ಸಿನಿಮಾತು / ಮಹಿಳಾ ಸಂವೇದನೆಯ ಚಿತ್ರಗಳು – ರಮೇಶ್ ಶಿವಮೊಗ್ಗ
ಜಗತ್ತಿನ ಎಲ್ಲ ದೇಶಗಳ ಸಿನಿಮಾ ರಂಗದಲ್ಲಿ ಸೂಕ್ಷ್ಮ ಮಹಿಳಾ ಸಂವೇದನೆಯ ಚಿತ್ರಗಳು ಈಗ ಪ್ರಜ್ಞಾಪೂರ್ವಕವಾಗಿ ತಯಾರಾಗುತ್ತಿವೆ. ಸ್ತ್ರೀವಾದದ ತಾತ್ವಿಕತೆಯನ್ನು ಅತ್ಯಂತ ಕಲಾತ್ಮಕವಾಗಿ ಮುಂದಿಡುವ ಅನೇಕ ಚಿತ್ರಗಳು ಸತ್ವ ಮತ್ತು ಸಾರ್ಥಕತೆ ಎರಡೂ ದೃಷ್ಟಿಯಿಂದ ಗಮನಾರ್ಹವಾಗಿವೆ. ದೇಶಕಾಲಗಳ ವೈವಿಧ್ಯವಿದ್ದರೂ ಅವುಗಳ ಅಂತರಾಳದಲ್ಲಿ ಇರುವುದು ಸಮಾನತೆಯನ್ನು ಕುರಿತ ತುಡಿತ. ಎಲ್ಲ ಸಿನಿಮೋತ್ಸವಗಳಲ್ಲಿ ಅವುಗಳ ಸಂಖ್ಯೆ ಮತ್ತು ಆಕರ್ಷಣೆಯನ್ನು ಸುಲಭವಾಗಿ ಗುರುತಿಸಬಹುದು. ಈ ವರ್ಷದ ಆರಂಭದಲ್ಲಿ ನಡೆದ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲೂ ಅವು ಎದ್ದು ಕಾಣುತ್ತಿದ್ದವು. ಅವುಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ.
೧೨ನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಸುಮಾರು ಎರಡು ನೂರು ಚಿತ್ರಗಳ ಪ್ರದರ್ಶನ ಆಯೋಜಿಸಲಾಗಿತ್ತು. ಅಲ್ಲಿ ನನಗೆ ನೋಡಲು ದಕ್ಕಿದ್ದು ಇಪ್ಪತ್ತೆಂಟು ಚಿತ್ರಗಳು. ನೋಡಿದ ಚಿತ್ರಗಳ ಮನನ ಮಾಡಿದಾಗ ತಿಳಿದಿದ್ದು, ಬಹುತೇಕ ಸಿನಿಮಾಗಳಲ್ಲಿ ಇದ್ದ ಮಹಿಳಾ ಸಂವೇದನೆಯ ಎಳೆ.
ಪ್ರಪಂಚದ ಯಾವುದೇ ಭಾಗದ ಮಹಿಳೆಯರು ಶೋಷಣೆ, ಕ್ರೌರ್ಯ, ಅವಮಾನ, ಅಸಮಾನತೆ, ತಿರಸ್ಕಾರ ಇತ್ಯಾದಿಗಳಿಗೆ ಪಕ್ಕಾಗುವುದು ತಿಳಿದ ವಿಷಯ. ಅದರಲ್ಲೂ ಮತ, ಧರ್ಮ, ಸಂಪ್ರದಾಯ, ಆಚರಣೆಗಳ ಕಬಂಧಬಾಹುವಿನಲ್ಲಿ ಬಂದಿಯಾಗಿ ಬಸವಳಿಯುವುದು ಮಹಿಳಾ ಸಂಕುಲಕ್ಕೆ ಅಂಟಿದ ಶಾಪ. ಪುರುಷ ಸಮುದಾಯ ಇವುಗಳಿಂದ ಹೆಚ್ಚು ಅಪಾಯವಾಗದಂತೆ ಜಾರಿಕೊಳುವ ಉಪಾಯ ಕಂಡುಕೊಂಡಿದೆ. ಹಾಗೆಯೇ ಮಹಿಳೆಯರಿಗೆ ಎದುರಾಗುವ ಸಮಸ್ಯೆಗಳು, ತಲ್ಲಣ- ತವಕ, ಅವರ ಆಸೆ -ಆಕಾಂಕ್ಷೆ , ಸಂಸಾರದ ನೊಗವನ್ನು ಹೊತ್ತು ಯಶಸ್ವಿಯಾಗಿ ಸಂಭಾಳಿಸುವ ಜವಾಬ್ದಾರಿ, ಸ್ವಲ್ಪ ಎಡವಟ್ಟಾದರೆ ಅದಕ್ಕೆ ಅವಳೇ ಕಾರಣ ಎಂದು ದೋಷ ಹೊರಸುವ ಧಡೀರ್ ನಿರ್ಣಯ, ಒಳ್ಳೆಯ ಕೆಲಸಕ್ಕೆ ಮತ್ತು ದಕ್ಷತೆಗೆ ಯಾವುದೇ ಮನ್ನಣೆ ನಿರಾಕರಿಸಿವ ಸಮಾಜ, ಇತ್ಯಾದಿಗಳು ನಾನು ನೋಡಿದ ಚಿತ್ರಗಳಲ್ಲಿ ಬಿಂಬಿತವಾಗಿದೆ. ಇವಕ್ಕೆ ಯಾವುದೇ ಸಂಸ್ಕ್ರತಿ ಮೂಲ, ಖಂಡ, ದೇಶ,ಪ್ರದೇಶ, ಭಾಷೆ ಹೊರತಾಗಿಲ್ಲ. ಇದು ಜಗತ್ ವ್ಯಾಪಿ. ಈ ಸಂಗತಿಗಳನ್ನು ಹಿಡಿದಿಟ್ಟಿರುವ, ನಾನು ನೋಡಿದ ಕೆಲವು ಸಿನಿಮಾಗಳ ಸ್ಥೂಲ ಪರಿಚಯ ಮಾಡಿಕೊಡುವ ಪ್ರಯತ್ನ ಮಾಡಿದ್ದೇನೆ.
1. ಅವರ್ ಮದರ್ಸ್
ಗ್ವಾಟೆಮಾಲಾ ದೇಶದ ಸ್ಪಾನಿಷ್ ಭಾಷೆಯ ಚಿತ್ರಕಳೆದ ಶತಮಾನದ ಎಂಬತ್ತರ ದಶಕದಲ್ಲಿ ಗ್ವಾಟೆಮಾಲಾ ದೇಶದ ಆಂತರಿಕ ಕದನದಲ್ಲಿ ಸಹಸ್ರಾರು ನಾಗರೀಕರು ಮತ್ತು ಗೆರಿಲ್ಲಾ ಹೋರಾಟಗಾರರನ್ನು ಸೈನಿಕರು ಕೊಂದು ಸಾಮೂಹಿಕ ಗೋರಿಗಳಲ್ಲಿ ಮುಚ್ಚಿರುತ್ತಾರೆ. ೨೦೧೮ರಲ್ಲಿ ಇಂತಹ ಗೋರಿಗಳನ್ನು ಅಗೆದು ವಿಧಿ ವಿಜ್ಞಾನ ಮೂಲಕ ಅಸ್ತಿಯನ್ನುಗುರುತಿಸಿ,ವಿಚಾರಣೆಯ ನಂತರ ವಾರಸುದಾರರಿಗೆ ಹಸ್ತಾಂತರ ಮಾಡುವ ಸಂಸ್ಥೆಯಲ್ಲಿಅರ್ನೆಸ್ಟೊ ಎಂಬ ತರುಣ ಕೆಲಸಮಾಡುತ್ತಿರುತ್ತಾನೆ. ಗೆರಿಲ್ಲಾ ಯೋಧನಾಗಿ ಹತ್ಯೆಯಾದ ತನ್ನ ತಂದೆಯ ಅಸ್ಥಿಯನ್ನು ಹುಡುಕಿ ಗುರುತಿಸುವ ಕೆಲಸವನ್ನು ಅರ್ನೆಸ್ಟೊಮಾಡುತಿರುತ್ತಾನೆ . ಇಂತಹ ವಿಚಾರಣೆಯ ಸಂದರ್ಭದಲ್ಲಿ ಗಂಡ, ಮಕ್ಕಳನ್ನು ಕಳೆದುಕೊಂಡ ವಯಸ್ಸಾದ ತಾಯಂದಿರು, ನಾಲ್ಕು ದಶಕದ ಹಿಂದೆ ಅನುಭವಿಸಿದ ದೌರ್ಜನ್ಯ, ಅತ್ಯಾಚಾರ, ಕ್ರೌರ್ಯಗಳ ವಿವರಗಳನ್ನು ನೀಡುವ ಸನ್ನಿವೇಶ ಮನಕಲುಕುತ್ತವೆ. ಇಂತಹ ತಾಯಂದಿರ ಕತೆ ಈ ಸಿನಿಮಾ. ಕೊನೆಗೆ ಅರ್ನೆಸ್ಟೊಗೆ ತನ್ನ ಹುಟ್ಟಿನ ಹಿಂದಿನ ಕ್ರೌರ್ಯದ ಸತ್ಯ ಮತ್ತು ಅವನ ತಾಯಿ ಅನುಭವಿಸಿದ ಘೋರ ಸನ್ನಿವೇಶದ ಅರಿವಾಗುತ್ತದೆ. ನಿರ್ದೇಶಕ ಸೀಸರ್ ಡಯಾಸ್ ಇಂತಹ ತಾಯಂದಿರ ನೋವಿನ ಕಥನವನ್ನು ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ.
2. ಟು ಲವ್ ಟು ಸಿಂಗ್
ಇದು ಜಾನಿ ಮಾ ನಿರ್ದೇಶನದ ಮ್ಯಾಂಡರಿನ್ ಭಾಷೆಯ ಚೀನಾ ದೇಶದ ಸಿನಿಮಾ. ಅವಸಾನದ ಅಂಚಿನಲ್ಲಿರುವ ಒಪೇರಾ ಮಾದರಿಯ ಸಾಂಪ್ರದಾಯಿಕ ನೃತ್ಯ ನಾಟಕತಂಡದ ಯಜಮಾನಿ/ ಮ್ಯಾನೇಜರ್ ‘ಜಾವೋ ಲಿ’ ಎಂಬ ಮಧ್ಯ ವಯಸ್ಸಿನ ಮಹಿಳೆ. ಸಣ್ಣ ಪಟ್ಟಣದ ಹೊರವಲಯದ ಒಂದು ಪರಿತ್ಯಕ್ತ ಗೋದಾಮು ಈ ತಂಡ ಅಭಿನಯಿಸುವ ರಂಗಭೂಮಿ ಹಾಗೂ ಊಟ ವಸತಿಯ ತಾಣ. ನಗರೀಕರಣದ ಕಾರಣರಂಗಸ್ಥಳವನ್ನು ಕೆಡವಲು ನೋಟಿಸ್ ಬಂದ ಕಾರಣ, ಜಾವೋ ಲಿ ರಂಗಭೂಮಿಯನ್ನು ಉಳಿಸಲು ಮಾಡುವ ಹತಾಶ ಯತ್ನದ ದುರಂತ ಚಿತ್ರಣ ಈ ಸಿನಿಮಾದಲ್ಲಿ ಮೂಡಿ ಬಂದಿದೆ. ತಂಡದಲ್ಲಿ ಹೆಚ್ಚಿನವರು ವಯಸ್ಸಾದವರು. ಅವರಲ್ಲಿ ಆತಂಕದ ಛಾಯೆ ಮೂಡಿದೆ. ತಂಡದ ಇಬ್ಬರು ಯುವತಿಯರಿಗೆ ನಗರದ ಬೇರೆ ಕಲಾ ಪ್ರಾಕಾರದಲ್ಲಿ ಬೆಳಯಬೇಕೆಂಬ ಹಂಬಲ. ಈ ಮಧ್ಯೆ ಲೀ ಗೆ ತನ್ನ ಕುಟುಂಬವನ್ನು ರಕ್ಷಿಸಿಕೊಳ್ಳುವ ಜರೂರು ಇದೆ. ಈ ಎಲ್ಲ ತಾಕಲಾಟವನ್ನು ನಿರ್ವಹಿಸುವ ಮುಖ್ಯ ಪಾತ್ರದಲ್ಲಿ ನಟಿ ಜ಼ಾ ಓಲಿ ಮಹತ್ತರ ಅಭಿನಯ ನೀಡಿದ್ದಾರೆ.
3. ಬಲೂನ್
ಇದು ಟಿಬೆಟ್ ಭಾಷೆಯ ಚಿತ್ರ. ಪೇಮ ಸೆಡೇನ್ ಇದರ ನಿರ್ದೇಶಕರು. ಹಳ್ಳಿಯಲ್ಲಿ ಕುರಿ ಸಾಕಣೆ ಮತ್ತು ಸಣ್ಣ ವ್ಯವಸಾಯದಲ್ಲಿ ನಿರತರಾದ ದಾರ್ಗ್ಯೆ ಮತ್ತು ಡ್ರೊಲ್ಕರ್ ದಂಪತಿಗೆ ಮೂರು ಗಂಡು ಮಕ್ಕಳು. ಜೊತೆಯಲ್ಲಿವಯಸ್ಸಾದ ತಂದೆ. ಮನೆಯಲ್ಲಿ ಚಿಕ್ಕ ಮಕ್ಕಳಕೈಯಲ್ಲಿ ಸಿಕ್ಕ ಎರಡು ಕಾಡೆಂಮ್ ಬಲೂನಿನ ರೂಪ ಪಡೆದು, ಹಳ್ಳಿಯಲ್ಲಿ ದಂಪತಿಗಳಿಗೆ ಮುಜುಗರ ಉಂಟಾಗುತ್ತದೆ. ಈ ಮಧ್ಯೆ ತಂದೆಯ ಹಠಾತ್ ಮರಣ ಮತ್ತು ಲೆಕ್ಕ ತಪ್ಪಿ ಹೆಂಡತಿ ಗರ್ಭಿಣಿ ಆಗುವುದು ದಾರ್ಗ್ಯೆಗೆ ಆತಂತದ ವಿಷಯ. ಚೀನಾ ದೇಶದಲ್ಲಿ ಹೆಚ್ಚು ಮಕ್ಕಾಳಾದರೆ ದಂಡ ಮತ್ತು ಸೌಲಭ್ಯಗಳಿಂದ ವಂಚಿತರಾಗುವ ಸಂಭವ ಇರುವುದರಿಂದ ಡ್ರೋಲ್ಕರ್ ಗರ್ಭಪಾತಕ್ಕೆ ಅಣಿ ಆಗುತ್ತಾಳೆ. ಆದರೆ ಮೃತ ತಂದೆ ನಿನ್ನ ಮಗನಾಗಿ ಮತ್ತೆ ಬರಲಿದ್ದಾನೆ ಎನ್ನುವ ಧರ್ಮ ಗುರುವಿನ ಮಾತಿನಲ್ಲಿ ದಾರ್ಗ್ಯೆಗೆ ಬಲವಾದ ನಂಬಿಕೆ ಮತ್ತು ಗರ್ಭಪಾತವಾದರೆ ಕೇಡು ಖಚಿತ ಎನ್ನುವ ಭಯ. ಇಂತಹ ಸನ್ನಿವೇಶದಲ್ಲಿ ಡ್ರೋಲ್ಕರ್ ಮುಂದಿರುವ ಆಯ್ಕೆ- ಸಂಸಾರ ನಿರ್ವಹಣೆಯ ಜವಾಬ್ದಾರಿಯ ಕಟು ವಾಸ್ತವ ಅಥವಾ ಧರ್ಮದ/ ಸಂಪ್ರದಾಯದ ರಿವಾಜು. ಇಂತಹ ಡೋಲಾಯಮಾನದ ಪರಿಸ್ಥಿತಿಯಲ್ಲಿ ಅವಳು ನಡೆದುಕೊಳ್ಳುವ ರೀತಿ ಈ ಚಿತ್ರದ ತಿರುಳು.
4. ಸಿಸ್ಟರ್
ಇದು ಬಲ್ಗೇರಿಯಾ ದೇಶದ ಚಿತ್ರ. ಮಹಿಳಾ ನಿರ್ದೇಶಕಿ ಸ್ವೆಟ್ಲಾ ಟಸೊಟ್ಸೊವಾರವರ ಎರಡನೆಯ ಚಿತ್ರ. ಇದು ತಾಯಿ ಮತ್ತು ಇಬ್ಬರು ಬೆಳೆದ ಹೆಣ್ಣು ಮಕ್ಕಳ ಕತೆಯ ಚಿತ್ರ. ಅವರದ್ದು ಸಣ್ಣ ಊರೊಂದರಲ್ಲಿ ಮಣ್ಣಿನ ಬೊಂಬೆ ಮತ್ತು ಆಟಿಕೆಗಳನ್ನು ತಯಾರಿಸಿ ಮಾರುವ ವೃತ್ತಿಯಲ್ಲಿ ನಿರತ ಕುಟುಂಬ. ಕಷ್ಟದ ಜೀವನ ನಿರ್ವಹಣೆ. ಹಿರಿಯ ಮಗಳು ಕಮಲೀಯ ಊರಿನ ಓರ್ವ ಮೆಕ್ಯಾನಿಕ್ ಜೊತೆಗೆ ಒಡನಾಟ ಇಟ್ಟುಕೊಂಡಿದ್ದಾಳೆ. . ಕಿರಿಯ ಮಗಳು ರಯ್ನಾ ಕನಸು ಕಾಣುವ, ಸುಳ್ಳುಗಳನ್ನು ಹೆಣೆದು ತನ್ನದೇ ಲೋಕದಲ್ಲಿ ವಿಹರಿಸುವ ಸಮಸ್ಯಾತ್ಮಕ ವ್ಯಕ್ತಿ. ರಯ್ನಾ ತನ್ನ ಅಕ್ಕನ ಪ್ರಿಯಕರನ ಬಗ್ಗೆ ಪೋಣಿಸಿ,ಹರಡಿದ ಒಂದು ಸುಳ್ಳು ಅತಿರೇಕಕ್ಕೆ ತಿರುಗಿ ಕುಟುಂಬದಲ್ಲಿ ಕೊಲಾಹಲಕ್ಕೆ ಕಾರಣವಾಗುತ್ತದೆ. ಇದರಲ್ಲಿ ಹೆಚ್ಚು ಆತಂಕ ಮತ್ತು ಕ್ಷೋಭೆಗೆ ಈಡಾಗುವವಳು ತಾಯಿ. ಈ ವಿಷಮ ಸನ್ನಿವೇಶವನ್ನು ಸುಧಾರಿಸಲು ತಾಯಿ ಶ್ರಮ ವಹಿಸಿ ಕೊನೆಗೆ ಪರಿಸ್ಥಿತಿ ತಿಳಿಗೊಳಿಸುವಲ್ಲಿ ಯಶಸ್ವಿಯಾಗುತ್ತಾಳೆ. ಆದರೆ ಈ ಘಟನೆಗಳ ನಡುವೆ ಸಹೋದರಿಯರಿಗೆ ತಮ್ಮ ಹುಟ್ಟಿನ ಗುಟ್ಟು ಮತ್ತು ತಾಯಿ ಅನುಭವಿಸಿದ ಧಾರುಣ ಸನ್ನಿವೇಶದ ಅರಿವಾಗುತ್ತದೆ. ವಿಭಿನ್ನ ಮನಸ್ಥಿತಿಯ ಮೂರು ಮಹಿಳೆಯರ ಪಾತ್ರಗಳನ್ನು ನಿರ್ದೇಶಕಿ ಸಮರ್ಥವಾಗಿ ಸಿನಿಮಾದಲ್ಲಿ ಮೂಡಿಸಿದ್ದಾರೆ.
5. ಎ ರೆಗ್ಯುಲರ್ ವುಮನ್
ಇದು ಒಂದು ನೈಜ ಘಟನೆಯ ಆಧಾರಿತ ಜರ್ಮನ್ ಭಾಷೆಯ ಚಿತ್ರ. ಹಟೂನ್ ಅಯನೂರ್ ಎಂಬ ಮಹಿಳೆಯನ್ನು ಅವಳ ತಮ್ಮನೇ ಮರ್ಯಾದೆ ಹತ್ಯೆ ಮಾಡುವ ಧಾರುಣ ಚಿತ್ರ.
ಅಯನೂರ್ ಟರ್ಕಿ- ಕುರ್ದಿಶ್ ಮೂಲದ ಸಾಂಪ್ರದಾಯಿಕ ಮುಸ್ಲಿಂ ಕುಟುಂಬದ ಹಿರಿಯ ಮಗಳು. ಜರ್ಮನಿ ದೇಶದಲ್ಲಿ ಆಶ್ರಯ ಪಡೆದಿರುವ ಈ ಕುಟುಂಬದಲ್ಲಿ ಒಂಬತ್ತು ಜನ ಮಕ್ಕಳು. ಸಣ್ಣ ಮನೆಯಲ್ಲಿ ಎಲ್ಲರ ವಾಸ. ಅಯನೂರ್ ತನ್ನ ತಂದೆ ಗೊತ್ತು ಪಡೆಸಿದ ಹತ್ತಿರದ ಸಂಬಂಧಿಯನ್ನು ಮದುವೆಯಾಗಿ ಟರ್ಕಿ ದೇಶಕ್ಕೆ ಹೊಗುತ್ತಾಳೆ. ಆದರೆ ಗಂಡನ ಹಿಂಸೆ, ಅನಾದಾರಕ್ಕೆ ಬೇಸತ್ತು ಬಸುರಿ ಅಯನೂರ್ ವಾಪಸ್ಸು ಜರ್ಮನಿಯ ತಂದೆಯ ಮನೆಗೆ ಬರುತ್ತಾಳೆ. ಇಲ್ಲಿಯೂ ಅವಳ ಬದುಕು ಅಸಹನೀಯವಾಗುತ್ತದೆ. ಗುಂಡು ಮಗುವಿಗೆ ಜನ್ಮ ಕೊಟ್ಟ ನಂತರ ವಾಪಸ್ಸು ಗಂಡನ ಮನೆಗೆ ಕಳುಹಿಸಿವ ಬಗ್ಗೆ ಮನೆಯವರು ಹೇರುವ ಒತ್ತಡಕ್ಕೆ ಅವಳು ಮಣಿಯುವುದಿಲ್ಲ. ಇದರಿಂದ ಮನೆಯಲ್ಲಿ ಅವಮಾನ, ಉಪೇಕ್ಷೆಗೆ ಗುರಿಯಾಗುತ್ತಾಳೆ. ಆಗ ಸ್ವತಂತ್ರ ಜೀವನ ನಡೆಸಲು ನಿರ್ಧರಿಸಿ ಮನೆ ಬಿಟ್ಟು ಬರುತ್ತಾಳೆ. ಸಣ್ಣ ಮಗು ಇಟ್ಟುಕೊಂಡು, ಅಲ್ಪ ಆದಾಯದ ಕೆಲಸ ಮಾಡುತ್ತಾ, ಬಿಟ್ಟು ಹೋದ ಓದನ್ನು ಮುಂದುವರೆಸುತ್ತಾಳೆ. ಸಾಂಪ್ರದಾಯಿಕ ಮುಸ್ಲಿಂ ರೀತಿ ರಿವಾಜುಗಳನ್ನು ಬಿಟ್ಟು ಹೊಸ ಜೀವನ ಶೈಲಿಯನ್ನು ಆರಿಸಿಕೊಳುತ್ತಾಳೆ. ಇದರಿಂದ ಅವಳ ಕುಟುಂಬದ ವಿರೋಧ ಎದುರಿಸಬೇಕಾದ ಸನ್ನಿವೇಶದಲ್ಲಿ ಅವಳು ಬಳಲುತ್ತಾಳೆ. ಬೆದರಿಕೆ, ಭಾವನಾತ್ಮಕ bಟಚಿಛಿಞ mಚಿiಟ ಗಳಿಗೂ ಒಪ್ಪದಿದ್ದಾಗ, ಅವಳ ಕಿರಿಯ ತಮ್ಮ ನೂರಿ ಅವಳನ್ನು ಮನೆಯ ಸಮೀಪದ ರಸ್ತೆಯಲ್ಲಿ ಗುಂಡಿಟ್ಟು ಹತ್ಯೆ ಮಾಡುತ್ತಾನೆ. ಒಬ್ಬ ದಿಟ್ಟ, ಅಸಾಮಾನ್ಯ ಹೆಣ್ಣು ಮಗಳ ಹತ್ಯೆ ಮರ್ಯಾದೆ, ಧರ್ಮ, ಸಂಪ್ರದಾಯದ ಹೆಸರಿನಲ್ಲಿ ನಡೆದು ಹೊಗುತ್ತದೆ. ಹತ್ಯೆಯ ನಂತರ ನೂರಿಯನ್ನು ತಾಯಿಸಮೇತವಾಗಿ ಆದರಿಸುವುದು ವಿಪರ್ಯಾಸ.
ಈ ಸಿನಿಮಾವನ್ನು ಅಯನೂರ್ ತನ್ನ ಕತೆಯನ್ನು ತಾನೇ ನಿರೂಪಿಸುತ್ತಾ , ತನ್ನ ದೃಷ್ಟಿಯಲ್ಲಿ ನಡೆದ ಘಟನೆಗಳನ್ನು ವಿವರಿಸುವ ತಂತ್ರವನ್ನು ಮಹಿಳಾ ನಿರ್ದೇಶಕಿ ಶೆರ್ರಿ ಹಾರ್ಮನ್ಈ ಚಿತ್ರದಲ್ಲಿ ಸಫಲವಾಗಿ ಅಳವಡಿಸಿದ್ದಾರೆ.
6. ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ
ಇದು ಗಿರೀಶ ಕಾಸರವಳ್ಳಿಯವರ ನಿರ್ದೇಶನದ ಕನ್ನಡ ಚಿತ್ರ. ಜಯಂತ ಕಾಯ್ಕಿಣಿಯವರ ಕತೆ ‘ಹಾಲಿನ ಮೀಸೆ ‘ ಆಧರಿಸಿದೆ.
ಕಾಸರವಳ್ಳಿಯವರು ತಮ್ಮ ಚಿತ್ರಗಳಲ್ಲಿ ಮಹಿಳಾ ಸಂವೇದನೆಯನ್ನು ಸಮರ್ಥವಾಗಿ ನಿರೂಪಿಸುವಲ್ಲಿ ಸಿದ್ದ ಹಸ್ತರು ಎನ್ನುವುದು ಜನಜನಿತ. ಇಲ್ಲಿರಲಾರೆಚಿತ್ರ
ಮೇಲ್ನೋಟಕ್ಕೆ ಬಾಲಕರಾದ ನಾಗ, ಪುಂಡಲೀಕರ ಕತೆಯಾಗಿ ತೋರಿದರೂ, ಇಲ್ಲಿನ ಮಹಿಳಾ ಪಾತ್ರಗಳು ಗಮನೀಯವಾಗಿವೆ. ಆಚಾರ್ಯರ ಹೆಂಡತಿ ಮತ್ತು ಸೊಸೆ ಹಳ್ಳಿಯ ಏಕತಾನದ ಬದುಕಿನಿಂದ ಬಿಡುಗಡೆ ಬಯಸುವ ಜೀವಿಗಳು. ಅದರಲ್ಲಿಯೂ ಗಂಡನಿದ್ದೂ ಇಲ್ಲದಂತಿರುವ, ಅಂಗ ವಿಕಲ ಸೊಸೆಯ ಬದುಕು ಅಸಹನೀಯ. ಧರ್ಮದ ಕಟ್ಟುಪಾಡು, ಸಂಪ್ರದಾಯಗಳನ್ನು ತುಳಿದು, ನದಿಯನ್ನು ದಾಟಿ ದಿಟ್ಟತನದಿಂದ ಹೊಸ ಬದುಕಿಗೆ ತೆರೆದುಕೊಳ್ಳುವ ಅವಳ ನಿರ್ಧಾರ ಶ್ಲಾಘನೀಯ. ಅವಳ ನಿರ್ಧಾರದ ಹಿಂದಿನ ತುಮುಲ, ತವಕ, ತಲ್ಲಣಗಳನ್ನು ಇನ್ನೂ ಪರಿಣಾಮಕಾರಿಯಾಗಿ ಬಿಂಬಿಸುವ ಅವಕಾಶ ಇದ್ದರೂ, ಕಾಸರವಳ್ಳಿಯವರು ಸಂಯಮದಿಂದ ಹೆಚ್ವು ಭಾವಾವೇಶಕ್ಕೆ ಆಸ್ಪದ ನೀಡದೆ, ವಸ್ತು ನಿಷ್ಠವಾಗಿ ನಿರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
7 ಆಲ್ ಎಬೌಟ್ ಮಿ
ಇದು ಕ್ಯಾರೋಲಿನ ಲಿಂಕ್ ಎಂಬ ಮಹಿಳಾ ನಿರ್ದೇಶಕಿಯ ಜರ್ಮನ್ ಭಾಷೆಯ ಚಿತ್ರ. ೧೯೭೦ರ ದಶಕದಲ್ಲಿ ಜರ್ಮನಿಯ ರುರ್ ಪ್ರಾಂತ್ಯದ ಒಂದು ಸಣ್ಣ ಊರಿನ ಬಾಲಕ ಹ್ಯಾನ್ಸ್ ಪೀಟರ್. ಲವಲವಿಕೆಯ, ಹಾಸ್ಯ ಪ್ರವೃತ್ತಿಯ, ಅಣಕು ಕಲೆಯಲ್ಲಿ ನಿಷ್ಣಾತನಾದ ಅವನು ತನ್ನ ಸುತ್ತಲಿನವರನ್ನು ರಂಜಿಸುತ್ತಾ ಇರುತ್ತಾನೆ. ಆದರೆ ಅವನ ತಾಯಿ ಅನಾರೋಗ್ಯದಿಂದ ಬಳಲುತ್ತಾ, ಖಿನ್ನತೆಯು ಒಳಗಾಗುತ್ತಾಳೆ. ತಂದೆ ಉದ್ಯೋಗದಲ್ಲಿ ಬಡಗಿ ಮತ್ತು ಸದಾ ತಿರುಗುವ ಕೆಲಸ. ಬಾಲಕ ಪೀಟರ್ ತಾಯಿಯ ಪರಿಸ್ಥಿತಿಯಿಂದ ಕಂಗೆಡುತ್ತಾನೆ. ತಾಯಿಯ ಶಸ್ತ್ರಚಿಕಿತ್ಸೆ ನಂತರದಲ್ಲಿ ತಂದೆ ಬಾಲಕನನ್ನು ಅಜ್ಜಿಯರ ಪಾಲನೆಗೆ ಒಪ್ಪಿಸುತ್ತಾನೆ. ಇಬ್ಬರು ಅಜ್ಜಿಯರು,ತಮ್ಮ ದೈಹಿಕ ತೊಂದರೆಗಳ ನಡುವೆಯೂ, ಪೀಟರನಿಗೆ ಯಾವ ಕೊರತೆಯನ್ನು ಮಾಡದೆ, ಪ್ರೀತಿ, ಮಮತೆ, ವಿಶ್ವಾಸ ,ವಾತ್ಸಲ್ಯದಿಂದ ಪೊರೆಯುತ್ತಾರೆ. ತನ್ನ ನೋವು, ತಂದೆ ತಾಯಿಯರ ಅಗಲಿಕೆಯನ್ನು ಮೀರಿ, ಬೆಳೆಯಲು ಅನುವಾಗುವ ಹಿರಿಯ ಮಹಿಳಾ ಜೀವಿಗಳ ಪ್ರೀತಿ ಪಾತ್ರನಾಗಿ ಪೀಟರ್ ಯಶಸ್ವಿಯಾಗುತ್ತಾನೆ. ಸುತ್ತಲಿನವರನ್ನೂ ನಗಿಸುತ್ತಾ ತಾನು ನಗುತ್ತಾ ಜನಪ್ರಿಯನಾದ ಪೀಟರನ ಹಿಂದೆ ಅವನ ಅಜ್ಜಿಯರ ನಿಸ್ವಾರ್ಥ,ಮಮತೆ, ಕಾರುಣ್ಯ, ವಾತ್ಸಲ್ಯ ಢಾಳಾಗಿ ಸಿನಿಮಾದಲ್ಲಿ ಮೂಡಿ ಬಂದಿದೆ. ಚಿತ್ರದಲ್ಲಿ ಹಾಸ್ಯ ಸನ್ನಿವೇಶಗಳು ನಗೆಯ ಹೊನಲು ಹರಿಸಿದರೂ, ವಿಷಾದದ ಛಾಯೆ ಅಲ್ಲಲ್ಲಿ ಇಣುಕುತ್ತದೆ. ಬಾಲಕ ಪೀಟರನ ಪಾತ್ರಧಾರಿಯ ನಟನಾ ಕೌಶಲ್ಯ ಅಸಾಮಾನ್ಯ.
8. ಮೇಡ್ ಇನ್ ಬಾಂಗ್ಲಾದೇಶ್
ಇದು ನಮ್ಮ ನೆರೆಯ ರಾಷ್ಟ್ರ ಬಾಂಗ್ಲಾದೇಶದ, ಬೆಂಗಾಲಿ ಭಾಷೆಯ ಚಿತ್ರ. ಇದನ್ನು ರುಬಯಾತ್ ಹುಸೇನ್ ಎಂಬ ಮಹಿಳೆ ನಿರ್ದೇಶನ ಮಾಡಿದ್ದಾರೆ.
ಈ ಚಿತ್ರದಲ್ಲಿ ನಮಗೆ ಪರಿಚಿತವಾಗಿರುವ ಗಾರ್ಮೆಂಟ್ ಕೈಗಾರಿಕೆಯ ಮಹಿಳಾ ನೌಕರರು ಎದುರಿಸುವ ಸಮಸ್ಯೆಗಳ ಹೋರಾಟದ ಕತೆ ಇದೆ.
ಕಾರ್ಖಾನೆಗಳಲ್ಲಿ ಕಾರ್ಮಿಕರು ಮಹಿಳೆಯರು. ಮೇಲ್ವಿಚಾರಕರು, ವ್ಯವಸ್ಥಾಪಕರು, ಮಾಲೀಕರು ಪುರುಷರು. ಮಹಿಳಾ ಕಾರ್ಮಿಕರು ವ್ಯವಸ್ಥಿತವಾಗಿ ಮತ್ತು ಅವ್ಯಾಹತವಾಗಿ ದೈಹಿಕ, ಮಾನಸಿಕ ಹಾಗೂ ಆರ್ಥಿಕ ಶೋಷಣೆಗೆ ಒಳಗಾಗುತಿರುತ್ತಾರೆ. ಇದರ ವಿರುದ್ಧ ಹೊರಟ ಮಾಡಬೇಕು ಎನ್ನುವ ಧೋರಣೆ ಕಾರ್ಮಿಕರದ್ದು. ಇದಕ್ಕೆ ಮೊದಲು ಸಂಘಟನೆಯ ಸ್ಥಾಪನೆ ಮತ್ತು ಅದರ ನಾಯಕತ್ವದ ಪ್ರಶ್ನೆ ಎದುರಾದಾಗ ಹೊರಹೊಮ್ಮುವವಳು, ಶಿಮು ಎಂಬ ಇಪ್ಪತ್ತಮೂರು ವರುಷದ ವಿವಾಹಿತ ತರುಣಿ. ಆದರೆ ಇದು ಸುಲಭದ ಕೆಲಸ ಅಲ್ಲ. ಶಿಮು ಕುಟುಂಬದ, ವ್ಯವಸ್ಥೆಯ ಅಸಹಕಾರದ ವಿರುದ್ದ ಹೋರಾಡಿ, ಒಂದು ಸ್ವಯಂ ಸೇವಾ ಸಂಘದ ಸಹಾಯದಿಂದ ಅನೇಕ ಅಡೆತಡೆಗಳನ್ನು ಯಶಸ್ವಿಯಾಗಿ ದಾಟಿ ಕಾರ್ಖಾನೆಯಲ್ಲಿ ಕಾರ್ಮಿಕ ಸಂಘವನ್ನು ಸ್ಥಾಪಿಸಲು ಯಶಸ್ವಿಯಾಗುತ್ತಾಳೆ. ಶಿಮು ಪಾತ್ರದಲ್ಲಿ ರಿಕಿತಾ ಶಿಮು ಪ್ರಬುದ್ಧ ಅಭಿನಯನೀಡಿದ್ದಾರೆ.
9. ಎ ಟೇಲ್ ಆಫ್ ಥ್ರಿ ಸಿಸ್ಟರ್ಸ್
ಇದು ಟರ್ಕಿ ದೇಶದ ಚಿತ್ರ. ನಿರ್ದೇಶಕರು ಎಮಿನ್ ಅಲ್ಪರ್. ಇದು ರೆಹಾನ್, ಹವ್ವಾ ಮತ್ತು ಸೆವ್ಕೇತ್ ಎಂಬ ಮೂರು ಅಸಹಾಯಕ ಸಹೋದರಿಯರ ನೋವಿನ ಕತೆ.
ಉತ್ತರ ಟರ್ಕಿಯ ದುರ್ಗಮ ಪರ್ವತ ಪ್ರದೇಶ ಅನಾಟೋಲಿಯ. ಇಲ್ಲಿನ ‘ಬೆಸ್ಲೆಮೆ’ ವ್ಯವಸ್ಥೆಯಂತೆ ಬೆಳೆದ ಹೆಣ್ಣುಮಕ್ಕಳನ್ನು ನಗರದ ಶ್ರೀಮಂತ ಕುಟುಂಬದವರ ಸೇವೆಗೆ ನಿಯೋಜಿತರಾಗಿರುತ್ತಾರೆ. ಈ ವ್ಯವಸ್ಥೆಯಿಂದ ತಂದೆಗೆ ಆರ್ಥಿಕ ಸಹಾಯ ಸಿಗುತ್ತದೆ. ಹಿರಿಯ ಮಗಳು ರೆಹಾನ್ ಹೀಗೆ ನಗರಕ್ಕೆ ಹೋಗಿ ಅಲ್ಲಿ ಲೈಂಗಿಕ ಶೋಷಣೆಗೆ ಸಿಕ್ಕು ವಾಪಸ್ ತಂದೆಯ ಮನೆಗೆ ಬಂದು ಒಬ್ಬ ಹುಂಬ ಕುರಿಗಾಹಿಯನ್ನು ಮದುವೆ ಆಗಿ ಮಗುವಿನ ತಾಯಿಯೂ ಆಗಿದ್ದಾಳೆ. ಎರಡನೆಯವಳು ಹವ್ವಾ ದುಡುಕಿನ, ಸಿಡುಕಿನ, ಶೀಘ್ರ ಕೋಪದ ಹುಡುಗಿ. ಅವಳನ್ನು ಮನೆಯಲ್ಲಿ ನೌಕರಿಗೆ ಇಟ್ಟುಕೊಂಡಿದ್ದ ಕುಟುಂಬದ ಯಜಮಾನ, ಅವಳ ವರ್ತನೆ ಸರಿಯಿಲ್ಲವೆಂದು ವಾಪಸು ಕರೆತಂದು, ಬದಲಿಗೆ ಅವಳ ತಂಗಿಯನ್ನು ಕಳುಹಿಸಲು ತಂದೆಗೆ ಒತ್ತಡ ಹೇರುತ್ತಾನೆ. ಅಕ್ಕಂದಿರು ಅನುಭವಿಸಿದ ಬವಣೆ ಮತ್ತು ಕಷ್ಟಗಳ ಸ್ಪಷ್ಟ ಅರಿವು ಇದ್ದರೂ ಸಹ ಸೆವ್ಕೇತ್ ನಗರದ ಆಕರ್ಷಣೆಗೆ ಮನಸೋತು ಅಕ್ಕನ ಬದಲಿಗೆ ಹೋಗಲು ಉತ್ಸುಕಳಾಗಿದ್ದಾಳೆ. ಇಂತಹ ಸಂದರ್ಭದಲ್ಲಿ ಅನಿರೀಕ್ಷಿತ ಘಟನೆಗಳು ನಡೆದು ರಹಾನಳ ಮಗು ಅಗ್ನಿ ಅವಘಡದಲ್ಲಿ ಸಾವನ್ನು ಅಪ್ಪುತ್ತದೆ ಮತ್ತು ಅವಳ ಗಂಡ ಆತ್ಮಹತ್ಯೆ ಮಾಡಿಕೊಳುತ್ತಾನೆ. ಸೂಕ್ತ ವೈದ್ಯಕೀಯ ಸಹಾಯ ಇಲ್ಲದೆ ಹವ್ವಾ ಮರಣಿಸುತ್ತಾಳೆ. ತಮ್ಮದಲ್ಲದ ತಪ್ಪಿನಿಂದಾಗಿ ಹತಭಾಗ್ಯ ಹೆಣ್ಣುಮಕ್ಕಳು ಅನುಭವಿಸುವ ಧಾರುಣ ಕತೆಯನ್ನು ನಿರ್ದೇಶಕರು ತೆರೆಯ ಮೇಲೆ ತಂದಿದ್ದಾರೆ.
10. ಮೂವ್ ದಿ ಗ್ರೇವ್
ಕೋರಿಯ ದೇಶದ ಈ ಚಿತ್ರದ ನಿರ್ದೇಶಕರು ಜಿಯಾಂಗ್ ಸೆಂಗ್ ಓ ಎಂಬ ಮಹಿಳೆ. ಹೇ ಯೋಂಗ್ ಬೇಕ್ ಒಬ್ಬ ಮಧ್ಯ ವಯಸ್ಸಿನ ಒಂಟಿ ತಾಯಿ. ಆಕೆಯ ತಂದೆಯ ಸಮಾಧಿ ದೂರದ ಅವರ ಮೂಲ ಸ್ಥಳ, ಒಂದು ದ್ವೀಪದ ಹಳ್ಳಿಯಲ್ಲಿ ಇದೆ. ಸಮಾಧಿಯ ಸ್ಥಳದಲ್ಲಿ ದೊಡ್ಡ ನಿರ್ಮಾಣ ಯೋಜನೆಯ ಸಲುವಾಗಿ ಸಮಾಧಿಯನ್ನು ಸ್ಥಳಾಂತರ ಮಾಡಲು ನೋಟಿಸ್ ಬಂದನಂತರ, ಬೇಕ್ ತನ್ನ ಮಗ ಮತ್ತು ಮೂವರು ಸಹೋದರಿಯರೊಡನೆ ಈ ದ್ವೀಪಕ್ಕೆ ಪ್ರಯಾಣ ಮಾಡುತ್ತಾಳೆ. ಈ ಸಹೋದರಿಯರಿಗೆ ತಮ್ಮದೇ ಆದ ಸಮಸ್ಯೆಗಳಿವೆ. ಅವರಲ್ಲಿ ಸಾಮರಸ್ಯ ಇಲ್ಲದೆ ಪೂರ ಪ್ರಯಾಣ ಜಗಳ, ವೈಮನಸ್ಸು, ಮತ್ತು ಕೂಗಾಟದಲ್ಲಿ ನಡೆಯುತ್ತದೆ. ಹಳ್ಳಿ ತಲುಪಿದ ನಂತರ ಹೊಸ ಸಮಸ್ಯೆ ಎದುರಾಗುತ್ತದೆ. ಹಳ್ಳಿಯಲ್ಲಿರುವ ಅವರ ಚಿಕ್ಕಪ್ಪ ಸಂಪ್ರದಾಯವಾದಿ. ಮೃತನ ಒಬ್ಬನೇ ಮಗ ಬರುವವರೆಗೂ ಸಮಾಧಿಯ ಸ್ಥಳಾಂತರ ಮತ್ತು ಮರು ಸಂಸ್ಕಾರ ಸಾಧ್ಯವಿಲ್ಲವೆಂದು ಹಠ ಹಿಡಿದಾಗ, ಸಹೋದರನ ಪತ್ತೆಗೆ ತೊಡಗುತ್ತಾರೆ. ಆ ಉಡಾಳ ಸಹೋದರ ಹಣದ ಅವಶ್ಯಕತೆ ಇದ್ದಾಗ ಮಾತ್ರ ಸಹೋದರಿಯರ ಸಂಪರ್ಕ ಮಾಡುವವನು. ಸಹೋದರಿಯರು ಕಷ್ಟದಿಂದ ಪತ್ತೆ ಹಚ್ಚಿದಾಗ, ಅವನು ಗರ್ಭಿಣಿ ಪ್ರೇಯಸಿಯನ್ನು ತಿರಸ್ಕರಿಸಿ ಸಮಸ್ಯೆಯಲ್ಲಿದ್ದಾನೆ. ಸಹೋದರಿಯರು ಅವನ ಸಮಸ್ಯೆಗಳನ್ನು ಪರಿಹರಿಸುವ ಆಶ್ವಾಸನೆ ನೀಡಿ, ಎಲ್ಲರೂ ಕೂಡಿ ಸಮಾಧಿಯನ್ನು ಸ್ಥಳಾಂತರಿಸಿ ಮರು ಸಂಸ್ಕಾರ ಮಾಡುವಲ್ಲಿ ಯಶಸ್ವಿಯಾಗುತ್ತಾರೆ.
ವ್ಯಂಗ್ಯ, ವಿಡಂಬನೆಗಳಿಂದ ಕೂಡಿದ ಈ ಸಿನಿಮಾ ಆಧುನಿಕ ಕುಟುಂಬ ವ್ಯವಸ್ಥೆಯ ಒಂದು ವಿಶಿಷ್ಟ ಚಿತ್ರಣವನ್ನು ನೀಡುತ್ತದೆ. ನಟನಾ ವರ್ಗದ ಎಲ್ಲರಿಂದಲೂ ಉತ್ತಮ ಅಭಿನಯವನ್ನು ನಿರ್ದೇಶಕರು ಹೊರತಂದಿದ್ದಾರೆ. ಅದರಲ್ಲೂ ಹಿರಿಯ ಸಹೋದರಿಯ ಪಾತ್ರದಲ್ಲಿ ಜಾಂಗ್ ರಿ- ಊ, ಪ್ರೌಢ ನಟನಾ ಕೌಶಲವನ್ನು ಪ್ರದರ್ಶಿಸಿದ್ದಾರೆ.
ರಮೇಶ್ ಶಿವಮೊಗ್ಗ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.