ಸಿನಿಸಂಗಾತಿ/ ಮನ ಕಲಕುವ ಮಿಥುನಂ -ಮಂಜುಳಾ ಪ್ರೇಮಕುಮಾರ್

ವಿದೇಶದಲ್ಲಿರುವ ಮಕ್ಕಳ ಸಾಂಗತ್ಯದ ಹಾರೈಕೆಯಲ್ಲಿ ದಿನ ದೂಡುವ ಇಳಿವಯಸ್ಸಿನ ದಂಪತಿ, ಬದುಕನ್ನು ರುಚಿಕರವಾಗಿ ಮಾಡಿಕೊಳ್ಳುವ ಪ್ರಯತ್ನವನ್ನು ಅದ್ಭುತವಾಗಿ ತೋರಿಸುವ ಚಿತ್ರ `ಮಿಥುನಂ’. ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಎಂಥ ಅಭಿನಯ ಚತುರ ಎಂಬುದನ್ನೂ ಲಕ್ಷ್ಮಿ ಅವರ ಗಂಭೀರ ನಟನೆಯ ಮತ್ತೊಂದು ಮಗ್ಗುಲನ್ನೂ ಈ ಚಿತ್ರ ಪರಿಚಯಿಸುತ್ತದೆ. ಮಿಥುನಂ ನಂತಹ ಸಿನಿಮಾಗಳನ್ನು ನೋಡಿಯೇ ಅನುಭವಿಸ ಬೇಕೇ ವಿನಃ ಅದನ್ನು ಅಕ್ಷರಗಳಲ್ಲಿ ಕಟ್ಟಿಕೊಡಲಾಗದು.

ಸಾವಿರಾರು ಮೈಲು ದೂರದ ಹೊರದೇಶಗಳಲ್ಲಿ ಬದುಕು ಕಟ್ಟಿಕೊಂಡಿರುವ ಮಕ್ಕಳಿಂದ ದೂರಾಗಿ ಬದುಕುತ್ತಿರುವ ವಯೋವೃದ್ಧ ತಂದೆ ತಾಯಿಯರು ತಾವು ಎದುರಿಸುತ್ತಿರುವ ಸಮಸ್ಯೆಗಳು, ಒಂಟಿತನ, ಖಿನ್ನತೆ, ಅನಿಶ್ಚಿತತೆ, ತಳಮಳ, ಮುಂತಾದವುಗಳಿಂದ ಹೊರಬಂದು, ಮಕ್ಕಳ ಕುರಿತು ಯೋಚಿಸದೆ ಹೇಗೆ ನಿರಾಳತೆಯಿಂದ, ಖುಷಿಯಾಗಿ ತಮ್ಮದೇ ಆದ ರೀತಿಯಲ್ಲಿ ಬದುಕಬಹುದು ಎಂಬುದನ್ನು ಕಟ್ಟಿಕೊಡುವ ಸಿನಿಮಾ ‘ಮಿಥುನಂ.’

ತೆಲುಗು ಭಾಷೆಯ ಈ ಸಿನೆಮಾದ ನಿರ್ದೇಶಕರು ತನಿಕ್ಕೇಳ್ಳ ಭರಣಿ. ಅರವತ್ತೇಳು ವರ್ಷ ವಯೋಮಾನದ ಭರಣಿ ತಮ್ಮದೇ ಅನುಭವವೇನೋ ಎಂಬಂತೆ ಚಿತ್ರಕಥೆ ಹೆಣೆದು ನಿರ್ದೇಶಿಸಿದ್ದಾರೆ . ಸುಮಾರು ಮೂವತ್ತು ವರ್ಷಗಳಿಂದ ತೆಲುಗು ಚಿತ್ರರಂಗದಲ್ಲಿ ತಮ್ಮ ಪ್ರಬುದ್ಧ ಅಭಿನಯದಿಂದ ಪೋಷಕ ನಟನಾಗಿ ಗಮನ ಸೆಳೆದಿರುವ ಇವರು ಕಥೆ, ಚಿತ್ರಕಥೆ, ಸಂಭಾಷಣಾಕಾರರೂ ಹೌದು, ‘ಮಿಥುನಂ’ ಸಿನಿಮಾ ನಿರ್ದೇಶಿಸುವ ಮೂಲಕ ನಿರ್ದೇಶಕರಾಗಿಯೂ ಗೆದ್ದಿದಾರೆ.

ಸುಮಾರು ಏಳುನೂರೈವತ್ತು ಸಿನೆಮಾಗಳಲ್ಲಿ ಅಭಿನಯಿಸಿದ ಅನುಭವವಿರುವ ಭರಣಿ ಅವರು ನಿರ್ದೇಶಿಸಿರುವ ಮೊದಲನೇ ಸಿನಿಮಾ ಇದು. ತೆಲುಗಿನ ಪ್ರಸಿದ್ಧ ಲೇಖಕರು, ಕಾದಂಬರಿಕಾರರೂ ಆದ ಶ್ರೀ ರಮಣ ಅವರ ಇದೇ ಹೆಸರಿನ ಕಾದಂಬರಿಯನ್ನು ಸಿನಿಮಾ ಆಗಿಸಿದ್ದಾರೆ.

ಇಡೀ ಸಿನೆಮಾದಲ್ಲಿರುವುದು ಎರಡೇ ಪಾತ್ರಗಳು, ನಿವೃತ್ತ ಶಿಕ್ಷಕ ಅಪ್ಪದಾಸು, ಮತ್ತವರ ಹೆಂಡತಿ ಲಕ್ಷ್ಮೀ. ಹೆಂಡತಿಯನ್ನು ಪ್ರೀತಿಯಿಂದ ‘ಬುಜ್ಜಿ’ ‘ಬುಜ್ಜಿ ಲಕ್ಷ್ಮೀ’ ಎಂದು ಕರೆಯುವ ಗಂಡ, ಹುಸಿಮುನಿಸು ತೋರುತ್ತಲೇ ಉತ್ತರಿಸುವ ಹೆಂಡತಿ. ಇವರ ದಿನ ಪ್ರಾರಂಭವಾಗುವುದೇ ರೇಡಿಯೋದಲ್ಲಿ ಬರುವ ‘ವಂದೇ ಮಾತರಂ’ ಹಾಡಿನಿಂದ. ಇಬ್ಬರ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಮನೆಯ ಸುತ್ತಲು ಇರುವ ತೋಟ. ತಾವೇ ಬೆಳೆದ ತರಕಾರಿ, ಹೂವು, ಹಣ್ಣು. ಮಕ್ಕಳಂತೆ ಪ್ರೀತಿಯಿಂದ ಸಾಕಿರುವ ಹಸು, ಕರು, ಬಿಡುವಿನ ಸಮಯದಲ್ಲಿ ತಮ್ಮ ಜೋಡುಗಳನ್ನು ತಾನೇ ಹೊಲಿಯುವ, ಬಳಕೆಗೆ ಬೇಕಾಗುವ ಮಣ್ಣಿನ ಮಡಿಕೆ, ದೀಪಗಳನ್ನು ಮಾಡುವ, ಹಾಸಿಗೆ ರಿಪೇರಿಯನ್ನು ಮಾಡುವ ಗಂಡ. ಗಂಡನ ಬಾಯಿ ಚಪಲದ ಅರಿವಿರುವ ಹೆಂಡತಿ ಅದನ್ನು ತಣಿಸಲು ಮಾಡುವ ಪೆಸರಿಟ್ಟು, ಪಚ್ಚಡಿ, ಇತ್ಯಾದಿ ಬಗೆ ಬಗೆಯ ಖಾದ್ಯಗಳು. ‘ಅದ್ಬುತ ರುಚಿ ಇರುವುದು ಅಡಿಗೆಗೆ ಬಳಸುವ ಪದಾರ್ಥಗಳಲ್ಲ, ತಯಾರಿಸುವ ನಿನ್ನ ಕೈಗಳಲ್ಲಿ’ ಎನ್ನುತ್ತಾ ತೃಪ್ತಿಯಿಂದ ತಿನ್ನುವವನ ಅಂಗೈಗೆ ತುಪ್ಪ ಸುರಿಯುತ್ತಾಳೆ.

ಯಾವುದೇ ಬದಲಾವಣೆ ಇಲ್ಲದ ದಿನ ನಿತ್ಯದ ಬದುಕಿನಲ್ಲಿ ಆಗಾಗ ಮಕ್ಕಳಿಂದ ಬರುವ ಫೋನಿನ ಕರೆಗಳು ಸ್ವಲ್ಪ ಮಟ್ಟಿನ
ನಿರಾಳತೆಯನ್ನುಂಟುಮಾಡುತ್ತವೆ. ಪರಸ್ಪರರಿಗೆ ಗೊತ್ತಾಗದ ಹಾಗೆ ಡಬ್ಬದಲ್ಲಿ ಅಡಗಿಸಿಟ್ಟ ಮೊಬೈಲ್ ಫೋನಿನಲ್ಲಿ ಮಾತಾಡುವ ಅವಳು, ಅವಳಿಗೆ ಸಿಗದಂತೆ ಅಟ್ಟದ ಮೇಲೆ ಲ್ಯಾಂಡ್ ಲೈನ್ ಫೋನ್ ಇಟ್ಟಿರುವ ಅವನು. ಮಕ್ಕಳ ಬಗ್ಗೆ ಕಟುವಾಗೇ ನಡೆದುಕೊಳ್ಳುವ ಅಪ್ಪದಾಸು. ‘ಬರುತ್ತೇವೆ’ ಎಂದು ಹೇಳಿದ ಮಕ್ಕಳ ನಿರೀಕ್ಷೆಯಲ್ಲಿ ಅವರಿಗಾಗಿ ಮಾಡುವ ತಿಂಡಿಗಳು, ಹಾಕಿಟ್ಟ ಉಪ್ಪಿನಕಾಯಿ, ಬರುತ್ತೇನೆಂದವರು ಬರದೇ ಇದ್ದಾಗ ಆಗುವ ನಿರಾಸೆ, ಅದನ್ನು ವ್ಯಕ್ತಪಡಿಸದೆ ಒಬ್ಬರನ್ನೊಬ್ಬರು ಸಂತೈಸಿಕೊಳ್ಳುವುದು.

ಕರು ಕಾಣೆಯಾದಾಗ ಉಂಟಾಗುವ ಆತಂಕ, ಅದರ ಹುಡುಕಾಟ, ಕರುವಿನ ಸಾವು, ಹೆತ್ತ ಮಗುವನ್ನೇ ಕಳೆದುಕೊಂಡಂತಹ ಸಂಕಟ.
ಅವನಿಗೆ ನೋವಾದರೆ ಇವಳೇ ಅನುಭವಿಸಿದಂತೆ ಸಂಕಟಪಡುವಳು, ಇವಳಿಗೆ ಆರೋಗ್ಯ ಏರುಪೇರಾದರೆ ಅವನು ನರಳುವುದು. ‘ಮೊದಲು ಅವಳೇ ಹೋಗಿಬಿಟ್ಟರೇ ‘ ಅದನ್ನು ಕಲ್ಪಿಸಿಕೊಳ್ಳಲಾರ, ‘ಅವನಿಗೇನಾದರೂ ಆದರೆ’ ಊಹಿಸಿಕೊಳ್ಳಲಾರಳು. ಒಬ್ಬರನ್ನೊಬ್ಬರು ಬಿಟ್ಟಿರಲಾರದೆ, ತಮ್ಮದೇ ಆದ ಬದುಕನ್ನು ಪ್ರಕೃತಿಯೊಂದಿಗೆ ಮಿಳಿತಗೊಳಿಸಿ ಬದುಕುತ್ತಿರುವ ಅಪ್ಪದಾಸು ಮತ್ತು ಬುಜ್ಜಿ ಲಕ್ಷ್ಮೀ ಅವರ ಸಾಮರಸ್ಯದ ಬದುಕು ಮಕ್ಕಳನ್ನು ಮರೆಸಿ ಮರುಚೈತನ್ಯ ಪಡೆದು ಜೀವನೋತ್ಸಾಹದಿಂದ ಉಳಿದ ಬದುಕಿನ
ಅಂತಿಮ ದಿನಗಳನ್ನು ಕಳೆಯುವಂತೆ ಮಾಡುತ್ತದೆ. ಆದರೆ?? ಮಿಥುನಂ ನಂತಹ ಸಿನಿಮಾಗಳನ್ನು ನೋಡಿಯೇ ಅನುಭವಿಸ
ಬೇಕೇ ವಿನಃ ಅದನ್ನು ಅಕ್ಷರಗಳಲ್ಲಿ ಕಟ್ಟಿಕೊಡಲಾಗದು.

ಕಥಾನಾಯಕ ಅಪ್ಪಾದಾಸು ಪಾತ್ರದಲ್ಲಿ ಎಸ್.ಪಿ. ಬಾಲಸುಬ್ರಮಣ್ಯಂ ಅವರದು ಅದ್ಭುತ ಅಭಿನಯ. ನಿವೃತ್ತ ಶಿಕ್ಷಕ ಅಪ್ಪದಾಸು ಆಗಿ ತೆರೆಯ ಮೇಲೆ ವಿಜೃಂಬಿಸಿರುವ ಪರಿ ಅವರೊಬ್ಬ ಯಶಸ್ವೀ ಗಾಯಕರು ಎನ್ನುವುದನ್ನೇ ಮರೆಸಿಬಿಡುತ್ತದೆ. ಪಾತ್ರದಲ್ಲಿ
ಪರಕಾಯ ಪ್ರವೇಶ ಮಾಡಿದಂತೆ ನಟನಾ ಕೌಶಲ್ಯವನ್ನು ಮೆರೆದ ಸಿನಿಮಾ ‘ಮಿಥುನಂ’. ಬಾಲಸುಬ್ರಮಣ್ಯಂ ಅವರ ಪರಿಚಯವೇ ಇಲ್ಲದ ವಿದೇಶಿ ಸಹೃದಯ ಪ್ರೇಕ್ಷಕರು ಈ ಸಿನಿಮಾ ನೋಡಿದರೆ, ಅವರೊಬ್ಬ ‘ಅದ್ಬುತ ಭಾರತೀಯ ನಟ’ ಎಂದು ಪರಿಭಾವಿಸಿ ಬಿಡುತ್ತಾರೆ. ಯಶಸ್ವೀ ಗಾಯಕರು ಎನ್ನುವುದನ್ನು ಬದಿಗಿಟ್ಟು ಎರಡೂವರೆ ತಾಸು ತೆರೆಯ ಮೇಲಿನ ಅವರ ಅಭಿನಯವನ್ನು
ನೋಡಿಯೇ ಅನುಭವಿಸಬೇಕು.

1981ರ ‘ಬಾಳೊಂದು ಚದುರಂಗ’ ಕನ್ನಡ ಸಿನಿಮಾದಿಂದ 2018 ರ ತೆಲುಗಿನ ‘ದೇವದಾಸು’ ವರೆಗೆ ಹಲವಾರು ಭಾರತೀಯ ಭಾಷೆಗಳಲ್ಲಿ ಅಭಿನಯಿಸಿರುವ ಎಲ್ಲಾ ಪಾತ್ರಗಳಿಗಿಂತ ಭಿನ್ನವಾದ ಪಾತ್ರ ‘ಮಿಥುನಂ’ ನ ನಿವೃತ್ತ ಶಿಕ್ಷಕ ಅಪ್ಪದಾಸುವಿನ ಪಾತ್ರ.

ಅಪ್ಪದಾಸುವಿನ ಹೆಂಡತಿ ‘ಲಕ್ಷ್ಮೀ’ ಪಾತ್ರದಲ್ಲಿ ಲಕ್ಷ್ಮೀ ಅವರದ್ದೂ ಮನೋಜ್ಞ ಅಭಿನಯವೇ. ಇಬ್ಬರೂ ಜಿದ್ದಿಗೆ ಬಿದ್ದಂತೆ ಅಭಿ ನಯಿಸಿದ್ದಾರೆ. ‘ಲಕ್ಷ್ಮೀ’ ಎಂದಕೂಡಲೇ ಕಣ್ಮುಂದೆ ಬರುವುದು ಬೇರೆಯದೇ ಚಿತ್ರ, ಎಪ್ಪತ್ತರ ದಶಕದ ‘ಜೂಲಿ’ ಸಿನೆಮಾದ ನಾಯಕಿ ‘ಜೂಲಿ’ಯದು. ನಂತರ ‘ಲಕ್ಷ್ಮೀ’ ಹೆಸರಿನ ಹಿಂದೆ ‘ಜೂಲಿ’ ತಳುಕು ಹಾಕಿಕೊಂಡಿತು. ಒಂಬತ್ತನೇ ವಯಸ್ಸಿಗೇ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಲಕ್ಷ್ಮೀ ಹಿಂತಿರುಗಿ ನೋಡಿದ್ದೇ ಇಲ್ಲ. ತಮಿಳು ಚಿತ್ರರಂಗದಲ್ಲಿ ರಾಷ್ಟ್ರಪ್ರಶಸ್ತಿ ಪಡೆದ ಮೊದಲ ನಟಿ ಎಂಬ ಹೆಗ್ಗಳಿಕೆಗೂ ಪಾತ್ರರಾದವರು. ಅಷ್ಟೇ ಅಲ್ಲದೇ ಫಿಲಂ ಫೇರ್, ನಂದಿ, ಕೇರಳ ರಾಜ್ಯ ಪ್ರಶಸ್ತಿ, ಡಾ.ರಾಜಕುಮಾರ್ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿಗಳ ಗೌರವಗಳೂ ಸಂದಿವೆ.

ಮಿಥುನಂನ ಬುಜ್ಜಿ ಲಕ್ಷ್ಮೀಯಾಗಿ ಅವರದು ಸಹಜ ಅಭಿನಯ, ಮುಗುಳ್ನಗು, ಹುಸಿಕೋಪ, ಕಣ್ಣುಗಳಿಂದಲೇ ಅಭಿವ್ಯಕ್ತಿಸಿರುವ ಪರಿ ಎಲ್ಲವೂ ವೀಕ್ಷಕರಿಗೆ ಇಷ್ಟವಾಗುಬಿಡುತ್ತಾರೆ. ಸಿನಿಮಾದ ಅಂತಿಮ ದೃಶ್ಯದಲ್ಲಿನ ಲಕ್ಷ್ಮೀ ಅವರ ಅಭಿನಯ ಗಾಢ ವಿಷಾದವನ್ನುಂಟು ಮಾಡುವುದಲ್ಲದೇ ಬಹಳ ದಿನಗಳವರೆಗೂ ಕಾಡುತ್ತಲೇ ಇರುತ್ತದೆ.

ಭರಣಿ ಅವರ ನಿರ್ದೇಶನದ ಮೊದಲ ಸಿನಿಮಾ ಆದರೂ ಬಹಳ ಅಚ್ಚಕಟ್ಟಾಗಿ, ಎಲ್ಲ ವಯೋಮಾನದವರಿಗೂ ಇಷ್ಟವಾಗುವಂತೆ ಕಥೆ ಹೇಳಿದ್ದಾರೆ. 2012 ರಲ್ಲಿ ಬಿಡುಗಡೆಯಾದ ‘ಮಿಥುನಂ’ ಆಂಧ್ರ ಪ್ರದೇಶ ಸಕಾರದ ಪ್ರತಿಷ್ಠಿತ ‘ನಂದಿ’ ಪ್ರಶಸ್ತಿಯನ್ನು ಪಡೆದ ಉತ್ತಮ ಸಿನಿಮಾ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.ಬಾಲಸುಬ್ರಮಣ್ಯಂ, ಹಾಗೂ ಲಕ್ಷ್ಮೀ ಅವರು ಅಭಿನಯಕ್ಕಾಗಿ, ಉತ್ತಮ ಸಂಭಾಷಣೆಗಾಗಿ ಭರಣಿ ಅವರು ವಿಶೇಷ ಜ್ಯೂರಿ ಪ್ರಶಸ್ತಿ ಪಡೆದಿದ್ದಾರೆ. ಉತ್ತಮ ನಿರ್ದೇಶಕ ಪ್ರಶಸ್ತಿ ಕೊಡುವುದರ ಮೂಲಕ ಸಿನಿ ‘ಮಾ’ ಗೌರವಿಸಿದೆ.

ಸ್ವರವೀಣಾ ಪಾಣಿ ಅವರ ಸಂಗೀತ, ರಾಜೇಂದ್ರ ಪ್ರಸಾದ್ ಮತ್ತು ಭರಣಿ ಅವರ ಛಾಯಾಗ್ರಹಣ, ರಾಮಲಿಂಗೇಶ್ವರ ರಾವ್, ರಾಮರಾವ್ ಕಾಮರಾಜು ಅವರ ಎಲ್ಲೂ ಅತಿರೇಕವೆನಿಸದ ಬಿಗಿಯಾದ ಸಂಭಾಷಣೆ. ಮತ್ತೆ ಮತ್ತೆ ಕೇಳಬೇಕೆನಿಸುವ, ಜೊನ್ನವೀತುಲ ರಾಮಲಿಂಗ ಹಾಡಿರುವ ‘ಕಾಫಿ ದಂಡಕಮು’ ಹಾಗೂ ಎಸ್.ಪಿ.ಬಿ.ಅವರೇ ಹಾಡಿರುವ ‘ಆವಕಾಯಿ ಮನ ಅಂದರಿದಿ’ ಜೇಸುದಾಸ್ ಅವರ ‘ಆದಿದಂಪತಲು’ ಮನಸೆಳೆಯುವ ಹಾಡುಗಳು. ಒಟ್ಟಿನಲ್ಲಿ, ಅಪ್ಪದಾಸು ಹಾಗೂ ಲಕ್ಷ್ಮೀ ಅವರ ‘ಸಾಂಗತ್ಯ ಬದುಕಿನ ಸುಂದರ ಕಾವ್ಯ ಈ `ಮಿಥುನಂ’. ಭಾಷೆಯ ಗಡಿಗಳನ್ನು ಮೀರಿ ಸುಮಾರು ಐದು ದಶಕಗಳ ಕಾಲ ಸಂಗೀತ ಪ್ರಿಯರ ಮನರಂಜಿಸಿ ಹಲವಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡು ಕಣ್ಮರೆಯಾದ ಪದ್ಮಶ್ರೀ, ಪದ್ಮಭೂಷಣ ಎಸ್. ಪಿ. ಬಾಲಸುಬ್ರಮಣ್ಯಂ ಅವರಿಗೊಂದು ‘ನುಡಿ ನಮನ,’ ಈ ಬರಹ.

-ಮಂಜುಳಾ ಪ್ರೇಮಕುಮಾರ್

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *