ಸಿನಿ ಸಂಗಾತಿ/ ಹೆಣ್ಣುಮಕ್ಕಳ ಬದುಕು ಬದಲಿಸಿದ ಕಥೆ ‘ಹೆಲ್ಲಾರೋ’ – ಮಂಜುಳಾ ಪ್ರೇಮಕುಮಾರ್
ಮಹಿಳೆಯರ ನೆಮ್ಮದಿಯನ್ನು ಕಸಿದುಕೊಳ್ಳುವ ಪುರುಷ ವ್ಯವಸ್ಥೆಯ ದರ್ಪವನ್ನು ಹೇಳುತ್ತಲೇ ಅದರಿಂದ ಬಿಡಿಸಿಕೊಂಡು ಹೊರಬರುವ ಕೌಶಲವನ್ನೂ ಹೇಳುವ ಕಥೆ ‘ಹೆಲ್ಲಾರೋ‘. ಗುಜರಾತಿನ ಲೋಕ ಸಂಗೀತ, ಗರ್ಭಾ ನೃತ್ಯವನ್ನೇ ಚಿತ್ರದಲ್ಲಿ ವಿಜೃಂಭಿಸಲಾಗಿದೆ. ಪುರುಷರ ಮೂಢನಂಬಿಕೆಗಳಿಗೆ, ದೌರ್ಜನ್ಯ, ದಬ್ಬಾಳಿಕೆ, ಅಹಂಕಾರಕ್ಕೆ ಉತ್ತರಿಸುವಂತೆ ನರ್ತಿಸ ತೊಡಗುವ ಹೆಣ್ಣುಮಕ್ಕಳ ಅದುಮಿಟ್ಟ ಹತಾಶೆ, ಬೇಸರ, ದುಃಖ ಎಲ್ಲವೂ ಮಳೆಯಲ್ಲಿ ಕೊಚ್ಚಿ ಹೋಗುವಂತೆ ಡೋಲು ಶಬ್ದ ಮಾಡುತ್ತದೆ, ಗೆಜ್ಜೆ ಕಾಲುಗಳು ಸಂಭ್ರಮದಿಂದ ನರ್ತಿಸುತ್ತವೆ. ಅಭಿಷೇಕ್ ಶಾ ನಿರ್ದೇಶನದ ಮೊದಲ ಸಿನಿಮಾ ‘ಹೆಲ್ಲೋರ’ ಗುಜರಾತಿ ಸಿನೆಮಾ ರಂಗದಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಸಿನಿಮಾ.
ಜಾತೀಯತೆ, ಮೂಢನಂಬಿಕೆ, ಪುರುಷ ಪ್ರಧಾನ ವ್ಯವಸ್ಥೆಯ ಕಪಿಮುಷ್ಠಿಯಲ್ಲಿ ನಲುಗಿ, ಹತಾಶಗೊಂಡ ಹೆಣ್ಣುಮಕ್ಕಳು ಮತ್ತು ಮೇಲ್ಜಾತಿಯವರ ಕ್ರೌರ್ಯಕ್ಕೆ ಬಲಿಯಾಗಿ
ಬದುಕು ಕಳೆದುಕೊಂಡ ಡೋಲು ಬಾರಿಸುವವನೊಬ್ಬ ಆ ಹೆಣ್ಣುಮಕ್ಕಳ ಬದುಕು ಬದಲಿಸಿದ ಕಥೆ ಹೇಳುವ ಗುಜರಾತಿ ಸಿನಿಮಾ ‘ಹೆಲ್ಲಾರೋ’ (ಭಾವ ಸ್ಫೋಟ) ನಿರ್ದೇಶಕರು ಅಭಿಷೇಕ್ ಶಾ. ಗುಜರಾತಿನ ಕಚ್ ಪ್ರಾಂತ್ಯದ, ರಣ್ ಮರುಭೂಮಿಯಲ್ಲಿರುವ ವಜ್ರಾಣಿ (ಸಿನಿಮಾದಲ್ಲಿ ಸಮರಪುರ) ಎಂಬ ಹಳ್ಳಿಯಲ್ಲಿ 1975 ರಲ್ಲಿ ನಡೆದ ಸತ್ಯಕಥೆಯನ್ನು ಆಧರಿಸಿ ನಿರ್ಮಿಸಿರುವ ಸಿನಿಮಾ. ಅಭಿಷೇಕ್ ಶಾ ಅವರ ನಿರ್ದೇಶನದ ಮೊದಲ ಸಿನಿಮಾ, ಮತ್ತು ಗುಜರಾತಿ ಸಿನೆಮಾ ರಂಗದಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಸಿನಿಮಾ. ಅಲ್ಲದೇ, ಅಲ್ಲಿ ಗರ್ಭಾ ನೃತ್ಯಮಾಡಿರುವ ಹದಿಮೂರು ಜನ ಮಹಿಳೆಯರಿಗೂ ವಿಶೇಷ ಜ್ಯೂರಿ ಪ್ರಶಸ್ತಿಯನ್ನು ತಂದುಕೊಟ್ಟಿದೆ . 2019 ರ ಈ ಸಿನಿಮಾ ಮೊದಲು ಪ್ರದರ್ಶನಗೊಂಡಿದ್ದು ಗೋವಾದಲ್ಲಿ ನಡೆದ 50 ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ‘ಇಂಡಿಯನ್ ಪನೋರಮ’ ವಿಭಾಗದ ಉದ್ಘಾಟನಾ ಸಿನಿಮಾ ಆಗಿ.
ದೇಶದಲ್ಲಿ ತುರ್ತುಪರಿಸ್ಥಿತಿ ಹೇರಲ್ಪಟ್ಟಿದೆ, ಗುಜರಾತಿನ ಕಚ್ ಪ್ರದೇಶದ ಸೇರಿದಂತೆ ಅನೇಕ ಕಡೆ ಮೂರು ವರ್ಷಗಳಿಂದ ಮಳೆ ಬಂದಿಲ್ಲ, ಅದಕ್ಕೂ ಕಾರಣ ಹೆಣ್ಣೊಬ್ಬಳು ದೇಶವನ್ನಾಳುತ್ತಿರುವುದು ಎಂಬ ನಂಬಿಕೆ ಈ ಹಳ್ಳಿಯ ಪುರುಷರಲ್ಲಿ. ಇದು ಸಮರಪುರ, ಕಚ್ ಪ್ರಾಂತ್ಯದ ರಣ್ ಮರುಭೂಮಿಯಲ್ಲಿರುವ ಪುಟ್ಟ ಹಳ್ಳಿ, ಪುರುಷರದ್ದೇ ಕಾರುಬಾರು, ತಮ್ಮದೇ ಹಳ್ಳಿಯ, ತಮ್ಮದೇ ಕುಟುಂಬದ ಹೆಣ್ಣುಮಕ್ಕಳ ಮೇಲೆ ತಾವೇ ಹೇರಿರುವ ಮೂಢನಂಬಿಕೆಯ ಕಟ್ಟುಪಾಡುಗಳು. ಮುಸುಕು ಹಾಕದೆ ಹೊಸಿಲು ದಾಟುವಂತಿಲ್ಲ,
ಸಶಬ್ದವಾಗಿ ನಡೆಯುವಂತಿಲ್ಲ, ಕಸೂತಿ ಹಾಕುವಂತಿಲ್ಲ, ಅನ್ಯ ಪುರುಷರನ್ನ ನೋಡುವಂತಿಲ್ಲ, ಮಾತಾಡುವಂತಿಲ್ಲ, ಪ್ರಶ್ನೆ ಕೇಳುವಂತಿಲ್ಲ, ಸಾಂಪ್ರದಾಯಿಕ ಲೋಕನೃತ್ಯ
ಮಾಡುವಂತಿಲ್ಲ, ಗ್ರಾಮದೇವತೆಯಾದ ದುರ್ಗೆಯನ್ನು ಪೂಜಿಸುವಂತಿಲ್ಲ. ಇನ್ನು ವಿಧವೆಯರಂತೂ ಗಂಡ ಸತ್ತ ಒಂದೂವರೆ ವರ್ಷದವರೆಗೆ ಮನೆಯಿಂದ ಹೊರಗೆ ಬರುವಂತಿಲ್ಲ, ಬಣ್ಣದ ಬಟ್ಟೆ ತೊಡುವಂತಿಲ್ಲ, ಬೇರೆ ಹೆಣ್ಣುಮಕ್ಕಳು ಅವರನ್ನು ಮಾತಾಡಿಸುವಂತಿಲ್ಲ.
ಪ್ರತಿದಿನ ಸಂಜೆ ದುರ್ಗೆಯನ್ನು ಪೂಜಿಸಿ, ನೃತ್ಯ ಮಾಡುವವರು ಗಂಡಸರು. ಅವರ ನರ್ತಿಸುವಾಗ ಹೆಂಗಸರು ಉಪವಾಸವಿರಬೇಕು. ಹೆಣ್ಣುಮಕ್ಕಳು ನರ್ತಿಸಿದರೆ ದುರ್ಗೆ ಮುನಿಸಿಕೊಳ್ಳುತ್ತಾಳೆ, ಮಳೆ ಬರುವುದಿಲ್ಲ, ಹಳ್ಳಿಗೆ ಒಳಿತಾಗುವುದಿಲ್ಲವೆಂಬ ನಂಬಿಕೆ. ಹೆಣ್ಣು ದೇವರನ್ನು ಉನ್ನತ ಸ್ಥಾನದಲ್ಲಿಟ್ಟು ಪೂಜಿಸುವವರಿಂದಲೇ ಹೆಣ್ಣುಮಕ್ಕಳ ಮೇಲೆ ದರ್ಪ, ದೌರ್ಜನ್ಯ. ಈ ‘ಎಲ್ಲಾ,’ ‘ಇಲ್ಲ’ಗಳ ನಡುವೆಯೂ ಈ ಮಹಿಳೆಯರಿಗೆ ಖುಷಿ ಕೊಡುವ ವಿಷಯವೆಂದರೆ ಪ್ರತಿದಿನ ಬೆಳಿಗ್ಗೆ ಎಲ್ಲರೂ ಒಟ್ಟೊಟ್ಟಿಗೆ ಮೈಲಿಯಷ್ಟು ನಡೆದು ನೀರು ತರಲು ಹೋಗುವುದು. ಪರಸ್ಪರರ ಕಷ್ಟ ಸುಖಗಳನ್ನು ಹಂಚಿಕೊಳ್ಳುವ ಆ ಸಮಯ ಅವರ ಸ್ವಂತದ್ದು.
ಈ ಗುಂಪಿಗೆ ಹೊಸ ಸೇರ್ಪಡೆ ನವ ವಧುವಾಗಿ ಹಳ್ಳಿಗೆ ಬಂದ ಮಂಜರಿ. ಏಳನೇ ತರಗತಿಯವರೆಗೆ ಓದಿದ್ದಾಳೆ. ಮೊದಲ ರಾತ್ರಿಯೇ ಮಂಜರಿ ಗಂಡನ ಮಾತುಗಳಿಂದ ಆಘಾತಕ್ಕೊಳಗಾಗುತ್ತಾಳೆ , ‘ಪಟ್ಟಣದಲ್ಲಿ ಓದಿದವರಿಗೆ ರೆಕ್ಕೆ ಕೊಂಬು ಎರಡೂ ಬೆಳೆದಿರುತ್ತವಂತೆ, ನಿನಗೂ ಇದ್ದರೆ ಅವನ್ನು ನೀನೇ ಕತ್ತರಿಸಿಕೊಳ್ಳುವುದು ಒಳ್ಳೆಯದು, ನಾನೇ ಕತ್ತರಿಸಿದರೆ ನೋವಾಗುತ್ತದೆ,’ ಅಲ್ಲದೇ ‘ಗರ್ಭಾ ಮಾಡುವ ಕನಸು ಕನಸಾಗೇ ಇರಲಿ, ಕಾಲ್ಗೆಜ್ಜೆಗಳ ಮೇಲೆ ನಿಯಂತ್ರಣವಿರಲಿ’ ಎನ್ನುತ್ತಾನೆ. ನೀರು ತರಲು ಹೋಗುವ ದಾರಿ ಬಳಿಯ ತೋಪಿನ ಮರಳಿನ ಮೇಲೆ ವ್ಯಕ್ತಿಯೊಬ್ಬ ಬಿದ್ದಿದ್ದಾನೆ ಮತ್ತು ನೀರಿಗಾಗಿ ಬೇಡುತ್ತಿದ್ದಾನೆ. ಇತರರ ವಿರೋಧದ ನಡುವೆಯೂ ನೀರು ಕೊಟ್ಟು ಚೈತನ್ಯ ಬರುವಂತೆ ಮಾಡುತ್ತಾಳೆ ಮಂಜರಿ. ಅವನು ಡೋಲು ಬಾರಿಸುವ ತಳವರ್ಗಕ್ಕೆ ಸೇರಿದ ಮುಲ್ಜಿ.
ಡೋಲಿನ ಲಯ : ಮುಲ್ಜಿಯ ಡೋಲು ಇವರ ನೀರಸ, ಹತಾಶ ಬದುಕಿನಲ್ಲಿ ಹಂತ ಹಂತವಾಗಿ ಉತ್ಸಾಹ ತುಂಬುತ್ತಾ ಬರುತ್ತದೆ, ಮತ್ತೊಮ್ಮೆ ಡೋಲು ಅನುರಣಿಸುತ್ತದೆ, ಗೆಜ್ಜೆಗಳು ಶಬ್ದ ಮಾಡಲಾರಂಭಿಸುತ್ತವೆ. ಅವನು ಬಾರಿಸುವ ಡೋಲಿನ ಲಯಕ್ಕೆ ಮೈಮರೆತು ನರ್ತಿಸಲಾರಂಭಿಸುತ್ತಾರೆ ಈ ಹೆಣ್ಣುಮಕ್ಕಳು, ಆದರೂ ಒಳಗೆಲ್ಲೋ ತಪ್ಪು ಮಾಡುತ್ತಿದ್ದೇವೇನೋ? ಎಂಬ ಭಯ ಮಂಜರಿಯನ್ನು ಹೊರತುಪಡಿಸಿ ಉಳಿದವರನ್ನು ಕಾಡಲಾರಂಭಿಸುತ್ತದೆ. ದಿನ ಕಳೆದಂತೆ ಅದುಮಿಟ್ಟ ಹತಾಶೆ, ದುಃಖ, ಬೇಸರ ಎಲ್ಲವೂ ಡೋಲು, ಸಂಗೀತ, ನೃತ್ಯದಲ್ಲಿ ಕರಗಲಾರಂಭಿಸುತ್ತವೆ. ಮುಲ್ಜಿಯದು ಮತ್ತೊಂದು ಕಥೆ, ಮೇಲ್ವರ್ಗದವರ ಕ್ರೌರ್ಯದಿಂದ ಬದುಕು ಕಳೆದುಕೊಂಡವನು. ಅದೇ ಮರುಭೂಮಿಯ ಬಲೇಲಿಯ ಹಳ್ಳಿಯವನು, ಮೇಲ್ಜಾತಿಯವರ ಅಗ್ನಿಕುಂಡದ ಬಳಿ, ಇವನ ಹೆಂಡತಿ ಮಂಗಳ ಮತ್ತು ಪುಟ್ಟ ಮಗಳು ರೇವ ನರ್ತಿಸಿದರು ಎಂಬ ಕಾರಣಕ್ಕೆ ಗುಡಿಸಲಿಗೆ ಬೆಂಕಿಹಾಕುತ್ತಾರೆ, ಅದರಲ್ಲಿ ಹೆಂಡತಿ, ಮಗಳ ಸಾವಾಗುತ್ತದೆ, ಮುಲ್ಜಿ ಬದುಕುಳಿಯುತ್ತಾನೆ.
ಊರುಬಿಟ್ಟು ಬಂದಿರುವ ಅವನು ಈ ಹೆಣ್ಣುಮಕ್ಕಳಲ್ಲಿ ತನ್ನ ಮಗಳನ್ನು ಕಾಣಲು ಪ್ರಯತ್ನಿಸುತ್ತಾನೆ. ನರ್ತಿಸುವಾಗ ಸಂಕೋಚ ಪಡಬಾರದೆಂದು ಅವರಿಂದ ದೂರನಿಂತು ವಿರುದ್ಧ ದಿಕ್ಕಿಗೆ ತಿರುಗಿ ಡೋಲು ಬಾರಿಸುತ್ತಿರುತ್ತಾನೆ. ತಂದೆ, ಅಣ್ಣ ಇಬ್ಬರೂ ಒಟ್ಟಿಗೆ ಸಾವನ್ನಪ್ಪಿದ ಸುದ್ದಿ ತಿಳಿದ ಹೆಣ್ಣೊಬ್ಬಳಿಗೆ ‘ತಾವು ನೃತ್ಯ ಮಾಡಿದ್ದೇ ಕಾರಣ’ವೆಂಬ ಪಾಪಪ್ರಜ್ಞೆ ಕಾಡಲಾರಂಭಿಸುತ್ತದೆ, ವಿಷಯ ಹಳ್ಳಿಯ ಮುಖಿಯ ಹಾಗೂ ಇತರರ ಕಿವಿ ಮುಟ್ಟುತ್ತದೆ. ಹಳ್ಳಿಯ ಪ್ರತಿ ಮನೆಯಲ್ಲೂ ಬೈಯ್ಯುವ ಹೊಡೆಯುವ, ಸದ್ದಿಲ್ಲದೆ ಬಿಕ್ಕುವ ಸಪ್ಪಳ. ಮುಲ್ಜಿಯು ಹಳ್ಳಿಗೆ ಬರುತ್ತಾನೆ, ನವರಾತ್ರಿಯ ಕೊನೆಯ ದಿನ ಅವನನ್ನು ದುರ್ಗೆಗೆ ಬಲಿ ಕೊಡಲು ಗುಡಿ ಎದುರಿನ ಕಂಭಕ್ಕೆ ಕಟ್ಟಿಹಾಕುತ್ತಾರೆ.
ಕೊನೆಯ ದಿನ, ಮುಲ್ಜಿಯ ಕೊನೆಯ ಆಸೆ, ಶಬ್ದ ಹೊಮ್ಮಿಸುವ ಡೋಲಿನ ಚರ್ಮ ಹರಿಯುವವರೆಗೂ ಬಾರಿಸಬೇಕೆಂಬುದು. ಅವನ ದುಸ್ಥಿತಿಯನ್ನು ಕಿಟಕಿಯ ಮರೆಯಿಂದ ನೋಡುತ್ತಿರುವ ಹೆಂಗಸರ ಆತಂಕ, ದುಃಖ, ಅವನ ಈ ಸ್ಥಿತಿಗೆ ತಾವೇ ಕಾರಣವೆಂಬ ಪಾಪಪ್ರಜ್ಞೆ; ಜೊತೆಗೊಂದು ದೃಢ ನಿರ್ಧಾರ ಮನದಲ್ಲಿ. ಮುಲ್ಜಿ ಡೋಲು ಬಡಿಯಲು ಪ್ರಾರಂಭಿಸುತ್ತಾನೆ, ಗುಡಿಸಲ ಅಂಗಳ ದಾಟಿ ಮೊದಲು ಹೊರಬಂದ ಮಂಜರಿ ನರ್ತಿಸಲಾರಂಭಿಸುತ್ತಾಳೆ. ನಂತರ ಒಬ್ಬೊಬ್ಬರಾಗಿ ಹೊರ ಬರುವ ಇತರರೂ
ಮಂಜರಿಯ ಜೊತೆಗೂಡಿ ನರ್ತಿಸಲಾರಂಭಿಸುತ್ತಾರೆ. ಆಗ ಮಳೆ ಸುರಿಯುತ್ತದೆ. ‘ಧೋ’ ಎಂದು ಸುರಿಯುವ ಬಿರುಮಳೆಯಲ್ಲಿ, ಪುರುಷರ ಮೂಢನಂಬಿಕೆಗಳಿಗೆ, ದೌರ್ಜನ್ಯ, ದಬ್ಬಾಳಿಕೆ, ಅಹಂಕಾರಕ್ಕೆ ಉತ್ತರಿಸುವಂತೆ ನರ್ತಿಸ ತೊಡಗುತ್ತಾರೆ. ಅದುಮಿಟ್ಟ ಹತಾಶೆ, ಬೇಸರ, ದುಃಖ ಎಲ್ಲವೂ ಮಳೆಯಲ್ಲಿ ಕೊಚ್ಚಿ ಹೋಗುವಂತೆ ಡೋಲು ಮತ್ತೊಮ್ಮೆ
ಶಬ್ದಮಾಡುತ್ತದೆ, ಗೆಜ್ಜೆ ಕಾಲುಗಳು ಸಂಭ್ರಮದಿಂದ ನರ್ತಿಸಲಾರಂಭಿಸುತ್ತವೆ.
ಮಹಿಳೆಯರ ನೆಮ್ಮದಿಯನ್ನು ಕಸಿದುಕೊಳ್ಳುವ ಪುರುಷ ವ್ಯವಸ್ಥೆಯ ದರ್ಪವನ್ನು ಹೇಳುತ್ತಲೇ ಅದರಿಂದ ಬಿಡಿಸಿಕೊಂಡು ಹೊರಬರುವ ಕೌಶಲವನ್ನೂ ಹೇಳುವ ಕಥೆ ‘ಹೆಲ್ಲಾರೋ’. ಅಭಿವ್ಯಕ್ತಿ ಮತ್ತು ಸ್ವಾತಂತ್ರ್ಯದ ಸಂಕೇತವಾಗಿ ಡೋಲು ಮತ್ತು ಗರ್ಭಾ ನೃತ್ಯವನ್ನು ಬಳಸಿ ಕೊಂಡಿದ್ದಾರೆ ನಿರ್ದೇಶಕರು. ಗಾಢ ವರ್ಣದ ಬಣ್ಣಗಳು, ಸಂಗೀತ, ಹಾಡುಗಳು, ನೃತ್ಯವೇ ಈ ಸಿನಿಮಾದ ಜೀವಾಳ. ಗುಜರಾತಿನ ಲೋಕ ಸಂಗೀತ, ಗರ್ಭಾ ನೃತ್ಯವನ್ನೇ ಚಿತ್ರದಲ್ಲಿ ವಿಜೃಂಭಿಸತ್ತಾ, ಹೆಣ್ಣುಮಕ್ಕಳ ಶೋಷಣೆಯ ಕಥೆಯನ್ನು ಹೇಳುತ್ತಾ ಹೋಗುತ್ತಾರೆ ನಿರ್ದೇಶಕ ಅಭಿಷೇಕ್ ಶಾ. ಹಿಂಸೆ, ಮತ್ತು ಪ್ರತಿಕಾರಗಳನ್ನು ದೃಶ್ಯವಾಗಿಸದೆ ಸಂಭಾಷಣೆ, ಶಬ್ದ, ಬೆಳಕಿನಿಂದಲೇ ಅನಾವರಣಗೊಳಿಸುವ ಪರಿ ಪ್ರೇಕ್ಷಕರನ್ನು ಹಿಡಿದಿಡುತ್ತದೆ. ಇಂಥ ಗಂಭೀರ ಸಿನಿಮಾದಲ್ಲೂ ಆಗಾಗ ಪಟ್ಟಣದಿಂದ ಬರುವ ವ್ಯಾಪಾರಿ ಭಾಗ್ಲೋ ಮತ್ತು ಹಳ್ಳಿಯ ಪಡ್ಡೆ ಹುಡುಗರ ಹಾಸ್ಯ ಸಂಭಾಷಣೆ ಸ್ವಲ್ಪ ನಿರಾಳವೆನಿಸುವಂತೆ ಮಾಡುತ್ತದೆ.
ಸಿನಿಮಾ ಗೆದ್ದಿರುವುದಕ್ಕೆ ಕಥೆಯ ಜೊತೆಗೆ ಮೆಹುಲ್ ಸುರ್ತಿ ಅವರ ಸಂಗೀತ, ವಿಶ್ವ ರಘು ಅವರ ನೃತ್ಯ ಸಂಯೋಜನೆ, ತ್ರಿಭುವನ್ ಬಾಬು ಅವರ ಛಾಯಾಗ್ರಹಣ, ನಿಹಾರಿಕಾ ಬಾಸಿನ್ ಅವರ ವಸ್ತ್ರವಿನ್ಯಾಸ. ಅಭಿಷೇಕ್ ಶಾ ಅವರ ಕಥೆ ಮತ್ತು ನಿರೂಪಣೆ, ಜಯೇಶ್ ಮೋರೆ (ಮುಲ್ಜಿ) ಶ್ರದ್ದಾ (ಮಂಜರಿ ) ಹಾಗೂ ಇತರ ನಟ, ನಟಿಯರ ಭಾವತೀವ್ರ ಅಭಿನಯ, ವ್ಯಾಪಾರಿ ಭಾಗ್ಲೊನ (ಮೌಲಿಕ್ ನಾಯಕ್) ಹಾಸ್ಯ, ಮಹಿಳೆಯರಷ್ಟೇ ಸೊಗಸಾಗಿ ಗರ್ಭಾ ನೃತ್ಯ ಮಾಡುವ ಪುರುಷ (ಸಿನಿಮಾದ ಮೊದಲ ದೃಶ್ಯವೇ ಪುರುಷರ ನೃತ್ಯದಿಂದ ಆರಂಭವಾಗುತ್ತದೆ ) ಎಲ್ಲವೂ ಈ ಸಿನಿಮಾ ಗೆಲ್ಲಲು ಪೂರಕವಾಗಿವೆ. ಸಿನಿಮಾ ನಿರ್ಮಾಣ ಕಡಿಮೆ ಇರುವ ಗುಜರಾತಿ ಚಿತ್ರರಂಗದಲ್ಲಿ ‘ಹೆಲ್ಲಾರೋ’ ವಿಶ್ವಾಸ ಮೂಡಿಸಿದೆ.
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.
‘ಹೆಲ್ಲಾರೋ’ ಶೋಷಣೆಗೆ ಎಷ್ಟೊಂದು ಮುಖಗಳಿವೆ..?! ಎಲ್ಲಕ್ಕಿಂತ ಬದುಕು ಘನವೆನ್ನುವುದನ್ನು ಸಮಾಜಕ್ಕೆ ಹೇಗೆ ಅರ್ಥಮಾಡಿಸುವುದು? ಮಂಜುಳಾ ಮೇಡಂ, ನೀವು ಬಹಳ ವಿಮರ್ಶಾತ್ಮಕವಾಗಿ ಸಿನೆಮಾಗಳನ್ನು ವಿಶ್ಲೇಷಿಸುತ್ತೀರಿ.
Very nice and good