ಸಿನಿ ಸಂಗಾತಿ / ಆಳುವ ವ್ಯವಸ್ಥೆಗೆ ಹಾಕಿದ ಸವಾಲು – ಮಂಜುಳಾ ಪ್ರೇಮಕುಮಾರ್

ಮಗಳನ್ನು ಕಳೆದುಕೊಂಡ ತಾಯಿಯೊಬ್ಬಳು ಪೊಲೀಸ್ ಇಲಾಖೆಯ ಅನಾಸಕ್ತಿಯನ್ನು ಸಾರ್ವಜನಿಕವಾಗಿ ಫಲಕ ಹಾಕಿಸಿ ಪ್ರಶ್ನಿಸಿದ ದಿಟ್ಟ ಹೋರಾಟ ನಡೆಸುವ ಕಥೆ ಹೇಳುವ “ಥ್ರೀ ಬಿಲ್ ಬೋಡ್ರ್ಸ್ ಔಟ್ ಸೈಡ್ ಎಬ್ಬಿಂಗ್, ಮಿಸ್ಸೋರಿ” ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಆಳುವ ವ್ಯವಸ್ಥೆಯ ವಿರುದ್ಧ ಸಿಡಿದೇಳುವುದು ಯಾವ ದೇಶದಲ್ಲೂ ಸುಲಭವಲ್ಲದ ಕಾರಣ, ಈ ಒಬ್ಬಂಟಿ ಮಹಿಳೆಯ ದೃಢ ನಿರ್ಧಾರ ಪ್ರಜ್ಞಾವಂತರ ಮೆಚ್ಚುಗೆ ಪಡೆಯುತ್ತದೆ. ಇದು ಒಂದು ಸತ್ಯ ಘಟನೆಯನ್ನು ಆಧರಿಸಿದ ಅದ್ಭುತ ಚಿತ್ರ.

ಹೆದ್ದಾರಿಯ ಪಕ್ಕದ ಜಾಗದಲ್ಲಿ ಗಾಢ ಕೆಂಪು ವರ್ಣದ ಮೂರು ಜಾಹೀರಾತು ಫಲಕಗಳು, ಅವುಗಳ ಮೇಲೆ ಕಪ್ಪು ಬಣ್ಣದಲ್ಲಿ ಬರೆದ ಬರಹಗಳು ದಾರಿಹೋಕರ ಗಮನ ಸೆಳೆಯುತ್ತಿವೆ. ಈ ದೃಶ್ಯ ಮಾರ್ಟಿನ್ ಮೆಕ್ ಡೊನಾಗ್ ನಿರ್ದೇಶಿಸಿರುವ, 2017 ರಲ್ಲಿ ಬಿಡುಗಡೆಗೊಂಡ “ಥ್ರೀ ಬಿಲ್ ಬೋಡ್ರ್ಸ್ ಔಟ್ ಸೈಡ್ ಎಬ್ಬಿಂಗ್, ಮಿಸ್ಸೋರಿ” ಚಿತ್ರದ್ದು. 1991 ರಲ್ಲಿ, ಅಮೆರಿಕಾದ ಟೆಕ್ಸಾಸ್ ನ ಕ್ಯಾತಿ ಪೇಜ್ ಎಂಬ ಮಹಿಳೆಯ ಕೊಲೆ, ಅದರ ತನಿಖೆಯಲ್ಲಾದ ವಿಳಂಬ, ತನಿಖಾಧಿಕಾರಿಗಳ ನಿರ್ಲಕ್ಷ್ಯ, ಇವುಗಳ ಬಗ್ಗೆ ಅವಳ ತಂದೆ ಮಾಡಿದ ಪ್ರತಿಭಟನೆ, ಪ್ರತಿಭಟಿಸಿದ ರೀತಿ, ಇವುಗಳನ್ನ ಆಧರಿಸಿ ಚಿತ್ರೀಕರಿಸಿರುವ ಸಿನಿಮಾ. ನಿರ್ದೇಶಕ ಮಾರ್ಟಿನ್ ಮೆಕ್ ಡೊನಾಗ್ ಟೆಕ್ಸಾಸ್ ನ ವಿಡೋರ್ ಪ್ರದೇಶದಲ್ಲಿ ಪ್ರಯಾಣಿಸುತ್ತಿರುವಾಗ ರಸ್ತೆ ಬದಿಯಲ್ಲಿ ಕಂಡ ಕೆಲವು ಜಾಹಿರಾತು ಫಲಕಗಳು ಮತ್ತು ಅವುಗಳ ಮೇಲಿನ ಬರಹಗಳು ಗಮನ ಸೆಳೆಯುತ್ತವೆ. ಕೊಲೆಯಾದ ಮಹಿಳೆ ಪೇಜ್ ಳ ತಂದೆ ಈ ಫಲಕಗಳ ಮೇಲೆ, “STEVE PAGE BRUTALLY MURDERED HIS WIFE IN 1991”, “VIDOR POLICE BOTCHED THE CASE”, “WAITING FOR CONFESSION AND THIS COULD HAPPEN TO YOU” ಇತ್ಯಾದಿಯಾಗಿ ಬರೆಸುವ ಮೂಲಕ ಜನರ, ಮಾಧ್ಯಮದವರ ಮತ್ತು ಅಧಿಕಾರಿಗಳ ಗಮನ ಸೆಳೆಯುವ ಪ್ರಯತ್ನ ಮಾಡಿರುತ್ತಾನೆ. ಈ ಬರಹಗಳಿಂದ ಪ್ರೇರಿತರಾದ ಮಾರ್ಟಿನ್ ಇದೇ ಸತ್ಯ ಘಟನೆಯನ್ನೇ ಆಧರಿಸಿ ಕಥೆ ಸಂಭಾಷಣೆ ಬರೆದು, ನಿರ್ದೇಶಿಸಿ ಉತ್ತಮ ಸಿನಿಮಾ ಮಾಡಿದ್ದಾರೆ.

ವಿಚ್ಚೇದಿತ ಮಹಿಳೆ ಮಿಲ್ ಡ್ರೆಡ್ ಹೇಸ್, ಮಗ ರಾಬ್ಬಿ, ಮತ್ತು ಮಗಳು ಏಂಜಲ್ ಜೊತೆ ವಾಸವಾಗಿದ್ದಾಳೆ. ಒಂದು ದಿನ ದುಷ್ಕರ್ಮಿಗಳು ಮಗಳ ಮೇಲೆ ಅತ್ಯಾಚಾರವೆಸಗಿ ಬೆಂಕಿ ಹಚ್ಚಿ ಕೊಲೆ ಮಾಡಿತ್ತಾರೆ. ಘಟನೆ ನಡೆದು ಏಳು ತಿಂಗಳಾದರೂ ಅಪರಾಧಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ವಿಳಂಬ ಮಾಡಿರುತ್ತಾರೆ. ಇದನ್ನು ಪ್ರತಿಭಟಿಸುತ್ತಲೇ ನಾನಾ ರೀತಿಯಾಗಿ ತನ್ನನು ಮಣಿಸಲು ಹೊರಟ ಪೊಲೀಸ್ ವ್ಯವಸ್ಥೆಯ ವಿರುದ್ಧ ಹೋರಾಟಕ್ಕಿಳಿಯುತ್ತಾಳೆ ಹೇಸ್. ಮಿಸ್ಸೋರಿಯ ಹೆದ್ದಾರಿಯಲ್ಲಿ ಪ್ರಯಾಣಿಸುವಾಗ ರಸ್ತೆ ಬದಿಯ ಜಾಗದಲ್ಲಿ ಖಾಲಿ ಇದ್ದ ಮೂರು ಜಾಹೀರಾತು ಫಲಕಗಳು ಕಣ್ಣಿಗೆ ಬೀಳುತ್ತವೆ. ಈ ಫಲಕಗಳನ್ನೆ ಬಾಡಿಗೆಗೆ ಪಡೆದು ತನ್ನ ಒಂಟಿ ಹೋರಾಟಕ್ಕೆ ಜೊತೆಯಾಗಿ ಬಳಸಿಕೊಳ್ಳುತ್ತಾಳೆ. “RAPED WHILE DYING”, “AND STILL NO ARRESTS”, “HOW COME CHIEF WILLOUGHBY” – ಮಗಳಿಗಾದ ಅನ್ಯಾಯ, ತನಿಖೆಯ ವೈಫಲ್ಯಗಳನ್ನು ಈ ಫಲಕಗಳ ಮೇಲೆ ಬರೆಸುವುದರ ಮೂಲಕ ಅಧಿಕಾರಿಗಳ, ಮಾಧ್ಯಮದವರ, ಹಾಗು ಜನರಿಗೆ ಸಂದೇಶವನ್ನು ರವಾನಿಸುತ್ತಾಳೆ ಮತ್ತು ಪ್ರಾಮಾಣಿಕ ಪೊಲೀಸ್ ಅಧಿಕಾರಿ ವಿಲ್ಲೋಗ್ಬೆ ಹಾಗು ಕ್ರೂರ ಅಧಿಕಾರಿ ಡಿಕ್ಸನ್ ನನ್ನು ಎದುರು ಹಾಕಿಕೊಳ್ಳುವ ಮೂಲಕ ಇಡೀ ಪೊಲೀಸ್ ವ್ಯವಸ್ಥೆಯೊಂದಿಗೆ ನೇರವಾಗಿ ಹೋರಾಟಕ್ಕಿಳಿಯುತ್ತಾಳೆ.

ಮಗಳನ್ನು ಕಳೆದುಕೊಂಡ ಅಮ್ಮನ ದುಃಖ, ಒಂಟಿ ಬದುಕಿನ ಖಿನ್ನತೆ, ನ್ಯಾಯ ಪಡೆಯಲೇ ಬೇಕೆಂಬ ಛಲ, ಅದಕ್ಕೆ ಅಡ್ಡಿಯಾಗುವ ಹಲವು ಸಂಗತಿಗಳು ಪೊಲೀಸರ ವಿರುದ್ದ ಒಬ್ಬಂಟಿಯಾಗಿಯೇ ಸಿಡಿದೇಳುವಂತೆ ಮಾಡುತ್ತವೆ. ಅಪರಾಧಿ ಯಾರೆಂದು ಗೊತ್ತಾದರೂ ಏನ್ನನ್ನು ಮಾಡಲಾರದ ಅಸಹಾಯಕತೆ, ತಾಯಿಯ ಹೋರಾಟದಲ್ಲಿ ಸಹಕರಿಸದ ಮಗ, ಹೇಸ್ ಳನ್ನು ಅವಮಾನಿಸುವಾಗ, ಹಿಂಸಿಸುವಾಗ ಡಿಕ್ಸನ್ ಅನುಭವಿಸುವ ವಿಕೃತ ಖುಷಿ, ತನ್ನದೇ ಬದುಕಿನಲ್ಲಿ ಸಂಭವಿಸುವ ಬೆಂಕಿಯ ಅಪಘಾತ ದಲ್ಲಿ ಮೈ ಸುಟ್ಟುಕೊಂಡು ಬದುಕುಳಿದ ನಂತರ ಅವನ ನಡವಳಿಕೆಗಳಲ್ಲಿ ಊಹಿಸಲಾರದ ಬದಲಾವಣೆಯಾಗುತ್ತದೆ.ಇದು ಹೇಸ್ ಳ ಹೋರಾಟಕ್ಕೆ ಬೆಂಬಲವಾಗಿ ನಿಲ್ಲುವಂತೆ ಮಾಡುತ್ತದೆ. ಸಿನಿಮಾದ ಆರಂಭದಲ್ಲಿ ಪ್ರೇಕ್ಷಕರಲ್ಲಿ ಸಿಟ್ಟು ತರಿಸುವ ಡಿಕ್ಸನ್ ಪಾತ್ರ ಅಂತಿಮಘಟ್ಟದಲ್ಲಿ ಇಷ್ಟವಾಗಿಬಿಡುತ್ತದೆ.

ಸಿನಿಮಾದಲ್ಲಿನ ಮೂರು ಪ್ರಮುಖ ಪಾತ್ರಗಳು ಗಮನ ಸೆಳೆಯುತ್ತವೆ, ಅಮ್ಮನ ಪಾತ್ರದಲ್ಲಿ ಫ್ರಾನ್ಸೆಸ್ ಮೆಕ್ ಡಾರ್ಮಂಡ್, ಡಿಕ್ಸನ್ ಪಾತ್ರದಲ್ಲಿ ಸ್ಯಾಮ್ ರೋಕ್ವೆಲ್, ಪೊಲೀಸ್ ಮುಖ್ಯಾಧಿಕಾರಿ ವಿಲ್ಲೋಗ್ಬಿಯಾಗಿ ವೂಡಿ ಹ್ಯಾರೇಲ್ಸೊನ್ ಪೈಪೊಟಿಗೆ ಬಿದ್ದಂತೆ ಅಭಿನಯಿಸಿದ್ದಾರೆ. ಆದರೂ ಹೆಚ್ಚು ಗಮನ ಸೆಳೆಯುವುದು ಹತಾಶ ತಾಯಿಯ ಪಾತ್ರದಲ್ಲಿ ಫ್ರಾನ್ಸೆಸ್ ಮೆಕ್ಡೊರ್ಮಾಂಡ್ ಅವರ ಅಭಿನಯ. ಮಗಳನ್ನು ಕಳೆದುಕೊಂಡ ತಾಯಿಯ ಸಂಕಟ, ತಳಮಳ, ಭಾವೋದ್ವೇಗ ಮುಂತಾದ ಭಾವಗಳನ್ನ ಮುಖದ ಸ್ನಾಯುಗಳ
ಬಿಗಿತದಿಂದಲೇ ಅಭಿವ್ಯಕ್ತಿಗೊಳಿಸುತ್ತಾರೆ. ಸುಮಾರು ಆರು ಅಡಿ ಎತ್ತರ, ಸ್ವಲ್ಪ ಒರಟು ಎನಿಸುವ ಮುಖ, ಕೆಲವು ಸಾರಿ ಒರಟಾಗಿಯೇ ಎಲ್ಲ ಭಾವಗಳನ್ನು ಹೊರಹಾಕುವ ಪರಿಗೆ ಹೇಳಿ ಮಾಡಿಸಿದಂತಿದೆ. ಸಿನಿಮಾದ ಪ್ರತಿ ಫ್ರೇಮಿನಲ್ಲು ಎದ್ದುಕಾಣುವ ಅವರ ಅಭಿನಯ ನೋಡುಗರ ಮನದಲ್ಲಿ ಅಚ್ಚಳಿಯದೆ ಉಳಿಯುವಂತೆ ಮಾಡುತ್ತದೆ. ಅವರ ಈ ಅದ್ಭುತ ನಟನೆಗಾಗಿ ಪ್ರತಿಷ್ಠಿತ “ಆಸ್ಕರ್” ಪ್ರಶಸ್ತಿ ಪಡೆದಿದ್ದಾರೆ.

ನೈಜ ಘಟನೆಯಲ್ಲಿ, ಕೊಲೆಯಾದ ಮಹಿಳೆ ಕ್ಯಾತಿ ಪೇಜ್. ಮಗಳ ಸಾವಿನ ನ್ಯಾಯಕ್ಕಾಗಿ ಹೋರಾಡುವುದು ತಂದೆ ಜೇಮ್ಸ್ ಫ್ಲ್ಯೂಟೊನ್. ಆದರೆ, ಸಿನಿಮಾದಲ್ಲಿ ಮಗಳು ಏಂಜೆಲಿನಾ, ಕೊಲೆಯ ನ್ಯಾಯಕ್ಕಾಗಿ ಹೋರಾಡುವವಳು ತಾಯಿ ಮಿಲ್ ಡ್ರೆಡ್ ಹೇಸ್. ಚಿತ್ರದಲ್ಲೆಲ್ಲೂ ಅತಿರೇಕವೆನಿಸುವ ಸಂಭಾಷಣೆಯಿಲ್ಲ, ಕೊಲೆ, ಅತ್ಯಾಚಾರದ ದೃಶ್ಯವಿಲ್ಲ, ಸಂಭಾಷಣೆಯ ಮೂಲಕವೆ ಪ್ರೇಕ್ಷಕರಿಗೆ ಅನುಭವವಾಗುವಂತೆ ಚಿತ್ರೀಕರಿಸಿದ್ದಾರೆ. ಗಂಭೀರ ಸನ್ನಿವೇಶಗಳಲ್ಲೂ ಬರುವ ತೆಳು ಹಾಸ್ಯ ಸ್ವಲ್ಪ ಮಟ್ಟಿನ ರಿಲೀಫ್ ಕೊಡುತ್ತದೆ. ಅಚಾನಕ್ಕಾಗಿ ಪಾತ್ರಗಳಿಗೆ ತಿರುವು ಕೊಡುವ ನಿರ್ದೇಶಕರು ಮಾನವ ಸಹಜ ಸ್ವಭಾವಗಳನ್ನು ಅನಾವರಣಗೊಳಿಸುತ್ತಾರೆ. ಕಾರ್ಟರ್ ಬ್ಯುರ್ವೆಲ್ ಅವರ ಸಂಗೀತ, ಬೆನ್ ಡೇವಿಸ್ ಅವರ ಛಾಯಾಗ್ರಹಣ. ತಮ್ಮ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿರುವ ಪೋಷಕ ಪಾತ್ರವರ್ಗ, ಎಲ್ಲರೂ ಸಿನಿಮಾವನ್ನು ಗೆಲ್ಲಿಸಿದ್ದಾರೆ.

  • ಮಂಜುಳಾ ಪ್ರೇಮಕುಮಾರ್

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

One thought on “ಸಿನಿ ಸಂಗಾತಿ / ಆಳುವ ವ್ಯವಸ್ಥೆಗೆ ಹಾಕಿದ ಸವಾಲು – ಮಂಜುಳಾ ಪ್ರೇಮಕುಮಾರ್

  • July 10, 2020 at 1:35 am
    Permalink

    ಸಿನೆಮಾ ನೋಡಬೇಕೆನ್ನುವ ಉತ್ಕಟೇಚ್ಛೆಯಾಗುವಂತೆ ನಿರೂಪಿಸಿದ್ದೀರಿ.

    Reply

Leave a Reply

Your email address will not be published. Required fields are marked *