ಸಿನಿಸಂಗಾತಿ/ ಸಾಮಾಜಿಕ ಕಳಕಳಿ ತುಂಬಿದ ಜೋಗ್ವಾ – ಮಂಜುಳಾ ಪ್ರೇಮಕುಮಾರ್

ದೇವದಾಸಿ ಪದ್ಧತಿ ಕುರಿತಂತೆ ಹಲವು ಭಾರತೀಯ ಭಾಷೆಗಳಲ್ಲಿ ಹತ್ತಾರು ಸಿನಿಮಾಗಳು ಬಂದುಹೋಗಿವೆ. ದೇವದಾಸಿ ಆದವರಿಂದಲೇ ‘ದೇವದಾಸಿ ಪದ್ದತಿ’ ಯನ್ನು ವಿರೋಧಿಸುವ, ಪ್ರತಿಭಟಿಸುವ ಕಥೆಯನ್ನು ನಿರೂಪಿಸುತ್ತಲೇ ಜೋಗಪ್ಪ, ಜೋಗತಿ ನಡುವಿನ ನವಿರಾದ ಪ್ರೇಮದ ಕಥೆಯನ್ನು ಹೇಳುತ್ತಾರೆ ಜೋಗ್ವಾ’ ಮರಾಠಿ ಚಲನಚಿತ್ರ ನಿರ್ದೇಶಕ ರಾಜೀವ್ ಪಾಟೀಲ್. 2008 ರಲ್ಲಿ ಜೋಗ್ವಾ’ ಐದು ರಾಷ್ಟ್ರ ಪ್ರಶಸ್ತಿಗಳನ್ನು ಪಡೆದಿದೆ.

ಎರಡು ದಿನದಿಂದ ತಲೆ ಬಾಚದ, ಕೂದಲಿನ ಸಿಕ್ಕು ತೆಗೆಯದ ಸುಲೆಯ ತಲೆಯಲ್ಲೊಂದು ಸಿಕ್ಕುಗಟ್ಟಿದ ಕೂದಲಿನ ಗಂಟು, ಅದವಳ ತಾಯಿಯ ಗಮನಕ್ಕೆ ಬಂದಿದೆ. ತಾಯಪ್ಪನ ಮೂತ್ರದಲ್ಲಿ ನಾಲ್ಕಾರು ರಕ್ತದ ಹನಿಗಳು ಬಿದ್ದಿವೆ, ಅದನ್ನವನ ಮನೆಯವರು ಗಮನಿಸಿದ್ದಾರೆ. ಅದಕ್ಕೆ ‘ಯಲ್ಲಮಾಚಿ ಆಜ್ಞಾ ಆತಾ ತು ದೇವದಾಸಿ ಆ ಹೇಸ್ ‘
‘ಯಲ್ಲಮ್ಮ ದೇವಿಯ ಅಪ್ಪಣೆ ಆಗಿದೆ ನೀನು ದೇವದಾಸಿ ಆಗಬೇಕು’

ದೇವದಾಸಿ ಆದವರು ಕೂದಲು ಬಾಚುವಂತಿಲ್ಲ, ಎಣ್ಣೆ ಹಾಕುವಂತಿಲ್ಲ, ತಲೆಗೆ ಸ್ನಾನ ಮಾಡುವಂತಿಲ್ಲ. ಆಲದ ಮರದ ರಸ ಲೇಪಿಸಿ ಕೂದಲನ್ನು ಗಂಟಾಗಿಸಬೇಕು. ಮುಖಕ್ಕೆ ಬಂಡಾರ (ಅರಿಸಿನ), ದೊಡ್ಡ ಕುಂಕುಮ ಹಚ್ಚಿಕೊಳ್ಳಬೇಕು. ವೈವಾಹಿಕ ಜೀವನವಿಲ್ಲ, ಇಂಥವೇ ಹಲವಾರು ಕಟ್ಟುಪಾಡುಗಳು ಸುಂದರ ಬದುಕಿನ ಕನಸು ಕಟ್ಟಿಕೊಂಡ ಸುಲೆಗೆ ಆಘಾತವನ್ನುಂಟುಮಾಡುತ್ತವೆ .

ಎಮ್ಮೆ ಹಾಲು ಕಡಿಮೆ ಕೊಟ್ಟರೆ, ಕೋಳಿ ಮೊಟ್ಟೆ ಇಡದಿದ್ದರೆ, ಆರೋಗ್ಯದಲ್ಲಿ ಏರುಪೇರಾದರೆ, ಗಂಡ ಗದರಿದರೆ, ಮಕ್ಕಳು ರಚ್ಚೆ ಹಿಡಿದರೆ, ಸಾವಾದರೆ, ಮುಂತಾದ ಎಲ್ಲಾ “ರೆ” ಗಳಿಗೂ ‘ತಮ್ಮಿಂದೇನೋ ತಪ್ಪಾಗಿದೆ ಅದಕ್ಕೆ ಯಲ್ಲೂ ಮಾಯಿ ಶಪಿಸಿದ್ದಾಳೆ,’ ಅದಕ್ಕೆ ಪರಿಹಾರವೆಂದರೆ ಹುಣ್ಣಿಮೆಯ ದಿನ ಯಲ್ಲಮ್ಮನ ಗುಡ್ಡ ಹತ್ತಿ ಆಕೆಯ ದರ್ಶನ ಮಾಡಿ ಹರಕೆ ತೀರಿಸಬೇಕೆಂದು ನಂಬಿರುವ ಮುಗ್ಧ ಜನ ಇದ್ದಾರೆ. ಜೋಗತಿಯಾದ ಸುಲೆ ಊರಿನ ಪಡ್ಡೆ ಹುಡುಗರ ಕಾಟ, ಅಪಹಾಸ್ಯ, ಕಾಮುಕ ಕಣ್ಣುಗಳಿಂದ ಪಾರಾಗಲು ಹಾಡುತ್ತಾ, ನರ್ತಿಸುತ್ತಾ, ಯಲ್ಲಮ್ಮನ ಕಥೆ ಹೇಳುತ್ತಾ ಅಲೆದಾಡುವ ದೇವದಾಸಿಯರ ತಂಡವೊಂದನ್ನು ಸೇರಿಕೊಳ್ಳುತ್ತಾಳೆ. ಅಲ್ಲೂ ನೆಮ್ಮದಿಯಿಲ್ಲದ ಬದುಕೇ, ತಂಡದ ಮಾಲೀಕ ಮತ್ತವನ ಗುಂಪಿನ ದೌರ್ಜನ್ಯ, ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯರಾಗುವ ಜೋಗಿತಿಯರು ಸಮಾಜದ ನಿಂದನೆಯನ್ನು ಸಹಿಸಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಸುಲೆಯ ಬದುಕು ಇದಕ್ಕೆ ಹೊರತಾದುದೇನು ಅಲ್ಲ, ಗರ್ಭಪಾತವಾಗಿ, ಖಿನ್ನತೆಗೆ ಒಳಗಾದವಳನ್ನು ಅದೇ ತಂಡದ ತಾಯಪ್ಪ ಸಂತೈಸಿ, ಅವಳಿಗೆ ಬೆಂಬಲವಾಗಿ ನಿಲ್ಲುತ್ತಾನೆ.

ತಂದೆಯ ದರ್ಪ, ದಬ್ಬಾಳಿಕೆ, ಮೂಢನಂಬಿಕೆಗೆ ಬಲಿಯಾದ ತಾಯಪ್ಪನೂ ಸೀರೆ ಉಟ್ಟು, ಹಣೆಗೆ ಬಂಡಾರ (ಅರಿಸಿನ) ಮೆತ್ತಿಕೊಂಡು, ಕೊರಳಲ್ಲಿ ಅಕ್ಕುಕಟ್ಟಿದ ಕರಿಮಣಿ ತಾಳಿ ಕಟ್ಟಿಕೊಂಡು, ಇತ್ತ ಗಂಡೂ ಅಲ್ಲದ, ಅತ್ತ ಹೆಣ್ಣೂ ಅಲ್ಲದ ಮನಸ್ಥಿತಿಯಿಂದ, ಖಿನ್ನತೆಗೊಳಗಾಗಿ ಬಳಲಿದ ಅವನ ಬದುಕಿನಲ್ಲಿ ಸುಲೆಯ ಸ್ನೇಹ ನೆಮ್ಮದಿಯನ್ನು ಉಂಟು ಮಾಡುತ್ತದೆ, ಇಬ್ಬರ ನಡುವಿನ ಸ್ನೇಹ ಕ್ರಮೇಣ ಪ್ರೀತಿಯಾಗಿ ಅರಳುತ್ತದೆ. ಕ್ರೌರ್ಯವೇ ತುಂಬಿರುವ ಈ ಬೆತ್ತಲೆ ಜಗತ್ತಿನಲ್ಲಿ ತಾಯಪ್ಪನೊಬ್ಬ ಮಾತ್ರ ಮಾನವೀಯತೆ ಇರುವ ಮನುಷ್ಯನಾಗಿ ಸುಲೆಗೆ ಕಾಣುತ್ತಾನೆ. ಇವರ ಪ್ರೀತಿ ಕಥೆಯ ನಡುವೆಯೇ ಸಾಮಾಜಿಕ ಕಾರ್ಯಕರ್ತನೊಬ್ಬನ ಪ್ರವೇಶವಾಗುತ್ತದೆ, ಧರ್ಮದ ಹೆಸರಿನಲ್ಲಿ ಜನರಲ್ಲಿ ಮೂಢನಂಬಿಕೆಗಳನ್ನು ಬಿತ್ತಿ, ಅವರನ್ನು ತಪ್ಪು ದಾರಿಗೆಳೆದು, ಅವರ ಅಮಾಯಕತನವನ್ನು ದುರುಪಯೋಗ ಪಡಿಸಿಕೊಂಡು, ದೇವದಾಸಿಯರನ್ನಾಗಿಸಿ, ಶೋಷಿಸುತ್ತಿರುವ ವ್ಯವಸ್ಥೆಯಿಂದ ಬಿಡುಗಡೆಗೊಳಿಸಿ, ಬಡತನದ ಬದುಕಿನಿಂದ ಹೊರತಂದು, ದೇವದಾಸಿಯರ ಪುನರ್ ವಸತಿಗಾಗಿ ಸರ್ಕಾರ ಕೈಗೊಂಡಿರುವ ಹಲವಾರು ಯೋಜನೆಗಳನ್ನು ಕುರಿತು ತಿಳಿಹೇಳುತ್ತಾನೆ. ನಂಬದ ಜನರ ಅವಹೇಳನಕ್ಕೆ ಗುರಿಯಾಗಬೇಕಾಗುತ್ತದೆ.

ಅವನ ಮಾತುಗಳಿಂದ ಪ್ರಭಾವಿತರಾದ ಸುಲೆ ಹಾಗೂ ತಾಯಪ್ಪ, ದೇವದಾಸಿ ಜೀವನದಿಂದ ಬಿಡುಗಡೆ ಪಡೆದು, ಗೌರವಯುತವಾದ ಬದುಕು ಕಟ್ಟಿಕೊಳ್ಳ ಬಯಸುತ್ತಾರೆ. ಜೋಗಪ್ಪನ ಉಡುಪುಗಳಾದ ಸೀರೆ ಕುಪ್ಪುಸ ತಾಳಿಗಳನ್ನು ಕಿತ್ತೆಸೆದು, ಗಂಡಸರ ಉಡುಪು ತೊಡುತ್ತಾನೆ ತಾಯಪ್ಪ. ಇತ್ತ, ತಲೆಗೆ ಸ್ನಾನ ಮಾಡುವ ಸುಲೆಯ ಜಿಡ್ಡುಗಟ್ಟಿದ ಕೂದಲನ್ನು ಅವನೇ ಬಿಡಿಸುತ್ತಾನೆ, ಜನರ ನಿಂದನೆಗಳನ್ನು ಲೆಕ್ಕಿಸದೆ ಪ್ರತಿಭಟನೆಯ ಸಂಕೇತವಾಗಿ, ದುಷ್ಟ ಸಂಪ್ರದಾಯ ಒಂದರಿಂದ ಬಿಡಿಸಿಕೊಂಡ ನಿರಾಳತೆಯಿಂದ ಹಣೆಯ ಮೇಲಿನ ಅರಿಸಿನ ಅಳಿಸಿ ಸೀರೆಯನ್ನು ಗಾಳಿಯಲ್ಲಿ ಹಾರಿ ಬಿಡುತ್ತಾನೆ. ಸುಲೆಯ ಕೂದಲೂ ಗಂಟಿನಿಂದ ಬಿಡಿಸಿಕೊಂಡು ಹಾರಾಡುತ್ತವೆ. ದೇವದಾಸಿ ಯರಾದವರಿಂದಲೇ ‘ದೇವದಾಸಿ ಪದ್ದತಿಯನ್ನು ವಿರೋಧಿಸುವ, ಪ್ರತಿಭಟಿಸುವ ಕಥೆಯನ್ನು ನಿರೂಪಿಸುತ್ತಲೇ ಜೋಗಪ್ಪ, ಜೋಗತಿ ನಡುವಿನ ನವಿರಾದ ಪ್ರೇಮದ ಕತೆಯನ್ನು ಹೇಳುತ್ತಾರೆ ನಿರ್ದೇಶಕ ರಾಜೀವ್ ಪಾಟೀಲ್.

ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕದ ಗಡಿ ಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಧಾರ್ಮಿಕ ಆಚರಣೆಯ ಹೆಸರಿನಲ್ಲಿ, ಕೂದಲನ್ನು ಗಂಟಾಗಿಸಿ, ಹಣೆಯ ತುಂಬ ಅರಿಸಿನ ಮೆತ್ತಿಕೊಂಡು, ದೇವದಾಸಿ, ದೇವರ ವಧು, ದೇವರಿಗೆ ಬಿಟ್ಟವಳು ದೇವರ ವೇಶ್ಯೆ, ಜೋಗಮ್ಮ ಎಂದೆಲ್ಲ ಕರೆಸಿಕೊಳ್ಳುತ್ತಾ, ಹಳದಿ ಜಗತ್ತಿನ ಅಂಧಕಾರದಲ್ಲಿ ಕಳೆದು ಹೋಗುವ ಪುರುಷ, ಸಮಾಜದ ಶೋಷಣೆಗೆ ಒಳಗಾಗಿ ‘ಸುಂದರ ಬದುಕಿನ ಕನಸು’ ಕಳೆದುಕೊಳ್ಳುವ, ಹಿಂದುಳಿದ ವರ್ಗಗಳ ಹೆಣ್ಣುಮಕ್ಕಳ ದಾರುಣ ಬದುಕನ್ನಷ್ಟೇ ಅಲ್ಲದೇ ಹೆಣ್ಣಿನಂತೆ ಸೀರೆ ಉಟ್ಟು, ಕುಪ್ಪುಸ ತೊಟ್ಟು ‘ಜೋಗಪ್ಪ’ನಾಗುವ ಗಂಡಿನ ಮೇಲೂ ನಡೆಯುವ ಕ್ರೌರ್ಯ, ದೌರ್ಜನ್ಯಗಳ ಕಟು ವಾಸ್ತವಗಳ ಮೇಲೆ ಬೆಳಕು ಚೆಲ್ಲುವ, ಮರಾಠಿ ಚಲನಚಿತ್ರ ‘ಜೋಗ್ವಾ’. ಪದ್ಧತಿ ಇದರ ಕಥೆ ಮತ್ತು ನಿರ್ದೇಶನ ರಾಜೀವ್ ಪಾಟೀಲ್ ಅವರದು.

2008 ರಲ್ಲಿ ಐದು ರಾಷ್ಟ್ರ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡು ಭಾರತೀಯ ಚಿತ್ರರಂಗದ ಗಮನ ಸೆಳೆದ ರಾಜೀವ್ ಪಾಟೀಲ್, ಸಾಮಾಜಿಕ ಕಳಕಳಿಯುಳ್ಳ ಸಿನಿಮಾ ‘ಸಾವರ್ ಖೇಡ್ ಏಕ್ ಗಾವ್’ (2004) ಚಿತ್ರ ನಿರ್ದೇಶಿಸುವ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟು ಯಶಸ್ವಿಯಾದರು. ’72 ಮೈಲ್ಸ್, ಏಕ್ ಪ್ರವಾಸ್ ‘ ಮಾಡಿ ಇಹಲೋಕದ ತಮ್ಮ ಪಯಣವನ್ನು ಮುಗಿಸಿಬಿಟ್ಟರು. ಹತ್ತು ವರ್ಷಗಳಲ್ಲಿ ಸುಮಾರು ಒಂಬತ್ತು ಯಶಸ್ವೀ ಸಿನಿಮಾಗಳನ್ನು ಮರಾಠಿ ಚಿತ್ರರಂಗಕ್ಕೆ ಕೊಟ್ಟಿದ್ದಾರೆ, (ಸಾವರ್ಖೇಡ್ ಏಕ್ ಗಾವ್, ಬ್ಲೈಂಡ್ ಗೇಮ್, ಆಕ್ಸಿಜನ್, ಜೋಗ್ವಾ, 72 ಮೈಲ್ಸ್ ಏಕ್ ಪ್ರವಾಸ್ ಇತ್ಯಾದಿ). ನಲವತ್ತನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಅಸುನೀಗಿದ ಪಾಟೀಲರು ಬದುಕಿದ್ದಿದ್ದರೆ ಅವರಿಂದ ಇನ್ನಷ್ಟು ಒಳ್ಳೆಯ ಸಿನಿಮಾಗಳನ್ನು ನಿರೀಕ್ಷಿಸಬಹುದಿತ್ತು.

ದೇವದಾಸಿ ಪದ್ಧತಿ ಕುರಿತಂತೆ ಹಲವು ಭಾರತೀಯ ಭಾಷೆಗಳಲ್ಲಿ ಹತ್ತಾರು ಸಿನಿಮಾಗಳು ಬಂದುಹೋಗಿವೆ. ದೇವದಾಸಿಯರ ನೋವು, ಸಂಕಟ, ಸಮಾಜ ಅವರ ಬಗ್ಗೆ ತೋರುವ ಉಪೇಕ್ಷೆ, ಬಡತನ, ಅಸಹಾಯಕತೆ, ಇತ್ಯಾದಿಗಳನ್ನು ಹೇಳುತ್ತಲೇ ಸಮಾಜದ ಮುಖ್ಯವಾಹಿನಿಯಿಂದ ಅವರು ಹೊರಗೆ ಉಳಿಯುವಂತಹ ಅನಿವಾರ್ಯ ಪರಿಸ್ಥಿತಿಯನ್ನು ಸಿನೆಮಾಗಳು ಸೊಗಸಾಗಿಯೇ ನಿರೂಪಿಸಿವೆ. ಗಂಡಾಗಿ ಹುಟ್ಟಿ, ಪಾಲಕರ ಮೂಢ ನಂಬಿಕೆಯಿಂದಾಗಿ ಹೆಣ್ಣಿನ ವೇಷ ಧರಿಸಿ ಸಮಾಜದ ಎದುರು ಕಾಣಿಸಿಕೊಳ್ಳುತ್ತಲೇ ತನ್ನ ವಿಚಿತ್ರ ಮನಸ್ಥಿತಿಯ ಬಗ್ಗೆ ಒಳಗೊಳಗೇ ಅಸಮಾಧಾನ ಪಟ್ಟುಕೊಳ್ಳುತ್ತಾ ಅದನ್ನು ಬಹಿರಂಗವಾಗಿ ತೋರಿಸಿಕೊಳ್ಳಲಾಗದ ಜೋಗಪ್ಪ, ಜೋಗತಿ ಅವರುಗಳ ಬದುಕನ್ನು ಈ ಸಿನಿಮಾಗಳು ಬಿಂಬಿಸಿವೆ. ಪ್ರಸ್ತುತ ಸಿನಿಮಾ ‘ಜೋಗ್ವಾ’ ಅಂತಹ ಮನಸ್ಥಿತಿಯಿಂದ ಹೊರಬರುವ ಪ್ರಯತ್ನವಾಗಿ, ಅದನ್ನೊಂದು ಪ್ರತಿಭಟನೆಯ ರೂಪದಲ್ಲಿ ಅಭಿವ್ಯಕ್ತಿಸುವ ಕ್ರಮವನ್ನು ಸೊಗಸಾಗಿ ನಿರೂಪಿಸುತ್ತದೆ.

ದೇವದಾಸಿ, ಜೋಗಮ್ಮ, ಜೋಗತಿ, ಬಸವಿ, ಸಾನಿ, ಮಾತಂಗಿ, ಮಾಸ್ತಮ್ಮ, ಮುಂತಾಗಿ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರಿನಿಂದ ಕರೆಯಲ್ಪಡುವ ಇವರ ಪುನರ್ವಸತಿಗಾಗಿ, ಸ್ವಉದ್ಯೋಗ ಕೈಗೊಳ್ಳಲು, ಇವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಲವಾರು ಯೋಜನೆಗಳನ್ನು ರೂಪಿಸಿವೆ, ಕಾನೂನಿನ ಪ್ರಕಾರ ಬಲವಂತವಾಗಿ ದೇವದಾಸಿಯನ್ನಾಗಿ ಮಾಡುವುದು ಶಿಕ್ಷಾರ್ಹ ಅಪರಾಧ. ಆದರೂ ಅವ್ಯಾಹತವಾಗಿ ಈ ಆಚರಣೆಗಳು ನಡೆಯುತ್ತಲೇ ಇವೆ. ಆರ್ಥಿಕವಾಗಿ ಹಿಂದುಳಿದ ಬಹಳಷ್ಟು ಕುಟುಂಬಗಳು ತಮ್ಮ ಹೆಣ್ಣುಮಕ್ಕಳನ್ನು ದೇವದಾಸಿಯರನ್ನಾಗಿಸಿ ಅವರ ಗಳಿಕೆಯ ಮೇಲೆ ಅವಲಂಬಿತರಾಗಿರುವುದೂ ಉಂಟು. ‘ದೇವರ ವೇಶ್ಯೆ’ (ಪ್ರಾಸ್ಟಿಟ್ಯೂಟ್ ಆಫ್ ಗಾಡ್ ) ಎಂದು ಕರೆಯುವ ಇವರನ್ನು ವೇಶ್ಯಾಗೃಹಗಳಿಗೆ ಮಾರಾಟ ಮಾಡಿದ ನಿದರ್ಶನಗಳೂ ಇವೆ. ಒಟ್ಟಿನಲ್ಲಿ ಇದೊಂದು ಶಾಪಗ್ರಸ್ತ ಸಮುದಾಯ.

114 ನಿಮಿಷದ ‘ಜೋಗ್ವಾ’ ಸಿನಿಮಾ ಆರಂಭದಲ್ಲಿ ವಿಷಾದವನ್ನು ಉoಟುಮಾಡಿದರೂ ಅಂತಿಮ ಘಟ್ಟದಲ್ಲಿ ನಿರಾಳತೆಯ ನಿಟ್ಟುಸಿರು ಬಿಡುವಂತೆ ಮಾಡುತ್ತದೆ. ಸಾಮಾಜಿಕ ಕಳಕಳಿಯುಳ್ಳ ಉತ್ತಮ ಸಿನಿಮಾ, ಉತ್ತಮ ನಟ ಉಪೇಂದ್ರ ಲಿಮಯೆ, ಉತ್ತಮ ಸಂಗೀತ ನಿರ್ದೇಶನಕ್ಕಾಗಿ ಅತುಲ್ ಅಜಯ್, ಉತ್ತಮ ಹಿನ್ನಲೆ ಗಾಯಕ ಹರಿಹರನ್, ಹಾಗೂ ಉತ್ತಮ ಹಿನ್ನೆಲೆ ಗಾಯಕಿ ಶ್ರೇಯ ಘೋಷಾಲ್ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಒಟ್ಟಿಗೆ ಐದು ರಾಷ್ಟ್ರ ಪ್ರಶಸ್ತಿಗಳನ್ನು ಪಡೆದಿರುವ ಈ ಸಿನೆಮಾದ ಛಾಯಾಗ್ರಾಹಕರು ಸಂಜಯ್ ಜಾಧವ್, ಸಂಭಾಷನಾಕಾರರು ಸಂಜಯ್ ಕೃಷ್ಣಾಜಿ. ಮುಖ್ಯ ಭೂಮಿಕೆಯಲ್ಲಿ ಉಪೇಂದ್ರ ಲಿಮಯೆ (ತಾಯಪ್ಪ ) ಸುಲೆ ಪಾತ್ರದಲ್ಲಿ ಮುಕ್ತ ಬಾರ್ವೆ. ಪೋಷಕ ನಟರಾಗಿ ವಿನಯ್ ಆಪ್ಟೆ, ಶರ್ವಾಣಿ ಪಿಳ್ಳೈ, ಕಿಶೋರ್ ಕದಂ ಅಭಿನಯಿಸಿದ್ದಾರೆ.

ಮಂಜುಳಾ ಪ್ರೇಮಕುಮಾರ್

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *