FEATUREDಸಿನಿಮಾತು

ಸಿನಿಮಾತು/ ಲಕ್ಷ್ಮೀ, ದೀಪಿಕಾ ಮತ್ತು `ಛಪಾಕ್’

ಚಲನಚಿತ್ರರಂಗವು ಸಮಾಜಕ್ಕೆ ಎತ್ತಿ ತೋರಿಸಬೇಕಾದ ವಿಷಯಗಳು ನಮ್ಮ ಸುತ್ತ ಹರಡಿಕೊಂಡಿವೆ. ಈಗ ಪ್ರದರ್ಶನಕ್ಕೆ ಬಿಡುಗಡೆಯಾಗಿರುವ ಹಿಂದಿ ಚಿತ್ರ “ಛಪಾಕ್”, ಹಾಗೆ ನಮ್ಮ ಸಮಾಜದಲ್ಲಿ ತುಂಬಿತುಳುಕುತ್ತಿರುವ ಪುರುಷ ಪ್ರಾಧಾನ್ಯವು ಹೆಣ್ಣಿನ ಮೇಲೆ ಠೇಂಕಾರದಿಂದ `ಪ್ರದರ್ಶನ’ ಮಾಡುವ ಹೀನ ಕ್ರೌರ್ಯವನ್ನು ಹೇಳುವ ಸತ್ಯಕಥೆ. ಸಮಾಜದಲ್ಲಿ ಕಂಡುಬರುವ ಅಂಥ ಅಟ್ಟಹಾಸದ ಮುಖಕ್ಕೆ ದಿಟ್ಟತನದಿಂದ ಛಪಾಕ್ ಎಂದು ಬಾರಿಸುವ ಒಂದು ಪ್ರಯತ್ನ.

ಇತಿಹಾಸದ ಪ್ರಸಂಗಗಳು ಮತ್ತು ಸಮಕಾಲೀನ ಜೀವನದ ಘಟನೆಗಳನ್ನು ಆಧರಿಸಿ ನಿರ್ಮಿಸಿದ ಚಲನಚಿತ್ರಗಳು ಎಲ್ಲ ದೇಶಭಾಷೆಗಳಲ್ಲೂ ತಯಾರಾಗುತ್ತವೆ. ಅವುಗಳಲ್ಲಿ ಬಹುಪಾಲು ವೈಭವ -ವಿಜೃಂಭಣೆಗಳ ಚಿತ್ರಗಳಾಗಿರುತ್ತವೆಯೇ ಹೊರತು ಇಂದಿನ ಕಾಲಕ್ಕೆ ಏನನ್ನೂ ಹೇಳುವುದಿಲ್ಲ. ಆದರೆ ಸಮಾಜಕ್ಕೆ ಎಷ್ಟೊಂದನ್ನು ಹೇಳಲೇಬೇಕಾದ ದುರಂತ ಕಥೆಗಳು ಇದ್ದೇ ಇರುತ್ತವೆ. ಈಗ ಪ್ರದರ್ಶನಕ್ಕೆ ಬಿಡುಗಡೆಯಾಗಿರುವ ಹಿಂದಿ ಚಿತ್ರ “ಛಪಾಕ್”, ಹಾಗೆ ನಮ್ಮ ಸಮಾಜದಲ್ಲಿ ತುಂಬಿತುಳುಕುತ್ತಿರುವ ಪುರುಷ ಪ್ರಾಧಾನ್ಯವು ಹೆಣ್ಣಿನ ಮೇಲೆ ಠೇಂಕಾರದಿಂದ ಪ್ರದರ್ಶನ' ಮಾಡುವ ಹೀನ ಕ್ರೌರ್ಯವನ್ನು ಹೇಳುವ ಸತ್ಯಕಥೆ. ಹುಡುಗಿ ತನ್ನ ಮಾತು ಕೇಳದಿದ್ದಾಗ, ಮದುವೆಗೆ ಒಪ್ಪದಿದ್ದಾಗ, ಬೇರೆಯವನನ್ನು ಮದುವೆಯಾದಾಗ, ದ್ವೇಷ ತೀರಿಸಿಕೊಳ್ಳುವಾಗ ಹೀಗೆ ನಾನಾ ಕಾರಣಗಳಿಗೆ ಹುಡುಗ ತನ್ನ ಗಂಡುಕೈಗಳಿಗೆ ಸುಲಭವಾಗಿ ಸಿಗುವ ಆಸಿಡ್ ಅನ್ನು ಹುಡುಗಿಯ ಮುಖದ ಮೇಲೆ "ಛಪಾಕ್" ಎಂದು ಎರಚುತ್ತಾನೆ. ಅಲ್ಲಿಂದಾಚೆಗೆ ಅವಳ ಬದುಕು ಅನುದಿನವೂ ಸುಡುತ್ತಿರುತ್ತದೆ. ಹುಡುಗಿಯ ಮುಖಕ್ಕೆ ಇರಲಿ, ತಮಗೆ ಆಗದ ಹಿರಿಯರ ಮುಖಮೈಗಳಿಗೂ ಆಸಿಡ್ ಎರಚುವ ನೀಚ ಗಂಡಸರು ದೇಶದಾದ್ಯಂತ ಕಂಡುಬರುತ್ತಾರೆ. 2005 ರಲ್ಲಿ ದೆಹಲಿ ಮಾರುಕಟ್ಟೆಯಲ್ಲಿ ಲಕ್ಷ್ಮೀ ಅಗರವಾಲ್ ಎಂಬ ಹುಡುಗಿ ಹೀಗೆ ಒಬ್ಬ ಪರಿಚಿತ ಹುಡುಗನಿಂದ ಆಸಿಡ್ ದಾಳಿಗೆ ಒಳಗಾಗುತ್ತಾಳೆ. ಮುಖಮೈಗಳು ಸುಟ್ಟುಹೋದರೂ ಅವುಗಳ ಕಾರಣ ಹಲವಾರು ಶಸ್ತ್ರಚಿಕಿತ್ಸೆಗಳಿಗೆ ಒಳಗಾದರೂ ಎಷ್ಟೊಂದು ನೋವು ಸಂಕಟಗಳನ್ನು ಅನುಭವಿಸಿದರೂ ಅವಳ ಮನಸ್ಸು ಮಾತ್ರ ಸುಟ್ಟುಹೋಗುವುದಿಲ್ಲ; ಬದಲಿಗೆ ಇನ್ನಷ್ಟು ಗಟ್ಟಿತನವನ್ನು ರೂಢಿಸಿಕೊಳ್ಳುತ್ತದೆ. ಸುಟ್ಟುಹೋದ ಮುಖವನ್ನು ಜರಿಯುವ ವಿಕಾರ ದೃಷ್ಟಿಕೋನಗಳು, ಉದ್ಯೋಗ ಮತ್ತು ಆದಾಯ ಇಲ್ಲದ ಕಷ್ಟದ ಬದುಕಿನ ಬವಣೆಗಳು ಎಲ್ಲವನ್ನೂ ಮೀರಿ ಅವಳು ತನ್ನಂತೆ ಆಸಿಡ್ ದಾಳಿಗೆ ಒಳಗಾದವರಿಗೆ ಧೈರ್ಯ ತುಂಬುವ ಒಬ್ಬ ಕಾರ್ಯಕರ್ತೆಯಾಗಿ, ಕಾನೂನು ಸರಿಪಡಿಸಲು ಹೆಣಗುವ ಒಬ್ಬ ಹೋರಾಟಗಾರಳಾಗಿ ಬೆಳೆಯುತ್ತಾಳೆ. ಅವಳ ಕಥೆಯನ್ನು ಹೇಳುವ "ಛಪಾಕ್" ಚಿತ್ರ, ಸಮಾಜದಲ್ಲಿ ಕಂಡುಬರುವ ಹೀನತೆಗೆ ದಿಟ್ಟತನದಿಂದ ಛಪಾಕ್ ಎಂದು ಬಾರಿಸುವ ಒಂದು ಪ್ರಯತ್ನ. "ಛಪಾಕ್" ಚಿತ್ರ ಇನ್ನೇನು ಬಿಡುಗಡೆ ಆಗಬೇಕು ಅನ್ನುವಾಗ, ದೆಹಲಿಯ ಜವಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಅಹಿತಕರ ವಿದ್ಯಮಾನಗಳು ನಡೆದವು. ಈ ಚಿತ್ರದಲ್ಲಿ ಮಾಲತಿ ಎಂಬ ಹೆಸರಿರುವ ಲಕ್ಷ್ಮೀ ಅಗರವಾಲ್ ಪಾತ್ರ ಅಭಿನಯಿಸಿರುವ ಮತ್ತು ಚಿತ್ರದ ಒಬ್ಬ ನಿರ್ಮಾಪಕರೂ ಆಗಿರುವ ದೀಪಿಕಾ ಪಡುಕೋಣೆ, ಜೆಎನ್‍ಯು ಕ್ಯಾಂಪಸ್‍ಗೆ ಹೋಗಿ ದಾಳಿಗೊಳಗಾದ ವಿದ್ಯಾರ್ಥಿಗಳನ್ನು ಭೇಟಿ ಮಾಡಿದ್ದು ಅನೇಕ ಅಪವ್ಯಾಖ್ಯಾನಗಳಿಗೆ ಒಳಗಾಯಿತು. "ಛಪಾಕ್" ಚಿತ್ರಕ್ಕೆ ಮುಂಗಡ ಕಾದಿರಿಸಿದ ಟಿಕೆಟ್‍ಗಳ ರದ್ದು, ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನ ಎಲ್ಲವೂ ನಡೆಯಿತು. ಆದರೆ ಅದದೇ ಸಂಖ್ಯೆಯ ಟಿಕೆಟ್‍ಗಳನ್ನು ರದ್ದುಮಾಡುವ ಮೋಸ ನಗೆಪಾಟಲಿಗೆ ಈಡಾಯಿತು. ಇದಕ್ಕೆ ವಿರುದ್ಧವಾಗಿ ಈ ಹೀನ ಕ್ರೌರ್ಯದ ವಿರೋಧಕ್ಕೆ ಸಹಮತ, ಹೆಚ್ಚುಜನರಿಗೆ ಈ ಚಿತ್ರ ವೀಕ್ಷಣೆಗೆ ಟಿಕೆಟ್‍ಗಳನ್ನು ತೆಗೆಸಿಕೊಡುವ ಬೆಂಬಲ ಇವೆಲ್ಲವೂ ಅದೇ ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತವಾಗಿ ದೇಶದಲ್ಲಿ ಜನಪರ ವಿಷಯಗಳಿಗೆ ಇರುವ ನಂಬಿಕೆಯನ್ನು ಎತ್ತಿಹಿಡಿಯಿತು. ಚಿತ್ರದ ಬಗ್ಗೆ ಇನ್ನಷ್ಟು ಕುತೂಹಲ ಹೆಚ್ಚಿಸಿತು. ತನ್ನ ಹಿಂದಿನಬಾಜೀರಾವ್ ಮಸ್ತಾನಿ’, `ಪದ್ಮಾವತ್’ ಮುಂತಾದ ಚರಿತ್ರೆ ಆಧರಿಸಿದ ಚಿತ್ರಗಳ ವೈಭವವನ್ನ ಬದಿಗಿಟ್ಟು ಸಾಮಾನ್ಯ ಹುಡುಗಿಯ ಸಂಕಟ ಹೇಳುವ “ಛಪಾಕ್” ಚಿತ್ರದಲ್ಲಿ ನಟಿಸಿರುವ ದೀಪಿಕಾಗೆ ಇದು “ಕೆರಿಯಲ್ ಸ್ಪೆಷಲ್” ಚಿತ್ರ ಎಂದೆಲ್ಲ ಹೇಳಲಾಗುತ್ತಿದೆ. ಅಲ್ಲದೆ ಇದು ಹಿಂದಿ ಚಿತ್ರರಂಗದಲ್ಲೊಂದು ಮೈಲುಗಲ್ಲು ಎಂಬ ಪ್ರಶಂಸೆಯೂ ದೊರೆತಿದೆ. ಮೇಘನಾ ಗುಲ್ಜಾರ್ ನಿರ್ದೇಶನದ ಈ ಚಿತ್ರಕ್ಕೆ ಗುಲ್ಜಾರ್ ಅವರ ಮನಕಲಕುವ ಹಾಡುಗಳಿವೆ. ನಮ್ಮ ಸಮಾಜದಲ್ಲಿ ಕಾಣುವ ನೀಚ ಕ್ರೌರ್ಯವನ್ನು ವಿರೋಧಿಸುವಂತೆ ಬೆಳೆಯುವ ಹುಡುಗರಲ್ಲಿ ಅರಿವು ಮೂಡಿಸಲು “ಛಪಾಕ್” ಚಿತ್ರ ಕಿಂಚಿತ್ ಯತ್ನಿಸಿದರೂ ಸಾರ್ಥಕ ಎಂಬ ಮಾತಂತೂ ನಿಜ.
-ಹಿತೈಷಿಣಿ ಬಳಗ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *