ಸಿನಿ ಸಂಗಾತಿ/ ಹೆಣ್ಣಿನ ನೋವುಗಳ ಹರಾಜು ಬಜಾರು – ಮಂಜುಳಾ ಪ್ರೇಮಕುಮಾರ್

ಸೀಮಾ ಕಪೂರ್ ನಿರ್ದೇಶಿಸಿದ “ಹಾಟ್: ದ ವೀಕ್ಲಿ ಬಜಾರ್” ನಮ್ಮ ದೇಶದ ಹಲವು ರಾಜ್ಯಗಳಲ್ಲಿರುವ ಒಂದು ಅನಿಷ್ಟ ಪದ್ಧತಿಯನ್ನು ಖಂಡಿಸುವ ವಿಶಿಷ್ಟ ಚಿತ್ರ. ವಿವಾಹ ಬಂಧನದಿಂದ ಬಿಡುಗಡೆ ಪಡೆಯಲು ಬಯಸುವ ಹೆಣ್ಣಿನ ತನುಮನಧನಗಳನ್ನು ಪಂಚಾಯಿತಿ ಕಟ್ಟೆಯಲ್ಲಿ ಹರಾಜು ಹಾಕುವ ಪುರುಷ ದೌರ್ಜನ್ಯವನ್ನು, ಹಳ್ಳಿಯ ಮಹಿಳೆಯರೆಲ್ಲ ಸೇರಿ ಅಪೂರ್ವವಾಗಿ ಪ್ರತಿಭಟಿಸುವುದನ್ನು ಈ ಚಿತ್ರ ಮನಮುಟ್ಟುವ ರೀತಿಯಲ್ಲಿ ಹೇಳುತ್ತದೆ. ಹೆಣ್ಣಿನ ಅಂತರಂಗದ ಶಕ್ತಿಯನ್ನು ಅದ್ಭುತವಾಗಿ ಅನಾವರಣ ಮಾಡುತ್ತದೆ.

ಮಹಿಳೆಯರನ್ನು ಮಣಿಸಲು, ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಪುರುಷ ಪ್ರಧಾನ ವ್ಯವಸ್ಥೆ ಮಾಡಿದ ಅಮಾನವೀಯ ಪದ್ದತಿಯೊಂದರ ವಿರುದ್ಧ ಸಿಡಿದೇಳುವ ಮಹಿಳೆಯರ ಕಥೆ ಹೇಳುವ “ಹಾಟ್: ದ ವೀಕ್ಲಿ ಬಜಾರ್” 2011ರಲ್ಲಿ ಬಿಡುಗಡೆಗೊಂಡ ರಾಜಸ್ತಾನಿ ಸಿನಿಮಾ. ನಿರ್ದೇಶಕರು ಸೀಮಾ ಕಪೂರ್ (ದಿವಂಗತ ನಟ ಓಂ ಪುರಿ ಅವರ ಮೊದಲ ಪತ್ನಿ ). ಮನೆ ಕೆಲಸದವಳು ಹೇಳಿದ, ತನ್ನೂರಿನಲ್ಲಿ ನಡೆದ ಘಟನೆಯೊಂದರ ಎಳೆಯನ್ನು ಆಧರಿಸಿ ಸಿನಿಮಾ ಮಾಡಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಎಲ್ಲವೂ ಸೀಮಾ ಅವರದ್ದೇ.

“ಹಾಟ್: ದ ವೀಕ್ಲಿ ಬಜಾರ್” ಮಧ್ಯಪ್ರದೇಶ, ರಾಜಸ್ತಾನ, ಗುಜರಾತಿನ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಪ್ರಚಲಿತ ವಿರುವ ‘ನಥ ಪ್ರಾಥ’ ಎಂಬ ಅನಿಷ್ಟ ಪದ್ಧತಿಯೊಂದರ ಮೇಲೆ ಬೆಳಕು ಚೆಲ್ಲುವ ಸಿನಿಮಾ. ವಿವಾಹಿತೆಯೊಬ್ಬಳು ಗಂಡನಿಂದ ಬಿಡುಗಡೆ ಪಡೆಯಲು ಹಣ ಅಥವಾ ಆಸ್ತಿಯನ್ನು ಪರಿಹಾರ ರೂಪದಲ್ಲಿ ಕೊಡಬೇಕಾಗುತ್ತದೆ. ಇದನ್ನು ನಿರ್ಧರಿಸುವವರು ಗಂಡ ಮತ್ತು ಆತನ ಕುಟುಂಬದವರು. ಕೊಡಲಾಗದಷ್ಟನ್ನು ಕೇಳುವುದು, ಕೊಡದಿದ್ದರೆ ಊರಿನ ಮುಖಂಡರು ಮತ್ತು ಪಂಚಾಯಿತಿ ಅವಳನ್ನ ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಶಿಕ್ಷೆಯೂ ಸಹ ಅವರ ಮರ್ಜಿಯೇ. ಅಸಹಾಯಕ ಹೆಣ್ಣೊಬ್ಬಳನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಅವರು ಕೊಡುವ ಶಿಕ್ಷೆಯಾದರು ಎಂತಹುದು? ಮುಖಕ್ಕೆ ಮಸಿ ಬಳಿಯುವುದು, ಕೂದಲು ಕತ್ತರಿಸುವುದು, ವಿವಸ್ತ್ರಗೊಳಿಸಿ ಊರಿನ ಬೀದಿಗಳಲ್ಲಿ ಸುತ್ತಿಸುವುದು ಇತ್ಯಾದಿ. ಹೊರ ಜಗತ್ತಿಗೆ ಅಷ್ಟಾಗಿ ತಿಳಿಯದ ಈ ಸಾಮಾಜಿಕ ಪಿಡುಗಿನ ಮೇಲೆ ಸಿನಿಮಾ ಮಾಡುವುದರ ಮೂಲಕ ಬೆಳಕು ಚೆಲ್ಲಿದ್ದಾರೆ ನಿದೇಶಕಿ.

ಕಥಾ ನಾಯಕಿ ಸಂಜಾ. ತಾಯಿ ಭೀಜಿಬಾಯಿ ಜೀವನ ನಿರ್ವಹಣೆಗಾಗಿ, ತನ್ನದೇ ತಂಡದೊಂದಿಗೆ, ವಾರದ ಸಂತೆಗಳಲ್ಲಿ ಮಹಾಭಾರತದ ಪ್ರಸಂಗಗಳನ್ನು ಹಾಡುತ್ತಾ
ಬದುಕು ಕಟ್ಟಿಕೊಂಡವಳು. ಅಜ್ಜಿ ಮತ್ತು ತಾಯಿ ಇಬ್ಬರೂ ನಡತೆಗೆಟ್ಟವರೆಂದು ಆರೋಪಿಸಿ ಸಂಜಾಳನ್ನು ತೊರೆದು ಬೇರೊಂದು ಮದುವೆಯಾಗಿರುತ್ತಾನೆ ಸಂಜಾಳ ಗಂಡ ರಾಮಚಂದ್ರ. ಗಂಡನಿಂದ ದೂರ ಇರುವ ಸಂಜಾಳ ಮೇಲೆ ಊರ ಪಟೇಲನ ಕಣ್ಣು ಬೀಳುತ್ತದೆ. ಅವನ ಕಾಮುಕ ಕಣ್ಣಿನಿಂದ ಮಗಳನ್ನು ಮರೆ ಮಾಡಲು ಗಂಡನ ಮನೆಗೆ ಕರೆತಂದು ಬಿಟ್ಟುಹೋಗುತ್ತಾಳೆ ಭೀಜಿಬಾಯಿ. ಗಂಡನ ಮನೆಯಲ್ಲಿ ಬಂಧಿಯಾಗುವ ಸಂಜಾ ಗಂಡನ ಕಾಮುಕತನ ಮತ್ತು ಸವತಿಯ ಕಾಟದಿಂದ ನಲುಗಿಹೋಗುತ್ತಾಳೆ. ತಾಯಿ, ಅಜ್ಜಿಯಿಂದ ದೂರಾಗಿ, ಗಂಡನ ಪ್ರೀತಿಗಾಗಿ ಹಂಬಲಿಸುವವಳಿಗೆ ಪರಿಚಯವಾಗುವ ವ್ಯಕ್ತಿ ಭವರ. ಪರಸ್ಪರ ಆಕರ್ಷಿತರಾಗುತ್ತಾರೆ ಮತ್ತು ಜೊತೆಯಾಗಿ ಬದುಕುವ ನಿರ್ಧಾರ ಮಾಡುತ್ತಾರೆ.

ಗಂಡನಿಗೆ ವಿಷಯ ತಿಳಿದು ಊರ ಪಂಚಾಯತಿಗೆ ದೂರು ಕೊಡುತ್ತಾನೆ. ಸಂಜಾ ಸಹ ಹೊಸದೊಂದು ಬದುಕು ಕಟ್ಟಿಕೊಳ್ಳಲು ಗಂಡನಿಂದ ಬಿಡುಗಡೆ ಬಯಸುತ್ತಾಳೆ. ವಿಷಯ ಪಂಚಾಯತಿ ಕಟ್ಟೆ ಹತ್ತುತ್ತದೆ. ವಿಚ್ಚೇದನ ಕೊಡಲು ಗಂಡ ದೊಡ್ಡ ಮೊತ್ತದ ಹಣ (30, 000) ಇಲ್ಲವೇ ಜಮೀನು ಕೊಡಲು ಒತ್ತಾಯಿಸುತ್ತಾನೆ. ಹಣ ಸಂದಾಯ ಮಾಡಲು ಮೂರು ತಿಂಗಳ ಕಾಲಾವಕಾಶ ಕೊಡುತ್ತಾರೆ ಪಂಚಾಯತಿಯವರು. ಬದುಕಿಗೆ ಮತ್ತೆ ಹೊಸ ಭರವಸೆ ತುಂಬಿ, ಬದುಕು ಸುಂದರ ಎಂದು ತೋರಿಸಿಕೊಟ್ಟ ಭವರ ಹಣ ಕೊಡಲು ನಿರಾಕರಿಸುತ್ತಾನೆ. ಹಣ ಸಂಗ್ರಹಿಸಲು ತುಂಡು ಉಡುಗೆ ತೊಟ್ಟು, ಅರೆಬೆತ್ತಲಾಗಿ ಸಂತೆಯಲ್ಲಿ ನರ್ತಿಸುವಂತೆ ಒತ್ತಾಯಿಸುತ್ತಾನೆ.

ದುರದೃಷ್ಟ: ತಾಯಿಯ ಜೊತೆಯಲ್ಲಿದ್ದಾಗ ಹಾಡು, ನರ್ತನಗಳಿಂದ ದೂರವಿದ್ದ ಸಂಜಾ ಈಗ ಅನಿವಾರ್ಯವಾಗಿ ಹಾಡುತ್ತಾ, ನರ್ತಿಸ ಬೇಕಾಗುತ್ತದೆ. ಮಗಳ ಬದುಕು ಕಟ್ಟಿಕೊಡಲು ತಾಯಿಯೂ ಹಣ ಸಂಗ್ರಹಣೆಗೆ ಸಹಾಯಮಾಡುತ್ತಾಳೆ. ಗಂಡನಿಗೆ ಹಣ ಕೊಡುವ ದಿನ ಹತ್ತಿರ ಬಂದಿದೆ, ಸಂಜಾಳ ದುರದೃಷ್ಟವೆನ್ನುವಂತೆ ಕಷ್ಟಪಟ್ಟು ಕೂಡಿಸಿದ್ದ
ಹಣ ಕಳುವಾಗಿದೆ. ಮರುದಿನ ಪಂಚಾಯಿತಿ!

ಹಣ ಕೊಡದಿದ್ದಕ್ಕೆ ಶಿಕ್ಷೆ ವಿಧಿಸುತ್ತಾರೆ. ಘೋರ ತಪ್ಪು ಮಾಡಿದ್ದಾಳೇನೋ ಎನ್ನುವಂತೆ ಸಂಜಾಳಿಗೆ ಮಾತ್ರ ಶಿಕ್ಷೆ ವಿಧಿಸಿದ್ದಾರೆ, ಪ್ರಿಯಕರನಿಗಲ್ಲ. ಮುಖಕ್ಕೆ ಮಸಿ ಬಳಿದಾಯ್ತು, ಕೂದಲು ಕತ್ತರಿಸಿದ್ದಾಯ್ತು, ಇನ್ನು ವಿವಸ್ತ್ರಳನ್ನಾಗಿಸುವುದಷ್ಟೇ ಉಳಿದಿರುವುದು. ಅವಳ ಕಣ್ಣೀರಿಗೆ, ಸಂಕಟಕ್ಕೆ ಬೆಲೆಯೇ ಇಲ್ಲ. ಹುಚ್ಚಳಂತೆ ಕೂಗಿ ಕರೆದರೂ ಕನಿಕರಿಸದ
ಗಂಡ ಮತ್ತು ಊರಿನ ಜನ. ಗಂಡಸರ ಮಾತಿಗೆ ಎದುರಾಡದಂತೆ ಕುಳಿತಿರುವ ಹೆಂಗಸರು. ತಾಯಿಯ ಅಸಹಾಯಕತೆ, ಸಂಜಾಳ ಆಕ್ರಂದನ ನೋಡುಗರಲ್ಲಿ ಕಣ್ಣೀರು ತರಿಸುತ್ತದೆ ಮತ್ತು ಆಳವಾದ ನೋವಿನ ಮನಸ್ಥಿತಿಗೆ ತಳ್ಳಿಬಿಡುತ್ತದೆ.

ಸಂಜಾಳನ್ನು ವಿವಸ್ತ್ರಗೊಳಿಸಿ, ಬೆತ್ತಲೆ ನೋಡಬೇಕೆನ್ನುವ ಊರ ಗಂಡಸರ ಆಸೆಗೆ, ಕುತಂತ್ರಕ್ಕೆ ಮತ್ತು ದೌರ್ಜನ್ಯಕ್ಕೆ ತೆರೆ ಎಳೆಯುವಂತೆ, ಊಹಿಸಲಾರದಂತಹ ತಿರುವೊಂದನ್ನು ಕಥೆ ಪಡೆದುಕೊಳ್ಳುತ್ತದೆ. ಸಿನಿಮಾದ ಅಂತಿಮ ಘಟ್ಟದಲ್ಲಿ, ತಾಯಿ, ಮಗಳ ಅಸಹಾಯಕತೆಯ ದುರ್ಲಾಭ ಪಡೆಯಲು ಹೊರಟ ಪುರುಷರ ವಿರುದ್ಧ ಊರಿನ ಹೆಣ್ಣುಮಕ್ಕಳೇ ತಿರುಗಿ ಬೀಳುತ್ತಾರೆ. ಆ ಗುಂಪಿನಲ್ಲಿ ತಮ್ಮದೇ ಕುಟುಂಬದ ತಾಯಿ, ಹೆಂಡತಿ, ಮಗಳು, ಅಕ್ಕ, ತಂಗಿ ಇತ್ಯಾದಿಯಾಗಿ ಎಲ್ಲ ವಯೋಮಾನದ ಹೆಂಗಸರು ವಿವಸ್ತ್ರರಾಗಲು ಮುಂದಾಗುತ್ತಾರೆ. ಬೇರೆ ಹೆಣ್ಣುಮಕ್ಕಳು ಬೆತ್ತಲಾಗುವುದನ್ನು ನೋಡಲು ಆಸೆ ಪಡುವ ಪುರುಷರು ತಮ್ಮ ಕುಟುಂಬದ ಹೆಂಗಸರು ಬೆತ್ತಲಾಗಲು ಮುಂದಾದಾಗ ಸಂಜಾಳ ಶಿಕ್ಷೆಯನ್ನು ಹಿಂತೆಗೆದುಕೊಳ್ಳುತ್ತಾರೆ.

ಸಂಜಾ ಮಾನಸಿಕವಾಗಿ ಕುಗ್ಗಿದಾಗಲೆಲ್ಲಾ ಅವಳ ಕನಸಿನಲ್ಲಿ ಬಂದು ಎಚ್ಚರಿಸುವ ಕೌಶಾಂಬಿಯ ಅಂಬಾಲಿಕೆ ಪಾತ್ರ ಗಮನಸೆಳೆಯುತ್ತದೆ. ಪುರುಷನ ದೌರ್ಜನ್ಯದಿಂದ ಬಿಡುಗಡೆಗೊಳಿಸಿ ತನಗೆ ಮುಕ್ತಿ ಕೊಡಿಸುವಂತೆ ಬೇಡಿಕೊಳ್ಳುತ್ತಿರುತ್ತಾಳೆ. ಅಂಬಾಲಿಕೆಯ ಕಥೆಯು ಸಂಜಾಳ ಕಥೆಗಿಂತ ಹೊರತಾದುದೇನು ಅಲ್ಲ. ತನ್ನ ಮತ್ತು ಮಧುಕರನ ಪ್ರೀತಿ, ಪ್ರಣಯದ ಕಥೆ ಹೇಳುತ್ತಲೇ ಅವನಿಂದ ತನಗಾದ ಅನ್ಯಾಯ, ಗರ್ಭಿಣಿಯಾದ ತನ್ನನ್ನು ಇತರ ಹೆಣ್ಣುಗಳ ಜೊತೆ ಮಾರಾಟವಾಗುವಾಗಲು ತಡೆಯದವನು. ತನ್ನನ್ನು ಕೊಂಡುಕೊಂಡವನ ದರ್ಪ, ದೌರ್ಜನ್ಯ. ಕೊಂಡವನ ಮಗುವಿಗೆ ತನ್ನ ಎದೆಯ ಹಾಲು, ತನ್ನದೇ ಮಗುವಿಗೆ ಆಕಳಿನ ಹಾಲು ಕುಡಿಸಬೇಕೆಂಬ ಅಪ್ಪಣೆ.

ಮಗು ಕದ್ದ ಆರೋಪ ಹೊರಿಸಿ ಮಗಳನ್ನು ಮಾತ್ರ ಕರೆದೊಯ್ಯಲು ಬರುವ ಮಧುಕರ ‘ಸ್ವತಂತ್ರ ಬಾಲಿಕೆ, ನಾಳಿನ ಸ್ವತಂತ್ರ ಹೆಣ್ಣಾಗಿ ಬೆಳೆಯುತ್ತಾಳೆ ‘ ಎಂದ ಅಂಬಾಲಿಕೆಯ ಮೇಲೆ ಸಿಟ್ಟು. ‘ಸ್ತ್ರೀಯರಿಗೆ ಸ್ವಾತಂತ್ರ್ಯವಿಲ್ಲ. ಸ್ವಾತಂತ್ರ್ಯವೆಂದರೆ ಸ್ವೇಚ್ಚೆ, ಸ್ವೇಚ್ಚೆ ಎಂದರೆ ವೇಶ್ಯೆ’ ಇದು ಮಧುಕರನ ಅನಿಸಿಕೆ ಅಷ್ಟೇ ಅಲ್ಲ, ವ್ಯವಸ್ಥೆಯದ್ದು ಸಹ. ಶಿಕ್ಷೆಯಿಂದ ಬಿಡುಗಡೆಗೊಂಡ ಸಂಜಾ ಮತ್ತು ಪುರುಷರ ದೌರ್ಜನ್ಯವನ್ನು ಗೆದ್ದ ಸ್ತ್ರೀ ಶಕ್ತಿಯಿಂದಾಗಿ ಸಂತಸ ಪಟ್ಟು ಮುಕ್ತಿ ಪಡೆಯುತ್ತಾರೆ ಅಂಬಾಲಿಕೆ ಮತ್ತು ಮಗಳು ಶ್ವೇತ.

ಶತ ಶತಮಾನಗಳಿಂದಲೂ ಮಹಿಳೆಯರನ್ನು ತಮ್ಮ ಅಂಕೆಯಲ್ಲಿಟ್ಟುಕೊಳ್ಳಲು, ಧಾರ್ಮಿಕ, ಸಾಮಾಜಿಕ ಆಚರಣೆಗಳ ಹೆಸರಲ್ಲಿ, ಮಹಿಳೆಯರನ್ನು ಶೋಷಿಸಲು, ಪುರುಷ ವ್ಯವಸ್ಥೆ ಜಾರಿಗೆ ತಂದ ಹಲವಾರು ಅನಿಷ್ಟ, ಅಮಾನವೀಯ ಪದ್ದತಿಗಳನ್ನು ಮಹಿಳೆಯರೇ ಸಿಡಿದೆದ್ದು ವಿರೋಧಿಸಬೇಕು ಎನ್ನುತ್ತಾರೆ ನಿರ್ದೇಶಕಿ ಸೀಮಾ ಕಪೂರ್. ಗಾಢ
ವಿಷಾದದೊಂದಿಗೆ ಆರಂಭವಾಗುವ ಸಿನಿಮಾ ಮುಗಿಸಿ ಹೊರ ಬರುವಾಗ ನಿರಾಳ ಎನಿಸುತ್ತದೆ.

“ಹಾಟ್: ದ ವೀಕ್ಲಿ ಬಜಾರ್” ಇಡೀ ಚಿತ್ರ ಮನಸ್ಸಿನಲ್ಲಿ ಅಚ್ಚೊತ್ತಲು ಕಾರಣ ಸಂಜಾ ಪಾತ್ರದಲ್ಲಿ ದಿವ್ಯಾ ದತ್ತಾ ಹಾಗೂ ಆಕೆಯ ತಾಯಿ ಪಾತ್ರದಲ್ಲಿ ಅರ್ಚನಾ ಪೂರಣ್ ಸಿಂಗ್ ಅವರ ಭಾವತೀವ್ರ ಅಭಿನಯ. ಮಗಳಿಗಾದ ಅನ್ಯಾಯದ ವಿರುದ್ದ ಸಿಡಿದೇಳುವ ತಾಯಿಯೊಳಗಿನ ಸಂಕಟ, ಆತಂಕ, ಎದುರಿಸಿನಿಲ್ಲಲೇ ಬೇಕೆಂಬ ಛಲ, ಅದಕ್ಕಾಗಿ ಆಕೆ ಮಾಡುವ ಪ್ರಯತ್ನ, ಎಲ್ಲಾ ಭಾವಗಳನ್ನು ಡೋಲು ಬಾರಿಸುತ್ತಲೇ ಅಭಿವ್ಯಕ್ತಿಗೊಳಿಸುವ ಪರಿ, ವೀಕ್ಷಕರ ಮನದಲ್ಲಿ ಬಹಳ ಕಾಲ ಉಳಿದುಬಿಡುತ್ತವೆ.

ಮಧುಕರ ಮತ್ತು ಭವರ, ಗಂಭೀರ ಹಾಗು ಹುಂಬ, ಎರಡೂ ಪಾತ್ರಗಳಲ್ಲಿ ಅಭಿನಯಿಸಿರುವ ಮುಕೇಶ್ ತಿವಾರಿ, ಕ್ರೌರ್ಯವೇ ಮೈವೆತ್ತಂತಾ ಗಂಡನಾಗಿ ಅಭಿನಯಿಸಿರುವ ರಾಮಚಂದ್ರನ ಪಾತ್ರಧಾರಿ ಯಶಪಾಲ್ ಶರ್ಮಾ, ತಮ್ಮತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಅಂಬಾಲಿಕೆಯಾಗಿ ಅರೌಶಿಕ ಗಮನ ಸೆಳೆಯುತ್ತಾರೆ. ಸಂಗೀತ : ಘನಿ ಮತ್ತು ನಿಶಾದ್. ಛಾಯಾಗ್ರಹಣ : ಸನ್ನಿ ಜೋಸೆಫ್. ಸಂಕಲನ : ಸಂಜೀವ್. ಮತ್ತೆ ಮತ್ತೆ ಕೇಳಬೇಕೆನಿಸೋ ಹಾಡುಗಳನ್ನು ಹಾಡಿದ್ದಾರೆ ರೂಪ ಕುಮಾರ್, ಮಹಾಲಕ್ಷ್ಮಿ ಐಯ್ಯರ್, ಜಸ್ಪಿಂದರ್ ನರುಲಾ ಮುಂತಾದವರು. ಮಧ್ಯಪ್ರದೇಶದ ಬೌದ್ದ ಗುಹೆಗಳ ಸೌಂದರ್ಯವನ್ನು ಸನ್ನಿ ಜೋಸೆಫ್ ತಮ್ಮ ಕ್ಯಾಮೆರಾ ಕಣ್ಣಿನಲ್ಲಿ ಸುಂದರವಾಗಿ ಸೆರೆ ಹಿಡಿದಿದ್ದಾರೆ.

“ಹಾಟ್: ದ ವೀಕ್ಲಿ ಬಜಾರ್” ಸಂಭಾಷಣೆ ಸೀಮಾ ಅವರದ್ದೇ, ಎಲ್ಲೂ ಅತಿರೇಕ ಎನಿಸದ, ಜಾಳಿಲ್ಲದ, ಬಿಗಿಯಾದ ಸಂಭಾಷಣೆಯ ಮೂಲಕವೇ ಶೋಷಣೆಯ ಹಲವು ಮಗ್ಗುಲುಗಳನ್ನು ಅನಾವರಣ ಗೊಳಿಸಿಬಿಡುತ್ತಾರೆ. ಅಂಬಾಲಿಕೆ ಹೇಳುವ ‘ಸಮಯ್ ಬದ್ಲಾ, ದೇಸ್ ಬದ್ಲಾ, ವ್ಯಕ್ತಿ ನಾ ಬದ್ಲಾ, ಸ್ತ್ರೀ ವಹಿ, ಪುರುಷ್ ವಹಿ, ಪುರುಷ್ ಕ ಅಹಂಕಾರ್ ನಾ ಬದ್ಲಾ’. `ಮೇರಿ ಮುಕ್ತಿ ತಬ್ ತಕ್ ನಹೀ ಹೋಗಿ, ಜಬ್ ತಕ್ ಪೂರ್ಣ ಸ್ವತಂತ್ರತಾ ಸ್ತ್ರೀ ನಹೀ ಮಿಲ್ ಜಾಯೇಗಿ’ ಈ ಮಾತುಗಳು ವಿಷಾದವನ್ನು ಉಂಟುಮಾಡಿದರೆ “ಎಷ್ಟಂತ ಅಳೋದು, ಸಾಕಿನ್ನು. ಹೆಣ್ಣಾಗಿದ್ದಕ್ಕೆ ಖುಷಿ ಪಡಿ, ಹೆಣ್ಣು ಚಿಟ್ಟೆಯಾಗಬಾರದು, ಎಲ್ಲರೂ ಹೆದರುವ ಜೇನಾಗಬೇಕು. ನಾಚೋ, ಗಾವೋ, ಖೂಬ್ ಖುಷಿ ಮನಾವೋ” ಎಂದು ಅಜ್ಜಿಯ ಮೂಲಕ ಹೇಳಿಸುತ್ತಾ ಆಶಾ ಭಾವನೆಯೊಂದು ಮೂಡುವಂತೆ ಮಾಡಿ ಸಿನಿಮಾ ಮುಗಿಸುತ್ತಾರೆ.

ಮಂಜುಳಾ ಪ್ರೇಮಕುಮಾರ್

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *