ಸಿನಿಮಾತು/ ಮಾಯಿ ಘಾಟ್: ನ್ಯಾಯಕ್ಕಾಗಿ ನಡೆದ ಹೋರಾಟ- ಮಂಜುಳಾ ಪ್ರೇಮ್‍ಕುಮಾರ್
ಕೇರಳದಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ ಮೂಡಿಬಂದ ಮರಾಠಿ ಚಿತ್ರ `ಮಾಯಿ ಘಾಟ್ ಕ್ರೈಂ ನಂ 103/2005′ ನ್ಯಾಯಕ್ಕಾಗಿ ಹೋರಾಡುವ ಅಸಹಾಯಕ ಬಡಜನರಿಗೆ ಕೊಡುವ ಆತ್ಮವಿಶ್ವಾಸ ಅಷ್ಟಿಷ್ಟಲ್ಲ. ಮಗನನ್ನು ಕಳೆದುಕೊಂಡ ಪ್ರಭಾ ಮಾಯಿ ಇಡೀ ಪೆÇಲೀಸ್ ವ್ಯವಸ್ಥೆಯ ವಿರುದ್ಧ ನಡೆಸುವ ಹೋರಾಟದ ಕಥೆ ಒಂದು ಅದ್ಭುತ ಭಾವನಾತ್ಮಕ ಚಿತ್ರವಾಗಿ ಮನ ಕಲಕುತ್ತದೆ.
ಅದೊಂದು ಈಗಲೋ ಆಗಲೋ ಬಿದ್ದು ಹೋಗುವಂತಿರುವ ಗುಡಿಸಲು, ಒಳಗೆ ನೆಲದ ಮೇಲೆ ಅಲ್ಲಲ್ಲಿ ಗುಪ್ಪೆಯಾಗಿ ಬಿದ್ದಿರುವ ಒಗೆದ, ಒಗೆಯದ ಮತ್ತು ಇಸ್ತ್ರಿಗಾಗಿ ಬಂದಿರುವ ಬಟ್ಟೆಗಳ ರಾಶಿ. ಅವುಗಳಲ್ಲಿ ಪೊಲೀಸ್ ಸಮವಸ್ತ್ರಗಳು ಇವೆ. ಇವುಗಳ ಪರಿವೆಯೇ ಇಲ್ಲದಂತೆ ಮನೆಯ ಹೊರಗೆ ಮೆಟ್ಟಿಲುಗಳ ಮೇಲೆ ಕುಳಿತಿದ್ದಾಳೆ ಮನೆಯೊಡತಿ. ಕಾಲ ಬುಡ ಲ್ಲೊಂದು ಕಾಗೆ ಅತ್ತಿಂದಿತ್ತ ಜಿಗಿಯುತ್ತಾ ಆಕೆಯನ್ನೇ ದಿಟ್ಟಿಸುವಂತಿದೆ. ಆಕೆಯು ಅಷ್ಟೇ ದುಃಖ, ಆತಂಕದಿಂದ ಕಾಗೆಯನ್ನೇ ದಿಟ್ಟಿಸುತ್ತಿದ್ದಾಳೆ, ಸತ್ತಮಗನೇ ಕಾಗೆಯ ರೂಪದಲ್ಲಿ ಬಂದಿದ್ದಾನೇನೋ ಎಂಬಂತೆ ‘
ಇದು ರಾಷ್ಟ್ರಪ್ರಶಸ್ತಿ ವಿಜೇತ ಮರಾಠಿ ಸಿನಿಮಾ “ಮಾಯಿ ಘಾಟ್ : ಕ್ರೈಂ ನಂ 103/2005” ನ ಆರಂಭದ ದೃಶ್ಯ. ಹೆಸರು ಕೇಳಿದವರು ಇದೊಂದು ಆಕ್ಷನ್, ಥ್ರಿಲ್ಲರ್, ಸಿನಿಮಾ ಇರಬಹುದೇನೋ ಎಂಬ ನಿರ್ಧಾರಕ್ಕೆ ಬಂದುಬಿಡುತ್ತಾರೆ, ಖಂಡಿತಾ ಅಲ್ಲ. ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಮಗನ ಸಾವಿನ ನ್ಯಾಯಕ್ಕಾಗಿ ಸತತ ಹದಿಮೂರು ವರ್ಷ ಕಾನೂನು ಹೋರಾಟ ಮಾಡಿದ ತಾಯಿಯೊಬ್ಬಳ ಕಥೆ ಇದು. 2005 ರಲ್ಲಿ ಕೇರಳದಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದ ಸಿನಿಮಾ. ನಿರ್ದೇಶಕರು ಅನಂತ್ ನಾರಾಯಣ ಮಹಾದೇವನ್. ಪೋಲೀಸರ ವಶದಲ್ಲಿದ್ದ ಹುಡುಗನೊಬ್ಬನ ಸಾವಿನ ಹಿನ್ನಲೆಯ ನೈಜ ಘಟನೆನಾವಳಿಗಳನ್ನು ಇಟ್ಟುಕೊಂಡು ಅನಂತ್ ಮಹಾದೇವನ್. ‘ಮಾಯಿ ಘಾಟ್…….’ ಹೆಸರಿನಲ್ಲಿ ಸಿನಿಮಾ ಆಗಿಸಿದ್ದಾರೆ. 2019 ರ ಈ ಸಿನಿಮಾ ಕಳೆದ ನವೆಂಬರ್ ನಲ್ಲಿ ಗೋವಾದ ಪಣಜಿಯಲ್ಲಿ ನಡೆದ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದ ಸ್ಪರ್ಧಾ ವಿಭಾಗದಲ್ಲಿ ಪ್ರದರ್ಶನಗೊಂಡಿತ್ತು.
ಮಗನನ್ನು ಕಳೆದುಕೊಂಡ ತಾಯಿಯ ಪಾತ್ರ ನಿರ್ವಹಿಸಿದ್ದ ಉಷಾ ಜಾಧವ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ತಂದುಕೊಟ್ಟ ಸಿನಿಮಾ ಇದು. ಮಗನನ್ನು ಕೊಂದ ಪೊಲೀಸ್ ವ್ಯವಸ್ಥೆಯ ವಿರುದ್ಧ ತಾಯಿಯೊಬ್ಬಳು ಸತತವಾಗಿ ಹದಿಮೂರು ವರ್ಷಗಳ ಕಾಲ ನಡೆಸುವ ಹೋರಾಟದ ಹಾದಿಯಲ್ಲಿ ಅನುಭವಿಸುವ ಸಂಕಟ, ತಳಮಳಗಳನ್ನು ಕಟ್ಟಿಕೊಡುತ್ತ ನೋಡುಗರಲ್ಲಿ ಗಾಢವಾದ ವಿಷಾದ ಭಾವಗಳನ್ನು ಹುಟ್ಟಿಸುತ್ತದೆ. ದೇಶದ ನ್ಯಾಯಾಂಗ ವ್ಯವಸ್ಥೆಯ ಇತಿಹಾಸದಲ್ಲೇ ಮೊದಲಬಾರಿಗೆ ಕೇರಳದ ಇಬ್ಬರು ತಪ್ಪಿತಸ್ಥ ಪೊಲೀಸರಿಗೆ (ಅವರಲ್ಲೊಬ್ಬ ಅಧಿಕಾರಿ ) ಮರಣದಂಡನೆ ಶಿಕ್ಷೆ ನೀಡಿದ ಪ್ರಕರಣವಿದು, ಈ ಪ್ರಕರಣದ ತನಿಖೆಯನ್ನು ಸಿ.ಬಿ.ಐ. ಗೆ ವಹಿಸಲಾಗಿತ್ತು, ಸಿ.ಬಿ. ಐ. ವಿಶೇಷ ನ್ಯಾಯಾಲಯ ವಿಚಾರಣೆ ನಡೆಸಿ ನೀಡಿದ ಮರಣದಂಡನೆಯ ತೀರ್ಪನ್ನು ಕೇರಳ ಹೈಕೋರ್ಟ್ ಎತ್ತಿ ಹಿಡಿದ ಘಟನೆ ಈಗ ಇತಿಹಾಸ.
ಕೇರಳದಲ್ಲಿ ನಡೆದ ನೈಜ ಘಟನೆ, ಮತ್ತು ಐತಿಹಾಸಿಕ ತೀರ್ಪನ್ನು ಆಧರಿಸಿ ಅದನ್ನು ಮರಾಠಿ ಭಾಷೆ ಮತ್ತು ಮಹಾರಾಷ್ಟ್ರದ ಭೌಗೋಳಿಕ ಪರಿಸರಕ್ಕೆ ಒಗ್ಗಿಸಿಕೊಂಡು ಒಂದು ಅತ್ಯುತ್ತಮ ಚಿತ್ರವನ್ನಾಗಿಸಿದ್ದಾರೆ ಅನಂತ್ ಮಹಾದೇವನ್. ನ್ಯಾಯಕ್ಕಾಗಿ ಹೋರಾಟ ನಡೆಸುವ ಅಸಹಾಯಕರಲ್ಲಿ ಆಶಾಭಾವನೆ ಹುಟ್ಟಿಸುವಂತಿದೆ ಈ ಚಿತ್ರ.
ನೈಜ ಘಟನೆಯಲ್ಲಿ ಪೊಲೀಸ್ ವ್ಯವಸ್ಥೆ ವಿರುದ್ಧ ಹೋರಾಡುವ ತಾಯಿಯ ಹೆಸರು ‘ಪ್ರಭಾವತಿ ಅಮ್ಮ’, ಅವರ ಮಗ ‘ ‘ಉದಯಕುಮಾರ’. ಸಿನಿಮಾದಲ್ಲಿ ಆಕೆ ‘ಪ್ರಭಾ ಮಾಯಿ ‘ ಮಗ ‘ ನಿತಿನ್’ ಆಗಿದ್ದಾರೆ. ಮಾಯಿಯ ಮಗ ನಿತಿನ್, ತಾಯಿ ಕಷ್ಟಪಟ್ಟು ಗಳಿಸಿ, ಉಳಿಸಿದ ಹಣ (ರೂ. 4200) ಪಡೆದು ಖರೀದಿಗಾಗಿ ಗೆಳೆಯನ ಜೊತೆ ಪೇಟೆಗೆ ಬರುತ್ತಾನೆ. ಪೇಟೆಯಲ್ಲಿ ಆಕಸ್ಮಿಕವಾಗಿ ಎದುರಾಗುವ ಪೊಲೀಸ್ ಪೇದೆ, ನಿತಿನ್ ಬಳಿ ಅಷ್ಟೊಂದು ಹಣ ಇರುವುದನ್ನು ಗಮನಿಸಿ, ಅದು ಕದ್ದ ಹಣ ಇರಬಹುದೆಂದು ಅನುಮಾನಪಟ್ಟು, ಠಾಣೆಗೆ ಕರೆತರುತ್ತಾನೆ. ವಿಚಾರಣೆ ಸಮಯದಲ್ಲಿ ಗಾಯಕ್ವಾಡ್ ಮತ್ತು ಸಾಬೆಲ್ ಎಂಬ ಪೊಲೀಸ್ ಅಧಿಕಾರಿಗಳ ಚಿತ್ರಹಿಂಸೆಗೆ ಬಲಿಯಾಗಿ ಸಾವನ್ನಪ್ಪುತ್ತಾನೆ ಮಾಯಿಯ ಮಗ ನಿತಿನ್. ಗೆಳೆಯನ ಸಾವನ್ನು ಕಣ್ಣಾರೆ ಕಂಡ ಗೆಳೆಯ ಸುರೇಶನನ್ನ ಹೆದರಿಸಿ ಊರು ಬಿಡುವಂತೆ ಮಾಡುತ್ತಾರೆ.
ಇಲ್ಲಿಂದ ಪ್ರಾರಂಭವಾಗುತ್ತೆ ಮಾಯಿಯ ಹೋರಾಟ. ಮಗನ ಸಾವಿನ ನಿಗೂಢ ಕಾರಣಗಳನ್ನು ಹುಡುಕುತ್ತಾ ಹೋರಾಡುವ ಮಾಯಿಗೆ ಹೆಜ್ಜೆ ಹೆಜ್ಜೆಗೂ ಎದುರಾಗುವುದು ನಕಾರಾತ್ಮಕ ಸಂಗತಿಗಳು, ಒತ್ತಡಗಳು. ಬಡತನ, ಅನಕ್ಷರತೆ, ಮತ್ತು ಅಸಹಾಯಕತೆಗಳ ಸಂಕೇತದಂತೆ ಕಾಣುವ ಮಾಯಿ ಖಿನ್ನತೆಯಿಂದ ಕುಗ್ಗಿಹೋಗುತ್ತಾಳೆ. ಮರುಕ್ಷಣವೇ ನ್ಯಾಯ ಪಡೆಯಲೇ ಬೇಕೆಂಬ ಛಲ ಬೆಳೆಯುತ್ತಾ ಹೋಗುತ್ತದೆ. ಮಾಯಿಯ ಈ ಹೋರಾಟದಲ್ಲಿ ವಕೀಲೆಯೊಬ್ಬರು ಜೊತೆಯಾಗಿ ಕಾನೂನು ಸಲಹೆ ನೀಡುತ್ತಾ ನೆರವಿಗೆ ಬರುತ್ತಾರೆ. ಅವರ ಮಾರ್ಗದರ್ಶನದಲ್ಲಿ ಹದಿಮೂರು ವರ್ಷಗಳು ನ್ಯಾಯಕ್ಕಾಗಿ ಹೊರಡುತ್ತಾಳೆ. ಕೊನೆಯಲ್ಲಿ ಮಗನ ಕೊಲೆಯನ್ನು ಕಂಡಿದ್ದ ಗೆಳೆಯ ಸುರೇಶ ಕೋರ್ಟಿಗೆ ಬಂದು ಸಾಕ್ಷಿ ಹೇಳುತ್ತಾನೆ. ನಿತಿನ್ ಸಾವಿಗೆ ಈ ಇಬ್ಬರು ಪೊಲೀಸರು ಕಾರಣ ಎನ್ನುವುದು ಸಾಬೀತಾಗಿ ಸಿ.ಬಿ. ಐ. ನ್ಯಾಯಾಲಯ ನೀಡಿದ ತೀರ್ಪನ್ನು ಹೈಕೋರ್ಟ್ ಎತ್ತಿಹಿಡಿಯುತ್ತದೆ.
ಮಗನ ಸಾವಿಗೆ ಕಾರಣರಾದವರಿಗೆ ಕೊನೆಗೂ ಶಿಕ್ಷೆಯಾಯಿತು ಎಂದು ನಿಟ್ಟುಸಿರುಬಿಡುತ್ತಾಳೆ ಮಾಯಿ. ಈ ನೆಮ್ಮದಿ, ನಿಟ್ಟುಸಿರಿಗಾಗಿ, ನಿರಾಳತೆಗಾಗಿ ಹದಿಮೂರು ವರ್ಷ ತಾಳ್ಮೆಯಿಂದ ಹೋರಾಡಬೇಕಾಯಿತು. ನಮ್ಮ ನ್ಯಾಯ ವ್ಯವಸ್ಥೆಯಲ್ಲಿನ ವಿಳಂಬ ಮತ್ತು ಅದಕ್ಕೆ ಅಡ್ಡಿಯಾದ ಹಲವು ಸಂಗತಿಗಳನ್ನು ಮತ್ತು ಅಮಾಯಕ ಬಡವರು ವ್ಯವಸ್ಥೆಗೆ ಬಲಿಯಾಗುವ ದುರಂತವನ್ನು ‘ಮಾಯಿ ಘಾಟ್’ ಸೂಕ್ಷ್ಮವಾಗಿ ನಿರೂಪಿಸುತ್ತದೆ.
ಪ್ರಭಾ ಮಾಯಿಯ ಪಾತ್ರದಲ್ಲಿ ಉಷಾ ಜಾಧವ್ ಅಭಿನಯ ಹೇಗಿದೆ ಎನ್ನುವುದನ್ನು ತೆರೆಯ ಮೇಲೆಯೆ ನೋಡಬೇಕು. ಮಗನನ್ನು ಕಳೆದುಕೊಂಡ ತಾಯಿಯೊಬ್ಬಳ ಸಂಕಟ, ತಳಮಳ, ಭಾವೋದ್ವೇಗ, ಇವುಗಳನ್ನು ಮುಖದ ಸ್ನಾಯುಗಳ, ಕುತ್ತಿಗೆಯ ನರಗಳ ಬಿಗಿತದಿಂದಲೇ ಅಭಿವ್ಯಕ್ತಿಗೊಳಿಸುವ ಪರಿ ವಿಶಿಷ್ಟವಾದದ್ದು. ಎಂಥ ಭಾವತೀವ್ರತೆಯ ಸಮಯದಲ್ಲೂ ಕಣ್ಣಲ್ಲಿ ಹನಿ ನೀರು ಕಾಣುವುದಿಲ್ಲ. ಎಲ್ಲ ಭಾವಗಳನ್ನು ಆವಾಹಿಸಿ ಕೊಂಡವರಂತೆ ಮುಖದಲ್ಲೇ ಸಂಕಟದ ಭಾವಗಳನ್ನು ಹೊರಹಾಕುತ್ತಾರೆ. ನೋಡುಗರ ನೆನಪಿನಲ್ಲಿ ಅಚ್ಚಳಿಯದೆ ಉಳಿಯುವುದು ಉಷಾ ಜಾಧವ್ ಅವರ ನಟನೆ. ಇನ್ನು ವಕೀಲೆಯಾಗಿ ಹಿರಿಯ ನಟಿ ಸುಹಾಸಿನಿ ಮೂಲ್ಯ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಪೊಲೀಸರಾಗಿ ಗಿರೀಶ್ ಓಕ್ ಮತ್ತು ಕಮಲೇಶ್ ಸಾವಂತ್ ಅವರ ಅಭಿನಯ ಗಮನ ಸೆಳೆಯುತ್ತದೆ.
ನೈಜ ಘಟನೆ, ಐತಿಹಾಸಿಕ ತೀರ್ಪನ್ನು ಒಂದೇ ಎಳೆಯಲ್ಲಿ ಕಟ್ಟಿಕೊಟ್ಟಿರುವ ನಿರ್ದೇಶಕರ ಪರಿಶ್ರಮ ಪ್ರತಿ ಫ್ರೇಮಿನಲ್ಲು ಎದ್ದುಕಾಣುತ್ತದೆ. ಬಿಗಿಯಾದ ಚಿತ್ರಕಥೆ, ಎಲ್ಲೂ ಅತಿರೇಕ ಎನಿಸದ ಸಂಭಾಷಣೆ, ಛಾಯಾಗ್ರಹಣ, ಸಂಗೀತ, ಎಲ್ಲವೂ ಸಿನಿಮಾ ಗೆಲ್ಲಲು ಪೂರಕವಾಗಿವೆ.
ಅನಂತ್ ಮಹಾದೇವನ್ ಮೂಲತಃ ಕೇರಳದವರು, ನಟ, ನಿರ್ದೇಶಕ, ಸಂಭಾಷಣಕಾರರಾಗಿ ಗುರುತಿಸಿಕೊಂಡಿದ್ದು ಮರಾಠಿ ಮತ್ತು ಹಿಂದಿ ಚಿತ್ರರಂಗದಲ್ಲಿ. 2010 ರಲ್ಲಿ ಅವರ ನಿರ್ದೇಶನದ ‘ಮೀ ಸಿಂಧು ತಾಯಿ ಸಕ್ಪಾಲ್ ‘ ಸಿನಿಮಾಗಾಗಿ ರಾಷ್ಟ್ರಪ್ರಶಸ್ತಿ ಪಡೆದುಕೊಂಡಿದ್ದಾರೆ. ನಟರಾಗಿಯು ಗಮನ ಸೆಳೆದಿದ್ದಾರೆ. ಹಿಂದಿ, ತಮಿಳು, ಮರಾಠಿ ಸಿನಿಮಾಗಳಲ್ಲದೆ ಈಗ ಪಿ. ಶೇಷಾದ್ರಿ ಅವರ ನಿರ್ದೇಶನದ ‘ಮೋಹನದಾಸ ‘ ಚಿತ್ರದಲ್ಲಿ ‘ಕರಮಚಂದ್ ಗಾಂಧಿ’ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ.
-ಮಂಜುಳಾ ಪ್ರೇಮ್‍ಕುಮಾರ್
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.
Thanks
ಅಚ್ಚುಕಟ್ಟಾದ ವಿಶ್ಲೇಷಣೆ, ನಿರ್ದೇಶನ, ಕಥಾವಸ್ತುವಿನ ಆಯ್ಕೆಯ ಮೇಲೆ ಚಲನಚಿತ್ರದ ಗುಣಮಟ್ಟ ಹೊರಹಮ್ಮುತ್ತದೆ..