ಸಿನಿಸಂಗಾತಿ/ ಹೆಂಡತಿ ಕೊಂದವನ ಒಂಟಿಪಾತ್ರದ ಕಥೆ- ಮಂಜುಳಾ ಪ್ರೇಮಕುಮಾರ್

ಒತ್ಥ ಸಿರುಪ್ಪು ಸೈಜ್ 7 – ಸಿನಿಮಾ ಜಗತ್ತಿನಲ್ಲಿ ಸೋಲೋ ಆಕ್ಟ್ ಸಿನೆಮಾಗಳ ನಿರ್ಮಾಣವೇನು ಹೊಸತಲ್ಲ. ಈ ತಮಿಳು ಸಿನಿಮಾ, ಕಥೆಯ ಜೊತೆಗೆ ತಾಂತ್ರಿಕವಾಗಿಯೂ ವಿಶಿಷ್ಟ ಎನಿಸಿಕೊಳ್ಳುತ್ತದೆ. ಸಿನಿಮಾದಲ್ಲಿ ಒಟ್ಟು ಹತ್ತು ಪಾತ್ರಗಳಿದ್ದರೂ ತೆರೆಯಮೇಲೆ ಕಾಣಿಸಿಕೊಳ್ಳುವುದು ನಾಯಕ ಮಾಸಿಲಮಣಿ ಮಾತ್ರ.

ಒಂದೇ ಕೊಠಡಿಯಲ್ಲಿ, ನಟ ನಟಿಯರಿಲ್ಲದೆ, ಬರೀ ಧ್ವನಿ, ಛಾಯಾಗ್ರಹಣ, ಸಂಗೀತ, ಇವುಗಳನ್ನೇ ಇಟ್ಟುಕೊಂಡು, ಕಥೆ ಒಂದನ್ನು ಸಿನಿಮಾ ಚೌಕಟ್ಟಿಗಿಳಿಸುವುದು ಸವಾಲೇ ಸರಿ. ಇಂತಹದೊಂದು ತಮಿಳು ಸಿನಿಮಾ `ಒತ್ಥ ಸಿರುಪ್ಪು ಸೈಜ್ 7′ – ಈ ಬಾರಿಯ ಬೆಂಗಳೂರು ಚಿತ್ರೋತ್ಸವದಲ್ಲಿ ಗಮನ ಸೆಳೆಯಿತು. ರಾಷ್ಟ್ರಪ್ರಶಸ್ತಿ ವಿಜೇತ ರಾಧಾಕೃಷ್ಣನ್ ಪಾರ್ಥಿಬನ್ ಇದರ ನಿರ್ದೇಶಕರು. ಪ್ರತಿಭಾವಂತ ನಟ, ನಿರ್ದೇಶಕ, ನಿರ್ಮಾಪಕ. ‘ಒತ್ಠ್ ಚಿರಪ್ಪು ಸೈಜ್ 7’ (ಸಿಂಗಲ್ ಸ್ಲಿಪ್ಪರ್ ಸೈಜ್ 7),  ಚಿತ್ರದ ಹೆಸರು ನೋಡಿ ಕುತೂಹಲಗೊಂಡು ನೋಡಲು ಹೋದವರಿಗೆ 105 ನಿಮಿಷಗಳ ಈ ಸಿನಿಮಾ ಸ್ವಲ್ಪವೂ ಆಚೀಚೆ ಗಮನ ಹೋಗದಂತೆ ನೋಡಿಸಿಕೊಂಡು ಹೋಗುತ್ತದೆ.

ಇದೊಂದು ‘ಸೋಲೋ ಆಕ್ಟ್ ‘ಸಿನಿಮಾ (ಏಕ ವ್ಯಕ್ತಿ ಅಭಿನಯ). ಹಲವಾರು ಪಾತ್ರಗಳಿದ್ದರು ತೆರೆಯ ಮೇಲೆ ಕಾಣಿಸಿಕೊಳ್ಳುವುದು ಪ್ರಧಾನ ಪಾತ್ರ ಮಾತ್ರ, ಉಳಿದ ಪಾತ್ರಗಳೆಲ್ಲ ಬರೀ  ಧ್ವನಿಗಳು ಮಾತ್ರ . ಅಂತರಾಷ್ಟ್ರೀಯ ಸಿನಿಮಾ ಜಗತ್ತಿನಲ್ಲಿ ಸೋಲೋ ಆಕ್ಟ್ ಸಿನೆಮಾಗಳ ನಿರ್ಮಾಣವೇನು ಹೊಸತಲ್ಲ, 1968 ರಿಂದಲು ಸಾಕಷ್ಟು ಸಿನಿಮಾಗಳು ತೆರೆಗೆ  ಬಂದಿವೆ ಮತ್ತು ಜಾಗತಿಕ ಮಟ್ಟದಲ್ಲಿ  ಯಶಸ್ಸು ಕಂಡಿವೆ, ಉದಾಹರಣೆಗೆ Sofi, Burried, Cast away, 127 hours, The Wall, Into the wild ಇತ್ಯಾದಿ. ಸೋಲೋ ಸಿನೆಮಾಗಳಾದರು ಕೆಲವು ಸಿನೆಮಾಗಳಲ್ಲಿ ಆರಂಭ ಅಥವಾ ಅಂತ್ಯದಲ್ಲಿ ಒಂದೆರಡು ಪಾತ್ರಗಳು ಕ್ಷಣ ಜೊತೆ ಆಗುವುದುಂಟು.

ಇಂತಹದೊಂದು ಸಿನಿಮಾ  ಹಿಂದಿಯಲ್ಲಿ 1964 ರಲ್ಲೇ ನಿರ್ಮಾಣಗೊಂಡಿದೆ – ಚಿತ್ರ ‘ಯಾದೇ’ ನಟ ಸುನಿಲ್ ದತ್ ನಟಿಸಿ, ನಿರ್ದೇಶಿಸಿದ್ದಾರೆ. ಜಾಗತಿಕ ಮಟ್ಟದಲ್ಲು ಇದೇ ಮೊದಲ ಸೋಲೋ ಆಕ್ಟ್ ಸಿನಿಮಾ ಎಂದು ಗುರುತಿಸಲ್ಪಟ್ಟಿದೆ. ಹೊಸ ಪ್ರಯೋಗದ ಈ ಸಿನಿಮಾ ಗಿನ್ನಿಸ್ ಬುಕ್ ಸೇರಿದ್ದಲ್ಲದೆ ರಾಷ್ಟ್ರಪ್ರಶಸ್ತಿಯನ್ನು ತಂದುಕೊಟ್ಟಿದೆ. ಕನ್ನಡದಲ್ಲೂ ಇಂತಹದೊಂದು ಚಿತ್ರವನ್ನು ಬರಗೂರು ರಾಮಚಂದ್ರಪ್ಪನವರು  ನಿರ್ದೇಶಿಸಿದ್ದಾರೆ-  ಚಿತ್ರ, : ಶಾಂತಿ, ನಟಿ :ಭಾವನಾ.

ಸೋಲೋ ಆಕ್ಟ್ ಸಿನಿಮಾಗಳ ನಿರ್ಮಾಣಕ್ಕೆ ಈಗ ತಮಿಳು ಚಿತ್ರರಂಗ ತೆರೆದುಕೊಂಡಿದೆ. ಈ ನಿಟ್ಟಿನಲ್ಲಿ  ಪಾರ್ಥಿಬನ್ ಪ್ರಯತ್ನಿಸಿದ್ದಾರೆ. ಸುಮಾರು ಹದಿನೈದು ವರ್ಷಗಳಷ್ಟು ಸಮಯ ತೆಗೆದುಕೊಂಡಿದ್ದಾರಂತೆ  ಕಥೆ, ಚಿತ್ರಕಥೆ, ಸಂಭಾಷಣೆ ಬರೆಯಲು. ತಾವೇ ನಿರ್ಮಿಸಿ, ನಿರ್ದೇಶಿಸಿ, ನಟಿಸಿದ್ದಾರೆ. ಈ ಸುಧೀರ್ಘ ಪ್ರಯತ್ನ ಮತ್ತು ಹೊಸದನ್ನೇನಾದರು ಸಿನಿ ಪ್ರೇಮಿಗಳಿಗೆ ಕೊಡಬೇಕೆನ್ನುವ ತುಡಿತದ ಫಲವೇ ‘ಒತ್ಠ್ ಚಿರಪ್ಪು ಸೈಜ್ 7’.
ಕಥಾನಾಯಕ ಮಾಸಿಲಮಣಿ, ಕ್ರೀಡೆ ಮತ್ತು ಮನರಂಜನಾ ಕ್ಲಬ್ ಒಂದರಲ್ಲಿ ಸೆಕ್ಯೂರಿಟಿ ಗಾರ್ಡ್, ಹೆಂಡತಿ ಉಷಾ, ಮಗ ಮಹೇಶ. ವಾಸಿಯಾಗದ ಕಾಯಿಲೆಯಿಂದ ಬಳಲುತ್ತಿರುವ ಮಹೇಶ ಅಪ್ಪನ ಬರವಿಗಾಗಿ ವಿಚಾರಣಾ ಕೊಠಡಿಯ ಹೊರಗೆ ಕಾಯುತ್ತಿದ್ದಾನೆ. ತಾನು ಅಪಾರವಾಗಿ ಪ್ರೀತಿಸುತ್ತಿದ್ದ ಹೆಂಡತಿಯ ಸಾವಾಗಿದೆ. ಇವನೆ ಕೊಲೆ ಮಾಡಿರಬಹುದು ಎಂಬ ಸಂಶಯದಿಂದ ವಿಚಾರಣೆಗಾಗಿ ಠಾಣೆಗೆ ಕರೆತಂದಿದ್ದಾರೆ ಪೊಲೀಸರು. ಡೆಪ್ಯುಟಿ ಕಮಿಷನರ್ ಒಬ್ಬರು ವಿಚಾರಣೆ ನಡೆಸುತ್ತಿದ್ದಾರೆ, ಜೊತೆಗೊಂದಿಬ್ಬರು ಪೊಲೀಸ್ ಅಧಿಕಾರಿಗಳು (ಮಾನವ ಹಕ್ಕುಗಳ ಕಾಯಿದೆ ಅನ್ವಯ ದೈಹಿಕವಾಗಿ ಹಿಂಸಿಸುವಂತಿಲ್ಲ ) ವಿಚಾರಣೆಯ ಸಮಯದಲ್ಲಿ ಸ್ವಲ್ಪ ಮಾನಸಿಕ ಅಸ್ವಸ್ಥನಂತೆ ಕಂಡುಬರುವುದರಿಂದ ಮನೋವೈದ್ಯೆ ಒಬ್ಬರು ಪೊಲೀಸರ ಜೊತೆಯಾಗುತ್ತಾರೆ.

ವಿಚಾರಣೆ ಸಮಯದಲ್ಲಿ ಮಧುರೈ ಪೊಲೀಸರು ಹುಡುಕಾಟ ನಡೆಸಿರುವ ಇನ್ನೆರಡು ಕೊಲೆಗಳನ್ನು ತಾನೇ ಮಾಡಿರುವುದಾಗಿ ಹೇಳುತ್ತಾನೆ. ಹೀಗೆ ಒಂದರ ಹಿಂದೊಂದು ಒಟ್ಟು ನಾಲ್ಕು ಕೊಲೆಗಳು, ಕೊಲೆ ಯಾಕೆ ಮಾಡಿದ? ಹೇಗೆಮಾಡಿದ? ಬರೀ ನಾಲ್ಕೇ ಕೊಲೆಗಳೇ? ಕೊಲೆ ಮಾಡಿ ದೇಹದ ಪಕ್ಕದಲ್ಲೊಂದು ಏಳನೇ ನಂಬರಿನ ಒಂಟಿ  ಚಪ್ಪಲಿ  ಇಟ್ಟು ಬರುತ್ತಿದ್ದ ರಹಸ್ಯ, ಎಲ್ಲವೂ ಅನಾವರಣಗೊಳ್ಳುತ್ತಾ ಹೋಗುತ್ತವೆ. ಪ್ರಭಾವಿ ವ್ಯಕ್ತಿ ಒಬ್ಬನೊಂದಿಗೆ ಹೆಂಡತಿಗಿದ್ದ ಸಂಬಂಧ, ಆಕೆ ಹೇಳುವ ಸುಳ್ಳುಗಳು, ಗಂಡನನ್ನೆ ಕೊಲೆ ಮಾಡಿಸುವ ಪ್ರಯತ್ನ, ಆ ಪ್ರಯತ್ನದಲ್ಲಿ ತಾನೇ ಸಾವನ್ನಪ್ಪಿರುತ್ತಾಳೆ. ತಮ್ಮನನ್ನೇ ಕೊಲ್ಲುವ ಸಂಚು ಮಾಡುವ ಮಂತ್ರಿ ಮತ್ತು ಉನ್ನತ ಪೊಲೀಸ್ ಅಧಿಕಾರಿ. ಈ ವಿಷಯ ಎಲ್ಲಿ ಹೊರಬರುತ್ತೋ ಎಂಬ ಅಂಜಿಕೆಯಿಂದ ಮಾಸಿಲಮಣಿಯನ್ನು ಪೊಲೀಸರು ಹೋಗಲು ಬಿಡುತ್ತಾರೆ. ಮಗ ಮತ್ತು ಗಾಳಿಪಟದ ಜೊತೆ ನಗುನಗುತ್ತಾ, ನಿರಾಳವಾಗಿ ಹೊರನಡೆಯುತ್ತಾನೆ. ಇಲ್ಲಿ ಗಾಳಿಪಟವನ್ನು ಒಂದು ಸತ್ವಯುತ ರೂಪಕವನ್ನಾಗಿ ಬಳಸಲಾಗಿದೆ. ಪ್ರತಿ ಕೊಲೆಗೂ  ಈ ಗಾಳಿಪಟಕ್ಕೆ ಉಪಯೋಗಿಸುವ  ಹರಿತವಾದ ದಾರ ‘Modus operandi’ಯನ್ನು ಬಳಸಿರುತ್ತಾನೆ.

 ಸಿನಿಮಾ, ಕಥೆಯ ಜೊತೆ ಜೊತೆಗೆ ತಾಂತ್ರಿಕ ವಾಗಿಯೂ ವಿಶಿಷ್ಟ ಎನಿಸಿಕೊಳ್ಳುತ್ತದೆ. ಸಿನಿಮಾದಲ್ಲಿ ಒಟ್ಟು ಹತ್ತು ಪಾತ್ರಗಳಾದರು, ತೆರೆಯಮೇಲೆ ಕಾಣಿಸಿಕೊಳ್ಳುವುದು ನಾಯಕ ಮಾಸಿಲಮಣಿ ಮಾತ್ರ. ಉಳಿದೆಲ್ಲ ಧ್ವನಿಗಳು. ಸನ್ನಿವೇಶಕ್ಕೆ ತಕ್ಕಂತೆ ಧ್ವನಿ ನೀಡಿದ್ದಾರೆ ಡಬ್ಬಿಂಗ್ ಕಲಾವಿದರು. ಧ್ವನಿಗಳ ಏರಿಳಿತಕ್ಕೆ ತಕ್ಕಂತೆ ಹೊಂದಿಸಿರುವ  ಬೆಳಕು, ಹಿನ್ನೆಲೆ ಸಂಗೀತ, ಸೌಂಡ್, ಮತ್ತು ಛಾಯಾಗ್ರಹಣ. ಪಾರ್ಥಿಬನ್ ಅವರ ಅಭಿನಯದ ಬಗ್ಗೆ ಎರಡು ಮಾತಿಲ್ಲ. ಪಾತ್ರಕ್ಕೆ ಹೊಂದುವಂತಹ ‘ಗಡಸು ಮುಖ’, ಉದ್ವೇಗಗೊಂಡು ಅಭಿನಯಿಸುವ ಸನ್ನಿವೇಶಗಳಲ್ಲಿ ಮುಖದ ಸ್ನಾಯುಗಳನ್ನು ಬಿಗಿಗೊಳಿಸುವ ಪರಿ, ನಿರಾಳವಾದಾಗ ಸಡಿಲಗೊಳಿಸುವ ಬಗೆ ವಿಭಿನ್ನವಾಗಿದೆ. ಏರು ಧ್ವನಿಯಲ್ಲಿ ಸಂಭಾಷಿಸುವಾಗ ಹಿನ್ನೆಲೆಯಲ್ಲಿ ಬರುವ ಅಬ್ಬರದ ‘ಸೌಂಡ್’ ಹಲವೊಮ್ಮೆ ಬೆಚ್ಚಿಬೀಳಿಸುತ್ತದೆ, ಭಾವತೀವ್ರತೆಯ ಸನ್ನಿವೇಶಗಳಲ್ಲಿ ಮುಖದ ಮೇಲೆ ಗಾಢ ವರ್ಣದ ಬೆಳಕು, ನಿರಾಳವಾದಾಗ ಇಂಪಾದ ಸಂಗೀತ. ಒಟ್ಟಿನಲ್ಲಿ ಮಾಸಿಲಮಣಿ ಪಾತ್ರವನ್ನೇ ಮೈಮೇಲೆ ಆವಾಹಿಸಿಕೊಂಡಂತೆ ನಟಿಸಿದ್ದಾರೆ. ಮರ್ಡರ್ ಮಿಸ್ಟರಿಯೊಂದಿಗೆ ಆಗಾಗ ಬರುವ ತೆಳು ಹಾಸ್ಯ ಸ್ವಲ್ಪಮಟ್ಟಿನ ರಿಲೀಫ್ ಕೊಡುತ್ತದೆ. ಮಗನೊಂದಿಗೆ ಸಂಭಾಷಿಸುವಾಗ ಪಾತ್ರದಿಂದ ಬಿಡಿಸಿಕೊಂಡು ‘ಪಾರ್ಥಿಬನ್’ ಆಗಿಬಿಡಿತ್ತಾರೆ. 

ಪಾತ್ರ ಬೆಳೆಸಿರುವ ರೀತಿ, ಬಿಗಿಯಾದ ಚಿತ್ರಕಥೆ, ವಿಭಿನ್ನ ಮನಸ್ಥಿತಿಯನ್ನು ಒಂದು ನಿರ್ದಿಷ್ಟ ಅಂತರದಲ್ಲಿಟ್ಟುಕೊಂಡೇ ತೋರಿಸಿರುವ ರೀತಿ, ಪಕ್ವ ಅಭಿನಯ, ಸನ್ನಿವೇಶಕ್ಕೆ ತಕ್ಕಂತೆ ಸೌಂಡ್ ಡಿಸೈನ್ ಮಾಡಿರುವ ರಸ್ಸೂಲ್ ಪೂಕುಟ್ಟಿ, ರಾಮ್ ಜಿ ಅವರ ಛಾಯಾಗ್ರಹಣ, ಸಂತೋಷ್ ನಾರಾಯಣನ್ ಅವರ ಹಿನ್ನೆಲೆ ಸಂಗೀತ, ಅನುಭವಿಸಿದವರಂತೆ ಧ್ವನಿ ನೀಡಿರುವ ಡಬ್ಬಿಂಗ್ ಕಲಾವಿದರು. ‘ಮೆಸೇಜ್’ ಏನಿದೆ? ಎನ್ನುವವರಿಗೆ ‘ಪ್ರಾಮಾಣಿಕತೆ ‘ಎನ್ನುವ ಮೆಸೇಜ್ ಸಹ ಇದೆ. ಒಟ್ಟಿನಲ್ಲಿ ತಮಿಳು ಸಿನಿಮಾಗಳ ಹಾದಿಯಲ್ಲಿ  ಮತ್ತೊಂದು ಮೈಲಿಗಲ್ಲಿನಂತಿದೆ.

-ಮಂಜುಳಾ ಪ್ರೇಮಕುಮಾರ್

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *