ಸಿನಿಸಂಗಾತಿ / ಅಮಾನುಷ ನಡವಳಿಕೆಯ ಅನಾವರಣ – ಮಂಜುಳಾ ಪ್ರೇಮಕುಮಾರ್

ಇರಾನ್ ದೇಶದ `ದ ಸ್ಟೋನಿಂಗ್ ಆಫ್ ಸೊರಯಾ ಎಂ’ ಚಲನಚಿತ್ರ, ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಅನುಭವಿಸುವ ಬೀಭತ್ಸಕರ ದೌರ್ಜನ್ಯವನ್ನು ಬಿಚ್ಚಿಡುವ ಪರಿಯೇ ಮೈಮನಗಳನ್ನು ನಡುಗಿಸುತ್ತದೆ. ತನ್ನದೇನೂ ತಪ್ಪಿಲ್ಲದಿದ್ದರೂ ಅಪವಾದ ಹೊತ್ತು ಗಂಡಸರಿಂದ ಕಲ್ಲು ಹೊಡೆಸಿಕೊಂಡು ಸಾಯುವ ಹೆಣ್ಣಿನ ಬದುಕಿನ ಬಗ್ಗೆ ಚಿತ್ರ ಮಾಡಿರುವ ನಿರ್ದೇಶಕ ಸೈರಸ್ ನೌರಸ್ತೇ, ಆ ಮೂಲಕ ಜಗತ್ತಿನಲ್ಲಿ ಬದಲಾಗಬೇಕಾದುದು ಇನ್ನೂ ಎಷ್ಟೋ ಇದೆ ಎಂದು ಎಚ್ಚರಿಸಿದ್ದಾರೆ. ಚಿತ್ರ ನೋಡಿದ ಮೇಲೆ ಮನಸ್ಸಿನಲ್ಲಿ ಮೂಡುವುದು ಗಾಢ ವಿಷಾದ ಮತ್ತು ಆಕ್ರೋಶ.

ಮಧ್ಯ ವಯಸ್ಸಿನ, ಬುರ್ಖಾ ಧರಿಸಿದ ಮಹಿಳೆಯೊಬ್ಬಳು ನದಿಯ ಪಕ್ಕದ ಮರಳನ್ನು ಅತ್ತಿತ್ತ ಸರಿಸಿ, ಅದರೊಳಗಿದ್ದ ಮೂಳೆಗಳನ್ನು, ಬಟ್ಟೆ ಚೂರನ್ನು ಹೊರತೆಗೆದು ಸಂಸ್ಕಾರ ಮಾಡುತ್ತಾಳೆ, ಹೊರ ಜಗತ್ತಿಗೆ ತಿಳಿಯದೇ, ಮುಚ್ಚಿ ಹೋಗಬಹುದಾಗಿದ್ದ ಅಮಾನುಷ ಘಟನೆಯೊಂದನ್ನು ಅನಾವರಣಗೊಳಿಸುವುದರ ಸಂಕೇತವಾಗಿ ಈ ದೃಶ್ಯದ ಮೂಲಕ ಇರಾನಿನ ‘ದ ಸ್ಟೋನಿಂಗ್ ಆಫ್ ಸೊರಯಾ ಎಂ’ ಸಿನೆಮಾ ಆರಂಭವಾಗುತ್ತದೆ. ನಿರ್ದೇಶಕರು ಸೈರಸ್ ನೌರಸ್ತೇ, ಭಾಷೆ ಪರ್ಷಿಯನ್.1986 ರಲ್ಲಿ ನಡೆದ ನೈಜ ಘಟನೆ ಕುರಿತು ಲೇಖಕ ಫ್ರೆದೌನ್ ಸಾಹೆಬ್ಜಾನ್ ಅವರು ಬರೆದ ‘ಲಾ ಫೆಮ್ಮೇ ಲ್ಯಾಪಿಡೀ’ ಪುಸ್ತಕದಲ್ಲಿನ ಕಥೆಯನ್ನು ಆಧರಿಸಿ ಸಿನಿಮಾ ಮಾಡಿದ್ದಾರೆ. 1994 ರಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಚರ್ಚೆಗೊಳಗಾದ ಪುಸ್ತಕ. ಮಾಡದ ತಪ್ಪಿಗಾಗಿ ನಡತೆಗೆಟ್ಟವಳೆಂಬ ಅಪವಾದ ಹೊರಿಸಿದ ಪುರುಷ ವ್ಯವಸ್ಥೆಯ ಕಲ್ಲು ಹೊಡೆತಕ್ಕೆ, (ಸ್ಟೋನಿಂಗ್ ) ಬಲಿಯಾಗಿ ಅಸುನೀಗಿದ ಅಮಾಯಕ ಹೆಣ್ಣೊಬ್ಬಳ ಕಥೆ ಹೇಳುವ ಈ ಪುಸ್ತಕವನ್ನು ಇರಾನ್ ನಿಷೇದಿಸಿತು, ಆದರೆ ಸಿನಿಮಾ ಆಗಿಸಿ ಕಥೆಯನ್ನು ಗೆಲ್ಲಿಸಿದ್ದಾರೆ ನಿರ್ದೇಶಕ ಸೈರಸ್, ಈ ಸಿನಿಮಾ 2008ರಲ್ಲಿ ಟೊರಾಂಟೊ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಉದ್ಘಾಟನಾ ಸಿನಿಮಾ ಆಗಿ ಮೊದಲು ಪ್ರದರ್ಶನಗೊಂಡಿತು,

ಜಿಮ್ ಫ್ರೆಂಚ್ ಪತ್ರಕರ್ತ. ಇರಾನಿನ ಕುಫಹೇ ಪ್ರಾಂತ್ಯದ ಗುಡ್ಡಗಳ ದಾರಿಯನ್ನು ಬಳಸಿಕೊಂಡು ಪ್ರಯಾಣಿಸುತ್ತಿರುವಾಗ, ಹಳ್ಳಿಯೊಂದರ ಬಳಿ ಕಾರು ಕೆಟ್ಟುನಿಲ್ಲುತ್ತದೆ. ಅದನ್ನು ರಿಪೇರಿಗೆ ಬಿಟ್ಟು, ಹೋಟೆಲ್ ಹುಡುಕಿ ಹೊರಟವನಿಗೆ, ಊರು, ಅಲ್ಲಿ ಆವರಿಸಿರುವ ಸ್ಮಶಾನ ಮೌನ, ಯಾವುದೊ ದುಃಸ್ವಪ್ನ ನೋಡಿದಂತೆ ಹೆದರಿರುವ ಮಹಿಳೆಯರು, ಏನನ್ನೋ ಹೇಳಲು ತವಕಿಸುತ್ತಾ ಹಿಂಬಾಲಿಸುತ್ತಿರುವ ಮಹಿಳೆ, ಎಲ್ಲವೂ ಬೆರಗುಗೊಳಿಸುತ್ತವೆ, ಹಿಂಬಾಲಿಸಿ ಬರುತ್ತಿರುವ ಮಹಿಳೆ ಜೊಹ್ರಾ. ಹಳ್ಳಿಯ ಗಂಡಸರ ಕಣ್ತಪ್ಪಿಸಿ ಚೀಟಿಯೊಂದರಲ್ಲಿ ವಿಳಾಸ ಬರೆದು ಅವನಿಗೆ ತಲುಪಿಸಿ ಬರುತ್ತಾಳೆ, ವಿಳಾಸ ಹುಡುಕಿ ಬರುವ ಅವನಿಗೆ ಹಿಂದಿನ ದಿನವಷ್ಟೇ ನಡೆದಿರುವ ಅವಳ ಸೋದರ ಸಂಬಂಧಿ ಸೊರಯಾಳ ಬದುಕಿನ ದುರಂತ ಕಥೆ ಹೇಳಲು ಪ್ರಾರಂಭಿಸುತ್ತಾಳೆ. ಪತ್ರಕರ್ತ ಧ್ವನಿ ಮುದ್ರಿಸಿಕೊಳ್ಳುತ್ತಾ ಹೋಗುತ್ತಾನೆ. ಕಥೆ ಫ್ಲಾಶ್ ಬ್ಯಾಕ್ ನಲ್ಲಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ.

ವಿವಾಹಿತ ಹೆಣ್ಣು ಸೊರಯಾ, ಎರಡು ಹೆಣ್ಣು, ಎರಡು ಗಂಡು ಮಕ್ಕಳ ತಾಯಿ. ಒಮ್ಮೆ ನೋಡಿದರೆ ಮತ್ತೊಮ್ಮೆ ತಿರುಗಿ ನೋಡಬೇಕು ಎನಿಸುವಷ್ಟು ಸುಂದರ ಮಹಿಳೆ. ಪಟ್ಟಣದ ಜೈಲಿನಲ್ಲಿ ಗಾರ್ಡ್ ಆಗಿ ಕೆಲಸಮಾಡುವ ಗಂಡ ಅಲಿ. ಹದಿನಾಲ್ಕು ವರ್ಷದ ಶ್ರೀಮಂತ ಹುಡುಗಿಯನ್ನು ಮದುವೆಯಾಗುವ ಸಲುವಾಗಿ ಹೆಂಡತಿಯನ್ನು ವಿಚ್ಛೇದನ ಕೊಡುವಂತೆ ಒತ್ತಾಯಿಸುತ್ತಾನೆ, ಜೊತೆಗೆ ತನ್ನೆರಡು ಗಂಡು ಮಕ್ಕಳನ್ನೂ ಕೊಡಬೇಕೆಂಬ ತಕರಾರು. ತಾನಾಗೇ ವಿಚ್ಛೇದನ ಕೊಟ್ಟರೆ ಅವಳು ಕೊಟ್ಟ ವರದಕ್ಷಿಣೆ ಹಣವನ್ನು ವಾಪಸು ಕೊಡಬೇಕಾಗುತ್ತದೆ. ಒಪ್ಪದವಳಿಗೆ ದೈಹಿಕ, ಮಾನಸಿಕ ಹಿಂಸೆ ಕೊಡುತ್ತಾನೆ, ಒಪ್ಪಿಸಿ ವಿಚ್ಛೇದನ ಕೊಡಿಸುವಂತೆ ಊರಿನ ಧಾರ್ಮಿಕ ಮುಖಂಡ ಮುಲ್ಲಾನಲ್ಲಿ ಕೇಳುತ್ತಾನೆ, ಈ ಮುಲ್ಲಾ ಸಹ ಜೈಲಿನದ್ದು ಬಂದವನೆ. ಕಾಮುಕ ಮುಲ್ಲಾನಿಗೂ ಸೊರಯಾಳ ಮೇಲೆ ಆಸೆ. ಒಪ್ಪದ ಅವಳನ್ನು ನಡತೆಗೆಟ್ಟವಳೆಂದು ನಿರೂಪಿಸುವ ಸಂಚೊಂದನ್ನು ರೂಪಿಸುತ್ತಾರೆ. ತನ್ನ ಮತ್ತು ತನ್ನೆರಡು ಪುಟ್ಟ ಹೆಣ್ಣುಮಕ್ಕಳ ಜೀವನ ನಿರ್ವಹಣೆಗಾಗಿ ಮೆಕ್ಯಾನಿಕ್ ಆಗಿರುವ ವಿಧುರ ಹಷೆಮ್ ಮತ್ತು ಅವನ ಮಾನಸಿಕ ಅಸ್ವಸ್ಥ ಮಗನನ್ನು ನೋಡಿಕೊಳ್ಳುವ ಮನೆಕೆಲಸಕ್ಕೆ ಸೇರುವಂತೆ ಮಾಡಿ, ನಂತರ ಹಷೆಮನ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳೆಂಬ ಸುಳ್ಳು ಸುದ್ದಿ ಪ್ರಚಾರ ಮಾಡುತ್ತಾರೆ. ಹಾಗೂ ಸಂಬಂಧ ಇರುವುದಾಗಿ ಊರಿನ ಮುಖ್ಯಸ್ಥನ (ಮೇಯರ್) ಮುಂದೆ ಒಪ್ಪಿಕೊಂಡು ಸಾಕ್ಷಿ ಹೇಳುವಂತೆ ಅವನನ್ನು ಬೆದರಿಸಿ ಒಪ್ಪಿಸುತ್ತಾರೆ.

ಪೈಶಾಚಿಕ ನಡವಳಿಕೆ : ಮುಲ್ಲಾ ಮತ್ತು ಗಂಡನ ಸಂಚಿಗೆ, ಅಪಪ್ರಚಾರಕ್ಕೆ ಗುರಿಯಾಗುವ ಸೊರಯಾಳಿಗೆ ಊರಿನ ಪುರುಷ ಸಮುದಾಯ ಕಲ್ಲುಹೊಡೆದು ಕೊಲ್ಲಬೇಕೆಂದು ನಿರ್ಧರಿಸುತ್ತಾರೆ. ಇಲ್ಲಿ ಕಲ್ಲು ಹೊಡೆಯುವವರು ಪುರುಷರು ಮಾತ್ರ. ವೇದಿಕೆ ಸಿದ್ಧವಾಗುತ್ತದೆ. ಕಲ್ಲು ಹೊಡೆಯುವಾಗ ತಪ್ಪಿಸಿಕೊಂಡು ಹೋಗಬಾರದೆಂದು ಗುಂಡಿ ತೋಡುತ್ತಾರೆ, ಅತ್ಯಂತ ಉತ್ಸಾಹದಿಂದ ಕಲ್ಲುಗಳನ್ನು ತಂದು ರಾಶಿ ಹಾಕುತ್ತಾರೆ, ಆಕೆಯ ಗಂಡು ಮಕ್ಕಳೂ ಇದಕ್ಕೆ ಸಹಕರಿಸುತ್ತಾರೆ. ರಸ್ತೆಯುದ್ದಕ್ಕೂ ಅಲಿ ಅವಳನ್ನು ಬಯುತ್ತಾ, ಹೊಡೆಯುತ್ತಾ, ಕೂದಲು ಹಿಡಿದು ಎಳೆದು ತರುತ್ತಾನೆ. ಗುಂಡಿಯಲ್ಲಿ ದೂಡಿ ಸೊಂಟದವರೆಗೂ ಮಣ್ಣು ತುಂಬುತ್ತಾರೆ, ಮೊದಲ ಕಲ್ಲು ಹೊಡೆಯುವ ಸರದಿ ಸೊರಯಾಳ ಅಪ್ಪನದು. ಅವಳ ಅಪ್ಪನೂ ಸುಳ್ಳನ್ನೇ ಸತ್ಯವೆಂದು ನಂಬಿರುತ್ತಾನೆ. ಅಪ್ಪ ಎಸೆಯುವ ಕಲ್ಲುಗಳೆಲ್ಲ ಗುರಿತಪ್ಪುತ್ತವೆ. ಅಲ್ಲಿ ನೆರೆದಿದ್ದ ಹೆಂಗಳೆಯರೆಲ್ಲ ‘ಸೊರಯಾ ನಿರಪರಾಧಿ, ಆದುದರಿಂದಲೇ ಕಲ್ಲುಗಳು ಗುರಿ ತಪ್ಪುತ್ತಿವೆ, ಬಿಟ್ಟುಬಿಡಿ’ ಎಂದು ಕೂಗುತ್ತಾ ಅಡ್ಡ ನಿಲ್ಲುತ್ತಾರೆ, ಅವರ ಕೂಗಿಗೆ, ಸಂಕಟಕ್ಕೆ, ಆಕ್ರಂದನಕ್ಕೆ ಬೆಲೆಕೊಡದೆ ಬೈದು ಬಾಯಿ ಮುಚ್ಚಿಸುತ್ತಾರೆ. ಹಷೆಮ್ ಕಲ್ಲು ಹೊಡೆಯದೆ ಪಶ್ಚಾತ್ತಾಪ ಪಡುತ್ತಾನೆ. ಅಲಿ ಮತ್ತು ಉಳಿದ ಗಂಡಸರು ಕಲ್ಲುಹೊಡೆದು ಕೊಲ್ಲುತ್ತಾರೆ. ಅವರ ಪೈಶಾಚಿಕ ನಡವಳಿಕೆ ನೋಡುಗರಲ್ಲಿ ಜಿಗುಪ್ಸೆ ಹುಟ್ಟಿಸುತ್ತದೆ. ನೋವಿನಲ್ಲೂ ನರಳದ ಆಕೆಯ ನಿರ್ಲಿಪ್ತತೆ ಕಣ್ಣಲ್ಲಿ ನೀರು ಬರಿಸುತ್ತದೆ. ಸಿನಿಮಾ ಮುಗಿದು ಹೊರಬಂದಮೇಲೂ ಗಾಢ ವಿಷಾದ ಭಾವವೊಂದು ಕಾಡುತ್ತಲೇ ಇರುತ್ತದೆ.

ಸೊರಯಾಳಿಗಾದ ಅನ್ಯಾಯವನ್ನು ಧ್ವನಿ ಮುದ್ರಿಸಿಕೊಂಡು ಹೊರಟ ಪತ್ರಕರ್ತನ ಮೇಲೆ ಹಲ್ಲೆ ಮಾಡಿ ಟೇಪ್ ಕಿತ್ತುಕೊಳ್ಳುತ್ತಾರೆ ಮುಲ್ಲಾನ ಜನ. ಜೊಹ್ರಾ ಕೊಟ್ಟ ಮತ್ತೊಂದು ಟೇಪ್ ಪಡೆದು ‘ಹತ್ತಿರದ ಸರ್ಕಾರಿ ಕಚೇರಿಯಲ್ಲಿ ಕೇಸ್ ದಾಖಲಿಸುವುದಾಗಿ’ ಹೇಳಿ, ಅಲ್ಲಿಂದ ತಪ್ಪಿಸಿಕೊಂಡು ಹೋಗುತ್ತಾನೆ. ಗಂಡನ ಸ್ವಾರ್ಥ, ಮುಲ್ಲಾನ ದೌರ್ಜನ್ಯಕ್ಕೆ ಬಲಿಯಾದ ಅಮಾಯಕ ಹೆಣ್ಣಿನ ಕತೆಯನ್ನು ಹೊರ ಜಗತ್ತಿಗೆ ತಿಳಿಸಲು.

ಇತ್ತ ಜೊಹ್ರಾ, ತನ್ನ ಮೇಲ್ಮುಸುಕನ್ನು ಗಾಳಿಯಲ್ಲಿ ಹಾರಿಬಿಡುತ್ತಾ, ‘ದ ಗಾಡ್ ದಟ್ ಐ ಲವ್ ಈಸ್ ಗ್ರೇಟ್. ನೌ ದ ಹೋಲ್ ವರ್ಲ್ಡ್ ವಿಲ್ ನೊ’ ಎಂದು ಸಂತಸದಿಂದ ಕೂಗುತ್ತಾಳೆ. ಈ ಸಿನಿಮಾದಲ್ಲಿ ಗಮನ ಸೆಳೆಯುವ ಒಂದು ಪ್ರಮುಖ ಪಾತ್ರ ಜೊಹ್ರಾಳದ್ದು. ಸಿನಿಮಾ ಪ್ರಾರಂಭವಾಗುವುದೇ ಈಕೆ ಸೊರಯಾಳ ಅವಶೇಷಗಳಿಗೆ ಸಂಸ್ಕಾರ ಮಾಡುವುದರ ಮೂಲಕ. ಅವಳು ಸೊರಯಾಳ ಸೋದರ ಸಂಬಂಧಿ, ಅತಿಯಾಗಿ ಪ್ರೀತಿಸುತ್ತಾಳೆ ನೈತಿಕವಾಗಿ ಬೆಂಬಲಿಸುತ್ತಾಳೆ, ಮುಲ್ಲಾನ ಕಾಮುಕ ದೃಷ್ಟಿಯಿಂದ, ಅಲಿ ದೌರ್ಜನ್ಯದಿಂದ ಪದೇ ಪದೇ ಪಾರು ಮಾಡುತ್ತಾಳೆ, ಶಿಕ್ಷೆಯನ್ನು ಪ್ರತಿಭಟಿಸುತ್ತಾಳೆ. ಹೆಚ್ಚು ಆತಂಕ ಮತ್ತು ಕ್ಷೋಭೆಗೊಳಗಾಗುವ ಪಾತ್ರ ಜೊಹ್ರಾಳದ್ದು. ಸೊರಯಾಳ ಸಾವಿನ ನಂತರ ಅವಳ ಪುಟ್ಟ ಹೆಣ್ಣುಮಕ್ಕಳ ಜವಾಬ್ದಾರಿ ಹೊರುವವಳೂ ಇವಳೇ. ಹೊರ ಜಗತ್ತಿನ ಅರಿವಿಗೆ ಬಾರದೇ ಮುಚ್ಚಿ ಹೋಗಬಹುದಾಗಿದ್ದ ದಾರುಣ ಘಟನೆಯನ್ನು ಪತ್ರಕರ್ತನಿಗೆ ವಿವರಿಸಿ ಹೊರ ಪ್ರಪಂಚಕ್ಕೆ ತಿಳಿಯುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತಾಳೆ. ಸಿನಿಮಾದ ಅಂತಿಮ ಘಟ್ಟದಲ್ಲಿ, ಮೇಲ್ಮುಸುಕನ್ನು ಗಾಳಿಯಲ್ಲಿ ಹಾರಿಬಿಡುವಾಗ ಆಕೆಯ ಕಣ್ಣುಗಳಲ್ಲಿ ‘ಸೊರಯಾಳ ಆತ್ಮಕ್ಕೆ ಶಾಂತಿ ಸಿಕ್ಕಿತೆಂಬ’ ನಿರಾಳ ಭಾವ ವ್ಯಕ್ತವಾಗುತ್ತದೆ.

 

ಮುಂಚೂಣಿ : ಕಲ್ಲುಹೊಡೆದು ಕೊಲ್ಲುವ ಈ ಪದ್ಧತಿ ಇರಾನಿನಲ್ಲಷ್ಟೇ ಅಲ್ಲದೆ ಇರಾಕ್, ಖತಾರ್, ಸೌದಿ ಅರೇಬಿಯ, ಸುಡಾನ್,ಸೊಮಾಲಿಯ, ನೈಜೀರಿಯಾ, ಅಫ್ಘಾನಿಸ್ತಾನ, ಪಾಕಿಸ್ತಾನ, ಇತ್ಯಾದಿ ರಾಷ್ಟ್ರಗಳಲ್ಲಿ ಕಾನೂನು ಬದ್ಧವಾಗಿಯೇ ನಡೆಯುತ್ತಿದೆ, ಗಂಡಾಗಲಿ ಹೆಣ್ಣಾಗಲಿ ಅಲ್ಲಿನ ಕಾನೂನಿಗೆ ಹೊರತಾದ ಕೆಲಸಗಳನ್ನು ಮಾಡಿದಾಗ ಉದಾಹರಣೆಗೆ, ವಿವಾಹಿತ ಮಹಿಳೆ ಅಥವಾ ಪುರುಷ ಅನೈತಿಕವಾಗಿ ದೈಹಿಕ ಸಂಬಂಧ ಹೊಂದಿದ್ದರೆ ಇಂತಹ ಕ್ರೂರ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಇಂಥ ಹತ್ಯೆಗಳು ಮರ್ಯಾದಾ ಹತ್ಯೆ ಎಂದೂ ಕರೆಸಿಕೊಳ್ಳುತ್ತವೆ. ಹೆಚ್ಚಾಗಿ ಈ ಶಿಕ್ಷೆಗೆ ಗುರಿಯಾಗುವವರು ಮಹಿಳೆಯರು. ಪುರುಷ ಮರ್ಜಿಗೆ ಒಪ್ಪದೆ ವಿರೋಧಿಸುವ ಮಹಿಳೆಯರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿ, ಇಲ್ಲದ ಸಂಬಂಧ ಸೃಷ್ಟಿಸಿ ಶಿಕ್ಷಿಸಿರುವ ಪ್ರಕರಣಗಳಿವೆ. ಆಧುನಿಕ ಶಿಕ್ಷಣ, ವೈಜ್ಞಾನಿಕ ಮನೋಭಾವನ್ನು ಕ್ರಮೇಣ ಮೈಗೂಡಿಸಿಕೊಳ್ಳುತ್ತಿರುವ ಕೆಲವು ಮುಸ್ಲಿಂ ರಾಷ್ಟ್ರಗಳು ಧಾರ್ಮಿಕ ಮೂಲಭೂತವಾದದ ಮನಸ್ಥಿತಿಯಿಂದ ಇನ್ನೂ ಹೊರಬಂದಿಲ್ಲ. ಅಲ್ಲಿನ ಸಾಮಾಜಿಕ ಬದುಕಿನಲ್ಲಿ ಇರುವ ವೈರುಧ್ಯಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನಗಳನ್ನು ಇರಾನ್ ಸಿನಿಮಾ
ನಿರ್ದೇಶಕರು ಮಾಡುತ್ತಲೇ ಬಂದಿರುವುದು ಸ್ವಾಗತಾರ್ಹ. ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ, ಅದರ ಪರಿಣಾಮ ಮುಂತಾದವುಗಳನ್ನು ತೆರೆಯ ಮೇಲೆ ತೋರಿಸುವ ಪ್ರಯತ್ನದಲ್ಲಿ ಇರಾನ್ ಚಿತ್ರರಂಗ ಉಳಿದೆಲ್ಲ ಮುಸ್ಲಿಂ ರಾಷ್ಟ್ರಗಳ ಚಿತ್ರರಂಗಕ್ಕಿಂತ ಮುಂಚೂಣಿಯಲ್ಲಿದೆ.

ಪದೇ ಪದೇ ತನ್ನ ಗಂಡು ಮಕ್ಕಳಿಗೆ ‘ಇದು ಪುರುಷರ ಪ್ರಪಂಚ ಅನ್ನುವುದನ್ನು ಯಾವತ್ತೂ ಮರೆಯ ಬೇಡಿ’ ಎನ್ನುವ ಅಹಂಕಾರಿ, ದುಷ್ಟ, ತಂದೆ ಅಲಿ ಪಾತ್ರದಲ್ಲಿ ನವೇದ್, ಸೊರಯಾಳ ಸಂಬಂಧಿ, ಅವಳ ಸಾವಿಗೆ ನ್ಯಾಯ ಕೊಡಿಸಲು ಪ್ರಯತ್ನಿಸಿ, ಗೆಲುವು ಸಾಧಿಸುವ ಜೊಹ್ರಾಳ ಪಾತ್ರದಲ್ಲಿ ಶೋಹರೆಹ್ ನಟಿಸಿದ್ದಾರೆ. ಕಲ್ಲಿನ ಹೊಡೆತಕ್ಕೆ ಬಲಿಯಾಗುವ ಅಮಾಯಕ ಹೆಣ್ಣು ಸೊರಯಾಳ ಪಾತ್ರದಲ್ಲಿ ಮೊಜ್ಹನ್ ಮರ್ನೋ ಅವರದು ಅದ್ಭುತ ಅಭಿನಯ. ಮುಲ್ಲಾ ಆಗಿ ಅಲಿ ಪೌರ್ತಶ್. ಪತ್ರಕರ್ತನಾಗಿ ಜಿಮ್ ಅದ್ಭುತವಾಗಿ ನಟಿಸಿದ್ದಾರೆ. ಸನ್ನಿವೇಶಗಳಿಗೆ ಹೊಂದುವ ಜಾನ್ ಅವರ ಸಂಗೀತ, ಜೋಯೆಲ್ ರಾನ್ಸಮ್ ಅವರ ಛಾಯಾಗ್ರಹಣ. ಸಂಕಲನ: ಡೇವಿಡ್ ಹಾಂಡ್ಮ್ಯಾನ್ ಮತ್ತು ಜೆಫ್ರಿ. 116 ನಿಮಿಷಗಳ ಈ ಸಿನಿಮಾ ಎಲ್ಲೂ ಬೇಸರ ಬರಿಸುವುದಿಲ್ಲ. ಆದರೆ ಗಾಢವಾದ ವಿಷಾದ ಭಾವ ಮೂಡುತ್ತದೆ.

ಮಂಜುಳಾ ಪ್ರೇಮಕುಮಾರ್

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *