ಸುಖದ ಹುವ್ವು – ಡಾ. ಎಚ್. ಎಸ್. ಅನುಪಮಾ
ಜಿಂಕೆ ಹೆಣ್ಣಿಗೆ ಕಣ್ಣು ತುರಿಸಿದರೆ
ಗಂಡಿನ ಕೊಂಬುತುದಿ ತಾಗಿಸಿ ಕೆರೆದುಕೊಳುವುದು
ಪುಕ್ಕ ಉದುರಿದ ಹೆಣ್ಣು ಮಂಗಟೆ ಹಕ್ಕಿಗೆ
ತುತ್ತರಸಿ ಉಣಿಸಿ ಗಂಡು ಪೊರೆವುದು
ಕಪ್ಪೆ ಹೆಣ್ಣು ಉದುರಿಸಿದ ಫಲಿತ ಮೊಟ್ಟೆಗಳ
ಹಿಂಗಾಲ ನಡುವಿಟ್ಟು ಗಂಡು ಪೊರೆವುದು
ಕುತ್ತಿಗೆ ಕಚ್ಚಿ ಹಿಡಿದ ಗಂಡುಬೆಕ್ಕ ಹೆದರಿಸುತ್ತಲೇ
ಅರಚುತ್ತ ಹೆಣ್ಣುಬೆಕ್ಕು ಗರ್ಭ ಕಟ್ಟುವುದು
ಮಳೆಬಿಸಿಲು ಹದವಾಗಿ ಬೆರೆತರಷ್ಟೆ ಕಾಮನ ಬಿಲ್ಲು.
ಭೀತಿಯಿರುವಲ್ಲಿ ಸುಖದ ಹುವ್ವು ಹೇಗೆ ಅರಳುವುದು?
ಎಷ್ಟು ಹುಡುಗಿಯರ ನೆತ್ತರ ಬಸಿದಿದೆಯೋ ಈ ನೆಲವು
ಅನು, ದಾಸವಾಳ ಇಲ್ಲಿನಷ್ಟು ಕೆಂಪಾಗಿ ಇನ್ನೆಲ್ಲೂ ಅರಳದು..

ಡಾ. ಎಚ್. ಎಸ್. ಅನುಪಮಾ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.