ಸಿನಿ ಸಂಗಾತಿ / ನಿಜವಾದ ಪ್ರೀತಿ ತಿಳಿಸುವ`ಕೆ.ಡಿ.’ -ಮಂಜುಳಾ ಪ್ರೇಮಕುಮಾರ್

ವಿಶಿಷ್ಟ ಮಹಿಳಾ ಪ್ರಧಾನ ವಸ್ತುಗಳು ಮತ್ತು ಪ್ರತಿಭಾನ್ವಿತ ನಿರ್ದೇಶಕಿಯರ ಪ್ರಯೋಗಗಳಿಂದ ತಮಿಳು ಚಿತ್ರರಂಗ ಕಂಗೊಳಿಸುತ್ತಿದೆ. ಮಧುಮಿತಾ ಅವರ ಪ್ರಶಸ್ತಿ ವಿಜೇತ ಸಿನಿಮಾ `ಕೆ.ಡಿ.’ ವ್ಯಕ್ತಿಯೊಬ್ಬನಿಗೆ ಕುಟುಂಬದಲ್ಲಿ ಸಿಗಲಾರದ ಪ್ರೀತಿ ವಿಶ್ವಾಸಗಳು ಅದರ ಆಚೆ ಅಪರಿಚಿತನಿಂದ ದಕ್ಕುವ ಭಾವನಾತ್ಮಕ ವಿಷಯವನ್ನು ಸುಂದರವಾಗಿ ಹೆಣೆದು ವೀಕ್ಷಕರ ಮುಂದಿಡುತ್ತದೆ. ಅಪ್ಪ-ಮಗನ, ತಾತ- ಮೊಮ್ಮಗನ ಪ್ರೀತಿ ಎನ್ನುವುದು ಕರುಳುಬಳ್ಳಿಯಲ್ಲೇ ಅರಳುವ ಹೂವು ಅಲ್ಲ ಎನ್ನುವುದನ್ನು ಮನಮುಟ್ಟುವಂತೆ ಕೇಡಿಲ್ಲದೆ ತಿಳಿಸುವ ಈ ಸಿನಿಮಾ ಹಲವು ಸಿನಿಮೋತ್ಸವಗಳಲ್ಲಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ.

ಇತರ ಭಾರತೀಯ ಭಾಷೆಗಳ ಚಿತ್ರರಂಗದಲ್ಲಿರುವಂತೆಯೇ ತಮಿಳು ಚಿತ್ರರಂಗದಲ್ಲೂ ಹಲವಾರು ಮಹಿಳೆಯರು ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಜನಪ್ರಿಯ ಸಿನಿಮಾಗಳಿಗೆ ಸವಾಲು ಒಡ್ಡುವಂತೆ ನಿರ್ದೇಶನ ಮಾಡಿ ಯಶಸ್ಸು ಕಂಡಿದ್ದಾರೆ. ಮತ್ತು ರಾಷ್ಟ್ರಪ್ರಶಸ್ತಿ ಪಡೆಯುವ ಮೂಲಕ ಭಾರತೀಯ ಚಿತ್ರರಂಗದಲ್ಲಿ ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. ಅತ್ಯಂತ ಸೂಕ್ಷ್ಮಕಥಾ ವಸ್ತುವನ್ನು ಪರಿಣಾಮಕಾರಿಯಾಗಿ ನಿರ್ದೇಶಿಸುವ ಮೂಲಕ ಸಿನಿಮಾ ವೀಕ್ಷಕರ ಗಮನ ಸೆಳೆದಿದ್ದಾರೆ. ರೇವತಿ, ಲಕ್ಷ್ಮಿ ರಾಮಕೃಷ್ಣನ್, ಗಾಯತ್ರಿ, ಕೃತಿಕಾ ಉದಯನಿಧಿ, ಐಶ್ವರ್ಯ ಧನುಷ್, ಪ್ರಿಯ, ಮಧುಮಿತಾ ಮುಂತಾದವರು ಮುಂಚೂಣಿಯಲ್ಲಿದ್ದಾರೆ. ಮುಂಬೈನವರಾದರೂ ತಮಿಳಿನಲ್ಲಿ ಸಿನಿಮಾ ಮಾಡಿ ರಾಷ್ಟ್ರಪ್ರಶಸ್ತಿ ಪಡೆದ ಪ್ರಿಯ ಕೃಷ್ಣಸ್ವಾಮಿ ಅವರನ್ನು ಇಲ್ಲಿ ನೆನೆಯಬೇಕು.

ಮಧುಮಿತಾ ಸುಂದರರಾಮನ್, ತಮ್ಮ ಹನ್ನೆರಡು ವರ್ಷಗಳ ಸಿನಿ ಪಯಣದಲ್ಲಿ ಹಲವಾರು ಕಿರುಚಿತ್ರ, ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿ, ನಂತರದ ದಿನಗಳಲ್ಲಿ ಪೂರ್ಣ ಪ್ರಮಾಣದ ಸಿನಿಮಾ ನಿರ್ದೇಶನದಲ್ಲಿ ತೊಡಗಿಸಿಕೊಂಡವರು. ಅವರ ನಿರ್ದೇಶನದ 2019 ರಲ್ಲಿ ಬಿಡುಗಡೆಯಾದ ತಮಿಳು ಸಿನಿಮಾ “ಕೆ.ಡಿ.” ರಕ್ತ ಸಂಬಂಧವನ್ನೂ ಮೀರಿ ಬೆಳೆಯುವ ಸಂಬಂಧ, ಬಂಧನ, ನಂಟನ್ನು ಗಾಢವಾಗಿ ಅಭಿವ್ಯಕ್ತಿಸುವ ಸಿನಿಮಾ. ಯುಕೆ ಏಷಿಯನ್ ಫಿಲಂ ಫೆಸ್ಟಿವಲ್ ನಲ್ಲಿ ಅತ್ಯುತ್ತಮ ನಿರ್ದೇಶನ ಪ್ರಶಸ್ತಿ ತಂದುಕೊಟ್ಟಿದೆ. ಈ ಸಿನಿಮಾದಲ್ಲಿನ ನಟನೆಗಾಗಿ ನಾಗವಿಶಾಲ್ (ಕುಟ್ಟಿ ) ಜಾಗರಣ್ ಫಿಲಂ ಫೆಸ್ಟಿವಲ್ ನಲ್ಲಿ ಉತ್ತಮ ನಟ ಪ್ರಶಸ್ತಿ ಪಡೆದಿದ್ದಾನೆ.

ನೂರಾರು ವರ್ಷಗಳಿಂದ ಭಾರತೀಯ ಸಮಾಜ ರೂಢಿಸಿಕೊಂಡು ಬಂದಿರುವ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಸಿನಿಮಾಗಳು ಎಲ್ಲ ಭಾರತೀಯ ಭಾಷೆಗಳಲ್ಲೂ ಬಂದು ಹೋಗಿವೆ. ವಯಸ್ಸಾದ ಅಪ್ಪ, ಅಮ್ಮ, ಅಜ್ಜ, ಅಜ್ಜಿ ಮುಂತಾದ ಹಿರಿಯರನ್ನು ಕುಟುಂಬಕ್ಕೆ ಹೊರೆಯಾಗಿದ್ದಾರೆಂದು ಭಾವಿಸುವ ಮಕ್ಕಳು ಅವರನ್ನು ಕೊನೆಗಾಣಿಸಲು ಅನುಸರಿಸುವ ‘ತಲೈಕೂತಲ್’ ಎಂಬ ತಣ್ಣನೆಯ ಕ್ರೌರ್ಯದ ಮಾದರಿಯನ್ನು ಹೇಳುತ್ತಲೇ, ಕುಟುಂಬದ ಆಚೆಗೂ ಗಾಢವಾಗಿ ಬೆಸೆಯುವ ಸಂಬಂಧವೊಂದನ್ನು ಕುರಿತು ಹೇಳುತ್ತಾ ಹೋಗುತ್ತಾರೆ. ಸಂಬಂಧಗಳನ್ನೆಲ್ಲ ತೊರೆದು ಮನೆಬಿಟ್ಟು ಹೊರಡುವ ಸಿನಿಮಾದ ನಾಯಕ, ಎಂಬತ್ತು ವರ್ಷಗಳ ಹಿರಿಯ ಜೀವ ಕರುಪ್ಪು ದೊರೈ ( ಕೆ.ಡಿ.) ಕಂಡುಕೊಂಡ ಜೀವನದ ಅರ್ಥವನ್ನು ನಿರ್ದೇಶಕಿ ಮಧುಮಿತಾ ಸೊಗಸಾಗಿ, ಎಲ್ಲ ವಯೋಮಾನದವರಿಗೂ ಇಷ್ಟವಾಗುವ ಹಾಗೆ ಹೃದಯಂಗಮವಾಗಿ ಕಟ್ಟಿಕೊಟ್ಟಿದ್ದಾರೆ.

ಮೂರು ತಿಂಗಳು ಕೋಮಾದಲ್ಲಿದ್ದು ಎಚ್ಚರವಾಗುವ ಕರುಪ್ಪು ದೊರೈ ಕಿವಿಗೆ ಬೀಳುವ ಮಾತುಗಳು ಆತನಿಗೆ ಆಘಾತವನ್ನುಂಟು ಮಾಡುತ್ತವೆ. ಆಸ್ತಿಗಾಗಿ ಮಕ್ಕಳು ಸೊಸೆಯರು ‘ತಲೈಕೂತಲ್’ ಮಾಡುವ ಕುರಿತು ಚರ್ಚಿಸುತ್ತಿದ್ದಾರೆ. ಅವರನ್ನು ವಿರೋಧಿಸುತ್ತಾ ಅಳುತ್ತಿದ್ದಾಳೆ ಎರಡನೆ ಮಗಳು. ಅಷ್ಟರಲ್ಲಿ ಹುಡುಗಿಯೊಬ್ಬಳು ಬಂದು ‘ತಾತ ಪೋಯಿಟ್ಟಾರು ” ಎಂದು ಹೇಳುತ್ತಾಳೆ. ‘ಜೀವ ಹೋಗಿರಬಹುದು’ ಎಂದು ಭಾವಿಸಿ ಆಸ್ತಿ ಪತ್ರಕ್ಕೆ ಹೆಬ್ಬೆಟ್ಟು ಒತ್ತಿಸಿಕೊಳ್ಳಲು ಪತ್ರ ಹಿಡಿದು ಬರುವ ಮಗನಿಗೆ ಮತ್ತು ಇತರರಿಗೆ ಕಂಡಿದ್ದು ಖಾಲಿ ಹಾಸಿಗೆ. ಅಪ್ಪ ಅಲ್ಲಿಲ್ಲ. ಮಕ್ಕಳ ಕುತಂತ್ರದಿಂದ ನೊಂದು ಹಿಂಬಾಗಿಲಿನಿಂದ ಮನೆಗೆ ಬಿಟ್ಟು ಹೋಗಿರುತ್ತಾನೆ. ಹುಡುಕಾಟ ಪ್ರಾರಂಭವಾಗುತ್ತದೆ. ಅದಕ್ಕಾಗಿ ಸ್ಥಳೀಯ ಪತ್ತೇದಾರನೊಬ್ಬನ ಸಹಾಯ ಪಡೆಯುತ್ತಾರೆ. ಕೆ.ಡಿ. (ಯ ) ಆಸೆಗಳು, ಹವ್ಯಾಸಗಳಾದ, ಬಿರಿಯಾನಿ ಬಯಕೆ, ಎಂ ಜಿ ಆರ್ ಮೇಲಿನ ಪ್ರೀತಿ, ಹಗ್ಗಕ್ಕೆ ವಿಶೇಷವಾದ ರೀತಿಯಲ್ಲಿ ಗಂಟು ಹಾಕುವುದು, ಪಂಚಗವ್ಯ ತಯಾರಿಕೆ ಮುಂತಾದವುಗಳ ಆಧಾರದ ಮೇಲೆ ಹುಡುಕಲು ಹೊರಡುತ್ತಾನೆ.

ಇತ್ತ, ಸಾಕಷ್ಟು ಅಲೆದಾಡಿದ ಕೆ.ಡಿ. ದೇವಸ್ಥಾನ ಒಂದರಲ್ಲಿ ವಿಶ್ರಮಿಸುತ್ತಾನೆ. ಇಲ್ಲಿ ಪರಿಚಯವಾಗುವ ಹುಡುಗ ಕುಟ್ಟಿ. ಎಂಟು ವರ್ಷದ ಕುಟ್ಟಿ ಆರಂಭದಲ್ಲಿ ಕೆ.ಡಿ. ಯನ್ನು ರೇಗಿಸುತ್ತಾ, ಪೀಡಿಸುತ್ತಾ, ಒರಟಾಗಿ ನಡೆದು ಕೊಳ್ಳುತ್ತಾನೆ. ಆದರೂ ಬೇಸರಿಸದ ಕೆ.ಡಿ. ಅದನ್ನೆಲ್ಲ ಖುಷಿಯಾಗೆ ಸಹಿಸುತ್ತಾನೆ. ದಿನ ಕಳೆದಂತೆ ಇಬ್ಬರ ನಡುವೆ ತಾತ, ಮೊಮ್ಮಗನ ಬಾಂಧವ್ಯವೊಂದು ಬೆಳೆಯುತ್ತಾ ಹೋಗುತ್ತದೆ. ಐದು ಜನ ಮಕ್ಕಳು, ಬಂಧು ಬಳಗ, ಇತ್ಯಾದಿ ರಕ್ತ ಸಂಬಂಧಿಗಳಿದ್ದೂ ಒಂಟಿಯಾಗಿರುವ ಕರುಪ್ಪು ದೊರೈ, ತಂದೆ ತಾಯಿ ಯಾರೆಂಬುದೆ ಗೊತ್ತಿಲ್ಲದೆ ಅನಾಥವಾಗಿ ದೇವಸ್ಥಾನದಲ್ಲೆ ಬೆಳೆದ ಬಾಲಕ ಕುಟ್ಟಿ. ಅರಿವಾಗದೆಯೆ ಇವರಿಬ್ಬರನ್ನು ಬೆಸೆಯುವ ಅಜ್ಜ ಮೊಮ್ಮಗನ ಬಾಂಧವ್ಯ. ಗೊತ್ತು ಗುರಿ ಇಲ್ಲದೆ ಮನಬಂದಂತೆ ಅಲೆವ ಇವರ ನಡುವೆ ಪ್ರೀತಿ, ವಾತ್ಸಲ್ಯ ಅರಳುತ್ತಾ ಹೋಗುತ್ತದೆ. ಜೀವನೋತ್ಸಾಹವೇ ಮೈವೆತ್ತಂತೆ ಸದಾ ಖುಷಿಯಿಂದರುವ ಕುಟ್ಟಿ ಕೆ ಡಿ ಯಲ್ಲಿ ಬದುಕುವ ಉತ್ಸಾಹ ತುಂಬುತ್ತಾ ಹೋಗುತ್ತಾನೆ. ‘ಕರುಪ್ಪು ದೊರೈ’ ಎಂಬ ಉದ್ದದ ಹೆಸರನ್ನು ಕೆ.ಡಿ. ಎಂದು ಬದಲಾಯಿಸುವುದು ಕುಟ್ಟಿಯೇ.

ಇವರ ಅಲೆದಾಟದಲ್ಲಿ ತಾತನ ಜೀವನದಲ್ಲಿ ಈಡೇರದ ಹತ್ತು ಬಯಕೆಗಳನ್ನು ಅರಿತ ಕುಟ್ಟಿ ಅವುಗಳನ್ನು ಈಡೇರಿಸುತ್ತಾನೆ. ಪ್ರತಿದಿನ ಬಿರಿಯಾನಿ ತಿನ್ನುವುದು, ವೇದಿಕೆಯ ಮೇಲೆ ಎಂ ಜಿ ಆರ್ ಮತ್ತು ರಜನೀಕಾಂತ್ ಪಾತ್ರ ನಿರ್ವಹಿಸುವುದು, ಬಾಲ್ಯದ ಗೆಳೆಯನೊಬ್ಬನನ್ನು ಹಿಂಬದಿ ಕೂಡಿಸಿಕೊಂಡು ಬೈಕ್ ಓಡಿಸುವುದು, ಅಕ್ಷರ ಕಲಿಯುವುದು, ಸ್ಕೂಲಿನಲ್ಲಿ ಇಷ್ಟಪಟ್ಟ ಹುಡುಗಿ ವಳ್ಳಿಯನ್ನು ಭೇಟಿಮಾಡುವುದು, ಸಿನಿಮಾವೊಂದರಲ್ಲಿ ಅಭಿನಯಿಸುವುದು ಇತ್ಯಾದಿ. ಈ ನಡುವೆ ಮುಜರಾಯಿ ಇಲಾಖೆಯ ಅಧಿಕಾರಿಯೊಬ್ಬರು ಕುಟ್ಟಿಯನ್ನು ಚೆನ್ನೈನ ಉಚಿತ ಬೋರ್ಡಿಂಗ್ ಶಾಲೆಗೆ ಸೇರಿಸುವ ವ್ಯವಸ್ಥೆ ಮಾಡುತ್ತಾನೆ. ವಿಷಯ ತಿಳಿದು ದುಃಖ ಪಡುವ ಕೆ.ಡಿ. ತನ್ನ ಜೀವನದಲ್ಲಿ ಅನುಭವಿಸದ ಸಂತೋಷವನ್ನು ಕೆಲವೇ ದಿನಗಳಲ್ಲೇ ಮೊಗೆ ಮೊಗೆದು ಕೊಟ್ಟ ಕುಟ್ಟಿಯಿಲ್ಲದ ಬದುಕನ್ನು ಊಹಿಸಿಕೊಳ್ಳಲಾಗದೆ ರೈಲ್ವೆ ಸ್ಟೇಷನ್ನಿನ ಬೆಂಚಿನ ಬೆನ್ನಿಗೊರಗಿ ಕುಳಿತುಬಿಡುತ್ತಾನೆ. ಕುಟ್ಟಿಯೂ ಅಷ್ಟೆ ತಾತನನ್ನು ಬಿಟ್ಟಿರಲಾರ. ಕೊನೆಗೆ ತಾತನ ಹತ್ತನೇ ಆಸೆಯಾದ, ‘ಕುಟ್ಟಿ ಓದಿ, ಸಮಾಜದಲ್ಲಿ ದೊಡ್ಡ ಸ್ಥಾನ ಪಡೆಯ ಬೇಕು’ ಎಂಬುದನ್ನು ಈಡೇರಿಸಲು ಹೊರಡುತ್ತಾನೆ. ಇತ್ತ ಪತ್ತೇದಾರನೊಂದಿಗೆ ವಾಪಸು ಮನೆಗೆ ಬರುವ ಕರುಪ್ಪುದೊರೈ ಉಯಿಲಿನ ಪತ್ರಕ್ಕೆ ಹೆಬ್ಬೆಟ್ಟು ಒತ್ತದೆ ‘ಸಹಿ’ ಹಾಕುತ್ತಾನೆ. ಬರಹವನ್ನೂ ಕುಟ್ಟಿಯೆ ಕಲಿಸಿರುತ್ತಾನೆ. ಸಹಿ
ಹಾಕಿದ ನಂತರ ಮತ್ತೆ ದಯಾಮರಣಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಾರೆ ಮಕ್ಕಳು. ಭ್ರಮನಿರಸನಗೊಂಡ ಅಪ್ಪ ಮತ್ತೆ ಮನೆಬಿಟ್ಟು ಹೋಗುತ್ತಾನೆ.

ಬದುಕಿನ ಕೊನೆಯ ಹಂತದಲ್ಲಿ ಸ್ವಂತ ಮಕ್ಕಳ ಜೊತೆಗಿನ ಸಂಬಂಧಗಳನ್ನು ಕಳೆದುಕೊಳ್ಳುವ ಕರುಪ್ಪು ದೊರೈ, ಬದುಕಿನ ಕೊನೆಯ ದಿನಗಳಲ್ಲಿ ಪರಿಚಯವಾದ ಹುಡುಗನಲ್ಲಿ ಆತ್ಮೀಯ ಭಾವ, ಯಾವುದೊ ಜನ್ಮದ ಸಂಬಂಧ ಎನ್ನುವಂತೆ ಸಾಂಗತ್ಯಗೊಳ್ಳುವ ಪರಿಯನ್ನು ಈ ಚಿತ್ರ ಅತ್ಯಂತ ಸಶಕ್ತವಾಗಿ ಧ್ವನಿಸುತ್ತದೆ. ಅಲ್ಲದೆ ‘ಮಕ್ಕಳೇ ಬದುಕಿನ ಸರ್ವಸ್ವ’ ಎಂದು ಪ್ರೀತಿ ಮಾಡುವ ಹೆತ್ತವರನ್ನು ‘ಹೊರೆ’ ಎಂದು ಭಾವಿಸಿ, ಅವರ ಬದುಕನ್ನೇ ಕೊನೆಗಾಣಿಸಲು ಹೊರಡುವ ಹೃದಯಹೀನ ಮಕ್ಕಳ ನಡವಳಿಕೆಗಳನ್ನು ಅತ್ಯಂತ ಗಂಭೀರವಾಗಿ, ಹಾಸ್ಯದ ಮಿಳಿತದೊಂದಿಗೆ ಸಿನಿಮಾ ಆಗಿಸಿದ್ದಾರೆ ಮಧುಮಿತಾ.

ನಿಷ್ಕಲ್ಮಶ ಪ್ರೀತಿಯ, ಭಾವಗಳನ್ನು ಮೀಟುವ, ಮತ್ತೆ ಮತ್ತೆ ನೋಡಬೇಕೆನಿಸುವ ಸಿನಿಮಾದ ಕುಟ್ಟಿಯ ಪಾತ್ರದಲ್ಲಿ ನಾಗವಿಶಾಲ್, ಕರುಪ್ಪು ದೊರೈ ಆಗಿ ಮು. ರಾಮಸ್ವಾಮಿ, ಇಬ್ಬರು ಪೈಪೋಟಿಗೆ ಬಿದ್ದಂತೆ ಅಭಿನಯಿಸಿದ್ದಾರೆ. ನಾಗವಿಶಾಲ್ ಇದು ಮೊದಲನೆಯ ಸಿನಿಮಾ ಆದರೂ ಅತ್ಯಂತ ಲವಲವಿಕೆಯ ಅಭಿನಯದ ಮೂಲಕ ಗಮನ ಸೆಳೆಯುತ್ತಾನೆ.
ರಾಮಸ್ವಾಮಿ ಅವರದು ಅದ್ಭುತವಾದ ಅಭಿನಯ. ರಂಗಭೂಮಿಯನ್ನು ಅತಿಯಾಗಿ ಪ್ರೀತಿಸುವ ರಾಮಸ್ವಾಮಿ ಹಲವಾರು ನಾಟಕಗಳನ್ನು ನಿರ್ದೇಶಿಸಿ, ಅಭಿನಯಿಸಿದ ಅನುಭವವುಳ್ಳವರು. ಕಥೆ, ಚಿತ್ರಕಥೆ, ಮಧುಮಿತಾ ಅವರದ್ದು, ಸಂಗೀತ ಕಾರ್ತಿಕೇಯ ಸ್ವಾಮಿ. ಛಾಯಾಗ್ರಹಣ ಮಯ್ಯೇಂದ್ರನ್ ಕೆಂಪರಾಜು. ಮತ್ತೆ ಮತ್ತೆ ಕೇಳಬೇಕೆನಿಸೋ ಮೂರು ಚೆಂದದ ಹಾಡುಗಳಿವೆ.

ಮಂಜುಳಾ ಪ್ರೇಮಕುಮಾರ್

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *