ಸಿನಿ ಸಂಗಾತಿ/ ಗಂಭೀರ ವಸ್ತು, ಸರಳ ಸಿನಿಮಾ – ಮಂಜುಳಾ ಪ್ರೇಮಕುಮಾರ್

ಕುಟುಂಬಕ್ಕೆ ಹೊರೆ ಎನಿಸಿದ ವೃದ್ಧರನ್ನ, ಮುಪ್ಪಿನ ದೌರ್ಬಲ್ಯವುಳ್ಳ ಹಿರಿಯರನ್ನು, ಚೇತರಿಸಿಕೊಳ್ಳಲಾರದ ಸ್ಥಿತಿಯಲ್ಲಿರುವ ರೋಗಿಗಳನ್ನು ಕುಟುಂಬದ ಸದಸ್ಯರೇ ಬೇರೆ ಬೇರೆ ಕ್ರಮಗಳನ್ನು ಬಳಕೆ ಮಾಡಿ ಕೊಲ್ಲುವುದು ‘ತಲೈಕೂತಲ್’. ಸಾಮಾಜಿಕ ಪಿಡುಗೊಂದರ ಸತ್ಯಘಟನೆಗಳನ್ನು ಆಧರಿಸಿ ಪ್ರಿಯಾ ಕೃಷ್ಣಸ್ವಾಮಿ ಚಿತ್ರೀಕರಿಸಿರುವ ತಮಿಳು ಸಿನಿಮಾ ‘ಭಾರಂ’ (ದಿ ಬರ್ಡನ್) ಅನೇಕ ರಾಷ್ಟ್ರೀಯ, ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಚಿತ್ರ ಜಗತ್ತಿನ ಗಮನ ಸೆಳೆದಿದೆ.

ಕರುಪ್ಪುಸಾಮಿ ರಾತ್ರಿ ಪಾಳಿಯ ಕಾವಲುಗಾರ. ತಂಗಿಯ ಕುಟುಂಬದ ಜೊತೆ ಪಟ್ಟಣದಲ್ಲಿ ವಾಸ. ತಂಗಿಗೆ ಪ್ರೀತಿಯ ಅಣ್ಣ, ಅವಳ ಮಕ್ಕಳಾದ ವೀರ ಮತ್ತು ಮುರುಗನ್ ಅವರುಗಳಿಗೆ ಅಕ್ಕರೆಯ ಮಾವ. ಹಳ್ಳಿಯಲ್ಲಿ ನೆಲೆಸಿರುವ ಮಗ ಸೆಂತಿಲ್ ಮತ್ತವನ ಕುಟುಂಬ. ಕೆಲಸ ಮುಗಿಸಿ ವಾಪಸಾಗುವಾಗ ಅಪಘಾತಕ್ಕೀಡಾಗುವ ಕರುಪ್ಪುಸಾಮಿ ನಡೆಯಲಾಗದೆ ಹಾಸಿಗೆ ಹಿಡಿಯುತ್ತಾನೆ. ಶಸ್ತ್ರಕ್ರಿಯೆ ಮಾಡಬೇಕೆನ್ನುವ ಸರಕಾರಿ ಆಸ್ಪತ್ರೆಯ ಡಾಕ್ಟರ ಸಲಹೆಗೆ ಒಪ್ಪಿಕೊಳ್ಳುತ್ತಾರೆ ತಂಗಿಯ ಮಕ್ಕಳು. ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ಮಾಡಲು ಕೆಲವು ಸರಕಾರಿ ಕಚೇರಿಗಳಿಂದ ಹಲವು ಸರ್ಟಿಫಿಕೇಟುಗಳು ಬೇಕಾಗುತ್ತವೆ. ಕೊಡಲು ಅಲ್ಲಿನ ಸಿಬ್ಬಂದಿ ಲಂಚ ಕೇಳುತ್ತಾರೆ. ಖರ್ಚುಮಾಡಲು ಬೇಸರಿಸುವ ಮಗ, ‘ಹಳ್ಳಿಗೆ ಕರೆದುಕೊಂಡು ಹೋಗಿ, ಹಳ್ಳಿಯ ವೈದ್ಯರಿಂದಲೇ ಚಿಕಿತ್ಸೆ ಕೊಡಿಸುವುದಾಗಿ’ ಹೇಳಿ ಕರೆದುಕೊಂಡು ಹೋಗುತ್ತಾನೆ.

ಮಗನ ಮನೆಗೆ ಹೋದನಂತರ ಮಗ, ಸೊಸೆಯ ತಾತ್ಸಾರದಿಂದ ಕರುಪ್ಪುಸಾಮಿ ಮಾನಸಿಕವಾಗಿ ಕುಗ್ಗಿಹೋಗುತ್ತಾನೆ. ದೈಹಿಕ, ಮಾನಸಿಕ ನೋವಿನಿಂದ ಬಳಲುವ ಕರುಪ್ಪುಸಾಮಿ ಸ್ವಲ್ಪ ಮಟ್ಟಿನ ಖುಷಿಕೊಡುವ ಸಂಗತಿಯೆಂದರೆ ಆಗಾಗ ಬಂದು ಆರೋಗ್ಯ ವಿಚಾರಿಸುವ ತಂಗಿ ಮತ್ತು ಅವಳ ಮಕ್ಕಳು. ನಿಷ್ಕ್ರಿಯವಾದ ಸೊಂಟದ ಕೆಳಗಿನ ಭಾಗದ ನೋವು ಬಿಟ್ಟರೆ ಉಳಿದಂತೆ ಆರೋಗ್ಯವಾಗೇ ಇದ್ದ ಕರುಪ್ಪುಸಾಮಿ ಹಳ್ಳಿಗೆ ಬಂದ ಎಂಟೇ ದಿನಗಳಲ್ಲಿ ಸಾವನ್ನಪ್ಪುತ್ತಾನೆ. ಅಂತ್ಯಸಂಸ್ಕಾರಕ್ಕೆಂದು ಬಂದ ವೀರನಿಗೆ ಮಾವನ ಅಸಹಜ ಸಾವಿನ ಕುರಿತಾದ ಸುಳಿವೊಂದು ಸಿಗುತ್ತದೆ. ಸಂಶಯಗೊಂಡವನು ಅದರ ಜಾಡು ಹಿಡಿದು ಕಾರಣ ಹುಡುಕಲು ಹೊರಡುತ್ತಾನೆ. ಈ ಹುಡುಕಾಟದಲ್ಲಿ ಅನಾವರಣಗೊಳ್ಳುವ ಸಾಮಾಜಿಕ ಪಿಡುಗೊಂದರ ಆಚರಣೆ ಬೆಚ್ಚಿಬೀಳಿಸುತ್ತದೆ. ಮಾವ, ಅವನಂತೆ ಅನೇಕರು ಈ ತಣ್ಣನೆಯ ಕ್ರೌರ್ಯಕ್ಕೆ ಬಲಿಯಾಗಿರುತ್ತಾರೆ. ಹಲವಾರು ಹಳ್ಳಿಗಳಲ್ಲಿ ಅಲೆದಾಡಿ, ಅನೇಕರನ್ನು ಭೇಟಿಮಾಡಿ, ಮಾಹಿತಿ ಕಲೆಹಾಕಿ, ಸಾಕ್ಷಿ ಸಮೇತ ಪೊಲೀಸರಿಗೆ ದೂರು ಕೊಡುತ್ತಾನೆ. ಪ್ರಾಮಾಣಿಕ ಅಧಿಕಾರಿಯೊಬ್ಬರು ತನಿಖೆ ನಡೆಸಿ ಅಪರಾಧಿಗಳನ್ನು ಬಂಧಿಸಲು ಪ್ರಯತ್ನಿಸುತ್ತಾರೆ ಅಪರಾಧಿ ಒಬ್ಬನಾ? ಇಬ್ಬರಾ? ಅಥವಾ ಹಲವರಾ? ಎಂಬುದಿಲ್ಲಿ ಪ್ರಶ್ನೆ. ಚುನಾವಣೆ ಹತ್ತಿರವಿರುವುದರಿಂದ ಬಂಧಿಸದಂತೆ ಗೃಹಮಂತ್ರಿ ಒತ್ತಡ ಹಾಕುತ್ತಾನೆ. ಅಸಹಜ ಸಾವೊಂದು ‘ಸಹಜ ಸಾವು’ಎಂದು ‘ಕೇಸ್ ಕ್ಲೋಸ್’ ಆಗುತ್ತದೆ.

2018 ರಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ತಮಿಳು ಸಿನಿಮಾ ‘ಭಾರಂ’ (ದಿ ಬರ್ಡನ್) ನ ಕಥೆ. ನಿರ್ದೇಶಕರು ಪ್ರಿಯಾ ಕೃಷ್ಣಸ್ವಾಮಿ. ದಕ್ಷಿಣ ತಮಿಳು ನಾಡಿನ ಗ್ರಾಮೀಣ ತಳ ಸಮುದಾಯಗಳಲ್ಲಿ ಪ್ರಚಲಿತವಿರುವ ಅಮಾನವೀಯ ಮತ್ತು ಕಾನೂನು ಬಾಹಿರವಾಗಿರುವ “ತಲೈಕೂತಲ್” ಎಂಬ ಸಾಮಾಜಿಕ ಪಿಡುಗೊಂದರ ಸತ್ಯಘಟನೆಗಳನ್ನು ಆಧರಿಸಿ ಚಿತ್ರೀಕರಿಸಿರುವ ಸಿನಿಮಾ. ಆ ಸ್ಥಳಗಳಲ್ಲೆಲ್ಲ ಪ್ರವಾಸ ಮಾಡಿ, ಮಾಹಿತಿ ಕಲೆಹಾಕಿ, ತಾವೇ ಚಿತ್ರಕಥೆ ಬರೆದು ನಿರ್ದೇಶನವನ್ನು ಮಾಡಿದ್ದಾರೆ.


ಕುಟುಂಬಕ್ಕೆ ಹೊರೆ ಎನಿಸಿದ ವೃದ್ಧರನ್ನ, ಮುಪ್ಪಿನ ದೌರ್ಬಲ್ಯವುಳ್ಳ ಹಿರಿಯರನ್ನ, ಚೇತರಿಸಿಕೊಳ್ಳಲಾರದ ಸ್ಥಿತಿಯಲ್ಲಿರುವ ರೋಗಿಗಳನ್ನ ಕುಟುಂಬದ ಸದಸ್ಯರೇ ಬೇರೆ ಬೇರೆ ಕ್ರಮಗಳನ್ನು ಬಳಕೆ ಮಾಡಿ ಕೊಲ್ಲುವುದು ‘ತಲೈಕೂತಲ್’. ತಲೆಗೆ ತಣ್ಣೀರಿನಿಂದ ಮಸಾಜ್ ಮಾಡಿ ಬಲವಂತವಾಗಿ ಅಸುನೀಗುವಂತೆ ಮಾಡುವುದು. ನೆತ್ತಿಗೆ, ಅಂಗೈ, ಅಂಗಾಲುಗಳಿಗೆ ಶೀತನೀರಿನಿಂದ ಮಸಾಜ್ ಮಾಡುವುದರಿಂದ ದೇಹದಲ್ಲಿನ ಉಷ್ಣಾಂಶ ಕಡಿಮೆಯಾಗಿ, ಉಸಿರಾಟದಲ್ಲಿ ಏರುಪೇರಾಗಿ, ಹೃದಯ ಬಡಿತದ ವೈಫಲ್ಯದಿಂದ ವ್ಯಕ್ತಿ ಸಾವನ್ನಪ್ಪುತ್ತಾನೆ.

ತಿಳಿಯದವರಿಗೆ ಅದು ಸಹಜ ಸಾವೆನಿಸುತ್ತದೆ. ಇದೊಂದೇ ವಿಧಾನವಲ್ಲದೆ, ಗಂಟಲಿಗೆ ಮಣ್ಣು ತುಂಬುವುದು, ಮೂಗು ಬಿಗಿಯಾಗಿ ಮುಚ್ಚಿ ಗಂಟಲಿಗೆ ಬಿಸಿ ಅಥವಾ ಅತೀ ತಣ್ಣನೆಯ ದ್ರವಾಹಾರ ಸುರಿಯುವುದು, ಬಲವಂತವಾಗಿ ಕೆಸರು ತುಂಬುವುದು, ಊಟದಲ್ಲಿ ವಿಷದ ಬೆರಕೆ, ಗೊತ್ತಾಗದಂತೆ ವಿಷದ ಮಾತ್ರೆ ನುಂಗಿಸುವುದು, ವಿಷದ ಇಂಜೆಕ್ಷನ್ ಚುಚ್ಚುವುದು, ಇತ್ಯಾದಿಯಾಗಿ ಇಪ್ಪತ್ತಾರು ವಿಧಾನಗಳು ಬಳಕೆಯಲ್ಲಿವೆ. ಹಣದ ಆಸೆಗಾಗಿ ಆಸ್ಪತ್ರೆಯ ಸಿಬ್ಬಂದಿಯು ಕುಟುಂಬದವರ ಜೊತೆ ಕೈಗೂಡಿಸುತ್ತಾರೆ.

ಎಷ್ಟೋ ಸಾರಿ ‘ತಲೈಕೂತಲ್’ ಮಾಡಲು ಇಷ್ಟವಿಲ್ಲದಿದ್ದರೂ ಅನಿವಾರ್ಯವಾಗಿ ಮಾಡಲೇ ಬೇಕಾದಂತಹ ಪರಿಸ್ಥಿತಿ ಎದುರಾಗುತ್ತದೆ. ರೋಗಿಗಳ, ವೃದ್ಧರು, ದೈಹಿಕ ಮತ್ತು ಮಾನಸಿಕ ನರಳಾಟದಿಂದ ಹಿಂಸೆ ಪಡುವುದನ್ನು ನೋಡಲಾರದೆ, ಆರ್ಥಿಕ ಮುಗ್ಗಟ್ಟಿನಿಂದ ಚಿಕಿತ್ಸೆ ಕೊಡಿಸಲಾರದೆ, ಕುಟುಂಬದ ಇತರ ಸದಸ್ಯರ ಒತ್ತಾಯಕ್ಕೆ ಮಣಿದು, ಆಸ್ತಿಯ ಆಸೆಗಾಗಿ, ಕೆಲವೊಮ್ಮೆ, ನಿರುದ್ಯೋಗಿ ಮಗ ನಿವೃತ್ತಿಯ ಅಂಚಿನಲ್ಲಿರುವ ತಂದೆಯ ಸರಕಾರಿ ನೌಕರಿ ಪಡೆಯುವ ಸಲುವಾಗಿ, ಇಂತಹ ಹಲವಾರು ಕಾರಣಗಳಿಗಾಗಿ ಹತ್ಯೆ ಮಾಡಬೇಕಾಗುತ್ತದೆ.

ಹೆಚ್ಚಾಗಿ ಈ ಕೃತ್ಯ ಎಸಗುವವರು ಗಂಡು ಮಕ್ಕಳು ಮತ್ತು ಸೊಸೆಯರು, ಹೆಣ್ಣುಮಕ್ಕಳು ಮತ್ತು ಅಳಿಯಂದಿರು, ನೆರೆಹೊರೆಯವರು ಪರಸ್ಪರ ಸಹಕರಿಸುತ್ತಾರೆ. ಇವರ ದೃಷ್ಟಿಯಲ್ಲಿ ಇದೊಂದು ‘ದಯಾಮರಣ’. ಎಷ್ಟೋ ಜನ ಹಿರಿಯರು ಕೊಲ್ಲುವ ಸುಳಿವು ಸಿಕ್ಕಕೂಡಲೇ ಮನೆಯವರ ಕಣ್ತಪ್ಪಿಸಿ ದೂರ ಹೋಗಿರುತ್ತಾರೆ.

ಬಾಲಿವುಡ್ ನಟ ಅಮೀರ್ ಖಾನ್ ನಡೆಸಿಕೊಡುತ್ತಿದ್ದ ‘ಸತ್ಯಮೇವ ಜಯತೇ’ ಕಾರ್ಯಕ್ರಮದಲ್ಲಿ ‘ತಲೈಕೂತಲ್ ‘ ಕುರಿತಾದ ಚರ್ಚೆ, ಹಾಗು ಆನ್ಲೈನ್ ಪತ್ರಿಕೆ ಒಂದರಲ್ಲಿ ಪ್ರಕಟವಾದ ಲೇಖನವೊಂದರಿಂದ ಪ್ರೇರಿತರಾದ ಪ್ರಿಯಾ ಈ ಕುರಿತು ಸಾಕ್ಷ್ಯಚಿತ್ರ ಮಾಡಲು ನಿರ್ಧರಿಸುತ್ತಾರೆ, ಮತ್ತೆ ಮನಬದಲಿಸಿ ಪೂರ್ಣಪ್ರಮಾಣದ ಚಲನಚಿತ್ರವನ್ನಾಗಿಸುವ ನಿಟ್ಟಿನಲ್ಲಿ ತೊಡಗಿಸಿ ಕೊಳ್ಳುತ್ತಾರೆ. ಮೂಲತಃ ಮುಂಬೈನವರಾದ
ಪ್ರಿಯಾ, ಹಲವಾರು ಸಾಕ್ಷ್ಯ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಅವರ ಸಿನಿಮಾ ಯಾನ ಪ್ರಾರಂಭವಾಗಿದ್ದು 2013 ರಲ್ಲಿ ತೆರೆಗೆ ಬಂದ ‘ಗಂಗೂಬಾಯಿ’ ಚಿತ್ರದಿಂದ.

‘ಭಾರಂ’ ಪ್ರಿಯಾ ಅವರ ಎರಡನೇ ಸಿನಿಮಾ, ಈ ಸಿನಿಮಾ ಮಾಡುವ ಮೊದಲು ಪ್ರಿಯಾ ಅವರು ಎದುರಿಸಿದ ಸವಾಲುಗಳು ಹಲವಾರು. ತಮಿಳುನಾಡಿನ ಉದ್ದಗಲಕ್ಕೂ ಸಂಚರಿಸಿ, ಹಲವಾರು ಸಂಘ ಸಂಸ್ಥೆ, ಎನ್ ಜಿ ಓ ಗಳನ್ನು ಹಾಗೂ ಊರಿನ ಹಿರಿಯರನ್ನು ಭೇಟಿಮಾಡಿ, ಮಾಹಿತಿ ಸಂಗ್ರಹಿಸುತ್ತಾರೆ. ಎರಡೇ ವಾರಗಳಲ್ಲಿ ಚಿತ್ರಕಥೆ, ಸಂಭಾಷಣೆ ಬರೆಯುತ್ತಾರೆ. ಸುಮಾರು ಎಂಬತ್ತು ಜನ ನಟ, ನಟಿಯರನ್ನು ರಂಗಭೂಮಿ, ಸ್ಥಳೀಯ ಕಲಾವಿದರು, ಹಾಗೂ ಪಾಂಡಿಚೆರಿಯ ‘ಡಿಪಾರ್ಟ್ಮೆಂಟ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ‘ ಇನ್ಸ್ಟಿಟ್ಯೂಟಿನ
ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ, ಅವರಿಗೆ ಎರಡು ವಾರಗಳ ಕಾಲ ನಟನೆಯಲ್ಲಿ ತರಬೇತಿ
ಕೊಟ್ಟು, ಹದಿನೆಂಟೇ ದಿನಗಳಲ್ಲಿ ಪಾಂಡಿಚೇರಿ, ತಿರುನೆಲ್ವೇಲಿ ಸುತ್ತಮತ್ತಲಿನ ಗ್ರಾಮೀಣ ಪ್ರದೇಶಗಳ ಚಿತ್ರೀಕರಣ ನಡೆಸುತ್ತಾರೆ. ಸ್ಥಳೀಯರ ಬೆದರಿಕೆಗಳಿಗೆ ಕಿವಿಗೊಡದೆ, ಸಾಮಾಜಿಕ ಕಳಕಳಿಯುಳ್ಳ ಈ ಸಿನಿಮಾ
ನಿರ್ದೇಶಿಸಿದ್ದು ಪ್ರಿಯಾ ಅವರಿಗೆ ಸವಾಲೇ ಸರಿ.

2018 ರಲ್ಲಿ ಗೋವಾದಲ್ಲಿ ನಡೆದ 49ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಇಂಡಿಯನ್ ಪನೋರಮ ವಿಭಾಗದಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಂಡು ಚಿತ್ರ ರಂಗದ ಗಮನ ಸೆಳೆಯಿತು. ಅಷ್ಟಾಗಿ ಹೊರಜಗತ್ತಿನ ಗಮನಕ್ಕೆ ಬಾರದೆ, ದಕ್ಷಿಣ ತಮಿಳುನಾಡಿನ ಹಲವಾರು ಹಳ್ಳಿಗಳಲ್ಲಿ ‘ದಯಾ ಮರಣ’ವೆಂದು ಕರೆಸಿಕೊಳ್ಳುತ್ತಿದ್ದ
‘ತಣ್ಣನೆಯ ಕ್ರೌರ್ಯ’ ವನ್ನು ಸಿನಿಮಾ ಚೌಕಟ್ಟಿಗೆ ಅಳವಡಿಸಿದ್ದಾರೆ. 91 ನಿಮಿಷಗಳ ಈ ಚಿತ್ರ, ಅನೇಕ ರಾಷ್ಟ್ರೀಯ, ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಚಿತ್ರ ಜಗತ್ತಿನ ಗಮನ ಸೆಳೆದಿದೆ.
ತಮಿಳುನಾಡು ಸರ್ಕಾರವು ಇದನ್ನು ಗಂಭೀರವಾಗಿ ಪರಿಗಣಿಸಿದೆ. ಆದರೂ ಈ ‘ತಲೈಕೂತಲ್’ ಘಟನೆಗಳು ಮತ್ತೆ ಮತ್ತೆ ಘಟಿಸುತ್ತಲೇ ಇವೆ.

ಗಂಭೀರ ವಸ್ತು, ಸರಳ ಸಿನಿಮಾ 2018 ರಲ್ಲಿ ಚಿತ್ರೀಕರಿಸಿದರೂ, ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು 2020 ರಲ್ಲಿ. ಮುಖ್ಯ ಭೂಮಿಕೆಯಲ್ಲಿ ಆರ್. ರಾಜು, (ಕರುಪ್ಪು ಸಾಮಿ) ಜಯಲಕ್ಷ್ಮಿ, ಸುಗುಮಾರನ್, ಅತುಲ್ಯ ಆನಂದ್, ಇತ್ಯಾದಿ. ನಿರ್ದೇಶನ, ನಿರ್ಮಾಣ, ಕಥೆ, ಸಂಭಾಷಣೆ, ಸಂಕಲನ ಎಲ್ಲವೂ ಪ್ರಿಯಾ ಕೃಷ್ಣಸ್ವಾಮಿ ಅವರದ್ದೇ- ‘ಒನ್ ವುಮನ್ ಶೋ’.

-ಮಂಜುಳಾ ಪ್ರೇಮಕುಮಾರ್

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *