ಸಿನಿ ಸಂಗಾತಿ/ ವ್ಯವಸ್ಥೆಯನ್ನುವಿರೋಧಿಸುವ ಆ ಮೂವರು- ಮಂಜುಳಾ ಪ್ರೇಮಕುಮಾರ್
ಕೌಟುಂಬಿಕ ದೌರ್ಜನ್ಯದಿಂದ ಬಿಡುಗಡೆ ಬಯಸಿದ ಮೂವರು ಆಫ್ಘನ್ ಮಹಿಳೆಯರು ’ಮದುವೆ’ ಮತ್ತು ನಂತರದ ತಾಯ್ತನವನ್ನು ನಿರ್ಧರಿಸುತ್ತಿದ್ದ ಪುರುಷ ಪ್ರಧಾನ ಕುಟುಂಬ ವ್ಯವಸ್ಥೆಯನ್ನು ಧಿಕ್ಕರಿಸಿ, ‘ತಾಯ್ತನದ ನಿರ್ಧಾರವು ತಮ್ಮದೇ’ ಎಂದು ನಿರೂಪಿಸುವ ಮೂಲಕ ಸಾಂಪ್ರದಾಯಿಕ ವ್ಯವಸ್ಥೆಯನ್ನು ವಿರೋಧಿಸುವ ಚಿತ್ರ ‘ಹಾವ, ಮರಿಯಮ್, ಆಯೇಷ’. ಈ ಪರ್ಷಿಯನ್ ಸಿನಿಮಾವನ್ನು ನಿರ್ದೇಶಿಸಿರುವ ಸಹ್ರಾ ಕರೀಮಿಯು ಇಲ್ಲಿ ಮಹಿಳೆಯರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದ್ದಾರೆ.
ಎಲ್ಲ ಕಾಲ, ದೇಶಗಳಲ್ಲಿ, ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು ಒಂದೇ ಬಗೆಯವು. ಪುರುಷಪ್ರಧಾನ ವ್ಯವಸ್ಥೆಯಲ್ಲಿ ತಮ್ಮ ಅಸ್ತಿತ್ವಕ್ಕಾಗಿ ನಿರಂತರ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಅವಳ ಸಂಕಟ, ಒಳತೋಟಿಗಳಿಗೆ ದೇಶ, ಕಾಲಗಳ ಮಿತಿಯಿಲ್ಲ. ಹಾಗೇ ಬದಲಾದ ಸಾಮಾಜಿಕ, ಧಾರ್ಮಿಕ ಚೌಕಟ್ಟಿನೊಳಗೆ ಅವಳು ಅನುಭವಿಸುವ ನೋವುಗಳು ಏಕರೂಪವಾಗಿರುವುದಿಲ್ಲ. ಆದರೆ ಅವರು ಎದುರಿಸುವ ಸಮಸ್ಯೆಗಳು ಮಾತ್ರ ಹೆಚ್ಚು ಕಡಿಮೆ ಒಂದೇ ಬಗೆಯವು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಮುಂದುವರೆದ, ಆಧುನಿಕ ಜೀವನ ಶೈಲಿ ರೂಢಿಸಿಕೊಂಡಿರುವ ದೇಶಗಳಲ್ಲಿ ಪರಿಸ್ಥಿತಿ ಭಿನ್ನವಾಗಿದ್ದು, ನಿರಾಳತೆ ಇದೆ.
ಧಾರ್ಮಿಕ ಮೂಲಭೂತವಾದವನ್ನು ಪ್ರಶ್ನಿಸದೆ ಒಪ್ಪಿಕೊಂಡಿರುವ ಆಫ್ಘಾನಿಸ್ತಾನದಂತಹ ದೇಶಗಳಲ್ಲಿ ಮಹಿಳೆಯರ ಪರಿಸ್ಥಿತಿ ದಾರುಣವಾಗಿದೆ. ತಾಲಿಬಾನಿಗಳ ಹಿಡಿತದಲ್ಲಿರುವ ಅಫ್ಘಾನಿಸ್ತಾನದಲ್ಲಿ, ಮಹಿಳೆಯರಿಗೆ ವೈಯಕ್ತಿಕ ಆಯ್ಕೆಗಳಿಲ್ಲ . ಬಾಲ್ಯ, ಯೌವ್ವನದ ಕಾಲಗಳಲ್ಲಿ ಅವರ ಬೇಕು ಬೇಡಗಳನ್ನು ಪಾಲಕರು ನಿರ್ಧರಿಸುತ್ತಾರೆ. ಮದುವೆಯ ನಂತರದ ಬದುಕು ಅವಳ ಪತಿ ಮತ್ತು ಅವನ ಮನೆಯವರ ಮರ್ಜಿ ಅವಲಂಬಿಸಿರುತ್ತೆ. ಆಫ್ಘಾನ್ ಮಹಿಳೆಯರ ಅಸಹಾಯಕ ಪರಿಸ್ಥಿತಿಯನ್ನು ಸಿನಿಮಾ ಮೂಲಕ ಹೇಳುವ ಪ್ರಯತ್ನಗಳು ಆಗುತ್ತಿವೆ. ಬದಲಾದ ರಾಜಕೀಯ ಪರಿಸ್ಥಿತಿಯಿಂದ ತಾಲಿಬಾನಿಗಳ ಹಿಡಿತದಲ್ಲಿರುವ ಅಫ್ಘಾನಿಸ್ತಾನದಲ್ಲಿ ಸಿನಿಮಾ ನಿರ್ಮಾಣ ಒಂದು ಯಶಸ್ವಿ ಉದ್ಯಮವಾಗಿ ಬೆಳೆದಿಲ್ಲ. ಆದರೂ 2001ರಿಂದ ಹಲವಾರು ಸಿನಿಮಾಗಳು ತೆರೆಗೆ ಬಂದಿವೆ (ಕಂದಹಾರ್, ಒಸಾಮಾ ಇತ್ಯಾದಿ) ಕೆಲವು ಮಹಿಳಾ ನಿರ್ದೇಶಕಿಯರು ಈ ನಿಟ್ಟಿನಲ್ಲಿ ಪ್ರಯತ್ನಿಸಿದ್ದಾರೆ. ಅವರಲ್ಲಿ ರೋಯಾ ಸಾದತ್ ಅಫ್ಘಾನಿಸ್ತಾನದ ಮೊದಲ ಮಹಿಳಾ ನಿರ್ದೇಶಕಿ ಮತ್ತು ನಿರ್ಮಾಪಕಿ (2001).
ಇಂತಹ ವಾತಾವರಣದಲ್ಲೇ ಬೆಳೆದು, ಬಾಲ್ಯದಿಂದಲೇ ಇವನ್ನೆಲ್ಲ ಸೂಕ್ಷ್ಮವಾಗಿ ಗಮನಿಸುತ್ತಾ ಬೆಳೆದ ಹುಡುಗಿ ಸಹ್ರಾ ಕರೀಮಿ, ಇರಾನಿನ ಪುನರ್ವಸತಿ ಕೇಂದ್ರದಲ್ಲಿದ್ದ ಅಫ್ಘಾನಿಸ್ತಾನದ ಹೆಣ್ಣುಮಗಳು. ವಿರೋಧದ ನಡುವೆಯು ಹದಿನೈದನೆ ವಯಸ್ಸಿನಲ್ಲೆ ಎರಡು ಇರಾನ್ ಸಿನೆಮಾಗಳಲ್ಲಿ ಅಭಿನಯಿಸಿದ್ದಾರೆ. ಸಿನಿಮಾದ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಅದೇ ವಿಷಯದಲ್ಲಿ ಪದವಿ ಪಡೆದು, ನಿರ್ದೇಶನದಲ್ಲಿ ಡಾಕ್ಟರೇಟ್ ಪಡೆದ ಆಫ್ಘಾನಿನ ಮೊದಲ ಮಹಿಳೆ. ಹಲವಾರು ಕಥಾಚಿತ್ರಗಳನ್ನು ಮತ್ತು ಸಾಕ್ಷ್ಯಚಿತ್ರಗಳನ್ನು ಮಾಡಿದ್ದಾರೆ. ಹತ್ತು ವರ್ಷಗಳ ಕಾಲ ದೇಶದಿಂದ ಹೊರಗಿದ್ದು, ನಂತರ ಕಾಬೂಲಿಗೆ ಹಿಂತಿರುಗಿದಾಗ ಸಹ್ರಾ ಕಂಡಿದ್ದು ಅಲ್ಲಿನ ಮಹಿಳೆಯರ ಸ್ಥಿತಿಗತಿಗಳನ್ನು. ನಾಲ್ಕು ಗೋಡೆಗಳ ನಡುವಿನಿಂದ ಹೊರಬಂದು ಸ್ವತಂತ್ರ ಬದುಕು ಕಟ್ಟಿಕೊಳ್ಳಬೇಕೆಂಬ ಬಯಕೆ, ಆಧುನಿಕ ಶಿಕ್ಷಣ ಪಡೆಯಬೇಕು, ತಮ್ಮ ಬದುಕಿನ ನಿರ್ಣಯ ತಮ್ಮದೆ ಆಗಿರಬೇಕು, ಆರ್ಥಿಕ ಮತ್ತು ಸಾಮಾಜಿಕ ಸಮಾನತೆಯ ಬಯಕೆ, ಮದುವೆ, ತಾಯ್ತನದ ನಿರ್ಣಯವು ತಮ್ಮದೇ ಆಗಿರಬೇಕು, ಇತ್ಯಾದಿ ಅವರ ಆಸೆಗಳನ್ನು ಗುರುತಿಸಿದರು.
ಆಫ್ಘಾನಿಸ್ತಾನದ ಲೇಖಕಿಯಾಗಿ, ಕಥೆಗಾರ್ತಿಯಾಗಿ, ಚಿತ್ರನಿರ್ದೇಶಕಿಯಾಗಿ ಸಹ್ರಾ ಮಾಡಿದ ಮೊದಲ ನಿರ್ಧಾರ ತಾಲಿಬಾನಿಗಳ ಮುಷ್ಟಿಯಲ್ಲಿ ಸಿಲುಕಿ ನಲುಗುತ್ತಿರುವ ತನ್ನ ದೇಶದ ಮಹಿಳೆಯರ ಸಮಸ್ಯೆಗಳನ್ನು ಹೊರಜಗತ್ತಿಗೆ ತಿಳಿಸಬೇಕೆಂಬುದು. ಅದಕ್ಕಾಗಿ ಆಕೆ ಪ್ರಬಲ ಮಾಧ್ಯಮವಾದ ‘ಸಿನೆಮಾ’ವನ್ನು ಆಯ್ಕೆ ಮಾಡಿಕೊಂಡ ಈ ನಿಟ್ಟಿನಲ್ಲಿ ಮಾಡಿದ ಮೊದಲ ಕೆಲಸವೆಂದರೆ, ಆಫ್ಘಾನ್ನಿನ ಹಲವಾರು ಹಳ್ಳಿ, ಪಟ್ಟಣಗಳಲ್ಲಿ ಸುತ್ತಾಡಿ, ಮಧ್ಯಮವರ್ಗದ ಮಹಿಳೆಯರನ್ನ ಭೇಟಿಮಾಡಿ, ಅವರ ಅನುಭವಗಳನ್ನ, ಅಭಿಪ್ರಾಯಗಳನ್ನ ಕ್ರೋಡೀಕರಿಸಿ ಪೂರ್ಣಪ್ರಮಾಣದ ಸಿನಿಮಾ ಮಾಡಿದ್ದಾರೆ. ‘ಹಾವ, ಮರಿಯಮ್, ಆಯೇಷ’ – ಇದು ಸಹ್ರಾ ಅವರ ಮೊದಲ ಚಲನಚಿತ್ರ.
ಹಾವ, ಕೂಡುಕುಟುಂಬದ ತುಂಬು ಗರ್ಭಿಣಿ. ಹೆಂಡತಿಯ ಆರೋಗ್ಯದ ಬಗ್ಗೆ ಕಾಳಜಿಯಿಲ್ಲದೆ ಸದಾ ಸ್ನೇಹಿತರ ಜೊತೆ ಕಾಲಕಳೆಯುವ ಗಂಡ, ಹಾಸಿಗೆ ಹಿಡಿದ ಅತ್ತೆ, ಬೇಜವಾಬ್ದಾರಿಯ ಮಾವ. ಪಂಜರದ ಬಾಗಿಲು ತೆಗೆದು ಹಕ್ಕಿಗಳನ್ನ ಹಾರಲು ಬಿಡುವ ಮಾವನಿಗೆ, ನಾಲ್ಕು ಗೋಡೆಗಳ ನಡುವೆ ಕೈದಿಯಂತೆ ಬದುಕುತ್ತಿರುವ ಸೊಸೆಯ ಆರೋಗ್ಯದ ಬಗ್ಗೆ ಗಮನವಿಲ್ಲ. ಮಾನಸಿಕ ಹಾಗೂ ದೈಹಿಕ ಒತ್ತಡಗಳಿಂದ ಬಳಲಿದವಳಿಗೆ ಖುಷಿಕೊಡುವ ಒಂದೇ ಸಂಗತಿ ಎಂದರೆ ಗರ್ಭದಲ್ಲಿರುವ ಮಗುವಿನ ಜೊತೆ ಸಂಭಾಷಿಸುವುದು. ಏಣಿ ಹತ್ತಿ ಇಳಿದಮೇಲೆ, ಒಂದುದಿನ ಮಗುವಿನ ಚಲನೆ ನಿಂತುಹೋಗಿ ಆಘಾತಕ್ಕೊಳಗಾಗುತ್ತಾಳೆ.
ಮರಿಯಮ್, ವಿದ್ಯಾವಂತೆ, ಸುದ್ದಿವಾಹಿನಿ ಒಂದರಲ್ಲಿ ನ್ಯೂಸ್ ರೀಡರ್, ಸ್ವತಂತ್ರ ಮನೋಭಾವದ ಮಹಿಳೆ. ಗಂಡನ ಸುಳ್ಳು, ಮೋಸದ ಮೇಲೆ ನಿಂತಿರುವ ಏಳು ವರ್ಷಗಳ ವೈವಾಹಿಕ ಜೀವನದಿಂದ ಬಿಡುಗಡೆ ಬಯಸಿದ್ದಾಳೆ. ಪ್ರತಿಷ್ಠಿತ ಕಾರ್ ಕಂಪನಿ ಒಂದಕ್ಕೆ ಮಾಡೆಲ್ ಆಗುವ ಅವಕಾಶ. ಈ ಸಂದರ್ಭದಲ್ಲಿ ತಾನು ತಾಯಿಯಾಗುತ್ತಿರುವುದರ ಅರಿವಾಗುತ್ತದೆ.
ಆಯೇಷ, ಹಾವಳ ನೆರೆಮನೆಯ ಹದಿಹರಯದ ಹುಡುಗಿ. ಪ್ರೀತಿಸಿದ ಯುವಕನಿಂದ ಗರ್ಭಿಣಿಯಾಗುತ್ತಾಳೆ. ವಿಷಯ ತಿಳಿದ ಯುವಕ ಮದುವೆಯಾಗಲು ನಿರಾಕರಿಸುತ್ತಾನೆ. ನಂತರ ಕುಟುಂಬದವರ ನಿರ್ಧಾರದಂತೆ ಸಂಬಂಧಿ ಸುಲೈಮಾನ್ ನನ್ನು ಮದುವೆಯಾಗಲು ಒಪ್ಪುತ್ತಾಳೆ, ಅದಕ್ಕಾಗಿ ಗರ್ಭಪಾತ ಮಾಡಿಸಿಕೊಳ್ಳ ಬೇಕಿದೆ.
ಕೌಟುಂಬಿಕ ದೌರ್ಜನ್ಯದಿಂದ ಬಿಡುಗಡೆ ಬಯಸಿದ್ದಾಳೆ ಹಾವ. ಕತ್ತಲೆಯ ರಾತ್ರಿಗಳಲ್ಲಿ ಕಳೆದುಹೋದ ದಿನಗಳ ಆತ್ಮಶೋಧನೆ ಮಾಡಿಕೊಳ್ಳುತ್ತಾ ಬದುಕಿನ ಹೊರಳು ದಾರಿಯಲ್ಲಿ ನಿಂತಿದ್ದಾಳೆ ಮರಿಯಮ್. ಇನ್ನು ಆಯೇಷಾ, ಕುಟುಂಬದವರು ನಿಶ್ಚಯಿಸಿದ ಹುಡುಗನೊಂದಿಗೆ ಮದುವೆಯಾಗಿ ಬದುಕು ಕಟ್ಟಿಕೊಳ್ಳಲು ಹೊರಟಿದ್ದಾಳೆ. ಹೊಸಬದುಕನ್ನು ಕಟ್ಟಿಕೊಳ್ಳಲು ಅಡ್ಡಿಯಾಗಿರುವುದು ‘ಬಸಿರು’, ಮದುವೆ ನಂತರದ ತಾಯ್ತನವನ್ನು ನಿರ್ಧರಿಸುತ್ತಿದ್ದ ಪುರುಷ ಪ್ರಧಾನ ಕುಟುಂಬ ವ್ಯವಸ್ಥೆಯನ್ನು ಧಿಕ್ಕರಿಸಿ, ‘ತಾಯಿತನದ ನಿರ್ಧಾರವು ತಮ್ಮದೇ’ಎಂದು ನಿರೂಪಿಸುವ ಮೂಲಕ ಸಾಂಪ್ರದಾಯಿಕ ವ್ಯವಸ್ಥೆ ಒಂದನ್ನು ವಿರೋಧಿಸುತ್ತಾರೆ. ಕೊನೆಯ ದೃಶ್ಯದಲ್ಲಿ ಮೂವರು ಒಂದೇ ಆಸ್ಪತ್ರೆಯ, ಒಂದೇ ಕೊಣೆಯಲ್ಲಿ ವೈದ್ಯರ ನಿರೀಕ್ಷಣೆಯಲ್ಲಿದ್ದಾರೆ. ಟಿ ವಿ ಸಂದರ್ಶನ ಒಂದರಲ್ಲಿ ಸಂದರ್ಶಕಿ ಕೇಳಿದ ಪ್ರಶ್ನೆಗೆ ಸಹ್ರಾ ಹೀಗೆ ಉತ್ತರಿಸುತ್ತಾರೆ: “ಮಹಿಳಾ ಶೋಷಣೆಯನ್ನು ಕುರಿತಂತೆ ಜಾಗತಿಕ ಮಟ್ಟದಲ್ಲಿ ಹಲವಾರು ಸಿನಿಮಾಗಳು ನಿರ್ಮಾಣಗೊಂಡು, ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿವೆ. ಇಷ್ಟಕ್ಕೆ ವಿರುದ್ಧವಾದ ಮದುವೆ ಮತ್ತು ತಾಯಿತನವನ್ನು ವಿರೋದಿಸುತ್ತ ಆ ನಿರ್ಧಾರವೂ ತಮ್ಮದೇ ಆಗಿರಬೇಕೆಂದು ಬಯಸುವ ಮಹಿಳೆಯರಿಗಾಗಿ ಈ ಸಿನಿಮಾ.”
ಅಘಾನಿಸ್ತಾನದ ಮೂವರು ಹೆಣ್ಣುಮಕ್ಕಳ ಕಥೆಯನ್ನು ಸರಳವಾಗಿ ಚಿತ್ರೀಕರಿಸಿರುವ ಮೂಲಕ ಅಲ್ಲಿನ ಮಹಿಳೆಯರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದ್ದಾರೆ ಸಹ್ರಾ. ಈ ಸಿನಿಮಾವನ್ನು ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರೇಕ್ಷಕರು ಸ್ವಾಗತಿಸಿದ್ದಾರೆ. ‘ಹಾವ’ ಪಾತ್ರದಲ್ಲಿ ಅರಿಝೋ, ‘ಮರಿಯಮ್’ ಆಗಿ ಅಫ್ಷರ್, ‘ಆಯೇಷ’ ಆಗಿ ಹಸಿಬಾ ಎಬ್ರಹಾಮಿ ನಟಿಸಿದ್ದಾರೆ. ಚಿತ್ರಕಥೆ ಸಮಿ ಹಸೀಬ್ ಅವರದ್ದು.
ಮಂಜುಳಾ ಪ್ರೇಮಕುಮಾರ್
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.