೊಡಲು ಹಿಂದೆಮುಂದೆ ನೋಡುವ ಮನಸ್ಥಿತಿ ಎಲ್ಲ ಕಡೆ ಕಂಡುಬರುತ್ತದೆ.
ಒಂದು ಸಮಾಜ ಆರೋಗ್ಯಕರವಾಗಿದೆ ಎನ್ನುವುದಕ್ಕೆ ಮಾನದಂಡವೆಂದರೆ, ಸರ್ಕಾರ, ಉದ್ಯಮ, ಮಾಧ್ಯಮ ಸೇರಿ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯೂ ನಿರ್ಧಾರ ಕೈಗೊಳ್ಳುವ ಸ್ಥಾನದಲ್ಲಿ ಇರಬೇಕು. ಏಕೆಂದರೆ ಯಾವ ನಿರ್ಧಾರದಲ್ಲೂ ಅವಳ ದೃಷ್ಟಿಕೋನ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆದರೆ ಜನಸಂಖ್ಯೆಯಲ್ಲಿ ಅರ್ಧದಷ್ಟು ಇರುವ ಮಹಿಳೆಯರು ವಿಧಾನಸಭೆಯಲ್ಲಿ ಇರುವುದು ಬೆರಳೆಣಿಕೆಯಷ್ಟು ಮಾತ್ರ.
ಮಾಧ್ಯಮದಲ್ಲಿ ಇದು ನಿಚ್ಚಳವಾಗಿ ಕಾಣುತ್ತದೆ. ಈ ಕ್ಷೇತ್ರದಲ್ಲಿ ಮಹಿಳೆಯರ ಸಬಲೀಕರಣ ಏಕೆ ಆಗಲಿಲ್ಲ ಎನ್ನುವುದು ನೋವಿನ ವಿಚಾರ. ಲಾಬಿ, ಬಿಸಿನೆಸ್ ಮತ್ತು ಇನ್ನೂ ಅನೇಕ ಕಾರಣಗಳ ಎದುರು ಮಹಿಳೆ ಇಲ್ಲಿ ಹೋರಾಟವನ್ನೇ ಮಾಡಬೇಕು. ವೃತ್ತಿ ಬದುಕಿನಲ್ಲಿ ತಿರುವು ತರಬಹುದು ಅನ್ನುವಂಥ ಅವಕಾಶ ಹಲವು ಕಾರಣಗಳಿಂದ ನಿರಾಶೆ ಹುಟ್ಟಿಸಿ, ಕಟ್ಟಿಕೊಂಡು ಹೋದ ಕನಸುಗಳ ಜೊತೆ ನಿರ್ಗಮಿಸಿದ ನನ್ನ ಅನುಭವವೂ ಇದಕ್ಕೆ ಹೊರತಲ್ಲ. ಹೆಸರಿಗೆ ಮಾತ್ರ ನೀಡಿದ್ದೇವೆ ಎನ್ನುವ ಸ್ವಾತಂತ್ರ್ಯದಿಂದ ಏನನ್ನೂ ಸಾಧಿಸಲು ಆಗುವುದಿಲ್ಲ ಎನ್ನುವುದು ಕಹಿಸತ್ಯ.
ಅದಿರಲಿ, ಮಾಧ್ಯಮ ಜಗತ್ತಿನಲ್ಲಿ ಮಹಿಳೆಯರ ಸಾಮರ್ಥ್ಯದ ಬಗ್ಗೆ ಸಂಶಯ ಪಡುವುದು ಒಂದು ಜಾಗತಿಕ ಮನಸ್ಥಿತಿ. ಯಾವ ದೇಶದ ಮಾಧ್ಯಮ ಚರಿತ್ರೆ ನೋಡಿದರೂ ಇದು ಅರಿವಿಗೆ ಬರುತ್ತದೆ. ಅದರ ವಿರುದ್ಧ ಪತ್ರಕರ್ತೆಯರು ನಡೆಸಿರುವ ಹೋರಾಟವೂ ಆ ಚರಿತ್ರೆಯ ಭಾಗವಾಗಿರುತ್ತದೆ. ಈ ಅಂಶದಲ್ಲಿ ಗಮನ ಸೆಳೆಯುವ ಪತ್ರಕರ್ತೆಯೆಂದರೆ ಕ್ರಿಶ್ಚಿಯಾನ್ ಅಮಾನ್ಪುರ್.
ಕ್ರಿಶ್ಚಿಯಾನ್ ಅಮಾನ್ಪುರ್ ಅಂತರರಾಷ್ಟ್ರೀಯ ಸುದ್ದಿಲೋಕದಲ್ಲಿ ಚಿರಪರಿಚಿತ ಹೆಸರು. ಪತ್ರಕರ್ತೆಗೆ ಬೇಕಾದ ಸೂಕ್ಷ್ಮತೆ, ಬದ್ಧತೆ, ಸಂಶೋಧನಾ ಮನೋಭಾವ, ನ್ಯಾಯದ ಪರ ನಿಲ್ಲುವ ಗಟ್ಟಿತನ ಎಲ್ಲವೂ ಅವರಲ್ಲಿದೆ. ವೃತ್ತಿಯನ್ನೇ ಉಸಿರಾಡುವ ಅವರು ವಿಷಯವನ್ನು ವಿಶ್ಲೇಷಿಸುವ, ಕಾರ್ಯಕ್ರಮವನ್ನು ನಡೆಸಿಕೊಡುವ ರೀತಿ ಎಲ್ಲರ ಮೆಚ್ಚುಗೆ ಪಡೆದಿದೆ. ಆದರೆ ಅವರು ಈ ಎತ್ತರಕ್ಕೆ ಏರಿರುವುದು ಹೂವಿನ ಹಾದಿಯಲ್ಲಿ ನಡೆದುಕೊಂಡೇನಲ್ಲ. ಹಲವು ವರ್ಷಗಳ ಹಿಂದೆ, ಎಲ್ಲ ಅರ್ಹತೆಗಳಿದ್ದೂ ಕ್ರಿಶ್ಚಿಯಾನ್‍ಗೆ ಸಿಎನ್‍ಎನ್‍ನಲ್ಲಿ ನೇರಪ್ರಸಾರದ ಅವಕಾಶ ನಿರಾಕರಿಸಲಾಗಿತ್ತು. ಆಕೆ ಆಂಗ್ಲ ಭಾಷೆಯನ್ನು ಮಾತನಾಡುವ ರೀತಿ ಮತ್ತು ಆಕೆಯ ಕಪ್ಪು ಕೂದಲು- ಇವುಗಳಿಂದಲೇ ಅವಕಾಶಗಳನ್ನು ಕೊಟ್ಟಿರಲಿಲ್ಲ. ಆದರೆ ಅದರಿಂದ ನೋವಾದರೂ ಆಕೆ ಕುಗ್ಗಲಿಲ್ಲ. ಪತ್ರಿಕೋದ್ಯಮ ಕುರಿತು ಅವರಿಗಿರುವ ಪ್ರೀತಿ ಮತ್ತು ಸ್ವಾಭಾವಿಕ ಛಲ ಇವುಗಳಿಂದಾಗಿ ಹಿನ್ನೆಲೆ, ಮಾತನಾಡುವ ರೀತಿ, ಬಾಹ್ಯ ರೂಪ ಇವೆಲ್ಲ ಅಪ್ರಸ್ತುತವೆನಿಸಿಬಿಟ್ಟವು.
1990 ರಲ್ಲಿ ಬೋಸ್ನಿಯಾ ವಿವಾದ ಕುರಿತು ಕ್ರಿಶ್ಚಿಯಾನ್ ಅಮಾನ್ಪುರ್ ಮಾಡಿದ ಐತಿಹಾಸಿಕ ವರದಿಗಾರಿಕೆಯ ಯೋಗ್ಯತೆಯ ಮುಂದೆ ಅವಳ ಬಗ್ಗೆ ಸಂಶಯಪಟ್ಟ ಮನಸ್ಸುಗಳೆಲ್ಲ ಸೋಲಬೇಕಾಯಿತು. ಜೀವಕ್ಕೆ ಅಪಾಯವಿದ್ದರೂ ಲೆಕ್ಕಿಸದೆ ಅವರು ಇರಾನ್, ಅಫಘಾನಿಸ್ತಾನ, ಸೊಮಾಲಿಯ ಮುಂತಾದ ಕಡೆ ಓಡಾಡಿ ಅಲ್ಲಿನ ಪರಿಸ್ಥಿತಿಗಳನ್ನು ಜಗತ್ತಿಗೆ ಪರಿಚಯಿಸಿದರು. ಇಂದು ಅವರೊಬ್ಬ ಜಾಗತಿಕ ವರದಿಗಾರ್ತಿ. ಇರಾನಿ ಮುಸ್ಲಿಮ್ ತಂದೆ ಮತ್ತು ಬ್ರಿಟಿಷ್ ಕ್ರೈಸ್ತ ತಾಯಿ ಇವರಿಗೆ ಹುಟ್ಟಿದ ಕ್ರಿಶ್ಚಿಯಾನ್, ಅಮೆರಿಕದ ರಾಜತಾಂತ್ರಿಕ ಸೇವೆಯಲ್ಲಿದ್ದ ಜಾಮಿ ರೂಬಿನ್ ಅವರನ್ನು ಮದುವೆಯಾಗಿದ್ದರು. ಈಗ ಲಂಡನ್‍ನಲ್ಲಿ ನೆಲೆಸಿ ಸಿಎನ್‍ಎನ್ ಮತ್ತು ಎಬಿಸಿ ಎರಡಕ್ಕೂ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದಾರೆ. “ವರದಿಗಳು ಸತ್ಯವಾಗಿರಬೇಕು. ಸತ್ಯದ ಪ್ರತಿಫಲನವಾಗಿರಬೇಕು. ಜನರ ನಡುವೆ ನಿಂತು ಸತ್ಯವನ್ನು ಅರಿಯುವ ಪ್ರಯತ್ನ ಮಾಡಬೇಕು. ನ್ಯಾಯದ ಪರ ನಿಲ್ಲುವ, ಧ್ವನಿಯೆತ್ತುವ ಸಂದರ್ಭದಲ್ಲಿ ನಿರ್ಲಿಪ್ತರಾಗಲು ಸಾಧ್ಯವಿಲ್ಲ” ಎನ್ನುವ ಅವರ ದೃಢನಿಲುವಿನ ಮಾತುಗಳನ್ನು ಕೇಳುವಾಗ ಪತ್ರಕರ್ತೆಯರಿಗೆ ವೃತ್ತಿ ಕುರಿತು ಪ್ರೀತಿ ಹೆಚ್ಚುತ್ತದೆ.
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.